ಜೀವ ಕಾಯುವುದೇತಕೆ?
ಜೀವ ಕಾಯುವುದೇತಕೆ?
ಅದು 1995ರ ಫೆಬ್ರುವರಿ. ಬಿಜಾಪುರದ ನವರಸಪುರ ಉತ್ಸವದ ಕವಿಗೋಷ್ಠಿಯಲ್ಲಿ ಭಾಗವಹಿಸಲು ಆಹ್ವಾನಿತಳಾಗಿದ್ದ ನನ್ನ ಹೆಂಡತಿ ಜೊತೆ ನಾನೂ ಹೋಗಿದ್ದೆ. ಕವಿಗೋಷ್ಠಿಯ ನಂತರ ಸ್ನೇಹಿತರೊಂದಿಗೆ ಬಿಜಾಪುರ ನೋಡಿ, ಮಾರನೆಯ ದಿನ ಐಹೊಳೆ-ಪಟ್ಟದಕಲ್ಲು-ಕೂಡಲ ಸಂಗಮ-ಬಾದಾಮಿಗೆ ಹೋದೆವು. ಅಲ್ಲಿ ನೋಡಿದ್ದೆಲ್ಲ ಆದ ಮೇಲೆ ಬಾದಾಮಿಯಿಂದ ಹುಬ್ಬಳ್ಳಿಗೆ ಬಂದು, ಅಲ್ಲಿಂದ ಆಗ ನಾವಿದ್ದ ಮಡಿಕೇರಿಗೆ ಹೋಗುವ ಯೋಚನೆ ನಮ್ಮದಾಗಿತ್ತು. ಆದರೆ ಬಾದಾಮಿಯಿಂದ ನಾರಾಯಣಪುರ ಅಣೆಕಟ್ಟೆ ನೋಡಲು ಹೋದ ನನಗೆ, ಏಕೋ ಏನೋ ಬಾದಾಮಿಗೆ ಹಿಂದಿರುಗಲು ಮನಸ್ಸಾಗದೆ, ನಾರಾಯಣಪುರದ ಬಳಿ ಬಂದ ಬೆಂಗಳೂರು ಬಸ್ ಹತ್ತಲು ನಿರ್ಧರಿಸಿದೆ. ನನ್ನ ಆಶ್ಚರ್ಯಕ್ಕೆ ನನ್ನ ಹೆಂಡತಿಯೂ 'ಹೂಂ' ಎಂದಳು. ಅದೃಷ್ಟವಶಾತ್ ನಮ್ಮಿಬ್ಬರಿಗೂ ಸೀಟ್ ಸಿಕ್ಕಿ, ಮಾರನೆಯ ಬೆಳಿಗ್ಗೆ ಬೆಂಗಳೂರು ತಲುಪಿದೆವು.
ಆಗ ನಮ್ಮ ತಂದೆಗೆ 85 ವರ್ಷ ವಯಸ್ಸು. ಬಹಳ ವರ್ಷಗಳ ಕಾಲ ರಕ್ತದೊತ್ತಡಕ್ಕೆ ಸಿಕ್ಕಿ ಕಣ್ಣಿಗೆ ಮಂಜು ಮುಸುಕಿ ಹಣ್ಣಾಗಿದ್ದರು. ಒಂದೆರಡು ವರ್ಷಗಳಿಂದ ನಾನು ಭೇಟಿಯಾದಾಗಲೆಲ್ಲ, 'ಇನ್ನೇನು ಎಲ್ಲ ಮುಗಿಯುತ್ತಾ ಬಂತು!' ಎನ್ನುತ್ತಿದ್ದರು. ಆಗ ನನ್ನ ಕಣ್ಣಲ್ಲಿ ನೀರಾಡತೊಡಗಿ, ಹಾಗೆ ಮತಾಡಬಾರದು ಎಂದು ಅವರನ್ನು ಕೇಳಿಕೊಳ್ಳುತ್ತಿದ್ದೆ. ಆದರೆ ಅವರು ನನ್ನ ಮಾತನ್ನು ಕಿವಿಗೆ ಹಾಕಿಕೊಳ್ಳದಂತೆ ಯಾವುದಕ್ಕೋ ಸಿದ್ಧವಾಗುತ್ತಿದ್ದವರಂತೆ ಮೌನವಾಗಿಬಿಡುತ್ತಿದ್ದರು. ಅಂದು ಇದ್ದಕ್ಕಿದ್ದಂತೆ ಬೆಂಗಳೂರಿಗೆ ಬಂದು, ನನ್ನಣ್ಣನ ಮನೆಯಲ್ಲಿದ್ದ ಅವರನ್ನು ಬೆಳ್ಳಂಬೆಳಿಗ್ಗೆ 'ಏನಣ್ಣಾ ಚೆನ್ನಾಗಿದ್ದೀರಾ?' ಎಂದು ಔಪಚಾರಿಕವಾಗಿ ಮಾತನಾಡಿಸಿದಾಗ, ಎಂದಿನಂತೆ ಧ್ವನಿಯ ಮೇಲೆ ಗುರುತಿಸುತ್ತಾ, 'ಏನು ನಾಗಭೂಷಣನಾ?' ಎಂದು ಮಲಗಿದ್ದವರು ಎದ್ದು ಕೂತರು. ನಾನು ಅವರ ಬಳಿ ಹೋಗಿ ಅವರ ಹಾಸಿಗೆಯ ಮೇಲೆ ಕೂತೆ. ಅವರು ನನ್ನನ್ನು ಹೊಸದಾಗಿ ಮುಟ್ಟುವಂತೆ ಮುಟ್ಟಿದರು. 'ಏನು ಇದ್ದಕ್ಕಿದ್ದಂತೆ ಬಂದೆ?' ಎಂದರು. ನಾನು, 'ಯಾಕೋ ಬರಬೇಕಿನಿಸಿತು, ಬಂದೆ' ಎಂದು ನನ್ನ ಪ್ರಯಾಣದ ವಿವರ ತಿಳಿಸಿದೆ. 'ಒಳ್ಳೆದಪ್ಪಾ, ನಿನಗೂ ನಿನ್ನ ಹೆಂಡತಿಗೂ ಒಳ್ಳೇದಾಗಲಿ' ಎಂದು ಆಶೀರ್ವದಿಸಿದರು. ನಂತರ ನಾನು ನನ್ನ ತಾಯಿಯನ್ನು ಮಾತನಾಡಿಸಲು ಹೋದೆ. ಅವರು ನನ್ನ ಹೆಂಡತಿಯೊಂದಿಗೆ ಮಾತಿಗೆ ತೊಡಗಿದರು.
ಅಂದು ಇಡೀ ದಿನ ಅವರ ಜೊತೆಗಿದ್ದು, ಅವರ ಆಶೀರ್ವಾದ ಪಡೆದು ರಾತ್ರಿ ಮಡಿಕೇರಿಗೆ ಹೊರಟೆ. ಮಾರನೆಯ ಬೆಳಿಗ್ಗೆ ಮಡಿಕೇರಿ ತಲುಪುವ ಹೊತ್ತಿಗೆ ಸುದ್ದಿ ಬಂತು... ನನ್ನ ತಂದೆ ಇನ್ನಿಲ್ಲವೆಂದು...
ನಾರಾಯಣಪುರದಿಂದ ಇದ್ದಕ್ಕಿದ್ದಂತೆ ನಮ್ಮನ್ನು ಬೆಂಗಳೂರಿಗೆ ಎಳೆ ತಂದ ಶಕ್ತಿ ಯಾವುದು?
*
1999ರ ಜೂನ್. ಆಗ ಚಿತ್ರದುರ್ಗದಲ್ಲಿದ್ದೆವು. ಒಂದು ಬೆಳಿಗ್ಗೆ ನನ್ನಣ್ಣನಿಂದ ಫೋನ್ ಬಂತು. ನಿಮ್ಮ ತಾಯಿ ನಿನ್ನನ್ನು ತುರ್ತಾಗಿ ನೋಡಬೇಕಂತೆ ಎಂದು. ಅಷ್ಟೇನೂ ಅನಾರೋಗ್ಯದಲ್ಲಿಲ್ಲದ ನಮ್ಮ ತಾಯಿಗೆ ಇದ್ದಕ್ಕಿದ್ದಂತೆ ಏನಾಯಿತೆಂದು, ನಾನು ನನ್ನ ಹೆಂಡತಿ ಗಾಬರಿಯಿಂದ ತಕ್ಷಣ ಬೆಂಗಳೂರಿಗೆ ಹೊರಟೆವು. ಅಂದು ಸಂಜೆಯೇ ನನ್ನ ತಂಗಿಯ ಮನೆಯಲ್ಲಿ ಅವಳ ಗಂಡ ಡಾ||ಸಿ.ಆರ್.ಚಂದ್ರಶೇಖರ್ ಮತ್ತು ಅವರ ತಾಯಿಯ ಆರೈಕೆಯಲ್ಲಿದ್ದ ನಮ್ಮ ತಾಯಿಯನ್ನು ಕಂಡೆವು. ಅವರು ನಮ್ಮನ್ನು ನೋಡಿ ಸಂತೋಷಪಟ್ಟರಲ್ಲದೆ, ಎಂದಿನಂತೆ ನನ್ನ ಹೆಂಡತಿಯನ್ನು 'ಈ ತುಂಟ ನನ್ಮಗನನ್ನು ಕಟ್ಟಿಕೊಂಡು ಹೆಂಗೆ ಏಗ್ತೀದ್ದೀಯಮ್ಮಾ!'ಎಂದು ಛೇಡಿಸಿದರು! ಅವರು ಡಿಮೆನ್ಷಿಯಾಕ್ಕೆ ಒಳಗಾಗಿದ್ದು, ಸ್ವಲ್ಪ ಮಾತು ಮರೆತವರಂತೆ ಮಾತಾಡುತ್ತಿದ್ದರು. ಅದು ಸ್ವಲ್ಪ ನಮಗೆ ತಮಾಷೆಯಾಗಿಯೂ ಕಾಣುತ್ತಿತ್ತು. ಅವರು ನಾನು ಹೋದಾಗಲೆಲ್ಲ ನಾನು ಕೊಡುವ ಹಣ ಸಾಲದೆಂದು ತಕರಾರು ಮಾಡುವುದು ಒಂದು ರೂಢಿಯೇ ಆಗಿಹೋಗಿತ್ತು. ಆ ಹಣ ಅವರ ಖರ್ಚಿಗಾಗಿ ಅಲ್ಲ. ನಮ್ಮಣ್ಣ ಅವರನ್ನು ಏನೂ ಕೊರತೆ ಇರದಂತೆ ಚೆನ್ನಾಗಿಯೇ ನೋಡಿಕೊಳ್ಳುತ್ತಿದ್ದ. ಆದರೆ, ಅಜ್ಜಿಯಾಗಿ ತನ್ನ ಮೊಮ್ಮಕ್ಕಳಿಗೆ ಏನಾದರೂ ಕೊಡಿಸಿ ಸಂತೋಷಪಡುವ ಆಸೆ ಅವರಿಗೆ. ಜೀವನಪೂರ್ತಿ ಬಡ ಸ್ಕೂಲ್ಮಾಸ್ಟರ್ ಹೆಂಡತಿಯಾಗಿ, ಕೈಯಲ್ಲಿ ಮೂರು ಕಾಸೂ ಇಲ್ಲದೆ ಬದುಕಿದ ಹೆಂಗಸದು. ಈಗ ಇಬ್ಬರು ಗಂಡು ಮಕ್ಕಳಿಂದಲೂ ಒಂದಿಷ್ಟು ಹಣ ಪಡೆದು ಮೊಮ್ಮಕ್ಕಳಿಗೆ ಸಣ್ಣ ಪುಟ್ಟ ಚಿನ್ನ, ಬಟ್ಟೆಬರೆ ಎಂದು ಖರ್ಚು ಮಾಡಿ ಸಂತೋಷ ಪಡುತ್ತಿದ್ದರು. ಹಾಗಾಗಿ ಅಂದು ನಾನು ಕೊಟ್ಟ ಹಣವನ್ನು ಕೈಯಲ್ಲೇ ಇರಿಸಿಕೊಂಡು, 'ನನ್ನ ಚಿಕ್ಕಮಗ ನನಗೆ ಇವತ್ತು ಒಂದು ಸಾವಿರ ರೂಪಾಯಿ ಕೊಟ್ಟವನಮ್ಮಾ' ಎಂದು ನನ್ನ ತಂಗಿಗೆ ಪದೇ ಪದೇ ಹೇಳುತ್ತಾ (ವಾಸ್ತವಾಗಿ ನಾನು ಅಷ್ಟು ಹಣ ಕೊಟ್ಟಿರಲಿಲ್ಲ) ನಿಧಾನವಾಗಿ ಹಾಗೇ ಮಲಗಿದರು. ನಿದ್ದೆ ಮಾಡಲಿ ಎಂದು, ನಾವು ನಾಳೆ ಬರುವುದಾಗಿ ನನ್ನ ತಂಗಿಗೆ ಹೇಳಿ ನಮ್ಮಣ್ಣನ ಮನೆಗೆ ಆ ರಾತ್ರಿಯೇ ವಾಪಸ್ ಬಂದೆವು.
ಬೆಳಿಗ್ಗೆ ಏಳುವ ಮುನ್ನವೇ ನಮ್ಮ ತಾಯಿ ಇನ್ನಿಲ್ಲ ಎಂಬ ಸುದ್ದಿ ಬಂತು... ನಮ್ಮ ತಾಯಿ ನಮ್ಮನ್ನು ನೋಡಲೆಂದೇ ಅಂದು ಸಂಜೆಯವರೆಗೆ ತಮ್ಮ ಪ್ರಾಣವನ್ನು ಹಿಡಿದಿಟ್ಟುಕೊಂಡಿದ್ದರಾ? ಅದನ್ನು ಅವರಿಗೆ ಸಾಧ್ಯ ಮಾಡಿದ ಶಕ್ತಿ ಯಾವುದು?
* * *
ಇದೆಲ್ಲ ಬಹಳ ದಿನಗಳ ನಂತರ ಹೀಗೆ ನೆನಪಾಗುತ್ತಿರುವುದಕ್ಕೆ ಕಾರಣ, ಮೊನ್ನೆ ನಮ್ಮ ಮನೆಯಲ್ಲಿ ಒಂದು ತಿಂಗಳಷ್ಟೇ ಇದ್ದು, ತನ್ನ ತುಂಟ ಮತ್ತು ತುಂಬು ಜೀವನೋತ್ಸಾಹದ ಆಟಪಾಟ'ಗಳ ಮೂಲಕ ನಮ್ಮನ್ನೆಲ್ಲ ಹಗಲೂ (ರಾತ್ರಿ) ಆನಂದೋತ್ಸಾಹದಲ್ಲಿ ಮುಳುಗಿಸಿದ್ದ 'ಪುಟಾಣಿ' ಎಂಬ ಪುಟ್ಟ ಬೆಕ್ಕಿನ ಮರಿ ಸಾವಿಗೀಡಾದ ಪ್ರಕರಣ. ಆ ಕಥೆಯನ್ನು ನಿಮಗೆ ವಿವರವಾಗಿ ಹೇಳದೆ ಆ ಪುಟ್ಟ ಬೆಕ್ಕಿನ ನೆನಪು ನನ್ನನ್ನು ಕಾಡುವುದನ್ನು ನಿಲ್ಲಿಸದೇನೋ...
ಈ ಪುಟ್ಟ ಮರಿ ಒಂದು ತಿಂಗಳ ಹಿಂದೆ ಇದ್ದಕ್ಕಿದ್ದಂತೆ ಒಂದು ಬೆಳಿಗ್ಗೆ ನಮ್ಮ ಕಾರ್ ಗ್ಯಾರೇಜಿನಲ್ಲಿ 'ಪ್ಮೀಂ.. ಪ್ಮೀಂ..' ಎಂದು ಕೂಗುತ್ತಾ ಕಾಣಿಸಿಕೊಂಡಿತ್ತು. ಅದು ಇಲ್ಲಿಗೆ ಹೇಗೆ ಬಂದಿತೋ ಅಥವಾ ಯಾರಾದರೂ ತಮ್ಮ ಮನೆಯಲ್ಲಿ ಮರಿಗಳು ಜಾಸ್ತಿಯೆನಿಸಿ ಇಲ್ಲಿ ತಂದುಬಿಟ್ಟರೋ ತಿಳಿಯದು! ಶಿವಮೊಗ್ಗದಲ್ಲಿ ವೀರಶೈವರ ಬೆಕ್ಕಿನ ಕಲ್ಮಠವೆಂಬುದೊಂದಿದೆ. ಆದರೆ ನಿಜವಾದ ಬೆಕ್ಕಿನ ಕಲ್ಮಠ ನಮ್ಮ ಮನೆಯೆಂದು ಯಾವಾಗಲೂ ನಾನು ನನ್ನ ಹೆಂಡತಿಗೆ ಹೇಳುತ್ತಿರುತ್ತೇನೆ. ಏಕೆಂದರೆ, ದಿನದ ಯಾವ ಸಮಯದಲ್ಲಾದರೂ ನಮ್ಮ ಮನೆಯಲ್ಲಿ ಒಂದೆರಡು ಬೆಕ್ಕುಗಳಾದರೂ ಅಲ್ಲಿಂದಿಲ್ಲಿಗೆ ಠಳಾಯಿಸುತ್ತಿರುತ್ತವೆ. ಒಮ್ಮೊಮ್ಮೆ ಐದಾರು ದೊಡ್ಡ ಬೆಕ್ಕುಗಳು ಮತ್ತು ಅವುಗಳ ಪರಿವಾರವೂ ಕಾಣಿಸಿಕೊಳ್ಳುವುದುಂಟು! ನನ್ನ ಹೆಂಡತಿ ಪ್ರಕಾರ, ಪ್ರತಿ ಪ್ರಾಣಿಗೂ ಊರಿನಲ್ಲಿ ಸಂಚಾರ ಮಾರ್ಗವೆಂಬುದೊಂದಿರುತ್ತದಂತೆ- ಕೋತಿಗಳಿಗೆ, ಹಾವುಗಳಿಗೆ, ಬೆಕ್ಕುಗಳಿಗೆ ಇತ್ಯಾದಿಯಾಗಿ. ಹಾಗೆ ನಮ್ಮ ಮನೆ ಬೆಕ್ಕಿನ ಸಂಚಾರ ಮಾರ್ಗದಲ್ಲಿರುವುದರಿಂದ ನಮ್ಮ ಮನೆಗೆ ಬೆಕ್ಕುಗಳು ಬರುವುದು ಹೆಚ್ಚೆಂದು ನೆಪ ಹೂಡಿ, ಬರುವ ಬೆಕ್ಕುಗಳಿಗೆಲ್ಲ ಅವಳು ಹಾಲು ಸರಬರಾಜು ಮಾಡುತ್ತಾಳೆ. ಅಷ್ಟೇ ಅಲ್ಲ, ನಂದಿನಿ ಹಾಲಿಗೆ ವಾಸನೆ ಇರುವುದಿಲ್ಲವಾದ್ದರಿಂದ, ಕೆಲವು ಬೆಕ್ಕುಗಳು ಹಾಲು ಕುಡಿಯದೇ ಹೋಗುತ್ತವೆ ಎಂಬ ದುಃಖ ಬೇರೆ ಅವಳಿಗೆ! ಆದರೆ ವಾಸ್ತವ ಸಂಗತಿ ಎಂದರೆ, ನಾವು ವಾಸಿಸುವ ವಿನೋಬ ನಗರ ಬೆಕ್ಕುಗಳ ನಗರವೇ ಆಗಿದ್ದು, ಅವುಗಳ ಕಾಟ ತಡೆಯಲಾರದೆ ಎಲ್ಲ ಮನೆಯವರೂ ಯಾವಾಗಲೂ ಕಿಟಕಿ ಬಾಗಿಲುಗಳನ್ನು ಹಾಕಿಕೊಂಡಿರುತ್ತಾರೆ. ಆದರೆ ಗಾಳಿ ಬೆಳಕು ಬರಲೆಂದು ನಾವು ತೆರೆದಿಟ್ಟಿರುತ್ತೇವಾದ್ದರಿಂದ, ಇದನ್ನು ದುರುಪಯೋಗಪಡಿಸಿಕೊಂಡು ಈ ಹಾಳು ಬೆಕ್ಕುಗಳು ಬಂದು ನಮ್ಮ ಮನೆಯಲ್ಲಿ ಬಿಡಾರ ಹೂಡುತ್ತವೆ.
ಅದೇನೇ ಇರಲಿ, ಇತ್ತೀಚೆಗೆ ನಮ್ಮ ಮನೆಯಲ್ಲಿಯೇ ಹುಟ್ಟಿ ಬೆಳೆದು ವಾಸ ಮಾಡುತ್ತಿದ್ದ ಮೂರು ಬೆಕ್ಕುಗಳಲ್ಲಿ ಒಂದು ನಾಯಿ ಪಾಲಾಗಿ, ಇನ್ನೆರಡು ನಾವು ಪ್ರವಾಸ ಹೋಗಿದ್ದಾಗ ಕಾಣೆಯಾಗಿದ್ದರಿಂದಾಗಿ; ಮನೆಯಲ್ಲಿ ಬೆಕ್ಕೊಂದಿರಲಿ-ಹಾವು ಹುಳ ಸುಳಿಯುವುದಿಲ್ಲ (ಹಾಗೆ ನೋಡಿದರೆ ನಮ್ಮ ಮನೆ ಹಾವುಗಳ ಸಂಚಾರ ಮಾರ್ಗದಲ್ಲಿಯೂ ಇದ್ದು-ಅವು ಏಕೋ ನಮಗೆ ದರ್ಶನ ನೀಡದೆ, ನಮ್ಮ ಅಕ್ಕಪಕ್ಕದ ಮನೆಯವರಿಗೆ ದರ್ಶನ ನೀಡಿವೆ!) ಎಂದು ನನ್ನ ಹೆಂಡತಿ ಆ ಪುಟ್ಟ ಮರಿಗೆ ಒಂದು ಪುಟ್ಟ ಬಟ್ಟಲು ಹಾಲು ಇಡಲಾರಂಭಿಸಿದಳು. ಅದು ಹಾಲು ಕುಡಿದು ಒಂದು ವಾರ ಭಯದಿಂದ ನಮ್ಮಿಂದ ತಪ್ಪಿಸಿಕೊಂಡೇ ಓಡಾಡುತ್ತಿತ್ತಾದರೂ, ಒಂದು ಮಧ್ಯಾಹ್ನ ಇದ್ದಕ್ಕಿದ್ದಂತೆ ಊಟದ ಮನೆಯಲ್ಲಿ ನಾನೇನೋ ಬರೆಯುತ್ತಾ ಕೂತಿದ್ದಾಗ, ಗ್ಯಾರೇಜ್ ಕಿಟಕಿಯಿಂದ ಊಟದ ಮನೆಗೆ ಮೂತಿ ತೂರಿಸುತ್ತಾ 'ಪ್ಮೀಂ..' ಎಂದಿತು. ನನಗೆ ಅದರ ಧ್ವನಿಯಿಂದಲೇ ಇದ್ದಕ್ಕಿದ್ದಂತೆ ಮುದ್ದು ಬಂದಂತಾಗಿ ಸುಮ್ಮನೆ, 'ಓ! ಬಾರೋ ಪುಟಾಣಿ' ಎಂದೆ. ಅದು ಅದರ ಜನ್ಮಜನ್ಮಾಂತರಗಳ ಹೆಸರೋ ಎಂಬಂತೆ ನನ್ನ ಕರೆಗೆ ಓಗೊಟ್ಟು, ಮೆಲ್ಲಗೆ ಒಳಕ್ಕೆ ಒಂದು ಹೆಜ್ಜೆ ಇಟ್ಟಿತು. ನಂತರ ನನ್ನ ಮೌನವನ್ನು ಸಮ್ಮತಿಯೆಂದೇ ಬಗೆದು, ಊಟದ ಮೇಜಿನ ಮೇಲೆ ಪುಟಕ್ಕನೆ ಹಾರಿ ಕೂತು ನನ್ನನ್ನೇ ನೋಡತೊಡಗಿತು. 'ಎಲಾ ಇದರ!' ಎಂದು ನಾನೂ ಅದನ್ನು ದಿಟ್ಟಿಸಿ ನೋಡತೊಡಗಿದೆ. ಅಷ್ಟು ಹತ್ತಿರದಿಂದ ನಾನು ಈವರೆಗೆ ಅದನ್ನು ನೋಡಿರಲಿಲ್ಲ. ಅದರ ಪುಟ್ಟ ಗಾತ್ರ ಮುದ್ದಾಗಿತ್ತಾದರೂ, ಅದರ ಚಿರತೆಯಂತಹ ಕ್ರೂರ ಮುಖ, ಕಂದು ಹಳದಿ ಕಣ್ಣುಗಳು, 'ಪ್ಮೀಂ..' ಎಂದಾಗ ತೋಳದಂತೆ ತೆರೆದುಕೊಳ್ಳುವ ಪುಟ್ಟ ಬಾಯಿ ನನ್ನಲ್ಲಿ ಜಿಗುಪ್ಸೆಯನ್ನೇ ಹುಟ್ಟಿಸಿತು. ಕಾಣೆಯಾದ ನಮ್ಮ ಒಂದು ಬೆಕ್ಕಿನ ಅಪೂರ್ವ ಸೌಂದರ್ಯದ ಮುಂದೆ (ಅದು ಗಂಡು ಬೆಕ್ಕಾಗಿದ್ದರೂ ಅದಕ್ಕೆ ಐಶ್ವರ್ಯ ರೈ ಎಂದು ಹೆಸರಿಟ್ಟಿದ್ದೆವು!) ಇದು ಒಳ್ಳೆ ದೃಷ್ಟಿ ಬೊಟ್ಟಿನಂತಿತ್ತು!
ಹಾಗೆಂದು ನಾನು ಯೋಚಿಸುತ್ತಿರುವಾಗಲೇ, ಅದು ಚಂಗನೆ ಹಾರಿ ನನ್ನ ತೊಡೆಯ ಮೇಲೆ ಬಂದು ಕೂತಿತು. ನಾನು 'ಅಯ್ಯೋ' ಎಂದು ನೋವಿನಿಂದ ಕಿರುಚಿದ್ದನ್ನು ಕೇಳಿ, ನನ್ನ ಹೆಂಡತಿ ಗಾಬರಿಯಿಂದ ಓಡಿ ಬಂದಳು. ಪುಟಾಣಿ ನನ್ನ ತೊಡೆಗಳ ಮೇಲೆ ನಿಯಂತ್ರಣ ಸಾಧಿಸಲು ತನ್ನ ಉಗುರುಗಳನ್ನು ಊರಿತ್ತು! ಅಂದು ನಾನು ತೊಟ್ಟಿದ್ದ ದಪ್ಪ ಪ್ಯಾಂಟ್ ನನ್ನನ್ನು ಅಂದು ಚೂಪಾದ ಗಾಯಗಳಿಂದ ರಕ್ಷಿಸಿತ್ತು. ಹಾಲು ನೀಡುವಾಗ ಒಂದೆರಡು ಬಾರಿ ಅದರ ತಲೆ ಸವರಿ ಪರಿಚಯ ಮಾಡಿಕೊಂಡಿದ್ದ ನನ್ನ ಹೆಂಡತಿ, ನಾನು ಬೆಕ್ಕಿಗೆ ಹೆದರುವವನು ಎಂಬಂತೆ ನನ್ನನ್ನು ಛೇಡಿಸುತ್ತಾ ಅದನ್ನು ಎತ್ತಿಕೊಳ್ಳಲು ಹೋದರೆ, ಅದು ಬಿಡುತ್ತಲೇ ಇಲ್ಲ! ತನ್ನ ಉಗುರುಗಳಿಂದ ನನ್ನ ಪ್ಯಾಂಟನ್ನು ಹಿಡಿದುಬಿಟ್ಟಿದೆ.... ಆ ಕ್ಷಣದಲ್ಲೇ-ಆ ಬಂಧನದಲ್ಲೇ-ನಮ್ಮಿಬ್ಬರ ನಡುವೆ ಒಂದು ವಿಶಿಷ್ಟ ಸಂಬಂಧ ಸ್ಥಾಪಿತವಾಯಿತೆಂದು ಕಾಣುತ್ತದೆ.
ಅಂದು ಹಾಗೆ ನನ್ನನ್ನು ಹಚ್ಚಿಕೊಂಡ ಬೆಕ್ಕು, ನನ್ನನ್ನು ಬಿಡಲೇ ಇಲ್ಲ. ನಾನು ಮನೆಯಲ್ಲಿ ಓದಲು, ಬರೆಯಲು, ಟಿವಿ ನೋಡಲು, ಉಣ್ಣಲು ಕೂರುವುದೇ ಕಷ್ಟವಾಯಿತು. ಕೂತೊಡನೆ, ಎಲ್ಲಿರುತ್ತಿತ್ತೋ, ಚಂಗನೆ ಹಾರಿ ನನ್ನ ಮಡಿಲಲ್ಲಿ ಆಸೀನವಾಗಿಬಿಡುತ್ತಿತ್ತು. ಆದರೆ ಕ್ರಮೇಣ ತನ್ನ ಉಗುರುಗಳನ್ನು ಊರುವುದನ್ನು ಕಡಿಮೆ ಮಾಡುತ್ತಾ ಹೋಯಿತು. ನಾನು ಅದರಿಂದ ತಪ್ಪಿಸಿಕೊಳ್ಳಲು ನನ್ನ ಕೂರುವ ಭಂಗಿಯನ್ನು ಬದಲಾಯಿಸುತ್ತಾ ಹೋದಂತೆ, ಅದು ನನ್ನ ಸುತ್ತಾ ಸ್ಥಳ ಪರೀಕ್ಷೆ ಮಾಡುತ್ತಾ ನನ್ನ ಮಡಿಲು ಸೇರಲು, ಹಾರುವ ಹೊಸ ಹೊಸ ಆಕಾಶ ಮಾರ್ಗಗಳನ್ನು ಹುಡುಕುತ್ತಿತ್ತು. ನಾನು ಆ ಕಡೆ ಈ ಕಡೆ ಮಿಸುಕಿದಾಗ ಅರೆ ಕ್ಷಣದಲ್ಲಿ ನನ್ನ ತೊಡೆ ಏರಿ ಕೂರುತ್ತಿತ್ತು! ಕೆಲಸಗಳ ಒತ್ತಡದಲ್ಲಿ, ಇದೊಳ್ಳೆ ಶನಿಯ ಕಾಟವಾಯ್ತಲ್ಲಾ ಎಂದು ನಾನು 'ಛೀ.. ಇಳಿ..ಇಳಿ..' ಎಂದು ಎಷ್ಟೇ ಹೆದರಿಸಿದರೂ, ಅದು ಮತ್ತಷ್ಟು ಪಟ್ಟಾಗಿ ಕೂರುತ್ತಿತ್ತೇ ಹೊರತು, ಇಳಿಯುವ ಮನಸ್ಸೇ ಮಾಡುತ್ತಿರಲಿಲ್ಲ! ನನ್ನ ಹೆಂಡತಿ ಅಥವಾ ನಮ್ಮ ಮನೆಯ ಹುಡುಗಿಯರಾದ ಲಕ್ಷ್ಮಿ ಅಥವಾ ಮಂಜುಳಾ ಅದನ್ನು ಬಲವಂತವಾಗಿ ಎತ್ತಿಕೊಂಡು ಹೋಗಬೇಕಾಗುತ್ತಿತ್ತು.
ಆದರೆ ಒಂದೆರಡು ದಿನಗಳಲ್ಲಿ ಅದಕ್ಕೆ ಮನೆಯೆಲ್ಲ ಪರಿಚಯವಾದಂತಾಗಿ; ಮನೆಯಲ್ಲಿದ್ದುದನ್ನೆಲ್ಲ ಮೂಸಿ ಮೂಸಿ, ಇನ್ನು ಇದು ತನ್ನದೇ ಮನೆಯಂತೆ ಕೋಣೆಗಳಲ್ಲೆಲ್ಲಾ ಓಡಾಡತೊಡಗಿತು. ಸಿಕ್ಕಿ ಸಿಕ್ಕಿದ್ದನ್ನೆಲ್ಲ ಕಚ್ಚಿ ಎಳೆದಾಡತೊಡಗಿತು. ಇಳಿ ಬಿದ್ದಿದ್ದ ಬಾಗಿಲ ತೆರೆ, ಕಿಟಿಕಿ ತೆರೆ, ಕಪ್ಪೆ ಚಿಪ್ಪಿನ ತೂಗುಗಳನ್ನೆಲ್ಲ ಹಿಡಿದು ಉಯ್ಯಾಲೆಯಾಡತೊಡಗಿತು. ಮನೆಗೆ ಬರುವ ಹಿರಿಯ ಬೆಕ್ಕುಗಳ ಬಾಲಗಳನ್ನೆಳೆದು ಅವುಗಳಿಂದ ಸಣ್ಣಪುಟ್ಟ ದಾಳಿಗಳನ್ನೂ ದಿಟ್ಟತನದಿಂದ ಎದುರಿಸಿತು! ಒಂದು ಪುಟ್ಟ ಚೆಂಡನ್ನು ತಂದುಕೊಟ್ಟೆವು. ಸುಸ್ತಾಗುವವರೆಗೆ ಅದರೊಡನೆ ಆಡಿತು. ಕೆಲವೇ ದಿನಗಳಲ್ಲಿ ಒಂದು ಇಲಿಯನ್ನು ಹಿಡಿದು ತಂದು ಆಟವಾಡಿಸುತ್ತಲೇ ತಿಂದು ಮುಗಿಸಿತು. ಮನೆಯೊಳಗೆ ಒಂದು ಹುಳು ಹುಪ್ಪಟೆ ಇಲ್ಲದಂತೆ ಭಕ್ಷಿಸಿ, ನಾವು ಇಡುತ್ತಿದ್ದ ಹಾಲನ್ನು ಸುಮ್ಮನೆ ಒಮ್ಮೆ ನೆಕ್ಕಿ ನಿರ್ಲಕ್ಷದಿಂದ ನೋಡತೊಡಗಿತು!
ನಾವು ಎಷ್ಟೋ ಬೆಕ್ಕು ಸಾಕಿದ್ದೆವು. ಆದರೆ ಈ ವಯಸ್ಸಿನ ಈ ರೀತಿಯ ಪ್ರಳಯಾಂತಕ ಬೆಕ್ಕನ್ನು ನಾವು ನೋಡಿರಲಿಲ್ಲ. ನನ್ನ ಹೆಂಡತಿ, 'ಇದಾವುದೋ ದರಿದ್ರ ಕಾಡು ಬೆಕ್ಕು ಕಣ್ರೀ' ಎನ್ನುತ್ತಲೇ ಅದನ್ನು ಮುದ್ದಿಸುತ್ತಿದ್ದಳು. ಅದರ civil mannersಗಳನ್ನು ನೋಡಿಯೇ ಸಂತೋಷ ಪಡಬೇಕು. ನಿಸರ್ಗ ಕರೆಗಳಿಗೆಲ್ಲ ಅದು ಮನೆಯ ಹೊರಗೇ ಹೋಗುತ್ತಿತ್ತಾದರೂ, ಮನೆಯ ಬಾಗಿಲು ಕಿಟಿಕಿಗಳನ್ನು ಮುಚ್ಚಿರುವ ಸಮಯದಲ್ಲಿ ಬಚ್ಚಲು ಮನೆಯ ಜಾಲರಿಯಲ್ಲಿ ಕೂತು ಕೆಲಸ ಮುಗಿಸಿ ಬರುತ್ತಿತ್ತು! ಇದನ್ನೆಲ್ಲ ಯಾರು ಹೇಳಿಕೊಟ್ಟರು ಇದಕ್ಕೆ? Dogs are humble and begging whereas cats are stylish and selfish ಎಂಬೊಂದು ಮಾತಿದೆ. ಅದರೆ ನಮ್ಮ ಪುಟಾಣಿ ಮಾತ್ರ ಈ ಮಾತಿಗೆ ಅಪವಾದವೆಂಬಂತೆ ಹೊರನೋಟಕ್ಕೆ ಒಡ್ಡ; ಆದರೆ ಅಷ್ಟೇ ಪ್ರೀತಿಪಾತ್ರ. ನಾನು ರಾತ್ರಿ ಎಲ್ಲ ಮಲಗಿದ ಮೇಲೆ ಏನಾದರೂ ಓದುತ್ತಾ ಅಥವಾ ಬರೆಯುತ್ತಾ ಕೂತರೆ, ಅದು ಹಾರಿ ನನ್ನ ತೊಡೆಯ ಮೇಲೆ ಕೂತು ನಿದ್ರಿಸುತ್ತಿತ್ತು. ನನಗೆ ತೊಂದರೆ ಎನಿಸಿ ಬಲವಂತವಾಗಿ ಇಳಿಸಿದರೆ, ನನ್ನ ಕುರ್ಚಿಯ ಸುತ್ತಲೇ ತನ್ನ ಪುಟ್ಟ ಕಾಲುಗಳಲ್ಲಿ ಪುಟಪುಟನೆ ಓಡಾಡುತ್ತಾ, ಗೋಡೆಯ ಮೇಲೆ ಕಾಣುವ ಕ್ರಿಮಿ ಕೀಟಗಳನ್ನು ಹಿಡಿಯಲು ಹಾರುವ ಹರಸಾಹಸ ಮಾಡುತ್ತಾ, ಆಗದಿದ್ದಾಗ ನನ್ನ ಕಾಲ ಬಳಿ ಬಂದು ಸಹಾಯಕ್ಕಾಗಿ 'ಪ್ಮೀಂ.. ಪ್ಮೀಂ..' ಎಂದು ಕೂಗುತ್ತಾ, ನಾನು ನಿದ್ರಿಸಲು ಹೋಗುವವರೆಗೂ ನನ್ನ ಬಳಿಯೇ ಸುಳಿದಾಡುತ್ತಿರುತ್ತಿತ್ತು. ನಾನು ನಮ್ಮ ಕೋಣೆಯ ಬಾಗಿಲು ಮುಚ್ಚುತ್ತಿದ್ದಂತೆ ತನ್ನ ಸ್ವಸ್ಥಾನಕ್ಕೆ ಹೋಗಿ ಮಲಗುತ್ತಿತ್ತು. ಪ್ರತಿದಿನ ನಾನು ಎದ್ದ ಕೂಡಲೇ ಕೇಳುತ್ತಿದ್ದ ಮೊದಲ ಪ್ರಶ್ನೆ: 'ಪುಟಾಣಿ ಎಲ್ಲಿ?'. ಅದು ಎಲ್ಲಿಂದಲೋ ತಕ್ಷಣ ಪ್ರತ್ಯಕ್ಷವಾಗಿ 'ಪ್ಮೀಂ..'ಎಂದು ತನ್ನ ರಣಕಹಳೆ ಮೊಳಗಿಸಿ, ನನ್ನ ಹಾಸಿಗೆಯ ಮೇಲಕ್ಕೆ ಚಂಗನೆ ಹಾರಿ ಬರುತ್ತಿತ್ತು. ಇದನ್ನು ಒಂದೆರಡು ತಿಂಗಳ ಮರಿ ಎಂದು ಹೇಗೆ ಹೇಳುವುದು? ಅದಕ್ಕೆ 'ಪ್ರಚಂಡ ಪುಟಾಣಿ' ಎಂದು ಬಿರುದು ನೀಡಿದೆವು!
ಕೆಲವೇ ದಿನಗಳಲ್ಲಿ ಈ ಪ್ರಚಂಡ ಪುಟಾಣಿಯ ಕಾಲುಗಳು ಗಟ್ಟಿಯಾಗಿ, ಅದಕ್ಕೆ ಲೋಕಸಂಚಾರದ ಆಸೆ ಹುಟ್ಟಿತು. ನಮ್ಮ ಮನೆಯ ಸಸ್ಯಾಹಾರ ಬೇಸರ ಬಂದು, ಅಕ್ಕಪಕ್ಕದ ಮನೆಗಳಲ್ಲಿ ಮೀನು ಹುರಿಯುವ ವಾಸನೆಗೆ ಬಲಿ ಬಿದ್ದಿತು. ಇದರಿಂದಾಗಿ ದಿನದ ಒಂದೆರಡು ಗಂಟೆಗಳ ಕಾಲ ಮನೆಯಿಂದ ಕಾಣೆಯಾಗತೊಡಗಿತು. ಹೀಗಿದ್ದ ಒಂದು ರಾತ್ರಿ, ಮನೆಯ ಹೊರಗಿಂದ ಬೆಕ್ಕಿನ ಚೀತ್ಕಾರ ಕೇಳಿದಂತಾಗಿ ಮನೆಯವರೆಲ್ಲ ಹೊರಗೆ ಧಾವಿಸಿ ನೋಡಿದರೆ, ನಮ್ಮ ಪುಟಾಣಿಯನ್ನು ಪಕ್ಕದ ಮನೆಯ ನಾಯಿ ಜಿಮ್ಮಿ ಹಿಡಿದೆಸಿದಿತ್ತು. ಆ ರಭಸಕ್ಕೆ ಅದು ಮನೆ ಮುಂದಿನ ಮುಚ್ಚಿದ ಚರಂಡಿಯೊಳಗೆ ಹೋಗಿ ಬಿದ್ದಿತ್ತು. ಬ್ಯಾಟರಿ ಹಾಕಿ ಎಷ್ಟು ಕರೆದರೂ ಬರದೆ, ಬಹಳ ಹೊತ್ತು ಅಲ್ಲೇ ನಡುಗುತ್ತಾ ಕೂತಿತ್ತು. ಕರೆದು ಕರೆದು ಬೇಸರವಾಗಿ ನಾವು ಮನೆಯಲ್ಲಿ ಅದಕ್ಕಾಗಿ ಕಾಯುತ್ತಾ ಕೂತೆವು. ಸ್ವಲ್ಪ ಸಮಯದಲ್ಲಿ ಅದು ಬಂದೇ ಬಂತು, ಆದರೆ ರಕ್ತಸಿಕ್ತವಾಗಿ....ನನಗೆ ಮೈ ಜುಮ್ಮೆಂದಿತು...ಗಾಬರಿಯಾದ ನನ್ನ ಹೆಂಡತಿ ಮತ್ತು ಲಕ್ಷ್ಮಿ ಹಾಗೂ ಮಂಜುಳಾ ಕೂಡಲೇ ಅದರ ಬಾಲ, ಕಾಲು, ಹೊಟ್ಟೆಗಳ ಮೇಲಿದ್ದ ರಕ್ತ ಒರೆಸಿ, ಗಾಯಗಳಾಗಿದ್ದ ಕಡೆ ಅರಶಿನ ಹಚ್ಚಿದರು. ಅದು ಎಲ್ಲ ಉಪಚಾರವನ್ನು ಸದ್ದಿಲ್ಲದೆ ಮಾಡಿಸಿಕೊಂಡಿತು. ಪಶುವೈದ್ಯರೊಬ್ಬರ ಸಲಹೆಯಂತೆ ಹಾಲಿಗೆ ಮನೆಯಲ್ಲಿದ್ದ ನೋವು ನಿವಾರಕ ಮಾತ್ರೆಯೊಂದನ್ನು ಬೆರೆಸಿ ಕುಡಿಸಿದೆವು. ಅದು ಕುಡಿದು ನಿದ್ದೆಗೆ ಸಂದಿತು.
ಮಾರನೆಯ ದಿನ ನೋಡಿದರೆ, ನಮ್ಮ ಪುಟಾಣಿ ಏನೂ ಆಗದಂತೆ ಬಾತುಕೊಂಡ ಹೊಟ್ಟೆ ಮತ್ತು ಕುಂಟು ಕಾಲುಗಳಲ್ಲೇ ಮನೆ ತುಂಬಾ ಓಡಾಡಲಾರಂಭಿಸಿತ್ತು! ಒಂದೆರಡು ಬಾರಿ ಮನೆಯ ಬಾಗಿಲ ಬಳಿ ಹೋಗಿ ಸಮೀಕ್ಷೆಯನ್ನೂ ಮಾಡಿಕೊಂಡು ಬಂತು. ನಂತರ ಹಿತ್ತಲ ಕಡೆ ಓಡಿ ಅಲ್ಲಿ ಬಹಳ ದಿನಗಳಿಂದ ಓಡಾಡಿಕೊಂಡಿದ್ದ ಒಂದೆರಡು ಕಪ್ಪೆ ಮರಿಗಳನ್ನು ಒಂದೇ ಸಮನೆ ಹುಡುಕಿ ತಿಂದಿತು. ನಮಗೆ ಗಾಬರಿಯಾಗಿ, ಅದನ್ನು ಹಿಡಿದು ಸುಮ್ಮನೇ ಕೂರಿಸುವುದೇ ಕಷ್ಟವಾಗತೊಡಗಿತು. ನಾವೆಲ್ಲರೂ ಅದನ್ನು ಸರತಿ ಮೇಲೆ ಒಂದೊಂದಷ್ಟು ಸಮಯ ಹೊತ್ತುಕೊಂಡು ಸುಧಾರಿಸಿದೆವು. ಆ ಸಮಯದಲ್ಲಿ ಅದು ಪ್ರದರ್ಶಿಸಿದ ಶಾಂತಿ ಮತ್ತು ಮೌನಗಳನ್ನು ನೋಡಿ ನನಗೆ ಒಳಗೇ ಹೆದರಿಕೆ ಶುರುವಾಯಿತು.
ಅಂದು ಸಂಜೆ ಅದನ್ನು ಮಲಗಿಸಿ ಉಪಚರಿಸುತ್ತಿದ್ದ ನನ್ನ ಹೆಂಡತಿ ಒಮ್ಮೆಗೇ ಅಳಲಾರಂಭಿಸಿದಾಗ, ನನಗೆ ಎದೆಯೇ ಒಡೆದು ಹೋದಂತಾಯಿತು. ಹೋಗಿ ನೋಡಿದರೆ, ಪುಟಾಣಿಯ ಹೊಟ್ಟೆಯ ಗಾಯ ಬಿರಿದು ರಕ್ತ ಸುರಿಯಲಾರಂಭಿಸಿತ್ತು. ಜೊತೆಯಲ್ಲೇ ಮಲಮೂತ್ರಗಳು ಮಿಶ್ರವಾಗಿ ಬರಲಾರಂಭಿಸಿತ್ತು. ಪುಟಾಣಿ ಮಾತ್ರ ಸದ್ದಿಲ್ಲದೆ ಮಲಗಿ, ಎಲ್ಲವನ್ನೂ ಬೆರಗುಗಣ್ಣುಗಳಿಂದ ನೋಡುತ್ತಿತ್ತು. ಒತ್ತಿ ಬರುತ್ತಿದ್ದ ದುಃಖವನ್ನು ತಡೆದುಕೊಂಡು ನನ್ನ ಹೆಂಡತಿ ಮತ್ತು ಹುಡುಗಿಯರು ಎಲ್ಲವನ್ನು ಸ್ವಚ್ಛಗೊಳಿಸಿ ಮುಂದೇನು, ಎಂಬಂತೆ ನನ್ನತ್ತ ನೋಡತೊಡಗಿದರು. ಸ್ವಲ್ಪ ದೂರದಲ್ಲಿದ್ದ ನಾಯಿ-ಬೆಕ್ಕುಗಳ ವೈದ್ಯರ ಹತ್ತಿರ ಹೋಗುವುದೇ ನಮಗೀಗ ಉಳಿದಿದ್ದ ದಾರಿ. ಪುಟಾಣಿಯನ್ನು ಬಟ್ಟೆಯಲ್ಲಿ ಸುತ್ತಿಟ್ಟಿಕೊಂಡು ತಕ್ಷಣ ವೈದ್ಯರ ಹತ್ತಿರ ಒಯ್ಯಲಾಯಿತು. ವೈದ್ಯರು ಈ ಕಾಡು ಬೆಕ್ಕನ್ನು ಇವರೇಕೆ ಇಷ್ಟೊಂದು ಹಚ್ಚಿಕೊಂಡಿದ್ದಾರೆ ಎಂದು ಆಶ್ಚರ್ಯಪಡುತ್ತಲೇ ಪರೀಕ್ಷಿಸಿ, ನಮ್ಮ ಪುಟಾಣಿಯ ಧೈರ್ಯ ಸಾಹಸಗಳನ್ನು ಮೆಚ್ಚಿದರು. ನಾಯಿ ಬಾಯಿಗೆ ಸಿಕ್ಕ ಬೆಕ್ಕು ಉಳಿಯುವುದೇ ಕಷ್ಟವಾಗಿರುವಾಗ ಈ ಮರಿಬೆಕ್ಕಿನದು ಗಟ್ಟಿ ಜೀವವೆಂದೇ ಹೊಗಳಿ, ನಾಳೆ ಬೆಳಿಗ್ಗೆ ಶಸ್ತ್ರಚಿಕಿತ್ಸೆ ಮಾಡುವುದಾಗಿ ಹೇಳಿ ಅದರ ಹೊಟ್ಟೆಗೆ ಬ್ಯಾಂಡೇಜೊಂದನ್ನು ಕಟ್ಟಿ ಮನೆಗೆ ಕಳಿಸಿದರು.
ಆದರೆ ಬೆಳಿಗ್ಗೆಯವರೆಗೆ? ಅದೋ ಬ್ಯಾಂಡೇಜನ್ನೂ ಲೆಕ್ಕಿಸದೆ ಮಲಗಿಸಿದ್ದ ಹಾಸಿನಿಂದ ನೆಗೆ ನೆಗೆದು ಮನೆ ತುಂಬಾ ಓಡಾಡಲು ಹವಣಿಸುತ್ತಿತ್ತು. ಹಾಗೆ ಮಾಡುವಾಗ ಸಮತೋಲ ತಪ್ಪಿ, ವಾಲುತ್ತಲೋ, ಮುಗ್ಗರಿಸಿಯೋ ಬೀಳುತ್ತಿತ್ತು. ನನಗೆ ಏನೂ ತೋಚದೆ ನಾನು ನಂಬಿರುವ ಗುರು ರಮಣರನ್ನು ಅದನ್ನು ಉಳಿಸಿಕೊಡುವಂತೆ ಆದ್ರ್ರನಾಗಿ ಬೇಡಿಕೊಂಡೆ. ಅಷ್ಟರಲ್ಲಿ ಅದು ತನ್ನ ಚಲನವಲನಗಳನ್ನು ಇದ್ದಕ್ಕಿದ್ದಂತೆ ನಿಲ್ಲಿಸಿ, ನಮ್ಮ ಸುಪರ್ದಿಗೆ ಬಂತು. ನನ್ನ ಹೆಂಡತಿ ಅದನ್ನು ಮತ್ತೆ ಹಾಸಿನ ಮೇಲೆ ಮಲಗಿಸಿ ನೀರಿನಲ್ಲಿ ಜೇನು ಬೆರೆಸಿ ಕುಡಿಸಲಾರಂಭಿಸಿದಳು. ನಾನು 'ಪುಟಾಣೀ, ನಾಳೆ ನಿನಗೆ ಆಪರೇಷನ್ ಮರಿ! ಃBest of luck!!' ಎಂದೆ. ಎನ್ನುವಷ್ಟರಲ್ಲಿ ಉಸಿರುಕಟ್ಟಿ ಬಂದಂತಾಗಿ, ನನ್ನನ್ನು ನಾನೇ ಸುಧಾರಿಸಿಕೊಳ್ಳಲು ಸುಮ್ಮನೆ ಹೋಗಿ ಮಲಗಿದೆ. ನನಗೆ ನಿಜವಾಗಿಯೂ ಜೀವನ ಒಂದು dead endಗೆ ಬಂದಂತೆನಿಸಿತ್ತು... ನಾನು ಓದಿಕೊಂಡ ಎಲ್ಲ ತತ್ವಜ್ಞಾನವೂ ಬರಡೆನಿಸತೊಡಗಿ, ಅನೇಕ ಹೊಸ ಪ್ರಶ್ನೆಗಳು ಏಳಲಾರಂಭಿಸಿದ್ದವು. ನನ್ನ ಹೆಂಡತಿ, ಲಕ್ಷ್ಮಿ-ಮಂಜುಳಾರೊಂದಿಗೆ ಪುಟಾಣಿಯನ್ನು ಮೌನವಾಗಿ ಉಪಚರಿಸುತ್ತಲೇ ಇದ್ದಳು, ನನ್ನನ್ನು ನಿದ್ರೆಯ ಜೋಂಪು ಆವರಿಸುವವರೆಗೆ....
ಬೆಳಿಗ್ಗೆ ನನ್ನ ಹೆಂಡತಿ, 'ಏಳಿ, ಪುಟಾಣಿ ಸತ್ತುಹೋಗಿದೆ' ಎಂದು ಎಬ್ಬಿಸಿದಾಗ, ನಾನು ಬೆಚ್ಚಿ ಬಿದ್ದು ಎದ್ದು ಕೂತೆ. ಆ ಬೆಚ್ಚಿನಲ್ಲಿಯೇ ನನ್ನನ್ನು ನಾನೇ ಒಂದುಗೂಡಿಸಿಕೊಳ್ಳುತ್ತಾ, 'ಹೇಗೆ, ಯಾವಾಗ ಸತ್ತಿತು?' ಎಂದು ಕೇಳಿದೆ. ಎಂದಿನಂತೆ ಬೆಳಿಗ್ಗೆ ಆರು ಗಂಟೆಗೆ ಎದ್ದ ನನ್ನ ಹೆಂಡತಿ, ರಾತ್ರಿ ಬಹು ಹೊತ್ತಿನವರೆಗೆ ಅದನ್ನು ಉಪಚರಿಸಿ ಮಹಡಿಯಲ್ಲಿ ಮಲಗುವ ಲಕ್ಷ್ಮಿ-ಮಂಜುಳಾರ ಬಳಿ ಬಿಟ್ಟು ಬಂದಿದ್ದ ಅದನ್ನು ನೋಡಲು ಹೋದಾಗ, ಅದು ಇವಳಿಗಾಗಿಯೇ ಕಾಯುತ್ತಿದ್ದಂತೆ ಮೆಲ್ಲಗೆ ಕಣ್ಣು ಬಿಟ್ಟಿತಂತೆ. ಇವಳು ತಾನು ತೆಗೆದುಕೊಂಡು ಹೋಗಿದ್ದ ಜೇನಿನ ನೀರನ್ನು ಎರಡು ಗುಟುಕು ಕುಡಿಯಿತಂತೆ. ಹಾಗೇ ಮೈಯೆಲ್ಲ ಒಮ್ಮೆ ನಡುಗಿ ಇವಳನ್ನೇ ಒಮ್ಮೆ ದಿಟ್ಟಿಸಿ ನೋಡುತ್ತಾ ಕಣ್ಮುಚ್ಚಿತಂತೆ. ಅದೇ ಅದರ ಕೊನೆ. ನನಗೆ ಉಸಿರು ಕಟ್ಟಿದಂತಾಗಿ, 'ನನ್ನನ್ನೇಕೆ ಕರೆಯಲಿಲ್ಲ?' ಎಂದು ಕೂಗಿದೆ. ನನ್ನ ಹೆಂಡತಿ ಅಷ್ಟೇ ತಣ್ಣಗೆ, 'ನೀವು ಬಂದಿದ್ದರೆ, ನಿಮಗೆ ತಡೆಯಲಾಗುತ್ತಿರಲಿಲ್ಲ' ಎಂದಳು. ಅವಳ ಗಂಟಲೂ ಕಟ್ಟತೊಡಗಿತ್ತು. ನನ್ನ ಕಣ್ಣೀರ ಕಟ್ಟೆ ಒಡೆಯಿತು. 'ಅಯ್ಯೋ ರಮಣರಿಗೆ ಕೂಡಾ ನಮ್ಮ ಪುಟಾಣಿಯನ್ನು ಒಂದು ದಿನದ ಮಟ್ಟಿಗೆ ಉಳಿಸಲಾಗಲಿಲ್ಲವೇ!' ಎಂದು ರೋಧಿಸತೊಡಗಿದೆ. ನನ್ನ ಹೆಂಡತಿ ತನ್ನ ದುಃಖವನ್ನೆಲ್ಲ ತಡೆದುಕೊಳ್ಳುತ್ತಾ, 'ಹಾಗೆನ್ನಬೇಡಿ. ಅದನ್ನು ಆದಷ್ಟು ಬೇಗ ಕರೆದುಕೊಳ್ಳುವಂತೆ ನಾನು ರಮಣರನ್ನು ಬೇಡಿದ್ದೆ' ಎಂದು ನನ್ನನ್ನು ದಂಗು ಬಡಿಸಿದಳು. ನಂತರ ನನ್ನನ್ನು ಸಮಾಧಾನಪಡಿಸುತ್ತಾ ಮುಂದುವರೆಸಿದಳು: 'ಬದುಕಿದ್ದರೆ ಅದು ನೋವು ತಿನ್ನುತ್ತಲೇ, ಮುಂದೂ ಕಷ್ಟದಲ್ಲೇ ದಿನ ದೂಕಬೇಕಿತ್ತು. ಹೋಗಿದ್ದು ಒಳ್ಳೆಯದಾಯಿತು ಬಿಡಿ. ರಮಣರ ಆಶೀರ್ವಾದದಿಂದ ಅದಕ್ಕೆ ಒಳ್ಳೆಯ ಜನ್ಮ ಸಿಗುತ್ತದೆ'.
ನನಗೆ ರಮಣರೂ ಬೇಕಿರಲಿಲ್ಲ. ಅವರ ಹುಟ್ಟು ಸಾವುಗಳ ತತ್ವಜ್ಞಾನವೂ ಬೇಕಿರಲಿಲ್ಲ. ಹುಟ್ಟು ಸಾವುಗಳೇ ಇಲ್ಲವಂತೆ! ಅವೆಲ್ಲ ಆತ್ಮ ಸಾಮ್ರಾಜ್ಯದಲ್ಲಿನ ದೇಹ ಭಾವಗಳ ಉದಯಾಸ್ತಮಾನಗಳಷ್ಟೇ ಅಂತೆ!! ಈ ಅಂತೆ ಕಂತೆಗಳ ಬೊಂತೆ ಯಾಕೆ ಬೇಕು, ಕಣ್ಣೆದುರಿನ ಈ ದಾರುಣ ವಾಸ್ತವ ನನ್ನನ್ನು ಜೀವಸಹಿತ ಅಲ್ಲಾಡಿಸುತ್ತಿರುವಾಗ? ನನ್ನ ತಂದೆ ತಾಯಿ ಸತ್ತಾಗ ನನ್ನಲ್ಲಿ ಈ ಪ್ರಶ್ನೆಗಳು ಎದ್ದಿರಲಿಲ್ಲ. ಅವರು ಸಹಜ ಸಾವನ್ನಪ್ಪಿದ್ದರು. ಅವರು ತಮ್ಮ ಪಾಲಿನ ಆಟ ಮುಗಿಸಿ ಹೋಗಿದ್ದರು. ಆದರೆ ಯಾವ ತಪ್ಪು ಮಾಡಿತ್ತು ನಮ್ಮ ಪುಟಾಣಿ, ಇದ್ದಕ್ಕಿದ್ದಂತೆ ಹೀಗೆ ಸಾವಿನ ಪಾಲಾಗಲು? ಈ ಪುಟ್ಟ ಜೀವ ಅದೆಷ್ಟು ಜೀವನೋತ್ಸಾಹ ಪ್ರಕಟಿಸಿತ್ತು ಮತ್ತು ತನ್ನ ಈ ಬಾಲ ಸಹಜ ಆಟ ವಿನೋದಗಳ ಮೂಲಕ ಅದೆಷ್ಟು ಜನರಲ್ಲಿ ಅಂತಹುದೇ ಜೀವನೋತ್ಸಾಹವನ್ನು ಪುಟಿದೆಬ್ಬಿಸಿತ್ತು! ಅದಕ್ಕೇಕೆ ಈ ನೋವು ತುಂಬಿದ ದಾರುಣ ಅಂತ್ಯ?
ಜಗತ್ತೆಲ್ಲವೂ ಒಂದು ಪರಿಪೂರ್ಣ ಯೋಜನೆಯಂತೆ ನಡೆಯುತ್ತಿದೆಯಂತೆ! ಹಾಗಾದರೆ ಯಾವ ಯೋಜನೆಯ ಯಾವ ಮಹಾನ್ ಉದ್ದೇಶಕ್ಕಾಗಿ ನಮ್ಮ ಪುಟಾಣಿಯ ಈ ಅನ್ಯಾಯದ ಸಾವು ಸಂಭವಿಸಿತು? ಈ ಜಗತ್ತಿಗೆ ದಾತರೆಂಬುವರು ಯಾರಾದರೂ ಇದ್ದಾರೆಯೇ? ಅಥವಾ ಇದೊಂದು ಅಸಂಗತ ನಾಟಕ ರಂಗವೇ? ಈ ಸಂಬಂಧಗಳ ಜಾಲವಾದರೂ ಏಕೆ ನಿರ್ಮಾಣಗೊಂಡು, ಇದ್ದಕ್ಕಿದ್ದಂತೆ ಛಿದ್ರವಾಗುತ್ತಾ ಹೋಗುತ್ತದೆ? ಸಂಬಂಧವೆಂಬುದಾದರೂ ಏನು? ಆತ್ಮಗಳಿಗೆ ತಾಕುವಂತಹ ಪರಸ್ಪರ ಪ್ರೀತಿಯನ್ನಾಧರಿಸಿದ ಪರಸ್ಪರ ಅವಲಂಬನೆಯ ಜೀವ ಭಾವವೇ ಅಲ್ಲವೇ? ಲೋಕದಲ್ಲಿ ಇಂತಹ ಸಂಬಂಧಗಳು ಸ್ಥಾಪಿತವಾಗುವುದು ಆಕಸ್ಮಿಕವಾಗಿಯೋ ಅಥವಾ ಇದೆಲ್ಲ ಪೂರ್ವನಿಯೋಜಿತವೋ? ಈ ಪುಟಾಣಿ ಎಲ್ಲಿಂದಲೋ ನಮ್ಮ ಬಳಿಗೇ ಬಂದು ಏಕೆ ಹೀಗೆ ಸಾಯಬೇಕಿತ್ತು? ನಮಗೂ ಇದಕ್ಕೂ ಏತರ ಸಂಬಂಧ? ಸಾವನ್ನು, ಮೊದಲು ತನ್ನ ನಿಲ್ಲದ ಚಟುವಟಿಕೆಗಳಿಂದಲೇ, ನಂತರ ಮೌನವಾಗಿ ಘನತೆಯಿಂದ ಎದುರಿಸಿದ ನಮ್ಮ ಪುಟಾಣಿ ನನ್ನ ಹೆಂಡತಿಯ ಆಗಮನಕ್ಕಾಗಿ ಬೆಳಗಿನವರೆಗೂ ಏಕೆ ಜೀವ ಹಿಡಿದಿಟ್ಟುಕೊಂಡು ಕಾದು ಕೂತಿತ್ತು? ಸಂಬಂಧಗಳಿಗಾಗಿ ಕೃತಜ್ಞತೆ ಸಲ್ಲಿಸಲೆಂದೆ? ಚಿತ್ರದುರ್ಗದಲ್ಲಿ ನಾವು ಸಾಕಿದ್ದ ನಾಯಿ ಮರಿಯೊಂದು ಹೀಗೇ ಸಾಯುವ ಮುನ್ನ ಅಂತಿಮ ದರ್ಶನ ನೀಡಿ ಹೋಗಿತ್ತಲ್ಲವೆ? ಯಾವುದೋ ದಾರುಣ ಕಾಯಿಲೆಗೆ ಒಳಗಾಗಿ ಬಹು ದಿನಗಳಿಂದ ಕಾಣೆಯಾಗಿದ್ದ ಅದು, ಒಂದು ರಾತ್ರಿ ಕಷ್ಟದಿಂದ ನಾವಿದ್ದ ಮಹಡಿ ಹತ್ತಿ ಬಾಗಿಲ ಬಳಿ ಬಂದು, ಆಶ್ಚರ್ಯ ಮತ್ತು ಸಂತೋಷಗಳಿಂದ ನಾವಿಟ್ಟ ಹಾಲು ನೆಕ್ಕಿ, ಕೆಳಗಿಳಿದು ಹೋಗಿ ಕೊನೆಯುಸಿರು ಎಳೆದಿತ್ತಲ್ಲ?
ಮಹಾ ತತ್ವಜ್ಞಾನಿ ಎಂದುಕೊಂಡಿದ್ದ ನಾನು ಹೀಗೆ ಉತ್ತರ ಕಾಣದ ಪ್ರಶ್ನೆಗಳ ಸುಳಿಗೆ ಸಿಕ್ಕಿ ದಿಕ್ಕೆಟ್ಟು ಕಣ್ಣೀರಿಡುತ್ತಿದ್ದಂತೆ, ನನ್ನ ಹೆಂಡತಿ ಮತ್ತು ಮಂಜುಳಾ ನಿರ್ಭಾವರಾಗಿ ನಮ್ಮ ಮನೆಯ ಮುಂದಿನ ಪುಟ್ಟ ಹೂವಿನ ತೋಟದಲ್ಲಿ ಒಂದು ಪುಟ್ಟ ಹಳ್ಳ ತೋಡಿ ಚಿರನಿದ್ದೆಗೆ ಸಂದಿದ್ದ ನಮ್ಮ ಪುಟಾಣಿಯನ್ನು ಅದರಲ್ಲಿರಿಸಿ, ಮಣ್ಣು ಮುಚ್ಚಿದರು. ನನ್ನ ಹೆಂಡತಿ ಪಕ್ಕದ ದಾಸವಾಳದ ಗಿಡದಿಂದ ಕೊಂಬೆಯೊಂದನ್ನು ಮುರಿದು ಅದರ ಮೇಲೆ ನೆಟ್ಟಳು.
ಅದರಲ್ಲೊಂದು ಹೂ ಬಿಡುವ ದಿನಕ್ಕಾಗಿ ನಾನು ಕಾಯುತ್ತಿದ್ದೇನೆ.
*
ಆದರೆ, ಈ ಸಾಲುಗಳನ್ನು ಬರೆಯುತ್ತಿರುವ ಹೊತ್ತಿನಲ್ಲೇ ಹೊಟ್ಟೆಯಲ್ಲಿ ಒಂದು ಹಿಂಡು ಮರಿಗಳನ್ನು ತುಂಬಿಕೊಂಡಂತೆ ತೋರುವ ತಾಯಿ ಬೆಕ್ಕೊಂದು, ಒಂದೇ ಸಮನೆ ನನ್ನ ಕಾಲುಗಳನ್ನು ನೇವರಿಸುತ್ತಾ, ಮರಿ ಹಾಕಲು ನನ್ನ ಮನೆಯಲ್ಲಿ ಜಾಗ ಬೇಡುತ್ತಿದೆ. ಹೇಳಿ, ನಾನು ಏನು ಮಾಡಲಿ?