ಜೀವ ಜಲ ಉಳಿಸೋಣ ; ಇಂದಿನ ತುರ್ತು ಅಗತ್ಯ

ಜೀವ ಜಲ ಉಳಿಸೋಣ ; ಇಂದಿನ ತುರ್ತು ಅಗತ್ಯ

ಜಲ--ಜೀವಜಲ  ಅಬ್ಬಾ! ಬತ್ತಿ ಹೋದರೆ ಮಾನವನ, ಸಕಲ ಜೀವಿಗಳ ಪರಿಸ್ಥಿತಿ ಏನಾಗಬಹುದು, ಊಹಿಸಲೂ ಸಾಧ್ಯವಿಲ್ಲ. ಕುಡಿಯುವ ಬಾವಿ ನೀರು ಇಂದು ಅಪರೂಪವಾಗಿದೆ. ಮನೆಯಲ್ಲಿ ಒಂದು ಕ್ಷಣ ನಳ್ಳಿಯಲ್ಲಿ ನೀರು ಬರುವುದಿಲ್ಲ ಎಂದಾದರೆ ಆಗುವ ತಳಮಳ, ಸಂಕಟ, ಅಯ್ಯೋ ಏನು ಮಾಡಲಿ? ಎಂಬ ಹತಾಶೆ ಹೇಳಲು ಸಾಧ್ಯವಿಲ್ಲ.

ನೀರಿನ ಉಳಿವಿಗಾಗಿ, ಅಂತರ್ಜಲಮಟ್ಟ ಹೆಚ್ಚಿಸುವ ನಿಟ್ಟಿನಲ್ಲಿ ಪ್ರಯೋಗಗಳು ಆಗುತ್ತಿವೆ. ಹಸಿರು ಗಿಡಮರಗಳ ನಾಶ, ಕಾಂಕ್ರೀಟ್ ಕಟ್ಟಡಗಳಿಂದಾಗಿ ದಿನೇದಿನೇ ನೀರಿನ ಒರತೆ ಬತ್ತಿ ಹೋಗುತ್ತಿದೆ. ಮರಗಿಡಗಳ ನೆಟ್ಟು ಬೆಳೆಸಿ, ಕಾಡು ಕಡಿಯದಿರಿ, ನಾಡನ್ನು ರಕ್ಷಿಸಿ, ಹಸಿರೇ ಉಸಿರು, ಉತ್ತಮ ಆರೋಗ್ಯ ಇದೆಲ್ಲಾ ಅನುಷ್ಠಾನಕ್ಕೆ ತಂದರೂ ಮತ್ತೂ ಕೊರತೆ ಕಾಡುತ್ತಿದೆ.

ನೀರಿನ ಸಂರಕ್ಷಣೆ, ಸುಸ್ಥಿರ ಬಳಕೆ, ಎಲ್ಲಾ ಜೀವಜಂತುಗಳಿಗೂ ನೀರಿನ ಅವಶ್ಯಕತೆ, ನೀರನ್ನು ಹಾಳು ಮಾಡದಿರುವುದು, ನೀರಿನ ಮಹತ್ವವನ್ನು ಸಾರಿಹೇಳುವುದು, ಕೊಳಚೆ ನೀರಿನ ಸೇವನೆಯಿಂದಾಗುವ ದುಷ್ಪರಿಣಾಮಗಳನ್ನು ತಿಳಿಸುವುದು ಈ ಎಲ್ಲದಕ್ಕಾಗಿ ವಿಶ್ವ ಜಲದಿನವನ್ನು ವಿಶ್ವಸಂಸ್ಥೆಯಲ್ಲಿ ೧೯೯೨ ದಶಂಬರ ೨೨ ರಂದು ಅಂಗೀಕರಿಸಿ ೧೯೯೩ ಮಾರ್ಚ್ ೨೨ರಂದು ಮೊದಲ ಸಲ ಆಚರಿಸಲಾಯಿತು. ನೀರೆನ್ನುವುದು ಜೀವನದ ಪಾಲಿಗೆ ಅಮೃತವೇ ಸರಿ.

ಮಳೆ ನೀರು ಸಂಗ್ರಹಣಾ ಅಭಿಯಾನ ಪ್ರತೀ ಕಟ್ಟಡದಲ್ಲೂ ಅಳವಡಿಸಲೇ ಬೇಕೆಂಬ ನಿಯಮ ಕಡ್ಡಾಯವಾದಲ್ಲಿ ಸ್ವಲ್ಪ ಪ್ರಯೋಜನವಾಗಬಹುದು. ಜಲಮೂಲಗಳನ್ನು ಸ್ವಚ್ಛ ವಾಗಿಡುವುದು, ಕೆರೆಗಳನ್ನು ಕಾಪಾಡಿಕೊಳ್ಳುವುದು,ಸತತವಾಗಿ ಕೊಳವೆಬಾವಿಗಳನ್ನು ಕೊರೆಯದಿರುವುದು, ಪ್ರತಿಹನಿ ನೀರನ್ನು ಕಾಯ್ದುಕೊಳ್ಳುವ ಅಭಿಯಾನದಿಂದ ಒಂದಷ್ಟು ಪ್ರಯೋಜನವಾಗಬಹುದು.

ಪುಟ್ಟ ಮಕ್ಕಳಿಗೆ ನೀರಿನ ಮಹತ್ವದ ಅರಿವು ಮನೆಯಿಂದಲೇ ಆರಂಭಿಸಬೇಕು. ನೀರಿನ ಮರುಬಳಕೆ ಅಭಿಯಾನ ಯೋಜನೆಗಳನ್ನು ಜಾರಿಗೆ ತರುವುದು.ಕೊಳಕು ನೀರಿನ ಸೇವನೆಯಿಂದಾಗುವ ದುಷ್ಪರಿಣಾಮಗಳನ್ನು ಮನದಟ್ಟು ಮಾಡುವ ಕೆಲಸವಾಗಬೇಕಿದೆ.ಮಳೆ ನೀರು ಸಂಗ್ರಹ ಎಂಬುದು ಜನಾಂದೋಲನವಾದರೆ ಪ್ರಯೋಜನವಾಗಬಹುದು. ಕೊಳವೆ ಬಾವಿಗಳಿಗೆ ಮಳೆನೀರನ್ನು ಇಂಗಿಸುವ ಕೆಲಸವಾಗಬೇಕಿದೆ. ಪಾಳುಬಿದ್ದ ಕೆರೆಗಳ ದುರಸ್ತಿಯಾಗಬೇಕು. ಪ್ರತಿಹನಿ ನೀರನ್ನು ಹಾಳುಮಾಡದೆ ಬಳಸಿ, ನಮ್ಮದಾದ ಕೊಡುಗೆ, ಕರ್ತವ್ಯವನ್ನು ಮಾಡೋಣವೇ?

-ರತ್ನಾ ಕೆ.ಭಟ್, ತಲಂಜೇರಿ

ಚಿತ್ರ ಕೃಪೆ: ಇಂಟರ್ನೆಟ್ ತಾಣ