ಜೀವ ಜಾತ್ರೆ

ಜೀವ ಜಾತ್ರೆ

ಪುಸ್ತಕದ ಲೇಖಕ/ಕವಿಯ ಹೆಸರು
ಮೌನೇಶ ಬಡಿಗೇರ
ಪ್ರಕಾಶಕರು
ಅಂಕಿತ ಪುಸ್ತಕ, ಬಸವನಗುಡಿ, ಬೆಂಗಳೂರು - ೫೬೦೦೦೪
ಪುಸ್ತಕದ ಬೆಲೆ
ರೂ. ೪೫೦.೦೦, ಮುದ್ರಣ: ೨೦೨೪

ಜೀವ ಜಾತ್ರೆ’ ಮೌನೇಶ ಬಡಿಗೇರ ಅವರ ನೂತನ ಕಾದಂಬರಿಯಾಗಿದೆ. ಇದಕ್ಕೆ ಎಚ್. ಎಸ್. ರಾಘವೇಂದ್ರ ರಾವ್ ಅವರ ಬೆನ್ನುಡಿ ಬರಹವಿದೆ; ಕಥೆ, ಕವಿತೆ, ಕಾದಂಬರಿ ಮುಂತಾದ ಪ್ರಕಾರಗಳ ಸಾಧ್ಯತೆಗಳನ್ನು ಅರಸುವ ಕೆಲಸವು 'ಸೃಜನಶೀಲ ಕಲ್ಪನೆ' ಮತ್ತು 'ಮಾಧ್ಯಮ ಶೋಧನೆ'ಗಳನ್ನು ಅವಲಂಬಿಸಿರುತ್ತದೆ. ಇವುಗಳ ಜೊತೆಗೆ, ಜಡವಲ್ಲದ ಕೇವಲ ಬೌದ್ಧಿಕವಲ್ಲದ ತಾತ್ವಿಕ ಕುತೂಹಲ/ಚಿಂತನೆಯೂ ಅದಕ್ಕೆ ಅಗತ್ಯವಾದ ಇನ್ನೊಂದು ಗುಣ. ಇದೆಲ್ಲದರ ಸಂಗಡ ಕತೆಗಾರನಿಗೆ ಲೋಕವನ್ನು ಅದರ ಸ್ಥೂಲನೆಲೆಯಲ್ಲಿ ಮಾತ್ರವಲ್ಲ, ವಿವರಗಳಲ್ಲಿ ಕಾಣುವ ಗುಣವೂ ಬೇಕು. 'ಮೂರ್‍ತ' ಮತ್ತು 'ಅಮೂರ' ಒಟ್ಟಿಗೆ ಗ್ರಹಿಸುವ, ಒಟ್ಟಾಗಿ ಹೆಣೆಯುವ ಕೆಲಸ ಬಹಳ ಜಟಿಲವಾದುದು. ಮೌನೇಶ್ ಈ ಎಲ್ಲ ಶಕ್ತಿಗಳನ್ನೂ ಬೇರೆ ಬೇರೆ ಪ್ರಮಾಣದಲ್ಲಿ ಪಡೆದಿದ್ದಾರೆ ಎಂಬುವುದನ್ನು ಈ ಪುಸ್ತಕದಲ್ಲಿ ನೋಡಬಹುದು.

‘ಜೀವ ಜಾತ್ರೆ' ಕಾದಂಬರಿಯ ಲೇಖಕರಾದ ಮೌನೇಶ ಬಡಿಗೇರ ಇವರು ತಮ್ಮ ಕಾದಂಬರಿಯ ಬಗ್ಗೆ ಹೇಳುವುದು ಹೀಗೆ - “ಈ ಕಥೆಗಳ ಹಣೆಬರಹವೂ ಕೂಡ ಎಲ್ಲಾ ಜೀವಜಂತುಗಳ ಹಣೆಬರಹದಷ್ಟೇ ವಿಚಿತ್ರ ಹಾಗೂ ಅನಿರೀಕ್ಷಿತ. ಮೊದಲು ನಾನು ಈ ಕಾದಂಬರಿಯ ಕಥೆಯನ್ನು ಬರೆದಿದ್ದು ಒಂದು ನೀಳ್ಗತೆಯಾಗಿ, ಅದು ಈಗಾಗಲೇ ಪ್ರಕಟವಾದ ನನ್ನ ಕಥಾಸಂಕಲನ “ಶ್ರೀಗಳ ಅರಣ್ಯಕಾಂಡ”ದಲ್ಲಿ ನ್ಯಾಯವಾಗಿ ಇರಬೇಕಾಗಿತ್ತು. ಆದರೆ ಬರೆದು ಸುಮಾರು ದಿನಗಳಾದ ಬಳಿಕವೂ ಕೂಡ ಈ ಕಥೆ ನನ್ನನ್ನು ಮತ್ತೆ ಮತ್ತೆ ತನ್ನೆಡೆಗೆ ಸೆಳೆಯುತ್ತಲೇ ಇತ್ತು. ಇದೇನಿದು ಹೀಗೆ?! ಎಂದು ಆಶ್ಚರ್ಯ, ರೇಜಿಗೆ ಆಗಿ ಒಂದು ದಿನ ಕೂತು ಅಲ್ಲಾವುದ್ದೀನನ ಅದ್ಭುತ ದೀಪವನ್ನು ತಿಕ್ಕುವಂತೆ ಅದೇ ಕಥೆಯನ್ನು ತೆರೆದು ಅದರಲ್ಲೇ ಕೈಹಾಕಿ ಹಿಗ್ಗಿಸುತ್ತಾ ಹೋದೆ. ನೋಡನೋಡುತ್ತಿದ್ದಂತೆ ಇದೇನಾಶ್ಚರ್ಯ! ಅಲ್ಲಾವುದ್ದೀನನ ಒಂದು ಸಣ್ಣ ದೀಪದ ಒಳಗಿನಿಂದ ತೂರಿಕೊಂಡು ನಿಧಾನವಾಗಿ ಹೊರಹೊಮ್ಮಿ ಬರುವ ಬೃಹದಾಕಾರದ 'ಜೀನಿ' ಪ್ರತಿಮೆಯಂತೆ ಆ ಸಣ್ಣ ಕಥೆಯೊಂದರಿಂದ ಈ ದೊಡ್ಡ ಕಾದಂಬರಿಯೇ ಹೊಮ್ಮಿ ಬಂದುಬಿಟ್ಟಿತು! ಅಲ್ಲಾವುದ್ದೀನನ ದೀಪದಿಂದ ಹೊರಬಂದ 'ಜೀನಿ' ಬಯಸಿದ್ದನ್ನೆಲ್ಲಾ ನೀಡುತ್ತದಂತೆ. ಹಾಗಾದರೆ ನನ್ನ ಸಣ್ಣ ಕಥೆ ಯೊಂದರಿಂದ ಹೊರಬಂದ ಈ ಕಾದಂಬರಿ ಓದುಗರಿಗೆ ಏನು ಕೊಡಲಿದೆ? ಎಂದು ಯೋಚಿಸಿದರೆ ನನಗೆ ಖಂಡಿತಾ ಉತ್ತರಿಸುವುದು ಸ್ವಲ್ಪ ಕಷ್ಟವೇ...

ಆದರೂ ಸ್ವಲ್ಪ ಪ್ರಯತ್ನಿಸಿ ಹೇಳುವುದಾದರೆ, ನಾನು ನಂಬಿಕೊಂಡಿರುವುದನ್ನು ಬರೆಯುವುದಕ್ಕಿಂತ ನನ್ನ ನಂಬಿಕೆಯ ಬುಡ ಅಲುಗಾಡುವುದನ್ನು ಬರೆಯುವುದರಲ್ಲಿ ನನಗೆ ಸದಾ ಆಸಕ್ತಿ. ಆಗ ಮಾತ್ರ ರೂಢಿಗತ ಸತ್ಯಗಳನ್ನು ದಾಟಿ ಸತ್ಯದ ಹೊಸ ಮಗ್ಗಲನ್ನು ಕಾಣಲು ಸಾಧ್ಯ ಎಂಬುದು ನನ್ನ ಇಷ್ಟು ದಿನದ ಕಲಾಜೀವನದಿಂದ ಕಂಡುಕೊಂಡ ಸತ್ಯ, ಈ ಕಾದಂಬರಿ ಕೂಡ ನನ್ನಿಂದ ಅದೇ ಪ್ರಯತ್ನವನ್ನು ಮಾಡಿಸಿದೆ ಎಂದು ನಮ್ರವಾಗಿ ಹೇಳಬಲ್ಲೆ, ಓದುಗರಾದ ನಿಮಗೂ ಅಂತಹ ಒಂದು ಹೊಸ ಮಗ್ಗಲು, ನೋಟ, ಹೊಳಹು, ಕಾಣೆ ಎಂಬುದು ಈ ನನ್ನ ಕಾದಂಬರಿ ಎಂಬ 'ಜೀನಿ'ಯಿಂದ ಸಿಕ್ಕರೆ ಅದರ ಜೀನು ಹಿಡಿದು ಇಲ್ಲಿಯವರೆಗೂ ನಡೆಸಿಕೊಂಡು ಬಂದ ಲೇಖಕನೆಂಬ ನನಗೂ ಒಂದು ಸಾರ್ಥಕ ಭಾವ.

ಈ 'ಜೀವ ಜಾತ್ರೆಗೆ ಕನ್ನಡ ನಾಡಿನ ಹಿರಿಯ ಹಾಗೂ ಹೆಸರಾಂತ ವಿಮರ್ಶಕರಾದ ಶ್ರೀ ಎಚ್ ಎಸ್ ರಾಘವೇಂದ್ರ ರಾವ್ ಅವರು ಮುನ್ನುಡಿಗಳನ್ನು ಬರೆದುಕೊಟ್ಟಿದ್ದಾರೆ. ಅವರ ಮಾತುಗಳಲ್ಲಿ ಸದಾ ಒಂದು ಆತ್ಮವಿಮರ್ಶೆಯ ಗುಣವಿರುತ್ತದೆ; ಅದು ಅವರ ಬರಹಗಳಲ್ಲೂ, ಹಾಗೂ ಅವರ ಭಾಷಣಗಳಲ್ಲೂ ನಾವು ಕಾಣಬಹುದಾದ ಬಹಳ ಮುಖ್ಯ ಗುಣ. ಓದುಗರನ್ನು, ಕೇಳುಗರನ್ನು ತಮ್ಮೊಳಗೆ ಹುಟ್ಟಿದ ವಿಚಾರವೊಂದರ ಜೊತೆಗೆ ಕೈಹಿಡಿದು ಕರೆದುಕೊಂಡು 'ಸಹವಿಚಾರ' ಮಾಡುವಂತೆ ಪ್ರೇರೇಪಿಸುವ ಬಹಳ ವಿಶಿಷ್ಟ ಗುಣ ಅದು. ಆ ಗುಣವನ್ನು ಇಲ್ಲಿನ ಮುನ್ನುಡಿಯಲ್ಲೂ ಕೂಡ ಕಾಣಬಹುದಾಗಿದೆ. ಕಾದಂಬರಿಯ ಹಂಗಿಲ್ಲದೆಯೂ ಕೂಡ ಅವರ ಈ ಬರಹವನ್ನು ಯಾವುದೇ ಲೇಖಕ ಓದಿಕೊಳ್ಳಬಹುದಾಗಿದೆ. ನನ್ನ ಕೋರಿಕೆಯನ್ನು ಮನ್ನಿಸಿ ಇದನ್ನು ಬರೆದುಕೊಟ್ಟ ಎಚ್‌ಎಸ್‌ಆರ್ ಅವರಿಗೆ ನಾನು ಆಭಾರಿಯಾಗಿದ್ದೇನೆ.” ೪೧೬ ಪುಟಗಳ ಸಮೃದ್ಧ ಓದಿಗೆ ‘ಜೀವ ಜಾತ್ರೆ' ಕಾದಂಬರಿ ಸಹಕಾರಿಯಾಗಬಲ್ಲದು.