ಜೀವ ಜೀವದ ನಂಟು

ಜೀವ ಜೀವದ ನಂಟು

ಪುಸ್ತಕದ ಲೇಖಕ/ಕವಿಯ ಹೆಸರು
ಬಿ ಎಸ್ ಜಯಪ್ರಕಾಶ್ ನಾರಾಯಣ
ಪ್ರಕಾಶಕರು
ವಂಶಿ ಪಬ್ಲಿಕೇಷನ್ಸ್, ನೆಲಮಂಗಲ, ಬೆಂಗಳೂರು - ೫೬೨ ೧೨೩
ಪುಸ್ತಕದ ಬೆಲೆ
ರೂ. ೨೦೦.೦೦, ಮುದ್ರಣ: ೨೦೨೨

ಬಿ ಎಸ್ ಜಯಪ್ರಕಾಶ್ ನಾರಾಯಣ ಇವರು ತಮ್ಮ ಅಂತರಂಗದ ಅನನ್ಯರ ಬಗ್ಗೆ ಬರೆದ 'ಜೀವ ಜೀವದ ನಂಟು' ಕೃತಿಗೆ ಮುನ್ನುಡಿಯನ್ನು ಬರೆದಿದ್ದಾರೆ ಜಿ.ಬಿ.ಹರೀಶ್ ಇವರು. ತಮ್ಮ ಮುನ್ನುಡಿಯಲ್ಲಿ "ಸಮಾಜ ಎಂದರೆ ಮನುಷ್ಯರ ವಿಚಿತ್ರಗತಿಯ ಒಕ್ಕೂಟ. ಕಾಲ ಪ್ರವಾಹದಲ್ಲಿ ಅದು ಉಬ್ಬಿ, ಸಂಕೋಚಗೊಂಡು ಒಂದು ನದಿ ಹೇಗೆ ಯುಗಯುಗಗಳಿಗೆ ತನ್ನ ಪಾತ್ರ ಬದಲಿಸುತ್ತದೆಯೋ ಹಾಗೆ ಬದಲಾಗುತ್ತದೆ. ನಾನು ಮತ್ತು ಜೆ ಪಿ ಒಂದೇ ಜಿಲ್ಲೆಯವರು. ಅವರು ಬೆಳೆದದ್ದು ತೆಂಗಿನ ಸೀಮೆಯಲ್ಲಿ. ನಾನು ಬೆಳೆದದ್ದು ಅರೆಮಲೆನಾಡಿನ ಹಾಸನ ನಗರದಲ್ಲಿ. ಹೀಗಾಗಿ ಹೊರಗಿನ ಪರಿಸರ ನನಗೆ ಚಿರಪರಿಚಿತವಾದರೂ ಈ ತೆಂಗಿನ ಸೀಮೆಯ ಒಳಚಿತ್ರಕ್ಕೆ ನಾನೂ ಜೆ.ಪಿ.ಯ ಬರವಣಿಗೆಯನ್ನೇ ಆಶ್ರಯಿಸಬೇಕು! ಇದು ನನಗೆ ಸಂತಸ ಕೂಡ. 

ಬದುಕು ಎಷ್ಟು ಚೆಲುವಿನಿಂದ ಕೂಡಿದೆ. ಅದನ್ನು ಹಳ್ಳಿಯ ಸಾಮಾನ್ಯ ಜನ ಎಷ್ಟು ಚೆನ್ನಾಗಿ, ಅವರ ಜೀವನದ ದುಂದುಗ, ಕೋಟಲೆಗಳ ನಡುವೆಯೇ ಸವಿದಿದ್ದಾರೆ. ಪ್ರಪಂಚದಲ್ಲಿ ಸಂತೋಷ, ಸಂತೃಪ್ತಿಯಿಂದ ಕಣ್ಣು ಮುಚ್ಚಿದ್ದಾರೆ ಎನ್ನುವುದು ಈ ಪುಸ್ತಕದಿಂದ ತಿಳಿಯುತ್ತದೆ. ಆದರೆ ಜೀವನ ಕೇವಲ ರಮಣೀಯವಾಗಿ ಮಾತ್ರ ಇರುವುದಿಲ್ಲ. ಅದರಲ್ಲಿ ಸುಳ್ಳು, ಮೋಸ, ತಟವಟ, ವಂಚನೆ, ಸೋಮಾರಿತನ, ಮೈಗಳ್ಳತನ, ಆಕಾಶಕ್ಕೆ ಕೈತೋರಿಸುವುದು, ಆಸ್ತಿ ಕಬಳಿಕೆ, ಕೋರ್ಟಿನ ವ್ಯಾಜ್ಯ, ದಾಯಾದಿ ಮತ್ಸರ, ಊರಿನೊಳಗೆ ಪ್ರವೇಶ ಮಾಡುವ ಆಯಾ ಕಾಲದ ರಾಜ್ಯ ರಾಜಕಾರಣದ ಸ್ಥಳೀಯ ಚಹರೆಗಳು ಇದ್ದೇ ಇರುತ್ತದೆ. ಇವುಗಳನ್ನು ಜೆ ಪಿ ಬಹಳ ಸಮಾಧಾನದಿಂದ ತೂಕ ತಪ್ಪದಂತೆ-ಆದರೆ ಪೊಲಿಟಿಕಲಿ ಕರೆಕ್ಟ್ ಆಗುವ ಯಾವ ಮುಲಾಜಿಗೂ ಒಳಗಾಗದೆ ಬರೆದಿದ್ದಾರೆ.

ಬ್ರಾಹ್ಮಣ ಸಮುದಾಯದ ಅಯ್ಯಂಗಾರ್ ಒಳಪಂಗಡ, ಹೊಯ್ಸಳ ಕರ್ನಾಟಕ ಒಳಪಂಗಡದೊಂದಿಗೆ ಒಕ್ಕಲಿಗ, ಕುರುಬ, ಗೊಲ್ಲ, ಹರಿಜನ ಸಮುದಾಯಗಳ ಜನಜೀವನ ಇದರಲ್ಲಿ ಸ್ವಾನುಭವದ ನೆಲೆಯಲ್ಲಿ ಬಂದಿದೆ. ಕನ್ನಡದಲ್ಲಿ ಸಿದ್ಧಾಂತಗಳನ್ನು ಆಧರಿಸಿದ ಬರವಣಿಗೆಗಿಂತಲೂ ಅನುಭವವನ್ನು ಆಧರಿಸಿದ ಇಂತಹ ಪ್ರಾದೇಶಿಕ ಬರವಣಿಗೆ ಸಾಕಷ್ಟು ಬರಬೇಕಿದೆ." ಎಂದು ಅಭಿಪ್ರಾಯಪಟ್ಟಿದ್ದಾರೆ.