ಜೀವ ಸಂಕುಲ ಆಪತ್ತಿಗೆ ತಳ್ಳುವ ಯೋಜನೆಯೇಕೆ?

ಜೀವ ಸಂಕುಲ ಆಪತ್ತಿಗೆ ತಳ್ಳುವ ಯೋಜನೆಯೇಕೆ?

ಕರ್ನಾಟಕ-ಕೇರಳ ಗಡಿಯಲ್ಲಿ ರಸ್ತೆ, ರೈಲ್ವೆ ಯೋಜನೆ ಸಾಕಾರಗೊಂಡರೆ ಅಭಿವೃದ್ಧಿಗೆ ಒಳಿತೇ ಆಗುತ್ತದೆ ಎಂದು ಭಾವಿಸಿದ್ದ ಕೇರಳ ಸಿಎಂ ಪಿಣರಾಯಿ ವಿಜಯನ್ ಅವರಿಗೆ ಕರ್ನಾಟಕ ಸರಕಾರ, ಆ ಯೋಜನೆಗಳು ಅನಪೇಕ್ಷಣೀಯ ಎಂದು ಕಿವಿಮಾತು ಹೇಳಿದೆ. ಇದೊಂದು ಅತ್ಯಂತ ಸಂದರ್ಭೋಚಿತ ಕ್ರಮ. ಪಶ್ಚಿಮಘಟ್ಟಕ್ಕೆ ಆಘಾತ ತಂದೊಡ್ಡುತ್ತಿದ್ದ ಈ ಯೋಜನೆಗಳ ಪ್ರಸ್ತಾವಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನಿರಾಕರಣೆ ಹೇಳಿದ್ದು ಮಾತ್ರವಲ್ಲ, ಕೇರಳದ ದೊರೆಗೆ ಪರಿಸರದ ಪಾಠ ಹೇಳಿ ಕಳಿಸಿರುವುದೂ ದಿಟ್ಟ ಹಾಗೂ ಮಾದರಿಪೂರ್ಣ ನಿಲುವೇ ಆಗಿದೆ.

ಕೇರಳದ ಪಾಲಿಗೆ ಹೆಚ್ಚು ಲಾಭ ತರುವ ಯೋಜನೆಗಳೇ ಆಗಿದ್ದ ಕಾಂಜಂಗಾಡ್-ಕಾಣಿಯೂರು ರೈಲ್ವೇ ಮಾರ್ಗ, ತಲಿಚೇರಿ-ಮೈಸೂರು ರೈಲ್ವೇ ಮಾರ್ಗ ಭಾಗಶಃ ಹಾದುಹೋಗುವುದೇ ದಟ್ಟ ಕಾಡುಗಳ ನಡುವೆ. " ಅಭಿವೃದ್ಧಿ ಹೆಸರಿನಲ್ಲಿ ಅಭಯಾರಣ್ಯ, ರಕ್ಷಿತಾರಣ್ಯವಿರುವ ಪ್ರದೇಶಗಳನ್ನು ಸ್ವಾಧೀನಪಡಿಸಿಕೊಳ್ಳಬಾರದು. ಸೂಕ್ಷ್ಮ ಸಂರಚನೆ ಹೊಂದಿರುವ ಕಾಡು ನಾಶವಾದರೆ ಅದರ ಪರಿಣಾಮ ತೀವ್ರತರವಾಗಿರುತ್ತದೆ." ಎಂಬ ಸಂಗತಿಯನ್ನು ನಾನಾ ಸಂಶೋಧನಾ ವರದಿಗಳ ಸಹಿತ ಸಿಎಂ ಬೊಮ್ಮಾಯಿ, ಕೇರಳ ನಿಯೋಗದ ಮುಂದಿಟ್ಟು ತಿಳಿ ಹೇಳಿರುವುದು ಯಾವುದೇ ನಾಯಕ ಮಾಡುವಂಥ ಕೆಲಸ.

ಅಕಾಲಿಕವಾಗಿ ಮಳೆ ಸುರಿಯುತ್ತದೆ. ಮಳೆಮಾಸದಲ್ಲಿ ಚಳಿ ಮುತ್ತಿಕ್ಕುತ್ತದೆ. ಚಳಿಗಾಲದಲ್ಲಿ ಬಿಸಿಲು ಝಳಪಿಸುತ್ತದೆ. ಪ್ರಕೃತಿಯ ಋತುಗಳ ರೂಪಾಂತರ ಇಂದು ಊಹಿಸುವುದಕ್ಕೂ ಅಸಾಧ್ಯ. ನಿರ್ಸರ್ಗದಲ್ಲಿ ಇಂಥ ಬದಲಾವಣೆ ಸಹಜ ಎಂದು ಮೈಮರೆಯುವಂತಿಲ್ಲ. ಇತ್ತೀಚಿನ ವರ್ಷಗಳಲ್ಲಿ ಮೂರೂ ಋತುಗಳಲ್ಲೂ ನಾನಾ ವಿಕೋಪಗಳು ಸ್ಪೋಟಗೊಳ್ಳುತ್ತಲೇ ಇವೆ. ಹವಾಮಾನ ವೈಪರಿತ್ಯ ಜಗತ್ತಿನ ಬಹುದೊಡ್ದ ಸವಾಲು ಮತ್ತು ಚರ್ಚಿತ ವಿಷಯವೂ ಆಗಿದೆ. ಪ್ರಪಂಚದಾದ್ಯಂತ ಬರದಿಂದ ಹಠಾತ್ ಪ್ರವಾಹದವರೆಗೆ ಸಾಕಷ್ಟು ಜನರ ಜೀವನ ಏರುಪೇರಿಗೆ ಸಿಲುಕಿದೆ. ಭಾರತವೊಂದರಲ್ಲೇ ಕಳೆದೆರಡು ವರ್ಷಗಳಲ್ಲಿ ೪೦ ಲಕ್ಷಕ್ಕೂ ಹೆಚ್ಚು ಜನ ಆಂತರಿಕವಾಗಿ ಅನಿವಾರ್ಯವಾಗಿ ಸ್ಥಳಾಂತರಗೊಂಡಿದ್ದಾರೆ. ಈ ಸಂಖ್ಯೆ ಚೀನಾದಲ್ಲಿ ೫೫ ಲಕ್ಷ, ಅಮೇರಿಕಾದಲ್ಲಿ ೨೦ ಲಕ್ಷದಷ್ಟಿದೆ ಎಂಬ ಮಾಹಿತಿಯಿದೆ. ಕೇವಲ ನಮ್ಮ ಕೊಡಗಿನಲ್ಲೇ ಪ್ರವಾಹ, ಧರೆಕುಸಿತ ಕಾರಣ ಸುರಕ್ಷಿತ ತಾಣಗಳನ್ನು ಅರಸಿಹೋದವರು ಸಾಕಷ್ಟು ಜನರಿದ್ದಾರೆ.

ಇದೆಲ್ಲ ಕೇವಲ ಮನುಷ್ಯರ ಸಂಕಟಗಳಾದರೆ, ಇನ್ನು ಇಂಥ ಬೃಹತ್ ಯೋಜನೆಗಳಿಂದ ಪ್ರಕೃತಿಗೆ ಬೀಳುವಂಥ ಹೊಡೆತವೇನು ಸಣ್ಣದೇ? ಕಾಡು-ಬೆಟ್ಟಗಳನ್ನು ಬಳಸಿ ಮೇಲೆದ್ದ ಕೊಂಕಣ ರೈಲ್ವೆ ಯೋಜನೆಯೇ ಇದಕ್ಕೆ ನಮ್ಮ ಕಣ್ಮುಂದಿರುವ ಅತಿದೊಡ್ಡ ನಿದರ್ಶನ. ಈ ಯೋಜನೆಯಿಂದ ಕರಾವಳಿಯ ಪಶ್ಚಿಮ ಘಟ್ಟ ಭಾಗದ ನೈಸರ್ಗಿಕ ಸಂರಚನೆಯೇ ವಿರೂಪಗೊಂಡಿದೆ ಎನ್ನುವ ಆಕ್ಷೇಪ ಪರಿಸರವಾದಿಗಳಿಂದ ಇದ್ದೇ ಇದೆ. 

ದಟ್ಟ ಕಾಡಿನ ಬೆಟ್ಟ ಗುಡ್ಡಗಳಲ್ಲಿ ರೈಲ್ವೆ ಯೋಜನೆ ಕೈಗೊಳ್ಳುವುದರಿಂದ ಹಳಿಗಳು ಕನಿಷ್ಟವೆಂದರೂ ಭೂ ಮೇಲ್ಮೈನಿಂದ ೩-೪ ಮೀಟರ್ ಎತ್ತರಕ್ಕೆ ಏರಬೇಕಾಗುತ್ತದೆ. ಇದು ಪರ್ವತ ಪ್ರದೇಶದಿಂದ ನೈಸರ್ಗಿಕವಾಗಿ ಹರಿದು, ನದಿಗೆ ಸೇರುವ ನೀರಿಗೆ ಅತಿದೊಡ್ದ ತಡೆ. ಜನವಿಜ್ಞಾನದ ಋತುಚಕ್ರಕ್ಕೆ (ಹೈಡ್ರೋಲಾಜಿಕಲ್ ಸೈಕಲ್) ತದ್ವಿರುದ್ಧ ಕ್ರಿಯೆಯೂ ಹೌದು. ಪಶ್ಚಿಮಘಟ್ಟದ ಭೂ ಮೇಲ್ಪದರದ ಜೈವಿಕ ಪದಾರ್ಥದ ಮಣ್ಣೇ (Humus Soil) ಸಮುದ್ರದ ಜಲಚರಗಳ ಬದುಕಿಗೆ ಆಧಾರ. ಕೊಳೆತ ಎಲೆಯ ಮೈಕ್ರೋ ಆರ್ಗನೈಜ್ ಅಂಶಗಳು ಸಮುದ್ರ ತಲುಪದಿದ್ದರೆ ಅಲ್ಲಿನ ಜೀವಿಗಳ ಸಂತಾನೋತ್ಪತ್ತಿ ಮೇಲೆ ದುಷ್ಪರಿಣಾಮ ಬೀರುತ್ತದೆ. ಇನ್ನು ಸುರಂಗಗಳನ್ನು ತೋಡಿ, ರೈಲ್ವೆ ಮಾರ್ಗ ನಿರ್ಮಿಸಿದರೂ ಅದು ವನ್ಯಮೃಗಗಳ ಕಾರಿಡಾರ್ ಗೆ ಅತಿ ದೊಡ್ದ ಹೊಡೆತವೇ ಸರಿ. ಅಷ್ಟಕ್ಕೂ ಪ್ರಸ್ತಾವಿತ ಯೋಜನೆಗಳ ಮಾರ್ಗದ ಜನರಿಗೆ ರೈಲ್ವೆ ಯೋಜನೆಗಳ ಅವಶ್ಯಕತೆ ಅಷ್ಟಾಗಿಲ್ಲ. ಮೈಸೂರು-ಕೇರಳ ನಡುವೆ ರಸ್ತೆ ಸಾರಿಗೆ ಉತ್ತಮವಾಗಿಯೇ ಇದೆ. ಇವೆಲ್ಲದರ ಅರಿವಿದ್ದೂ ಕೇರಳದ ನಿಯೋಗ ಆಗಮಿಸಿದ್ದು ಸರಿಯಾದ ಕ್ರಮ ಆಗಿರಲಿಲ್ಲ. 

ಕೃಪೆ: ವಿಜಯ ಕರ್ನಾಟಕ, ಸಂಪಾದಕೀಯ, ದಿ: ೨೧-೦೯-೨೦೨೨