ಜುಗ್ಗನ ಕಥೆ

ಜುಗ್ಗನ ಕಥೆ

ಬರಹ

ಜುಗ್ಗನ ಕಥ
[ಮೈದಾಸನ ಕಥೆಯನ್ನು ಒಂದು ವಿಡಂಬನಾತ್ಮಕ ರೂಪಕವಾಗಿ ಇಲ್ಲಿ ಬರೆದಿದ್ದೇನೆ.]
ಮೇಳ:- ಜುಗ್ಗ ಜುಗ್ಗ ಜುಗ್ಗ
ನಮ್ಮೂರಲ್ಲೊಬ್ಬ ಜುಗ್ಗ
ಅವನೇ ನಮ್ಮ ಮೈದಾಸ
ಕಾಸಿಗೆ ಕಾಸು ಕೂಡಿಡ್ತಾನೆ
ಸಾಲದು ಎಂದು ಗೋಳಿಡ್ತಾನೆ || ಜುಗ್ಗ ||
ತಿಂದರೆ ಹೋಯ್ತು
ಉಂಡರೆ ಹೋಯ್ತು
ಅನ್ನೋ ಅಂತ ಕಂಜೂಸು
ಕಂಜೂಸು ಕಂಜೂಸು ಕಂಜೂಸು
ಒಂದು ಪೈಸಾ ಹೋಯ್ತು
ಅಂದರೂ ಜೇವ ಹೋಯ್ತು
ಅನ್ನೋ ಅಂತ ಕಂಜೂಸು
ಕಂಜೂಸು ಕಂಜೂಸು ಕಂಜೂಸು || ಜುಗ್ಗ ||
ಕಬ್ಣದ್ಪೆಟ್ಗೆ ಭರ್ತಿ
ಚಿನ್ನದ್ನಾಣ್ಯ ತುಂಬಿ
ಹಗಲೂ ರಾತ್ರಿ ಎಣಿಸ್ತಾನೆ
ಕಳ್ಳರು ಕಾಕರು ಬಂದಾರೆಂದು
ಕಣ್ಣಲ್ಕಣ್ಣಿಟ್ಟು ಕಾಯ್ತಾನೆ.
ನಡುಗಿ ನಡುಗಿ ಸಾಯ್ತಾನೆ. ||ಜುಗ್ಗ ||
[ಕಬ್ಬಿಣದ ಪೆಟ್ಟಿಗೆಗೆ ಬೀಗ ಹಾಕಿ ಮೈದಾಸ ಸೊಂಟಕ್ಕೆ ಕೀಲಿ ಸಿಕ್ಕಿಸುತ್ತಾನೆ.]
ಮೈದಾಸ:- ಹಹ್ಹಹ್ಹಾ…. ಹಹ್ಹಹ್ಹಾ….
ದೇವ್ರೇ ದೇವ್ರೇ ದೇವ್ರೇ
ನೀನು ಎದುರಿಗ್ಬಂದ್ರೆ
ನಂಗೇನಾದ್ರು ವರಕೊಟ್ರೆ
ಯಾರಿಲ್ಲ ಸಮ ನನ್ನನ್ಬಿಟ್ರೆ
[ದೇವತೆ ಪ್ರತ್ಯಕ್ಷಳಾಗುವಳು. ಮೈದಾಸ ಒಮ್ಮೆ ಬೆಚ್ಚುವನು]
ಮೈದಾಸ:- ಯಾರಿಲ್ಲಿ ಬಂದವರು?
ನನ್ನ ನಿಧಿಯ ದೋಚುವರು?
ದೇವರ ಕರೆದರೆ ದೆವ್ವ ಬಂದಿತೆ?
ಕಾಡುವಂತ ನೋವು ತಂದಿತೆ?
ದೇವತೆ:- ಬಂದೆ ಬಂದೆ ಬಂದೆ
ನಾದೆವ್ವವಲ್ಲ ದೇವತೆ
ನಿನಗಾಗೇ ಬಂದೆನಾ
ನಿನ್ನ ಕರೆಗೆ ಓಗೊಟ್ಟೆನಾ
ಮೈದಾಸ:- ಏನು ವರವ ಕೊಡುವೆ ನೀನು?
ನನ್ನ ನಿಧಿಯನೆಲ್ಲಾ ಕಾಯ್ವೆಯಾ?
ಹೆಚ್ಚು ಆಗುವಂತೆ ಮಾಡಿ ನಾನು
ನಲಿವ ಹಾಗೆ ಮಾಡ್ವೆಯಾ?
ದೇವತೆ:- ಹೌದು ಹೌದು ಹೌದು
ವರವ ಕೊಡಲು ಬಂದೆ ನಾನು
ನೀ ಮುಟ್ಟಿದ್ದೆಲ್ಲ ಚಿನ್ನ
ಎಲ್ಲೆಲ್ಲೂ ಮುತ್ತು ರತ್ನ!
ಮೈದಾಸ:- ನಿಜವೇ? ನಿಜವೇ? ನಿಜವೇ?
ನಾಮುಟ್ಟಿದ್ದೆಲ್ಲಾ ಚಿನ್ನ
ನನ್ನ ಬದುಕೇ ಎಷ್ಟು ಚೆನ್ನ!
ನಲಿವೇ ನನ್ನದು ನಗುವೇ ನನ್ನದು
ಹಹ್ಹಹ್ಹಾ ಹಹ್ಹಹ್ಹಾ ಹಹ್ಹಹ್ಹಾ
ಮೇಳ:- ಜುಗ್ಗ ಜುಗ್ಗ ಜುಗ್ಗ
ನಮ್ಮೂರಲೊಬ್ಬ ಜುಗ್ಗ
ತಿನ್ನೋದ್ಬಿಟ್ಟು
ಉಣ್ಣೋದ್ಬಿಟ್ಟು
ದುಡೀತಾನೆ ಚಿನ್ನ
ನಿದ್ದೆ ಬಿಟ್ಟು
ಬುದ್ಧಿಗೆಟ್ಟು
ಪಡೀತಾನೆ ಚಿನ್ನ || ಜಗ್ಗ ||
ನಮ್ಮೂರ ಜುಗ್ಗಂಗೆ
ದುಡ್ಡೊಂದೆ ಗುರಿಯಣ್ಣ
ದಾನ ಧರ್ಮ ಹಾಗಂದ್ರೇನು?
ಗೊತ್ತೇಯಿಲ್ಲ ಅವನಿಗೆ!
ದುಡಿದದ್ದೆಲ್ಲಾ ಬಚ್ಚಿಟ್ಟು
ಮಗನ್ ಮಾಡ್ತಾನೆ ಇಂಜಿನೀಯರ್ರು
ಮಗಳನ್ ಮಾಡ್ತಾನೆ ಡಾಕ್ಟರ್ರು
ಮಗನೂ ಚಿನ್ನ ಮಗಳೂ ಚಿನ್ನ
ಸೊಸೆ ತರ್ತಾಳೆ ಹೊರೆ ಚಿನ್ನ || ಜುಗ್ಗ ||
ಮಾಐದಾಸ:- ಹಹ್ಹಹ್ಹಾ ಹಹ್ಹಹ್ಹಾ
ಚಿನ್ನ ಚಿನ್ನ ಚಿನ್ನ
ಮುಟ್ಟಿದ್ದೆಲ್ಲಾ ಚಿನ್ನ – ನಾ
ಮುಟ್ಟಿದ್ದೆಲ್ಲಾ ಚಿನ್ನ
[ಇವನು ಕುಣಿಯುತ್ತಿರುವಾಗಲೇ ಒಬ್ಬ ವ್ಯಕ್ತಿ ಒಳಗೆ ಬರುತ್ತಾನೆ. ಅವನ ಕತ್ತಿನಲ್ಲಿ ಸಕ್ಕರೆ ಕಾಯ್ಲೆ ಎಂಬ ಫಲಕ ಇರುತ್ತದೆ]
ಮೈದಾಸ:-ಯಾರು ನೀನು? ಏಕೆ ಬಂದೆ?
ಸಕ್ಕರೆ ಕಾಯ್ಲೆ:-ನಾನು ಯಾರು ತಿಳಿಯೆ ನೀನು!
ನನ್ನ ಹೆಸರು ಅರಿಯೆ ನೀನು
ನಿನ್ನ ಒಡಲ ಸೇರಲೆಂದು
ಬಂದ ಸಕ್ರೆ ಕಾಯ್ಲೆ ನಾನು
ಮೈದಾಸ:- ನನ್ನೊಡನಿದ್ದು ದೋಚಲು ಬಂದ
ಕಳ್ಳ ನೀನು ಕಳ್ಳ ನೀನು
ನಿನ್ನೊಡನಾಟವೇ ಎನಗೆ ಬೇಡಾ
ಹೋಗು ಹೋಗು ನೀ ಹಿಂದಿರುಗು.
[ಬಿ.ಪಿ. ಎಂಬ ಫಲಕದೊಡನೆ ಇನ್ನೊಬ್ಬ ವ್ಯಕ್ತಿಯ ಆಗಮನ]
ಬಿ.ಪಿ.:-ಅವನನ್ನೇಕೆ ನೂಕುವೆ ನೀನು?
ನಾನೂ ಬಂದೆ ಅವನ ಹಿಂದೆ
ನನಗೂ ನಿನಗೂ ನೆಂಟಣ್ಣಾ
ಅವನೂ ಕೂಡಾ ನಿನ್ನವನಣ್ಣಾ
ಇತರೆ ರೋಗಗಳು:- ನಾವೂ… ನಾವೂ….
ಸಣ್ಣ ಪುಟ್ಟ ರೋಗಗಳು
ನಿನ್ನೊಡನಿರಲು ಬಂದಿಹೆವು
ಚಿಂತಗಳು:-ನಾವೂ….ನಾವೂ….ನಾವೂ…
ಚಿಂತಗಳಿಲ್ಲದೆ ನೀನಿಲ್ಲ
ನಿನ್ನಲೇ ನಮ್ಮೊಲವೆಲ್ಲಾ
ಮೈದಾಸ:- ಏಕೆ ಏಕೆ ಬಂದಿರಿ ನೀವೆಲ್ಲಾ
ಯಾರು ಕರೆದರು ನಿಮ್ಮನ್ನೆಲ್ಲಾ
ನಿಮ್ಮನು ನೋಡಿ ನನ್ನೆದೆ ಡವಡವ
ಕಣ್ಣು ಕತ್ತಲು ಕೈಕಾಲ್ ಸೋಲು
ಕಾಡುತಿರುವರೆಲ್ಲರೂ
ಓ ದೇವಿ ರಕ್ಷಿಸೆನ್ನನು.
[ದೇವತೆ ಬರುವಳು]
ದೇವತೆ:-ಕರೆಯದೇ ಬರುವ ಅತಿಥಿಗಳವರು
ನೀ ಬದುಕಿದ ರೀತಿಯಲಿ ಮಾಡಿದ ತಪ್ಪುಗಳ ಫಲವೇ ಅವರು
ಕುರುಡಾಗಿ ನೀನಡೆದ ಹಾದಿಯಲಿ ಮುಳ್ಳಾಗಿ ನಿಂತಿಹರವರು
ಇದು ನೀಗಳಿಸಿದ ಫಲವಯ್ಯಾ ನಾನೇನು ಮಾಡಲಿ ಹೇಳಯ್ಯ?
ಮೈದಾಸ:- ಕರೆಯದೇ ಬರಲು ಕಾರಣವೇನು?
ದೇವತೆ:- ಕಾರಣವಾ ಹೇಳಲೇ?
ತಿನ್ನುವ ವಯಸಲಿ ತಿನ್ನದೇ ದುಡಿದೆ
ಮಗನಿಗೆ ಮಗಳಿಗೆ ಕೂಡಿಟ್ಟೆ
ನಿದ್ದೆ ಊಟ ತ್ಯಜಿಸಿ
ನಿನ್ನೀ ಜೀವವ ತೇದು
ಕಾಸಿಗೆ ಕಾಸು ಕೂಡಿಟ್ಟೆ
ಏನಾಯ್ತೀಗ ಏನಾಯ್ತು?
ಎಲ್ಲಾ ಹಾಳಾಯ್ತು.
ಚಿನ್ನವಿದೆ ರನ್ನವಿದೆ
ಉಣ್ಣಲಿದೆ ಉಡಲು ಇದೆ
ಏನಿದ್ದೇನು ನೀನುಣ್ಣುವ ಮುನ್ನ
ಬಂತಲ್ಲ ಸಕ್ರೆ ಕಾಯ್ಲೆ ನಿನಗೆ
ಏರ್ತಲ್ಲ ಇಲ್ಲೇ ಬಿ.ಪಿ. ಒಳಗೆ
ಜೊತೆಗೆ ನೂರೆಂಟು ಚಿಂತೆಗಳು
ಒಳಗೇ ಕೊರೆವ ಸಂಗಾತಿಗಳು
ಮೈದಾಸ:-ಓಹ್! ಏನನ್ಯಾಯ ಏನನ್ಯಾಯ
ಅತಿ ಆಸೆಯ ಹೊತ್ತು ತಿರುಗಿದೆ ನಾನು
ನಾನೇ ಕಳೆದು ಹೋದೆ– ಅಯ್ಯೋ
ಎಲ್ಲೋ ಕಳೆದು ಹೋದೆ
ದುಡ್ಡೇ ದುಡ್ಡದು ಎಂದು
ಎಲ್ಲಾ ಸುಖವನು ತೊರೆದು
ಕಳಕೊಂಡೆ ಎಲ್ಲವ
ನಾನೇ ಕಳಕೊಂಡೆ
[ಮೈದಾಸ ಅಳುವನು]
ಮೇಳ:- ಜುಗ್ಗರ ಜುಗ್ಗ ಅಳುತಿದ್ದಾನೆ
ಅಳುತಿದ್ದಾನೆ ಅಳುತಿದ್ದಾನೆ
ಕೊಟ್ಟಿದ್ದು ತನಗೆ
ಬಚ್ಚಿಟ್ಟಿದ್ದು ಪರರಿಗೆ
ನೀತಿಯ ಮರೆತವನಾಗಿ
ಇದ್ದೂ ಇಲ್ಲದೆ ಹೋದವನಾಗಿ
ಪಡೆದೂ ಪಡೆಯದೆ ನಿಂತವನಾಗಿ ||ಜುಗ್ಗರ ಜುಗ್ಗ ಅಳುತಿದ್ದಾನೆ||