ಜುದಾ ಮತ್ತು ಸೋದರರು
ಜುದಾ ತನ್ನ ತಾಯಿ ಮತ್ತು ಇಬ್ಬರು ಸೋದರರೊಂದಿಗೆ ವಾಸ ಮಾಡುತ್ತಿದ್ದ. ಆ ಸೋದರರ ಹೆಸರು ಅಲಿ ಮತ್ತು ಅಹ್ಮದ್. ಅಬ್ದುಲ್ ಸಮದ್ ಎಂಬ ಜಾದೂಗಾರನನ್ನು ಜುದಾ ಭೇಟಿಯಾಗುವ ತನಕ ಅವರು ಬಡತನದಲ್ಲಿ ಬೇಯುತ್ತಿದ್ದರು. ತನಗೆ ಮಾಡಿದ ಸಹಾಯಕ್ಕಾಗಿ ಜುದಾನಿಗೆ ಜಾದೂಗಾರ ಮ್ಯಾಜಿಕ್ ಚೀಲ ಕೊಟ್ಟಾಗಿನಿಂದ ಅವರಿಗೆ ಊಟ-ತಿಂಡಿಗೇನೂ ಕೊರತೆಯಾಗಲಿಲ್ಲ. ಯಾಕೆಂದರೆ ಮಂತ್ರಗಳನ್ನು ಹೇಳಿ ಆ ಚೀಲದಿಂದ ಬೇಕಾದಷ್ಟು ಆಹಾರವನ್ನು ಜುದಾ ಹೊರತೆಗೆಯುತ್ತಿದ್ದ.
ಅದೇನಿದ್ದರೂ ಜುದಾನ ಸೋದರರಿಗೆ ಅವನ ಬಗ್ಗೆ ಅಸೂಯೆ. ಜುದಾ ಎಲ್ಲಿಂದ ಆಹಾರ ತರುತ್ತಿದ್ದಾನೆ ಎಂದು ತಿಳಿಯಲು ಅವರು ಹೊಂಚು ಹಾಕಿದರು. ಕೊನೆಗೊಂದು ದಿನ, ಮ್ಯಾಜಿಕ್ ಚೀಲದಿಂದ ಜುದಾ ಬೆಳ್ಳಿಯ ತಟ್ಟೆಗಳಲ್ಲಿ ರುಚಿರುಚಿ ಆಹಾರ ಹೊರತೆಗೆಯುತ್ತಿದ್ದದ್ದನ್ನು ಕಂಡರು. ಆಗಲೇ ಸೋದರರಿಬ್ಬರೂ ಜುದಾನನ್ನು ಮುಗಿಸಿ ಬಿಡಲು ನಿರ್ಧರಿಸಿದರು. ಅನಂತರ ತಾವೇ ಮ್ಯಾಜಿಕ್ ಚೀಲದ ಒಡೆಯರಾಗಿ ಸಿರಿವಂತರಾಗಬಹುದು ಎಂಬುದು ಅವರ ಕುತಂತ್ರ.
ಅವರು ಸಮುದ್ರ ತೀರದ ಬಂದರಿಗೆ ಹೋದರು. ಅಲ್ಲೊಬ್ಬ ನೌಕೆಯ ಮುಂದಾಳು ಜುದಾನನ್ನು ಮುಗಿಸಲು ಸಹಾಯ ಮಾಡಲು ಒಪ್ಪಿದ. ಆ ದಿನ ರಾತ್ರಿ ಜುದಾ ಮಲಗಿದ್ದಾಗ, ನೌಕಾ ಮುಂದಾಳುವನ್ನು ಸೋದರರು ಅವನ ಕೋಣೆಗೆ ಕರೆದೊಯ್ದರು. ಜುದಾನಿಗೆ ಎಚ್ಚರವಾಯಿತು. ಆದರೆ ಅವನು ಕೂಗಿಕೊಳ್ಳುವ ಮುಂಚೆ ಒಬ್ಬ ಸೋದರ ಅವನ ತಲೆಯ ಮೇಲೊಂದು ದೊಡ್ಡ ಗೋಣಿಚೀಲ ಹಾಕಿ ಬಿಟ್ಟ. ಅವನನ್ನು ಆ ಚೀಲದೊಳಗೆ ಬಿಗಿಯಾಗಿ ಕಟ್ಟಿ, ಅವರು ಬಂದರಿಗೆ ಒಯ್ದರು.
ಮರುದಿನ ಬೆಳಗ್ಗೆ ಜುದಾನನ್ನು ಬಂದರಿನಿಂದ ಒಂದು ನೌಕೆಯಲ್ಲಿ ಒಯ್ದು, ದೂರದಲ್ಲಿದ್ದ ಕಡಲುಗಳ್ಳರ ನೌಕೆಗೆ ಒಪ್ಪಿಸಲಾಯಿತು. ಅದರಲ್ಲಿ ಆತ ಇತರ ಹಲವರಂತೆ ಗುಲಾಮನಾಗಿ, ನೌಕೆ ಮುನ್ನಡೆಸಲು ಹುಟ್ಟು ಹಾಕಬೇಕಾಯಿತು.
ಜುದಾನನ್ನು ಶಾಶ್ವತವಾಗಿ ತೊಲಗಿಸಿದ್ದೇವೆಂದು ಅಲಿ ಮತ್ತು ಅಹ್ಮದ್ ಸಂತೋಷ ಪಟ್ಟರು. ಜುದಾನ ಮ್ಯಾಜಿಕ್ ಚೀಲ ತಮ್ಮದಾಯಿತೆಂದು ಅವರು ಖುಷಿ ಪಡುವಾಗ ಅದು ಯಾರಲ್ಲಿ ಇರಬೇಕೆಂದು ಅವರಿಬ್ಬರಲ್ಲಿ ಜಗಳ ಶುರುವಾಯ್ತು. ಅವರು ರಸ್ತೆಗೆ ಬಂದು ಹೊಡೆದಾಡಿಕೊಂಡಾಗ ನಗರದ ಕಾವಲುಗಾರರು ಅವರನ್ನು ಎಳೆದೊಯ್ದು ಸುಲ್ತಾನನ ಮುಂದೆ ನಿಲ್ಲಿಸಿದರು.
ಅವರಿಬ್ಬರ ಜಗಳದ ಕಾರಣವೇನೆಂದು ಸುಲ್ತಾನ ಕೇಳಿದಾಗ ಅವರು ಮ್ಯಾಜಿಕ್ ಚೀಲದ ಬಗ್ಗೆ ಹೇಳಲೇ ಬೇಕಾಯಿತು. ಆಗ ಅದನ್ನು ತರಿಸಿದ ಸುಲ್ತಾನ ಅದು ಹೇಗೆ ಬೇಕಾದ ಆಹಾರವನ್ನೆಲ್ಲ ಕೊಡುತ್ತದೆಂದು ತಿಳಿದು ಅಚ್ಚರಿಪಟ್ಟ. ಅಂತಹ ಚೀಲ ತನ್ನ ಬಳಿ ಇರಬೇಕೆಂದು ಅದನ್ನು ಇರಿಸಿಕೊಂಡ ಮತ್ತು ಸೋದರರಿಬ್ಬರನ್ನೂ ಜೈಲಿಗೆ ಹಾಕಿದ.
ಕಡಲುಗಳ್ಳರ ನೌಕೆಯಿಂದ ಪಾರಾಗುವುದು ಹೇಗೆಂದು ಜುದಾ ಚಿಂತಿಸುತ್ತಲೇ ಇದ್ದ. ಅದೊಂದು ದಿನ ಸಮುದ್ರದಲ್ಲಿ ದೊಡ್ಡ ಬಿರುಗಾಳಿ ಬೀಸಿತು. ಭಯಾನಕ ಅಲೆಯೊಂದರ ಹೊಡೆತಕ್ಕೆ ಆ ನೌಕೆ ಚೂರುಚೂರಾಯಿತು. ಒಂದು ಹಲಗೆಯ ತುಂಡನ್ನು ಗಟ್ಟಿಯಾಗಿ ಹಿಡಿದುಕೊಂಡ ಜುದಾ ರಾತ್ರಿಯಿಡೀ ಸಮುದ್ರದಲ್ಲಿ ತೇಲುತ್ತಿದ್ದ. ಮುಂಜಾನೆ ಅವನಿಗೆ ದೂರದಲ್ಲಿ ತೀರ ಕಾಣಿಸಿತು. ಹಲ್ಲುಕಚ್ಚಿ ಈಜುತ್ತಾ ಅವನು ತೀರಕ್ಕೆ ಬಂದು ಬಿದ್ದ. ಆಯಾಸದಿಂದ ಉಪವಾಸದಿಂದ ಆತ ಬಸವಳಿದಿದ್ದ.
ಅನಂತರ ಜುದಾ ಎದ್ದು ನಿಧಾನವಾಗಿ ನಡೆದು ಒಂದು ರಸ್ತೆಗೆ ಬಂದು ಮುಂದಕ್ಕೆ ಸಾಗಿದ. ಅವನಿಗೆ ಯಾರೂ ಕಾಣಿಸಲಿಲ್ಲ. ಕೊನೆಗೆ ದೂರದಲ್ಲಿ ಕತ್ತೆಯಲ್ಲಿ ಯಾರೋ ಸವಾರಿ ಮಾಡುವುದು ಕಾಣಿಸಿತು. ಜುದಾ ಬೇಗನೇ ಅವನ ಬಳಿಗೆ ಹೋದ. ಅದು ಜಾದೂಗಾರ ಅಬ್ದುಲ್ ಸಮದ್! “ನೀನ್ಯಾಕೆ ಇಲ್ಲಿಗೆ ಬಂದೆ?" ಎಂದು ಆತ ಕೇಳಿದಾಗ ಜುದಾ ತನ್ನ ಪಾಡನ್ನೆಲ್ಲ ತಿಳಿಸಿದ.
ಅವನೊಂದಿಗೆ ನೆಲದಲ್ಲಿ ಕುಳಿತ ಜಾದೂಗಾರ ತನ್ನ ಬೆರಳಿನಲ್ಲಿದ್ದ ಒಂದು ಉಂಗುರವನ್ನು ಉಜ್ಜಿದ. ತಕ್ಷಣ ಅಲ್ಲೊಂದು ಭೂತ ಪ್ರತ್ಯಕ್ಷವಾಯಿತು. ಜಾದೂಗಾರ ಆಹಾರ ತರಬೇಕೆಂದು ಭೂತಕ್ಕೆ ಆದೇಶಿಸಿದ. ಅವರಿಬ್ಬರೂ ಭರ್ಜರಿ ಭೋಜನ ಮಾಡಿದರು. ಜಾದೂಗಾರ ಆ ಉಂಗುರವನ್ನು ಜುದಾನಿಗೆ ಕೊಟ್ಟು ಹೇಳಿದ, “ನೀನು ಈ ಉಂಗುರವನ್ನು ಉಜ್ಜಿದರಾಯ್ತು. ಭೂತ ಪ್ರತ್ಯಕ್ಷವಾಗುತ್ತದೆ. ನೀನು ಕೊಟ್ಟ ಆದೇಶವನ್ನೆಲ್ಲ ಅದು ಪಾಲಿಸುತ್ತದೆ. ಉಂಗುರವನ್ನು ಯಾವಾಗಲೂ ನಿನ್ನ ಬೆರಳಿನಲ್ಲೇ ಹಾಕಿಕೊಂಡಿರು; ಆಗ ಅದನ್ನು ಯಾರೂ ಕದಿಯಲು ಸಾಧ್ಯವಿಲ್ಲ.”
ಜಾದೂಗಾರನಿಗೆ ಜುದಾ ವಂದಿಸಿ ಬೀಳ್ಗೊಂಡ. ಆತ ಉಂಗುರ ಉಜ್ಜಿದೊಡನೆ ಭೂತ ಪ್ರತ್ಯಕ್ಷ. ತನ್ನನ್ನು ಮನೆಗೆ ಒಯ್ಯಬೇಕೆಂದು ಜುದಾ ಆದೇಶಿಸಿ, ಅದರ ಬೆನ್ನನ್ನು ಹತ್ತಿ ಕುಳಿತ. ಭೂತ ಆಕಾಶದಲ್ಲಿ ಹಾರುತ್ತಾ ಅವನನ್ನು ಮನೆಗೆ ಕರೆದೊಯ್ದಿತು. ಜುದಾನ ತಾಯಿಗೆ ಅವನನ್ನು ಕಂಡು ಹೋದ ಜೀವ ಬಂದಂತಾಯಿತು. ಅವಳು ಜುದಾ ಸತ್ತೇ ಹೋಗಿದ್ದಾನೆಂದು ಭಾವಿಸಿದ್ದಳು. ಜುದಾನ ಮ್ಯಾಜಿಕ್ ಚೀಲವನ್ನು ಸುಲ್ತಾನ ವಶಪಡಿಸಿಕೊಂಡು, ಸೋದರರನ್ನು ಜೈಲಿಗೆ ಹಾಕಿದ್ದಾರೆಂದು ಅವಳು ಹೇಳಿದಳು.
ತನ್ನ ಸೋದರರು ಸಾಕಷ್ಟು ಶಿಕ್ಷೆ ಅನುಭವಿಸಿರುವ ಕಾರಣ ಅವರಿಗೆ ಬುದ್ಧಿ ಬಂದಿರಬೇಕು ಎಂದುಕೊಂಡ ಜುದಾ. ಅವನು ಉಂಗುರ ಉಜ್ಜಿ ಭೂತವನ್ನು ಆಹ್ವಾನಿಸಿದ. ತನ್ನ ಸೋದರರನ್ನು ಜೈಲಿನಿಂದ ಹೊತ್ತು ತರಬೇಕೆಂದೂ, ಸುಲ್ತಾನನ ಖಜಾನೆಯ ಸಂಪತ್ತೆಲ್ಲವನ್ನೂ ತನ್ನ ಮನೆಗೆ ತರಬೇಕೆಂದೂ ಆದೇಶಿಸಿದ.
ಜೈಲಿನಲ್ಲಿ ಪಶ್ಚಾತ್ತಾಪ ಪಡುತ್ತಾ ಕುಳಿತಿದ್ದ ಜುದಾನ ಸೋದರರಿಗೆ ಅವರೆದುರು ಭೂತ ಬಂದು ನಿಂತಾಗ ಅಚ್ಚರಿ. ಅವರನ್ನು ಹೆಗಲಿಗೆ ಹತ್ತಿಸಿಕೊಂಡ ಭೂತ ಅಲ್ಲಿಂದ ಹೊರಟಿತು. ಹಾದಿಯಲ್ಲಿ ಸುಲ್ತಾನನ ಖಜಾನೆಗೆ ಹೋಗಿ ಅದರ ಕಾವಲುಗಾರನನ್ನು ನಿದ್ದೆಗೆ ಬೀಳಿಸಿ, ಖಜಾನೆಯ ಬಾಗಿಲು ತೆರೆಯಿತು. ಅಲ್ಲಿದ್ದ ವಜ್ರಮುತ್ತುಮಾಣಿಕ್ಯ, ಬೆಳ್ಳಿಬಂಗಾರ ಆಭರಣಗಳು ತುಂಬಿದ್ದ ಪೆಟ್ಟಿಗೆಗಳೆಲ್ಲವೂ ಮ್ಯಾಜಿಕ್ ಚೀಲದ ಜೊತೆಗೆ ಭೂತದ ಹಿಂದೆಯೇ ಆಕಾಶದಲ್ಲಿ ಹಾರುತ್ತಾ ಜುದಾನ ಮನೆಗೆ ಬಂದವು.
ಈಗ ಜುದಾ ನಗರದ ಹೊರವಲಯದಲ್ಲಿ ಅರಮನೆ ಕಟ್ಟಬೇಕೆಂದು ಭೂತಕ್ಕೆ ಆದೇಶಿಸಿದ. ಬೇಗನೇ ಅರಮನೆ ಎದ್ದು ನಿಂತಿತು. ಸುಲ್ತಾನನ ಸಂಪತ್ತನ್ನೆಲ್ಲ ಅಲ್ಲಿ ಶೇಖರಿಸಿಟ್ಟ ಜುದಾ, ತನ್ನ ತಾಯಿ ಮತ್ತು ಸೋದರರೊಂದಿಗೆ ಅಲ್ಲಿ ವಾಸ ಮಾಡತೊಡಗಿದ.
ಅತ್ತ ಸುಲ್ತಾನನಿಗೆ ತಲೆ ಕೆಟ್ಟು ಹೋಯಿತು. ಅಲಿ ಮತ್ತು ಅಹ್ಮದರನ್ನೂ ಜುದಾನ ಮ್ಯಾಜಿಕ್ ಚೀಲವನ್ನೂ ಪತ್ತೆ ಮಾಡಬೇಕೆಂದು ತನ್ನ ಯೋಧರಿಗೆ ಆಜ್ನಾಪಿಸಿದ. ಅವರು ಊರೆಲ್ಲ ಸುತ್ತಿ ರಾಜನಿಗೆ ಸುದ್ದಿ ತಂದರು: ರಾತ್ರೆಬೆಳಗಾಗುವಾಗ ನಗರದ ಹೊರವಲಯದಲ್ಲಿ ಹೊಸತೊಂದು ಅರಮನೆ ಎದ್ದು ನಿಂತಿದೆ; ಅದರಲ್ಲಿ ಜುದಾನೊಂದಿಗೆ ಅವನ ಸೋದರರು ಇದ್ದಾರೆ.
“ನನ್ನ ಖಜಾನೆಯ ಸಂಪತ್ತನ್ನೂ ಅವನೇ ಲೂಟಿ ಮಾಡಿರಬೇಕು” ಎಂದು ಅಬ್ಬರಿಸಿದ ಸುಲ್ತಾನ. ತನ್ನ ಸೈನ್ಯವನ್ನು ಕರೆದು, ಹೊಸ ಅರಮನೆಗೆ ಧಾಳಿ ಮಾಡಿ, ಜುದಾನ ಕುಟುಂಬದವರನ್ನೆಲ್ಲ ಬಂಧಿಸಿ ತರಬೇಕೆಂದು ಆಜ್ನಾಪಿಸಿದ. ಜುದಾನ ಅರಮನೆಗೆ ಸುಲ್ತಾನನ ಸೈನ್ಯ ಬಂತು. ಅಲ್ಲಿ ಒಬ್ಬನೇ ಕಾವಲುಗಾರ ಇದ್ದದ್ದು ಕಂಡು ಸೇನಾಧಿಪತಿ ದರ್ಪದಿಂದ ಹೇಳಿದ “ನಿನ್ನ ಮಾಲೀಕನನ್ನು ಇಲ್ಲಿಗೆ ಬರಹೇಳು.” ಆ ಕಾವಲುಗಾರನೇ ಭೂತ! ಅದೀಗ ದೈತ್ಯಾಕಾರಕ್ಕೆ ಬೆಳೆಯಿತು. “ಜುದಾನ ಅನುಮತಿಯಿಲ್ಲದೆ ಈ ಅರಮನೆಗೆ ಯಾರೂ ಕಾಲಿಡಬಾರದು” ಎಂದು ಭೂತ ಅಬ್ಬರಿಸಿತು.
ಸುಲ್ತಾನನ ಸೈನಿಕರೂ ಸೇನಾಧಿಪತಿಯೂ ಹೆದರಿ, ಜೀವ ಉಳಿದರೆ ಸಾಕೆಂದು ಅಲ್ಲಿಂದ ಓಡಿ ಹೋದರು. ಸುಲ್ತಾನನಿಗೆ ಎಲ್ಲ ಸಂಗತಿ ತಿಳಿಸಿದರು. ಪುನಃ ಅಲ್ಲಿಗೆ ಹೋಗಲು ಅವರು ಯಾರೂ ತಯಾರಿರಲಿಲ್ಲ. ಕೊನೆಗೆ ಸುಲ್ತಾನನೇ ಅಲ್ಲಿಗೆ ಹೊರಟ.
ಜುದಾನ ಅರಮನೆಗೆ ಸುಲ್ತಾನ ಬಂದಾಗ ಅದರ ಮಹಾದ್ವಾರ ತೆರೆದಿತ್ತು. ಮಹಾದ್ವಾರದಿಂದ ದೊಡ್ಡ ಮಹಲಿಗೆ ಸಾಗುವ ಹಾದಿಯ ಇಬ್ಬದಿಗಳಲ್ಲಿ ನೂರಾರು ಕಾವಲುಗಾರರು ಆಯುಧಗಳೊಂದಿಗೆ ನಿಂತಿದ್ದರು. ಮಹಲಿನಲ್ಲಿ ಪೀಠದಲ್ಲಿ ಕುಳಿತಿದ್ದ ಜುದಾ “ಬನ್ನಿ ಸುಲ್ತಾನರೇ, ನಿಮ್ಮ ಸೈನಿಕರು ಹೊರಗೆ ನಿಂತರೆ ನಿಮಗೆ ಯಾವುದೇ ಅಪಾಯವಿಲ್ಲ” ಎಂದು ಆಹ್ವಾನಿಸಿದ.
ಸುಲ್ತಾನ ದಂಗು ಬಡಿದು ಹೋಗಿದ್ದ. ಆತ ನಿಧಾನವಾಗಿ ನಡೆದು ಬಂದು ಜುದಾನ ಪೀಠದ ಎದುರು ನಿಂತಾಗ, ಜುದಾ ಹೇಳಿದ, "ಸುಲ್ತಾನರೇ, ನಾವಿಬ್ಬರು ಬಂಧುಗಳಾಗೋಣ. ನಿಮ್ಮ ರಾಜಕುಮಾರಿಯನ್ನು ನನಗೆ ಮದುವೆ ಮಾಡಿ ಕೊಡಿ.” ಕ್ಷಣ ಹೊತ್ತು ಯೋಚಿಸಿದ ಸುಲ್ತಾನ ಹೇಳಿದ, "ನನ್ನ ಒಪ್ಪಿಗೆ ಇದೆ. ಆದರೆ ನೀನು ನನ್ನ ಮಗಳ ಒಪ್ಪಿಗೆಯನ್ನೂ ಪಡೆಯಬೇಕು.”
ಸುರಸುಂದರಿ ರಾಜಕುಮಾರಿ ಸುಂದರಾಂಗ ಹಾಗೂ ಸಿರಿವಂತ ಜುದಾನನ್ನು ಮದುವೆಯಾಗಲು ಒಪ್ಪಿದಳು. ಅವತ್ತೇ ವಿಜೃಂಭಣೆಯಿಂದ ಅವರ ಮದುವೆ ನಡೆಯಿತು. ಕೆಲವು ವರುಷಗಳ ನಂತರ ಸುಲ್ತಾನ ತೀರಿಕೊಂಡ. ಆಗ ಜುದಾ ಮತ್ತು ರಾಜಕುಮಾರಿ, ರಾಜ್ಯದ ಆಡಳಿತ ವಹಿಸಿಕೊಂಡರು. ನ್ಯಾಯಬದ್ಧವಾಗಿ, ಜನಪರವಾಗಿ ರಾಜ್ಯಭಾರ ಮಾಡಿದರು.