ಜೆಕೆ ಹೇಳಿದ್ದು: ಪ್ರೀತಿಯೊಂದು ಕರ್ತವ್ಯವಲ್ಲ

ಜೆಕೆ ಹೇಳಿದ್ದು: ಪ್ರೀತಿಯೊಂದು ಕರ್ತವ್ಯವಲ್ಲ

ಬರಹ

ಪ್ರೀತಿ ಇರುವಲ್ಲಿ ಯಾವ ಕರ್ತವ್ಯವೂ ಇರುವುದಿಲ್ಲ. ನಿಮ್ಮ ಹೆಂಡತಿಯ ಬಗ್ಗೆ ನಿಮ್ಮಲ್ಲಿ ಪ್ರೀತಿ ಇದ್ದರೆ ಎಲ್ಲವನ್ನೂ ಆಕೆಯೊಂದಿಗೆ ಹಂಚಿಕೊಳ್ಳುತ್ತೀರಿ. ನಿಮ್ಮ ಆಸ್ತಿ, ನಿಮ್ಮ ಸಮಸ್ಯೆ, ನಿಮ್ಮ ಕಳವಳ, ನಿಮ್ಮ ಸಂತೋಷ ಎಲ್ಲವನ್ನೂ ಆಕೆಯೊಂದಿಗೆ ಹಂಚಿಕೊಳ್ಳುತ್ತೀರಿ. ನೀವು ಆಳುವ ಯಜಮಾನ, ಆಕೆ ಆಳಿಸಿಕೊಳ್ಳುವ ಸೇವಕಿಯಾಗಿರುವುದಿಲ್ಲ. ನೀವು ಗಂಡಸು, ಆಕೆ ನಿಮ್ಮ ವಂಶೋದ್ಧಾರಕನನ್ನು ಹೆರುವ ಹೆಣ್ಣು ಯಂತ್ರ ಆಗಿರುವುದಿಲ್ಲ. ನಿಮ್ಮ ಸಂತೋಷಕ್ಕೆ ಆಕೆಯನ್ನು ಬಳಸಿಕೊಂಡು ಆಮೇಲೆ ಬೇಡವೆಂದು ಆಕೆಯನ್ನು ಬಿಸಾಡುವುದಿಲ್ಲ. ಪ್ರೀತಿ ಇದ್ದಾಗ ಕರ್ತವ್ಯವೆಂಬ ಶಬ್ದವಿರುವುದಿಲ್ಲ. ಹೃದಯದಲ್ಲಿ ಪ್ರೀತಿ ಇಲ್ಲದಿರುವಾತ ಮಾತ್ರ ಹಕ್ಕು ಮತ್ತು ಕರ್ತವ್ಯಗಳ ಬಗ್ಗೆ ಮಾತನಾಡುತ್ತಾನೆ. ಈ ದೇಶದಲ್ಲಿ ಹಕ್ಕು ಮತ್ತು ಕರ್ತವ್ಯಗಳು ಪ್ರೀತಿಯ ಸ್ಥಾನವನ್ನು ಆಕ್ರಮಿಸಿಕೊಂಡಿವೆ. ಬೆಚ್ಚನೆಯ ಪ್ರೀತಿಗಿಂತ ಕಾನೂನು, ನಿಯಮಾವಳಿಗಳಿಗೆ ಪ್ರಾಮುಖ್ಯ ಸಂದಿದೆ. ಪ್ರೀತಿ ಇದ್ದಾಗ ಎಲ್ಲ ಸಮಸ್ಯೆಗಳೂ ಸರಳವಾಗುತ್ತವೆ. ಪ್ರೀತಿ ಇಲ್ಲದಿರುವಾಗ ಎಲ್ಲ ಸಮಸ್ಯೆಗಳೂ ಜಟಿಲವಾಗುತ್ತವೆ. ಹೆಂಡತಿ ಮತ್ತು ಮಕ್ಕಳ ಬಗ್ಗೆ ಪ್ರೀತಿ ಇರುವಾತ ಹಕ್ಕು ಮತ್ತು ಕರ್ತವ್ಯಗಳ ದಾಟಿಯಲ್ಲಿ ಯೋಚಿಸುವುದಿಲ್ಲ. ದಯವಿಟ್ಟು ನಿಮ್ಮ ನಿಮ್ಮ ಮನಸ್ಸುಗಳನ್ನು ಪರಿಶೀಲಿಸಿಕೊಳ್ಳಿ. ನನಗೆ ಗೊತ್ತು, ಹೀಗೆಂದಾಗ ನೀವು ನಕ್ಕುಬಿಡುತ್ತೀರಿ. ನಮ್ಮಲ್ಲಿ ಆಲೋಚನೆಯ ಸಾಮಾರಥ್ಯವಿಲ್ಲದಿದ್ದಾಗ ಯಾವುದೇ ವಿಷಯದ ಬಗ್ಗೆ ನಕ್ಕು, ಆಮೇಲೆ ಅದನ್ನು ಬದಿಗೆ ಸರಿಸಿಬಿಡುತ್ತೇವೆ. ನಿಮ್ಮ ಹೆಂಡತಿಯರಿಗೆ ನೀವು ಪ್ರಾಮುಖ್ಯ ನೀಡಿಲ್ಲವಾದ್ದರಿಂದಲೇ ಆಕೆ ನಿಮ್ಮ ಜವಾಬ್ದಾರಿಗಳನ್ನು ಹಂಚಿಕೊಳ್ಳುವುದಿಲ್ಲ. ನಿಮ್ಮ ಬದುಕಿನ ಎಲ್ಲ ಸಂಗತಿಗಳ ಅರ್ಧ ಭಾಗ ತನ್ನದೆಂದುಕೊಳ್ಳುವುದಿಲ್ಲ. ಹೆಂಡತಿಗೆ ಯಾವ ಪ್ರಾಮುಖ್ಯವೂ ಇಲ್ಲ. ಅವಳನ್ನು ಸುಮ್ಮನೆ ಇಟ್ಟುಕೊಂಡಿದ್ದು, ನಿಮ್ಮ ಲೈಂಗಿಕ ಅಗತ್ಯಕ್ಕೆ ಅನುಸಾರವಾಗಿ ಆಕೆಯನ್ನು ಬಳಸಿಕೊಳ್ಳಬಹುದು ಎಂದುಕೊಂಡಿದ್ದೀರಿ. ಆದ್ದರಿಂದಲೇ ಹಕ್ಕು ಮತ್ತು ಕರ್ತವ್ಯ ಎಂಬ ಶಬ್ದಗಳನ್ನು ರೂಪಿಸಿಕೊಂಡಿದ್ದೀರಿ. ಹೆಣ್ಣು ವಿರೋಧಿಸಿದಾಗ, ದಂಗೆಯೆದ್ದಾಗ, ಈ ಶಬ್ದಗಳನ್ನು ಅವಳೆದುರು ಬೀಸಿ ಒಗೆದು ಸುಮ್ಮನಿರಿಸಲು ಪ್ರಯತ್ನಿಸುತ್ತೀರಿ. ಹಕ್ಕು ಮತ್ತು ಕರ್ತವ್ಯಗಳ ಬಗ್ಗೆ ಮಾತನಾಡುವ ಸಮಾಜ ಸ್ಥಗಿತಗೊಂಡ, ಕೊಳೆತ ಸಮಾಜ. ನಿಮ್ಮ ಹೃದಯ, ನಿಮ್ಮ ಮನಸ್ಸನ್ನು ಪರಿಶೀಲಿಸಿಕೊಂಡರೆ ಅಲ್ಲಿ ಪ್ರೀತಿ ಇಲ್ಲ ಎಂದು ನಿಮಗೇ ತಿಳಿಯುತ್ತದೆ.
”ಅನುದಿನ ಚಿಂತನ” ಪುಸ್ತಕದಿಂದ.