ಜೆಸಿಬಿ ಆಪರೇಟರ್ ಅಖಿಲ್ ಕೆ. ಅವರಿಗೆ 'ಕೇರಳ ಸಾಹಿತ್ಯ ಅಕಾಡೆಮಿ ಪ್ರಶಸ್ತಿ'

ಜೆಸಿಬಿ ಆಪರೇಟರ್ ಅಖಿಲ್ ಕೆ. ಅವರಿಗೆ 'ಕೇರಳ ಸಾಹಿತ್ಯ ಅಕಾಡೆಮಿ ಪ್ರಶಸ್ತಿ'

ಕಡುಬಡತನದಲ್ಲಿ ಬೆಳೆದು, ಜೀವನೋಪಾಯಕ್ಕಾಗಿ ಶಿಕ್ಷಣ ತೊರೆದು ಜೆಸಿಬಿ ಆಪರೇಟರ್ ಆಗಿ ದುಡಿಯುತ್ತಿರುವ ಕೇರಳ ಮೂಲದ ಯುವಕ ಅಖಿಲ್ ಕೆ. ಅವರಿಗೆ ಕೇರಳ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ ದೊರೆತಿದೆ.  ಸಾಹಿತ್ಯವನ್ನು ಪ್ರೀತಿಸುವವರಿಗೆ ಬರವಣಿಗೆ ಒಂದು ವರದಾನ. ಬರಹಗಾರನಾದವನಿಗೆ ಯಾವುದೇ ವೃತ್ತಿಯ ತೊಡಕಿಲ್ಲ ಎಂಬುವುದನ್ನು ಕೇರಳ ಮೂಲದ ಜೆಸಿಬಿ ಆಪರೇಟರ್ ಕೆಲಸ ಮಾಡುತ್ತಿರುವ ಯುವಕ ಅಖಿಲ್ ಕೆ. ದಿನಚರಿ ನಿಜವಾಗಿಸಿದ್ದಾರೆ. ಅವರು ಕೇರಳ ಸಾಹಿತ್ಯ ಕ್ಷೇತ್ರದ ಉದಯೋನ್ಮುಖ ತಾರೆಯಾಗಿ ಛಾಪು ಮೂಡಿಸಿದ್ದಾರೆ.

ಬೆಳಿಗ್ಗಿನ ಹೊತ್ತು ಮನೆಮನೆಗೆ ದಿನಪತ್ರಿಕೆ ಹಾಕುವ ಇವರು ಬಿಡುವಿನ ಸಮಯದಲ್ಲಿ ಬರವಣಿಗೆಯಲ್ಲಿ ತಮ್ಮನ್ನು ತೊಡಗಿಸಿಕೊ‌ಳ್ಳುತ್ತಾರೆ. ಕುಟುಂಬ ಪೋಷಣೆಯ ಜವಾಬ್ದಾರಿಯನ್ನು ಹೊರುವ ಸಲುವಾಗಿ, ಶಿಕ್ಷಣವನ್ನು ಮೊಟಕುಗೊಳಿಸಿ ಜೆಸಿಬಿ ಆಪರೇಟರ್ ಆಗಿ ವೃತ್ತಿಯನ್ನು ಆಯ್ಕೆಮಾಡಿಕೊಂಡಿದ್ದ ಅಖಿಲ್ ಪ್ರವೃತ್ತಿಯಲ್ಲಿ ಕತೆಗಾರನಾಗಿ ತಮ್ಮನ್ನು ಗುರುತಿಸಿಕೊಂಡಿದ್ದಾರೆ. ಅಲ್ಲದೇ ಅವರ ಚೊಚ್ಚಲ ಕೃತಿ ‘ನೀಲಚಡಯನ್’ ಕತಾಸಂಕಲನಕ್ಕೆ ಕೇರಳ ಸಾಹಿತ್ಯ ಅಕಾಡೆಮಿಯು ಪ್ರಶಸ್ತಿ ನೀಡುವ ಮೂಲಕ ಯುವ ಪ್ರತಿಭೆಯನ್ನು ಪ್ರೋತ್ಸಾಹಿಸಿದೆ.

“ಪ್ರಶಸ್ತಿಗೆ ನನ್ನನ್ನು ಗುರುತಿಸಿ ಆಯ್ಕೆ ಮಾಡಿರುವುದು ಬಹಳ ಸಂತಸವಾಗಿದೆ. ನಾನು ಪ್ರಶಸ್ತಿಯನ್ನು ನಿರೀಕ್ಷಿಸಿರಲಿಲ್ಲ. ನನಗೆ ಶಿಕ್ಷಣವನ್ನು ಮುಂದುವರಿಸಬೇಕೆಂಬ ಆಸೆ ಇತ್ತು. ಆದರೆ ಬದುಕಿನ ಆರ್ಥಿಕ ಜಂಜಾಟದಲ್ಲಿ ಕನಸು ಕೈ ಹತ್ತಲಿಲ್ಲ ಎನ್ನುತ್ತಾರೆ ಕೇರಳ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಅಖಿಲ್ ಕೆ. 'ನೀಲಚಡಯನ್' ಪ್ರಶಸ್ತಿ ಕುರಿತು ಪಿಟಿಐ ಜೊತೆ ಮಾತನಾಡಿದ ಅವರು, ನನ್ನ ಕುಟುಂಬವನ್ನು ನೋಡಿಕೊಳ್ಳುವ ಜಬಾಬ್ದಾರಿ ನನ್ನೊಂದಿಗಿದೆ ಎಂದು ತಮ್ಮ ಸಂಕಷ್ಟವನ್ನು ವ್ಯಕ್ತಪಡಿಸಿದ್ದಾರೆ.

ದಿನ ನಿತ್ಯದ ಬದುಕಿನ ಅನುಭವಗಳನ್ನು ಆಧಾರವಾಗಿಸಿ, ಬಿಡುವಿನ ವೇಳೆಗೆ ನನಗೆ ಕಾಡಲಾರಂಭಿಸಿದ ಕತೆಗಳಿಗೆ ರೂಪ ನೀಡಿ ಹೆಣೆಯಲಾರಂಭಿಸಿದೆ. ಈ ಕತೆಗಳ ರೂಪಕವಾಗಿ ‘ನೀಲಚಡಯನ್’ ಹೊತ್ತಿಗೆ ಹೊರಬಂತು. ಇನ್ನು ಕೃತಿಯ ಶೀರ್ಷಿಕೆಯು ಕೇರಳದ ಇಡುಕ್ಕಿಯಲ್ಲಿ ಪತ್ತೆಯಾಗಿರುವ ಗಾಂಜಾ ತಳಿಯ ಹೆಸರಾಗಿದೆ ಎಂದು ತಿಳಿಸಿದರು.

ಪುಸ್ತಕ ಪ್ರಕಟಿಸಲು ಪ್ರೇರಣೆ ಫೇಸ್ ಬುಕ್ ನಲ್ಲಿ ಪ್ರಕಟವಾದಂತಹ ಜಾಹಿರಾತು. 20,000 ಪಾವತಿಸಿದರೆ ಕೃತಿಯನ್ನು ಪ್ರಕಟಿಸುತ್ತೇವೆ ಎನ್ನುವ ಸಂದೇಶವನ್ನು ಗಮನಿಸಿ, ನಾನು ಉಳಿತಾಯ ಮಾಡಿದ್ದ 10,000 ಹಾಗೂ ತಾಯಿ ನೀಡಿದ 10,000 ಪಾವತಿಸಿ ‘ನೀಲಚಡಯನ್’ ಕೃತಿಯನ್ನು ಪ್ರಕಟಿಸಿದ್ದೆ. ಆಗ ಅದು ಆನ್ ಲೈನ್ ಮೂಲಕ ಮಾತ್ರವೇ ಮಾರಾಟವಿತ್ತು ಎಂದು ತಿಳಿಸಿದರು. ಆರಂಭದಲ್ಲಿ ಪುಸ್ತಕಗಳು ಮಾರಾಟವಾಗಲಿಲ್ಲ. ಚಿತ್ರಕಥೆಗಾರ ಬಿಪಿನ್ ಚಂದ್ರನ್ ಅವರು ಪುಸ್ತಕದ ಕುರಿತು ಫೇಸ್ ಬುಕ್ ನಲ್ಲಿ ಬರೆದ ಬಳಿಕ ಜನರಿಂದ ಬೇಡಿಕೆ ಬಂತು. ಇದೀಗ ಈ ಪುಸ್ತಕದ ಏಂಟನೇ ಆವೃತ್ತಿ ಮುದ್ರಣದಲ್ಲಿದೆ ಎಂದು ತಿಳಿಸಿದರು.

ಒಟ್ಟಿನಲ್ಲಿ ಬಡತನ, ಜೀವನದ ಜಂಜಾಟಗಳು ಸೃಜನಶೀಲತೆಗೆ ಅಡ್ಡಿಯಲ್ಲ ಎಂಬುದಕ್ಕೆ ಕೇರಳದ ಅಖಿಲ್. ಕೆ ಸಾಕ್ಷಿಯಾಗಿದ್ದಾರೆ. ಅವರ ಸಾಹಿತ್ಯಿಕ ಬದುಕು ಮತ್ತಷ್ಟು ಎತ್ತರಕ್ಕೆ ಬೆಳೆಯಲಿ, ಹಲವು ಪ್ರಶಸ್ತಿಗಳು ಅವರಿಗೆ ಲಭಿಸಲಿ ಅನ್ನೋದೆ ನಮ್ಮ ಆಶಯ.

-ರಂಜಿತಾ ಸಿದ್ಧಕಟ್ಟೆ