ಜೆ.ಹೆಚ್.ಪಟೇಲ್ - ಒಂದು ಮಾತು, ಹಲವು ನೆನಪು

ಜೆ.ಹೆಚ್.ಪಟೇಲ್ - ಒಂದು ಮಾತು, ಹಲವು ನೆನಪು

"ಅಧರ್ಮವನ್ನು ಅಧರ್ಮದಿಂದಲೇ ಗೆಲ್ಲಿ, ನಿಶ್ಚಿತವಾಗಿ ಧರ್ಮ ಸ್ಥಾಪನೆಯಾಗುತ್ತದೆ" 

ಮೊನ್ನೆ ಹಳೆಯ ದಾಖಲೆಗಳನ್ನು ಕೆದರುತ್ತಾ, ಕೆದಕುತ್ತಾ ಕುಳಿತಿದ್ದಾಗ ಇದ್ದಕ್ಕಿದ್ದಂತೆ ಜೆ.ಹೆಚ್.ಪಟೇಲರ ನೆನಪು ಬಂತು. ಬಹಳ ಅದ್ಭುತ ನಾಯಕ. ಅವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ನಾವು ಗೆಳೆಯರು ಮೇಲಿಂದ ಮೇಲೆ ಅವರ ಮನೆಗೆ ಹೋಗುತ್ತಿದ್ದೆವು. ಪುರಸೊತ್ತಿದ್ದರೆ ಪಟೇಲರು ಕೂಡಾ ನಿರುಮ್ಮಳವಾಗಿ ನಮ್ಮೊಂದಿಗೆ ಮಾತಿಗೆ ಕೂರುತ್ತಿದ್ದರು. ಆಗವರು ಇದ್ದುದು ಹೈಗ್ರೌಂಡ್ಸ್ ನ ಕಾವೇರಿ ಬಂಗಲೆಯಲ್ಲಿ. ಆ ಬಂಗಲೆಯ ಒಳಹೊಕ್ಕು ಪಡಸಾಲೆಯನ್ನು ದಾಟಿದ ಕೂಡಲೇ ಎಡಗಡೆ ಅವರ ವಿಸಿಟರ್ಸ್ ಚೇಂಬರ್. ಹೆಚ್ಚು ಕಡಿಮೆ ಇಪ್ಪತ್ತು ಬೈ ಮೂವತ್ತು ಅಳತೆಯ ರೂಮು.

ಹೀಗೇ ಒಮ್ಮೆ ಆ ರೂಮಿನಲ್ಲಿ ಮಾತನಾಡುತ್ತಾ ಕುಳಿತಿದ್ದಾಗ ಪಟೇಲರು ಇದ್ದಕ್ಕಿದ್ದಂತೆ, ಹೇಳಿದರು: ನೋಡಿ, ಎಷ್ಟೇ ದೊಡ್ಡ ವ್ಯಕ್ತಿಯಾಗಿರಲಿ. ಒಂದು ವಿಷಯ ಹೇಳುತ್ತಾರೆ ಎಂದ ಕೂಡಲೇ ತಕ್ಷಣ ಎಲ್ಲವನ್ನೂ ಒಪ್ಪಿಕೊಂಡು ಬಿಡಬೇಡಿ. ಅವರು ಸರಿಯೇ ಹೇಳಿದ್ದರೂ ನೀವೊಮ್ಮೆ ಪರೀಕ್ಷಿಸಿ ನೋಡಿ. ನಾನು ಒಂದೊಂದು ಸಲ ಒಬ್ಬನೇ ಕುಳಿತಾಗ ಗಾಂಧಿಯವರ ಅಹಿಂಸೆಯ ಮಂತ್ರದ ಕುರಿತು ಯೋಚಿಸುತ್ತೇನೆ.

ಬಹುಶ: ಗಾಂಧಿಯವರ ಮನಸ್ಸಿನಲ್ಲೂ ಒಂದೊಂದು ಸಲ ಸುಭಾಷ್ ಚಂದ್ರ ಭೋಸರ ತರ, ಹಿಂಸೆಗೆ ಪ್ರತಿ ಹಿಂಸೆಯ ಮೂಲಕ ಸ್ವಾತಂತ್ರ್ಯ ಪಡೆಯುವ ಯೋಚನೆ ಬಂದಿರಬಹುದು. ಆದರೆ ಅದು ಕಾರ್ಯಗತವಾಗದ ಯೋಜನೆ ಅನ್ನಿಸಿ, ತಮ್ಮ ಯೋಚನೆಯಿಂದ ಹಿಂದೆ ಸರಿದು ಅಹಿಂಸೆಯ ಮಾರ್ಗಕ್ಕೆ ಅಂಟಿಕೊಂಡಿರಲೂಬಹುದು. ಹಾಗಂತ ಹೀಗೇ ಆಗಿದೆ ಎಂದು ನಾನು ಹೇಳಲಾರೆ. ಆದರೆ ಪ್ರತಿಯೊಂದನ್ನೂ ಪರೀಕ್ಷಿಸಿ ನೋಡುವುದು ನನ್ನ ಗುಣ. ಹೀಗಾಗಿ ಆ ಮಾತು ಹೇಳಿದೆ ಎಂದರು.

ಪಟೇಲರ ಮಾತು ಕೇಳಿ ಸುದ್ದಿಗೆ ಅಂತ ಬಂದಿದ್ದ ನಾವು ಗೆಳೆಯರು ಮೈ ಮರೆತು ಆಸಕ್ತಿಯಿಂದ ಕೇಳತೊಡಗಿದೆವು. ಚರ್ಚೆಯೆಂಬ ಮಥನವೇ ಹಾಗೆ. ಅಮೃತ ಹಾಗೂ ವಿಷ ಎರಡನ್ನೂ ಹುಟ್ಟು ಹಾಕುತ್ತದೆ. ಯಾವುದನ್ನು ದಕ್ಕಿಸಿಕೊಳ್ಳಬೇಕೋ? ಅದು ನಿಮಗೆ ಸಂಬಂಧಿಸಿದ್ದು. ಅವತ್ತು ಪಟೇಲರು ಈ ತರದ ಮಥನಕ್ಕೆ ಸಜ್ಜಾಗುತ್ತಿದ್ದಂತೆಯೇ ನನಗೆ, ಅಹಿಂಸೆಯ ಮೂಲಕ ಭಾರತಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಗಾಂಧಿಯ ಮನಸ್ಸಿನಲ್ಲೂ ಹಿಂಸೆಯ ಕಾಂಕ್ಷೆ ಇರಲು ಸಾಧ್ಯವೇ?ಅನ್ನಿಸತೊಡಗಿತು.

ಪಟೇಲರು ತಮ್ಮಲ್ಲೇ ಮಾತನಾಡಿಕೊಳ್ಳುವಂತೆ ಹೇಳುತ್ತಾ ಹೋದರು. ನಿಮಗೆ ಇದೊಂಥರಾ ಜೋಕು ಅನ್ನಿಸಬಹುದು. ಆದರೆ ಗಾಂಧಿಗೆ ದೇಶದ ಇತಿಹಾಸ, ಅದರಲ್ಲೂ ಕಳೆದ ಸಾವಿರ ವರ್ಷಗಳ ಇತಿಹಾಸ ಚೆನ್ನಾಗಿ ಗೊತ್ತಿತ್ತು. ನಾವು ಅಧರ್ಮವನ್ನು ಧರ್ಮದಿಂದ ಎದುರಿಸಿದವರು. ಹೀಗಾಗಿ ನಮ್ಮ ಮೇಲೆ ದಂಡೆತ್ತಿ ಬಂದ ದಾಳಿಕೋರರೆಲ್ಲ ಯಶಸ್ವಿಯಾಗಿ ನಮ್ಮನ್ನು ಆಳಿದರು.

ನಿಮಗೆ ಸಿಂಪಲ್ಲಾಗಿ ಒಂದು ಮ್ಯಾಥಮ್ಯಾಟಿಕ್ಸ್ ಹೇಳುತ್ತೇನೆ. ಅಧರ್ಮವನ್ನು ಮೈನಸ್ ಅಂತ ತಿಳಿದುಕೊಳ್ಳಿ. ಧರ್ಮವನ್ನು ಪ್ಲಸ್ ಅಂತ ತಿಳಿದುಕೊಳ್ಳಿ. ನೀವು ಪ್ಲಸ್ ಇಂಟು ಮೈನಸ್ ಮಾಡಿದರೆ ಫೈನಲಿ ಬರುವ ಫಲಿತಾಂಶ ಮೈನಸ್. ಆದರೆ ಅದೇ ಮೈನಸ್ ಇಂಟು ಮೈನಸ್ ಮಾಡಿ. ನಿಮಗೆ ಸಿಗುವ ಉತ್ತರ ಪ್ಲಸ್ ಅದರರ್ಥ, ಅಧರ್ಮವನ್ನು ಅಧರ್ಮದಿಂದ ಎದುರಿಸಿದರೆ ಧರ್ಮ ಸ್ಥಾಪನೆಯಾಗುತ್ತದೆ. ಅಂದ ಹಾಗೆ ನಾವು ಅಧರ್ಮವನ್ನು ಅಧರ್ಮದಿಂದ ಎದುರಿಸಿದ್ದು ಕೆಲವೇ ಸಲ.

ಉದಾಹರಣೆಗೆ ಭಗವದ್ಗೀತೆ ತೆಗೆದು ಕೊಳ್ಳಿ. ಇದರ ಬಗ್ಗೆ ನಮಗೆ ಏನೇ ಭಿನ್ನಾಭಿಪ್ರಾಯ ಇರಬಹುದು. ಆದರೆ ಅದನ್ನೆಲ್ಲ ಬದಿಗಿಟ್ಟು ಅದರಲ್ಲಿರುವ ಗುಣಾತ್ಮಕ ಅಂಶಗಳನ್ನು ಸ್ವೀಕರಿಸಿ. ಪಾಂಡವರಿಗೆ ಕನಿಷ್ಟ ಐದು ಗ್ರಾಮಗಳನ್ನು ಬಿಟ್ಟು ಕೊಡುವುದಿಲ್ಲ ಎಂದು ಕೌರವರು ಹೇಳಿದ ಕಾರಣಕ್ಕಾಗಿ ಕುರುಕ್ಷೇತ್ರದಲ್ಲಿ ಯುದ್ಧವಾಯಿತು ತಾನೇ? ಅದು ಅಧರ್ಮದ ವಿರುದ್ಧ ನಡೆದ ಧರ್ಮಯುದ್ಧ ಅನ್ನುವವರಿರಬಹುದು. ಹಾಗನ್ನುವುದನ್ನು ಒಪ್ಪುವುದಾದರೆ ತಮಗೆ ವಿದ್ಯೆ ಕಲಿಸಿಕೊಟ್ಟ ದ್ರೋಣರನ್ನು ಕೊಲ್ಲುವ ಪಾಂಡವರದು ಅಧರ್ಮವಲ್ಲವೇ? ಭೀಷ್ಮನನ್ನು ಕೊಂದದ್ದು ಅಧರ್ಮವಲ್ಲವೇ? ಅವರ ಸಾವು ಧರ್ಮ ಅಂತ ನೀವು ಹೇಳುತ್ತೀರಾ?

ಹಾಗೆ ಕೇಳಿದ ಪಟೇಲರು ಮೌನವಾಗಿ ನಮ್ಮ ಮುಖ ನೋಡಿದರು. ಅಲ್ಲ ಸಾರ್ ಅಂತ ನಾವು ಒಟ್ಟಿಗೇ ಹೇಳಿದೆವು. ಅದನ್ನು ಕೇಳಿದ್ದೇ ಪಟೇಲರು ಒಂದು ಸಲ ನಕ್ಕರು. ಅವರ ಮಾತು ಮುಂದುವರಿಯಿತು. ರಾಜ್ಯಕ್ಕಾಗಿ ನಾವು ನಮ್ಮವರನ್ನು ಕೊಲ್ಲುವುದು ಅಧರ್ಮ ಅಂತ ಅರ್ಜುನನಿಗೆ ಗೊತ್ತಿತ್ತು. ಧರ್ಮರಾಯನಿಗೂ ಗೊತ್ತಿತ್ತು. ಆದರೆ ಒಬ್ಬ ಕೃಷ್ಣ ಇದ್ದ ನೋಡಿ. ಆತ ಮಾತ್ರ,ಕೌರವರ ವಿರುದ್ಧ ನೀವು ಮಾಡುತ್ತಿರುವ ಯುದ್ಧ ಧರ್ಮ ಸಮ್ಮತ ಅಂತ ವಾದಿಸಿದ. ವಾದಿಸಿ ಯುದ್ಧ ಮಾಡಿಸುವುದರಲ್ಲಿ ಸಫಲನಾದ.

ಹೀಗೆ ಅಧರ್ಮದ ವಿರುದ್ಧ ಅಧರ್ಮದ ಮಾರ್ಗ ಹಿಡಿದರೆ ಧರ್ಮ ಸ್ಥಾಪನೆಯಾಗುತ್ತದೆ ಎಂದು ಕೃಷ್ಣ ನೇರವಾಗಿ ಹೇಳಿದ್ದರೆ ಪಾಂಡವರು ಒಪ್ಪುತ್ತಿರಲಿಲ್ಲ. ಹೀಗಾಗಿ ಅಧರ್ಮಕ್ಕೇ ಧರ್ಮದ ಲೇಪ ಹಚ್ಚಿ ಯುದ್ಧ ಮಾಡಲು ಒಪ್ಪಿಸಿದ. ಅವನಿಗೆ ಗೊತ್ತಿತ್ತು. ಮೈನಸ್ ಅನ್ನು ಪ್ಲಸ್ ನಿಂದ ಎದುರಿಸಲು ಹೋದರೆ ಫೈನಲ್ ರಿಸಲ್ಟು ಮೈನಸ್ಸೇ ಆಗುತ್ತದೆ ಅಂತ. ಹೀಗಾಗಿ ಮೈನಸ್ ಇಂಟು ಮೈನಸ್ ಸೂತ್ರವನ್ನು ಬಳಸಿ ಫೈನಲ್ ರಿಸಲ್ಟು ಪ್ಲಸ್ ಆಗುವಂತೆ ಮಾಡಿದ. ಇದರಲ್ಲಿ ಒಂದು ವಿಷಯ ನಮಗೆ ಅರ್ಥವಾಗಬೇಕು. ಧರ್ಮಕ್ಕೆ ಒಳ್ಳೆಯತನದ ವಿಷಯದಲ್ಲಿ ಎಲ್ಲೆ ಮೀರಿ ಹೋಗಲು ಹೇಗೆ ದಾರಿ ಇರುತ್ತದೋ? ಅದೇ ರೀತಿ ಅಧರ್ಮಕ್ಕೆ ಕೆಟ್ಟತನದ ಎಲ್ಲೆ ಮೀರಿ ಹೋಗಲೂ ಸಾಧ್ಯವಿರುತ್ತದೆ. ಇದು ಕೃಷ್ಣನಿಗೆ ಗೊತ್ತಿತ್ತು. ಇತಿಹಾಸದಲ್ಲಿ ನಾವು ಈ ಸೂತ್ರ ಬಳಸಿದ್ದು ಕಡಿಮೆ. ಎಲ್ಲೋ ಅಪರೂಪಕ್ಕೆ ಚಾಣಕ್ಯನಂತವರು ಬಂದಿರಬಹುದು. ಉಳಿದಂತೆ ಉದಾಹರಣೆಗೆ ಮಹಮ್ಮದ್ ಘೋರಿಯನ್ನೇ ತೆಗೆದುಕೊಳ್ಳಿ. ಅವನ ಮೇಲೆ ಯುದ್ಧ ಮಾಡಿ ಸೋಲಿಸಿದ ಮೇಲೆ ಆತನನ್ನು ನಮ್ಮವರು ಯಾಕೆ ಕ್ಷಮಿಸಿ ಜೀವ ಸಹಿತ ಬಿಟ್ಟರು? ಅರ್ಥಾತ್ ಮೈನಸ್ ವಿರುದ್ಧ ಪ್ಲಸ್ ನಿಲ್ಲುವಂತೆ ಮಾಡಿದರೆ ಧರ್ಮ ಸ್ಥಾಪನೆಯಾಗುತ್ತದೆ ಎಂಬುದು ಇವರ ರಾಜ ನೀತಿಯಾಗಿತ್ತು. ಆದರೆ ಹೀಗೆ ಕ್ಷಮೆ ಪಡೆದುಕೊಂಡು ಹೋದ ಘೋರಿಯೇ ಮುಂದೆ ಶಕ್ತಿ ಸಂಚಯನ ಮಾಡಿಕೊಂಡು ಬಂದು ನಮ್ಮವರನ್ನು ಹೊಡೆದು ಹಾಕಿದ. ಅಲ್ಲಿಗೆ ಪ್ಲಸ್ ಅನ್ನು ಮೈನಸ್ ನುಂಗಿ ಹಾಕಿತು. ಭಾರತದ ಇತಿಹಾಸವೇ ಬದಲಾಗಿ ಹೋಯಿತು.

ಭಾರತದ ಇತಿಹಾಸವನ್ನು ನೋಡುತ್ತಾ ಹೋದರೆ ನಿಮಗೆ ಶ್ರೀಕೃಷ್ಣನಂತೆ ಮೈನಸ್ ಇಂಟು ಮೈನಸ್ ಪ್ಲಸ್ ಆಗುತ್ತದೆ ಎಂಬುದನ್ನು ನಮ್ಮ ರಾಜರಿಗೆ, ಜನರಿಗೆ ವಿವರಿಸಿದವರು ಕಡಿಮೆ. ಹೀಗಾಗಿ ನಾವು ಸದಾ ಕಾಲ ಮೈನಸ್ ಇಂಟು ಪ್ಲಸ್ ಸೂತ್ರದ ಮೂಲಕ ಗೆಲುವು ಸಾಧಿಸಲು ಬಯಸುತ್ತೇವೆ. ಅದರ ಬದಲು ಮೈನಸ್ ಇಂಟು ಮೈನಸ್ ಸೂತ್ರವನ್ನು ಬಳಸಿದರೆ ಇಸಿಕ್ವಲ್ಟು ಪ್ಲಸ್ ಆಗುತ್ತದೆ ಎಂದು ಯೋಚಿಸುವುದೇ ಇಲ್ಲ. ಹೀಗಾಗಿ ಜಗತ್ತಿನಲ್ಲಿ ಅತ್ಯಂತ ಧರ್ಮ ಸಂಕಟವನ್ನು ಎದುರಿಸುವುದು ಭಾರತೀಯರೇ.

ಅಂದರೆ ಭಾರತೀಯರ ಈ ಮೆಂಟ್ಯಾಲಿಟಿ ಗಾಂಧಿಗೆ ಗೊತ್ತಿತ್ತು. ಯಾಕೆಂದರೆ ದಕ್ಷಿಣ ಆಫ್ರಿಕಾದಿಂದ ಭಾರತಕ್ಕೆ ಬಂದವರು, ಬ್ರಿಟಿಷರ ವಿರುದ್ಧ ಹೋರಾಡುವ ಮೊದಲು ಇಡೀ ಭಾರತವನ್ನು ಸುತ್ತಿದರು. ಅದರ ಅಂತ:ಸತ್ವವನ್ನು ಅರಿತರು, ಹೀಗಾಗಿಯೇ ಮೈನಸ್ ಇಂಟು ಮೈನಸ್ ಇಸಿಕ್ವಲ್ಟು ಪ್ಲಸ್ ಆಗುತ್ತದೆ ಎಂಬುದರ ಬದಲು ಪ್ಲಸ್ ನಿಂದಲೇ ಮೈನಸ್ ಅನ್ನು ಎದುರಿಸಿದರು. ಅಂದರೆ ಬ್ರಿಟಿಷರನ್ನು ಧರ್ಮದ ಮೂಲಕವೇ ಎದುರಿಸಿದರು. ಅದವರಿಗೆ ಅನಿವಾರ್ಯವಾಗಿತ್ತು.

ಇದೇ ಕಾರಣಕ್ಕಾಗಿ ನಾವು ಕೋಟ್ಯಾಂತರ ಜನರಿದ್ದರೂ, ಕೆಲವೇ ಲಕ್ಷದಷ್ಟಿದ್ದ ಬ್ರಿಟಿಷರ ವಿರುದ್ಧ ಹೋರಾಡಿ ಸ್ವಾತಂತ್ರ್ಯ ಪಡೆಯಲು ನೂರಾರು ವರ್ಷಗಳ ಕಾಲ ಕಾಯಬೇಕಾಯಿತು. ಅಪಾರ ಪ್ರಮಾಣದ ಜೀವಹಾನಿಗೆ ದಾರಿ ಮಾಡಿಕೊಡಬೇಕಾಯಿತು. ಅಂದ ಹಾಗೆ ನಾನು ಇಲ್ಲಿ ಮನುಷ್ಯ ನಿರ್ಮಿತ ಧರ್ಮಗಳ ಕುರಿತು ಮಾತನಾಡುತ್ತಿಲ್ಲ. ಮಾನವೀಯ ಧರ್ಮದ ಕುರಿತು ಹೇಳುತ್ತಿದ್ದೇನೆ.

ಹೀಗೆ ಹೇಳುವುದನ್ನೆಲ್ಲ ಹೇಳಿ ಪಟೇಲರು ನಮ್ಮ ಮುಖ ನೋಡಿದರು.ಅದುವರೆಗೆ ನಾವು ಯೋಚಿಸಿಯೇ ಇರದಿದ್ದ ವಿಷಯ ಅದು. ಗಣಿತದ ಕೆಲ ಸೂತ್ರಗಳ ಮೂಲಕ ಪಟೇಲರು ಅವತ್ತು, ಗಾಂಧಿ ಅಹಿಂಸೆಗೆ ಅಂಟಿಕೊಳ್ಳಬೇಕಾದ ಅನಿವಾರ್ಯತೆಯ ಕುರಿತು ಮಾತನಾಡಿದ ರೀತಿ ಬೆಕ್ಕಸ ಬೆರಗಾಗುವಂತೆ ಮಾಡಿತ್ತು.

ಅಂದ ಹಾಗೆ ಅವತ್ತು ಅವರು ಹೇಳಿದ್ದನ್ನೆಲ್ಲ ಸಾರಾ ಸಗಟಾಗಿ ಒಪ್ಪಬೇಕೆಂದಲ್ಲ, ಆದರೆ ಯಾವುದೇ ವಿಷಯವಿರಲಿ, ಅದನ್ನು ಬೇರೆ ಬೇರೆ ನೆಲೆಗಳಲ್ಲಿ ಯೋಚಿಸಬೇಕು ಎಂಬುದನ್ನು ಪಟೇಲರು ನಮಗೆ ಬಹಳ ಮಾರ್ಮಿಕವಾಗಿ ವಿವರಿಸಿದ್ದರು.

ಹೀಗಾಗಿ ನಾವು ಮಾತೇ ಆಡದೆ ಮೂಕರಾಗಿದ್ದೆವು. ನಮ್ಮ ಮುಖ ನೋಡಿದ ಪಟೇಲರು, ಬನ್ನಿ,ತಿಂಡಿ ತಿನ್ನೋಣ .ಮಾತಿಗೆ ಅಂತ ಬಂದರೆ ಪಟೇಲ ಏನೋ ಹೇಳಿದ ಅಂತ ಬರೆಯಬೇಡಿ. ಆದರೆ ಯಾವುದೇ ವಿಷಯ ಬಂದಾಗ ಅದರ ಎಲ್ಲಾ ಮಗ್ಗಲುಗಳ ಕುರಿತು ಯೋಚಿಸಿ. ಹಾಗೆ ಯೋಚನೆ ಮಾಡದೆ ಒಪ್ಪಿಕೊಳ್ಳುವುದು ತಪ್ಪು .ಅದಕ್ಕಾಗಿ ಇದನ್ನೆಲ್ಲ ನಿಮಗೆ ಹೇಳಿದೆ ಎಂದರು.

ಇಲ್ಲ ಸಾರ್, ಮನುಷ್ಯನ ಯೋಚನಾ ವಿಧಾನ ಯಾವ್ಯಾವ ರೀತಿ ಇರಬೇಕು? ಅನ್ನುವುದನ್ನು ಬಹಳ ಚೆನ್ನಾಗಿ ಹೇಳಿದಿರಿ ಎಂದು ನಾವು ಗೆಳೆಯರು ಹೇಳಿದೆವು. ಅಷ್ಟಾದ ನಂತರ ತಿಂಡಿ ತಿನ್ನುತ್ತಾ,ಪಟೇಲರು ಪ್ರಸಕ್ತ ರಾಜಕೀಯದ ಕುರಿತು ತುಂಬ ಹೊತ್ತು ಆಫ್ ದಿ ರೆಕಾರ್ಡ್ ಅಂತ ಮಾತನಾಡಿದರು.

ಅಂದ ಹಾಗೆ ಸರಿಯೋ,ತಪ್ಪೋ, ಯಾವುದೇ ವಿಷಯ ಬಂದಾಗ ಚರ್ಚೆಗಳು ನಡೆಯುತ್ತಿರಬೇಕು. ಅಂತಹ ಚರ್ಚೆ ಕಡಿಮೆಯಾಗಿರುವ ಕಾರಣಕ್ಕೋ ಏನೋ? ಈಗ ಆ ಕಾಲದ ನಾಯಕರಂತೆ ವಿಚಾರವನ್ನು ಮಂಡಿಸುವವರು ರಾಜಕೀಯದಲ್ಲಿ ಕಡಿಮೆಯಾಗಿದ್ದಾರೆ. ಹೀಗಾಗಿಯೇ ಇವತ್ತಿನ ರಾಜಕಾರಣವನ್ನು ನೋಡಿದರೆ ಪಟೇಲರಂತಹ ನಾಯಕರು ಪದೇ ಪದೇ ನೆನಪಾಗುತ್ತಾರೆ.

-ಆರ್.ಟಿ.ವಿಠ್ಠಲಮೂರ್ತಿ

ಪತ್ರಕರ್ತರು, ತಾರಾಪ್ರಭ ಮೀಡಿಯಾ ಹೌಸ್

ಚಿತ್ರ ಕೃಪೆ: ಇಂಟರ್ನೆಟ್ ತಾಣ