ಜೆ ಆರ್ ಡಿ ಟಾಟಾ: ಮ್ಯಾನ್ ಆಫ್ ಲೆಟರ್ಸ್

ಜೆ ಆರ್ ಡಿ ಟಾಟಾ: ಮ್ಯಾನ್ ಆಫ್ ಲೆಟರ್ಸ್

ಟಾಟಾ ಸಮೂಹ ಸಂಸ್ಥೆಗಳ ಬಗ್ಗೆ ಕೇಳದವರೇ ಇರಲಿಕ್ಕಿಲ್ಲ. ಟಾಟಾ ಕೇವಲ ಒಂದು ಕುಟುಂಬದ ಅಡ್ಡ ಹೆಸರು (ಸರ್ ನೇಮ್) ಮಾತ್ರವಲ್ಲ, ಈಗ ಅದು ಇಡೀ ಸ್ವಾವಲಂಬಿ ಭಾರತದ ಶಕ್ತಿಯಾಗಿದೆ. ಇದು ಇಷ್ಟೊಂದು ಉನ್ನತಿಗೇರಲು ಕಾರಣ ಜೆ ಆರ್ ಡಿ ಟಾಟಾ ಇವರು. ಇವರು ತಮ್ಮ ಕಾಲಾವಧಿಯಲ್ಲಿ ಸಾಧಿಸಿದ ಸಾಧನೆಗಳು ಅಪರಿಮಿತ. ಟಾಟಾ ಸಂಸ್ಥೆಯು ಖ್ಯಾತ ಸಂಸ್ಥೆಯಾಗಿ ಬೆಳೆದ ಬಳಿಕವೂ ಅವರು ತಮ್ಮ ಸರಳತೆ ಮತ್ತು ವಿಶ್ವಾಸಾರ್ಹತೆಗೆ ಅರ್ಹರಾಗಿ ನಡೆದುಕೊಳ್ಳುತ್ತಿದ್ದರು. ಈ ಕಾರಣದಿಂದಲೇ ಅವರ ನಂತರದ ದಿನಗಳಲ್ಲೂ ಟಾಟಾ ಸಮೂಹ ಸಂಸ್ಥೆ ಒಂದು ವಿಶ್ವಾಸಾರ್ಹ ಸಂಸ್ಥೆಯಾಗಿ ಬೆಳೆದಿದೆ. 

ಇನ್ಫೋಸಿಸ್ ಫೌಂಡೇಶನ್ ನ ಸುಧಾ ಮೂರ್ತಿಯವರ ಬಾಳಿನ ಈ ಘಟನೆಯನ್ನು ತಾವೆಲ್ಲಾ ತಿಳಿದೇ ಇರುತ್ತೀರಿ. ಇಂಜಿನಿಯರಿಂಗ್ ಮುಗಿಸಿದ ಸುಧಾ ಮೂರ್ತಿಯವರು ಟಾಟಾ ಸಂಸ್ಥೆಯ ಒಂದು ಜಾಹೀರಾತು ನೋಡುತ್ತಾರೆ, ಅದರಲ್ಲಿ ಮಹಿಳೆಯರು ಅರ್ಜಿ ಸಲ್ಲಿಸುವ ಅಗತ್ಯವಿಲ್ಲ ಎಂದು ಬರೆದಿರುವುದನ್ನು ನೋಡಿ ಕೋಪಗೊಂಡು ಜೆ ಆರ್ ಡಿ ಟಾಟಾ ಅವರಿಗೆ ಒಂದು ಅಂಚೆ ಕಾರ್ಡಿನಲ್ಲಿ ಪತ್ರ ಬರೆಯುತ್ತಾರೆ. ಆ ಪತ್ರ ಜೆ ಆರ್ ಡಿ ಅವರಿಗೆ ತಲುಪಿ, ಅವರು ಸುಧಾ ಮೂರ್ತಿಯನ್ನು ಮುಂಬಯಿಗೆ ಕರೆಯಿಸಿ ಅವರ ಮಾತುಗಳಿಂದ ಪ್ರಭಾವಿತರಾಗಿ ಅವರಿಗೆ ತಮ್ಮ ಸಂಸ್ಥೆಯಲ್ಲಿ ಕೆಲಸ ನೀಡುತ್ತಾರೆ. ಬರೇ ಅಂಚೆ ಕಾರ್ಡಿನಲ್ಲಿ ಬರೆದ ಪತ್ರವೆಂದು ಜೆ ಆರ್ ಡಿ ಅವರು ಅದನ್ನು ಕಡೆಗಣಿಸಿ ಬದಿಗೆ ಸರಿಸದೇ ಅದಕ್ಕೆ ಮಾನ್ಯತೆ ಒದಗಿಸಿಕೊಟ್ಟರು. ಇದೇ ಸಂಗತಿಯನ್ನು ಅವರು ತಮ್ಮ ಜೀವನ ಪೂರ್ತಿ ಪಾಲಿಸಿಕೊಂಡು ಬಂದರು. ಜೆ ಆರ್ ಡಿ ಟಾಟಾ ಅವರಿಗೆ ಬರೆದ ಯಾವುದೇ ಪತ್ರಗಳಿಗೆ ಉತ್ತರ ಖಂಡಿತವಾಗಿಯೂ ಬರುತ್ತಿತ್ತು. ಈ ಕಾರಣದಿಂದಲೇ ಅವರು ‘ಮ್ಯಾನ್ ಆಫ್ ಲೆಟರ್ಸ್' ಎಂದು ಕರೆಯಲ್ಪಡುತ್ತಾರೆ. 

ಈ ಬಗ್ಗೆ ಒಂದು ಪುಟ್ಟ ಸಂಗತಿ ‘ವಿಶ್ವವಾಣಿ’ ಪತ್ರಿಕೆಯಲ್ಲಿ ಈ ಹಿಂದೆ ಪ್ರಕಟವಾಗಿತ್ತು. ಹೀಗೇ ನಿನ್ನೆ ಹಳೆಯ ಪತ್ರಿಕೆಗಳನ್ನು ತಡಕಾಡುವಾಗ ಆ ಮಾಹಿತಿ ಸಿಕ್ಕಿತು. ಅದನ್ನು ನಿಮ್ಮ ಜೊತೆ ಯಥಾವತ್ತಾಗಿ ‘ವಿಶ್ವವಾಣಿ’ ಪತ್ರಿಕೆಯ ಕೃಪೆಯಿಂದ ಹಂಚಿಕೊಳ್ಳುತ್ತಿರುವೆ.

‘ಗೌರವಾನ್ವಿತ ರಾಷ್ಟ್ರಪತಿಗಳಾದ ಶ್ರೀ ಬಾಬು ರಾಜೇಂದ್ರ ಪ್ರಸಾದ ಅವರೇ, ನಿಮ್ಮನ್ನು ಭೇಟಿ ಮಾಡಲು ರಾಷ್ಟ್ರಪತಿ ಭವನದೊಳಗೆ ಬರುವಾಗ ಗೋಡೆಗೆ ತಗುಲಿ ಹಾಕಿದ್ದ ದೊಡ್ಡದಾದ ಫೋಟೋ ಕೆಳಗೆ President swearing at ceremony ಎಂಬ ಅಡಿಶೀರ್ಷಿಕೆ ಬರೆಯಲಾಗಿದೆ. ಅದು President at Swearing - In Ceremony ಎಂದಾಗಬೇಕಿತ್ತು. ಅಲ್ಲವೇ? ಇದು ನಿಮ್ಮ ಗಮನಕ್ಕೆ ತಮ್ಮ ವಿಶ್ವಾಸಿ...' ಹೀಗೆಂದು ಪತ್ರ ಬರೆದವರು ಜಹಾಂಗೀರ ರತನಜೀ ದಾದಾಬಾಯಿ ಟಾಟಾ. ಇವರು ‘ಜೆಆರ್ಡಿ’ ಎಂದೇ ಪ್ರಸಿದ್ಧ. ಪತ್ರ ಬರೆಯುವ ಕಲೆ, ಹವ್ಯಾಸ, ಸಂಪ್ರದಾಯವೇ ಕಣ್ಮರೆಯಾಗುತ್ತಿರುವ ಈ ಕಾಲದಲ್ಲಿ ಜೆಆರ್ಡಿ ಬಗ್ಗೆ ಬಹಳ ಅಭಿಮಾನ ಮೂಡಿತು. ಈ ಮಹಾನ್ ವ್ಯಕ್ತಿ ತಮ್ಮ ಜೀವಿತ ಕಾಲದಲ್ಲಿ ಸುಮಾರು ನಲವತ್ತು ಸಾವಿರ ಪತ್ರಗಳನ್ನು ಬರೆದಿದ್ದರಂತೆ. ಅವೆಲ್ಲವುಗಳನ್ನು ಸಂಗ್ರಹಿಸಿ ಇಡಲಾಗಿದೆ. ರಾಷ್ಟ್ರಪತಿ, ಪ್ರಧಾನಿ, ಮುಖ್ಯಮಂತ್ರಿ, ಮಂತ್ರಿಗಳಿಂದ ಹಿಡಿದು ಸಾಮಾನ್ಯ ವ್ಯಕ್ತಿಗಳಿಗೂ ಅವರು ಪತ್ರ ಬರೆಯುತ್ತಿದ್ದರು. ತಮಗೆ ಯಾರೇ ಪತ್ರ ಬರೆದರೂ ಅವರು ಉತ್ತರ ಬರೆಯದೇ ಇರುತ್ತಿರಲಿಲ್ಲ. ಆಗ ತಾನೇ ಪದವಿ ಮುಗಿಸಿದಂತ ಯುವಕನೊಬ್ಬ ‘ಜೆಆರ್ಡಿ ಅವರೇ, ನನಗೆ ಜೀವನದಲ್ಲಿ ಪ್ರೇರಣೆ ಬರುವಂಥ ಸಂಗತಿಗಳನ್ನು ಬರೆಯಿರಿ' ಎಂದು ಬರೆದಿದ್ದ. ಜೆಆರ್ಡಿ ವಿದೇಶ ಪ್ರವಾಸದಲ್ಲಿದ್ದುದರಿಂದ ಈ ಪತ್ರವನ್ನು ಅವರು ಎರಡು ತಿಂಗಳ ನಂತರ ಓದಿದರು. ಆ ಯುವಕನಿಗೆ ಜೆ ಆರ್ಡಿ ಎರಡು ಪತ್ರಗಳನ್ನು ಬರೆದರು. ಮೊದಲನೆಯದು ತಡವಾದುದಕೆ ಕ್ಷಮಾಪಣೆ ಹಾಗೂ ಎರಡನೆಯದು, ಪ್ರೇರಣಾದಾಯಕ ವಿಚಾರ. ಜೆಆರ್ಡಿ ಅವರಿಗೆ ಮಹಿಳೆಯೊಬ್ಬಳು ಬರೆದಿದ್ದಳು - ‘ಸಿಗ್ನಲ್ ಬಳಿ ನಿಮ್ಮನ್ನು ಕಾರಿನಲ್ಲಿ ನೋಡಿದೆ. ನೀವು ಪದೇ ಪದೆ ಕಣ್ಣು ಮುಚ್ಚುತ್ತಿದ್ದಿರಿ. ನಿಮ್ಮ ನಡೆ ನನಗೆ ವಿಚಿತ್ರವಾಗಿ ಕಂಡಿತು.’ ಅದಕ್ಕೆ ಜೆಆರ್ಡಿ ಬರೆದರು -’ನಾನು ಕಂಪನಿಯ ಮರ್ಸಿಡಿಸ್ ಬೆಂಜ್ ಕಾರಿನಲ್ಲಿ ಓಡಾಡುತ್ತೇನೆ. ಎಲ್ಲರಿಗೂ ಅದು ಸಾಧ್ಯವಾಗೊಲ್ಲ. ರಸ್ತೆಗಳಲ್ಲಿ ಓಡಾಡುವ ಪಾದಚಾರಿಗಳನ್ನು ಕಂಡಾಗ ನಾನು ಕಾರಿನಲ್ಲಿ ಓಡಾಡುವುದು ಎಷ್ಟು ಸರಿ ಎಂಬ ಅಪರಾಧಿ ಭಾವ ಕಾಡುತ್ತದೆ. ಭಗವಂತ, ಪಾದಚಾರಿಗಳಿಗೂ ವಾಹನ ಕರುಣಿಸು ಎಂದು ಆಗಾಗ ಕಣ್ಣು ಮುಚ್ಚಿ ಪ್ರಾರ್ಥಿಸುವೆ. ಇದು ವಿಚಿತ್ರವಾಗಿ ಕಂಡರೆ ನಾನೇನು ಮಾಡಲಿ?’ ಟಾಟಾ ಮೋಟಾರ್ಸ್ ಕಂಪೆನಿಯ ಅಧಿಕಾರಿ ಸುಮಂತ್ ಮುಳಗಾವಂಕರ ಅವರಿಗೆ ಜೆಆರ್ಡಿ ಬರೆದ ಪತ್ರ ಓದಿದರೆ ಅವರ ವ್ಯಕ್ತಿತ್ವದ ಮತ್ತೊಂದು ಮುಖ ತಿಳಿದೀತು - “ಪ್ರಿಯ ಸುಮಂತ್, ನಿನ್ನೆಯ ಮೀಟಿಂಗಿನಲ್ಲಿ ನಿಮ್ಮ ಮೇಲೆ ನಾನು ಏಕಾಏಕಿ ಕೂಗಾಡಿದಕ್ಕೆ ಕ್ಷಮೆ ಯಾಚಿಸುವೆ. ನೀವು ನನ್ನನ್ನು ವಿನಾಕಾರಣ ಟೀಕಿಸುತ್ತಿದ್ದೀರೆಂದು ನಾನು ಭಾವಿಸಿದೆ. ಆನಂತರ ಯೋಚಿಸಿದಾಗ, ನಿಮ್ಮ ಮನದ ಇಂಗಿತ, ಮಾತಿನ ತಾತ್ಪರ್ಯ ಅರ್ಥವಾಯಿತು. ಇನ್ನೊಮ್ಮೆ ಕ್ಷಮೆ ಯಾಚಿಸುವೆ. ನಿಮ್ಮ ಮೇಲಿನ ಪ್ರೀತಿ, ಅಭಿಮಾನ ಎಂದೆಂದಿಗೂ ಬದಲಾಗುವುದಿಲ್ಲ.” ಅವರು ಪ್ರತಿದಿನ ಆಫೀಸಿಗೆ ಬರುತ್ತಿರುವಂತೆ, ಆ ದಿನ ಬಂದ ಟಪಾಲು (ಪತ್ರ) ಗಳನ್ನು ಅವರ ಮುಂದೆ ಇಡಬೇಕಾಗುತ್ತಿತ್ತು. ತಕ್ಷಣ ಉತ್ತರ ಬರೆಯದಿದ್ದರೆ ಅವರಿಗೆ ಸಮಾಧಾನ ಆಗುತ್ತಿರಲಿಲ್ಲ. ಸದಾ ಬಿಜಿಯಿದ್ದರೂ ಪತ್ರ ಬರೆಯಲು ಸಮಯ ಮಾಡಿಕೊಳ್ಳುತ್ತಿದ್ದರು. ‘ನಮಗೆ ಪತ್ರ ಬರೆದವರಿಗೆ ನಾವು ಮಾಡುವ ಅವಮಾನವೆಂದರೆ, ಉತ್ತರ ಬರೆಯದಿರುವುದು' ಎಂದು ಜೆಆರ್ಡಿ ಬರೆಯುತ್ತಾರೆ. 

ಅದಕ್ಕೇ ಹೇಳುವುದು ಯಾರೂ ಸುಮ್ಮನೆ ದೊಡ್ದವರಾಗುವುದಿಲ್ಲ. ಅಲ್ಲವೇ?

ಚಿತ್ರ ಕೃಪೆ: ಅಂತರ್ಜಾಲ ತಾಣ