ಜೇಡಗಳು ಹಾಗೂ ಅವುಗಳ ಬಲೆಗಳ ನಿಗೂಢ ಲೋಕ

ಜೇಡಗಳು ಹಾಗೂ ಅವುಗಳ ಬಲೆಗಳ ನಿಗೂಢ ಲೋಕ

ಸಾವಿಲ್ಲದ ಮನೆಯಿಂದ ಸಾಸಿವೆ ತರಲು ಹೇಗೆ ಸಾಧ್ಯವಿಲ್ಲವೋ ಹಾಗೆಯೇ ಇಂದಿನ ಕಾಲದಲ್ಲಿ ಜೇಡರ ಬಲೆಯಿಲ್ಲದ ಮನೆಯಿಲ್ಲ. ಎಷ್ಟು ಸಲ ಬಲೆ ತೆಗೆದರೂ ಕೆಲವೇ ದಿನಗಳಲ್ಲಿ ಜೇಡವು ತನ್ನ ಬಲೆಯನ್ನು ಮತ್ತೆ ಕಟ್ಟಿಕೊಳ್ಳುತ್ತದೆ. ಜೇಡನ ಬಗ್ಗೆ ನಾವು ತಿಳಿದುಕೊಳ್ಳಬೇಕಾದ ಹಲವಾರು ಮಾಹಿತಿಗಳಿವೆ. ಬನ್ನಿ ಒಮ್ಮೆ ಜೇಡರ ಲೋಕಕ್ಕೆ ಹೋಗಿ ಬರುವ. 

ಬಹುತೇಕರು ತಿಳಿದುಕೊಂಡಿರುವಂತೆ ಜೇಡ ಕೀಟಗಳ ಪ್ರಭೇಧಕ್ಕೆ ಸೇರುವುದಿಲ್ಲ. ಕೀಟಗಳಂತೆಯೇ ಜೇಡಗಳಿಗೂ ಹಲವಾರು ಕಾಲುಗಳಿರುವುದರಿಂದ ಎಲ್ಲರೂ ಇದನ್ನು ಕೀಟವೆಂದೇ ತಿಳಿದಿದ್ದಾರೆ. ಇದು ತಪ್ಪು ಕಲ್ಪನೆ. ಕೀಟಗಳಿಗೆ ಆರು ಕಾಲು ಇದ್ದರೆ, ಜೇಡಗಳಿಗೆ ಎಂಟು ಕಾಲುಗಳಿವೆ. ಕೀಟಗಳ ದೇಹವು ಮೂರು ಭಾಗಗಳಿಂದ ನಿರ್ಮಿತವಾಗಿದ್ದರೆ, ಜೇಡಗಳ ದೇಹವು ಎರಡೇ ಭಾಗಗಳಲ್ಲಿ ನಿರ್ಮಿತವಾಗಿದೆ. ಜೇಡವು ಕೀಟವನ್ನು ಭಕ್ಷಿಸಲೆಂದೇ ಬಲೆಯನ್ನು ಕಟ್ಟುತ್ತದೆ. ಜೇಡಗಳು ‘ಸಂಧಿಪದಿ' (Arthropoda) ಪ್ರಭೇಧಕ್ಕೆ ಸೇರಿದೆ. ಜೇಡಗಳು ಸಂಧಿಪದಿಗಳಲ್ಲಿ ‘ಅರ್ಯಾಕ್ನಿಡಾ’ (Arachnida) ವರ್ಗಕ್ಕೆ ಸೇರುವ ಜೀವಿಗಳು. ಪ್ರಪಂಚದಲ್ಲಿ ಸುಮಾರು ಮೂವತ್ತು ಸಾವಿರಕ್ಕೂ ಅಧಿಕ ಜೇಡನ ಪ್ರಭೇಧಗಳಿವೆ. ಸೂಜಿಯ ಮೊನೆಯಷ್ಟು ಸಣ್ಣ ಆಕಾರದ ಜೇಡದಿಂದ ಹಿಡಿದು ಒಂದು ಅಡಿಗೂ ಹೆಚ್ಚಿನ ಗಾತ್ರವಿರುವ ಜೇಡಗಳಿವೆ. ಸಣ್ಣ ಸಣ್ಣ ಹಕ್ಕಿಗಳನ್ನು ಹಿಡಿದು ತಿನ್ನುವ ‘ಟ್ಯಾರಂಟುಲಾ’ (Tarantula) ಎಂಬ ಜೇಡಗಳೂ ಇವೆ. 

ಜೇಡಗಳಲ್ಲಿ ಹಲವಾರು ವಿಧಗಳಿವೆ ಎಂಬ ವಿಷಯ ನಿಮಗೆಲ್ಲಾ ತಿಳಿದೇ ಇದೆ. ಕೆಲವೊಂದು ವಿಶೇಷ ಗುಣ ಲಕ್ಷಣಗಳ ಜೇಡಗಳ ಬಗ್ಗೆ ನೋಡುವುದಾದರೆ,

ಕಪ್ಪು ವಿಧವೆ ಜೇಡ (Black widow spider): ಇದು ಹೆಚ್ಚಾಗಿ ಪ್ರಚಾರದಲ್ಲಿರುವ ವಿಧ. ಇದರ ಜೀವನ ಕ್ರಮವೇ ಬಹಳ ಆಸಕ್ತಿದಾಯಕವಾದುದರಿಂದ ಹಾಗೂ ಇದು ವಿಷಕಾರಿಯಾಗಿರುವುದರಿಂದ ಎಲ್ಲರನ್ನೂ ಆಕರ್ಷಿಸುತ್ತದೆ. ಇದು ತನ್ನ ಬೇಟೆಯನ್ನು ಕೊಲ್ಲಲು ಪ್ರಬಲವಾದ ವಿಷವನ್ನು ಬಳಸುತ್ತದೆ. ಈ ಜೇಡಗಳ ಕಡಿತದಿಂದ ಮನುಷ್ಯನೂ ಅಸ್ವಸ್ಥನಾಗುವ ಸಾಧ್ಯತೆ ಇದೆ. ಹೃದಯ ಸಂಬಂಧಿ ಕಾಯಿಲೆ ಇರುವ ಮನುಷ್ಯರ ಪ್ರಾಣಾಪಾಯಕ್ಕೂ ಕಾರಣವಾಗಬಹುದು. ಇದಕ್ಕೆ ವಿಧವೆ ಜೇಡ ಎಂದು ಯಾಕೆ ಕರೆಯುತ್ತಾರೆ ಎಂದರೆ ಈ ಜೇಡ ಸಂತಾನೋತ್ಪತ್ತಿಯ ಸಂದರ್ಭದಲ್ಲಿ ಗಂಡು ಜೇಡದೊಡನೆ ಮಿಲನವಾದ ನಂತರ ಆ ಗಂಡು ಜೇಡವನ್ನು ಕೊಂದು ತಿಂದು ಬಿಡುತ್ತದೆ. ಈ ಪ್ರಭೇಧದ ಜೇಡಗಳಲ್ಲಿ ಹೆಣ್ಣು ಜೇಡ ಗಂಡು ಜೇಡಕ್ಕಿಂತಲೂ ಗಾತ್ರದಲ್ಲಿ ಹತ್ತಾರು ಪಟ್ಟು ದೊಡ್ಡದಾಗಿರುತ್ತದೆ. ವಿಜ್ಞಾನಿಗಳ ಸಂಶೋಧನೆಗಳ ಪ್ರಕಾರ ಜೇಡಗಳ ದೃಷ್ಟಿ ತೀರಾ ಮಂದ. ಆ ಕಾರಣದಿಂದ ಅದಕ್ಕೆ ಚಲಿಸುವ ವಸ್ತುಗಳನ್ನು ಮಾತ್ರ ಗುರುತಿಸಲು ಸಾಧ್ಯ. ಆ ಕಾರಣದಿಂದ ಇದು ತನ್ನದೇ ಜಾತಿಯಾದರೂ ಗಂಡು ಜೇಡವನ್ನು ಅರಿವಿಲ್ಲದೇ ಕೊಂದು ತಿಂದು ಬಿಡುತ್ತದೆಯಂತೆ. ತಾನು ಕಟ್ಟುವ ಬಲೆಯಲ್ಲಿ ಯಾವುದಾದರೂ ಕೀಟ ಸಿಕ್ಕಿ ಬಿದ್ದಾಗ ಅದು ಅಲ್ಲಾಡುತ್ತದೆ. ಈ ಚಲನೆಯಿಂದ ಜೇಡಕ್ಕೆ ಬೇಟೆಯಾಡಲು ಅನುಕೂಲವಾಗುತ್ತದೆ. 

ಗಂಡು ಜೇಡವು ಹೆಣ್ಣು ಜೇಡದಿಂದ ಬಲಿಯಾಗದಂತೆ ಹಲವಾರು ಉಪಾಯಗಳನ್ನು ಮಾಡುತ್ತದೆ. ಹೆಣ್ಣು ಜೇಡವನ್ನು ಇದು ನಿಧಾನವಾಗಿ ಸಮೀಪಿಸುತ್ತದೆ. ಹೆಣ್ಣು ಜೇಡಕ್ಕೆ ಇದರ ಚಲನೆ ಗೊತ್ತಾದರೆ ಅಲ್ಲಿಯೇ ಅಲ್ಲಾಡದಂತೆ ನಿಂತು ಬಿಡುತ್ತದೆ. ಹೆಣ್ಣು ಜೇಡದ ಗಮನವು ಮತ್ತೆ ಬೇರೆಡೆಗೆ ಹರಿದಾಗ ಚಲಿಸಿ ಹೆಣ್ಣೂ ಜೇಡವನ್ನು ತನ್ನ ಬಲೆಯ ನೂಲಿನಲ್ಲಿ ಕಟ್ಟಿ ಬಿಡುತ್ತದೆ. ಅದರಿಂದ ಬಿಡಿಸಿಕೊಳ್ಳಲು ಹೆಣ್ಣು ಜೇಡ ಪ್ರಯತ್ನಿಸುವ ಸಂದರ್ಭದಲ್ಲಿ ಮಿಲನ ಕಾರ್ಯ ಮುಗಿಸಿ ಓಡಿ ಹೋಗುತ್ತದೆ. ಕೆಲವು ಸಲ ಬೇರೆ ಕೀಟಗಳನ್ನು ಬಲೆಯಲ್ಲಿ ಸಿಲುಕಿಸಿ ಹೆಣ್ಣು ಜೇಡಗಳನ್ನು ಆ ಕಡೆಗೆ ಆಕರ್ಷಿಸಿ ತನ್ನ ಕೆಲಸ ಮಾಡಿ ಮುಗಿಸುತ್ತದೆ. ಹೀಗೆ ಹತ್ತು ಹಲವಾರು ಉಪಾಯಗಳನ್ನು ಮಾಡಿದರೂ ಗಂಡು ಜೇಡ ಬಹಳಷ್ಟು ಸಲ ಹೆಣ್ಣು ಜೇಡಕ್ಕೆ ಬಲಿಯಾಗಿ ಬಿಡುತ್ತದೆ. 

ಏಡಿ ಜೇಡ (Crab spider): ಜೇಡಗಳ ಮತ್ತೊಂದು ವಿಧ ಛದ್ಮವೇಷ ಜೇಡಗಳು. ಇವು ತಮ್ಮ ಹೊಟ್ಟೆ ಪಾಡಿಗಾಗಿ ವಿಧ ವಿಧದ ತಂತ್ರಗಳನ್ನು ಬಳಸುತ್ತವೆ. ಏಡಿ ಜೇಡಗಳು ಏಡಿಯಂತೆಯೇ ಕೊಂಡಿಗಳನ್ನು ಹೊಂದಿರುವಂತೆ ಕಾಣಿಸುವುದರಿಂದ ಅದಕ್ಕೆ ಆ ಹೆಸರು ಬಂದಿದೆ. ಅವುಗಳ ದೇಹದ ವರ್ಣವೂ ಹೂವಿನಂತೆಯೇ ಆಕರ್ಷಕವಾಗಿ ಇರುವುದರಿಂದ ಅವುಗಳು ಹೂವಿನ ನಡುವೆ ಅಡಗಿ ಕುಳಿತುಕೊಳ್ಳಲು ಸುಲಭವಾಗುತ್ತದೆ. ಇದರಿಂದ ಏಡಿ ಜೇಡಗಳು ತಮ್ಮ ಬೇಟೆಯನ್ನು ಅನಾಯಾಸವಾಗಿ ಹಿಡಿಯುತ್ತವೆ ಹಾಗೂ ತಮ್ಮನ್ನು ಶತ್ರುಗಳಿಂದ ರಕ್ಷಿಸಿಕೊಳ್ಳಲೂ ಸಫಲವಾಗುತ್ತವೆ. 

ಇರುವೆ ಜೇಡ (Ant mimic spider): ಈ ವಿಧದ ಜೇಡಗಳು ಇರುವೆಯಂತೆ ನಟಿಸುತ್ತವೆ. ಇರುವೆಗಳು ತಮ್ಮ ಆಂಟೆನಾಗಳನ್ನು ಹೇಗೆ ಎತ್ತಿಕೊಂಡು ಹೋಗುತ್ತವೆಯೋ ಅದೇ ರೀತಿ ಈ ಜೇಡಗಳು ತಮ್ಮ ಮುಂಗಾಲುಗಳನ್ನು ಆಂಟೆನಾದ ರೀತಿಯಲ್ಲೇ ಪ್ರದರ್ಶಿಸುತ್ತವೆ. ಇದರಿಂದ ಇವುಗಳು ಸುಲಭವಾಗಿ ವೇಷ ಮರೆಸಿ ಇರುವೆಗಳ ಗುಂಪಿನಲ್ಲಿ ಸೇರಿಕೊಳ್ಳುತ್ತವೆ ಹಾಗೂ ತಮಗೆ ಬೇಕಾದ ಆಹಾರವನ್ನು ಹಿಡಿದು ತಿನ್ನುತ್ತವೆ. ಇರುವೆಗಳಿಗೆ ಈ ಜೇಡಗಳು ತಮ್ಮ ಗುಂಪಿನಲ್ಲಿ ಸೇರಿಕೊಂಡದ್ದು ಗೊತ್ತೇ ಆಗುವುದಿಲ್ಲವಂತೆ.

ತೋಳ ಜೇಡ ಮತ್ತು ಟ್ಯಾರಂಟುಲಾ ಜೇಡಗಳು: ಬಹುತೇಕ ಜೇಡಗಳು ಬಲೆ ಕಟ್ಟಿ ತಮ್ಮ ಆಹಾರವನ್ನು ಅರಸಿದರೆ ತೋಳ ಜೇಡ ಮತ್ತು ಟ್ಯಾರಂಟುಲಾ ಜಾತಿಯ ಜೇಡಗಳು ಬಲೆ ಕಟ್ಟುವುದಿಲ್ಲ. ಅವುಗಳು ಅವಿತುಕೊಂಡು ತಮ್ಮ ಆಹಾರವನ್ನು ಬೇಟೆಯಾಡುತ್ತವೆ. ಟ್ಯಾರಂಟುಲಾ ಜೇಡಗಳು ದೊಡ್ಡ ಗಾತ್ರದಾಗಿದ್ದು, ಸಣ್ಣ ಇಲಿ, ಕಪ್ಪೆ, ಸಣ್ಣ ಹಕ್ಕಿಗಳನ್ನೂ ಬೇಟೆಯಾಡುತ್ತವೆ. ಇವುಗಳು ಬಲೆಯನ್ನು ಹೆಣೆಯದಿದ್ದರೂ ಇವುಗಳು ಬಲೆ ಕಟ್ಟುವ ನೂಲನ್ನು ಉತ್ಪಾದಿಸುತ್ತವೆ. ತಮ್ಮ ಬೇಟೆಗಳನ್ನು ಹಿಡಿಯಲು ಈ ನೂಲನ್ನು ಬಳಸುತ್ತವೆ.

ನಿಮಗೆಲ್ಲಾ ಕುತೂಹಲ ಇರುವಂತಹ ವಿಷಯವೆಂದರೆ ಜೇಡಗಳು ಯಾಕೆ ತಮ್ಮ ಬಲೆಯಲ್ಲಿ ಸಿಲುಕಿಕೊಳ್ಳುವುದಿಲ್ಲವೆಂದು. ಅದಕ್ಕೆ ಒಂದು ಕಾರಣವಿದೆ. ಜೇಡಗಳು ಕಟ್ಟುವ ಬಲೆಯಲ್ಲಿ ಎರಡು ರೀತಿಯ ದಾರಗಳಿರುತ್ತವೆ. ಒಂದು ಅಂಟು ಹೊಂದಿದ್ದು ಇನ್ನೊಂದು ಅಂಟನ್ನು ಹೊಂದಿರುವುದಿಲ್ಲ. ಅವು ಸಾಮಾನ್ಯ ದಾರಗಳಾಗಿರುತ್ತವೆ. ಈ ದಾರಗಳ ಪರಿಚಯ ಜೇಡಗಳಿಗೆ ಇರುತ್ತವೆ. ಆದುದರಿಂದ ಅವುಗಳು ಈ ದಾರಗಳ ಮುಖಾಂತರವೇ ತಮ್ಮ ಬಲೆಯಲ್ಲಿ ಸುತ್ತಾಡುತ್ತವೆ. ಜೇಡಗಳು ನೇಯುವ ಬಲೆಯ ದಾರಗಳು ಅದೇ ಗಾತ್ರದ ಉಕ್ಕಿನ ದಾರದಷ್ಟೇ ಬಲಶಾಲಿಯಾಗಿರುತ್ತವೆಯಂತೆ. ಕೆಲವು ಹಕ್ಕಿಗಳು ಈ ಬಲೆಯನ್ನು ತೆಗೆದುಕೊಂಡು ಹೋಗಿ ತಮ್ಮ ಗೂಡುಗಳನ್ನು ಕಟ್ಟಲು ಬಳಸುವುದುಂಟು. ಮಂಜಿನ ಸಮಯದಲ್ಲಿ ಜೇಡರ ಬಲೆಯಲ್ಲಿ ನೀರ ಹನಿಗಳು ಮನಮೋಹಕ ಚಿತ್ತಾರವನ್ನು ಮೂಡಿಸುವುದನ್ನು ನೀವೆಲ್ಲಾ ನೋಡಿರಬಹುದಲ್ಲವೇ?

ಜೇಡಗಳಿಗೂ ಹಲವಾರು ಶತ್ರುಗಳಿವೆ. ಕೆಲವು ಕಣಜಗಳು ಹಾಗೂ ಹಕ್ಕಿಗಳು ಜೇಡವನ್ನು ಭಕ್ಷಿಸುತ್ತವೆ. ನೆಲದಲ್ಲಿ ವಾಸಿಸುವ ಜೇಡಗಳಂತೆ ನೀರಿನಲ್ಲೂ ಬದುಕುವ ಜಲವಾಸಿ ಜೇಡಗಳಿವೆ. ಗಾಳಿಯ ಗುಳ್ಳೆಗಳನ್ನು ತಮ್ಮ ಅಂಗದಲ್ಲಿ ತುಂಬಿಸಿಕೊಂಡು ನೀರಿನಲ್ಲಿ ಬದುಕುತ್ತವೆ. ಈ ಗುಳ್ಳೆಗಳಲ್ಲಿರುವ ಆಮ್ಲಜನಕ ಮುಗಿದಾಗ ಮತ್ತೆ ತುಂಬಿಸಿಕೊಳ್ಳುತ್ತವೆ. 

ಜೇಡಗಳನ್ನು ತಿನ್ನುವ ಮನುಷ್ಯರೂ ಇದ್ದಾರೆ. ಚೀನಾ ದೇಶದ ಜನರ ಬಗ್ಗೆ ನಿಮಗೆ ತಿಳಿದೇ ಇದೆ. ಅವರು ತಿನ್ನದ ಜೀವಿಗಳು ಇರಲಿಕ್ಕಿಲ್ಲ. ಅವರು ಹಾಗೂ ರೆಡ್ ಇಂಡಿಯನ್ಸ್ ಅವರಿಗೆಲ್ಲಾ ಜೇಡ ಭಕ್ಷ್ಯಗಳೆಂದರೆ ಪಂಚಪ್ರಾಣ. ಗಾತ್ರದಲ್ಲಿ ದೊಡ್ಡದಾಗಿರುವ ಟ್ಯಾರಂಟುಲಾ ಜೇಡಗಳು ಇವರಿಗೆ ಬಹಳ ಇಷ್ಟ. ಚೀನಾ ದೇಶದ ಹೋಟೇಲುಗಳಲ್ಲಿ ಇವುಗಳ ವಿವಿಧ ಖಾದ್ಯಗಳು ದೊರೆಯುತ್ತವೆ. 

ಜೇಡ ಮತ್ತು ಅದರ ಬಲೆ ನಮಗೆ ಕಿರಿ ಕಿರಿ ಅನಿಸಿದರೂ ಅವುಗಳು ಪ್ರಕೃತಿಯ ಸಮತೋಲನ ಕಾಪಾಡುವಲ್ಲಿ ಬಹಳ ಸಹಕಾರ ನೀಡುತ್ತವೆ. ನಮಗೆ ಹಾನಿ ಮಾಡುವ ಹಲವಾರು ಕೀಟಗಳು ಇದರ ಬಲೆಯಲ್ಲಿ ಬಿದ್ದು ಪ್ರಾಣ ಕಳೆದುಕೊಳ್ಳುತ್ತವೆ. ಕೃಷಿಕರ ಬೆಳೆಗಳಿಗೆ ಹಾನಿ ಮಾಡುವ ಬಹಳಷ್ಟು ಕೀಟಗಳನ್ನು ಜೇಡಗಳು ನಿಯಂತ್ರಿಸುತ್ತವೆ. ಪೃಕೃತಿಯ ಆಹಾರ ಸರಪಳಿಯ ಪ್ರಮುಖ ಕೊಂಡಿಯಂತೆ ಕಾರ್ಯ ನಿರ್ವಹಿಸುವ ಇವುಗಳ ಜೀವನ ಶೈಲಿ ಹಾಗೂ ಬಲೆಗಳ ಮೋಹಕ ಲೋಕ ಅಚ್ಚರಿಯೇ ಸರಿ.

ಚಿತ್ರಗಳ ವಿವರ: ೧. ಕಪ್ಪು ವಿಧವೆ ಜೇಡ

೨. ಏಡಿ ಜೇಡ

೩. ಇರುವೆ ಜೇಡ

೪. ಟ್ಯಾರಂಟುಲಾ ಜೇಡ

ಚಿತ್ರ ಕೃಪೆ: ವಿವಿಧ ಅಂತರ್ಜಾಲ ತಾಣಗಳಿಂದ