ಕಣ್ಣಿನಲ್ಲಿಯೆ ಬೀಳುಕೊಟ್ಟು
ಮನಸಿನಲ್ಲಿಯೇ ಮುತ್ತುಕೊಟ್ಟು
ತವರು ಮನೆಯೊಳಗವಳ ಬಿಟ್ಟು
ಮನಸ್ಸಿಲ್ಲದ ಮನಸಿನಿಂದೆ
ಒಬ್ಬನೆ ಹಿಂತಿರುಗಿ ಬಂದೆ.
ಮರಭೂಮಿಯ ಗಾಳಿಯಂತೆ
ಸುಯ್ದಲೆದಲೆದೂ
ಬಾಯಾರಿತು ವಿರಹ ಚಿಂತೆ
ದಾರಿಯುದ್ದಕೂ.
ಹೆಂಡತಿಯನ್ನು ತವರಿನಲ್ಲಿ ಬಿಟ್ಟು ಹೊರಟಾಗಲೇ ವಿರಹ ಕವಿಯನ್ನು ಕಾಡಲು ಆರಂಭಿಸಿದೆ. ದಾರಿಯುದ್ದಕ್ಕೂ, ಉದಯರವಿಯನ್ನು ತಲಪುವವರೆಗೂ ಕವಿ ತನ್ನ ಪಾಡು ಹೇಗಿತ್ತು ಮುಂದಿನ ಭಾಗದಲ್ಲಿ ಕಂಡರಿಸಿದ್ದಾರೆ.
ನೆನಹಿನುರಿಯ ಬಯಲಿನಲ್ಲಿ
ಸಾಗಿತಿರುಳು ರೈಲಿನಲ್ಲಿ,
ನಿದ್ದೆಯಿಲ್ಲ ಬರಿಯ ಕನಸು;
ಎದೆಯೊಳೇನೊ ಕಿಚ್ಚು, ಕಿನಿಸು.
ಯಾರ ಮೇಲೊ? ಏಕೋ ಮುನಿಸು!
ಏನೊ ಇಲ್ಲ, ಏನೊ ಬೇಕು,
ಎಂಬ ಬಯಕೆ, ಕುದಿವು, ರೋಕು!
ಇಂತು ಸಾಗಿತು ಶನಿ ಇರುಳು;
ಅರಿಲ ಬೆಳಕು ಬಾಡಿತು;
ಚಿತೆಯಾಯಿತು ಕವಿಯ ಕರುಳು;
ಹಗಲೊ ಹೆಣವೊ ಮೂಡಿತು!
ರಾತ್ರಿ ರೈಲಿನಲ್ಲಿ ಮೈಸೂರಿಗೆ ಹೊರಟ ಕವಿಗೆ ರಾತ್ರಿಯೆಲ್ಲಾ ನಿದ್ದೆಯಿಲ್ಲ; ಬರಿಯ ಕನಸು ಮಾತ್ರ. ಕಿಚ್ಚು, ಕಿನಿಸು, ಕೋಪ. ಆದರೆ ಯಾರ ಮೇಲೆ? ತನಗೆ ಏನು ಬೇಕು? ಏನು ಬೇಡ? ಎಂಬುದನ್ನೇ ಅರಿಯಲಾಗದ ಅಸಹಾಯಕ ಸ್ಥಿತಿ! ಅಂತು ಇಂತೂ ನಕ್ಷತ್ರದ ಬೆಳಕು ಬಾಡಿ, ರಾತ್ರಿಯೆಂಬ ಶನಿ ತೊಲಗಿತು. ’ಚಿತೆಯಾಯಿತು ಕರುಳು’ ಎನ್ನುವಲ್ಲಿ ವಿರಹದ ತೀವ್ರತೆ ಮನತಟ್ಟುತ್ತದೆ. ಅಷ್ಟೊತ್ತಿಗೆ ಬೆಳಗಾಗುತ್ತದೆ. ಅದು ಹೇಗೆ ಎನ್ನುತ್ತೀರಿ? ಹೆಣ ಮೂಡಿದಂತೆ ಸೂರ‍್ಯೋದಯವಾಗುತ್ತದೆ. ಸೂರ್ಯನನ್ನು ’ಶಿವಮುಖದ ಕಣ್ಣು’ ಎಂದು, ಸೂರ್ಯೋದಯವನ್ನು ’ದೇವರ ದಯೆ ಕಾಣೊ’ ಎಂದಿದ್ದ ಕವಿಗೆ, ವಿರಹದ ಉರಿಯಲ್ಲಿ ಸೂರ್ಯ ಹೆಣೆದಂತೆ ಭಾಸವಾಗಿದ್ದಾನೆ. ಹೆಣ ಮೂಡಿದೆ, ಹಗಲಿನಂತೆ. ಆಗ ಕವಿ ಪ್ರೇತದಂತೆ ಉದಯರವಿಗೆ ಬರುತ್ತಾರೆ!
ಪ್ರೇತದಂತೆ ನಡೆದೆ ಕೊನೆಗೆ,
’ಉದಯರವಿ’ಗೆ ನಮ್ಮ ಮನೆಗೆ.
ಮನೆಯೆ? ಅಯ್ಯೋ ಬರಿಯ ಸುಳ್ಳು:
ಗೋಡೆ ಸುತ್ತಿದೊಂದು ಟೊಳ್ಳು!
ಕಿಟಕಿ, ಬಾಗಿಲು, ಕಲ್ಲು, ಮಣ್ಣು;
ಬುರುಡೆಯಲುಬಿಗೆ ತೂತುಗಣ್ಣು!
ಪ್ರೇಮ ಕುಣಪವಾಗಿ ನಿಂತೆ
ಚಿತೆಯಾಗಲ್ ವಿರಹ ಚಿಂತೆ!
ಇನ್ನು ಮನೆಯೊಳಗೆ ಕವಿ ಕಾಲಕಳೆಯುವುದೆಂತು? ಮನೆಯೊಡತಿಯಿಲ್ಲದೆ ಸರ್ಪಶೂನ್ಯವಾಗಿದೆ, ಉದಯರವಿ! ಅಂದು ವನವಾಸದಲ್ಲಿ ಸೀತೆಯನ್ನು ಕಳೆದುಕೊಂಡ ರಾಮಚಂದ್ರನ ಮನಸ್ಥಿತಿ ಏನೆಂದು ಇಂದು ಕವಿಗೆ ಅರ್ಥವಾಯಿತಂತೆ!
ರಾಮಚಂದ್ರ, ಇಂತೆ ಕುದಿದೆ;
ಸೀತೆ ಕಳೆಯಲತ್ತು ಕರೆದೆ;
ತಿಳಿಯಿತಿಂದು ನಿನ್ನೆದೆ!
ವಿರಹದುರಿಯಲ್ಲಿ ಮನೆಯೊಳಗೆ ಏಕಾಂಗಿಯಾಗಿದ್ದ ಕವಿಗೆ ಮನೆಯ ಇಂಚಿಂಚೂ ತಮ್ಮ ಸತಿಯ ನೆನಪನ್ನೆ ತರುವ, ಸತಿಯೇ ಸರ್ವಸ್ವವಾಗಿ ಕಾಣುವ ಬಗೆ ಹೇಗಿದೆ ನೋಡಿ.
ಹೇಮಲತೆ, ಪ್ರೇಮಲಕ್ಷ್ಮಿ,
ನನ್ನ ಪಂಚಪ್ರಾಣಲಕ್ಷ್ಮಿ,
ಗಾಳಿ ನೀನೆ; ಬೆಳಕು ನೀನೆ;
ಉಲ್ಲಾಸದ ಉಸಿರು ನೀನೆ;
ನನಗೆ ಮನೆಗೆ ಎಲ್ಲ ನೀನೆ!
ನೀನೆ ಕವಿಗೆ ಹೃದಯ, ಭಾವ,
ಮೇಣಾತ್ಮಕೆ ರಸದ ಜೀವ!
ಗೃಹಿಣಿ, ನೀನೆ ಗೃಹದ ದೇವಿ;
ನೀನು ದೂರ ಹೋದರೆ
ಮಸಣದೊಂದು ಹಾಳುಬಾವಿ
ಗೃಹವಿದು! ’ಮನೆ’ ಎಂಬರೆ?
ಹೆಂಡತಿಯನ್ನು ಗೃಹಲಕ್ಷ್ಮಿ ಎನ್ನುತ್ತಾರೆ. ಕವಿಗೆ ಈ ಭಾವ ಹೊಸತಲ್ಲ. ಆದರೆ ’ನೀನೆ ಕವಿಗೆ ಹೃದಯ ಭಾವ, ಮೇಣಾತ್ಮಕೆ ರಸದ ಜೀವ!’ ಎನ್ನುವ ಸಾಲು ದಂಗುಬಡಿಸುತ್ತದೆ. ’ಗುರುವಿನ ಕೃಪೆ, ಆಶೀರ್ವಚನವೇ ಚೆಲುವಾದ ರೂಪವನ್ನು ಎತ್ತಿದಂತಿರುವ' ತಮ್ಮ 'ಪ್ರಿಯ ಸತಿಗೆ’ ಎಂಬ ಕವನದಲ್ಲಿ,
ದೇವಿ, ಪ್ರತಿಭೆಗೆ ನೀನೆ ಭಾವವಿದ್ಯುಚ್ಛಕ್ತಿ;
ಕಲೆಗೆ ವಿದ್ಯಾಶಕ್ತಿ; ಪ್ರಾಣಕೆ ಪ್ರೇಮಶಕ್ತಿ!
ಎಂದು ಸತಿಯನ್ನು ಕಂಡಿದ್ದಾರೆ. ಮುಂದೆ ಶ್ರೀಮತಿ ಹೇಮಾವತಿಯವರು ನಿಧನರಾದ ಮೇಲೆ ಕವಿ ಕುವೆಂಪು ತಮ್ಮ ಬರವಣಿಗೆಯನ್ನು ಮುಂದುವರೆಸಲಾಗುವುದೇ ಇಲ್ಲ ಎಂಬುದನ್ನು ನೆನಪಿಸಿಕೊಂಡರೆ, ಈ ಮಾತುಗಳಲ್ಲಿರುವ ದರ್ಶನಭಾವ ಸ್ವಲ್ಪಮಟ್ಟಿಗೆ ಸಹೃದಯನಿಗೂ ದಕ್ಕೀತು.
ಕೊನೆಗೆ, ಅಂದು ರಾಮನು ಸೀತೆಯ ಸ್ಮರಣೆಯೊಂದಿಗೆ ರೋಧಿಸಿದಂತೆ ಇಲ್ಲಿ ಕವಿ ತಮ್ಮ ಹೆಂಡತಿಯನ್ನು ನೆನೆಯುತ್ತಾ ಬೇಗ ಬಾ ಬೇಗ ಬಾ ಎಂದು ಕರೆಯುತ್ತಾರೆ. ಹಾಗೆ ಬರಬೇಕು ಎಂಬುದು ಕೇವಲ ವಿರಹತಾಪವನ್ನು ಹೋಗಲಾಡಿಸಲಲ್ಲ, ವಿಯೋಗ ಎಂಬ ಶಾಪಕ್ಕೆ ವರವಾಗಿ, ಆಶೀರ್ವಾದವಾಗಿ ಬಾ ಎಂದು ಮೊರೆಯಿಡುವ ಸಾಲುಗಳಿಂದ ಕವಿತೆ ಮುಕ್ತಾಯವಾಗುತ್ತದೆ.
ತಪ್ಪಲು ಗೃಹಲಕ್ಷ್ಮಿಯ ಜೊತೆ
ಒಪ್ಪಿದ ಮನೆಯೆ ವಿರಹ ಚಿತೆ!
ಹೇಮಾಂಗಿನಿ, ಪ್ರೇಮಸತಿ,
ಕಾತರನತಿ ನಿನ್ನ ಪತಿ!
ಮರುಭೂಮಿಗೆ ಅಮೃತಧಾರೆ,
ಕಗ್ಗತ್ತಲೆಗೆಸೆವ ತಾರೆ,
ನನ್ನ ಹೃದಯ ತಾಪವಾರೆ
’ಉದಯರವಿ’ಗೆ ಬಾಗ ಬಾರೆ!
ಏದುತ್ತಿದೆ ಪ್ರಾಣಪಕ್ಷಿ
ವಿರಹಾತಪ ತಾಪಕೆ!
ಆಶೀರ್ವಾವಾಗಿ ಬಾ
ವಿಯೋಗದೀ ಶಾಪಕೆ!
’ಶೂನ್ಯ ಶೋಧನೆ’ ಎಂಬ ಕವಿತೆಯೂ ಇದೇ ಸಂದರ್ಭದ ವಿರಹಗೀತೆಯಾಗಿದೆ.
ನೀನು ತವರಿಗೆ ಹೋದೆ;
ನಾನೊಬ್ಬನಾದೆ:
ಹೆಬ್ಬುಲಿಯ ಬಾಯಂತೆ ಘೋರವಾಯ್ತು;
ತಬ್ಬಲಿಯ ಕೈಯಂತೆ
ಶೂನ್ಯವಾಯ್ತು!
ಎನ್ನುತ್ತಲೇ, ಸತಿಯನ್ನು ಬಿಟ್ಟಿರಲಾರದ ಮನಸ್ಸಿನ ಚಡಪಡಿಕೆಯನ್ನು ಬಿಡಿಸಿಟ್ಟಿದ್ದಾರೆ. ಕೊನೆಯಲ್ಲಿ,
ಹಗಲು ಇರುಳೂ ನಿನ್ನ
ನೆನೆನೆನೆದು ನನ್ನ
ಪ್ರೇಮಶಿಲಾತ್ಮ ಶಿಶು
ರೋದಿಸುತಿದೆ;
ಕೈಚಾಚಿ ಶೂನ್ಯವನೆ
ಶೋಧಿಸುತಿದೆ!
ಎಂದು ತಮ್ಮ ಚಡಪಡಿಕೆಯ ರೋದನದ ಫಲಿತಾಂಶವನ್ನು ತೆರೆದಿಡುತ್ತಾರೆ. ಇದರ ಮುಂದಿನದು ತೇಜಸ್ವಿಯ ಜನನ ಸುದ್ದಿಯನ್ನು ಕೇಳಿದಾಗ ಕವಿಗಾದ ಭಾವಗಳನ್ನು ಕಟ್ಟಿಕೊಡುವ ’ಕುಮಾರ ಸಂಭವ’ ಕವಿತೆ.