ಜೇನಿನ ಬದುಕು ಮತ್ತು ಬದಲಾವಣೆ (ಭಾಗ 1)

ಜೇನಿನ ಬದುಕು ಮತ್ತು ಬದಲಾವಣೆ (ಭಾಗ 1)

ಜೇನು ಹುಳುಗಳ ಪಾಲಿಗೆ ಚೈತ್ರ ಮಾಸ ಸುವರ್ಣಕಾಲ ಎಂದು ಹೇಳಬಹುದು. ಪ್ರಕೃತಿಯಲ್ಲಿರುವ ಬಹುತೇಕ ಸಸ್ಯ ಸಂಕುಲವು ಹೂ ಬಿಡುವ ಕಾಲ. ವನಸುಮಗಳರಳಿ ನಿಸರ್ಗದ ಸಂತಾನ ಚಕ್ರ ಆರಂಭವೇ ಈ ಹೊಸ ಚಿಗುರು ಮೊಗ್ಗು ಹೂವುಗಳಿಂದ. ಹೀಗೆ ಕೋಟ್ಯಾಂತರ ಗಿಡ ಮರಗಳು ಹೂ ಬಿಟ್ಟಾಗ ಸಸ್ಯಗಳಲ್ಲಿ ಸಂತಾನೋತ್ಪತ್ತಿಯ ಬಹುಮುಖ್ಯವಾದ ಭಾಗವಾದ 'ಪರಾಗಸ್ಪರ್ಶ' ಎಂಬ ಕೆಲಸವನ್ನು ಮಾಡುವುದು ಮಾತ್ರ ಈ ಜೇನುಹುಳುಗಳು. ಗಾಳಿ ಮತ್ತು ಇತರ ಕೀಟಗಳು ಪರಾಗಸ್ಪರ್ಶ ಕಾರ್ಯವನ್ನು ಮಾಡುವವಾದರೂ ಅದರ ಶೇಕಡಾವಾರು ಪ್ರಮಾಣ ಕಡಿಮೆ. ಪರಾಗಸ್ಪರ್ಶ ಕೆಲಸವನ್ನು ಗರಿಷ್ಠ ಪ್ರಮಾಣದಲ್ಲಿ ಮಾಡುವುವೆಂದರೇ ಅದು ಪ್ರಕೃತಿಯಲ್ಲಿರುವ ಈ ವಿಸ್ಮಯ ಕೀಟ ನಾನಾ ನಮೂನೆಯ ಜೇನುಹುಳುಗಳು ಮಾತ್ರ. 

ಕೋಲು ಜೇನು, ಕಿರುಜೇನುಗಳಲ್ಲಿ ಸಾಮಾನ್ಯವಾಗಿ ಡಿಸೆಂಬರ್ ಜನವರಿ ತಿಂಗಳಿನಿಂದ ಜೇನುಹುಳುಗಳ ಸಂತಾನೋತ್ಪತ್ತಿ ಕಾರ್ಯ ಆರಂಭವಾಗುತ್ತದೆ. ಆದರೆ ಚೈತ್ರ ಮಾಸದಲ್ಲಿ ಯಥೇಚ್ಛವಾದ ಹೂಗಳಿಂದ ಜೇನು ಮತ್ತು ಮಕರಂದವನ್ನು ಸಂಗ್ರಹಿಸುತ್ತವೆ. ಇವುಗಳ ಸಂತಾನಕ್ಕೂ ಇದೇ ಕಾಲವೇ ಈ ಜೇನುಗಳಿಗೆ ಬೆಸ್ಟ್ ಸೀಜನ್ ಕೂಡ. ಆಷಾಢ ಶ್ರಾವಣ ಮಾಸಗಳಲ್ಲಿ ನಿಸರ್ಗದಲ್ಲಿ ಹೂವು ಕಡಿಮೆಯಾಗಿ ಜೇನುಗಳಲ್ಲಿ ಸಂತಾನೋತ್ಪತ್ತಿ ಕಡಿಮೆ ಇರುತ್ತದೆ.

ಜೇನುಹುಳುಗಳಿಗೆ ಯಾವ ಹೂವುಗಳು ಇಷ್ಟ…?: ಈ ಪ್ರಶ್ನೆಗೆ ಉತ್ತರಿಸುವುದು ಕಷ್ಟವಾದರೂ ನನ್ನ ಅನುಭವದ ಹಿನ್ನೆಲೆಯಲ್ಲಿ ಕೆಲವು ಹೂಗಳನ್ನು ಜೇನುಹುಳುಗಳು ಬಹಳ ಇಷ್ಟ ಪಡುತ್ತಾವೆ. ಇವು ಸಾಮಾನ್ಯವಾಗಿ ಗೋಧಿಯ ಬುಡ್ಡೆಯಂತಹ ಮೊಗ್ಗಿನಿಂದ ಅರಳಿದ ಹೂಗಳಿಂದ ಹೆಚ್ಚು ಜೇನು ಸಿಗುವುದರಿಂದ ಇವು ಅಂತಹ ತೆರನಾದ ಹೂಗಳನ್ನು ಹೆಚ್ಚು ಇಷ್ಟಪಡುತ್ತಾವೆ. ಜೇನು ಹುಳುಗಳು ಹೂಗಳಿಂದ ಸಾಮಾನ್ಯವಾಗಿ ಸಂಗ್ರಹ ಮಾಡುವುದು ಮಕರಂಧ ಮತ್ತು ಹೂವಿನ ಗರ್ಭದಲ್ಲಿರುವ ಸಿಹಿಯಾದ ದ್ರವ ಅಥವಾ ಜೇನನ್ನು.. ಇವೆರಡು ಯಾವ ಹೂಗಳಲ್ಲಿ ಹೆಚ್ಚು ದೊರೆಯುತ್ತದೆಯೋ ಅಂತಹ ಹೂವುಗಳನ್ನು ಇವು ಹೆಚ್ಚು ಇಷ್ಟ ಪಡುತ್ತಾವೆ. ಅಂತಹವುಗಳಲ್ಲಿ ಕೆಲವುಗಳನ್ನು ಹೆಸರಿಸುವುದಾದರೆ...

ಹೊಂಗೆ ಹೂ : ಚೈತ್ರ ಮಾಸದ ಆರಂಭ ಹೊಂಗೆ ಹೂವುಗಳ ಅರಳುವಿಕೆಯೊಂದಿಗೆ ಮೊದಲುಗೊಳ್ಳುತ್ತದೆ. ಬಯಲುಸೀಮೆಯ ಪ್ರದೇಶಗಳಲ್ಲಿ ಹೊಂಗೆ ಹೂ ಅರಳಿದ ಮರದ ತುಂಬೆಲ್ಲಾ ಈಗತಾನೇ ಜೇನಿನ ಗೂಡಿನಿಂದಲೇ ಎದ್ದು ಹಾರಾಡುತ್ತಿದ್ದಾವೇನೋ ಎಂಬಂತೆ ಲಕ್ಷಾಂತರ ಸಂಖ್ಯೆಯಲ್ಲಿ ಜೇನು ಹುಳುಗಳು ಜೇನು ಹೀರಲು ಪ್ರತಿ ಹೂವಿಂದ ಹೂವಿಗೆ ಕುಳಿತು ಏಳುತ್ತಿರುತ್ತಾವೆ. ಹೊಂಗೆ ಮರದ ಕೋಟ್ಯಾಂತರ ಹೂ ರಾಶಿಯಲ್ಲಿ ಲಕ್ಷಾಂತರ ಜೇನು ಹುಳಗಳ ಝೇಂಕಾರವೇ ಅಲ್ಲಿ ಮೇಳೈಸಿರುತ್ತದೆ. ಹೂ ಅರಳಿದ ಏಳೆಂಟು ದಿನ ಕಾಯಿಯ ಭ್ರೂಣ ಬೆಳೆಯುವವರೆಗೆ ಅಥವಾ ಪರಾಗಸ್ಪರ್ಶ ಆಗದೇ ನಿಶ್ಪಲವಾಗಿ ಹೂ ಬಿದ್ದು ಹೋಗುವವರೆಗೆ ಮಧುರ ದ್ರವವನ್ನು (ಜೇನು) ಈ ಹೂವುಗಳು ಶ್ರವಿಸುತ್ತವೆ. ಅದು ಇತರೆ ಹೂಗಳಿಗಿಂತ ಹೆಚ್ಚಾಗಿ ಕಂಡುಬರುತ್ತದೆ. ಆದ್ದರಿಂದ ಜೇನು ಹುಳಗಳು ಪಿಥಿ ಪಿಥಿ ಎನ್ನುವ ಹಾಗೆ ಹೊಂಗೆ ಮರ ಹೂ ಬಿಟ್ಟಾಗ ಮುಸುರಿಕೊಂಡಿರುತ್ತಾವೆ.

ಕಾರೇಗಿಡದ ಹೂ : ಹೊಂಗೆ ಮರಗಳ ನಂತರ ಹೆಚ್ಚು ಇಷ್ಟಪಟ್ಟು ಜೇನು ಹೀರುವುದು ಈ ಕಾರೆ ಪೊಟರುಗಳಲ್ಲಿ ಹೂ ಅರಳಿದಾಗ... ಇದರ ಪ್ರತಿ ಹೂವಿನಲ್ಲೂ ನಿರಂತರವಾಗಿ ಜಿನುಗುವಂತೆ ಉತ್ಪತ್ತಿ ಆಗುವ ಜೇನಿನ ದ್ರವ ಜೇನುಹುಳುಗಳನ್ನು ಆಕರ್ಷಿಸುತ್ತಾವೆ. ಯಾವ ಗಿಡ ಹೆಚ್ಚು ಜೇನುಹುಳುಗಳು ಜೇನು ಹೀರಿ ಪರಾಗಸ್ಪರ್ಶ ಮಾಡುತ್ತಾವೋ ಆ ಗಿಡದ ಯಾವ ಹೂವು ವಿಫಲವಾಗದೇ ಆ ಗಿಡ ಎಲೆಗಳಿಗಿಂತಲೂ ಕಾಯಿಯೇ ಲಕ್ಷಾಂತರ ಮಣಿಗಳು ಪೋಣಿಸಿದಂತೆ ಫಲಭರಿತ ಕಾರೆ ಪೊಟರೆಗಳನ್ನು ಕಾಣಬಹುದು.

ತೆಂಗು ಮತ್ತು ಅಡಕೆಯ ಹೊಂಬಾಳೆ (ಹಿಂಗಾರು) : ಹೊಂಗೆ ಕಾರೆ ಗಿಡಗಳಂತೆ ಅತ್ಯಂತ ಹೆಚ್ಚು ಜೇನು ಹೀರಲು ಬಯಸುವ ಹೂಗಳೆಂದರೇ ಅದು ತೆಂಗಿನ ಮರ. ಮರಗಳಲ್ಲಿ ಹೊಂಬಾಳೆ ಹೊಡೆದು ಹೂ ಬಿಟ್ಟಾಗ... ಇಲ್ಲಿಯೂ ಕೂಡ ಕಾಯಿ ಕಟ್ಟುವವರೆಗೂ ಹೂವಿನ ಗರ್ಭದಲ್ಲಿ ನಿರಂತರವಾಗಿ ಜಿನುಗುವ ಜೇನು ಇದಕ್ಕೆ ಕಾರಣ.

ಮಾವಿನ ಹೂ : ಹಣ್ಣುಗಳ ರಾಜ ಮಾವು... ಮಾವಿನ ಹಣ್ಣಿನ ಸ್ವಾದ ಗೊತ್ತಿಲ್ಲದವರು ಯಾರು...? ಹಣ್ಣಿನ ಮೂಲ ಹೂವಿನಲ್ಲೂ ಅದೆಷ್ಟೋ ಮಧುರ ಹನಿಗಳ ಸಾರ ಮಾವಿನ ಹೂವಿನಲ್ಲಿ ಸಿಗುವುದು.

ಅಂಟುವಾಳ : ಮಲೆನಾಡು ಮತ್ತು ಅರೆ ಮಲೆನಾಡಿನ ವ್ಯಾಪ್ತಿಯಲ್ಲಿ ಹೊಂಗೆಯ ಮರಗಳು ಇಲ್ಲ. ಮಲೆನಾಡಿನಲ್ಲಿ ಹೊಂಗೆಯ ಬದಲಾಗಿ ಅಂಟುವಾಳ ಮರಗಳು ಕಂಡು ಬರುತ್ತಾವೆ. ಇದರ ಹೂಗಳು ಕೂಡ ಜೇನುಗಳಿಗೆ ಅಚ್ಚುಮೆಚ್ಚು. ಒಂದರ್ಥದಲ್ಲಿ ಅಂಟುವಾಳದ ಹೂವಿನಿಂದ ಆ ವರ್ಷದ ಮಳೆ ಬೆಳೆ ಸಮೃದ್ಧಿಯನ್ನು ಅಂದಾಜಿಸುವುದು ವಾಡಿಕೆಯಲ್ಲಿದೆ. ಕೆಲವು ಸಸ್ಯ ಗಿಡ ಮರಗಳಲ್ಲಿ ಕಡಿಮೆ ಫಲ ಅಥವಾ ಕಾಯಿರ ಹಿತ ಗೊಡ್ಡುಗಿಡಗಳನ್ನು ಕಾಣಬಹುದು. ಇದಕ್ಕೆ ಕಾರಣ ಮಳೆ ನೀರಿನ ಕೊರತೆಯಿಂದ ಹೂ ಬಿಟ್ಟಾಗ ಜೇನಿನ ದ್ರವವನ್ನೂ ಸ್ರವಿಸುವಷ್ಟು ನೀರಿನ ಒರತೆ ಸಸ್ಯದಲ್ಲಿ ಇಲ್ಲದೇ ಇದ್ದಾಗ ಜೇನು ಹುಳಗಳನ್ನು ಆಕರ್ಷಿಸದೇ ಹೂಗಳು ನಿಶ್ಪಲವಾಗಿ ಉದುರಿಹೋದದ್ದು ಇದಕ್ಕೆ ಕಾರಣ. ಬಹುತೇಕ ಸಸ್ಯಗಳಲ್ಲಿ ಫಲ ಬರದೇ ಇರುವುದು ಉತ್ತಮ ಫಲ ಬರವುದೂ ಕೂಡ ಜೇನುಗಳ ಚಟುವಟಿಕೆ ಇರುವುದು ಮತ್ತು ಇಲ್ಲದೇ ಇರುವುದು ಪ್ರಧಾನ ಕಾರಣ.

ಅನಂತ ಹೂಗಳ ಪ್ರಿಯ ಜೇನು : ಜೇನುಗಳು ಎರಡನೇ ಪ್ರಾಶಸ್ತ್ಯ ವಾಗಿ ನೇರಳೆ ಹೂಗಳು, ಬನ್ನಿಮರ ಹೂಗಳು ಇನ್ನು ನೆಲ ಮಟ್ಟದ ಪೊದರುಗಳಾದ ತುಂಬೆ, ಲಂಟಾನ, ಬಳ್ಳಾರಿ ಜಾಲಿ, ಹುಣಸೇ ಹೀಗೆ ಅನಾಮಿಕ ಸಾವಿರಾರು ಸಸ್ಯಗಳ ಹೂವಿನಿಂದ ಇವು ಜೇನು ಸಂಗ್ರಹಿಸುತ್ತವೆ. ಜೇನುಗಳು ಸಾಮಾನ್ಯವಾಗಿ ಮಕರಂದವನ್ನು ತನ್ನ ಸೂಕ್ಷ್ಮವಾದ ವಿಶೇಷ ಕೊಳವೆಯಂತ (ನೆಕ್ಟರ್) ಭಾಗದಿಂದ ಜೇನನ್ನು ಹೀರಿಕೊಂಡು ದೇಹದೊಳಗೆ ಸೇರಿಸುತ್ತಾವೆ. ಮಕರಂದವನ್ನು ತಮ್ಮ ಹಿಂದಿನಕಾಲುಗಳಿಗೆ ಅಂಟಿಸಿಕೊಂಡು ಬರುತ್ತವೆ. ಪ್ರತಿಹೂವಿನಲ್ಲೂ ದೊರಕುವ ಕಣಮಾತ್ರ ಜೇನು ಮತ್ತು ಮಕರಂದವನ್ನು ಸಂಗ್ರಹಿಸುವ ಚಾಕಚಕ್ಯತೆ ಮತ್ತು ಕೌಶಲ ಹೊಂದಿವೆ. ಸಂಗ್ರಹಿಸಿಕೊಂಡು ಬಂದು ಗೂಡಿಗೆ ಆಗಮಿಸಿದ ತಕ್ಷಣವೇ ಸಂಗ್ರಹಿಸಿ ತಂದ ಜೇನು ಮತ್ತು ಮಕರಂದವನ್ನು ಜೇನುಗೂಡಿನ ಆಯಾ ಭಾಗದಲ್ಲಿ ಸೇರಿಸುವ ಕರ್ತವ್ಯದ ಜವಾಬ್ದಾರಿ ಜೇನುಹುಳುಗಳಿಗೆ ಇದೆ.

(ಇನ್ನೂ ಇದೆ)

-ನಾಗೇಂದ್ರ ಬಂಜಗೆರೆ, ಬಳ್ಳಾರಿ 

ಚಿತ್ರ ಕೃಪೆ: ಇಂಟರ್ನೆಟ್ ತಾಣ