ಜೇನಿನ ವಿಧಗಳು (ಭಾಗ 1)

ಜೇನಿನ ವಿಧಗಳು (ಭಾಗ 1)

ರಾಜಾಪುರ ಎನ್ನುವುದೊಂದು ಊರು. ಭಾರತ ದೇಶದಲ್ಲೇ ಅತ್ಯುತ್ತಮ ಮ್ಯಾಗ್ನಟೈಟ್ ಕಬ್ಬಿಣದ ಅದಿರು ಇರುವ ಕಲ್ಲು ಬಂಡೆಗಳ ಬೆಟ್ಟ ಗುಡ್ಡಗಾಡುಗಳಲ್ಲಿ ಕರಡಿ ಚಿರತೆಗಳು ಇರುವ ಪ್ರದೇಶ. ನಾನು ಅಲ್ಲಿ ನನ್ನ ಸರ್ಕಾರಿ ಸೇವೆ ಮಾಡುತ್ತಿದ್ದಾಗ 2011 ರಲ್ಲಿ ಜನಗಣತಿ ಮಾಡಲು ಜನವಸತಿಗೆ ತೆರಳಿದ್ದೆ. ಸುಮಾರು 10-11 ಗಂಟೆಯ ಸಮಯ. ಏಪ್ರಿಲ್ ತಿಂಗಳಾಗಿದ್ದರಿಂದ ಬಳ್ಳಾರಿ ಬಿಸಿಲ ಪ್ರತಾಪ ಕೇಳಬೇಕೆ? ಸೂರ್ಯನ ಶಿಕಾರಿ ನೆತ್ತಿಗೇರಿ ಒಂದೇ ಸಮನೆ ಸುಡುತ್ತಿದ್ದುದರಿಂದ ಕಿರಿ ಕಿರಿಯಾಗಿ ತಂಪು ಹೊತ್ತಿನಲ್ಲಿ ಗಣತಿ ಮಾಡಿದರಾಯಿತು ಎಂದು ಮನೆಗೆ ಹಿಂತಿರುಗಲೆಂದು Census ಕಾಗದ ಪತ್ರ ಹಿಡಿದು ತೆರಳುತ್ತಿದ್ದೆ. ಹೋಗುತ್ತಿದ್ದಾಗ ಸುಮಾರು ನಲವತ್ತು ಐವತ್ತು ವರ್ಷದ ಜಮೀನ್ದಾರರ ಹಳೆಯ ಕಲ್ಲಿನ ಮನೆಯೊಂದನ್ನು ಅದೇ ಊರಿನ ಕೂಲಿ ಆಳುಗಳು ಕೆಡವುತ್ತಿದ್ದರು. ಮನೆ ಕೆಡವುವಾಗ ಅದೊಂದು ತರಹದ ವಾಸನೆ. ಸುಮಾರು ದೂರದವರೆಗೆ ಆ ಮುಗ್ಗಲು ವಾಸನೆ ಹರಡಿತ್ತು.

ಆ ಕೆಡವುತ್ತಿದ್ದ ಮನೆಯು ಮಾಳಿಗೆ ಮನೆಯಾಗಿತ್ತು. ಆ ಕಾಲದಲ್ಲಿ ಈಚಲ /ತಾಳೆಯ ಮರಗಳನ್ನು ಅರ್ಧಕ್ಕೆ ಸೀಳಿ ಅವುಗಳನ್ನು ಹೊಂದಿಸಿ ಮೇಲೆ ಬೇರೆ ಬೇರೆ ಮಣ್ಣನ್ನು ಮಿಶ್ರಣ ಮಾಡಿ ವಿಶೇಷ ಹದ ಮಾಡಿ ಕಲೆಸಿ ಹಾಕಿದ 'ಮಿದ್ದಿಮಣ್ಣು' ಹಾಕಿರುತ್ತಿದ್ದರು. ಇದನ್ನು ಜಂತಿ ಮನೆ, ಮಾಳಿಗೆ ಮನೆ, ಮಿದ್ದಿ ಮನೆ ಎಂದು ಕರೆಯಲಾಗುತ್ತದೆ. ಅದೆಷ್ಟೊ ಜನಗಳ ಅದೆಷ್ಟೋ ದಿನಗಳ ಬದುಕಿಗೆ ಆಸರೆಯಾಗಿದ್ದ ಈ ಮನೆಯ ಧೂಳು, ಮಣ್ಣು, ಕಲ್ಲು, ಜಂತಿಗಳು, ಸುಣ್ಣದಗೋಡೆ, ಹೊಗೆ ಸುತ್ತಿಕೊಂಡು ಕರ್ರಗಾಗಿದ್ದ ಮನೆಯಲ್ಲಿರುವ ಎಲ್ಲಾ ಕಾಗದ ಬಟ್ಟೆಗಳಂತಹ ವಸ್ತುಗಳ ಚಿತ್ರಣ ಹೇಗಿತ್ತೆಂದರೇ ಸಾರು ಮಾಡಿ ಒಗ್ಗರಣೆ ಹಾಕಿದಾಗ ಸಾರಿನಲ್ಲಿ ಬಳಸಿದ ಮುಖ್ಯಪದಾರ್ಥದ flavour, ಸಾಸಿವೆ, ಜೀರಿಗೆ ಈರುಳ್ಳಿ ಬೆಳ್ಳುಳ್ಳಿ ಕರಿಬೇವು ಎಲ್ಲವೂ ಮಿಕ್ಸ್ ಆಗಿ ultimate ಆಗಿ ಒಂದು ವಿಭಿನ್ನ ವಿಶೇಷವಾಗಿ ಒಮ್ಮೆ ಸುವಾಸಿತ ವಾಸನೆ ಬರುತ್ತದೆಯಲ್ಲಾ ?? ಆ ರೀತಿಯಾಗಿ ಅಲ್ಲಿ ಬರುತ್ತಿದ್ದ ವಾಸನೆ ಇಡೀ ಅಗಾಧ ಮಾನವ ಬದುಕಿನ ಏರಿಳಿತಗಳ ಚಿತ್ರಣವನ್ನು ವಾಸನೆಯಲ್ಲಿ ತೋರಿಸುವಂತಿತ್ತು!. ಇದೊಂದು ಮಾನವ ನಾಗರೀಕತೆಯ ವಾಸನೆ ಎಂತಲೇ ಹೇಳಬಹುದು.

ಅಂದು ಆ ಮನೆಯನ್ನು ಕೆಡವುವಾಗ ಸೊಳ್ಳೆಗಾತ್ರಕ್ಕಿಂತ ತುಸುವೇ ಹಿರಿಯ ನೂರಾರು ಹುಳುಗಳು ಗುಂಪುಕಟ್ಟಿ ಬಿಸಿಲಲ್ಲೂ ಹಾರಾಡುತ್ತಿದ್ದವು. ಹತ್ತಿರ ಹೋಗಿ ನೋಡುತ್ತಾ "ಬಾಂಡ್ರಪ್ಪ... ಅವು ನೊಣಗಳಾ ... ಸೊಳ್ಳೆಗಳಾ..?? ಎಂದು ಕೇಳಿದೆ. "ಅವು ನೊಣಗಳಂತಾವೇ ಸಾ.. ಅವು ಬಿಸಿಲು ಕಾಲದಲ್ಲಿ ಇಂತ ಗೋಡೆ, ಕಲ್ಲಿನ ಸಂದುಗಳಲ್ಲಿ ಸೇರಿಕೊಂಡಿರುತ್ತಾವೆ" ಎಂದು ಹೇಳಿದರೆ ಇನ್ನೊಬ್ಬ ಹಿರಿಯ ಕೆಲಸಗಾರ ರಾಮಜ್ಜ "ಅದೊಂದು ತರ ಜೇನು ಮೇಷ್ಟ್ರೇ.." ಎಂದು ಹೇಳಿದ. ಒಂದು ಕ್ಷಣ ನಮ್ಮ ಮೂವರಲ್ಲೇ ಚರ್ಚೆಯಾಗಿ ಅಂತಿಮವಾಗಿ ರಾಮಜ್ಜ "ತಡ್ಕ ಮೇಷ್ಟ್ರೇ.. ತೋರಿಸ್ತಿನಿ ಇಲ್ಲೊಂದೈತೆ....." ಎಂದು ತಲೆಗೆ ಟವೆಲ್ ಬಿಗಿ ಮಾಡಿಕೊಂಡು ಬೇರೆ ಜಾಗದಲ್ಲಿ ಹಾರೆಯಿಂದ ಕಲ್ಲನ್ನು ಮೀಟಿ ಕಲ್ಲನ್ನು ಕೆಡವಲು ಶುರುಮಾಡಿದ. ಬೇಸಿಗೆಯ ಬಿಸಿಲು ಚುರ್.. ಎನ್ನುತ್ತಿತ್ತು... ಬೆನ್ನಿನಲ್ಲಿ ಜುಳು ಜುಳು ಬೆವರು ಇಳಿಯುತ್ತಿದ್ದರೂ ನನ್ನದೇ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ನಿಂತುಕೊಂಡೆ. ಐದಾರು ಸಾಧಾರಣ ಗಾತ್ರದ ಕಲ್ಲುಗಳನ್ನು ಕೆಡವಿದ ಮೇಲೆ ಒಂದು ಸಂದಿಯಲ್ಲಿ ಒಂದು ಕಡ್ಡಿ ಹಿಡಿದು ಮಣ್ಣನ್ನು ಕೆರೆದ.. "ಮೇಷ್ಟ್ರೇ ಇಲ್ನೋಡಿ... ಎಂದು ಹೇಳುತ್ತಾ... ನೂರಿನ್ನೂರು ಸಣ್ಣ ಸಣ್ಣ ನೊಣದಂತಹ ಹುಳುಗಳನ್ನು ಎಬ್ಬಿಸಿದ.. ಹುಳಗಳನ್ನು ಎಬ್ಬಿಸಿ ಮಣ್ಣನ್ನು ಸರಿಸಿ ನೋಡಿದರೆ ಒಂದು ಹಿಡಿ ಗಾತ್ರದ ಚಿಕ್ಕ ಚಿಕ್ಕ ಜರಡಿಯಂತೆ ರಂದ್ರಗಳಿದ್ದ ಕಪ್ಪಾದ ಒಂದು ಪದಾರ್ಥ ಸಿಕ್ಕಿತು. ಆ ರಾಮಜ್ಜ ಅದನ್ನು ತೋರಿಸಿ "ಇದೇ ಮೇಷ್ಟೇ ಜೇನು... ಏ.. ನೋಡಲೇ ಬಾಂಡ್ರ..." ಎಂದು ಬಾಂಡ್ರಪ್ಪನ ಮುಖದ ಹತ್ತಿರ ಹಿಡಿದ.. ಇದೇ ಆ ಮಿಸುರಿ ಜೇನು.. ಜೇನುಗಳನ್ನು ಭೂಮಿಯಾದ್ಯಂತ ಅಂಟಾರ್ಕ್ಟಿಕ ಹೊರತುಪಡಿಸಿ ಎಲ್ಲಾಕಡೆಯೂ ಕಂಡು ಬರುತ್ತಾವೆ. ಅಂದ ಹಾಗೆ ಈ ಪ್ರಕೃತಿಯ ಅದ್ಬುತ ಕೀಟವಾದ ಜೇನಿನ ಪ್ರಕಾರಗಳ ಬಗ್ಗೆ ತಿಳಿಯಬೇಕಿದೆ. ನಾನು ಕಂಡಂತೆ ಜೇನು ಹುಳಗಳಲ್ಲಿ ಅನೇಕ ಪ್ರಕಾರಗಳಿವೆ. ಅವುಗಳನ್ನು ನನ್ನ ಅನುಭವದ ನೆಲೆಯಲ್ಲಿ ನೋಡುವುದಾದರೆ..

◾ಮಿಸುರಿ (ಸೊಳ್ಳೆ) ಜೇನು

◾ಕಿರು ಜೇನು/ಪಿಟ್ ಜೇನು

◾ಕೋಲುಜೇನು

◾ಹೆಜ್ಜೇನು

ಮಿಸುರಿ (ಸೊಳ್ಳೆ) ಜೇನು:

ಹೆಸರೇ ಹೇಳುವಂತೆ ಸೊಳ್ಳೆಗಳ ಗಾತ್ರಕ್ಕಿಂತ ತುಸು ದಪ್ಪಕಿದ್ದು ಇವು ಸಾಮಾನ್ಯವಾಗಿ ಹಳೆಯ ಕಲ್ಲಿನ ಗೋಡೆಗಳ ಸಂದುಗಳಲ್ಲಿ, ಕೆಲವು ವಿಶೇಷ ಬೆಟ್ಟಗುಡ್ಡಗಳಲ್ಲಿ ಪೆಳಕೆ- ಪಕಳೆಯಂತ (ಚಕ್ಕೆ-ಪದರದಂತಹ) ಶಿಲಾ ರಚನೆಗಳಲ್ಲಿ ಗೂಡುಕಟ್ಟುತ್ತಾವೆ. ಇವು ಸಂಖ್ಯಾ ದೃಷ್ಟಿಯಿಂದ ಕಡಿಮೆಯ ಸಂಖ್ಯೆ ಇದ್ದು ಬೇಕರಿಯ ಚೌಕಾಕಾರದ ಒಂದೋ ಎರಡೋ slice ಬ್ರೆಡ್ ನ್ನು ನಿಧಾನವಾಗಿ ಮಿದುಕೆ ಮಾಡಿದರೆ ಯಾವ ಆಕಾರ ಪಡೆಯಬಹುದೋ ಆ ರೀತಿಯಾಗಿ ಅವು ಗೂಡು ಕಟ್ಟಿದ ಸ್ಥಳದ ಆಕಾರಕ್ಕನುಗುಣವಾಗಿ ಕಟ್ಟುತ್ತವೆ. ಆ ಗೂಡಿನಲ್ಲಿ ಹದಿನೈದು ಇಪ್ಪತ್ತು ಶೈಶವಾವಸ್ಥೆಯ ಕೋಶಗಳು, ಮೇಲಿನ ಕೆಲವು ಕೋಶಗಳಲ್ಲಿ ನೀರಿನ ಹನಿಯಂತ ತುಪ್ಪವೂ ಕಂಡು ಬಂತು. ಕೈಯಲ್ಲಿ ಹಿಚುಕಿಹಾಕಿದರೂ ಕಚ್ಚದೇ ಇರುವ ಅಮಾಯಕ ಪಾಪಿ ನೋಣಗಳಿವು. ಇವು ಇತರ ಜೇನುಗಳಂತೆ ಸಾವಿರಾರು ಸಂಖ್ಯೆಯಲ್ಲಿರದೇ ಇವುಗಳ ಕುಟುಂಬದಲ್ಲಿ ಸದಸ್ಯ ಹುಳುಗಳೇ ಕಡಿಮೆ ಸಂಖ್ಯೆಯಲ್ಲಿ ಇರುತ್ತಾವೆ. ನಿಸರ್ಗದಲ್ಲಿ ಈ ಪ್ರಭೇದದ ಹುಳುಗಳು ಬಹಳ ಕಡಿಮೆ ಪ್ರಮಾಣದಲ್ಲಿ ಇದ್ದಾವೆ. ಅರಣ್ಯಗಳಿಲ್ಲದೇ ಕಾಡು ಪ್ರಾಣಿಗಳು ಇರಲು ಹೇಗೆ ಸಾದ್ಯವಿಲ್ಲವೋ ಹಾಗೆ ಕೆಲವು ಕ್ರಿಮಿ ಕೀಟ ಜೀವಿಗಳಿಗೆ ಅವುಗಳ ನೈಸರ್ಗಿಕ ಆವಾಸಸ್ಥಾನಗಳಿಗೆ ಧಕ್ಕೆ ಬಂದಿದ್ದರಿಂದ ಉಳಿದಿರುವ ಅನೇಕ ಜೀವ ಸಂಕುಲವೇ ಇಂದು ಅಪಾಯದ ಅಂಚಿನಲ್ಲಿರುವ ಜೀವಿಗಳಾಗಿವೆ. ಇನ್ನೂ ಕೆಲವು ಜೀವಸಂಕುಲ ಈಗಾಗಲೇ ನಾಮಾವಶೇಷವಾಗಿ ಉಳಿದುಕೊಂಡಿರುವುದು ನಿಮಗೆಲ್ಲಾ ಗೊತ್ತಿರುವ ಸಂಗತಿಯೇ.. ಈ ಹುಳುಗಳು ಬಹಳ ಪ್ರಮಾಣದಲ್ಲಿ ಇರ ಬೇಕಿತ್ತು. ಸಾಮಾನ್ಯವಾಗಿ ಇದನ್ನು ತಿನ್ನುವ ಅಭ್ಯಾಸ ಕಡಿಮೆ ಇರುವುದರಿಂದ ಇವುಗಳ ಪರಿಚಯ ಬಹಳ ಜನಗಳಿಗೆ ಇಲ್ಲ. ಅಲ್ಲದೇ ಜನರ ಕೈಗೆ ಅಷ್ಟು ಸುಲಭವಾಗಿ ಸಿಗದೇ ಇರುವುದು ಮತ್ತೊಂದು ಕಾರಣ. ಮಾನವನ ಪ್ರತ್ಯಕ್ಷ ಕ್ರೌರ್ಯಕ್ಕೆ ಇವು ಒಳಗಾಗಿಲ್ಲ. ನಿಸರ್ಗದಲ್ಲಿ ಸೂಕ್ಷ್ಮವಾಗಿ ಅವಲೋಕಿಸಿದರೆ single single ಹುಳುಗಳು ಅನೇಕ ತೆರನಾದ ಹೂಗಳ ಮೇಲೆ ಅಲ್ಲಲ್ಲಿ ಕಾಣಬಹುದಾದರೂ ಇವೇ 'ಮಿಸುರಿ ಜೇನು' ಹುಳು ಎಂದು ಗುರುತಿಸುವ ಬುದ್ಧಿವಂತರು ನಮ್ಮಲ್ಲಿ ತೀರಾ ಕಡಿಮೆ. ಯಾವುದೋ ನೊಣ ಎಂದಷ್ಟೇ ನಾವು ಭಾವಿಸಿ ಸುಮ್ಮನಾಗುತ್ತೇವೆ. ಅಪರೂಪಕ್ಕೆ ಈ ಮಿಸುರಿ ಜೇನನ್ನು ಸಾಕುವವರೂ ಇದ್ದಾರೆ. ಔಷಧೀಯವಾಗಿ ಇದರ ತುಪ್ಪ ಮತ್ತು ಮಕರಂಧಕ್ಕೆ ವಿಶೇಷವಾದ ಬೇಡಿಕೆ ಇದೆ. ಆದರೆ ಇಂದಿನ ಆಧುನಿಕ ವೈದ್ಯಕೀಯ ವ್ಯಾಪಕ ದಂಧೆಯ ಬಲೆಯ ನಡುವೆ ಇವುಗಳನ್ನು ಕೊಳ್ಳುವವರಾಗಲೀ, ಇವುಗಳ ಮಹತ್ವ ಬಲ್ಲವರಾಗಲಿ, ಪೋಷಿಸುವವರಾಗಲಿ ಇಲ್ಲ. ಅಲ್ಲದೇ ಈ ಹುಳಗಳ ಸಂತಾನ ಇತರೆ ಜೇ‌ನುಹುಳುಗಳಂತೆ ಅಪರಿಮಿತವಾಗಿ ಇಲ್ಲ. ಇವು ಹತ್ತಾರು ವರ್ಷಗಳಿಂದ ಒಂದೇ ಜಾಗದಲ್ಲೇ ಇದ್ದು ಅಲ್ಲಿಯೇ ವಾಸಮಾಡುತ್ತಿರುತ್ತಾವೆ. ಅಥವಾ ಇವುಗಳ ಜೀವೀತಾವಧಿ ಬಹಳ ಕಡಿಮೆ ಇರಬಹುದು. ಆದ್ದರಿಂದಲೇ ಸುಮಾರು ವರ್ಷಗಳ ಕಾಲ ನಾನು ವೀಕ್ಷಣೆ ಮಾಡಿರುವುದರಿಂದ ಇವು ಗಣನೀಯ ಪ್ರಮಾಣದಲ್ಲಿ ಹೆಚ್ಚಾಗಿದ್ದುದನ್ನು ಕಂಡಿಲ್ಲ. ಆದ್ದರಿಂದಲೇ ಇವು ಹೇರಳವಾಗಿ ಕಂಡು ಬರದೇ ಬಹಳ ವೀರಳವಾಗಿ ಅಲ್ಲಲ್ಲಿ ಕಂಡುಬರುತ್ತಾವೆ.

(ಇನ್ನೂ ಇದೆ)

-ನಾಗೇಂದ್ರ ಬಂಜಗೆರೆ, ಬಳ್ಳಾರಿ 

ಸಾಂದರ್ಭಿಕ ಚಿತ್ರ : ಇಂಟರ್ನೆಟ್ ತಾಣ