ಜೇನಿನ ವಿಧಗಳು (ಭಾಗ 2)

ಜೇನಿನ ವಿಧಗಳು (ಭಾಗ 2)

ಕಿರುಜೇನು/ಪಿಟ್ ಜೇನು : ಹೆಸರೇ ಹೇಳುವಂತೆ ಹುಳುಗಳು ಮಾಮೂಲಿ ಜೇನುಹುಳುಗಳ ಗಾತ್ರದಲ್ಲೇ ಇದ್ದು ಇವು ನೇತಾಡುವ ಗಿಡ ಪೊದೆ ಬಳ್ಳಿ ಗೋಡೆ ಸಂದು ಪೈಪ್ ಟ್ಯಾಂಕ್ ಹೀಗೆ ಎಲ್ಲಿ ಬೇಕಾದರೂ ಗೂಡು ಕಟ್ಟುವ ಇವು ಹುಳುಗಳು ಅಂದಾಜು ಇನ್ನೂರು ಮುನ್ನೂರರಿಂದ ಎಂಟುನೂರು ಸಾವಿರದ ವರೆಗೆ ಇರಬಹುದು. ಇದು ಒಂಥರಾ ವಿಭಕ್ತ ಕುಟುಂಬದಂತಿದ್ದು ಸಂತಾನೋತ್ಪತ್ತಿ ಕಾರ್ಯಕ್ಕಾಗಿಯೇ ಶ್ರದ್ಧೆಯಿಂದ ಕುಟುಂಬವನ್ನು ಕಾಪಿಟ್ಟು ನೋಡಿಕೊಳ್ಳುತ್ತವೆ. ಉಷ್ಣವಲಯದ ಎಲ್ಲಾ ಭಾಗದಲ್ಲೂ ಕಂಡು ಬರುವ ಇವು ಕೋಲು ಜೇನಿನಂತೆಯೇ ಇದರ ತುಪ್ಪವು ಇರುತ್ತದೆ. ಒಂದೇ ವ್ಯತ್ಯಾಸ ಮಿತ ಕುಟುಂಬ ಸದಸ್ಯರು ಮತ್ತು ಜೇನು ಗೂಡು ಕಟ್ಟವಾಗ ಅವಿರಬಹುದಾದ ಒಟ್ಟಾರೆ ತೂಕದ ಪ್ರಮಾಣವನ್ನು ಹೊರಬಹುದಾದ ಸಣ್ಣ ಕಡ್ಡಿಗಳಿಗೆ ಗೂಡನ್ನು ಕಟ್ಟುತ್ತಾವೆ. ಬಹುಶಃ ಇವೇ ಕುಟುಂಬಗಳಿಗೆ ಉತ್ತಮ ಸಂತಾನೋತ್ಪತ್ತಿ ಕಾರ್ಯ ಮಾಡಿ ಪೋಷಣೆ ಮಾಡಿಕೊಂಡು ಬಂದರೆ ಸದಸ್ಯರು ಹೆಚ್ಚಿ ಇದೇ ಕೋಲುಜೇನಾಗುತ್ತದೆ. ಇನ್ನೂ ಕೆಲವೊಮ್ಮೆ ಕೋಲು ಜೇನುಗಳಲ್ಲಿ ವಿಭಜನೆಯಾಗಿ ಕೆಲವೊಮ್ಮೆ ಒಂದು ಗುಂಪಿಗೆ ಹೆಚ್ಚು ಹುಳುಗಳು ಬೇರ್ಪಟ್ಟು ಇನ್ನೊಂದು ಗುಂಪಿನಲ್ಲಿ ಉಳಿಯುವ ಕಡಿಮೆ ಪ್ರಮಾಣದ ಹುಳುಗಳೇ ಈ ಪಿಟ್ ಜೇನು ಎಂದು ನನ್ನ ಅನಿಸಿಕೆ.. ಆದರೆ ಮೂಲತಃ ಕಿರುಜೇನು ಕಚ್ಚುವುದಿಲ್ಲ. ಸ್ವಲ್ಪಮಟ್ಟಿಗೆ ಪ್ರತಿರೋಧ ತೋರಿಸುತ್ತವೆ. ಇದರಲ್ಲಿ ತುಪ್ಪ ಗರಿಷ್ಠ ಇನ್ನೂರು ಗ್ರಾಂ ವರೆಗೂ ಸಿಗುತ್ತದೆ. ಈ ಕಿರುಜೇನುಗಳ ಸರಾಸರಿ ಸಂಖ್ಯೆಯಲ್ಲಿ ಕಡಿಮೆಯೇ ಎಂದು ಹೇಳಬಹುದು. ಇದರಿಂದ ಕೆಲವೊಮ್ಮೆ ಬಹಳ ಕಡಿಮೆ ಪ್ರಮಾಣದ ತುಪ್ಪ ಲಭ್ಯವಿರುವ ಕಾರಣ ಜೇನು ತೆಗೆಯಲು ಕಡಿಮೆ ಅಸಕ್ತಿ ತೋರಿ ಉಳಿದುಕೊಳ್ಳುವ ಸಾಧ್ಯತೆ ಅಧಿಕವಾಗಿರುತ್ತದೆ.

ಕೋಲುಜೇನು : ಕೋಲಿನಂತಹ ಉದ್ದನೆಯ ಕಾಂಡಕ್ಕೆ ಗೂಡುಕಟ್ಟಿ ಒಂದು ಗೇಣಿನಿಂದ ಎರಡು ಅಡಿಯಷ್ಟು ಅಗಲ ಕೋಲಿನ ಬೆಂಬಲದಿ ಗೂಡುಕಟ್ಟವವೇ ಕೋಲುಜೇನು. ಇವು ನಮ್ಮ ಉಷ್ಣವಲಯದ ಎಲ್ಲಾ ರೀತಿಯ ಅರಣ್ಯ ಪ್ರಕಾರಗಳಲ್ಲಿ ಹೆಚ್ಚು ಕಂಡು ಬರುವ ಹುಳುಗಳೇ ಈ ಕೋಲು ಜೇನು. ಈ ಕೋಲು ಜೇನುಗಳಲ್ಲಿ ಸುಮಾರು ಎರಡುಸಾವಿರ ಹುಳುಗಳಿಂದ ಎಂಟತ್ತು ಸಾವಿರ ಹುಳುಗಳವರೆಗೆ ಕಂಡು ಬರುತ್ತಾವೆ. ಇವು ಸಾಧಾರಣ ಅಕ್ರಮಣಕಾರಿ ಆಗಿದ್ದು ಸಂತಾನೋತ್ಪತ್ತಿ ಕಾರ್ಯವೇ ಪ್ರಧಾನವಾಗಿರಿಸಿ ಸಾಂಘಿಕವಾಗಿ ಒಟ್ಟುಗೂಡಿ ಕುಟುಂಬದ ಹಾರೈಕೆ ಲಾಲನೆ ಪಾಲನೆ ರಕ್ಷಣೆ ಮಾಡಿಕೊಳ್ಳುತ್ತಾವೆ. ಅವರವರ ನಿಗದಿತ ಜವಾಬ್ದಾರಿಗಳನ್ನು ಚಾಚೂ ತಪ್ಪದೇ ಜೇನು ತರುವುದು, ಗೂಡುಕಟ್ಟುವಂತಹ ಕೆಲಸಗಳನ್ನು ಶಿಸ್ತಿನಿಂದ ಮಾಡುತ್ತವೆ. ಮಿಸುರಿ ಜೇನು ಕಿರು ಜೇನುಗಳಿಗಿಂತ ಕನಿಷ್ಠ ಹತ್ತು ಪಟ್ಟು ಅಧಿಕ ತುಪ್ಪ ಸಿಗುತ್ತದೆ. ಕೋಲುಜೇನು ಗಳು ಸಾಮಾನ್ಯವಾಗಿ ತಲೆಭಾಗದಲ್ಲಿ ತುಪ್ಪ, ನಂತರ ಮಕರಂಧ, ನಂತರ ಅವುಗಳ ಸಂತಾನೋತ್ಪತ್ತಿಗಾಗಿ ಕೋಶಗಳನ್ನು ಮಾಡುತ್ತವೆ. ಸಂತಾನ ಹೊರಬಂದಂತೆಲ್ಲಾ ತುಪ್ಪ ಖಾಲಿಯಾಗುತ್ತದೆ. ಖಾಲಿಯಾದ ಕೋಶದಲ್ಲಿ ಪುನಃ ಮೊಟ್ಟೆಗಳನ್ನು ಇಟ್ಟು ಮರಿಯಾಗುತ್ತವೆ. ಹೀಗೆ ಸಂತಾನ ಚಕ್ರ ಸಾಗುತ್ತದೆ. ಆದರೆ ಇವುಗಳಲ್ಲಿ ಸಂತಾನೋತ್ಪತ್ತಿಯ ಪ್ರಮಾಣವೂ ಅಧಿಕವಾಗಿರುತ್ತದೆ. ಅವಿಭಕ್ತ ಕುಟುಂಬದಂತೆ ಸಾವಿರಾರು ಸಂಖ್ಯೆಯಲ್ಲಿ ಇರುವ ಹುಳುಗಳು ಗರಿಷ್ಠ ಸಂಖ್ಯೆಯಾದಾಗ ಪರಸ್ಪರ ಸಂವಹನ ಮಾಡುವ ಮೂಲಕ ಪ್ರತ್ಯೇಕ ಕುಟುಂಬವಾಗಿ ಬೇರ್ಪಡುತ್ತವೆ. ಈ ಬೇರ್ಪಡುವಾಗ ಅನುಪಾತ ಸಮನಾಗಿ ಆಗದೇ ಹೆಚ್ಚುಕಡಿಮೆ ಆಗುತ್ತಿರುತ್ತದೆ. ಈ ಬೇರ್ಪಡುವ ಘಟನೆಗಳನ್ನು ನಾನು ಪ್ರತ್ಯಕ್ಷವಾಗಿ ಸಾಕಷ್ಟು ಪ್ರಕರಣಗಳಿಗೆ ಸಾಕ್ಷಿಯಾಗಿದ್ದೇನೆ. ಮನುಷ್ಯರು ಇತರ ಪ್ರಾಣಿಗಳು ಬೇರ್ಪಡುವಾಗ ಆಗುವ ಮಾನಸಿಕ, ಹಿಂಸೆ ಕ್ರೂರತ್ವ ಈ ಕೀಟಗಳಲ್ಲಿ ನಾನೆಂದು ಕಂಡಿಲ್ಲ.. ಅದಕ್ಕೆ ಬಹುಶಃ ಹೇಳುವುದು ಜೇನಿನಗೂಡಿನಂತೆ ಒಗ್ಗಟ್ಟಿನಿಂದ ಬಾಳಬೇಕೆಂದು... ಇದು ವಾಸ್ತವ ಕೂಡ ಹೌದು.

ಮಾನವನ ಅತ್ಯಂತ ಕ್ರೌರ್ಯ ಕ್ಕೆ ಒಳಗಾಗಿರುವ ಸಂತತಿ ಎಂದರೇ ಈ ಕೋಲುಜೇನು. ಸಾವಿರಾರು ವರ್ಷಗಳಿಂದಲೂ ಇವುಗಳ ಜೀವನ ಹೋರಾಟದಲ್ಲೇ ಬಂದಿವೆ. ಮನುಷ್ಯನ ಆಹಾರಕ್ಕಾಗಿ ನಾಶಮಾಡುತ್ತಾ ಬಂದಿದ್ದಾನೆ. ಬರೀ ಮನುಷ್ಯನಲ್ಲದೇ ನಾನಾ ಜಾತೀಯ ಜೇಡಗಳು ಕೂಡ ಈ ಕೋಲು ಜೇನಿನ ಗೂಡಿನ ಸುತ್ತಲೂ ಬಲೆ ಹೆಣೆದು ಹಿಡಿದು ತಿನ್ನುತ್ತಾವೆ. ಇನ್ನೂ ಉಡ, ಓತೀಕ್ಯಾತ, ಹದ್ದು, ಕೋತಿ, ಕರಡಿಗಳು ಜೇನನ್ನು ಹಿಂಸಿಸುತ್ತವೆ. ಈ ಕೋಲುಜೇನು ಅಷ್ಟಾಗಿ ಕಡಿಮೆ ಆಗಿಲ್ಲವಾದರೂ ಈಗ ಇಪ್ಪತ್ತು ವರ್ಷಗಳ ಹಿಂದೆ ಇದ್ದುದರಲ್ಲಿ ಈಗ ಅರ್ಧಕಿಂತಲೂ ಕಡಿಮೆ ಕಾಣುತ್ತಿರುವುದು ನಿಸರ್ಗದ ಅಪಾಯಕಾರಿ ವಿದ್ಯಮಾನ ಎಂದು ಹೇಳಬಹುದು.

ತುಡುವೆ ಜೇನು : ಈಗ ಸುಮಾರು ಮೂವತ್ತು ವರ್ಷದ ಹಿಂದಿನ ಚಿತ್ರಣ. ಆಗಿನ ಜನಸಂಖ್ಯೆಗೆ ಫಲವತ್ತಾದ ಭೂಮಿಯೆಲ್ಲಾ ಭೂ ಒಡೆಯರ ಸ್ವತ್ತಾಗಿ ಅಲ್ಲಲ್ಲಿ ಒಂದಷ್ಟು ಸವಳು, ಬರಡು ಭೂಮಿಯ ತರಹದ ಅಲ್ಲಲ್ಲಿ ಒಂದಷ್ಟು ಸರ್ಕಾರಿ ಜಮೀನು/ ಗೋಮಾಳದ ಭೂ ಪ್ರದೇಶ ಅಲ್ಲಲ್ಲಿ ಒಂದಷ್ಟು ಉಳಿದುಕೊಂಡಿತ್ತು. ದನಕರು ಕುರಿಗಳು ಮೇಯಿಸಲು ಇದ್ದ ಜಾಗ ತೊಂಭತ್ತರ ದಶಕದಲ್ಲಿ ಜಮೀನು ಇಲ್ಲದವರಿಗೆ ಜಮೀನು ನಿಗದಿ ಮಾಡಿಕೊಂಡು ಸರ್ಕಾರಕ್ಕೆ ಮನವಿ ಸಲ್ಲಿಸಬಹುದಿತ್ತು. ದೇವರ ಪೂಜಾರಿಗಳಂತಿದ್ದ ರೆವೆನ್ಯೂ ಇನ್ಸ್ಪೆಕ್ಟರ್, village accountant ಗಳಿಗೆ ಸಲಾಂ ಹೊಡೆದು ಹೊಡೆದು ಮೂರ್ನಾಲ್ಕು ವರ್ಷಗಳಾದ ಮೇಲೆ ದಕ್ಷಿಣೆ, ಹೂವು, ತೀರ್ಥವನ್ನೂ ಈ ಭೂ ರಹಿತರೇ ನೀಡಿ ಎಲ್ಲವೂ ಸಮರ್ಪಿಸಿದ ಮೇಲೆ ಸಂತುಷ್ಟರಾದ ಮೇಲೆ ಯಾರೋ ಅದೃಷ್ಟ ಇದ್ದವರಿಗೆ ಜಮೀನು ಭಾಗ್ಯ ಸಿಗುತ್ತಿತ್ತು. ಅಂತಹ ಭಾಗ್ಯ ನಮ್ಮ ಮನೆಗೂ ಒಲಿದು ಬಂದು ನಮಗೂ ಮೂರು ಎಕರೆ ಜಮೀನು ನಮ್ಮದಾಗಿತ್ತು. ಆ ಜಮೀನು ಸಂಪೂರ್ಣ ಹಳ್ಳದ ಒಡಲು. ಆ ಜಾಗದಲ್ಲಿ ಈ ಹಿಂದೆ ಲಕ್ಷಾಂತರ ಈಚಲ ವನ ಹಬ್ಬಿತ್ತಂತೆ. ದಿನಕ್ಕೆ ನೂರಾರು ಮಟ್ಟೆ (ಮೂರು ಲೀಟರ್ ಸಾಮರ್ಥ್ಯದ ಅಂಡಾಕಾರದ ಮಡಿಕೆ.) ಈಚಲ ಹೆಂಡ ಬಸಿಯುತ್ತಿದ್ದರಂತೆ!. ಈ ಈಚಲ ಗಿಡಗಳು ಹವಾಮಾನ ವೈಪರೀತ್ಯಗಳಿಂದ ಮಳೆ ಕಡಿಮೆಯಾಗಿ, ಉಷ್ಣಾಂಶ ಹೆಚ್ಚಾಗಿ, ಬಾವಿಯಲ್ಲಿ ನೀರು ಬತ್ತಿ ಇಂದು ಕುಡಿಯುವ ನೀರು ದೊರಕಲು ಸಾವಿರಾರು ಅಡಿ ಬೋರು ಹಾಕಿಸುತ್ತಿರುವುದು ನಿಮಗೆ ಗೊತ್ತೇ ಇದೆ. ಈಚಲು ಗಿಡಗಳು ಅವಸಾನ ಆದಮೇಲೆ ಬಳ್ಳಾರಿ ಜಾಲಿ ರಾಕ್ಷಸನಂತೆ ಹಬ್ಬಿ ಸದ್ಯ ದಕ್ಷಿಣ ಭಾರತದ ಬಹುಭಾಗ ಪೂರ್ವ- ಪಶ್ಚಿಮಘಟ್ಟ ಮತ್ತು ನೀಲಗಿರಿ ಶ್ರೇಣಿಗಳನ್ನು ಹೊರತುಪಡಿಸಿ ಉಳಿದ ಭಾಗವನ್ನು ಬಳ್ಳಾರಿಜಾಲಿ, ಕಾಂಗ್ರೆಸ್, ಕಮ್ಯುನಿಸ್ಟ್ ಗಿಡಗಳೇ ನಮ್ಮ ಅಡವಿಯನ್ನು ಆಳುತ್ತಿದ್ದವು. ಬಳ್ಳಾರಿ ಜಾಲಿಯೇ ಇಲ್ಲಿನ ಪ್ರಧಾನ ಗಿಡಗಳೂ, ಮರಗಳೂ ಆಗಿದ್ದವು. ಹತ್ತಿಪ್ಪತ್ತು ವಿವಿಧ ಎತ್ತರದ ಈಚಲ ಮರಗಳು ಅಸ್ತಿತ್ವದಲ್ಲಿದ್ದವು. ಆದರೆ ಅವೂ ಕೂಡ ದಿನ ಉರುಳಿದಂತೆ ಉರುಳಿಬಿದ್ದು ನಿರ್ನಾಮವಾದವು. ಇಂದು ಎತ್ತ ನೋಡಿದರೂ ಇದೇ ಸರ್ಕಾರಿ ಜಾಲಿ ಗಿಡ ಮರಗಳದ್ದೇ ಸಾಮ್ರಾಜ್ಯ. ನಾವೆಲ್ಲಾ ಚಿಕ್ಕವರಿದ್ದಾಗ ಈ ಜಾಲಿ ಮರಗಿಡಗಳೇ ಹುಲಿ ಸಿಂಹಗಳಿರುವ ಕಾಡಿನಲ್ಲಿ ದೊಡ್ಡವಾಗಿರುತ್ತಾವೆಂದು ನಾನು ನಂಬಿದ್ದೆ. ನಮಗೆ ಜಮೀನು ಹಂಚಿಕೆಯಾದ ಜಾಗ ಹಳ್ಳದ ಒಡಲು. ಈಗಲೂ ಹಳ್ಳಬಂದರೆ ಈಗ ನಾನು ಹೇಳುತ್ತಿರುವ ಹೊಲ ಸಂಪೂರ್ಣ ಜಲಮಯವಾಗಿ ವಿಶಾಲ ಪ್ರವಾಹದ ನದಿಯಂತೆ ಹರಿಯುತ್ತದೆ. ವಿಶೇಷ ಎಂದರೇ ಅದು ಸಂಪೂರ್ಣವಾದ ಮೆಕ್ಕಲು ಮಣ್ಣಿನಿಂದ ಆವೃತವಾದ ಮಣ್ಣಿನ ದಿನ್ನೆ. ಆದರೆ ಎಂಟು ಹತ್ತು ಅಡಿ ಆಳದಲ್ಲಿ ಮರಳಿನ ನಿಕ್ಷೇಪ ಇದೆ. ಮರಳು ಎಂದರೇ ಶುದ್ಧ ನದಿಯ ಮರಳಂತೆ ಇದೆ. ಈ ಮರಳು ಸುಮಾರು 60 ಅಡಿಗೂ ಅಧಿಕ ಆಳವಾಗಿದ್ದು ಮರಳು ಉತ್ಕೃಷ್ಟ ಮಟ್ಟದ್ದಾಗಿದೆ. ನೂರಾರು ಎಕರೆ ವಿಸ್ತಾರವಾಗಿದೆ. ಮರಳಿನ ಕಳ್ಳರ ಕಣ್ಣು ಇನ್ನೂ ಈ ಒಡಲಾಳಕ್ಕೆ ಬಿದ್ದಿಲ್ಲವಾದ್ದರಿಂದ ಇನ್ನೂ ಭೂಮಿಯ ಒಡಲಾಳದಲ್ಲಿ ಉಳಿದುಕೊಂಡಿರುವುದು ಸಮಾಧಾನಕರ ಸಂಗತಿ.

(ಇನ್ನೂ ಇದೆ)

-ನಾಗೇಂದ್ರ ಬಂಜಗೆರೆ, ಬಳ್ಳಾರಿ 

ಸಾಂದರ್ಭಿಕ ಚಿತ್ರ : ಇಂಟರ್ನೆಟ್ ತಾಣ