ಜೇನಿನ ವಿಧಗಳು (ಭಾಗ 3)
ಈಗ ಎಂಟು ಹತ್ತು ವರ್ಷಗಳ ಹಿಂದೆ ಎರಡ್ಮೂರು ವರ್ಷ ಮಳೆ ಇಲ್ಲದೆ ಅಂತರ್ಜಲ ಬತ್ತಿ ನೀರು ಹೋಗಿದ್ದರಿಂದ ನೀರಿಗಾಗಿ ಆ ಜಾಗದಲ್ಲಿ ಬೋರ್ವೆಲ್ ಹಾಕಿಸಲು ಪಾಯಿಂಟ್ ಮಾಡಿಸಿದ್ದೆ. ಬೋರ್ ಕೊರೆಯುವ ಗಾಡಿ ಇಪ್ಪತ್ತು ಮೂವತ್ತು ಅಡಿಯಷ್ಟು ಸಡಿಲವಾದ ಬರೀ ಮರಳು ಬಂದಿದ್ದರಿಂದ ಕೊರೆದು ಒಳಹೋದ ರಾಡುಗಳು ಮೇಲೆ ಬರದೆ ಆಳದಲ್ಲಿ ಹೂತು ಹೋದವು. ಕೆಲವೇ ನಿಮಿಷಗಳಲ್ಲಿ ಆ ರಾಡುಗಳು ಬೋರ್ ಡ್ರಿಲ್ಲಿಂಗ್ ಮಾಡುವಾಗ ಮಾತ್ರ ಕಷ್ಟಪಟ್ಟು ತಿರುಗುತ್ತಾ ಮೇಲಕ್ಕೆ ಬಾರದೇ ಕೇವಲ ಕೆಳಮುಖ ಚಲನೆಯಲ್ಲೇ ಸಾಗುತ್ತಿದ್ದವು. ಗಾಬರಿಯಾದ ಬೋರ್ ನವರು ಇಲ್ಲಿ ಡ್ರಿಲ್ ಮಾಡಲಾಗುವುದಿಲ್ಲ. ಕೊರೆಯುವುದಿಲ್ಲ ಎಂದು ಹೇಳಿ ಮೇಲಕ್ಕೆತ್ತಲು ಹೋದರೆ ಟ್ರಾಕ್ಟರ್ ಟಿಲ್ಲರ್ ಮೇಲೆ ಹಾರುವಂತೆ ಬೋರ್ ಲಾರಿಯೇ ಹಾರುತ್ತಿತ್ತು. ಕೊರೆದ ಮೂವತ್ತು ನಲವತ್ತು ಅಡಿಗಳ ರಾಡುಗಳನ್ನು ಅರ್ಧ ಗಂಟೆ ಕೊಸರಾಡುತ್ತಾ ಬೋರು ಲಾರಿಯನ್ನು ಹಾರಿಸಿ ಹಾರಿಸಿ ಕಷ್ಟಪಟ್ಟು ಕಿತ್ತುಕೊಂಡು ಹೋಗಿದ್ದರು. ಆಮೇಲೆ ತಮಿಳುನಾಡಿನ ಯಾವುದೋ ಬೋರ್ ಗಾಡಿ ಕರೆಸಿ ಬೋರ್ ಕೊರೆಸಿದ್ದೆ. ಒಳ್ಳೆಯ ನೀರುದಕ್ಕಿತ್ತು.
ಈ ಜಾಗದಲ್ಲೇ ಮೊದಲು ಬಹುದಟ್ಟವಾಗಿ ಹರಡಿದ್ದ ಜಾಲಿಗಿಡಗಳು ನಿತ್ಯಹರಿದ್ವರ್ಣದ ಕಾಡಿನ ರೀತಿ ಇತ್ತು. ಅಂದಾಜು ಅರ್ಧ ಎಕರೆ ಜಾಗ ಇರಬಹುದು. ಅಷ್ಟು ಜಾಗದಲ್ಲಿ ದಟ್ಟವಾದ ಜಾಲಿಗಿಡಗಳ ಪೊದೆ. ಜಾಲಿಗಿಡದ ಮೇಲೆಲ್ಲಾ ಅಮೃತಬಳ್ಳಿ ಹಬ್ಬಿದ್ದರಿಂದ ಸುತ್ತಲೂ ಭತ್ತದ ಗದ್ದೆ ಮತ್ತು ಕೆಳಗೆ ಮರಳಿನ ನಿಕ್ಷೇಪ ಇರುವುದರಿಂದ ಬೇಸಿಗೆಯಲ್ಲೂ ತುಂಬಾ ಕೂಲ್ ಕೂಲ್ ಆಗಿಯೇ ಇದ್ದ ಜಾಗ. ಈಗ ಬೋರ್ ವೆಲ್ ಇರುವ ಸ್ಥಳದಲ್ಲಿ ಆಗ ಒಂದು ಹುತ್ತ ಇತ್ತು. ಆಗ ನನಗೊಂದು ಅಭ್ಯಾಸ ಇತ್ತು ಎಲ್ಲಿಯಾದರೂ ಬಹು ತಂಪಾದ ಅಚ್ಚುಮೆಚ್ಚಿನ ಜಾಗ ಎಂದು ಕಂಡು ಬಂದರೆ ಅದು ಅಡವಿಯೋ, ಬಾವಿಯೋ ಮರವೋ ಎಂದು ಬೇಧ ಭಾವ ಮಾಡದೇ ಮಲಗುವುದು.!ಇದು ಮನೆಯವರಿಗೆ ಬಹು ಕಿರಿಕಿರಿಯ ವಿಷಯವಾಗಿತ್ತು. ಅದರಂತೆ ಬಹುಕಾಲ ನಾನು ನನ್ನ ಕೆಲಸ ಕಾರ್ಯಗಳು ಮುಗಿದ ಮೇಲೆ ಈ ನಿತ್ಯಹರಿದ್ವರ್ಣದ ಕಾಡಿನಂತೆ ಸದಾ ಹಸಿರಾಗಿರುವ ಈ ಜಾಗದಲ್ಲಿ ಪೊದೆಗಳ ಒಳಗೆ ಮಲಗುತ್ತಿದ್ದೆ. ಅದೆಷ್ಟೋ ಬಾರಿ ಈ ಜಾಗದಲ್ಲಿ ಕಾಡು ಹಂದಿಗಳು ಮಲಗಿವೆ. ಒಂದು ಬಾರಿ ಒಂದು ಕಾಡು ಹಂದಿ ನಮ್ಮ ಹೊಲದ ನವಣೆ ಮತ್ತು ಸಜ್ಜೆ ಕಿತ್ತುಕೊಂಡು ಹೋಗಿ ಒಕ್ಕಲು ಮಾಡುವ ಹಾಗೆ ರಾಶಿ ಹಾಕಿ ಮರಿಯನ್ನೂ ಹಾಕಿತ್ತು. ಅಂತಹ ಜಾಗ ಅದು. ಆ ಪೊದೆಗೆ ಹೊಂದಿಕೊಂಡಂತೆ ಒಂದು ಹುತ್ತ ಇತ್ತು. ಒಂದು ದಿನ ನಾನು ಅಲ್ಲೇ ಮಲಗಿರುವಾಗ ಬೇರೊಂದು ಜಾತಿಯ ಜೇನುಹುಳುಗಳು ಗುಂಯ್ಗುಡುತ್ತಾ ಬಂದವು. ಬಂದು ಹುತ್ತದ ಸುತ್ತ ತಿರುಗಿ ತಿರುಗಿ ಹುಡುಕುತ್ತಿದ್ದವು. ನಾನು ಹೋಸ ಜೇನು ಕುಟುಂಬ ಹಾರಿ ಬಂದು ಈ ಜಾಗದಲ್ಲಿ ಗೂಡುಕಟ್ಟುತ್ತಾವೆ. ಅದು ಅಲಿಖಿತವಾಗಿ ನನಗೇ ಸೇರಿದ್ದಾಗಿತ್ತು. ಹುತ್ತದ ಬಳಿ ಹಾರಾಡುತ್ತಿದ್ದುದರಿಂದ ಅವು ಏನು ಮಾಡುವವು ಎಂದು ಸುಮ್ಮನೇ ಗಮನಿಸುತ್ತಿದ್ದೆ. ಕೆಲವು ಹುಳುಗಳು ಹುತ್ತದ ಒಳಗಡೆ ಹೋಗಿ ಸ್ಥಳ ಪರೀಶೀಲಿಸಿ ಬಂದು ಬೇರೆ ಹುಳುಗಳಿಗೂ ಹೇಳಿದವು. ನನಗೆ ಸ್ಪಷ್ಟವಾಗಿ ನೆನಪಿದೆ. ಒಳಗೆ ಹೋಗಿ ಬಂದ ರಾಣಿ ಹುಳುಗಳು ಸುರುಳಿ ಸುತ್ತುತ್ತಾ ಗುಂಯ್ಗುಡುವುದನ್ನು ವಿಶೇಷವಾಗಿ ಮಾಡುತ್ತಿತ್ತು. ಆಮೇಲೆ ಇತರ ಹುಳುಗಳು ಹೋಗಿ ಸ್ಥಳ ನೋಡಿಕೊಂಡು ಬಂದವು. ಬಹಶಃ ಗೂಡು ಕಟ್ಟಲು ಸ್ಥಳ ಓಕೆ ಆಗಿರಬೇಕು. ಆಮೇಲೆ ಗುಂಯ್ ಎನ್ನುವ ಶಬ್ಧಕ್ಕೆ ಮತ್ತೆ ಯಾವುದೋ ಕೀ ಆ್ಯಡ್ ಆಗಿ ಎಲ್ಲವೂ ಕುಳಿತುಕೊಳ್ಳುವುದನ್ನು ಸಂಭಾಷಿಸಲು free hand ಲ್ಲಿ ಗಾಳಿಯಲ್ಲಿ ಸೊನ್ನೆ ಸುತ್ತಿದ ಹಾಗೆ ಎಲ್ಲಾ ಹುಳಗಳು ತಿರುಗುತ್ತಾ ತಿರುಗುತ್ತಾ ಮೂರ್ನಾಲ್ಕು ನಿಮಿಷಗಳಲ್ಲಿ ಎಲ್ಲವೂ ಹುತ್ತದ ಒಳಗೆ ಎಲ್ಲೋ ಕುಳಿತುಕೊಂಡವು. ನಾನು ಅಂದು ಆ ಗೂಡಿನ ಬಳಿ ಹೋಗುವುದಾಗಲಿ ಬಗ್ಗಿ ನೋಡುವುದಾಗಲಿ ಮಾಡಲಿಲ್ಲ. ಯಾಕೆ ಅಂತ ಒಂದು interesting ವಿಷಯ ಏನೆಂದರೇ ಈ ಜೇನು ಕುಟುಂಬಗಳು ಹೊಸದಾಗಿ ಗೂಡು ಕಟ್ಟಿದ ಮರುದಿನದಿಂದ ಗೂಡುಕಟ್ಟುವ ಕೆಲಸ ಆರಂಭಿಸುವ ಕೆಲಸ ಮಾಡುತ್ತಾವೆ. ಒಂದು ವೇಳೆ ಅಷ್ಟರೊಳಗೆ ತಮ್ಮ ಗೂಡಿಗೆ ಏನಾದರೂ ಅಪಾಯಕಾರಿ ಎಂಬ ಸಂದೇಹ ಬಂದರೂ ಅವು ಅಲ್ಲಿಂದ ಸ್ಥಳ ಬದಲಾಯಿಸಿ ಅಲ್ಲಿಯೇ ಎಲ್ಲಿಯಾದರೂ ಗೂಡು ಕಟ್ಟುವವು. ಇಂತಹ ಹತ್ತಾರು ಸಂದರ್ಭಗಳನ್ನು ನನ್ನ ಜೇನು ಬದುಕಿನ ಆರಂಭದಲ್ಲಿ ಕಂಡಿದ್ದೇನೆ. ಎಲ್ಲಿಯಾದರೂ ಜೇನು ಹೊಸ ಸ್ಥಳದಲ್ಲಿ ಕುಳಿತುಕೊಂಡ ಕೆಲವೇ ಸಮಯದಲ್ಲಿ ತುಪ್ಪ ಇದೆಯೇ ಎಂದು check ಮಾಡಿದಾಗ ಅಪಾಯ ಅರಿತ ಅವುಗಳು ಸ್ಥಳ ಬದಲಾಯಿಸಿದ ಹತ್ತಾರು ಉದಾಹರಣೆಗಳು ನಾನು ಕಂಡಿದ್ದೇನೆ. ಆದರೆ ಎರಡ್ಮೂರು ದಿನಗಳು ಗೂಡುಕಟ್ಟುವ ಕೆಲಸ ಆರಂಭಿಸಿ ಮೊಟ್ಟೆಗಳನ್ನು ಇಟ್ಟ ನಂತರ ಅಪಾಯಕಾರಿ ಎಂದೆನಿಸಿದರೂ ಅವು ಗೂಡು ಬದಲಾಯಿಸದೇ ಶತ್ರುವಿನ ವಿರುದ್ಧ ಅವು ಹೋರಾಡುವವು. ಆನಂತರದ ದಿನಗಳಲ್ಲಿ ನಾನು ಜೇನಿನ ರಚನೆಯನ್ನೇ ನೋಡಿ ಇದರ ಸಾಧಾರಣ ವಯಸ್ಸನ್ನು ಅಂದಾಜಿಸುತ್ತಿದ್ದೆ. ಇದೆಲ್ಲದರ ಅನುಭವ ಇದ್ದ ನನಗೆ ನಾನು ಆ ಹುತ್ತದ ಬಳಿ ಹೋಗಿ ನೋಡಲಿಲ್ಲ. ಆಮೇಲೆ ನಾಲ್ಕೈದು ದಿನಗಳ ನಂತರ ಹೋಗಿ ನೋಡಿದೆಯಾದರೂ ಹುಳುಗಳ ಓಡಾಟ ಬಿಟ್ಟರೆ ಜೇನುಗೂಡಿನ ರಚನೆ ನನ್ನ ಕಣ್ಣಿಗೆ ಬೀಳಲಿಲ್ಲ.
ಒಂದೂವರೆ ತಿಂಗಳ ನಂತರದಲ್ಲಿ ಅಂದು ಹುತ್ತ ಬಗೆದಾದರೂ ಜೇನು ತೆಗೆಯಲು ನಿರ್ಧರಿಸಿ ಸಲಿಕೆ ಮತ್ತು ಹಾರೆ ತೆಗೆದುಕೊಂಡು ಹೋದೆ. ಜೇನು ತುಂಬಿಕೊಂಡು ಬರಲು ಒಂದು ತಟ್ಟೆಯನ್ನೂ ತೆಗೆದುಕೊಂಡು ಹೋಗಿದ್ದೆ. ಸಲಿಕೆ ಹಾರೆ ಬಳಸಿ ತೋಡಿ ಒಂದಷ್ಟು ಜೇನು ಕಾಣುವ ಹಾಗೆ ಮಾಡಿದೆ. ನಾನು ಸಾಮಾನ್ಯವಾಗಿ ಕೀಳುತ್ತಿದ್ದ ಹುಳುಗಳಂತೆ ಇವು ಇರಲಿಲ್ಲ. ಗಾತ್ರದಲ್ಲಿ ಇವು ನಾನು ರೆಗ್ಯೂಲರ್ ಆಗಿ ನೋಡುತ್ತಿದ್ದ ಹುಳುಗಳಿಗಿಂತ ಇವು ದೊಡ್ಡವು. ಬಣ್ಣವೂ ಕೂಡ ಇವು ಕೆಂಪು ಮಣ್ಣಿನ ಬಣ್ಣವನ್ನು ಹೋಲುತ್ತಿದ್ದವು. ಹುತ್ತದ ಗೋಡೆಗೆ ಗೂಡು ಕಟ್ಟಿದ್ದು ಹುತ್ತದ ಮಣ್ಣಿಗೂ ಹುಳುಗಳಿಗೂ ಯಾವುದೇ ದೊಡ್ಡ ವ್ಯತ್ಯಾಸ ಕಾಣಲಿಲ್ಲ.. ಜೇನು ಹುತ್ತದ ಮಣ್ಣು ಎರಡೂ ಒಂದೇ ತರ ಕಾಣುತ್ತಿದ್ದವು. ಅಷ್ಟೊತ್ತಿಗೆ ನನ್ನ ಸಲಿಕೆ ಹಾರೆಯ ಹೊಡೆತಗಳಿಗೆ ಹುತ್ತದಲ್ಲಿದ್ದ ಜೇನುಗೂಡಿನ ಹುಳುಗಳೆಲ್ಲಾ ಕೆರಳಿದ್ದವು. ಗುಂಡಿನಂತೆ ಹಾರಿ ಬಂದು ಪಟ ಪಟನೇ ಕಚ್ಚಿ ಕಚ್ಚಿ ಹೋಗುತ್ತಿದ್ದವು. ಕೈ ಹಾಕಿ ಸೊಳ್ಳೆಯಂತೆ ಅವುಗಳನ್ನು ಬಡಿದರೂ ಸಾಯುತ್ತಿದ್ದವಾದರೂ ಸಾಯುವೊಷ್ಟತ್ತಿಗಾಗಲೇ ಅವು ಕಚ್ಚಿರುತ್ತಿದ್ದವು... ಜೇನುಗೂಡು ಹುತ್ತದಲ್ಲಿದ್ದುದಕ್ಕೂ, ಆ ಹುಳುಗಳು ಬೇರೆಯೇ ಪ್ರಭೇದ ಆಗಿದ್ದುದರಿಂದ ಜೇನುಹುಳಗಳನ್ನು ಕಂಟ್ರೋಲ್ ಮಾಡಿ ಸುರಕ್ಷಿತವಾಗಿ ಜೇನು ತೆಗೆಯಲು ಹಿಡಿತ ಸಿಗಲಿಲ್ಲ.. ಆರಂಭದ ಕೆಲವೇ ಸೆಂಕೆಂಡ್ ಗಳಲ್ಲಿ ಆರೇಳು ಹುಳುಗಳು ಮುಖ, ಕೈ ತೊಡೆ ಕಾಲು ಕಾಲ್ಬೆರಳು ಹೀಗೆ ಎಲ್ಲಿ ಸಿಕ್ಕ ಸಿಕ್ಕಲ್ಲಿಗೆ ಕಚ್ಚಿದ್ದವು. ಕೋಲು ಜೇನುಹುಳುಗಳು ಕೇವಲ ಕೈ ಮುಖ ತಲೆ ಭಾಗಕ್ಕೆ ದಾಳಿ ಮಾಡುತ್ತಿದ್ದವು. ಆದರೆ ಇವು ಇರುವೆಗಳಂತೆ ಕಾಲ್ಬೆರಳು ಮೀನಖಂಡ ಮೊಣಕಾಲು ಹೀಗೆ ಎಲ್ಲೆಂದರಲ್ಲಿ ಕಚ್ಚಿ ನಖ ಶಿಖಾಂತ ಹಿಂದೆ ಮುಂದೆ ಪರಚಿ ಕೊಳ್ಳುವಂತಾಗಿತ್ತು. ಅಂದೇ ನಾನು ನನ್ನ ಜೇನಿನ ಬದುಕಿನಲ್ಲಿ ಅತಿ ಹೆಚ್ಚಿನ ಹುಳುಗಳಿಂದ ಕಚ್ಚಿಸಿಕೊಂಡಿದ್ದು. ಇವುಗಳು ಕಚ್ಚಿದ ತೀವ್ರತೆ ಕೋಲು ಜೇನುಗಳಿಗಿಂತ ಅಧಿಕ.. ಹೆಜ್ಜೇನುಗಳಿಗಿಂತ ಕಡಿಮೆ.. ಉರಿ ಮತ್ತು ಬಾವು ಮದ್ಯಮ ರೀತಿಯಲ್ಲಿ ಇರುತ್ತದೆ. ಇವೇ ತುಡುವೇ ಜೇನು.. ಇವುಗಳನ್ನೇ ಪಳಗಿಸಿ ಅವುಗಳಿಗೆ ಪೆಟ್ಟಿಗೆ frame ಇಟ್ಟು ಇಂದು ಜೇನು ಕೃಷಿಮಾಡುತ್ತಿರುವುದು. ಇಂದು ಎಲ್ಲಾ ಅಂಗಡಿ ಮಾರುಕಟ್ಟೆಗಳಲ್ಲಿ ದೊರಕುವ ಜೇನುತುಪ್ಪ ಇದೇ ತುಡುವೇ ಜೇನಿನಿಂದ ಆದದ್ದು. ಹಿಂದೆ ಈ ಜೇನುಗಳು ಹುತ್ತ ಮರದ ಪೊಟರೆಗಳಲ್ಲಿ ಕತ್ತಾಳಿ ಗುಮ್ಮಿಗಳಲ್ಲಿ ಬೆಟ್ಟಗುಡ್ಡಗಳ ಸಂದುಗಳಲ್ಲಿ ಕೋಟೆ ಕೊತ್ತಲಗಳ ಸಂದುಗಳಲ್ಲಿ ಗೂಡುಕಟ್ಟುತ್ತಿದ್ದವು. ಏಳು ತಲೆ ಜೇನು ಎಂತಲೂ ಕರೆಯುತ್ತಿದ್ದರು. ಎಂಟ ಹತ್ತು ಪದರಗಳಲ್ಲಿ ಎರಿಗಳನ್ನು ಸಾಲಿಗೆ ಕಟ್ಟಿ ತುಪ್ಪವನ್ನು ಶೇಖರಿಸುತ್ತಾ ಸಂತಾನೋತ್ಪತ್ತಿ ಮಾಡುತ್ತಾವೆ. ಕೋಲು ಜೇನುಗಳಲ್ಲಿ ಮತ್ತು ಹೆಜ್ಜೇನುಗಳಲ್ಲಿ ತಲೆಯ ಭಾಗದಲ್ಲಿ ಮಾತ್ರ ತುಪ್ಪ ಶೇಖರಿಸುತ್ತಾವೆ. ಆದರೆ ತುಡುವೆ ಜೇನು ಜೇನು ರೊಟ್ಟಿಯ ತುಂಬೆಲ್ಲಾ ಎರಡೂ ಸೈಡ್ ತುಪ್ಪ ಸಂಗ್ರಹಿಸುವುದು ವಿಶೇಷ. ಅದಕ್ಕಾಗಿಯೇ ಇವುಗಳನ್ನು ಕೃಷಿಲಾಭಕ್ಕೆ ಬಳಸಿಕೊಳ್ಳುತ್ತಿರುವುದು. ಕೋಲು ಜೇನು ಮತ್ತು ಹೆಜ್ಜೇನಿಗೆ ಹೋಲಿಸಿದರೆ ಇವುಗಳ ಸಂತಾನೋತ್ಪತ್ತಿ ಪ್ರಮಾಣ ಕಡಿಮೆಯೇ. ಇವು ಕಾಡು, ಅಡವಿಯಲ್ಲಿರುವವು Wild ಆಗಿಯೇ ಇರುತ್ತಾವೆ. ತರಬೇತಿ ಇಲ್ಲದೇ ಜೇನು ಕೀಳುವವರು ಗಂಭೀರ ಸ್ವರೂಪದ ಪರಿಣಾಮವನ್ನು ಎದುರಿಸಬೇಕಾಗಬಹುದು ಎಚ್ಚರಿಕೆಯಿಂದ ಇರುವುದು ಒಳಿತು.
ಹೆಜ್ಜೇನು :
ಹಿರಿದು + ಜೇನು = ಹೆಜ್ಜೇನು ಎಂದು ಆಗಿರುವುದರಿಂದ ಹೆಸರೇ ಹೇಳುವಂತೆ ಈ ಹುಳುಗಳು ಗಾತ್ರದಲ್ಲಿ ದೊಡ್ಡವು. ಇವು ಸಾಮಾನ್ಯವಾಗಿ ಎತ್ತರದ ಮರ/ಕಟ್ಟಡ, ಗುಡ್ಡದ ಬಂಡೆಗಲ್ಲುಗಳ ಅಂಚಿಗೆ ಗೂಡುಕಟ್ಟುವವು. ಇವು ಶತ್ರುಗಳ ಧಾಳಿಯಾದಾಗ ಪ್ರಚಂಡ ರೋಷದೊಂದಿಗೆ ಶತಗತಾಯ ಕಚ್ಚಲೇಬೇಕೆಂದು ಧಾಳಿ ಮಾಡುವವು. ಇವುಗಳು ಕಚ್ಚಿದರೆ ಅಪಾಯ ಹೆಚ್ಚು. ವರ್ಷಕ್ಕೆ ಹತ್ತಾರು ಜನ ಹೆಜ್ಜೇನು ಧಾಳಿಯಿಂದ ಮರಣಹೊಂದಿದ ಸುದ್ದಿಗಳನ್ನು ನಾವು ಆಗಾಗ ಸುದ್ದಿ ಸಮಾಚಾರಗಳಲ್ಲಿ ಕೇಳುತ್ತಿರುತ್ತೇವೆ. ಹೌದು ಇವು ಯಮಸ್ವರೂಪಿ ಹುಳುಗಳೇ..! ಹೆಜ್ಜೇನುಗಳು ದಾಳಿ ಮಾಡಿದರೆ ಇವುಗಳಿಂದ ತಪ್ಪಿಸಿಕೊಳ್ಳಲು ಯಾವ ಅವಕಾಶವೂ ಇಲ್ಲ. ಬಾವಿ ಕೆರೆ ನೀರಿಗೆ ಹಾರಿದರೂ ಶತ್ರುವನ್ನು ಕಾದಿದ್ದು ಕಚ್ಚಿಬರುತ್ತಾವೆ. ಅದು ಒಂದಲ್ಲ.. ನೂರಾರು ಸಂಖ್ಯೆಯಲ್ಲಿ..!!ಆದರೂ ಹೆಜ್ಜೇನುಗಳನ್ನು ಬೆಂಕಿ, ಹೊಗೆ ಹಾಕಿ ಹಿಂಸಿಸಿ ಕೆಲವು ಪ್ರಳಯಾಂತಕರು ತುಪ್ಪ ತೆಗೆಯುತ್ತಾರೆ. ಇದರ ತುಪ್ಪ ಇತರ ಜೇನು ತುಪ್ಪಗಳಿಗಿಂತ ಮಧುರ, ಮೃದುವಾಗಿ ಇರದೇ ಗಟ್ಟಿಯಾಗಿದ್ದು, ತುಪ್ಪ ಸ್ವಲ್ಪ ಕಾರ ಮತ್ತು ಗರಂಮಸಾಲ ಮಿಕ್ಸ್ ಆದಂತೆ ಘಾಟು ಇರುತ್ತದೆ. ಹೆಚ್ಚು ತಿಂದರೆ ಹೊಟ್ಟೆಯಲ್ಲಿ ಸಂಕಟವಾಗುವುದು. ಈ ಜೇನುಗಳಲ್ಲಿ ಹತ್ತು ಇಪ್ಪತ್ತು ಕೆಜಿ ತುಪ್ಪ ಸಿಗುವುದು. ಆದರೆ ಇವುಗಳನ್ನು ಬಿಡಿಸಲು ವಿಶೇಷ ತರಬೇತಿ ಮತ್ತು ರಕ್ಷಣಾ ಉಪಕರಣಗಳು ಅಗತ್ಯ. ಹೆಜ್ಜೇನು ಗೂಡುಗಳಿಗೆ ಬೆಂಕಿಹಾಕಿ ಅವುಗಳ ಸುಟ್ಟು ಜೇನು ತೆಗೆಯುವುದು ಸಾಮಾನ್ಯ. ಕೋಲು ಜೇನಿನಲ್ಲಿ ಹಾಲಿನಂತಹ ಬಾಲ ಹುಳುಗಳ ರೊಟ್ಟಿಯನ್ನು ತಿನ್ನುವ ಹಾಗೆ ಹೆಜ್ಜೇನುಗಳ ರೊಟ್ಟಿಯನ್ನು ತಿನ್ನಲು ಬಾರದು. ಇದರ ಕೋಶಗಳನ್ನು ಬಹಳ ಗಡುಸಾದ ಒರಟು ಮೇಣದಿಂದ ನಿರ್ಮಿಸಿರುತ್ತಾವೆ. ಇದರ ಗೂಡುಗಳನ್ನು ಸುಟ್ಟು ಹಾಕಿದ್ದರಿಂದಲೇ ಹೆಜ್ಜೇನಿನ ಪ್ರಮಾಣ ಕಡಿಮೆಯಾಗಿರುವುದು. ಹೆಜ್ಜೇನುಗಳು ಸಾಂಘಿಕವಾಗಿ ಹತ್ತಾರು ಮನೆಗಳನ್ನು ಒಂದೇ ಕಡೆ ನಿರ್ಮಿಸಿ ಗ್ರಾಮ ನಿರ್ಮಿಸಿಕೊಳ್ಳುವ ಹಾಗೆ ಒಂದೇ ಮರದಲ್ಲಿ ಐವತ್ತು- ನೂರು ಹೆಜ್ಜೇನು ಗೂಡು ಕಟ್ಟಿರುವುದನ್ನು ಬೆಂಗಳೂರಿನ ಲಾಲ್ ಬಾಗ್ ಮತ್ತು ಕುದುರೆಮುಖ ಅರಣ್ಯಗಳಲ್ಲಿ, ಹಾಗೂ ಚನ್ನಗಿರಿ ಭದ್ರಾವತಿಯ ಮದ್ಯದ ಅರಣ್ಯಗಳಲ್ಲಿ ಹಾಗೂ ಯಾಣದಲ್ಲೂ ಇತರೆ ಅನೇಕ ಕಡೆಗಳಲ್ಲಿ ನಾನು ನೋಡಿದ್ದೇನೆ.
ಇನ್ನೂ ಜೇನುಗಳ ಹುಟ್ಟು ದಕ್ಷಿಣ ಆಫ್ರಿಕಾ ಅಮೇಜಾನ ನಂತಹ ಬೃಹತ್ ಕಾಡಿನಲ್ಲಿ ನಾವು ಇದುವರೆಗೂ ಕೇಳಿರದ ಕಂಡಿರದ ಜೇನು ಸಮೂಹ ಇದ್ದಾವೆ. ಬಹುಶಃ ಇಲ್ಲಿನವರೂ ಆಕಡೆ ಹೋಗಿ ಅವುಗಳನ್ನು ಪತ್ತೆ ಮಾಡಿಲ್ಲ. ಅಲ್ಲಿನ ವಾತಾವರಣ ಬಿಟ್ಟು ಅವೂ ಬೇರೆ ಕಡೆ ಬರದೇ ನಿಗೂಢವಾಗಿಯೇ ಉಳಿದಿವೆ. ಸಾಮಾನ್ಯವಾಗಿ ಜೇನು ಹುಳುಗಳು ತೊಂದರೆ ಕೊಟ್ಟರೆ ಅಟ್ಟಾಡಿಸಿಕೊಂಡು ಕಚ್ಚುವವು. ಆದರೆ ಅಮೇಜಾನ್ ನ ಕೆಲವು ಜಾತಿಯ ಜೇನುಹುಳುಗಳು ಅವುಗಳಿಗೆ ತೊಂದರೆ ಕೊಡದಿದ್ದರೂ ಅವುಗಳಿಗೆ ಶತ್ರುಗಳೆಂದು ಸಂದೇಹ ಬಂದರೂ ಧಾಳಿ ಮಾಡಿ ಮಾರಣಾಂತಿಕವಾಗಿ ಕಚ್ಚುವಂತಹ ಜೇನು ಹುಳುಗಳೂ ಇದ್ದಾವೆ.
(ಮುಗಿಯಿತು)
-ನಾಗೇಂದ್ರ ಬಂಜಗೆರೆ, ಬಳ್ಳಾರಿ
ಸಾಂದರ್ಭಿಕ ಚಿತ್ರ : ಇಂಟರ್ನೆಟ್ ತಾಣ