ಜೇನಿನ ಹಿಸ್ಟರಿಯಲ್ಲೊಂದು ಕಳ್ಳನ ಮಿಸ್ಟರಿ...! (ಭಾಗ 1)

ಜೇನಿನ ಹಿಸ್ಟರಿಯಲ್ಲೊಂದು ಕಳ್ಳನ ಮಿಸ್ಟರಿ...! (ಭಾಗ 1)

ಮುದ್ದಿನ ಮಗಳು ತನೇಹಾಳ ಜನನವಾಗಿತ್ತು. ಬಳ್ಳಾರಿಯ ಬಿಸಿಲು ಮತ್ತು ಧೂಳಿಗೆ ಬೇಸತ್ತು ಟೂ ವೀಲರ್ ಬದಲು ಯಾವೂದಾದರೂ ಸೆಕೆಂಡ್ ಹ್ಯಾಂಡ್ ಕಾರ್ ಕೊಳ್ಳುವ ನಿರ್ಧಾರ ಮಾಡಿದ್ದೆ. ಗೆಳೆಯ ಜೇಮ್ಸ್ ಗೆ ಕರೆಮಾಡಿ ವಿಚಾರಿಸಿದೆ. ಜೇಮ್ಸ್ ನ ಮತ್ತೊಬ್ಬ ಗೆಳೆಯ ಹಿರಿಯೂರಿನಲ್ಲಿ ಕಾರ್ ಗ್ಯಾರೇಜ್ ಮಾಲಿಕ ಶ್ರೀಧರ್ ಅವರನ್ನು ಸಂಪರ್ಕಿಸಿದಾಗ ಬರ್ರಿ ಬ್ರದರ್ ನೋಡೋಣ ಎಂದು ಹೇಳಿದ್ದರು.

2014 ನೇ ಇಸವಿಯ ಮಾರ್ಚ್ ತಿಂಗಳಲ್ಲಿ ಒಂದಷ್ಡು ದುಡ್ಡು ಹಿಡಿದುಕೊಂಡು ಹಿರಿಯೂರಿನ ಜೇಮ್ಸ್ ಮನೆಗೆ ಬಂದೆ. ಜೇಮ್ಸ್ ನನ್ನ ಹಳೆಯ ಸ್ನೇಹಿತ. ನಾನು ಮನೆಗೆ ಹೋದ ಸಂಭ್ರಮಕ್ಕೆ ವೆರೈಟಿ ವೆರೈಟಿ ಎರಡೆರಡು ತಿಂಡಿ, ಮಿರ್ಚಿ ಬೋಂಡ ಮಿಕ್ಚರ್ ಐಟಮ್ಸ್ ಮಾಡಿಸಿದ್ದ. ಇಬ್ಬರೂ ತಿಂಡಿಯನ್ನೇ ಊಟದಂತೆ ಹೊಟ್ಟೆತುಂಬಾ ಮಾಡಿ ಶ್ರೀಧರ್ ಗ್ಯಾರೇಜ್ ಬಳಿ ಬಂದೆವು. ನಮ್ಮ ಬಜೆಟ್ ಇಷ್ಟು ಎಂದು ಹೇಳಿದ್ದಕ್ಕೇ ಅವರು ಯಾರ್ ಯಾರಿಗೋ ಕಾಲ್ ಮಾಡಿ ಇಂಥಾ ಬಜೆಟ್ ಗೆ ಒಂದು ಕಾರು ಬೇಕು ವಿಚಾರಿಸಿದರು. ಅದಕ್ಕೆ ಅಮರಾಪುರದಲ್ಲಿ ಒಂದು ಕಾರ್ ಇದೆ, ಆದರೆ ಯಾವುದೋ ಪಾರ್ಟಿ ನೋಡಿಹೋಗಿದ್ದಾರೆ ಸಂಜೆಗೆ ಪೈನಲ್ ಮಾತು ತಿಳಿಸುವೆವು ಎಂದು ಹೇಳಿದ್ದರಿಂದ ಸಂಜೆ ನೋಡುವ ಬಿಡಿ ಜೇಮ್ಸ್ ಎಂದು ಹೇಳಿ ಬೈಕ್ ಹತ್ತಿ NH-4 ಹೈವೇ ಹಿಡಿದೆವು.

ಜೇಮ್ಸ್ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಂಡು ಪಾದ್ರಿಯೂ ಆಗಿದ್ದುದ್ದುದರಿಂದ ಅವರ ಚರ್ಚಿನ ಸದಸ್ಯರೊಬ್ಬರು ಹೈವೇ ಪಕ್ಕ ಹೊಸದಾಗಿ ಆರಂಭ ಆಗಬೇಕಿದ್ದ ಹೋಟೆಲ್ ನ್ನು ಹೋಟೇಲ್ ನವರ ಚರ್ಚಿನ ಪಾದ್ರಿಯೂ ಆಗಿದ್ದ ಜೇಮ್ಸ್ ಉದ್ಘಾಟನೆ ಮಾಡಬೇಕಿತ್ತು. ಪೂರ್ವ ನಿರ್ಧರಿತ ಯೋಜನೆಯಂತೆ ಬಾ ಇಲ್ಲಿ ಒಂದು ಹೋಟೆಲ್ opening ceremony ಇದೆ ಹೋಗೋಣ ಎಂದು ಇಬ್ಬರೂ Pulsar ಬೈಕ್ ಹತ್ತಿ ಹೊರಟೆವು. ಹಿರಿಯೂರಿನಿಂದ ಸಾಣೆಕೆರೆಗೆ ಬರುವ ರಸ್ತೆ ಮಗ್ಗುಲಲ್ಲಿ ಅನೇಕ ಲಂಟಾನ ಗಿಡದ ಪೊದೆಗಳು ತುಂಬಾ ಇವೆ. ಗಾಡಿಯಲ್ಲಿ ಬರುತ್ತಿದ್ದಾಗ ಜೇಮ್ಸ್ ಗಾಡಿ ನಿಲ್ಸು.. ಜೇನು ಇದೆ ಎಂದೆ.. 70-80 ರ ವೇಗದಲ್ಲಿ ಇದ್ದ ಗಾಡಿ ನಾನೇನೊ ಹೇಳಿದ್ದು ಕೇಳದೇ ನಾನೇನು ಹೇಳುತ್ತಿದ್ದೇನೆ ಎಂದು ನಿಧಾನವಾಗಿ ಬ್ರೇಕ್ ಹಾಕುತ್ತಾ ನಿಲ್ಲಿಸಿದ.‌

ಏನು ಮಾಷ್ಟ್ರೇ ? ಏನೋ ಹೇಳಿದೆಯಲ್ಲಾ?

ಜೇಮ್ಸ್ ಹಿಂದೆ ಒಂದು ಗಿಡದಲ್ಲಿ ಜೇನು ಇದೆ..

ಹ್ಞಾಂ...ಜೇನಾ...? ಯಾವ ಗಿಡದಲ್ಲಿ? ಎಂದು ಇವನದು ಜೇನಿನ ಭ್ರಮೆ.. ಇಷ್ಟು ಸ್ಪೀಡ್ ಲ್ಲಿ ಹೋಗುವಾಗ ಜೇನು ಕಾಣಿಸಿತಾ ಇವನಿಗೆ ಎನ್ನುವ ರೀತಿಯಲ್ಲಿ' ಬಾ ನೋಡಾನಾ...' ಎಂದು ಗಾಡಿ ತಿರುಗಿಸಿದ...

ನಿಲ್ಲು... ನಿಲ್ಲು... slow... ಅಗೋ ಆ ಗಿಡದಲ್ಲಿ ಇದೆ ನೋಡು...

ಎಲ್ಲಿದೆ ಮಾಸ್ಟ್ರೇ?? ಎಂದು ಪಿಳಿ ಪಿಳಿ ನೋಡುತ್ತಿದ್ದ.

ಏ ಆ ಗಿಡದಲ್ಲಿ ಕರ್ರಗೆ ಕಾಣಿಸುತ್ತಿದೆ ಅಲ್ಲ ಮಾರಾಯ... ನಿನಗೆ ಕಾಣಿಸುತ್ತಿಲ್ಲವೇ?

ಹ್ಞೂಂ ಹು... ಕಾಣ್ತಾ ಇಲ್ಲ...

ಗಾಡಿಯಲ್ಲೇ ಕುಳಿತಿದ್ದ ನಾನು ಕೆಳಗಿಳಿದು ಬಾ ಇಲ್ಲಿ ಎಂದು ರಸ್ತೆ ಇಳಿದು ಲಂಟಾನ ಗಿಡದ ಸಮೀಪಕ್ಕೆ ಇಬ್ಬರೂ ಬಂದೆವು. ತೋರು ಬೆರಳ ತೋರಿಸಿ ಹೇಳಿದೆ ಕಾಣ್ತಿದೆಯಾ ಈಗ?

ಹೌದಲ್ಲೋ... ಅಬ್ಬಬ್ಬಾ !

ನಿನ್ನವೇನು ಕಣ್ಣೊ... ಇಷ್ಟು ಸ್ಪೀಡ್ ಆಗಿ ಹೋಗುವಾಗ ಇದು ನಿನ್ನ ಕಣ್ಣಿಗೆ ಬಿದ್ದಿದೆಯಲ್ಲಾ? ನನಗೆ ನಿಂತು ನೋಡಿದರೂ ಕಾಣ್ತಾ ಇಲ್ಲ... ಲೇ... ಅಬ್ಬಾ ಬ್ಬಾ... ಎಂದು ಜೇಮ್ಸ್ ನನ್ನ ಮುಖ ಮುಖ ನೋಡುತ್ತಿದ್ದ.

ಅಲ್ಲೇ ಬಿದ್ದಿದ್ದ ಸೊಪ್ಪೆದಂಟೊಂದನ್ನು ತೆಗೆದು ತುಪ್ಪದ ಇರುವಿಕೆ ಪರೀಕ್ಷಿಸಿದೆ. ನಿನ್ನೆಯೋ ಮೊನ್ನೆಯೋ ಕುಳಿತ ಹುಳುಗಳು ಅಂಡಾಕಾರವಾಗಿ ಕೂತಿವೆ. ಜೇನಿನ ರೊಟ್ಟಿಯನ್ನು ಕಟ್ಟಿದ್ದರೆ ಅಗಲವಾಗಿ ಕಾಣುತ್ತದೆ. ಕೆಲವೇ ದಿನಗಳ ಹಿಂದೆ ಕುಳಿತಿದ್ದರೆ ಗುಪ್ಪಗೆ ಒಂದರ ಕಾಲೊಂದನ್ನು ಜಾಲದಂತೆ ಹಿಡಿದುಕೊಂಡು ಗುಪ್ಪಗೆ ಮೊಟ್ಟೆಯಾಕಾರದಲ್ಲಿ ಕುಳಿತ್ತಿರುತ್ತಾವೆ. ದಿನಕಳೆದಂತೆ ಗೂಡು ರಚನೆಯಾದ ಮೇಲೆ ಒಂದರ ಕಾಲು ಒಂದು ಹಿಡಿದು ಕೊಳ್ಳದೇ ಸ್ವತಂತ್ರವಾಗಿ ಜೇನು ತಟ್ಟಿಯ ತುಂಬೆಲ್ಲಾ ಓಡಾಡುತ್ತಾವೆ.

ಜೇಮ್ಸ್ ಜೇನು ತುಪ್ಪ ಇಲ್ಲ... ನಿನ್ನೆಯೋ ಮೊನ್ನೆಯೋ ಇಲ್ಲಿ ಬಂದು ಕುಳಿತಿವೆ. ಕೀಳಲಾ ಎಂದೆ...

ಜೇಮ್ಸ್ ; ಹೇ.."ತುಪ್ಪ ಇಲ್ಲ ಅಂದ್ರೆ ಸುಮ್ ಸುಮ್ಮನೇ ಯಾಕೆ ಕೀಳ್ತೀಯಾ?? ಬೇಡ ಬಾ ಅಲ್ಲಿ ಹತ್ತು ಗಂಟೆಗೆ ಹೋಟಲ್ ಓಪನಿಂಗ್ ಗೆ ಹೇಳಿದ್ರೂ... ಈಗಾಗಲೇ ಹನ್ನೊಂದು ಕಾಲು ಬಾ ಹೊಗೋಣ ಟೈಮ್ ಆಗತ್ತೆ ಬಾ ಗಾಡಿ ಹತ್ತು ಹೋಗೋಣ ಎಂದನು...

ಬೇಗನೇ ಹೋಗಬೇಕಾಗಿದ್ದುರಿಂದ ಅದನ್ನು ಹಾಗೆ ಬಿಟ್ಟು ಬೈಕು ಹತ್ತಿದೆ. ಜೇಮ್ಸ್ ಗೆ ನನ್ನ ಈ ಜೇನು ಕೀಳುವ ಕಸುಬಿನ ಬಗ್ಗೆ ಗೊತ್ತಿರಲಿಲ್ಲ. ಅವನು ನನಗೆ ಸಿಟಿಯಲ್ಲೇ ಪರಿಚಯ ಆದುದ್ದರಿಂದ ನಮ್ಮ ಹಳ್ಳಿಯ ಸೊಗಡಿನ ಕಸುಬು ಪರಿಚಯಿಸುವ ಸಂದರ್ಭ ಬಂದಿರಲಿಲ್ಲ. ದಿಢೀರನೇ ಇಂದು ವೇಗವಾಗಿ ಹೋಗುವಾಗಲೇ ಜೇನನ್ನು ಗುರುತಿಸಿದ್ದುದುದರಿಂದ ಜೇಮ್ಸ್ ಗೆ ಅಚ್ಚರಿಯೂ, ಪ್ರಶ್ನಾರ್ಥಕವೂ ಆಗಿತ್ತು.

ಅಲ್ಲಿ ಹೋಟೆಲ್ ópening ಉತ್ಸವಕ್ಕೆ ಜೇಮ್ಸ್ ನ ಆಗಮನಕ್ಕಾಗಿಯೇ ಕಾಯುತ್ತಿದ್ದ ಹತ್ತಿಪ್ಪತ್ತು ಜನ ನಾವು ಹೋದ ತಕ್ಷಣವೇ ಅವರ ಕ್ರಿಶ್ಚಿಯನ್ ಧರ್ಮದಂತೆ ಪ್ರಾರ್ಥನೆ ಮಾಡಿದರು. ನನಗೆ ಈ ಪ್ರಾರ್ಥನೆಗಳ ಹಾಡಲು ಬಾರದೆ ಇದ್ದುದರಿಂದ ನಾನು ಕೇವಲ ಮೂಕನಂತೆ ಹಾಜರಿ ಇದ್ದೆ. ಅದಾದ ನಂತರ ನಾನು ಮತ್ತು ಜೇಮ್ಸ್ ಇಬ್ಬರೂ ಟೇಪ್ ಕಟ್ ಮಾಡುವುದರ ಮೂಲಕ ವಿದ್ಯುಕ್ತವಾಗಿ ಹೋಟೆಲ್ ಉದ್ಘಾಟನೆ ಮಾಡಿಬಿಟ್ಟೆವು. ಒಳಗಡೆ ಹೋಗಿ ಸುತ್ತಲೂ ನೋಡಿ ಕಿಚನ್ ಅಲ್ಲಿ ಲುಂಗಿ ಟವೆಲ್ ಹಾಕಿ ನಿಂತಿದ್ದ ಸಾಧಾರಣ ಎತ್ತರದ ಒಬ್ಬ ವ್ಯಕ್ತಿಯನ್ನು "ಏನ್ ಕೆಂಚಣ್ಣ ಅರಾಮಿದ್ದೀಯಾ?" ಎಂದು ಜೇಮ್ಸ್ ಕೇಳಿದ.

"ಹ್ಞೂ ಪಾಸ್ಟರ್ ಅರಾಮಿದ್ದೀನಿ.."

ಈ ಜೇಮ್ಸ್ ಮಾತಾಡಿಸಿದ ಕೆಂಚಪ್ಪನೇ ಈ ಹೋಟೆಲ್ ನ ಮುಖ್ಯ ಬಾಣಸಿಗ... ಭಟ್ಟ...

ಜೇಮ್ಸ್: ಏನ್ ಮಾಡೀರಾ ಭಟ್ರೆ ಉಣ್ಣಾಕೆ ?

ಭಟ್ಟ: ಚಿಕನ್ ಬಿರಿಯಾನಿ, ಕಬಾಬ್ ಪಾಸ್ಟ್ರೇ..

ಬಿರಿಯಾನಿ ಪಾತ್ರೆಯ ಮುಚ್ಚಳ ಸರಿಸಿ ಎಂಟತ್ತು ಅಗುಳು ಬಾಯಲ್ಲಿ ಹಾಕಿ ನೋಡಿ ಅಗೆದು ನುಂಗಿ ಹ್ಞೂ... ಚೆನ್ನಾಗಿ ಮಾಡಿಯಾ ಎಂದು ಜೇಮ್ಸ್ ಹೇಳಲು ಕುತ್ಕೋಳಿ ಪಾಸ್ಟರೇ ಊಟ ಮಾಡುವಿರಂತೆ ಎಂದು ವಾಟರ್ ಬಾಟಲ್, ಪ್ಲೇಟ್ ಕೊಟ್ಟು ನಮ್ಮಿಬ್ಬರನ್ನು ಕೂರಿಸಿದರು.

ಜೇಮ್ಸ್: ಕೆಂಚಣ್ಣ ಬಾರಪ್ಪ ಇಲ್ಲಿ ಎಂದು ಕರೆದ.

ಕೆಂಚಣ್ಣ: 'ಹೇಳಿ ಪಾಸ್ಟರೇ ..' ಎಂದು ವಿನಮ್ರವಾಗಿ ಬಂದು ನಿಂತರು.

ಜೇಮ್ಸ್ : ಮೇಷ್ಟ್ರೆ.. ಇವನು ಯಾರ್ ಗೊತ್ತಾ?

ನಾನು; ಕೆಂಚಪ್ಪನ ಮುಖ ನೋಡುತ್ತಾ...ಗೊತ್ತಾಗುತ್ತಿಲ್ಲಪ್ಪ..

ಕೆಂಚಪ್ಪ : ಹೇ ಬಿಡ್ರಿ ಪಾಸ್ಟರೇ ಅದೆಲ್ಲಾ ಯಾಕೆ ಎಂದು ತಲೆ ಕರೆದುಕೊಂಡು ಕಿಚನ್ ಕಡೆಗೆ ಹೋಗಲು ತಿರುಗಿದ.

ಜೇಮ್ಸ್: ಹೇಯ್ ಬಾ.. ಇಲ್ಲಿ ಬಾ.. ಬಾ..... ನಮ್ ಮಾಸ್ಟರ್ ಗೆ ನಿನ್ ಪರಿಚಯ ಮಾಡಿಸಿಕೊಡುವೆ ಬಾ ಎಂದು ಜೇಮ್ಸ್ ಕೆಂಚಪ್ಪನನ್ನು ವಾಪಾಸು ಕರೆದ.

ಜೇಮ್ಸ್: ಮಾಸ್ಟರೇ ಇವನು ಕೆಂಚಪ್ಪ ಅಂತ.. ಐದಾರು ವರ್ಷಗಳ ಹಿಂದೆ ಪೋಲಿಸರಿಗೆ ಮೋಸ್ಟ್ Wanted person ಆಗಿದ್ದವನು..

ನಾನು: ಹೌದಾ? ಏನಪ್ಪ ಕಥೆ? ಆ ಲೆವೆಲ್ ಹವಾ ಮಾಡೀಯೇನು ಎಂದೆ..

ಕೆಂಚಪ್ಪ ; ಹಂಗೇನಿಲ್ಲ ಬಿಡಿ ಸಾರ್ ಎಂದು ತಲೆಕೆರೆದುಕೊಳ್ಳುತ್ತಾ ನಾಚುತ್ತಾ ನುಡಿದ..

ನಾನು : ಇರಲಿ ಪರವಾಗಿಲ್ಲ ಹೇಳು ಕೆಂಚಣ್ಣ ಎಂದು ಕೇಳಿದೆ.

ಜೇಮ್ಸ್ : ಮಾಸ್ಟರೇ ಇವನಾವು ಬಹಳ ಸ್ಟೋರಿ ಇದಾವೆ... ಅತಿಂಥಾ ಸ್ಟೋರಿ ಅಲ್ಲ ನೀನ್ ಒಂದೊಂದ್ ಸ್ಟೋರಿ ಕೇಳಿದ್ರೆ ಶಾಕ್ ಆಗುತ್ತೀಯಾ..

ನಾನು: ಅಬ್ಬಾ...! ಹೌದಾ? ಕೆಂಚಣ್ಣ ಹಂಗಾದರೇ ಹೇಳಪ್ಪ ಕೇಳೋಣ.. ಹೇಳು.. ಹೇಳು.. ಅದಕ್ಕೇನು??

ಜೇಮ್ಸ್ : ಕೆಂಚಣ್ಣ ಅದು 'ಚಳಿಕಾಯಿಸ್ಕೊಂಡಿದ್ದು' ಒಂದು ಹೇಳು ನಮ್ ಮಾಸ್ಟರ್ ಗೆ... ಅಂಥಾವೆಲ್ಲಾ ತಿಳುಕೋ ಬೇಕು ಅವರು, ಅವರಿಗೆ ಗೊತ್ತಿಲ್ಲ ಹೇಳು ಹೇಳು.. ಅಂದ.

ನಾನು: ಹೇಳಪ್ಪ ಏನೋ ಇಂಟರೆಸ್ಟಿಂಗ್ ಇದೆ ಅನಿಸುತ್ತದೆ…

(ಇನ್ನೂ ಇದೆ)

-ನಾಗೇಂದ್ರ ಬಂಜಗೆರೆ, ಬಳ್ಳಾರಿ 

ಚಿತ್ರ ಕೃಪೆ: ಇಂಟರ್ನೆಟ್ ತಾಣ