ಜೇನುತುಪ್ಪದ ಔಷಧೀಯ ಗುಣಗಳು
ಒಂದೊಮ್ಮೆ ಜೇನು ನೊಣಗಳು ಈ ಜಗತ್ತಿನಿಂದ ಅಳಿದುಹೋದರೆ ಕೆಲವೇ ವರ್ಷಗಳಲ್ಲಿ ಭೂಮಿಯ ಮೇಲಿನ ಎಲ್ಲಾ ಜೀವಿಗಳು ನಿರ್ನಾಮವಾಗಿ ಬಿಡುತ್ತವೆ. ಏಕೆಂದರೆ ಪ್ರತಿಯೊಂದು ಸಸ್ಯದ ಅಳಿವು-ಉಳಿವು ಈ ಜೇನು ನೊಣಗಳ ಓಡಾಟದಲ್ಲಿದೆ. ಜೇನು ನೊಣಗಳು ನೂರಾರು ಮೈಲುಗಳನ್ನು ಕ್ರಮಿಸಿ, ಹೂವಿನ ಮಕರಂದವನ್ನು ಹೀರಿ, ತನಗೆ ಅರಿವಿಲ್ಲದೆಯೇ ಹೂವುಗಳಲ್ಲಿ ಪರಾಗಸ್ಪರ್ಶವಾಗುವಂತೆ ಮಾಡುತ್ತದೆ. ಈ ಕಾರಣದಿಂದ ಹೂವುಗಳಲ್ಲಿ ಕಾಯಿಕಚ್ಚುತ್ತವೆ. ಕಾಯಿ ಹಣ್ಣಾಗುತ್ತದೆ. ಹಣ್ಣಿನಿಂದ ಸಿಗುವ ಬೀಜಗಳಿಂದ ಮತ್ತೆ ಗಿಡ ಹುಟ್ಟಿಕೊಳ್ಳುತ್ತದೆ. ಈ ಎಲ್ಲಾ ಜೈವಿಕ ವೃತ್ತಕ್ಕೆ ಜೇನುನೊಣಗಳು ತೀರಾ ಅಗತ್ಯ. ಜೇನು ನೊಣಗಳು ಮಕರಂದವನ್ನು ಹೀರಿ ತಯಾರಿಸುವ ಜೇನು ತುಪ್ಪ ಎಂದೂ ಹಾಳಾಗದ ವಸ್ತು. ಸಾವಿರಾರು ವರ್ಷಗಳ ಹಿಂದಿನ ಈಜಿಪ್ಟ್ ನ ಪಿರಮಿಡ್ ಗಳಲ್ಲಿ ಕಂಡು ಬಂದ ಜೇನುತುಪ್ಪವು ಈಗಲೂ ಹಾಳಾಗದೇ ಉಳಿದಿದೆ ಎಂದಾಗ ನಮಗೆ ಜೇನಿನ ಮಹತ್ವದ ಅರಿವಾಗುತ್ತದೆ. ಈ ಜೇನು ತುಪ್ಪದಲ್ಲಿ ಹಲವಾರು ಔಷಧೀಯ ಗುಣಗಳೂ ಇವೆ. ಕೆಲವನ್ನು ತಿಳಿದುಕೊಳ್ಳೋಣ.
* ಮಾನವ ಶರೀರಕ್ಕೆ ಬೇಕಾದ ‘ಬಿ' ಅನ್ನಾಂಗ (ವಿಟಮಿನ್) ಸಮೃದ್ಧವಾಗಿರುವ ಜೇನನ್ನು ದಿನಾ ಒಂದು ಚಮಚ ಸೇವಿಸುವುದರಿಂದ ರಕ್ತಹೀನತೆ, ದೃಷ್ಟಿದೋಷ, ಚರ್ಮರೋಗಗಳಿಂದ ಮುಕ್ತಿ ದೊರೆಯುತ್ತದೆ.
* ಜೇನು ಒಂದು ಪರಿಪೂರ್ಣ ಪಚನವಾದ ಆಹಾರವಾಗಿದ್ದು ಕ್ರೀಡಾಳುಗಳು ನಿತ್ಯ ಸೇವಿಸುವುದರಿಂದ ಅವರ ಕ್ರೀಡೋಲ್ಲಾಸ ವೃದ್ಧಿಸುವುದು. ದಿನಾ ಮಲಗುವುದಕ್ಕೆ ಮುನ್ನ ೨ ಚಮಚ ಜೇನು ಸೇವಿಸುವುದರಿಂದ ಸರಿಯಾಗಿ ನಿದ್ರೆ ಆವರಿಸಿ, ಮುಂಜಾನೆ ಶಾರೀರಿಕ ಚೈತನ್ಯವೂ ವೃದ್ಧಿಯಾಗುತ್ತದೆ.
* ಜ್ವರ, ನೆಗಡಿ ಬಂದಾಗ ದಿನಾ ೨ ಚಮಚ ಜೇನು ಸೇರಿಸಿ ತುಳಸೀರಸದೊಂದಿಗೆ ಮಿಶ್ರ ಮಾಡಿ ಸೇವಿಸುವುದರಿಂದ ಜ್ವರ, ನೆಗಡಿಯಿಂದ ಮುಕ್ತರಾಗಬಹುದು.
* ಒಣಕೆಮ್ಮು, ಗಂಟಲು ಕೆರೆತಕ್ಕೆ ಆಡುಸೋಗೆ ಎಲೆಗಳ ರಸ ಒಂದು ಚಮಚಕ್ಕೆ ಒಂದು ಚಮಚ ಜೇನು ಮಿಶ್ರ ಮಾಡಿ ೩ ಗಂಟೆಗೊಮ್ಮೆ ನಾಲ್ಕು ಸಲ ಸೇವಿಸಿದರೆ ವಾಸಿಯಾಗುತ್ತದೆ.
* ಮುಂಜಾನೆ ೨ ಚಮಚ ನಿಂಬೆರಸಕ್ಕೆ ೨ ಚಮಚ ಜೇನು ಮಿಶ್ರಮಾಡಿ ಬರಿ ಹೊಟ್ಟೆಗೆ ಸೇವಿಸುವುದರಿಂದ ಬೊಜ್ಜು ಕರಗುತ್ತದೆ ಹಾಗೂ ತೂಕ ಇಳಿಮುಖವಾಗುತ್ತದೆ.
* ಬಾಯಿ ಹುಣ್ಣು, ಕರುಳಿನ ಹುಣ್ಣುಗಳ ನಿವಾರಣೆಗೆ ಮುಜಂಟಿ ಜೇನು ದಿನಾ ಅರ್ಧ ಚಮಚ ಬಾಯಿಗೆ ಹಚ್ಚುವುದರಿಂದ ಹಾಗೂ ಮತ್ತೆ ಹೊಟ್ಟೆಗೆ ಸೇವಿಸುವುದರಿಂದ ವಾಸಿಯಾಗುತ್ತದೆ.
* ನೆಲ್ಲಿಕಾಯಿ ರಸ, ಸೊಗದೆ ಬೇರು, ಕದಳಿ ಬಾಳೆ ಹಣ್ಣು ಅಥವಾ ಒಣಗಿದ ಬಾಳೆ ಕಾಯಿ ಪುಡಿಗಳನ್ನು ಮಿಶ್ರಮಾಡಿ ಒಂದು ಚಮಚ ಜೇನಿನೊಂದಿಗೆ ಸೇವಿಸಿದರೆ ಮಹಿಳೆಯರ ಬಿಳಿಸೆರಗಿನಿಂದ ಮುಕ್ತಿ ಸಿಗುತ್ತದೆ.
* ಬೆಂಕಿ ತಗುಲಿದ ಸುಟ್ಟ ಗಾಯಗಳಿಗೆ ಜೇನುತುಪ್ಪ ಸವರುವುದರಿಂದ ಅಗ್ನಿಜ್ವಾಲೆ ಶಮನವಾಗಿ ಗಾಯಗಳು ಗುಣವಾಗುತ್ತವೆ.
* ಒಂದು ಲೋಟ ದೇಶೀಯ ಹಸುವಿನ ಹಾಲಿಗೆ ಕೇಸರಿ, ಅರಸಿನ ಹುಡಿ (೨ ಚಿಟಕಿ) ಒಂದು ಚಮಚ ಜೇನು ತುಪ್ಪ ಮಿಶ್ರ ಮಾಡಿ ರಾತ್ರಿ ಮಲಗುವ ಮುನ್ನ ಸೇವಿಸಿದಾಗ ೪೮ ದಿನಗಳಲ್ಲಿ ಚರ್ಮದ ಕಾಂತಿ ಹೆಚ್ಚಾಗುವುದು.
* ಬೇಗನೇ ಜೀರ್ಣಿಸಿಕೊಳ್ಳಲಾಗದ ಆಹಾರ ಸೇವನೆಯಿಂದ ಆಹಾರವು ವಿಷವಾಗಿ ಹೊಟ್ಟೆ ಉಬ್ಬರ ಉಂಟಾಗುವುದು. ಬುದ್ಧಿ ಸ್ಥಿಮಿತ ಕಳೆದುಕೊಳ್ಳುವುದು ಸ್ವಾಭಾವಿಕವಾದರೂ ಹಳ್ಳಿಯಲ್ಲಿ ಇದನ್ನು ಕೈವಿಷ ಎನ್ನುತ್ತಾರೆ. ರಾತ್ರಿ ಮಲಗುವ ಮುನ್ನ ೨ ಚಮಚ ಜೇನು, ೨ ಚಮಚ ನಿಂಬೆ ರಸ ಸೇರಿಸಿ ೧೨ ದಿನಗಳ ಕಾಲ ಸೇವಿಸಿದಾಗ ವಾಸಿಯಾಗುತ್ತದೆ.
* ಜ್ಞಾಪಕ ಶಕ್ತಿ ಹೆಚ್ಚಲು ೪೮ ದಿನ ಎಡೆಬಿಡದೆ ದಿನಾ ಒಂದು ಚಮಚ ಜೇನುತುಪ್ಪ ಸೇವಿಸುವುದರಿಂದ ಮೆದುಳು ಚುರುಕುಗೊಂಡು, ನೆನಪಿನ ಶಕ್ತಿ ವೃದ್ಧಿಸುತ್ತದೆ.
* ಒಂದು ಲೋಟ ಆಡಿನ ಹಾಲಿಗೆ ೪-೫ ಚಮಚ ಜೇನುತುಪ್ಪ ಸೇರಿಸಿ ದಿನಾ ಒಂದು ಸಲ ಸೇವಿಸುವುದರಿಂದ ಕ್ಷಯರೋಗದಿಂದ ಮುಕ್ತಿ ಪಡೆಯಬಹುದು.
* ಶಾರೀರಿಕ ದೌರ್ಬಲ್ಯ, ಕಫದ ತೊಂದರೆ, ಜಂತುಹುಳಗಳ ಕಾಟ, ಆಗಾಗ ಬರುವ ತಲೆನೋವುಗಳಿಂದ ಮುಕ್ತಿ ಪಡೆಯಲು ದಿನಾ ರಾತ್ರಿ ಮಲಗುವುದಕ್ಕೆ ಮುನ್ನ ೧ ಚಮಚ ದಾಲ್ಚಿನ್ನಿ ಚಕ್ಕೆ ಪುಡಿಗೆ ೨ ಚಮಚ ಜೇನು ಮಿಶ್ರ ಮಾಡಿ ಸೇವಿಸಿ, ಆರೋಗ್ಯದೊಂದಿಗೆ ದೀರ್ಘಾಯುಷಿಗಳಾಗಬಹುದು.
* ಕಿವಿನೋವಿಗೆ ಜೇನನ್ನು ನೀರಿನಲ್ಲಿಟ್ಟು ಬಿಸಿಮಾಡಿ ಕಿವಿಗೆ ತೊಟ್ಟಿಕ್ಕುವುದರಿಂದ ನೋವು ಶಮನವಾಗುತ್ತದೆ.
* ಮಧುಮೇಹ ರೋಗಿಗಳು ಹುರಿದು ಪುಡಿ ಮಾಡಿದ ನೇರಳೆ ಬೀಜದ ಒಂದು ಚಮಚ ಹುಡಿಗೆ ೨ ಚಮಚ ಶುದ್ಧ ಜೇನು ಸೇರಿಸಿ ದಿನಾ ಬೆಳಿಗ್ಗೆ -ರಾತ್ರಿ ಸೇವಿಸುವುದರಿಂದ ಮಧುಮೇಹ ನಿಯಂತ್ರಣ ಸಾಧಿಸಬಹುದು.
* ಹಲ್ಲುನೋವಿಗೆ ಜೇನುತುಪ್ಪವನ್ನು ಹತ್ತಿಯಲ್ಲಿ ಒದ್ದೆ ಮಾಡಿ ನೋವಿರುವ ಜಾಗಕ್ಕೆ ಒತ್ತಿ ಇಡುವುದರಿಂದ ಹತ್ತು ನಿಮಿಷದಲ್ಲಿ ವಾಸಿಯಾಗುತ್ತದೆ.
* ಮೂಲವ್ಯಾಧಿಗೆ ಜೇನು ಹಿತಕರ. ದೇಶೀಯ ಹಸುವಿನ ಹಾಲು ಒಂದು ಲೋಟ (ಬಿಸಿ ಮಾಡಿ ತಣಿಸಿ) ಒಂದು ಚಮಚ ನಿಂಬೆ ರಸ, ನಾಲ್ಕು ಚಮಚ ಜೇನುತುಪ್ಪ ಸೇರಿಸಿ ೪೮ ದಿನಗಳ ಕಾಲ ಸೇವಿಸಿ. ಮೂಲವ್ಯಾಧಿಯನ್ನು ಆರಂಭದಲ್ಲೇ ಹೊಸಕಿ ಹಾಕಿ.
* ಕಿತ್ತಳೆ ಹಣ್ಣಿನ ರಸಕ್ಕೆ ನಾಲ್ಕು ಚಮಚ ಜೇನು, ೨ ಚಮಚ ಕಲ್ಲುಸಕ್ಕರೆ ಹುಡಿ ಸೇರಿಸಿ ನೀರಿನಲ್ಲಿಟ್ಟು ಬಿಸಿ ಮಾಡಿ ದಿನಕ್ಕೆ ಎರಡು ಸಲ ಸೇವಿಸಿದರೆ ಶೀತ ಜ್ವರ ವಾಸಿಯಾಗುತ್ತದೆ.
* ಒಂದು ಚಮಚ ಜೇನು, ಒಂದು ಚಮಚ ಪುದೀನಾ ಸೊಪ್ಪಿನ ರಸ, ಒಂದು ಚಮಚ ನಿಂಬೆ ರಸ ಮಿಶ್ರ ಮಾಡಿ ಅರ್ಧ ಲೋಟ ಬಿಸಿಯಾರಿದ ನೀರಿನೊಂದಿಗೆ ಸೇವಿಸಿದರೆ ಗರ್ಭಿಣಿ ತಾಯಂದಿರ ವಾಂತಿ ಶಮನವಾಗುತ್ತದೆ.
ಸೂಚನೆ: ಇಲ್ಲಿ ನೀಡಿರುವ ಸಲಹೆಗಳನ್ನು ಅನುಸರಿಸುವ ಮೊದಲು ನೀವು ಬಳಸುತ್ತಿರುವ ಜೇನುತುಪ್ಪ ಶುದ್ಧವೇ ಎಂದು ಪರಿಶೀಲಿಸಿ. ಕಳಪೆ, ಕಲಬೆರಕೆ ಜೇನು ತುಪ್ಪಗಳು ಮಾರುಕಟ್ಟೆಯಲ್ಲಿವೆ, ಇವುಗಳಿಂದ ದೂರವಿರಿ. ಅದೇ ರೀತಿ ಇಲ್ಲಿರುವ ಸಲಹೆಗಳನ್ನು ಬಳಸಿಕೊಳ್ಳುವ ಮುನ್ನ ನಿಮ್ಮ ದೇಹ ಪ್ರಕೃತಿಗೆ ಈ ವಿಧಾನಗಳು ಒಗ್ಗುತ್ತವೆಯೋ ಎಂದು ಪರೀಕ್ಷಿಸಿ. ಏಕೆಂದರೆ ಕೆಲವರಿಗೆ ಅಲರ್ಜಿಯ ಸಮಸ್ಯೆ ಇರುತ್ತದೆ.
ಮಾಹಿತಿ ಸಹಕಾರ: ದ.ಕ.ಜೇನು ವ್ಯವಸಾಯಗಾರರ ಸಹಕಾರಿ ಸಂಘ ಮಿತ, ಪುತ್ತೂರು
ಚಿತ್ರ ಕೃಪೆ: ಅಂತರ್ಜಾಲ ತಾಣ