ಜೇನು ಕಲ್ಲಿನ ರಹಸ್ಯ ಕಣಿವೆ

ಜೇನು ಕಲ್ಲಿನ ರಹಸ್ಯ ಕಣಿವೆ

ಪುಸ್ತಕದ ಲೇಖಕ/ಕವಿಯ ಹೆಸರು
ಗಿರಿಮನೆ ಶ್ಯಾಮರಾವ್
ಪ್ರಕಾಶಕರು
ಗಿರಿಮನೆ ಪ್ರಕಾಶನ, ಲಕ್ಷ್ಮೀಪುರಂ ಬಡಾವಣೆ, ಸಕಲೇಶಪುರ-೫೭೩೧೩೪
ಪುಸ್ತಕದ ಬೆಲೆ
೧೩೦.೦೦ ಮೊದಲ ಮುದ್ರಣ: ಮಾರ್ಚ್ ೨೦೧೬

ಜೇನು ಕಲ್ಲಿನ ರಹಸ್ಯ ಕಣಿವೆ ಇದು ಮಲೆನಾಡಿನ ರೋಚಕ ಕತೆಗಳು ಸರಣಿಯ ನಾಲ್ಕನೇ ಭಾಗದ ಪುಸ್ತಕ. ಎಂದಿನಂತೆ ಲೇಖಕರಾದ ಗಿರಿಮನೆ ಶ್ಯಾಮರಾವ್ ಅವರು ತಾವು ಮಲೆನಾಡಿನ ಪರಿಸರದಲ್ಲಿ ಅನುಭವಿಸಿದ ರೋಚಕತೆಗಳನ್ನು ಕಾಲ್ಪನಿಕ ಕಥೆಯ ಮೂಲಕ ಅನಾವರಣ ಮಾಡುತ್ತಾ ಹೋಗುತ್ತಾರೆ. ಗಿರಿಮನೆ ಶ್ಯಾಮರಾವ್ ಅವರು ಈ ಪುಸ್ತಕದಲ್ಲಿ ಒಂದು ಕಾಲ್ಪನಿಕ ಕಥೆಯನ್ನು ತುಂಬಾ ಸೊಗಸಾಗಿ ಹೆಣೆದಿದ್ದಾರೆ. ಒಂದೆಡೆ ಜೇನು ಕಲ್ಲಿನ ಗುಡ್ಡದಲ್ಲಿ ಜೇನು ನೊಣಗಳ ಬಗ್ಗೆ ಸಂಶೋಧನೆ ಮಾಡಲು ಬರುವ ಡಾ. ಶ್ಯಾಮ ಪ್ರಸಾದ್ ಮುಖರ್ಜಿ ಹಾಗೂ ಅವರ ತಂಡ ಮತ್ತೆ ಈ ತಂಡಕ್ಕೆ ಸಹಕಾರ ನೀಡುವ ಅರಣ್ಯ ಇಲಾಖೆಯ ಪೇದೆಗಳು. ಮತ್ತೊಂದೆಡೆ ಅರಣ್ಯಾಧಿಕಾರಿಯಾದ ಚಂದ್ರಪಾಲ್ ಮತ್ತು ಗಾಂಜಾ ಬೆಳೆಯುವ ವ್ಯಕ್ತಿಗಳು. ಅರಣ್ಯ ಇಲಾಖೆಗೆ ಸೇರಿದ ದಟ್ಟ ಅರಣ್ಯದ ನಡುವೆ ಗಾಂಜಾ ಬೆಳೆಯಲು ಚಂದ್ರಪಾಲ್ ಅಂತರಾಷ್ಟ್ರೀಯ ಕ್ರಿಮಿನಲ್ ಆದ ಕಿಷನ್ ಮಲ್ಲಿಕ್ ಹಾಗೂ ಅವನ ಸಹಾಯಕ ಮಸ್ತಾಕ್ ಗೆ ಸಹಾಯ ಮಾಡುತ್ತಾರೆ. ಕೊನೆಗೆ ಇದೇ ಗಾಂಜಾ ಚಂದ್ರಪಾಲ್ ಅವರ ಮನೆಗೂ ತಲುಪಿ ಅವರ ಮಕ್ಕಳಿಬ್ಬರೂ ಮಾದಕ ದ್ರವ್ಯಗಳ ವ್ಯಸನಿಯಾಗುತ್ತಾರೆ. ಚಂದ್ರಪಾಲ್ ಅವರ ಪತ್ನಿ ಸುಲೇಖಾ ತನಗಿದ್ದ ಕೆಲಸ ಬಿಟ್ಟು ಮಕ್ಕಳನ್ನು ಸರಿ ಮಾಡಲು ಪಡುವ ಪಾಡು, ಡಾ. ಮುಖರ್ಜಿಯವರಿಗೆ ಕಾಡಿನ ಪ್ರಾಣಿಗಳ ಬಗ್ಗೆ, ಜೇನು ನೊಣಗಳ ಬಗ್ಗೆ ಇದ್ದ ಮಾಹಿತಿಗಳು, ಡಾ. ಮುಖರ್ಜಿಯವರ ಅಣ್ಣನ ಮಗಳಾದ ಮಧುಮತಿ ಹಾಗೂ ಅವರ ಸಹಾಯಕ ಸಂಶೋಧನಾ ವಿದ್ಯಾರ್ಥಿ ಮನೋಹರ್ ನಡುವಿನ ಪ್ರೇಮ ಪ್ರಸಂಗ ಇವೆಲ್ಲವೂ ಸೊಗಸಾಗಿ ಓದಿಸಿಕೊಂಡು ಹೋಗುತ್ತವೆ. ಟೈಗಾನ್ ಎಂಬ ಪ್ರಾಣಿಯ ಬಗ್ಗೆ ಡಾ. ಮುಖರ್ಜಿಯವರು ನೀಡುವ ವಿವರಗಳು ತುಂಬಾನೇ ನೈಜವಾಗಿದ್ದು, ಆ ಪ್ರಾಣಿಯನ್ನು ನಮ್ಮ ಮುಂದೆಯೇ ನಿಂತಿದೆ ಎಂದು ಕಲ್ಪಿಸಿಕೊಳ್ಳಬಹುದು.

ಶ್ಯಾಮರಾವ್ ಅವರೇ ಬೆನ್ನುಡಿಯಲ್ಲಿ ಬರೆದಿರುವಂತೆ ‘ಜೇನು ಸಿಹಿ ಎಂದಷ್ಟೇ ಗೊತ್ತು. ಅದು ಅಮೃತ ಎನ್ನುವುದೂ ಅದರ ಹಿಂದಿನ ರೋಚಕತೆಯೂ ತಿಳಿಯದು. ಪಶ್ಚಿಮ ಘಟ್ಟದ ಬೆರಗು, ಸೌಂದರ್ಯ, ಜೀವಜಗತ್ತು, ಸಸ್ಯ ಜಗತ್ತಿನ ಬಗೆಗೆ ಒಂದೊಂದಾಗಿ ಮುಂದಿಡುತ್ತಿದ್ದೇನೆ' ಎಂದಿದ್ದಾರೆ. ಇವರು ಈ ಕಾದಂಬರಿಯನ್ನು ಬರೆದ ಹದಿನೈದೇ ದಿನಕ್ಕೆ ಕನ್ನಡ ಪ್ರಭ ಪತ್ರಿಕೆಯಲ್ಲಿ ಧಾರಾವಾಹಿ ರೂಪದಲ್ಲಿ ಪ್ರಕಟವಾಯಿತು. ಇವರ ಹಿಂದಿನ ಪುಸ್ತಕಗಳಿಗೆಲ್ಲಾ ಮಲೆನಾಡಿನ ಸುಂದರ ಚಿತ್ರಣ ಮಾಡಿಕೊಟ್ಟ ಶಂಭುರಿತ್ತಿಯವರೇ ಮುಖಪುಟ ವಿನ್ಯಾಸ ಮಾಡಿದ್ದಾರೆ. ಸುಮಾರು ೧೭೫ ಪುಟಗಳ ಈ ಪುಸ್ತಕವು ಒಂದು ರೀತಿಯಲ್ಲಿ ಯಾವುದೇ ಪತ್ತೇದಾರಿ ಕಾದಂಬರಿಗೆ ಕಮ್ಮಿ ಇಲ್ಲ.