ಜೇನು ತಿನ್ನುವ ಓತಿಕ್ಯಾತ (ಭಾಗ 1)

ಜೇನು ತಿನ್ನುವ ಓತಿಕ್ಯಾತ (ಭಾಗ 1)

ನಮ್ಮದು ಅಪ್ಪಟ ಬಯಲು ಸೀಮೆ. ಗಾಳಿಕಾಲದಲ್ಲಿ ಊಟ ಸಾಕಾಗದೇ ತಿನ್ನುವಂತದ್ದೆಂದು ಯಾರಾದರು ಏನನ್ನಾದರೂ ಕೊಟ್ಟರೆ ಅದನ್ನು ಕ್ಷಣಾರ್ಧದಲ್ಲಿ ತಿಂದು ಮುಗಿಸುವ ಹಸಿವು ನಮ್ಮನ್ನು ಕಾಡುತ್ತಿತ್ತು. ಮುಂಗಾರು ಮಳೆ ಬರುವವರೆಗೆ ನಮಗೆ ಮುದ್ದೆ ಬಿಟ್ಟರೆ ತಿನ್ನಲು ಅಂತ ಇದ್ದ ಏಕ ಮಾತ್ರ ವಸ್ತು ಅಂದರೆ ಅದು ಮನೆಗೆ ತಿನ್ನಲು ಅಂತ ತೆಗೆದಿರಿಸಿದ ಕಡಲೆಕಾಯಿ ಮಾತ್ರ. ಅದು unlimited ಆಗಿ ಇರದೇ ಬಹಳ Limit ಆಗಿಯೇ ಇರತ್ತಿತ್ತು. ಆ ಕಡಲೇಕಾಯಿ ಚೀಲದ ಪಕ್ಕದಲ್ಲಿ ಇದ್ದ ನಾಲ್ಕಾರು ಚೀಲ ಶೇಂಗಾಕಾಯಿಯನ್ನು ಬಿಲ್ ಕುಲ್ ಮುಟ್ಟುವ ಹಾಗೆ ಇರಲಿಲ್ಲ. ಅದು ಮುಂಬರುವ ಮುಂಗಾರಿಗೆ ಬಿತ್ತಲಿಕ್ಕೆ ಅಂತ ಆಯ್ದು ತೆಗೆದಿರಿಸಿದ ಕಡಲೆಕಾಯಿ. ಮೇ ಜೂನ್ ತಿಂಗಳಲ್ಲಿ ಕಡಲೇಕಾಯಿ ಸುಲಿದು ಮಳೆಗಾಲಕ್ಕೆ ಬೀಜ ಬಿತ್ತಲು ಒಪ್ಪ ಮಾಡುವ ಕೆಲಸ ಆರಂಭ ಆಗುತ್ತಿತ್ತು. ಆಗ ಮಾತ್ರ ಕಡಲೆಕಾಯಿಯನ್ನು ಸುಲಿಯುವ ನೆಪದಲ್ಲಿ ಒಂದಷ್ಟು ಹೆಚ್ಚಿಗೆ ತಿನ್ನುತ್ತಿದ್ದೆವು. ಅದು ನಾಲ್ಕೈದು ದಿನಕ್ಕೆ ಮುಗಿದು ಹಸನು ಮಾಡಿದ ಬೀಜಕ್ಕೆ ಕೆಂಪಿರುವೆಗಳು ಹೋಗಿ ತಿನ್ನಬಾರದೆಂದು ಡಿ ಡಿ ಟಿ ಪುಡಿಯನ್ನು ಹಾಕಿ ಹುಷಾರಾಗಿ ಒಂದು ಕಡೆ ಎತ್ತಿಡುತ್ತಿದ್ದರು. 

ಆಗ ತಿನ್ನಲು ಉಳಿಯುತ್ತಿದ್ದುದು ಬಿತ್ತಲು ಸೂಕ್ತವಲ್ಲದ ಎಳಸು ಬೀಜಗಳು. ಸೀರಲು ಎಂದು ಕರೆಯುವ ಬಹಳ ರುಚಿಕಟ್ಟಾದ ಈ ಸೀರಲು ಬೀಜ ಅಪರೂಪಕ್ಕೆ ಒಂದು ಹಿಡಿ ಸಿಗುತ್ತಿತ್ತು. ಅದು ಎಲ್ಲೆಲ್ಲಿಗೂ ಸಾಕಾಗದೇ ಹೊಟ್ಟೆಯ ತಾಳಕ್ಕೆ ಹೆಜ್ಜೆಹಾಕುತ್ತಾ ನಾನು ಒಂದರ್ಥದಲ್ಲಿ ಜೇನಿನ ಹಿಂದೆ ಬಿದ್ದದ್ದು ಅಂತ ಹೇಳಬಹುದು. ಆಗಾಗ ಸಿಗುತ್ತಿದ್ದ ಜೇನುಗಳು ಮನೋರಂಜನೆ ನೀಡುತ್ತಾ, ಆಗಾಗ ಕಚ್ಚಿ ನೋವನ್ನೂ ನೀಡುತ್ತಾ, ನನ್ನ ಹೊಟ್ಟೆಯನ್ನು ತುಂಬಿಸುತ್ತಿದ್ದವು. ನಮ್ಮ ಅತ್ಯಲ್ಪ ಫ್ರೆಂಡ್ಸ್ ಸರ್ಕಲ್ ನಲ್ಲಿ ನನ್ನ ಗೆಳೆಯ ಒಬ್ಬ ಇದ್ದ. ಅವನ ಹೆಸರು ವೀರೇಶ. ಆದರೆ ಅವನ ಹೆಸರು ವೀರೇಶ ಅಂತ ನನಗೆ ಗೊತ್ತಾಗಿದ್ದು ಅವನೂ ನಾನು ಸ್ನೇಹಿತರಾಗಿ ಎರಡ್ಮೂರು ವರ್ಷ ಯಾವುದೋ ಗಣತಿ ಮಾಡುವಾಗ ನಮ್ಮ ಗುರುಗಳೊಬ್ಬರು ಒಂದು ಸ್ಥಳದಲ್ಲಿ ಕುಳಿತು ಪ್ರತಿ ಮನೆಯಲ್ಲಿ ಗಂಡು ಹೆಣ್ಣು ಮಕ್ಕಳು ಅವರ ಹೆಸರುಗಳು ಕೇಳುತ್ತಾ ಮಾಹಿತಿಯನ್ನು ಪಡೆಯುತ್ತಿದ್ದಾಗ ಅವನ ಹೆಸರು ಈಚ ಅಲ್ಲ ಅವನ ನಿಜವಾದ ಹೆಸರು ವೀರೇಶ ಅಂತ. ಅವನನ್ನ ಎಲ್ಲರೂ 'ಈಚ' ಅಂತಲೇ ಕರೆಯುತ್ತಿದ್ದುದು. ಅವರ ಅಪ್ಪ ಅಮ್ಮನೂ ಸೇರಿ ಎಂದೂ ಅವನನ್ನು ವೀರೇಶ ಅಂತ ಕರೆದುದು ನನಗೆ ಗೊತ್ತಿಲ್ಲ. ಅವನಾಗಲೀ ಬೇರೆ ಯಾರಾದರೂ ಅವನ ಹೆಸರನ್ನು ಕೇಳಿದರೆ ಅವನು 'ಈಚ' ಅಂತಲೇ ತನ್ನ ನಾಮಾಂಕಿತವನ್ನು ಹೇಳಿಕೊಳ್ಳುತ್ತಿದ್ದ. 

ಈಚನು ನನ್ನ ಕೆಲಸಗಳಾದ ಬೇವಿನಹಣ್ಣು, ಹೊಂಗೆಕಾಯಿ, ಶೇಂಗಾ ಸೀಜನ್ ನಲ್ಲಿ ಶೇಂಗಾ ಆರಿಸಲು ಇಬ್ಬರೂ ಜೊತೆಗೆ ಹೋಗುತ್ತಿದ್ದೆವು. ಒಂದರ್ಥದಲ್ಲಿ ನನ್ನ ಚಟುವಟಿಕೆಯ ಭಾಗವಾಗಿದ್ದ ಈಚ. ನಾವು ಶೇಂಗಾ ಆರಿಸಲು ಹೋಗುತ್ತಿದ್ದ ಭೂಷಣ್ಣನ ಕಟ್ಟೆ ಎಂಬ ಜಮೀನ್ದಾರರ ಹೊಲಕ್ಕೆ ಹೋಗುತ್ತಿದ್ದೆವು. ಅವರದು ಬಹಳ ಜಮೀನು ಇದ್ದಿದ್ದರಿಂದ ಬರೀ ಆಳುಗಳ ಮೇಲೆಯೇ ಕೆಲಸ ಆಗಬೇಕಿತ್ತು. 'ಆಳು ಮಾಡಿದ ಕೆಲಸ ಹಾಳು' ಎಂಬ ನಾಣ್ಣುಡಿಯನ್ನು ಪುಷ್ಟೀಕರಿಸುವಂತೆ ಟ್ರಾಕ್ಟರ್ ಟಿಲ್ಲರ್ ಯಂತ್ರಗಳಲ್ಲಿ ಶೇಂಗಾ ಹರಗಿದ್ದುದರಿಂದ ಶೇಂಗಾ ಕಾಯಿಯೆಲ್ಲಾ ಚೆಲ್ಲಾಪಿಲ್ಲಿಯಾಗಿ ಹೊಲದ ಉದ್ದಕ್ಕೂ ಚೆಲ್ಲಿದ ಹಾಗೆ ಉದುರಿರುತ್ತಿದ್ದವು. ಅವುಗಳನ್ನು ಆರಿಸಲು ಆಳುಗಳಿಗೆ ಹೇಳಿದಾಗ ಉದುರಿದುದರಲ್ಲಿಯೇ ಅರ್ಧ ಉಳಿಸಿ ಅಲ್ಲೊಂದು ಇಲ್ಲೋಂದು ಆರಿಸಿಕೊಂಡು ತೋರ್ಪಡಿಸುವಿಕೆಗಾಗಿ ಮಾತ್ರ ಆರಿಸಿದ್ದರಿಂದ ನಾನು ಈಚ ಹೋಗಿ ಆರಿಸಿಕೊಂಡು ಬಂದಾಗ ನಮಗೂ ಸ್ವಲ್ಪಮಟ್ಟಿಗೆ ಕಿಮ್ಮತ್ತು ಬಂದಿತ್ತು. ಆ ಹೊಲದಲ್ಲಿ ಮರಳು ಮರಳು ಇದ್ದುದರಿಂದ ಶೇಂಗಾ ಬಳ್ಳಿ ಹರಗಲು ವೇಗವಾಗಿ ಹೊಡೆದ ಟಿಲ್ಲರ್ ನ ರಭಸಕ್ಕೆ ಮೆದೆಗಟ್ಟಲೇ ಶೇಂಗಾ ಬಳ್ಳಿಯೇ ತಿರುವುಗಳಲ್ಲಿ ಮುಚ್ಚಿ ಹೋಗಿರುತಿತ್ತು. ನಾನು ಅಲ್ಲೊಂದು ಇಲ್ಲೊಂದು ಬಿದ್ದಿರುವ ಶೇಂಗಾ ಬುಡ್ಡೆಗಳನ್ನು ಆಯ್ದು ಚೀಲಕ್ಕೆ ಹಾಕಿಕೊಂಡರೇ ಇವನು ಮಾತ್ರ ಮೆದೆಗಟ್ಟಲೇ ಬಳ್ಳಿ ಮರಳು ತೋಡಿ ಹುಡುಕಿ ಕಡಲೆಕಾಯಿಯನ್ನು ತರಿದು ತರಿದು ಚೀಲದಲ್ಲಿ ಹಾಕಿಕೊಳ್ಳುತ್ತಿದ್ದ. ಅವನ ಸಂಗ್ರಹ ನನಗಿಂತಲೂ ಯಾವಾಗಲೂ ಡಬಲ್ ಇರುತಿತ್ತು. ಇಷ್ಟೇ ಅಲ್ಲಾ ಅವನ ಕೆಲಸಗಳು ಹುಟ್ಟುತರಲೆಗಳಂತೆಯೂ ಇದ್ದು ಸೀರೀಯಸ್ ಆಗಿ ಕೆಲಸವನ್ನು ಮಾಡುತ್ತಿದ್ದ. ಅವನು ಎಲ್ಲಿಯೇ ಕೆಲಸಕ್ಕೆ ಹೋಗಲಿ, ಸುಮ್ಮನೇ ಹೋಗಲಿ ಮನೆಗೆ ತಿನ್ನಲಿಕ್ಕೋ, ಸಾರಿಗೋ ಒಂದಷ್ಟು ಉಪಯೋಗ ಆಗುವಂತಹ ಕೆಲಸಗಳನ್ನು ಮಾಡಿಕೊಂಡು ಹೋಗುತ್ತಿದ್ದ. ಉದಾಹರಣೆಗೆ ಯಾವುದಾದರೂ ತೋಟಗಳಿಗೆ ಹೋದಾಗ ಅಲ್ಲಿರುವ ತರಕಾರಿಗಳನ್ನು ಹುಡುಕಿ ಟವೆಲ್ ಗೆ ಹಾಕುತ್ತಿದ್ದ. ಹುಣಸೇ ಮರಗಳ ಅಡಿ ಹೋದರೆ ಮುಂಗಾರು ಸಂದರ್ಭದಲ್ಲಿ ಹುಣಸೇ ಚಿಗುರನ್ನು,ದಸರಾ ದೀಪಾವಳಿ ಸಮಯದಲ್ಲಿ ಹೋದರೆ ಹುಣಸೇ ಕಾಯಿಯಯನ್ನು ಇನ್ನೂ ಆಗಷ್ಟ್ ಸೆಪ್ಟೆಂಬರ್ ತಿಂಗಳುಗಳಲ್ಲಿ ಯಾರದ್ದೊ ಹೊಲಗಳಿಗೆ ದನಗಳ ಮೇಯಿಸಲು ಹೋದಾಗ ಅವರು ಮನೆ ಬಳಕೆಗೆ ಹಾಕಿಕೊಂಡಿರುತ್ತಿದ್ದ ಜವಳೀಕಾಯಿ, ಹೀರೇಕಾಯಿ, ಸೌತೇಕಾಯಿ ಅಪರೂಪಕ್ಕೆ ಕಲ್ಲಂಗಡಿ ಹಣ್ಣನ್ನೂ ಮನೆಗೆ ಕೊಂಡೊಯ್ಯುತ್ತಿದ್ದ. ಹಾಗೆ ಇವನು ಡಿಸೆಂಬರ್ -ಜನವರಿ ತಿಂಗಳುಗಳಲ್ಲಿ ಹುಣಸೇ ಮರಗಳ ಕೆಳಗೆ ಬಿದ್ದಿರುವ ಹುಣಸೇ ಹಣ್ಣನ್ನೂ ಕೆಲವೊಮ್ಮೆ ಕೋಲು ಕಲ್ಲಿನಿಂದ ಹೊಡೆದು ಕೆಡವಿಕೊಂಡಾದರೂ ಅವನ ವಲ್ಲಿ ತುಂಬಿಸುತ್ತಿದ್ದನು. 

ಮಳೆಗಾಲದಲ್ಲಿ ಅವನ ಚಿತ್ತ ಇದ್ದದ್ದು ಬಿಡುವಾದಾಗಲೆಲ್ಲಾ ನಮ್ಮ ಮನೆಯ ಸಮೀಪ ಇದ್ದ ಹಳ್ಳಕ್ಕೆ ಬಂದು ಆ ಹಳ್ಳದಲ್ಲಿ ಏಡಿಗಳನ್ನು ಹಿಡಿಯುತ್ತಾ ನಿಂತುಕೊಂಡ ನೀರು ಆವಿಯಾಗುವವರೆಗೂ ಅವನು ಯಾವಾಗಲೂ ಅತ್ತ ಕಡೆ ಸುಳಿದಾಡುತ್ತಲೇ ಇರುತ್ತಿದ್ದ. ಪ್ರತಿ ಬಾರಿ ಬಂದಾಗಲೂ ಕೈಯಲ್ಲಿ ಒಂದು ಟಿಫನ್ ಕ್ಯಾರಿಯರ್ ಇರುತ್ತಿತ್ತು. ಅದರಲ್ಲಿ ಕೈಗೆ ಸಿಕ್ಕ ಏಡಿಗಳನ್ನು ಏಡಿಗಳ ಬಿಲದಲ್ಲಿ ಕೈ ಹಾಕಿ ಹಿಡಿಯುತ್ತಾ, ಸ್ವಲ್ಪಮಟ್ಟಿಗೆ ನೀರು ಕಡಿಮೆಯಾದಾಗ ನೀರೊಳಗೆ ನೆಲದಲ್ಲಿ ಕೈಯಿಂದ ಜಾಲಾಡುತ್ತಾ ಏಡಿ ಹಿಡಿಯುತ್ತಿದ್ದ. ನಾನು ಅವನ ಜೊತೆಗೆ ಹೋಗುತ್ತಿದ್ದೆ ಆದರೂ ನೀರಲ್ಲಿ ಕೈಗಳನ್ನು ಜಾಲಾಡುತ್ತಾ ಏಡಿ ಹಿಡಿಯುವಲ್ಲಿ ಅವನಷ್ಟು ಚುರುಕಾಗಿರಲಿಲ್ಲ. ಹಿಡಿದಾದ ಮೇಲೆ ಒಣಪ್ರದೇಶಕ್ಕೆ ಬಂದು ಎಲ್ಲವನ್ನೂ ನೆಲಕ್ಕೆ ಸುರಿವಿ ಎಷ್ಟು ಇದ್ದಾವೆ?? ಎಷ್ಟು ಗಾತ್ರದವು ಇದ್ದಾವೆಂದು ಎಣಿಸಿ ನೋಡುವಾಗ ನಾನು ಬಹಳ ಸಂಭ್ರಮಿಸುತ್ತಿದ್ದೆ. ಅಡ್ಡವಾಗಿ ನಡೆಯುತ್ತಾ ತಮ್ಮ ಚಿಮುಟದ ಕೈಗಳ ಏಡಿಗಳನ್ನು ನೋಡಿ ಕುಣಿದಾಡುತ್ತಿದ್ದ ನನಗೆ ನನ್ನ ಹುಡುಕಿಕೊಂಡು ಬಂದು ನನಗೆ ಅವನು ಹಿಡಿದ ಏಡಿಗಳನ್ನು ತೋರಿಸಿ ಹೋಗುತ್ತಿದ್ದ. ಯಾವಾಗಲೋ ಒಮ್ಮೆ ಎಂಟತ್ತು ಏಡಿಗಳನ್ನು ಟವೆಲ್ ನಲ್ಲಿ ಕಟ್ಟಿಕೊಂಡು ಕೈಯಲ್ಲಿ ದೊಡ್ಡ ಟಿಫನ್ ಕ್ಯಾರಿಯರ್ ಹಿಡಿದು ಬಂದಿದ್ದ. ಇಷ್ಟೊಂದು ಏಡಿ ಹಿಡಿದೆಯಾ ಎಲ್ಲಿ ಕ್ಯಾರಿಯರ್ ಅಲ್ಲಿ ಇರುವ ಏಡಿಗಳನ್ನು ನೋಡೋಣ ಎಂದು ಬಾಕ್ಸ್ ನ ಮುಚ್ಚಳ ತೆಗೆದರೆ ಕ್ಯಾರಿಯರ್ ತುಂಬಾ ಮೀನು!! ಹಿಡಿಗಾತ್ರದ, ಹೆಬ್ಬೆರಳು ಗಾತ್ರದ, ಕಿರುಬೆರಳು ಹೀಗೆ ನಾನಾ ಗಾತ್ರದ ಎರಡ್ಮೂರು ಕೆಜಿಯಷ್ಟು ಮೀನು ಹಿಡಿದು ತಂದಿದ್ದ. ಆಗಲೇ ನನಗನಿಸಿದ್ದು ಈಚ ಹುಡುಗನಾಗಿದ್ದರೂ ಸಾಮಾನ್ಯ ಹುಡುಗನಲ್ಲ. ಇವನ ಕೆಲಸ ಎಲ್ಲವೂ ದೊಡ್ಡವರಂತೆಯೇ ಎಂದು.

ಈಚನದು ನನ್ನ ಬಳಿ ಯಾವಾಗಲೂ ಒಂದೇ ಕೋರಿಕೆ. ನನಗೆ ಜೇನು ಕಂಡಾಗ ಅವನನ್ನೂ ನನ್ನ ಜೊತೆಗೆ ಕರೆದುಕೊಂಡು ಹೋಗಬೇಕು. ಇದಕ್ಕಾಗಿ ಇನ್ನುಳಿದ ಸಂದರ್ಭಗಳಲ್ಲಿ ಇವನು ನನ್ನ favour ಆಗಿಯೇ ಇರುತ್ತಿದ್ದುದು. ಹೊರಗಡೆ ಅವನಿಗೆ ಏನೇ ತಿನ್ನುವ ವಸ್ತುಗಳು ಸಿಕ್ಕರೂ ಅದರಲ್ಲಿ ಕಿಂಚಿತ್ತಾದರೂ ನನ್ನ ಪಾಲು ಇರುತ್ತಿತ್ತು. ಒಮ್ಮೆ ಯಾರದ್ದೋ ಹೊಲಕ್ಕೆ ಹೊತ್ತು ಮುಳುಗಿದಾಗ ಕರೆದುಕೊಂಡು ಹೋಗಿ ಹುಲ್ಲು ಸೊಪ್ಪಿನ ಕೆಳಗೆ ಮುಚ್ಚಿಟ್ಟಿದ್ದ ಕಲ್ಲಂಗಡಿ ಕಿತ್ತು ತಂದು ಇಬ್ಬರೂ ಸೇತುವೆಯ ಕೆಳಗಡೆ ಕೂತು ಅನಾಗರಿಕರಂತೆ ತಿಂದಿದ್ದೆವು.

(ಇನ್ನೂ ಇದೆ)

-ನಾಗೇಂದ್ರ ಬಂಜಗೆರೆ, ಬಳ್ಳಾರಿ 

ಸಾಂದರ್ಭಿಕ ಚಿತ್ರ ಕೃಪೆ: ಇಂಟರ್ನೆಟ್ ತಾಣ