ಜೇನು ತಿನ್ನುವ ಓತಿಕ್ಯಾತ (ಭಾಗ 2)

ಜೇನು ತಿನ್ನುವ ಓತಿಕ್ಯಾತ (ಭಾಗ 2)

ಒಂದು ದಿನ ಈಚ ನಮ್ಮ ಮನೆಗೆ ಏನೋ ಸಂತಸದ ಸುದ್ದಿಯನ್ನು ಹೊತ್ತು ತಂದಂತೆ ಬಂದು ಸ್ವಲ್ಪ ದೂರಕ್ಕೆ ಕರೆದುಕೊಂಡು ಹೋಗಿ "ದೊಣ್ಣೆ ಕಾಟ (ಓತೀಕ್ಯಾತ) ಹೊಡೆದು ಮಣ್ಣಲ್ಲಿ ಹೂತಿಟ್ಟರೆ ದುಡ್ಡು ಸಿಗುವುದಂತೆ" ಯಾರ್ಯಾರಿಗೋ ಎಷ್ಟೆಷ್ಟೋ ಹಣ ಸಿಕ್ಕಿತಂತೆ. ಇಷ್ಟು ಸಿಕ್ಕಿತಂತೆ ಎಂದು ಹೇಳಿದ. ನಮಗೋ ಹಣ ಸಿಗುತ್ತಲೇ ಇರಲಿಲ್ಲ. ಹಣ ಸಿಕ್ಕರೆ ಅಂಗಡಿಯಲ್ಲಿ ಏನಾದರೂ ಕೊಂಡು ತಿನ್ನಬಹುದು ಎಂದು ಎಷ್ಟು ಹಂಬಲಿಸಿದರೂ ನಮಗೆ ನಯಾಪೈಸೆಯೂ ಸಿಗದೇ ಹಣ ಎಂದರೆ ನಿದ್ದೆಯಲ್ಲೂ ಹಪಾಹಪಿಸುವಂತಾಗಿದ್ದೆವು.ನಮ್ಮ ಹಸಿವು ನೀಗದೇ ಅಂಗಡಿಗೆ ಹೋದಾಗ ಕಾಣುತ್ತಿದ್ದವೆಲ್ಲಾ ತಿನ್ನಬೇಕೆನಿಸಿದರೂ ಏನನ್ನೂ ಕೊಳ್ಳಲಾಗದೇ, ತಿನ್ನಲಾಗದೇ ಯಾರಾದರೂ ಸಂಬಂಧಿಕರು ಒಂದೋ ಎರಡೋ ರೂಪಾಯಿಯನ್ನು ಕೊಟ್ಟರೆ ಇದರಲ್ಲಿ ಯಾರದ್ದೂ ಕಿಂಚಿತ್ತೂ ಪಾಲಿಲ್ಲವೆಂದೂ ಇದು ಸಂಪೂರ್ಣ ನನಗೆ ಮಾತ್ರ ಸೇರಿದ ಏಕ ಮಾತ್ರ ಸ್ವತ್ತೆಂಬಂತೆ ಜೋಪಾನವಾಗಿ ಕಾಪಿಟ್ಟುಕೊಳ್ಳುತ್ತಿದ್ದ ನಮಗೆ ದುಡ್ಡು ಸಿಗುತ್ತದೆ ಎಂದರೇ ಏನಾದರೂ ಸರಿಯೇ ಅದು ಮಾಡಲು ತಯಾರಿದ್ದೆವು. ಅಂದು ಅವನ ಒತ್ತಾಸೆ ಏನಿತ್ತೆಂದರೇ ಈಗಲೇ ಇಬ್ಬರೂ ಓತೀಕ್ಯಾತ ಶಿಕಾರಿಗೆ ಇಳಿಯಬೇಕೆಂಬ ರೀತಿಯಲ್ಲಿ ಇತ್ತು. ಆದರೆ ಅಂದು ಮತ್ತೊಂದು ಕೆಲಸ ನಿಗದಿಯಾದ್ದರಿಂದ ನಾಳೆ ಶನಿವಾರ ಅಲ್ಲವೇ...? ನಾಳೇ ಶಾಲೆ ಬಿಟ್ಟಮೇಲೆ ಓತೀಕ್ಯಾತಗಳ ಶಿಕಾರಿ ಮಾಡೋಣ ಎಂದು ಶಿಕಾರಿಗೆ ಮುಹೂರ್ತ ಫಿಕ್ಸ್ ಮಾಡಿದೆ. ಈ ಒಂದು ವಿಚಾರ ನಮ್ಮ ತಲೆಯಲ್ಲಿ ರೋಮಾಂಚನ ಉಂಟು ಮಾಡಿತ್ತು. ಅದರಂತೆ ಅವುಗಳನ್ನು ಹೊಡೆದು ಮಣ್ಣಲ್ಲಿ ಹೂತು ಹಾಕಿದ್ದೂ ಆಯಿತು. ಇದು ಅಷ್ಟೇನು ಕೆಲಸಮಾಡಲಿಲ್ಲವಾದರೂ ಕಾಕತಾಳೀಯ ಎಂಬಂತೆ ಒಮ್ಮೆ ನಾಟಕ ಆಡಿದ ಮರುದಿನ ಬೆಳ್ಳಂಬೆಳಿಗ್ಗೆ ನಾನಾ ಮುಖಬೆಲೆಯ 29 ರುಪಾಯಿ ನಾಣ್ಯಗಳು ಈಚನಿಗೆ ಸಿಕ್ಕಿತ್ತು..!!ನನಗೂ ಅಲ್ಲೊಂದು ಇಲ್ಲೊಂದು ಐವತ್ತು ಪೈಸೆ, ರೂಪಾಯಿಗಳು ಸಿಕ್ಕಿದ್ದವು. ಇದು ಕೆಲವು ದಿನಗಳು ನಮ್ಮ ತಲೆಯಲ್ಲಿ ಉಳಿದು ಓತೀಕ್ಯಾತ ಕಂಡಾಗಲೆಲ್ಲಾ ಹೊಡೆದು ಮಣ್ಣಲ್ಲಿ ಹೂತು ಹಾಕುವ ಅಭ್ಯಾಸ ಆಗಾಗ ಮುಂದವರೆದಿತ್ತು.

ಈಚನಿಂದ ಕಲ್ಲಂಗಡಿ, ಸೌತೆಕಾಯಿ ಇತರ ವಸ್ತಗಳು ತಿಂದಿದ್ದ ಋಣಕ್ಕಾಗಿ ಒಂದು ದಿನ ನಾನು ಈಚ ನಮ್ಮ ಹೊಲಕ್ಕೆ ಹೊಂದಿಕೊಂಡಿರುವ ಹಳ್ಳಕ್ಕೆ ಜೇನು ಹುಡುಕಲು ಹೋದೆವು. ಈಚನಿಗೆ ಜೇನಿನ ಬೇಟೆಯಾಡುವುದರ ಬಗ್ಗೆ ಅಷ್ಟಾಗಿ ಗೊತ್ತಿರಲಿಲ್ಲ. ಆದರೆ ಎಲ್ಲಿಯಾದರೂ ಹಂದಿ, ಮೊಲಗಳು ಕಾಣಬಹುದೆಂದೂ, ಕಂಡರೆ ಅವುಗಳನ್ನೂ ಹೊಡೆಯುವ, ಕೌಜುಗ, ಪುರ್ಲೆ, ಬೆಳವಗಳು ಕಂಡರೇ ಅವುಗಳನ್ನೂ ಹಿಡಿಯುವ ವಿಶ್ವಾಸ ಎದ್ದು ಕಾಣಿಸುತ್ತಿತ್ತು. ಅವರ ತಂದೆ ಪ್ರೊಫೆಷನಲ್ ಬೇಟೆಗಾರ ಅಗಿದ್ದುದರಿಂದ ಎಲ್ಲಾ ಬೇಟೆಗಾರಿಕೆಯ ಕೌಶಲಗಳು ಅವನಲ್ಲಿ ಅಂತರ್ಗತವಾಗಿತ್ತು. ನಾನು ಜೇನು ಹುಡುಕುವ ಕೆಲಸ ಮಾಡುತ್ತಿದ್ದರೆ ಈಚ ಮಾತ್ರ ಕಂಡ ಕಂಡ ಪಕ್ಷಿಗಳಿಗೆ ಕಲ್ಲು ಹೊಡೆದು ಉರುಳಿಸುವ ಪ್ರಯತ್ನ ಮಾಡುತ್ತಲೇ ಇದ್ದ. ಎಲ್ಲಿಯಾದರೂ ದಟ್ಟವಾದ ಗಿಡಗಂಟೆಗಳಿರುವ ಪ್ರದೇಶ ಕಂಡರೆ ಜೇನು ನೋಡಲು ಹೋಗುತ್ತಿದ್ದ ನನ್ನನ್ನು ತಡೆದು "ಇರು ಇರು ಇಂತಹದ್ದರಲ್ಲೇ ಹಂದಿಗಳು ಇರುವುದು... ನಾನು ಹೇಳುವವರೆಗೂ ಹೋಗಬೇಡ" ಎಂದು ಅದರ ಸುತ್ತಲೂ ಹೋಗಿ ಹಂದಿಯದ್ದೋ, ಮೊಲದ್ದೊ ಹೆಜ್ಜೆಗುರುತುಗಳು ಇದ್ದಾವೆಯೇ ಎಂದು ಹೋಗಿ ಹುಡುಕಿ ಬರುತ್ತಿದ್ದ. ಬಂದ ಮೇಲೆ "ಥೋ ಏನು ಇಲ್ಲ ಕಣ್ಲೇ... ಇದ್ದೀದ್ದರೇ....." ಎಂದು ಹಲ್ಲನ್ನು ಕಡಿಯುತಿದ್ದ. ಆಮೇಲೆ ನನ್ನದು ಜೇನು ಹುಡುಕವ ಕಾರ್ಯ... ಈಚ ಅದರ ಸುತ್ತಲೂ ಸುತ್ತು ಹಾಕಿ ಹೆಜ್ಜೆ ಗುರುತುಗಳನ್ನು ಹುಡುಕುವ ಹೊತ್ತಿಗೆ ನಾನು ನಿಂತಲ್ಲೇ ಅತ್ತ ಇತ್ತ ಸರಿದಾಡುತ್ತಾ ಹುಳುಗಳ ಚಲನವಲನದಿಂದ ಅಲ್ಲಿ ಜೇನುಗಳು ಇರಬಹುದಾದ ಸಾದ್ಯತೆಗಳನ್ನು ಅವಲೋಕಿಸಿರುತ್ತಿದ್ದೆ. ಇದ್ದರೆ ಇದೆಯೆಂದು, ಇಲ್ಲವಾದರೆ ಇಲ್ಲ ನಡೆಯೆಂದು ಮುಂದಕ್ಕೆ ಹೋಗುತ್ತಿದ್ದೆವು. 

ಹಾಗೆ ಮುಂದೆ ಹೋದಾಗ ಅಲ್ಲೊಂದು ಪೊದೆಯಲ್ಲಿ ಒಂದು ಸಾಧಾರಣ ಜೇನು ಕಂಡಿತು. ಪರೀಕ್ಷಿಸಿ ನೋಡಿದರೆ ತುಪ್ಪ ಇಲ್ಲವಾಗಿತ್ತು. ಅವನಿಗೆ ನಾನು ತುಪ್ಪ ಇಲ್ಲ ಮುಂದಿನ ವಾರಕ್ಕೆ ಸ್ವಲ್ಪ ತುಪ್ಪ ಸಿಗತ್ತೆ ಎಂದೇಳಿದೆ. ಆದರೆ ಈಚ ನನ್ನ ನಡೆಗೆ ಅನುಮಾನ ವ್ಯಕ್ತಪಡಿಸಿದ. 'ನೀನು ಇಲ್ಲೇ ಇರ್ತಿಯಾ... ನಾನು ಹೋದಮೇಲೆ ನೀನು ಕಿತ್ತು ತಿಂತೀಯಾ' ಎಂದದ್ದರಿಂದ ಸ್ಥಳದಲ್ಲೇ ಜೇನುಕಟ್ಟಿದ ಕೊನೆಯ ಹಿಡಿದು ಅಲ್ಲಾಡಿಸಿ ಹುಳುಗಳ ಎಬ್ಬಿಸಿದೆ. ಹುಳುಗಳು ಎಬ್ಬಿಸಿದ್ದಕ್ಕೆ ಹೆದರಿದ ಈಚ ಮುಖದ ತುಂಬಾ ಮುಸುಕಿನಂತೆ ಟವೆಲ್ ಸುತ್ತಿಕೊಂಡು "ಹುಷಾರ್...ಹುಷಾರ್..." ಎಂದು ಹೇಳುತ್ತಿದ್ದ. ಜೇನು ಕಿತ್ತುಕೊಂಡು ಬಂದು ಈಚನ ಕೈಗಿತ್ತು ನೋಡ್ಲೇ ತುಪ್ಪ ಇಲ್ಲ ಎಂದು ತಳದಲ್ಲಿದ್ದ 5-10 ml ತುಪ್ಪವನ್ನು ಜೇನು ರೊಟ್ಟಿಯನ್ನು ಅವನಿಗೆ ಕೊಟ್ಟುಬಿಟ್ಟೆ. ಈಚ ಬೆರಳನ್ನು ಚೀಪುತ್ತಾ "ಜೇನು ತುಪ್ಪ ಚೆನ್ನಾಗಿದೆ. ಆದರೆ ತುಪ್ಪ ಇನ್ನೂ ಜಾಸ್ತಿ ಇರಬೇಕಾಗಿತ್ತು. ಥೋ... ಇನ್ನೊಂದು ಒಳ್ಳೆಯ ಜೇನು ಹುಡುಕಿಕೊಡು ಪ್ಲೀಸ್.. ಪ್ಲೀಸ್... ಕಣ್ಲೇ" ಎಂದು ಪುನಃ ವಿನಂತಿಸಿಕೊಂಡ... ಜಾಸ್ತಿ ತುಪ್ಪ ಇರುವ ಜೇನನ್ನು ತಿನಿಸಬೇಕೆಂದು ನನಗೂ ಅನಿಸಿದ್ದರಿಂದ ನನ್ನ ಹುಡುಕಾಟ ಮುಂದೆ ಸಾಗಿತ್ತು.

ಹಾಗೆ ಹುಡುಕುತ್ತಾ ಹುಡುಕುತ್ತಾ ಸುಮಾರು ಒಂದು ಕಿಲೋಮೀಟರ್ ನಷ್ಟು ದೂರ ಹಳ್ಳದ ಒಡಲಲ್ಲೇ ಸಾಗಿದೆವು. ಅಲ್ಲೊಂದು ಏಕೈಕ ತಾಳೆ ಮರ ಇತ್ತು. ಅದೊಂದು ಬಹು ದಟ್ಟವಾದ ಹಳ್ಳದ ಪ್ರದೇಶವಾಗಿತ್ತು. ಅಲ್ಲಿ ಬಹಳ ಪ್ರಮಾಣದ ನೀರು ನಿಂತುಕೊಳ್ಳುತ್ತಿದ್ದುರಿಂದ ಗಿಡಮರಗಳು ಹೆಚ್ಚೆಚ್ಚು ಬೆಳೆದಿದ್ದವು. ಇಲ್ಲಿ ನಾಲ್ಕೈದು ಹೊಂಗೆ, ತುಗ್ಗಲೀ ಮರಗಳು ಎತ್ತರವಾದ ಕತ್ತಾಳಿ ಬೊಂಬು, ದಟ್ಟವಾದ ಎಷ್ಟೋ ವರ್ಷಗಳಿಂದ ಬೆಳೆದು ಬಲಿತ ಸರ್ಕಾರಿ ಜಾಲಿ ಗಿಡಗಳು ಯಥೇಚ್ಛವಾಗಿ ಬೆಳೆದಿದ್ದವು. ಇಲ್ಲಿ ಜೇನುಗಳು ಸಿಕ್ಕೇ ಸಿಗುತ್ತಾವೆಂದು ನನಗೆ ಭರವಸೆಯಿದ್ದರೆ ಈಚನಿಗೆ ಇಲ್ಲಿ ಹಂದಿಗಳು ಗ್ಯಾರಂಟಿಯಾಗಿ ಇದ್ದೇ ಇರುತ್ತಾವೆ. ಒಂದಾದರೂ ಒಂದಾದರೂ ಕಂಡೇ ಕಾಣುತ್ತದೆ. ಕೊನೆಗೆ ಹಂದಿ ಇಲ್ಲವೆಂದರೂ ಮೊಲಗಳಾದರಂತೂ ಇಲ್ಲದೇ ಇರಲು ಸಾಧ್ಯವೇ ಇಲ್ಲ. ಒಂದು ಒಳ್ಳೆಯ ಕೊಡಲಿಯನ್ನಾದರೂ ತರಬೇಕಿತ್ತು ಎಂದು ಈಚ ಪೇಚಾಡುತ್ತಿದ್ದ. ಹಾಗೆ ಮುಂದೆ ಹೋಗುತ್ತಾ ಮರಳು ಹಳ್ಳದ ತುಂಬಾ ತುಂಬಿ ಹೋಗಿತ್ತು. ತಣ್ಣನೆಯ ಜಾಗ ಹಂದಿಗಳು ನಿಜವಾಗ್ಲೂ ಇಂತಹ ಜಾಗದಲ್ಲೇ ಇರೋದು. ಅವುಗಳು ಈ ಹಳ್ಳದಲ್ಲಿ ನೀರಿದ್ದರೆ ನೀರಿನಲ್ಲಿಯೇ ಎಮ್ಮೆಗೊಡ್ಡುಗಳ ತರ ಬಿದ್ದು ಉರುಳಾಡುತ್ತಿರುತ್ತಾವೆಂದು ಊರಲ್ಲಿ ನೋಡಿದ ವರಾಹಗಳಿಗೆ ಹೋಲಿಕೆ ಮಾಡಿ ಮಾತಾಡುತ್ತಿದ್ದ.

ನಾನು ಹಾಗೆ ದಟ್ಟನೆಯ ಅಗಣಿತ ಸಂಖ್ಯೆಯ ಚಿಗುರಿನ ಕಾಂಡಗಳೊಂದಿಗೆ ಛತ್ರಿಯಂತೆ ವಿಸ್ತರಿಸಿದ್ದ ತುಗ್ಗಲೀ ಮರದ ಮೇಲೆ ಒಂದು ತುಂಬಾ ದೊಡ್ಡದೂ ಅಲ್ಲದ ಚಿಕ್ಕದೂ ಅಲ್ಲದ ಕೆಂಪು ಹುಳಗಳಿದ್ದ ಜೇನುಗೂಡೊಂದನ್ನು ನೋಡಿದೆ.

"ಈಚ ಅಗೋ ಅಲ್ಲಿನೋಡು ಜೇನು..." ಎಂದು ತೋರಿಸಿದೆ. ಜೇನು ಗೂಡನ್ನು ನೋಡುತ್ತಾ ಗೂಡುಕಟ್ಟಿದ ಕೊಂಬೆಯ ಮೇಲೆ ಉಡ ಇದೆ.

ನಾನು ಪುನಃ ನೋಡಿ 'ಅದು ಉಡವಲ್ಲ... ಅದು ದೊಣ್ಣೆಕಾಟ..' (ಓತೀಕ್ಯಾತ) 

"ಏ ಅದು ನಿಜವಾಗ್ಲೂ ಉಡ... ದೊಣ್ಣೆಕಾಟ ಕಿರುಬೆರಳ ದಪ್ಪ ಇರುತ್ತಾವೆ ನೋಡು ಎಷ್ಟು ದಪ್ಪ ಇದೆ ಅದು ನಿಜವಾಗ್ಲೂ ಉಡನೇ ಕಣ್ಲೇ..." ಎಂದು ಹೇಳುತ್ತಾ ಅಲ್ಲೇ ಸ್ವಲ್ಪ ದೂರದಲ್ಲಿ ಬಿದಿದ್ದ ಕಲ್ಲಗಳನ್ನು ಹಿಡಿದು ತಂದ..

"ಈಚ ಅದು ಉಡ ಅಲ್ಲವೋ ನಿಜವಾಗಲೂ ಅದು ದೊಣ್ಣೆಕಾಟನೋ... ನೋಡು ಬಾಲ... ಅದರ ಉಬ್ಬಿದ ಕಣ್ಣು... ಮುಳ್ಳು ಮುಳ್ಳಿನ ಮೈ.. ಅದೆಲ್ಲಾ ನೋಡಿದರೆ ಅದು ದೊಣ್ಣೆ ಕಾಟವೇ... ಆದ್ರೆ ಸ್ವಲ್ಪ ನೋಡಕೆ ದೊಡ್ಡದು ಕಾಣಿಸುತ್ತಿದೆ...."

ಸ್ವಲ್ಪ ನಿಧಾನಿಸಿ ಕಣ್ಣು ಮಿಟುಕಿಸದೇ ಅದನ್ನೇ ನೋಡುತ್ತಲೇ ತಿರುಗುತ್ತಾ ನಡೆದ...

"ಸರಿ ಹಂಗಾದ್ರೆ... ದೊಡ್ಡ ದೊಣ್ಣೆಕಾಟ ಹೊಡೆದು ಹೂಣಿಸಿದರೆ ದುಡ್ಡು ಸಿಗತ್ತೆ....ಹ್ಹ...ಹ್ಹ..ಹ್ಹ..." ಎಂದ...

ಆ ಓತೀಕ್ಯಾತವು ಜೇನಿಗೆ ಹೊಂದಿಕೊಂಡಂತೆಯೇ ಇದ್ದು ಜೇನಿಗೆ ತೊಂದರೆ ಮಾಡದೇ ಓತೀಕ್ಯಾತವನ್ನು ಹೊಡೆಯುವುದು ಅಸಾಧ್ಯವಾಗಿತ್ತು. ಒಂದು ವೇಳೆ ಇವು ಅಪಾಯಕಾರಿ ಹುಳುಗಳಂತೆ ಇದ್ದುದರಿಂದ ಅವಸರ ವಾಗಿ ಕಲ್ಲಿಂದ ಹೊಡೆಯಲಿಲ್ಲ. ಮರಳಿನ ಮೇಲೆ ಕೂತು ಬಲಗೈಯನ್ನು ಹಿಂದೆ ಚಾಚಿ ಮರಳಿ ಎಡಗೈಯಲ್ಲಿ ಮರಳನ್ನು ತೊಡಿ ಹಿಂದೆ ಹಾಕುತ್ತಿದ್ದೆ.

"ಹೇಯ್... ಆ ದೊಣ್ಣೆಕಾಟ ಜೇನುತಿನ್ನುತ್ತಿದೆ..... ನೋಡು.. ನೋಡು..." ಎಂದು ಆಶ್ಚರ್ಯ ಚಕಿತನಾಗಿ ಅದನ್ನೇ ನೋಡುತ್ತಾ ಹೇಳಿದ.

"ದೊಣ್ಣೆಕಾಟ ಜೇನು ತಿನ್ನಲ್ಲ..‌"

"ಏಯ್ ನಿಜವಾಗ್ಲೂ ಕಣೋ... ನೋಡ್ತಾ ಇರು... ಅದನ್ನೇ ನೋಡ್ತಾ ಇರು .... ತಿನ್ತಾತೆ... ಸತ್ಯವಾಗಲೂ ತಿನ್ನತ್ತೆ..."

(ಇನ್ನೂ ಇದೆ)

-ನಾಗೇಂದ್ರ ಬಂಜಗೆರೆ, ಬಳ್ಳಾರಿ 

ಸಾಂದರ್ಭಿಕ ಚಿತ್ರ ಕೃಪೆ: ಇಂಟರ್ನೆಟ್ ತಾಣ