ಜೇನು ತಿನ್ನುವ ಓತಿಕ್ಯಾತ (ಭಾಗ 3)

ಜೇನು ತಿನ್ನುವ ಓತಿಕ್ಯಾತ (ಭಾಗ 3)

ನಾನು ತದೇಕ ಚಿತ್ತದಿಂದ ಆ ಓತೀಕ್ಯಾತವನ್ನು ನೋಡುತ್ತಾ ಕುಳಿತೆ... ಜೇನುಗೂಡು ಸಮೀಪದಲ್ಲೇ ಇದೆ. ನೋಡಲು ಶುರುಮಾಡಿ 20-30 ಸೆಕೆಂಡ್ ಆಗಿರಬಹುದು. ತನ್ನ ಎರಡೂ ಮುಂಗಾಲುಗಳನ್ನು ಕೊಂಚ ಬಗ್ಗಿಸಿ ಜೇನುಗೂಡುಗಳಿಂದ ಬಗ್ಗಿ ಒಂದು ಹುಳವನ್ನು ಬಾಯಲ್ಲಿ ಕಚ್ಚಿ ಹಿಂದೆ ಸರಿದುಕೊಂಡಿತು. ಸ್ಪಸ್ಟತೆ ಅನ್ನಿಸದೇ ಖಾತರಿಗಾಗಿ ಮತ್ತೇ ಅದನ್ನೇ ನೋಡುತ್ತಾ ಕುಳಿತೆವು. ಏನಾಶ್ಚರ್ಯ? ನಿಜವಾಗಲೂ ಆ ಓತೀಕ್ಯಾತ ಪ್ರತಿ ಇಪ್ಪತ್ತು-ಮೂವತ್ತು ಸೆಕೆಂಡಿಗೆ ಒಂದೊಂದು ಜೇನುಹುಳುವನ್ನು ಹಿಡಿದು ಲೊಚ ಲೊಚನೆ ನುಂಗುತ್ತಿದೆ. ಆ ಜೇನು ಗೂಡಿನಲ್ಲಿರುವ ಹುಳುಗಳಿಗೆ ಯಾವುದೋ ಒಂದು ಪ್ರಾಣಿ ನಮ್ಮ ಗೂಡಿನಿಂದ ನಮ್ಮ ಕುಟುಂಬದ ಸದಸ್ಯರನ್ನು ಹಿಡಿದು ನುಂಗುತ್ತಿದೆ ಎಂದು ಯಾವ ಸುಳಿವು ಯಾವ ಹುಳುವಿಗೂ ಗೊತ್ತಾಗುತ್ತಿಲ್ಲ. ಅದೊಂದು ನಿರ್ಜೀವವಸ್ತುವಿನಂತೆ ಜೇನಿನ ಪಕ್ಕ ಸರಿದು ಬಂದು ಒಂದೊಂದೇ ಒಂದೊಂದೇ ಹುಳುಗಳನ್ನು ಹಿಡಿದು ಬಾಯಲ್ಲಿ ಹಾಕಿಕೊಳ್ತಾ ಇದೆ. ಆ ಓತೀಕ್ಯಾತ ಅದೆಷ್ಟು ದಿನದಿಂದ ಈ ಹುಳುಗಳ ಮಾರಣ ಹೋಮ ಮಾಡುತ್ತಿದೆಯೋ ತಿಳಿಯದು. ಅದುವರೆಗೆ ಜೇನುಹುಳುಗಳನ್ನು ಈ ಓತೀಕ್ಯಾತ ತಿನ್ನತ್ತೆ ಅಂತ ನನಗೆ ಗೊತ್ತೇ ಇರಲಿಲ್ಲ. ಗೊದ್ದ, ಇರುವೆಗಳನ್ನು ತಿನ್ನಬಹುದು ಎಂದು ನನಗೆ ತಿಳಿದಿತ್ತು. ಆದರೆ ಜೇನುಗೂಡಿಗೆ ಬಾಯಿ ಹಾಕಿ ಅವುಗಳಿಗೆ ಗೊತ್ತಾಗದೇ ಭಕ್ಷಿಸುವುದು ಎಂದು ನಾನು ಈ ಓತೀಕ್ಯಾತದ ಬಗ್ಗೆ ಊಹಿಸಿಯೂ ಇರಲಿಲ್ಲ. ಇದನ್ನು ನೊಡಿದ ನನಗೆ ಆ ಜೇನು ಹುಳುಗಳ ಬಗ್ಗೆ ಅತೀವ ಕನಿಕರ ಉಂಟಾಯಿತು. ಅವುಗಳ ಈ ಅಮಾಯಕತೆಗೆ ಏನು ಹೇಳಬೇಕೋ ತಿಳಿಯದಾಯಿತು. ಪಾಪ ಅವು ಯಾವಕ್ಕೂ ಗೊತ್ತೇ ಆಗದೇ ಸೈಲೆಂಟ್ ಆಗಿಯೇ ತಿಂದು ಮುಗಿಸುತ್ತಿದೆಯಲ್ಲಾ??? ಆ ಜೇನು ಹುಳುಗಳಲ್ಲಿರುವ ಕೆಲವು ಹುಳುಗಳ ಆಯಸ್ಸು ಕೆಲವೇ ನಿಮಿಷ, ಇನ್ನೂ ಕೆಲವು ಹುಳುಗಳ ಆಯಸ್ಸು ಕೆಲವು ಗಂಟೆಗಳು! ಒಟ್ಟಾರೆಯಾಗಿ ಅವೆಲ್ಲವುಗಳ ಆಯಸ್ಸು ಉಳಿದಿರುವುದು ಕೆಲವೇ ದಿನಗಳು !!. ಆ ಜೇನುಹುಳುಗಳ ಸ್ಥಿತಿಯನ್ನು ಕಂಡು ಪಾಪ ಎಂದೆನಿಸಿತು. ಜೇನು ಹುಳುಗಳ ತಿಂದು ಈ ದೊಣ್ಣೆಕಾಟ ಎಷ್ಟು ದಪ್ಪ ಆಗಿದೆಯಲ್ಲಾ ಎಂದು ಅಚ್ಚರಿ ಉಂಟಾಗಿ ದೂರಕ್ಕೆ ಬಂದು ದೊಣ್ಣೆಕಾಟವನ್ನು ಗುರಿಯಾಗಿಸಿ ಕಲ್ಲನ್ನು ಹೊಡೆದೆವು. ನಾವು ಹೊಡೆದ ಕಲ್ಲು ಜೇನಿಗೂ ಬೀಳದೇ, ಆ ಓತೀಕ್ಯಾತಕ್ಕೂ ಬೀಳದೇ ರೆಂಬೆಕೊಂಬೆಗಳಿಗೆ ಬಿದ್ದು ಓತೀಕ್ಯಾತವೇನೋ ಪಕ್ಕದ ರೆಂಬೆಗೆ ಸರಿದು ಹೋಯಿತು.

ಆ ತುಗ್ಗಲೀ ಮರದಲ್ಲಿ ಕಟ್ಟಿದ ಜೇನು ನೋಡಲು ಹೆಜ್ಜೇನಿನಂತೆಯೇ ಇತ್ತು. ಆದರೆ ಹುಳುಗಳು ಮಾತ್ರ ಹೆಜ್ಜೇನಿಗಿಂತ ಚಿಕ್ಕವೂ, ಕಿರಿಜೇನಿಗಿಂತ ದೊಡ್ಡವೂ ಹಾಗೂ ಕೆಂಪು ಬಣ್ಣದಲ್ಲಿ ಇದ್ದವು. ಇದು ನಾನು ತೆಗೆಯುತ್ತಿದ್ದ ಕೋಲು ಜೇನಾಗಲೀ, ತುಡುವೆ ಜೇನಾಗಲೀ ಅದು ಆಗಿರದೇ ಈ ಜೇನಿನ ಪ್ರಭೇದವೇ ವಿಭಿನ್ನವಾಗಿ ಇದ್ದುದು ಕೆಲವೇ ಸೆಂಕೆಂಡ್ಗಳಲ್ಲಿ ತಿಳಿಯಿತು. ಕಲ್ಲೊಡೆದು ಓತೀಕ್ಯಾತ ಓಡಿಸಿದ ಮೇಲೆ ಈಚ "ಅಬ್ಬಾ.... ಅಂತೂ ದೊಡ್ಡದಾದ ಒಂದು ಜೇನು ಸಿಕ್ಕಿತು... ಕೀಳಲೇ.. ಮರಹತ್ತು... ತೆಗಿ ಎಂದು ಹೇಳಿದ. ಈಚನ ಅಪೇಕ್ಷೆಗೆ ನಾನು ಅಸಮ್ಮತಿಯನ್ನು ನೀಡಿ "ಇವು ಹುಳುಗಳು ಬೇರೆ ಜಾತಿಯವು ಆಗಿದ್ದು ಇದನ್ನು ತೆಗೆಯಲು ಪ್ರಯತ್ನಿಸಿದರೆ ಹುಳುಗಳು ಕಚ್ಚಬಹುದು. ಈ ತರಹದ ಜೇನನ್ನು ನಾನೂ ಹಿಂದೆ ಎಂದೂ ತೆಗೆದಿಲ್ಲ. ಬೇಡಪ್ಪ.. ಬೇಕಾದರೆ ಬೇರೊಂದು ಜೇನನ್ನು ಹುಡುಕಿಕೊಡುವೆ ಇದನ್ನು ಮಾತ್ರ ಕೀಳಲು ಆಗಲ್ಲ" ಎಂದು ಸಾರಾಸಗಟಾಗಿ ತಿರಸ್ಕರಿಸಿದೆ. ಗೊತ್ತಿಲ್ಲದ ಹುಳುಗಳ ತಂಟೆಗೆ ಹೋಗಿ ಕಚ್ಚಿಸಿಕೊಳ್ಳುವ ಮೂರ್ಖ ಪ್ರಯತ್ನವನ್ನು ಮಾಡಲು ಯಾಕೋ ಅಂಜಿದೆ.

ಅಷ್ಟೊತ್ತಿಗಾಗಲೇ ಸಂಜೆ ಸುಮಾರು ಮೂರೂವರೆ ಆಗಿತ್ತು. ತೆಂಗಿನ ಮರಗಳ ನೆರಳಿಗೆ ಕಟ್ಟಿದ್ದ ದನಗಳನ್ನು ಗೋದಲಿಗೆ ಕಟ್ಟಿ ಹುಲ್ಲು ಹಾಕಬೇಕಾಗಿತ್ತು. ಈಗ ಜೇನು ಹುಡುಕಲು ಹೋದರೆ ಹೊತ್ತಾಗತ್ತೆ ಬೇರೊಂದು ದಿನ ಹುಡುಕಿಕೊಡುವೆ ಎಂದು ವಾಪಸ್ ಹಿಂತಿರುಗಿದೆವು. ಆ ಓತೀಕ್ಯಾತ ದಿನವೂ ಆ ಹುಳುಗಳನ್ನು ಹಿಡಿದು ತಿನ್ನುತ್ತಿರಬಹುದೇ ಎಂಬ ಪ್ರಶ್ನೆ ನನ್ನಲ್ಲಿ ಉಂಟಾಗಿ ಮರುದಿನವೂ ನಾನು ಮಧ್ಯಾಹ್ನದ ಸುಮಾರಿಗೆ ಹೋಗಿ ನೋಡಲು ಆಗಲೂ ಆ ಓತೀ ನಿನ್ನೆ ಇದ್ದ ಸೇಮ್ position ನಲ್ಲೇ ಕುಳಿತು ಜೇನು ಹುಳುಗಳನ್ನು ಹಿಡಿದು ಹೊಟ್ಟೆಗೆ ಹಾಕಿಕೊಳ್ತಾ ಇತ್ತು. ಆಗಲೂ ನಾನು ಕಲ್ಲೊಡೆದು ಆ ಓತಿಯನ್ನು ಅಲ್ಲಿಂದ ಓಡಿಸಿದೆನಾದರೂ ಅದು ಆಮೇಲಾದರೂ ಬಂದು ತಿನ್ನಬಹುದೆಂಬ ಸಂಶಯ ಉಂಟಾಯಿತು. ನಿರಂತರವಾಗಿ ಸುಮಾರು ಹತ್ತು ದಿನಗಳ ಕಾಲ ನಾನು ಅನುದಿನವೂ ಬಂದು ನೋಡುತ್ತಿದ್ದೆ. ಆ ಓತೀ ಪ್ರತಿದಿನವೂ ಹುಳುಗಳ ಹಿಡಿದು ಹೊಟ್ಟೆಗಾಕಿಕೊಳ್ಳುತ್ತಿತ್ತು. ದಿನದಿಂದ ದಿನಕ್ಕೆ ಹೆಚ್ಚಾಗಬೇಕಿದ್ದ ಜೇನುಹುಳುಗಳ ಸಂಖ್ಯೆಯು ದಿನದಿಂದ ದಿನಕ್ಕೆ ಕಡಿಮೆ ಆಯಿತು. ಹತ್ತು ಹನ್ನೆರಡನೆಯ ದಿನ ಈ ಜೇನುಹುಳುಗಳಿಗೆ ಈ ಓತೀಕ್ಯಾತದ ಬಗ್ಗೆ ಗೊತ್ತಾಯಿತೋ ಏನೋ.. ಅವೆಲ್ಲವೂ ಕಟ್ಟಿದ್ದ ಗೂಡನ್ನು ಬಿಟ್ಟು ಯಾವಾಗಲೋ ಎದ್ದುಹೋಗಿದ್ದವು. ಸಾವಿರ ಸಂಖ್ಯೆಯಲ್ಲಿ ಜೇನು ಹುಳುಗಳ ಭಕ್ಷ್ಯ ಭೋಜನ ಮಾಡಿದ ಓತೀಕ್ಯಾತ ಅದೆಷ್ಟು ದಿನ ಬದುಕಿತೋ ಗೊತ್ತಿಲ್ಲ... ಈಗಲೂ ಸನ್ನಿವೇಶವನ್ನು ನೆನೆಸಿಕೊಂಡರೆ ಪಾಪ ಎನಿಸುತ್ತದೆ. ಅಂದ ಹಾಗೆ ಗೆಳೆಯ ಈಚನಿಗೆ ಇದರ ನಂತರವೂ ನಾಲ್ಕೈದು ಬಾರಿ ಮಸ್ತಾಗಿ ತುಪ್ಪ ಇರುವ ಎಂಟತ್ತು ಜೇನುಗಳನ್ನು ವಿವಿಧ ಸಂದರ್ಭಗಳಲ್ಲಿ ತಿನ್ನಿಸಿ ಅವನ ಋಣವನ್ನು ತೀರಿಸಿದ್ದೇನೆ.

ಈ ಘಟನೆಗೂ ಕೆಲವೇ ದಿನಗಳ ಮುಂಚೆ ದನಗಳನ್ನು ನೆರಳಿಗೆ ಕಟ್ಟುತ್ತಿದ್ದ ನಮ್ಮ ತೆಂಗಿನ ಮರದ ಗರಿಗಳಿಗೆ ಒಂದೆರಡು ಜೇನು ಕಟ್ಟಿದ್ದವು. ಅವುಗಳನ್ನು ತೆಗೆಯಲು ಸಮಯ ಒದಗಿಬಂದಿರಲಿಲ್ಲ. ನಾನು ಅಲ್ಲೇ ಸಮೀಪ ಹೊಲಕ್ಕೆ ನೀರು ಹಾಯಿಸುತ್ತಿದ್ದೆ. ಒಂದು ಹದ್ದು ಏನನ್ನೋ ಹಿಡಿಯುವ ಹಾಗೆ ವೇಗವಾಗಿ ಬಂದು ಆ ಗರಿಗಳಿಗೆ ಬಡಿಯಿತು. ನಾನೇನೋ ಓತೀಕ್ಯಾತವೋ, ಹಾವೋ ಇರಬೇಕೆಂದು ಅಂದುಕೊಂಡೆ ಆದರೆ ಅದು ತನ್ನ ಚೂಪಾದ ಉಗುರಗಳಲ್ಲಿ ಹೊತ್ತೊಯ್ದದ್ದು ಜೇನು ರೊಟ್ಟಿಯನ್ನು.!! ನಾನು ಈ ಎರಡೂ ಸಂದರ್ಭದ ಪ್ರತ್ಯಕ್ಷ ಸಾಕ್ಷಿಯಾಗಿದ್ದು ಪ್ರಕೃತಿ ವೈಶಿಷ್ಟ್ಯವನ್ನು ಕಂಡು ನನಗೂ ಆಶ್ಚರ್ಯಕರನನ್ನಾಗಿಸಿತ್ತು. ಆಹಾರ ಸರಪಳಿಯಲ್ಲಿ ಶೋಷಿಸುವ ಪ್ರಾಣಿಯ ಕಪಟವೋ, ದೌರ್ಜನ್ಯವೊ, ಅಥವಾ ಶೋಷಣೆಗೆ ಒಳಗಾಗುವ ಪ್ರಾಣಿಯ ಮುಗ್ದತೆಯೋ, ಅದರ ಮೌಢ್ಯವೋ ನಾನರಿಯೇ... ಆದರೆ ಒಂದನ್ನೊಂದು ಕೊಂದು ತಿನ್ನುವುದು ಮಾತ್ರ ದಿಟ.. ಆ ದಿನ ಪೂರಾ ನನ್ನನ್ನು ಈ ಎರಡೂ ಸಂಗತಿಗಳು ಬಹುವಾಗಿ ಕಾಡಿದವು. ಅನ್ಯಾಯವಾಗಿ ಜೇನುಹುಳುಗಳು ಹದ್ದು , ಓತೀಕ್ಯಾತಕ್ಕೆ ಬಲಿಯಾಗುತ್ತಿವೆಯಲ್ಲಾ? ಅದೆಷ್ಟು ಜೇನು ಹುಳುಗಳನ್ನು ಯಾವ ಯಾವ ಪ್ರಾಣಿ ಪಕ್ಷಿ, ಕೀಟಗಳು ಹಿಡಿದು ತಿನ್ನುತ್ತಿವೆಯೋ??ಪಾಪ ಅಣುಮಾತ್ರ ಜೇನುಹುಳಗಳಿಗೇ ಇಷ್ಟೊಂದು ಹಿಡಿದು ತಿನ್ನುವ ಸರಪಳಿ ಇರುವಾಗ ತೊಂದರೆ ಮಾಡದೇ ಸುಲಭವಾಗಿ ದೌರ್ಜನ್ಯಕ್ಕೆ ಒಳಗಾಗುವ ಸಾಧು ಜೀವಿಗಳ ಪರಿಸ್ಥಿತಿ ಏನಾಗಬಹುದು? ಎಂಬ ಯಕ್ಷ ಪ್ರಶ್ನೆಯೊಂದು ನನ್ನನ್ನು ಬಹುವಾಗಿ ಕಾಡಿತು.

(ಮುಗಿಯಿತು)

-ನಾಗೇಂದ್ರ ಬಂಜಗೆರೆ, ಬಳ್ಳಾರಿ 

ಚಿತ್ರ ಕೃಪೆ: ಇಂಟರ್ನೆಟ್ ತಾಣ