ಜೇನು ತೆಗೆಯಲು ಅಪ್ಪ ಹೇಳಿಕೊಟ್ಟ ಟ್ರಿಕ್ (ಭಾಗ 1)

ಜೇನು ತೆಗೆಯಲು ಅಪ್ಪ ಹೇಳಿಕೊಟ್ಟ ಟ್ರಿಕ್ (ಭಾಗ 1)

ಅಪ್ಪ ಕಟು ಸ್ವಾವಲಂಬಿ.‌ ತನಗೆ ಗೊತ್ತಿಲ್ಲದ ಎಂಥಹ ಕೆಲಸವನ್ನಾದರೂ  ತಾನು ನೋಡಿರುವ ಕೇಳಿರುವ ಜ್ಞಾನದಿಂದ  ಜನ ನೋಡಿ ನಕ್ಕರೂ ಬಿಡದೇ ಅದನ್ನು ಮಾಡಲು ಹಿಂಜರಿಯದೇ ಮಾಡಿ ಸಾಧಿಸುತ್ತಿದ್ದರು. ಅದು ಸರಿಯಾದ ಲೆಕ್ಕಚಾರವಾಗಿಯೋ, ಶಾಸ್ತ್ರೀಯವಾಗಿಯೋ  ಎನ್ನದೇ ತಮಗೆ ತೋಚಿದ ಐಡಿಯಾ ಮತ್ತು ಅವರದೇ Tools ಗಳಿಂದ ಮಾಡುತಿದ್ದರು. ನೋಡುಗರಿಗೆ ಅದು ನಗೆಪಾಟಲಿನಂತಿದ್ದರೂ, ಅಸಂಗತವೆನಿಸುವಂತೆ ತೋರುತಿದ್ದರೂ ಪಟ್ಟು ಬಿಡದೇ ಮಾಡುತ್ತಿದ್ದರು. ಇದಕ್ಕೆ ಒಂದು ಉದಾಹರಣೆ ಎಂದರೇ ಬೇಸಿಗೆ ಕಾಲದಲ್ಲಿ ಹೊಂಗೆಯ ಎಲೆಗಳನ್ನು ಗೋಣಿಚೀಲದಲ್ಲಿ ತರಿದು ತಂದು ತಿಪ್ಪೆಯಲ್ಲಿ ಗುಂಡಿತೋಡಿ ಮುಚ್ಚಬೇಕಿತ್ತು. ನಮ್ಮ ಸುತ್ತಮುತ್ತಲಿನ ಯಾರೊಬ್ಬರೂ ಈ ತರ ಕೆಲಸ ಮಾಡುತ್ತಿರಲಿಲ್ಲ. ನಾವು ಮಾತ್ರ ಈ ವಿಚಿತ್ರವಾದ ಕೆಲಸಗಳನ್ನು ಮಾಡುತ್ತಿದ್ದೇವೆಂಬಂತೆ ನಮಗೆ ಏನೋ ಸಂಕೋಚ... ಕೆಲವರು ನಾವು ಈ ಕೆಲಸ ಮಾಡುವುದನ್ನು  ನೋಡಿದವರು ಹ್ಹ ಹ್ಹ ಎಂದು  ನಕ್ಕವರೂ ಇದ್ದಾರೆ. ಹೀಯಾಳಿಸಿದವರೂ ಇದ್ದಾರೆ. ನಾನೂ ನನ್ನ ತಮ್ಮ ಈ ವಿಚಾರಕ್ಕೆ ಸೀಮೆಯಾಗೆ ಇಲ್ಲದ ಕೆಲಸ ನೀನೊಬ್ಬನೇ ಮಾಡಿಸುತ್ತಿದ್ದೀಯಾ ಎಂದು  ಅಪ್ಪನನ್ನು  ವಿರೋಧಿಸಿ ಮಾತಾಡಿದ್ದು ಇದೆ.

ತೊಂಬತ್ತನೆಯ ಇಸ್ವಿಯಲ್ಲಿ ನಮಗೆ ಮನೆ ಇರಲಿಲ್ಲ. ಗುಡಿಸಲೂ ಅಲ್ಲದ, ಜಂತಿಯ ಮನೆಯೂ ಅಲ್ಲದ, ಅತ್ತ ಪೂರಾ ತಗಡಿನ (SHEET) ಮನೆಯೂ ಅಲ್ಲದ ಸ್ವಲ್ಪ ಇಟ್ಟಿಗೆ, ಸ್ವಲ್ಪ ಕಲ್ಲಿನ, ಸ್ವಲ್ಪ ಜಂತಿಹಾಕಿದ ಎಲ್ಲಾ ಮಿಕ್ಸ್ ಮಾಡಿ ಕಟ್ಟಿದ ಒಂದು ಸಣ್ಣ ಕಚ್ಚಾಮನೆ. ಆರೆಂಟು ಜನಗಳಿಗೆ ಮನೆಯೊಳಗೆ ಜಾಗ ಆಗುತ್ತಿರಲಿಲ್ಲವಾದರೂ ಆಕಾಶವೇ ನಮಗೆ ಸೂರಾಗಿತ್ತು ಎಂದು ಹೇಳಿದರೆ ತಪ್ಪಾಗಲಿಕ್ಕಿಲ್ಲ. ಮಳೆ ಬಂದ ದಿನಗಳು ಮಾತ್ರ ನಾವು ಮಳೆ ಬಿಡುವವರೆಗೆ ಮನೆಯೊಳಗೆ  ಆಸರೆ ಪಡೆದುಕೊಳ್ಳುತ್ತಿದ್ದೆವು. ಉಳಿದ ಎಲ್ಲಾ ದಿನಗಳಲ್ಲೂ ನಾವೆಲ್ಲರೂ ಮನೆಯ ಹೊರಗಡೆಯೇ  ಮಲಗುತ್ತಿದ್ದುದು. ಮನೆಕಟ್ಟಲು ಜಾಗವನ್ನೇನೋ ದಾಯಾದಿಗಳ ಕಲಹದೊಂದಿಗೆ ಗೊತ್ತು ಮಾಡಿಕೊಂಡರು. ಆದರೆ ಮನೆಕಟ್ಟಲು ಕಲ್ಲಾಗಲಿ ಇಟ್ಟಿಗೆಯಾಗಲಿ ಇರಲಿಲ್ಲ. ಕೊಂಡುಕೊಳ್ಳಬೇಕಿತ್ತು. ಕೊಂಡುಕೊಳ್ಳಲು ಅಷ್ಟು ದುಡ್ಡು ಕಾಸಾಗಲೀ ನಮ್ಮ ತಂದೆಯ ಬಳಿ ಆಗ ಎಲ್ಲಿ ಬರಬೇಕು..?? ಇದ್ದ ಆರು ಜನ ಮಕ್ಕಳ ಹೊಟ್ಟೆ ಬಟ್ಟೆಗೂ ಸಾಲದ ಜೀವನ. ಅದಕ್ಕೆ ಅಪ್ಪ  ಮುಂದಿನ ವರ್ಷ ಮನೆ ಕಟ್ಸೋಣ ಎಂದು ಇರುವ ಸಣ್ಣ ಮನೆಯಲ್ಲೇ ವಾಸವಾಗಿ ಸುಮ್ಮನಾದರು.

ನಮ್ಮೂರು ಬಂಜಗೆರೆ ಸಮೀಪ 'ರಾಮನ ಬಂಡೆ' ಎಂದು ಒಂದು ಮಟ್ಟಿ (ಸಣ್ಣಗುಡ್ಡದ ಆಕಾರದ ಬಂಡೆ) ಇದೆ. ಅದೊಂದು ಸಾಧಾರಣ ಏಕಶಿಲಾ ಬಂಡೆ. ನೆಲಮಟ್ಟದಿಂದ ಸುಮಾರು ನಲವತ್ತರಿಂದ ಅರವತ್ತು ಅಡಿ ಎತ್ತರ, ಐದುನೂರು ಮೀಟರ್ ಉದ್ದ ಮುನ್ನೂರು ಮೀಟರ್ ಅಗಲ ಇರಬಹುದು. ಅದರ ಮೇಲೆ ಒಂದು ಬೆಣಚು ಕಲ್ಲಿನ ರಚನೆ ಬಂಡೆಯುದ್ದಕ್ಕೂ  ಉತ್ತರ-ದಕ್ಷಿಣವಾಗಿ ಅರ್ಧ ಅಡಿ ಅಗಲದಷ್ಟು ಗೆರೆ ಎಳೆದಂತ ಶಿಲಾರಚನೆ ಇದೆ. ಈ ಗೆರೆ ರಾವಣ ಸೀತಾಪಹರಣದ ವೇಳೆ ಪುಷ್ಪಕ ವಿಮಾನದಲ್ಲಿ ಸಾಗುವಾಗ ತನ್ನ ಸೆರಗು ಬಂಡೆಯಮೇಲೆ ಸವರಿ ಹೋದದ್ದರಿಂದ ಆ ರೇಖೆ ರಚನೆ ಆಗಿದೆಯೆಂದು, ಜಂಟಿಗರಾಮೇಶ್ವರದಲ್ಲಿ ಜಟಾಯುವಿನ ಅಂತ್ಯ ಸಂಸ್ಕಾರ ಮಾಡಿದ ರಾಮ ಮತ್ತು ಲಕ್ಷ್ಮಣರು ಅದೇ ನೇರಕ್ಕೆ ದಕ್ಷಿಣ ದಿಕ್ಕಿಗೆ ಬರುವಾಗ ಅವರು ಆ ಮಟ್ಟಿಗೆ ಬೇಟಿಕೊಟ್ಟಿದ್ದರಂತೆ ಅಂದಿನಿಂದ ಅದು 'ರಾಮನ ಬಂಡೆ' ಎಂದು ಕರೆಯುವರು. ಆ ತರನೋಡಿದರೆ  ಕಾಕತಾಳೀಯವೋ ಅಥವಾ ಆಕಸ್ಮಿಕವೋ ಎಂಬಂತೆ ಜಟಿಂಗ ರಾಮೇಶ್ವರ ಬೆಟ್ಟ ಮತ್ತು ರಾಮನಬಂಡೆ ಹೆಚ್ಚು ಕಡಿಮೆ ಒಂದೇ ಸರಳರೇಖೆಯಲ್ಲಿವೆ. ಆದರೆ ಆ ಬೆಣಚು ಕಲ್ಲಿನ ಶಿಲಾ ರಚನೆ ಸೀತೆಯ ಸೆರಗಿಗೆ ಹೋಲಿಕೆ ಮಾಡಿದ ನಮ್ಮ ಪೂರ್ವಜರು ರಾಮನ ಮೇಲಿನ ಗೌರವ, ಭಕ್ತಿ ಜನಮಾನಸದಲ್ಲಿ ಯಾವ ಪರಿ ಇತ್ತು ಎಂಬುದಕ್ಕೆ ಉದಾಹರಣೆ ಕೊಡಬಹುದು.

ಮುಂದಿನ ವರ್ಷ ಮನೆಕಟ್ಟುವ ಯೋಜನೆ, ಯೋಚನೆ ಇದ್ದುದರಿಂದ  ಮನೆಕಟ್ಟಲು ಬೇಕಾಗುವ ಮುಖ್ಯ ಪರಿಕರಗಳನ್ನು ಜೋಡಿಸಿಕೊಳ್ಳುವ ಕೆಲಸ ಆರಂಭಿಸಿಕೊಂಡರು. ಅದಕ್ಕಾಗಿ ರಾಮನ ಬಂಡೆಯ ಮೇಲೆ ಸೈಜುಗಲ್ಲುಗಳನ್ನು ಹೊಡೆಯುವುದು.!ಹೆಬ್ಬಂಡೆಯಲ್ಲಿ  ಡೈನಮೈಟ್ ಅಥವಾ ಯಂತ್ರಗಳು ಬಳಸದೇ ಸೈಜುಗಲ್ಲು ಹೊಡೆಯುವುದು ತುಂಬಾ ಸವಾಲಿನ ಕೆಲಸ. ಇವ್ಯಾವುಗಳ ಸಹಾಯ ಇಲ್ಲದೇ ಎತ್ತಿನಗಾಡಿ ಕಟ್ಟಿಕೊಂಡು  ಬೆಂಕಿಯಲ್ಲಿ ಸುಡಬಹುದಾದ ದಹನ ವಸ್ತುಗಳ ಉರುವಲುಗಳನ್ನು ರಾಮನಬಂಡೆಗೆ ಸಾಗಿಸಿದರು. ದರಕಾಸಿನ ಜಮೀನಿನಲ್ಲಿ ಅರ್ಧ ಶತಮಾನದ ಹಳೆಯ ಸರ್ಕಾರಿ ಜಾಲಿ ಮರದ ಬೇರು ಸಹಿತ ಬುಡಗಳನ್ನು ಜೆ ಸಿ ಬಿ ಇಲ್ಲದ ಕಾಲದಲ್ಲಿ ನಮ್ಮ ತಂದೆ ತಾಯಂದಿರೇ ಎಬ್ಬಿಸಿ ಹಾಕಿದದ್ದರು‌. ಅವೆಲ್ಲವುಗಳನ್ನು  ಎತ್ತಿನಗಾಡಿಯಲ್ಲಿ ಆ ಬಂಡೆಯ ಮೇಲೆ ಏರಿ ರಾಶಿ ಮಾಡಿದರು. ನಮ್ಮದು ಎತ್ತಿನಗಾಡಿಯಲ್ಲಿ ಸವಾರಿ ಮಾತ್ರ. ಬೇಸಿಗೆಯಲ್ಲಿ ಆ ಬಂಡೆಯ ಮೇಲೆ ಆ ಉರುವಲು ಎಲ್ಲಾ ಹಾಕಿ ದೊಡ್ಡ ಬೆಂಕಿಯನ್ನು ಹಚ್ಚಿ  ಸುಡುತ್ತಿದ್ದರು. ಸುಟ್ಟ ಸ್ಥಳದಲ್ಲಿಯೇ ದೊಡ್ಡ ಸುತ್ತಿಗೆ ಮತ್ತು ಮೇಕು ಇಟ್ಟು ಬಂಡೆಯನ್ನು ಹೊಡೆಯುತ್ತಿದ್ದರು. ಬೆಂಕಿಯ ಶಾಖದ ಪ್ರಮಾಣ ಎಷ್ಟಿರುತ್ತೋ ಅಷ್ಟು ಗಾತ್ರದ ಬಂಡೆ ಸಡಿಲವಾಗಿ ಪದರ ಪದರದಂತೆ ಪಟ ಪಟನೇ ಸಿಡಿದು ತೆರೆದುಕೊಳ್ಳುತ್ತಿದ್ದವು. ಆ ಬಂಡೆಯನ್ನು ಪುನಃ ಬೇಕಾದ ಅಳತೆಗೆ ಕಡಿದುಕೊಳ್ಳಬೇಕಿತ್ತು.  ಯಾವ ಅಳತೆಗೆ ಬೇಕೋ ಆ ಅಳತೆಗೆ ಕಲ್ಲುಗಳನ್ನಾಗಿ ಮಾಡುತ್ತಿದ್ದರು. ಆದರೆ ಈ ಕೆಲಸ ಅನಿವಾರ್ಯವಾಗಿ ಪ್ರಯೋಗಾರ್ಥವಾಗಿ, ದುಡ್ಡಿಲ್ಲದೇ  ಮನೆ ಕಟ್ಟಲು ಕಲ್ಲು ಒಟ್ಟುಮಾಡಲು ಮಾಡಿದ್ದು ಅವರು. ಆದರೆ ೨೦×೩೦ ಅಳತೆಯ ಮನೆಗೆ ಬೇಕಾಗುವ ಪೂರಾ ಕಲ್ಲು ಬಂಡೆಗಳನ್ನು  ಸಂಪೂರ್ಣ ಅಪ್ಪ ಅಮ್ಮ ಬೆವರು ಸುರಿಸಿ ಬೆಂಕಿಯಂತೆ ಸುಡುವ ಬಂಡೆಯ ಮೇಲೆ ಬರಿಗಾಲಲ್ಲಿ ಕಲ್ಲು ಒಡೆದು ಮನೆಯ ಕಟ್ಟಿದ್ದರು. ನಾನು ಆ ಬಂಡೆಗಲ್ಲು ಇರುವಲ್ಲಿಗೆ ಆಗಾಗ ಹೋಗುತ್ತಿದ್ದೆ. ಬಿರಿ ಬಿಸಿಲಿನಲ್ಲಿ ಬರಿಗಾಲಲ್ಲಿ ಬಂಡೆಯ ಮೇಲೆ ನಿಲ್ಲಲಾಗದೇ, ಇರಲಾಗದೇ ಅಲ್ಲೇ ಸಮೀಪ ಲಕ್ಕಲಿ ಗಿಡಗಳು, ಹೊಂಗೆ ಗಿಡಗಳು ಹಾಗೂ ಕತ್ತಾಳಿಯ ಸಾಲು ಇತ್ತು. ಅಲ್ಲಿ ನಾನು ಯಾವಾಗಲೂ ಕುಳಿತಿರುತ್ತಿದ್ದೆ. ಅಪ್ಪ ಅಮ್ಮ ನೀರು ಕೇಳಿದರೆ ಹೋಗಿ ಕೊಟ್ಟು ಬರುತ್ತಿದ್ದೆ. ಆದ್ದರಿಂದ ಅದೊಂದು ಸ್ಥಳ ನನಗೆ ಸವಿನೆನಪಾಗಿತ್ತು. ಆಗಾಗ ಅತ್ತ ಕಡೆ ಹಲವು ವರ್ಷಗಳ ನಂತರವೂ ಹೋಗಿಬರುತ್ತಿದ್ದೆ. 

(ಮುಂದುವರೆಯುವುದು)

ಚಿತ್ರ - ಬರಹ : ನಾಗೇಂದ್ರ ಬಂಜಗೆರೆ, ಬಳ್ಳಾರಿ