ಜೇನು ಸಾಕಾಣಿಕೆ ಒಂದು ಲಾಭದಾಯಕ ಉಪಕಸುಬು

ಜೇನು ಸಾಕಾಣಿಕೆ ಒಂದು ಲಾಭದಾಯಕ ಉಪಕಸುಬು

ಭೂಮಿಯ ಮೇಲೆ ಇರುವ ವಿವಿಧ ಬಗೆಯ ಕೀಟಗಳಲ್ಲಿ ಜೇನು ನೋಣಗಳು ಮಾನವನಿಗೆ ಬಹು ಮುಖ್ಯ ಉಪಕಾರಿಯಾಗಿದೆ. ಭಾತರವು ಪ್ರತಿ ವರ್ಷ ೨೭,೦೦೦ ಟನ್ ಜೇನು ಉತ್ಪಾದಿಸುತ್ತದೆ, ಅದರಲ್ಲಿ ಶೇ ೨೦ ರಿಂದ ೨೫ ರಷ್ಟು (೭,೦೦೦ ಟನ್) ಜೇನನ್ನು ರಪ್ತು ಮಾಡಲಾಗುತ್ತಿದೆ. ಆದರೆ ಭಾರತದಲ್ಲಿರುವ ಸಂಪನ್ಮೂಲಗಳನ್ನು ನೋಡಿದಾಗ ಪ್ರಸ್ತುತ ಜೇನು ಉತ್ಪಾದನೆ ತುಂಬಾ ಕಡಿಮೆ. ಒಂದು ಅಂದಾಜಿನಂತೆ ಭಾರತದಲ್ಲಿ ೧೨೦ ಮಿಲಿಯನ್ ಜೇನು ಕುಟುಂಬಗಳನ್ನು ಸಾಕಬಹುದಾಗಿದೆ. ಇದರಿಂದಾಗಿ ೬ ಮಿಲಿಯನ್ ಜನರಿಗೆ ಉದ್ಯೋಗ, ೧.೨ ಮಿಲಿಯನ್ ಟನ್ ಜೇನು ಉತ್ಪಾದನೆ ಮತ್ತು ೧೫,೦೦೦ ಟನ್‌ನಷ್ಟು ಮೇಣ ತಯಾರಿಸಬಹುದು. ಜೇನು ಬಳಕೆಯಲ್ಲೂ ಭಾರತ ತುಂಬಾ ಹಿಂದಿದೆ. ಬೇರೆ ದೇಶಗಳಲ್ಲಿ ಜೇನು ಬಳಕೆ ೨೦೦ ಗ್ರಾಂ ಪ್ರತೀ ಮನುಷ್ಯನಿಗಾದರೆ, ಭಾರತದಲ್ಲಿ ಜೇನು ಬಳಕೆ ಕೇವಲ ೮.೪ ಗ್ರಾಂ ಭಾರತದಲ್ಲಿ ಹೆಚ್ಚಿನ ಜೇನಿನ ಬಳಕೆ ಔಷದಿ ತಯಾರಿಕೆ, ಆಹಾರ ಪದಾರ್ಥಗಳಲ್ಲಿ, ಬೇಕರಿ ಮತ್ತು ಸೌಂದರ್ಯ ವರ್ಧಕಗಳಲ್ಲಿ ಬಳಕೆಯಾಗುತ್ತದೆ. ಜೇನು ಸಾಕಾಣಿಕೆಯ ಮುಖ್ಯ ಉದ್ದೇಶ ಬೆಳೆಗಳಲ್ಲಿ ಪರಾಗಸ್ಪರ್ಶ ಹೆಚ್ಚಿಸುವುದು, ಜೇನು ಮತ್ತು ಮೇಣು ಉತ್ಪಾದಿಸುವುದಾಗಿದೆ. ಜೇಣುನೊಣಗಳು ಸ್ನೇಹ ಜೀವಿಗಳು ಮತ್ತು ಸಂಗಜೀವಿಗಳಾಗಿದ್ದು, ಗಿಡ-ಬಳ್ಳಿಗಳಿಂದ ಮಕರಂದ ಮತ್ತು ಪಾರಾಗವನ್ನು ಸಂಗ್ರಹಿಸಿ ಜೇಣು ಉತ್ಪಾದಿಸುತ್ತವೆ. ಜೇನುಗಳ ಜೊತೆಗಿನ ಒಡನಾಟ ಮನಸ್ಸಿಗೆ ಮುದನೀಡುವುದಲ್ಲದೆ, ಜೇನು ಮತ್ತು ಜೇನು ಆಧಾರಿತ ಉತ್ಪನ್ನಗಳಲ್ಲಿ ವೈದ್ಯಕೀಯ ಅಂಶಗಳಿರುವುದನ್ನು ಗಮನಿಸಿದರೆ ಜೇನು ಸಾಕಣಿಕೆಯ ಮಹತ್ವ ಅರಿವಾಗುತ್ತದೆ. ಜೇನು ಸಾಕಾಣಿಕೆಯನ್ನು ಆರಂಭಿಸುವ ಮೊದಲು ಅದರ ಸಂಪೂರ್ಣ ಪರಿಚಯ, ಸೂಕ್ತ ಮಾರ್ಗದರ್ಶನ ಪಡೆದುಕೊಳ್ಳುವದು ಅತೀ ಅವಶ್ಯಕ.

ವಿವಿಧ ಬಗೆಯ ಜೇನ್ನೋಣಗಳು: ನಮ್ಮ ದೇಶದಲ್ಲಿ ಐದು ಬಗೆಯ ಜೇನ್ನೊಣಗಳಿದ್ದು, ಅದರಲ್ಲಿ ನಾಲ್ಕು ದೇಶೀಯ ಜಾತಿಯವು ಮತ್ತು ಒಂದು ವಿದೇಶದ್ದಾಗಿದೆ. ಅವುಗಳೆಂದರೆ ಹೆಜ್ಜೇನು, ಮುಜಂಟಿ ಜೇನು, ಕೋಲು ಜೇನು ಹಾಗೂ ತುಡುವೆಜೇನು ಎಂಬ ದೇಶೀಯ ಜಾತಿಯವು ಮತ್ತು ಯುರೋಪಿಯನ್ ಜೇನು ಎನುವ ವಿದೇಶಿ ಜೇನು. ಇವುಗಳಲ್ಲಿ ತುಡುವೆ ಮತ್ತು ಯುರೋಪಿಯನ್ ಜೇನುಗಳನ್ನು ಕೃಷಿ ಭೂಮಿಗಳಲ್ಲಿ ಜೇನು ಪೆಟ್ಟಿಗೆಗಳ ಸಹಾಯದಿಂದ ಸಾಕಬಹುದಾಗಿದೆ.

೧. ಹೆಜ್ಜೇನು (ಎಪಿಸ್ ಡಾರ್ಸೇಟ): ಹೆಜ್ಜೇನು, ಜೇನುನೊಣಗಳಲ್ಲೇ ಅತೀ ದೊಡ್ಡದಾಗಿದೆ. ಇದಕ್ಕೆ ಕಲ್ಲು ಜೇನು, ಮರಜೇನು ಇತ್ಯಾದಿ ಸ್ಥಳೀಯ ಹೆಸರುಗಳಿವೆ. ಇವು ಎತ್ತರವಾದ ಮರಗಳಲ್ಲಿ, ದೊಡ್ಡ ಕಟ್ಟಡಗಳಲ್ಲಿ, ಗೋಪುರಗಳ ಬದಿಯಲ್ಲಿ, ದೊಡ್ಡದೊಡ್ಡ ಕಲ್ಲು ಬಂಡೆಗಳ ಮೇಲ್ಬಾಗದ ಬದಿಗಳಲ್ಲಿ ದೊಡ್ಡಗಾತ್ರದ ಒಂದೇ ಎರಿ(ತೊಟ್ಟು) ಇರುವ ಗೂಡು ಕಟ್ಟುತ್ತವೆ. ಇವುಗಳ ಜೇನುಗೂಡುಗಳು(ಜೇನುಹುಟ್ಟು) ದೊಡ್ಡದಾಗಿದ್ದು ಒಂದು ಕುಟುಂಬಕ್ಕೆ ಸೇರಿದ ಎಲ್ಲಾ ನೊಣಗಳು ಒಂದೆ ಗೂಡಿನಲ್ಲಿ ವಾಸಿಸುತ್ತವೆ. ವರ್ಷಕ್ಕೆ ಸುಮಾರು ೨೦ ರಿಂದ ೨೫ ಕೆ.ಜಿ ಗಳಷ್ಟು ಜೇನು ಉತ್ಪಾದಿಸುತ್ತವೆ. ಇದರ ಚುಚ್ಚುವ(ಕಡಿಯುವ) ಗುಣ, ಅತೀ ಹೆಚ್ಚಿನ ಗಾಳೀ-ಬೆಳಕಿನ ಅವಶ್ಯಕತೆ ಹಾಗೂ ವಲಸೆ ಪ್ರವೃತ್ತಿಗಳಿಂದಾಗಿ ಪೆಟ್ಟಿಗೆಗಳಲ್ಲಿ ಇಟ್ಟು ಸಾಕುವುದು ಸಾಧ್ಯವಿಲ್ಲ.

೨. ತುಡುವೆ ಜೇನು (ಎಪಿಸ್ ಸೇರಾನ): ಇದನ್ನು ಭಾರತೀಯ ಜೇನು, ಪೊಟರೆ ಜೇನೆಂದು ಸಹ ಕರೆಯಲಾಗತ್ತದೆ. ತುಡುವೆ ಜೇನುಗಳು ಕತ್ತಲು ಪ್ರದೇಶಗಳಲ್ಲಿ ಅಂದರೆ ಹುತ್ತ, ಮರದ ಪೊಟರೆ, ಹಳೆಯ ಗೋಡೆಗಳ ಸಂದುಗಳಲ್ಲಿ ವಾಸಮಾಡುತ್ತವೆ. ವಾಸ ಮಾಡುವ ಜಾಗ, ಲಭ್ಯವಿರುವ ಆಹಾರ ಮತ್ತು ನೋಣಗಳ ಸಂಖ್ಯೇತೆ ಅನುಗುಣವಾಗಿ ಒಂದೇ ಕುಟುಂಬದ ಜೇನುನೊಣಗಳು ೮ ರಿಂದ ೧೦ ಎರಿಗಳಿರುವ ಗೂಡು ನಿರ್ಮಿಸುತ್ತವೆ. ತುಡುವೆ ಜೇನು ವಲಸೆ ಹೋಗುವುದಾಗಲೀ ಅಥವಾ ಚಚ್ಚುವುದಾಗಲಿ(ಕಡಿಯುವುದು) ಅತಿ ವಿರಳ. ಈ ಎಲ್ಲ ಕಾರಣದಿಂದಾಗಿ ಇವುಗಳನ್ನು ಪಟ್ಟೆಗೆಗಳಲ್ಲಿಟ್ಟು ಸಾಕುವುದು ಸುಲಭ ಮತ್ತು ಲಾಭದಾಯಕ. ಇವು ವರ್ಷಕ್ಕೆ ೧೦ ರಿಂದ ೧೫ ಕೆ.ಜಿಗಳಷ್ಟು ಜೇನು ಉತ್ಪಾದಿಸುತ್ತವೆ.

೩. ಕೋಲು ಜೇನು (ಎಪಿಸ್ ಪ್ಲೋರಿಯಾ): ಇವು ತುಡುವೆ ಜೇನುಗಳಿಗಿಂತ ಚಿಕ್ಕದಾಗಿರುತ್ತದೆ. ಇದಕ್ಕೆ ಕಿರು ಜೇನು, ಚಿಟ್ಟ ಜೇನು ಇತರೆ ಹೆಸರುಗಳಿವೆ. ಇವುಗಳು ಸಾಮಾನ್ಯವಾಗಿ ಗಿಡದ ಪೊದೆಗಳಲ್ಲಿ ಹಾಗೂ ಸಣ್ಣ ಮರಗಳ ಕೊಂಬೆಗಳಲ್ಲಿ ಒಂದೇ ಎರಿ(ತೊಟ್ಟು) ಇರುವ ಗೂಡನ್ನು ಕಟ್ಟುತ್ತವೆ. ಹೆಚ್ಚು ಗಾಳಿ-ಬೆಳಕುನ್ನು ಬಯಸುತ್ತವೆ. ಇದಕ್ಕಾಗಿ ಹೆಚ್ಚು ಹೆಚ್ಚಾಗಿ ವಲಸೆ ಹೋಗುತ್ತಿರುತ್ತವೆ. ಇವುಗಳನ್ನು ಪೆಟ್ಟಿಗೆಯಲ್ಲಿ ಇಟ್ಟು ಸಾಕುವುದು ಸಾಧ್ಯವಿಲ್ಲ ಮತ್ತು ಲಾಭದಾಯಕವಲ್ಲ. ಇವುಗಳು ವರ್ಷಕ್ಕೆ ಸುಮಾರು ೭೫೦ ಗ್ರಾಂ ರಿಂದ ೧ ಕೆ.ಜಿ ಯಷ್ಟು ಜೇನು ಉತ್ಪಾದಿಸುತ್ತವೆ.

೪. ಮುಜಂಟಿ ಜೇನು (ಟ್ರೆöಗೋನ ಇರಿಡಿಪೆನ್ನಿಸ್): ಇದನ್ನು ನಸರು ಜೇನು, ರಾಳ ಜೇನು ಮುತಾಂದ ಸ್ಥಳೀಯ ಹೆಸರುಗಳಿಂದ ಕರೆಯಲಾಗುತ್ತದೆ. ಇವು ಸತೀ ಸಣ್ಣ ಗಾತ್ರದ ಜೇನುನೊಣಗಳಾಗಿದ್ದು, ಮರದ ಪೊದೆಗಳಲ್ಲಿ, ಗೋಡೆಗಳ ಸಂದುಗೊಂದುಗಳಲ್ಲಿ ವಾಸಿಸುತ್ತವೆ. ಈ ಜೇನುನೊಣಗಳಲ್ಲಿ ಚುಚ್ಚುವ ಮುಳ್ಳು ಇರುವುದಿಲ್ಲ. ಇವು ದ್ರಾಕ್ಷಿಗೊಂಚಲುಗಳಂತೆ ಇರುವ ಎರಿ ಗೂಡನ್ನು ಮಣ್ಣು ಮತ್ತು ಅಂಟಿನಿಂದ ಮಾಡುತ್ತವೆ. ಪ್ರತಿ ಜೇನು ಗೂಡಿನಿಂದ ಸುಮಾರು ೩೫೦ ಗ್ರಾಂ. ಜೇನನ್ನು ವರ್ಷಕ್ಕೆ ಪಡೆಯಬಹುದು. ಇವುಗಳ ಸಾಕೆಣಿಕೆಯಿಂದ ಆರ್ಥಿಕವಾಗಿ ಲಾಭ ಗಳಿಸಲು ಸಾಧ್ಯವಿಲ್ಲ. ಆದರೆ ಇವುಗಳ ಜೇನು ಔಷಧಿ ಗುಣಗಳನ್ನು ಹೊಂದಿರುವುದರಿAದ ಅತೀ ಹೆಚ್ಚು ಮಹತ್ವ ಪಡೆದಿದೆ.

೫. ಯುರೋಪಿಯನ್ ಜೇನು (ಎಪಿಸ್ ಮೆಲ್ಲಿಫೆರಾ): ಇದನ್ನು ಇಟಲಿಯನ್ ಜೇನೆಂದು ಸಹ ಕರೆಯಲಾಗುತ್ತದೆ. ಯುರೋಪಿಯನ್ ಜೇನು ನೊಣಗಳು ತುಡುವೆ ಜೇನು ನೊಣಗಳಿಗಿಂತ ದೊಡ್ಡದಾಗಿದ್ದು, ಇವುಗಳನ್ನು ಸಹ ಪೆಟ್ಟಿಗೆಯಲ್ಲಿಟ್ಟು(೧೦ ಎರಿಗಳಿರುವ ಗೂಡು) ಸಾಕಬಹುದು. ಈ ತಳಿಯು ಥಾಯ್ ಸ್ಯಾಕ್ ಬ್ರೂಡ ನಂಜು ರೋಗಕ್ಕೆ ನಿರೋಧವನ್ನು ಹೊಂದಿದ್ದು, ವರ್ಷಕ್ಕೆ ಸುಮಾರು ೨೦ ರಿಂದ ೨೫ ಕೆ.ಜಿ ಗಳಷ್ಟು ಜೇನು ಉತ್ಪಾದಿಸುತ್ತವೆ.

ಜೇನು ನೋಣಗಳ ಕುಟುಂಬ: ಜೇನು ಕುಟುಂಬದಲ್ಲಿ ಒಂದು ರಾಣಿ ಜೇನು, ಕೆಲವು ಗಂಡು ಜೇನುನೋಣಗಳು ಹಾಗೂ ೮ ರಿಂದ ೧೦ ಸಾವಿರ ಕೆಲಸಗಾರ ಜೇನುನೋಣಗಳಿರುತ್ತವೆ. ರಾಣಿ ಜೇನು ದಿನಕ್ಕೆ ಸಾವಿರಾರು ಮೊಟ್ಟೆಗಳನ್ನಿಟ್ಟು ಸಂತಾನ ಅಭಿವೃದ್ಧಿಗೊಳಿಸುವುದಲ್ಲದೇ, ಇಡೀ ಕುಟುಂಬದ ಕೆಲಸ ಕಾರ್ಯಗಳು ಸಗಮವಾಗಿ ಸಾಗುವಂತೆ ನೋಡಿಕೊಳ್ಳುತ್ತದೆ.ಕೆಲಸಗಾರ ಜೇನುನೋಣಗಳು ಗೂಡಿನ ಎಲ್ಲ ಕೆಲಸಗಳನ್ನು ಅಚ್ಚುಕಟ್ಟಾಗಿ ಮತ್ತು ವ್ಯವಸ್ಥಿತವಾಗಿ ನಿರ್ವಹಿಸುತ್ತವೆ. ಪ್ರಮುಖವಾಗಿ ಹೂವಿನ ರಸ ಮತ್ತು ಪರಾಗ ಸಂಗ್ರಹಿಸುವುದು, ಗೂಡು ಕಟ್ಟುವುದು, ಮಕರಂದವನ್ನು ಜೇನಾಗಿ ಪರಿವರ್ತಿಸುವುದು, ಗೂಡಿಗೆ ರಕ್ಷಣೆ, ರಾಣಿ ನೋಣವನ್ನು ಸಾಕುವುದು, ಹೀಗೆ ಪ್ರತಿಯೊಂದು ಕೆಲಸವನ್ನು ಹಂಚಿಕೊಂಡು ಮಾಡುತ್ತವೆ. ಅಲ್ಲದೆ ಇವು ಅರ್ಥಪೂರ್ಣವಾದ ನೃತ್ಯ ಮಾಡುವುದರ ಮೂಲಕ ಸಂಭಾಷಣೆ ನಡೆಸುತ್ತವೆ.

ಜೇನು ಸಾಕಾಣಿಕೆಗೆ ಬೇಕಾಗುವ ಸಾಮಾಗ್ರಿಗಳು: ಜೇನು ಕೃಷಿ ಪ್ರಾರಂಬಿಸಲು ಅಪೇಕ್ಷಿಸುವ ಕೃಷಿಕರು ಈ ಕೆಳಗೆ ತಿಳಿಸಿದ ಉಪಕರಣಗಳನ್ನು ಹೊಂದಿರಬೇಕಾಗುತ್ತದೆ. ಜೇನು ಸಾಕಾಣಿಕೆ ಮಾಡಲು ಯೂರೋಪಿಯನ್ ಜಾತಿಯ ಅಥವಾ ಭಾರತೀಯ ಜಾತಿಯ ಜೇನು ಕುಟುಂಬವನ್ನು ಆಯ್ಕೆ ಮಾಡಬಹುದು. ಹೆಚ್ಚು ಬಿಸಿಲಿರುವ ಪ್ರದೇಶಗಳಲ್ಲಿ ಭಾರತೀಯ ತುಡುವೆ ಜೇನು ಸೂಕ್ತ.

ಜೇನು ಸಾಕಾಣಿಕೆ ಪೆಟ್ಟಿಗೆ: ಉತ್ತಮ ಗುಣಮಟ್ಟದ ಮರಗಳಾದ ಸಾಗುವಾನಿ, ಮತ್ತಿ ಅಥವಾ ಹಲಸಿನ ಮರಗಳ ಕಟ್ಟಿಗೆಯಿಂದ ಸರಿಯಾದ ಅಳತೆಯಲ್ಲಿ ಜೇನು ಸಾಕಣೆ ಪೆಟ್ಟಿಗೆಯನ್ನು ತಯಾರಿಸಬೇಕು. ಗೂಡುಗಳನ್ನು ಕಟ್ಟಲು ಬೇಕಾಗುವ ಚೌಕಟ್ಟುಗಳಿರುವಂತೆ ಸ್ಥಳಾವಕಾಶ ಕಲ್ಪಿಸಬೇಕು. ಜೇನು ಪೆಟ್ಟಿಗೆಯನ್ನು ಕಂಬದ ಮೇಲೆ ಇಡಬೇಕು. ಬೇಕಾಗುವ ಇತರ ಉಪಕರಣಗಳೆಂದರೆ, ಹೊಗೆಯಾಡಿಸುವ ಉಪಕರಣ, ಶುಚಿಗೊಳಿಸುವ ಸಾಧನ, ಮುಖ ಪರೆದೆ, ರಾಣಿ ಪ್ರತಿಬಂಧಿಸುವ ಪಂಜರ, ರಾಣಿ ತಡೆ ಗೇಟು, ಮೊಹರು ತೆಗೆಯುವ ಚಾಕು, ಜೇನು ತೆಗೆಯುವ ಯಂತ್ರ, ಕೃತಕ ಎರಿ ತಯಾರಿಸುವ ಯಂತ್ರ, ಹೈವ್ ಟೂಲ್, ಮೇಣದ ಹಾಳೆಗಳು ಮತ್ತು ಇತ್ಯಾದಿ.

ಜೇನು ಮತ್ತು ಇತರೆ ಉತ್ಪನ್ನಗಳು:  ಜೇನು ತುಪ್ಪವು ಒಂದು ಅಂಟಾದ ಸಿಹಿ ಪದಾರ್ಥ. ಇದು ವಿವಿಧ ಗಿಡಗಳ ಹೂಗಳಲ್ಲಿನ ಮಕರಂದದ ಉತ್ಪನ್ನ, ಜೇನು ನೊಣಗಳು ಇದನ್ನು ಸಂಗ್ರಹಿಸಿ ಜೇನನ್ನಾಗಿ ಮಾರ್ಪಡಿಸಿ ತಮ್ಮ ಜೇನಿನ ಎರಿಗಳಲ್ಲಿ ತುಂಬಿಡುತ್ತವೆ. ಜೇನನ್ನು ಆಹಾರವಾಗಿ ಮತ್ತು ಔಷಧವಾಗಿ ಉಪಯೋಗಿಸಬಹುದು. ಜೇನು ಒಂದು ಪೌಷ್ಟಿಕ ಆಹಾರವಾಗಿದ್ದು ಇದರಲ್ಲಿ ಶೇ.೧೮ ರಿಂದ ೨೨ ರಷ್ಟು ತೆವಾಂಶ, ಶೇ. ೨೫ ರಿಂದ ೪೦ ರಷ್ಟು ಫ್ರುಕ್ಟೋಸ್, ಶೇ. ೨ ರಿಂದ ೪ ರಷ್ಟು ಮಾಲ್ಟೋಸ್, ಶೇ, ೨೫ ರಿಂದ ೩೫ ಗ್ಲೂಕೋಸ್ ಮತ್ತು ಇತರೆ ಖನಿಜ ಪೋಷಕಾಂಶಗಳಿರುತ್ತವೆ.

ಮೇಣ : ಜೇನಿನ ಮೇಣವು ಜೇನಿಗಿಂತ ಬೆಲೆಬಾಳುವ ವಸ್ತುವಾಗಿದ್ದು, ಹಲವಾರು ಕೈಗಾರಿಕೆಗಳಲ್ಲಿ ಜೇನು ಮೇಣದ ಉಪಯೋಗವಿದೆ. ಇದನ್ನು ಕಂಪ್ಯೂಟರ್ ನಲ್ಲಿ, ಚರ್ಮದ ಕೈಗಾರಿಕೆಗಳಲ್ಲಿ, ಮರ ಪಾಲೀಶ ಮತ್ತು ಮೇಣದ ಬತ್ತಿಗಳನ್ನು ತಯಾರಿಸುವಲ್ಲಿ ಬಳಸುತ್ತಾರೆ.

ಜೇನು ಕಡಿತದ ವಿಷ: ಜೇನು ನೊಣದ ಕೊಂಡಿಯಲ್ಲಿರುವ ವಿಷವನ್ನು ಬೇರ್ಪಡಿಸಿ, ಅದರಿಂದ ಚುಚ್ಚುಮುದ್ದು ತಯಾರಿಸುತ್ತಾರೆ. ಇದರ ಔಷದಿಯನ್ನು ಹೃದಯ ರೋಗ, ನರಗಳ ರೋಗ, ರಕ್ತದೊತ್ತಡ, ಜಿಡ್ಡಿನಿಂದ ಶೃರೀರದಲ್ಲಿ ಶೇಖರವಾಗುವ ಕೊಲೆಸ್ಟಾçಲ್ ಅನ್ನು ಕಡಿಮೆ ಮಾಡಲು ಸಹ ಬಳಸುತ್ತಾರೆ. ಬೆಳೆ ಇಳುವರಿ ಹೆಚ್ಚಿಸುವಲ್ಲಿ ಜೇನು ಸಾಕಾಣಿಕೆಯ ಮಹತ್ವ ಜೇನು ಸಾಕಾಣಿಕೆಯಿಂದ ದೊರೆಯುವ ಒಟ್ಟು ಲಾಭದಲ್ಲಿ, ಸುಮಾರು ಶೇ. ೬೫ ರಷ್ಟು ಅನುಕೂಲ ಅವುಗಳ ಪರಾಗ ಸ್ಪರ್ಶದಿಂದಾಗುತ್ತದೆ. ಸೈಸರ್ಗಿಕವಾಗಿ ಮತ್ತು ಕೃಷಿಯಲ್ಲಿ ನಡೆಯುವ ಪರಾಗ ಸ್ಪರ್ಶವು ಮನುಷ್ಯನ ಆರ್ಥಿಕ ಲೆಕ್ಕಚಾರಕ್ಕೆ ನಿಲುಕ್ಕದ್ದಾಗಿದೆ. ಭಾರತಲ್ಲಿನ ಅನೇಕ ಬೆಳೆಗಳು ಪರಾಗಸ್ಪರ್ಶಕ್ಕಾಗಿ ಜೇನುನೊಣಗಳನ್ನು ಅವಲಂಬಿಸಿವೆ. ಜೇನು ನೋಣಗಳು ಬಹಳಷ್ಟು ಬೆಳೆಗಳಲ್ಲಿ ಪರಾಗಸ್ಪರ್ಶ ಮಾಡಿ ಶೇಕಡ ೫೦ ರಿಂದ ೧೦೦ ರಷ್ಟು ಇಳುವರಿಯನ್ನು ಹೆಚ್ಚಿಸಿದ ಉದಾಹರಣೆಗಳಿವೆ. ಪ್ರಮುಖವಾಗಿ ಸೂರ್ಯಕಾಂತಿ, ಕುಸುಬೆ, ಕಾಫಿ, ಏಲಕ್ಕಿ, ಸೇಬು, ದ್ರಾಕ್ಷಿ, ಹುಚ್ಚೆಳ್ಳು, ಸಾಸಿವೆ, ಕುಂಬಳಕಾಯಿ ಜಾತಿಯ ಬೆಳೆಗಳು ಹಾಗೂ ಇತ್ಯಾದಿ.

ಜೇನು ಗೂಡನ್ನು ಸ್ಥಾಪಿಸುವ ಕಾಲ: ಜೇನು ಸಾಕಾಣಿಕೆ ಪ್ರಾರಂಭಿಸಲು ಹೆಚ್ಚು ಹೂಗಳು ಅರಳುವ ಕಾಲವಾದ ನವೆಂಬರ್ ನಿಂದ ಮಾರ್ಚ್ ತಿಂಗಳು ಉತ್ತಮ.

ಪೆಟ್ಟಿಗೆ ಸಂರಕ್ಷಣೆ ಮತ್ತು ನಿರ್ವಹಣೆ: ಜೇನು ಪೆಟ್ಟಿಗೆಯನ್ನು ಇರುವೆಗಳು, ಇಲಿಗಳು, ಗೆದ್ದಲುಗಳು ಮತ್ತು ಇತ್ಯಾದಿಗಳಿಂದ ರಕ್ಷಿಸಬೇಕು. ಇದಕ್ಕಾಗಿ ಎರಡರಿಂಧ ಎರಡುವರೆ ಅಡಿಗಳಷ್ಟು ಎತ್ತರಕ್ಕೆ ಕಂಬ ಹಾಕಿ ಅದರ ಮೇಲೆ ಪೆಟ್ಟಿಗೆಯನ್ನು ಇಡಬೇಕು. ಇರುವೆ ನೊಣಗಳ ಶತ್ರುಗಳಾದ ಮೇಣದ ಚಿಟ್ಟೆ, ಹಳದಿ ಬಣ್ಣದ ಖಣಜ, ಇತ್ಯಾದಿಗಳಿಂದ ರಕ್ಷಿಸಿಸಬೇಕು. ಮಳೆಗಾಲ(ಜೂನ್ ರಿಂದ ಸೆಪ್ಟೆಂಬರ್) ಮತ್ತು ಬೇಸಿಗೆ ಕಾಲ(ಮಾರ್ಚ ರಿಂದ ಮೇ)ಗಳಲ್ಲಿ ಆಹಾರ ಹೆಚ್ಚಾಗಿ ಸಿಗುವುದಿಲ್ಲರುವುದರಿಂದ ಆಗಾಗ ಸಕ್ಕರೆ ಪಾಕವನ್ನು ಕೊಡಬೇಕು. ಚಳಿಗಾಲ ಸಮಯಕ್ಕೆ ಸರಿಯಾಗಿ ತೆಗೆಯುತ್ತಿರಬೇಕು. ಪೆಟ್ಟೆಗೆಯನ್ನು ಆಗಾಗ ತೆರೆದು ಜೇನು ನೊಣದ ಸಂಖ್ಯಾ ಬಲಕ್ಕನುಸಾರವಾಗಿ ಜೇನು ಚೌಕಟ್ಟುಗಳನ್ನು ಕೂಡುವುದು, ಕುಟುಂಬ ಪಾಲಾಗುವಿಕೆಯನ್ನು ತಡೆಯುವುದು, ಕೃತಕ ಆಹಾರ ಪೂರೈಕೆ ಮತ್ತು ಶತ್ರುಕೀಟಗಳ ಹಾವಳಿಯನ್ನು ಪರೀಕ್ಷಿಸುತ್ತಿರಬೇಕು.

ಮಾಹಿತಿ ಸಹಕಾರ: ಸತೀಶಕುಮಾರ ಕಾಳೆ, ಯಾದಗಿರಿ

ಚಿತ್ರ ಕೃಪೆ: ಅಂತರ್ಜಾಲ ತಾಣ