ಜೇನು ಹುಳುಗಳು ಮತ್ತು ತಪ್ಪು ತಿಳುವಳಿಕೆಗಳು (ಭಾಗ 2)

ಜೇನು ಹುಳುಗಳು ಮತ್ತು ತಪ್ಪು ತಿಳುವಳಿಕೆಗಳು (ಭಾಗ 2)

ನೀರಿನಲ್ಲಿ ಕರಗಿದರೆ ಅದು ಶುದ್ಧ ತುಪ್ಪ : ಅದ್ಯಾವುದೋ ಪ್ರಖ್ಯಾತ ಕಂಪನಿಯೊಂದು 'ಯಾವ ಜೇನುತುಪ್ಪ ನೀರಿನಲ್ಲಿ ಕರಗುವುದಿಲ್ಲವೋ ಅದು ಶುದ್ಧ ಜೇನು ಎಂದು ಜಾಹಿರಾತು ಕೊಡುತ್ತಿವೆ. ಆದರೆ ಕೋಲುಜೇನು ಪಿಟ್ಟಜೇನು, ಮಿಸ್ರಿಜೇನು ಮತ್ತು ತುಡುವೆ ಜೇನು ಹುತ್ತ ಮರದ ಪೊಟರೆಗಳಲ್ಲಿ ತೆಗೆದ ಜೇನುತುಪ್ಪ ನೀರಿಗೆ ಕೆಲವೇ ಸೆಕೆಂಡ್ ಗಳಲ್ಲಿ ಶೇಕಡಾ ನೂರಕ್ಕೆ ನೂರರಷ್ಟು ಬೆರೆತು ಹೋಗುತ್ತದೆ. ನೀರಿನ ಅಂಶ ಸೇರುವ ಮುನ್ನ ಬಿಸಿಲಿಗೂ ಗಾಳಿಗೂ ಆವಿಯಾಗದ ಒಂದು ಮಂದ ಜಿಗುಟಿನ ದ್ರವ. ಆದರೆ ನೀರಿನೊಂದಿಗೆ ಇದು ಸುಲಭವಾಗಿ ವರ್ತಿಸಿ ನೀರಿನೊಂದಿಗೆ ಸಮ್ಮಿಲನ ಆಗುತ್ತದೆ. ಇನ್ನೂ ಹೆಜ್ಜೇನು ತುಪ್ಪ ಮೇಲ್ಕಾಣಿಸಿದ ಜೇನಿಗಿಂತಲೂ ಸ್ವಲ್ಪ ಮಂದವಾಗಿರುತ್ತದೆ ಬಿಟ್ಟರೆ ಇದು ನೀರಿನೊಂದಿಗೆ ಕರಗದೇ ಇರುವ ದ್ರವ ಅಲ್ಲವೇ ಅಲ್ಲ. ಹಾಗೆ ತುಸು ಎಣ್ಣೆಗೆಂಪು ಇದರ ಬಣ್ಣ ಇರುತ್ತದೆ. ಆದರೆ ಈಗ ಮಾರುಕಟ್ಟೆ ಯಲ್ಲಿ ಕೆಂಪು ಬಣ್ಣದ ಜೇನುತುಪ್ಪ ಸಿಗುತ್ತದೆ ಅದು ಯಾವ ಜೇನೋ ತಿಳಿಯದು. ಹಾಗೇ ಇದು ಖರ್ಜೂರ ಹಣ್ಣಿನ ವ್ಯವಸ್ಥಿತ ಉತ್ಪಾದನೆಯ ದ್ರವ ಎಂದು ನನಗನಿಸುತ್ತದೆ. ಆದರೆ ಇವರು ಕಾರ್ಪೋರೇಟ್ ವಲಯದವರು. ಸರ್ಕಾರದ ನಿಯಂತ್ರಕರು. ಅದು ಅಸತ್ಯವಾದರೂ ಕಾನೂನುಬದ್ಧವಾಗಿ ಎಲ್ಲಾ formalities ಕೈಗೊಂಡಿ ಇರುತ್ತಾರೆ. ಮೀಡಿಯಾ ಅಡ್ವರ್ಟೈಜ್ ಗಳಿಗೆ ಅದು ಓಡುತ್ತದೆ.

ರಾಣಿ ಜೇನಿಗೆ ದಿಬ್ಬಣಯಾತ್ರೆ.. ಗಂಡು ಜೇನಿಗೆ ಸ್ಮಶಾನ ಯಾತ್ರೆ : ರಾಣಿ ಜೇನು ಒಂದು ಜೇನುಗೂಡಿನಲ್ಲಿ ಒಂದು ಹುಳು ಮಾತ್ರ ಇರುತ್ತದೆ ಎಂದು ಹೇಳುತ್ತಾರೆ. ಆದರೆ ನಾನು ಜೇನುಗೂಡಿನಲ್ಲಿ ನೋಡಿದಂತೆ ಹತ್ತಾರು ಹುಳುಗಳು ಇರುತ್ತವೆ. ಒಂದು ಸಾಧಾರಣವಾದ ಕೋಲು ಜೇನಿನಲ್ಲಿ ಪ್ರತಿ ಸಂತಾನ ಚಕ್ರದ ಸುತ್ತಿನಲ್ಲಿ ಕನಿಷ್ಠ ಎಂಟತ್ತು ಹುಳುಗಳು ಹುಟ್ಟುತ್ತವೆ. (ಸಾಕ್ಷಿ ನಿರೂಪಿಸುವೆ) ಆದರೆ ನನಗೆ ಈಗಲೂ ಪ್ರಶ್ನೆ ಇರುವುದು ರಾಣಿ ಜೇನು ಹೆಜ್ಜೇನಿನಗಾತ್ರದಲ್ಲಿ ಇರುತ್ತದೆ. ಈ ಮೊಟ್ಟೆ ಇಡುವುದು ಇದೇ ರಾಣಿಜೇನುಗಳು. ಇದೇ ರಾಣಿ ಜೇನಿನ ಸಾಂಗತ್ಯ ಮಾಡಿದ ಗಂಡು ಜೇನು ಮರಣ ಹೊಂದುವುದಂತೆ! ಈ ವಿಷಯವನ್ನು ನಾನು ಸಾರಾ ಸಗಟಾಗಿ ತಳ್ಳಿಹಾಕುತ್ತೇನೆ. ಲಿಂಗ ತಾರತಮ್ಯ ಮಾಡುತ್ತಿರುವ ಇಂದಿನ ಸಾಮಾಜಿಕ ವ್ಯವಸ್ಥೆಯಲ್ಲಿ ಗಂಡುಹೆಣ್ಣುಗಳ ಅಸಮ ಅನುಪಾತ ನೋಡಬಹುದು. ಅದೇ ತರ ಇಲ್ಲಿ ಮಿಲನ ಹೊಂದಿದ ಗಂಡುಗಳೆಲ್ಲವೂ ಮರಣ ಹೊಂದಿದ್ದರೆ ಬಹುಶಃ ರಾಣಿ ಜೇನುಗಳೇ ತುಂಬಿರುತ್ತಿದ್ದವು. ಇದು ಯಾರೋ ಅರೆ ಮಾಹಿತಿಯ ಹಿಡಿದು ನೀಡಿದ ಹೇಳಿಕೆ. ಪ್ರಕೃತಿಯಲ್ಲಿ ಮಿಲನದಿ ಮರಣ un natural...!!ನಾನು ಜೇನುಗೂಡುಗಳಲ್ಲಿ ದೊಡ್ಡ ಹುಳುವೊಂದನ್ನು (ರಾಣಿಜೇನು) ಇತರೆ ಕೀಟಗಳು ಅದನ್ನು ಹಿಡಿಯಲು ಓಡುತ್ತಾ ಹಾರುತ್ತಾ ಹಿಡಿಯುವವು. ಅದೂ ಜೇನುಗೂಡಿನ ಎರಡೂ ಬದಿಯಲ್ಲೂ,ಇದೇ ರೀತಿಯಾಗಿ ಆಟ ಆಡಿಸುತ್ತಲೇ ಇರುತ್ತದೆ. ಮೇಲೆ ಕೆಳಗೆ ಹುಳಗಳ ಮದ್ಯೆ ತುಂಬಾ ಆಟ ಆಡಿಸುತ್ತದೆ. ಇದೇ ಜೇನುಗಳ ಸರಸ... ಇದೇ ತರ ಹೆಣ್ಣು ಹುಳುಗಳು ಫಲವತ್ತತೆಗೆ ಬಂದಾಗ ವಯಸ್ಕ ಗಂಡು ಹುಳುಗಳು ರಾಣಿಜೇನಿನ ಹಿಂದೆ ಬಿದ್ದು ಅಲೆಯುವವು. ಈ ರಾಣಿ ಜೇನುಹುಳ ದೈತ್ಯವಾಗಿರುವುದರಿಂದ ಸಿಕ್ಕಾ ಪಟ್ಟೆ ಹಾರುವ ಹತ್ತಾರು ಕಿಲೋಮೀಟರ್ ತಿರುಗುವ ಶಕ್ತಿ ಇದಕ್ಕಿಲ್ಲ. ನನ್ನ ಜೇನು ಬದುಕಿನ ಇತಿಹಾಸದಲ್ಲಿ ರಾಣಿ ಜೇನೊಂದು ನೀರು ಕುಡಿಯಲು ಜೇನು ಮಕರಂದ ತರಲು ಹೊರಬಂದಿಲ್ಲ. ಇದು ತನ್ನ ಪೂರ್ಣಾವಧಿ house wife. ಆದರೆ ಕೆಲವರು ಹೇಳುವರು ರಾಣಿ ಜೇನು ಸರಸವಾಡುತ್ತಾ ಗಂಡುಹುಳುಗಳನ್ನು ಆಕಾಶದೆತ್ತರಕ್ಕೆ ಕರೆದುಕೊಂಡು ಹೋಗುವುದಂತೆ. ಗಾಳಿಯಲ್ಲಿ ಮಿಲನ ಹೊಂದುವವಂತೆ... ಇದು ನಾನು ಕಂಡಂತೆ ಅಸತ್ಯ. ಹದ್ದುಗಳು ಆಕಾಶದಲ್ಲಿ ಮಿಲನ ಮಾಡುತ್ತಾವೆ. ಆದರೆ ನನ್ನ ಅನುಭವದಲ್ಲಿ ಜೇನುಹುಳು ಹೊರಗಿನ ವಾತಾವರಣದಲ್ಲಿ ಸೇರಿರುವುದನ್ನು ನನ್ನ ಇಪ್ಪತ್ತೈದು ವರ್ಷಗಳ ಅನುಭವದಲ್ಲಿ ಕಂಡಿರುವುದಿಲ್ಲ. ಹಾಗೆ ನಾನು ಜೇನುಗಳನ್ನು ಮುಂಜಾನೆಯಿಂದ ಕತ್ತಲಾಗುವವರೆಗೂ ಕೆಲವೊಂದು ಬಾರಿ ಬ್ಯಾಟri ಬಿಟ್ಟು ರಾತ್ರಿಯ ಹೊತ್ತಲ್ಲಿ ಹೇಗೇಗೆ ಇರುತ್ತಾವೆಂದು ಗಮನಿಸಿದ್ದೇನೆ. ಈ ತರಹದ ಮಿಲನ ನಾನೆಂದೂ ಕಂಡಿಲ್ಲ.

ಕಚ್ಚಿದ ಜೇನುಹುಳು ಸಾಯುತ್ತದೆಯಂತೆ…: ಜೇನುಹುಳು ಕಚ್ಚಿದಾಗ ತನ್ನ ಹಿಂಬದಿಯಲ್ಲಿರುವ ವಿಷದ ಕೊಂಡಿಯನ್ನು ಶತ್ರುವಿನ ಮೇಲೆ ಚುಚ್ಚುತ್ತಾವೆ. ಈತರ ಚುಚ್ಚಿದ ಮೇಲೆ ಈ ಹುಳು ಸಾಯುತ್ತದೆ ಎಂದು ಈಗಿನ ಪ್ರಮುಖ ಸರ್ಚ್ ಇಂಜಿನ್ ಗಳಲ್ಲಿ ಸಿಗುತ್ತದೆ. ಆದರೆ ಇದು ಅಸತ್ಯವಾದದು. ಪ್ರಕೃತಿಯಲ್ಲಿ ಅನೇಕ ಜೀವಿಗಳು ಮಾನವನೂ ಸೇರಿ ಕೆಲವು ಪ್ರಮುಖ ಅಂಗಗಳು ಇಲ್ಲದೇ ಬದುಕುತ್ತಿವೆ. ಕಣ್ಣು, ಕಿವಿ, ಕಿಡ್ನಿ, ಕೈ, ಕಾಲು ಹೀಗೆ.. ಆದರೆ ಇವ್ಯಾವು ಸಾಯದೇ ಇರುವಾಗ ಜೇನುಹುಳು ಮಾತ್ರ ಯಾಕೆ ಸಾಯುತ್ತದೆ...? ನೊಣಗಳು ಕಚ್ಚುವಾಗ ಶತ್ರುವಿನಿಂದ ಹಲ್ಲೆಗೊಳಗಾಗಿ ಸಾಯಬಹುದಾದ ಸಾಧ್ಯತೆಗಳು ಇರುತ್ತಾವೆ. ಆದರೆ ವಿಷದ ಮುಳ್ಳು ಇಲ್ಲ ಎಂಬ ಕಾರಣಕ್ಕೆ ಅದು ಸಾಯುವುದು ಎಂದು ಊಹಿಸುವುದು ತಪ್ಪು.

ಮನೆಯೊಳಗೆ ಜೇನುಗೂಡು ಕಟ್ಟಿದರೆ..?: ಜೇನುಗಳು ಈಗ ಗೂಡು ಕಟ್ಟಲಿಕ್ಕೆ ಯಾವುದೇ ಮಿತಿ ಇರುವುದಿಲ್ಲ. ಅವುಗಳಿಗೆ ಎಲ್ಲಿ ಸೂಕ್ತ ಸ್ಥಳ ಎಂದು ಗುರುತಿಸುತ್ತಾವೋ ಅಲ್ಲಿಯೇ ಅವು ಕಟ್ಟುತ್ತವೆ. ಇದು ಮಾನವನ ವಾಸ ಮನೆಗಳಲ್ಲೂ ಗೂಡು ಕಟ್ಟುತ್ತಾವೆ. ಕೆಲವರು ಅತಿಯಾಗಿ ತಲೆಕೆಡಿಸಿಕೊಂಡು ಅವರಿವರ ಬಳಿ ಶಾಸ್ತ್ರ ಕೇಳುವುದು ಉಂಟು. ಅವರುಗಳು ಗೂಡು ಕಟ್ಟಿರುವ ದಿಕ್ಕಿನ ಆಧಾರದಲ್ಲಿ ಫಲಾಫಲಗಳನ್ನು ಹೇಳುವರು. ಜೇನು ಗೂಡುಕಟ್ಟುವುದು ಸಂತಾನೋತ್ಪತ್ತಿಯ ಉದ್ದೇಶದಿಂದ. ಅದನ್ನು ತೆಗೆದರೆ ಕುಂಟುಂಬದ ಮಾರಣಹೋಮ ಮಾಡಿದಂತಾಗುವುದರಿಂದ ಮನೆಯಲ್ಲಿ ಕಟ್ಟಿದ ಜೇನುಗಳನ್ನು ತಗೆಯುವುದಿಲ್ಲ. ತಾವಾಗಿಯೇ ಬಿಟ್ಟುಹೋಗುವವರೆಗೂ ಕಾಯುತ್ತಾರೆ.

ನವಜಾತ ಶಿಶುವಿಗೆ ಜೇನುತುಪ್ಪ ಕೊಡಬಹುದೇ...? : ನವಜಾತ ಶಿಶುವಿಗೆ ಜೇನುತುಪ್ಪ ತಿನ್ನಿಸುವುದು ವೈದ್ಯಲೋಕ ಬೇಡ ಅಂತ ಹೇಳತ್ತೆ. ಆದರೆ ನನ್ನ ಅಕ್ಕನ ಮಕ್ಕಳು ಆರು ಜನ ನಮ್ಮ ಮನೆಯಲ್ಲೇ ಹುಟ್ಟಿ ಬೆಳೆದಿದ್ದಾರೆ. ಈ ಆರೂ ಮಕ್ಕಳು ಜನನವಾಗಿ ಕೆಲವೇ ನಿಮಿಷಗಳಲ್ಲಿ ಜೇನುತುಪ್ಪವನ್ನು ತಿಂದಿದ್ದಾರೆ. ಎದೆಯ ಹಾಲು ಕುಡಿಯುವ ಮುನ್ನವೇ ಜೇನುತುಪ್ಪ ತಿಂದ ಉದಾಹರಣೆಗಳು ನಮ್ಮ ಮನೆಯಲ್ಲಿ ಇದ್ದಾವೆ. ನವ ಜಾತ ಶಿಶುವಿನಿಂದ ವಯಸ್ಸಾದವರವರೆಗೆ ಜೇನು ಒಳ್ಳೆಯ ಆಹಾರವನ್ನಾಗಿ ಕೊಡಬಹುದು.

ಜೇನನ್ನು ಎಷ್ಟು ವರ್ಷಗಳ ಕಾಲ ಇಡಬಹುದು...?: ಈಜಿಪ್ಟಿನ ಪಿರಮಿಡ್ ಗಳಲ್ಲಿ, ಮಮ್ಮಿಗಳಲ್ಲಿ ಅವರ ಪುನರ್ಜನ್ಮಕ್ಕೆ ಸಿಹಿ ಮತ್ತು ಸಂಪತ್ತಿನ ಪ್ರತೀಕವಾಗಿ ಮಡಕೆಗಳಲ್ಲಿ ಜೇನು ತುಪ್ಪವನ್ನು ಇಡುತ್ತಿದ್ದರು ಎಂದು ಸಂಶೋದಕರು ಹೇಳುತ್ತಾರೆ. ಆದರೆ ಇದಕ್ಕೂ ಜೀವಿತಾವಧಿ ಇದೆ. ಹದಿನಾರು ಹದಿನೆಂಟು ತಿಂಗಳುಗಳು ಆದ ಮೇಲೆ ಇದರಲ್ಲಿ ಇರುವ ಗ್ಲೂಕೋಸ್ ಶುಗರ್ ಹರಳು ಹರಳಾಗಿ ಸಕ್ಕರೆಯಂತಾಗುತ್ತದೆ. ಸಕ್ಕರೆಯಂತೆ ದೊಡ್ಡ ಗಾತ್ರದಲ್ಲಿರುವುದಿಲ್ಲ. ನುಸಿ ಪುಡಿಯಂತೆ ರವೆ ರವೆಯಾಗಿ ಇರುತ್ತದೆ. ಈ ಸ್ಥಿತಿಗೆ ತಲುಪಿದ ತುಪ್ಪ ಹಾಳಾಗಿದೆ ಅಂತ ಹೇಳಬಹುದು. ಕಂಪನಿಗಳಿಂದ ಕೊಂಡತುಪ್ಪಕ್ಕೆ ಸಂರಕ್ಷಕ ಕಾರಕಗಳನ್ನು ಹಾಕಿರುವುದರಿಂದ ಇವು ಬಹಳ ಬೇಗ ಹಾಳಾಗುವುದಿಲ್ಲ.

ಜೇನು ಮತ್ತು ಜಂತುಹುಳುಗಳು : ಎಲ್ಲಿ ಸಿಹಿಯೋ ಅಲ್ಲಿ ಹುಳುಗಳು ಇರುವುದು ಸಹಜ.. ಯಾರು ಹೆಚ್ಚು ಸಿಹಿಯನ್ನು ತಿನ್ನುತ್ತಾರೋ ಅವರಿಗೆ ಈ ಜಂತು ಹುಳುಗಳ ಕಾಟ ಇದ್ದು ತೆಳ್ಳಗೆ ಇರುವವರು ಸಾಮಾನ್ಯವಾಗಿ ಜಂತುಹುಳು ಹೊಂದಿರುತ್ತಾರೆ. ಅದರಂತೆ ನಾನು ತೆಳ್ಳಗೆ ಇದ್ದೆ. ಎಷ್ಟು ತಿಂದರೂ ನನ್ನ ದೇಹದಲ್ಲಿ ನೂರು ಗ್ರಾಮ್ ಜಾಸ್ತಿ ಆಗಿರಲಿಲ್ಲ. ನನ್ನ ಇಪ್ಪತ್ತಾರನೇ ವಯಸ್ಸಿನವರೆಗೂ ಹಾಗೇ ಇತ್ತು. ನನಗೆ ಯಾಕೋ ಜಂತುಹುಳ ಹೊಟ್ಟೆಯಲ್ಲಿ ಇದ್ದಾವೆ ಎಂದು ಅನಿಸುತ್ತಿತ್ತು. ಶಾಲೆಯಲ್ಲಿ ಮಕ್ಕಳಿಗೆ Albendazole ಮಾತ್ರೆಗಳನ್ನು ಕೊಡುವಾಗ ನಾನೂ ತೆಗೆದುಕೊಂಡಿದ್ದೆ. ಯಾಕೋ ಹೆವೀ ಡೋಸೇಜ್ ತೆಗೆದುಕೊಳ್ಳಬೇಕು ಎನಿಸಿ ಒಂದೇ ವಾರದಲ್ಲಿ ಎರಡು ಮಾತ್ರೆಗಳನ್ನು ತೆಗೆದುಕೊಂಡಿದ್ದೆ ಅದರ ಪರಿಣಾಮ ನನ್ನ ಕಿರು ಬೆರಳ ಗಾತ್ರ ದ ಒಂದು ಅಡಿ ಗಿಂತ ಉದ್ಧ ಒಂದು ಜಂತುಹುಳು ಹೊರ ಬಂದಿತ್ತು.! ಅದೆಷ್ಟೋ ಸಾವಿರ ಕಿರುಹುಳುಗಳು ನನ್ನ ಕಣ್ಣಿಗೆ ಕಾಣದೇ ಹೋಗಿರಬಹುದು. ಆಗ ಬರೀ ನಲವತ್ತೇಳು ಕೆಜಿ ಇದ್ದ ನಾನು ಒಂದೆರಡು ವರ್ಷಗಳಲ್ಲಿ ಅರವತ್ತು-ಅರವತ್ತೈದು ಕೇಜಿ ತೂಗಿ ಆರೋಗ್ಯವಂತನಾದೆ. ಈ ಜಂತು ಹುಳುಗಳ ಕೊಡುಗೆಯಾಗಿ ಬಂದಿದ್ದು ನಾನು ಸಾವಿರಾರು ಜೇನುಗಳನ್ನು ತಿಂದ ಕಾರಣ. ಆದ್ದರಿಂದ ಹೆಚ್ಚು ಸಿಹಿ ತಿನ್ನುವವರು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕಾಗುತ್ತದೆ.

(ಮುಗಿಯಿತು)

-ನಾಗೇಂದ್ರ ಬಂಜಗೆರೆ, ಬಳ್ಳಾರಿ 

ಚಿತ್ರ ಕೃಪೆ: ಇಂಟರ್ನೆಟ್ ತಾಣ