ಜೇಮ್ಸ್ ವೆಬ್ ಯಾರು ಗೊತ್ತೇ?

ಜೇಮ್ಸ್ ವೆಬ್ ಯಾರು ಗೊತ್ತೇ?

ಅಂತರಿಕ್ಷದ ಕೌತುಕಗಳಿಗೆ ಸಾಕ್ಷಿಯಾಗಲು ಮತ್ತು ಬಾಹ್ಯಾಕಾಶದ ಬಗ್ಗೆ ಉತ್ತರ ಸಿಗದ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಲು ಜೇಮ್ಸ್ ವೆಬ್ ದೂರದರ್ಶಕವನ್ನು ೨೦೨೧ರ ಡಿಸೆಂಬರ್ ೨೪ರಂದು ಲ್ಯಾಟಿನ್ ಅಮೇರಿಕಾದ ಉತ್ತರ ತುದಿಯಲ್ಲಿರುವ ಫ್ರೆಂಚ್ ಗಯಾನ ಉಪಗ್ರಹ ಉಡಾವಣಾ ಕೇಂದ್ರದಿಂದ ಗಗನಕ್ಕೆ ಚಿಮ್ಮಿ ಬಿಡಲಾಯಿತು. ಈ ದೂರದರ್ಶಕವು ಭೂಮಿಯಿಂದ ಸುಮಾರು ೧೫ ಲಕ್ಷ ಕಿಲೋಮೀಟರ್ ದೂರದಲ್ಲಿ ಒಂದು ನಿರ್ದಿಷ್ಟ ಸ್ಥಾನ ಮತ್ತು ಅಂತರದಲ್ಲಿ ನಿಂತು ಭೂಮಿಯನ್ನು ಸುತ್ತುತ್ತಿದೆ. ಹೀಗೆ ಸುತ್ತಿ ಅದು ತೆಗೆದ ಹಲವಾರು ಚಿತ್ರಗಳು ಭೂಮಿಯ ಬಾಹ್ಯಾಕಾಶ ಕೇಂದ್ರಕ್ಕೆ ಕೆಲವು ಸಮಯದ ಹಿಂದೆ ತಲುಪಿ ಸಂಚಲನವನ್ನೇ ಮೂಡಿಸಿದವು. ಬಾಹ್ಯಾಕಾಶದ ಅತ್ಯಂತ ಸೊಗಸಾದ ಚಿತ್ರಗಳನ್ನು ಈ ಜೇಮ್ಸ್ ವೆಬ್ ದೂರದರ್ಶಕ ಸೆರೆ ಹಿಡಿದಿದೆ. ಈ ದೂರದರ್ಶಕಕ್ಕೆ ಜೇಮ್ಸ್ ವೆಬ್ ಹೆಸರು ಹೇಗೆ ಬಂತು ಅಂತೀರಾ?

ಅಮೇರಿಕಾದ ಕ್ಯಾಲಿಫೋರ್ನಿಯಾದ ಟ್ಯಾಲಿ ಹೊ ಎಂಬಲ್ಲಿ ೧೯೦೨ರಲ್ಲಿ ಜನಿಸಿದ ಜೇಮ್ಸ್ ವೆಬ್ ಕಲಾಕ್ಷೇತ್ರದಲ್ಲಿ ಪದವಿಯನ್ನು ಪಡೆದು ಹಲವು ಭಿನ್ನ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸಿ ಅನಂತರ ಅಮೇರಿಕದ ಅಂತರಿಕ್ಷ ಅಧ್ಯಯನ ಸಂಸ್ಥೆ ನಾಸಾವನ್ನು ಸೇರಿದರು. ನಾಸಾ ಆಗಿನ್ನೂ ದೊಡ್ದ ಯೋಜನೆಗಳನ್ನು ಕೈಗೆತ್ತಿಕೊಂಡಿರಲಿಲ್ಲ. ಆ ಸಮಯದಲ್ಲಿ ನಾಸಾದ ಆಡಳಿತಾಧಿಕಾರಿಯಾಗಿ ಸೇರಿಕೊಂಡ ವೆಬ್, ಸಂಸ್ಥೆಯ ವಿವಿಧ ಯೋಜನೆಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಾ ಬಂದರು. ಚಂದ್ರನ ಮೇಲೆ ಕಾಲಿಡುವ ಪ್ರತಿಷ್ಟಿತ ಅಪೋಲೋ ಯೋಜನೆಯಲ್ಲೂ ವೆಬ್ ತೊಡಗಿಸಿಕೊಂಡಿದ್ದರು. ಅಮೇರಿಕ ಮತ್ತು ರಷ್ಯಾ ನಡುವಣ ಶೀತಲಸಮರದಲ್ಲಿ ಅಮೇರಿಕ ಮೇಲುಗೈ ಸಾಧಿಸುವಂತೆ ಮಾಡುವಲ್ಲಿ ವೆಬ್ ಕಾಣಿಕೆ ಅಪಾರ. ಉಡಾವಣೆಯಾದ ಕೆಲವೇ ಸೆಕೆಂಡ್ ಗಳಲ್ಲಿ ರಾಕೆಟ್ ಗಳು ಸಮುದ್ರದತ್ತ ಮುಖ ಮಾಡುತ್ತಿದ್ದ ಪರಿಸ್ಥಿತಿಯನ್ನು ಸುಧಾರಿಸಿ, ನಾಸಾ ಬಗ್ಗೆ ಜನರಿಗೆ ಭರವಸೆ ಹುಟ್ಟುವಂತೆ ಮಾಡಿದ್ದರಲ್ಲಿ ಅವರ ಪಾತ್ರ ದೊಡ್ದದು. ಅವರ ನೆನಪಿಗಾಗಿ ಈ ದೂರದರ್ಶಕಕ್ಕೆ ಜೇಮ್ಸ್ ವೆಬ್ ದೂರದರ್ಶಕ ಎಂದು ಹೆಸರಿಡಲಾಗಿದೆ. ವಾಸ್ತವದಲ್ಲಿ ಇದು 'ನೆಕ್ಸ್ಟ್ ಜನರೇಶನ್ ಸ್ಪೇಸ್ ಟೆಲಿಸ್ಕೋಪ್'. 

ಈ ದೂರದರ್ಶಕದ ಮುಂಭಾಗದಲ್ಲಿ ೧.೩೨ ಮೀಟರ್ ವ್ಯಾಸದ ೧೮ ಷಡ್ಬುಜೀಯ ಕನ್ನಡಿಗಳಿದ್ದು ಅವನ್ನು ಬೆರಿಲಿಯಮ್ ನಿಂದ ಮಾಡಲಾಗಿದೆ. ಅಂತರಿಕ್ಷದ ಅತ್ಯಂತ ಶೀತಲ ವಾತಾವರಣದಲ್ಲಿ ಕಾರ್ಯನಿರ್ವಹಿಸುವ ಸಾಮರ್ಥ್ಯ ಬೆರಿಲಿಯಮ್ ಗಿದೆ. ಬೆರಿಲಿಯಮ್ ಷಡ್ಬುಜಗಳ ಮುಂಭಾಗದಲ್ಲಿ ಮೂರು ದರ್ಪಣಗಳಿದ್ದು ಇವು ಬೆಳಕನ್ನು ಒಂದೆಡೆಯಿಂದ ಕೇಂದ್ರೀಕರಿಸಿ ದಾಖಲಿಸಿಕೊಳ್ಳುತ್ತದೆ. 

ಈ ದೂರದರ್ಶಕ ಎಷ್ಟು ದೊಡ್ದದು ಗೊತ್ತೇ? ಎಲ್ಲ ದರ್ಪಣಗಳನ್ನು ಪೂರ್ತಿಯಾಗಿ ಬಿಡಿಸಿಟ್ಟರೆ ಒಂದು ಟೆನ್ನಿಸ್ ಅಂಗಳದಷ್ಟು ದೊಡ್ದದು. ಈ ಇಡೀ ವ್ಯವಸ್ಥೆಯನ್ನು ಹಲವು ಪದರಗಳಲ್ಲಿ ಮಡಚಿ ರಾಕೆಟ್ ನಲ್ಲಿಟ್ಟು ಕಳಿಸಲಾಗಿದೆ. ತನ್ನ ಗಮ್ಯಕ್ಕೆ ಹೋದ ಮೇಲೆ ಇದು ರಾಕೆಟ್ ನಿಂದ ಹೊರಬಂದು, ನಿರ್ದೇಶಿಸಿದ ರೀತಿಯಲ್ಲೇ ತನ್ನನ್ನು ಬಿಡಿಸಿಕೊಂಡು ನಿಲ್ಲುತ್ತದೆ. ದೂರದರ್ಶಕ ಯಾವ್ಯಾವ ಸಂದರ್ಭಗಳಲ್ಲಿ ಕೈಕೊಡಬಹುದು ಎಂಬುದನ್ನು ಮೊದಲೇ ಊಹಿಸಿ, ಅಂಥ ೩೦೦ 'ವೈಫಲ್ಯ ಬಿಂದು'ಗಳನ್ನು ತಂತ್ರಜ್ಞರು ಪಟ್ಟಿ ಮಾಡಿದ್ದಾರಂತೆ. ಅಂಥ ಸಮಸ್ಯೆಗಳೇನೇ ಸಂಭವಿಸಿದರೂ ತನಗೆ ತಾನೇ ದೂರದರ್ಶಕವು ರಿಪೇರಿ ಕೆಲಸವನ್ನೂ ಮಾಡಿಕೊಳ್ಳುವಂತೆ ತಂತ್ರಜ್ಞಾನ ರೂಪಿಸಲಾಗಿದೆ.

೧೯೯೦ರಲ್ಲಿ ಉಡಾವಣೆಗೊಂಡ ಹಬಲ್ ಎನ್ನುವ ಹೆಸರಿನ ದೂರದರ್ಶಕವು ಹೊಸ ಬಗೆಯ 'ಆಕಾಶದ ದೂರದರ್ಶಕಗಳ' ಪರಂಪರೆಗೆ ನಾಂದಿ ಹಾಡಿತು. ಆ ನಂತರ ಹಲವಾರು ದೂರದರ್ಶಕಗಳು ಆಕಾಶಕ್ಕೆ ನೆಗೆದಿವೆ. ಆದರೆ ನಾಸಾದ ಎರಡು ದಶಕಗಳ ಸಂಶೋಧನೆಯ ಫಲವಾಗಿ ಜೇಮ್ಸ್ ವೆಬ್ ದೂರದರ್ಶಕವನ್ನು ಕಂಡುಹಿಡಿಯಲಾಗಿದೆ. ಇದನ್ನು ತಯಾರಿಸಲು ನಾಸಾ ಸುಮಾರು ೧೦ ಬಿಲಿಯನ್ ಅಮೇರಿಕನ್ ಡಾಲರ್ ಹಣವನ್ನು ವೆಚ್ಚ ಮಾಡಿದೆ. ಹಿಂದಿನ ಹಬಲ್ ದೂರದರ್ಶಕಕ್ಕೆ ಹೋಲಿಸಿದರೆ ಈ ದೂರದರ್ಶಕ ೧೦೦ ಪಟ್ಟು ಹೆಚ್ಚು ಕ್ಷಮತೆಯನ್ನು ಹೊಂದಿದೆ. ಅತ್ಯಂತ ಕಡಿಮೆ ಬೆಳಕಿರುವ ಸಮಯದಲ್ಲೂ ಅತ್ಯುತ್ತಮ ಛಾಯಾಚಿತ್ರವನ್ನು ತೆಗೆಯುವ ಸಾಮರ್ಥ್ಯ ಈ ದೂರದರ್ಶಕಕ್ಕೆ ಇದೆ. ವಿಶ್ವದ ಆದಿಯ ಬಗ್ಗೆ ಈ ದೂರದರ್ಶಕ ಬಹಳ ಮಾಹಿತಿ ನೀಡುತ್ತದೆ ಎಂದು ವಿಜ್ಞಾನಿಗಳು ನಂಬಿಕೆ ವ್ಯಕ್ತ ಪಡಿಸುತ್ತಾರೆ. 

(ಮಾಹಿತಿ ಕೃಪೆ : ಸೂತ್ರ ಪತ್ರಿಕೆ)

ಚಿತ್ರ ಕೃಪೆ: ಅಂತರ್ಜಾಲ ತಾಣ