ಜೈಲು ಬಿರಿಯಾನಿ ಕೇಂದ್ರವಾಗದಿರಲಿ
ನಟ ದರ್ಶನ್, ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲಿಗೆ ಹೋಗಿ ಈಗ ಎರಡು ತಿಂಗಳುಗಳೇ ಕಳೆದಿವೆ. ವಿಚಾರಣಾಧೀನ ಕೈದಿಯಾದ ದರ್ಶನ್ ಗೆ ಮನೆ ಊಟ ತರಿಸಿಕೊಳ್ಳಲು ಅವಕಾಶ ನೀಡಬೇಕು ಎಂದು ವಾದಿಸಿ ಅವರ ವಕೀಲರು ಹೈಕೋರ್ಟ್ ಮೆಟ್ಟಲೇರಿದ್ದಾರೆ. ಹೈಕೋರ್ಟ್ ಆದೇಶ ಹೊರಬೀಳುವ ಮೊದಲೇ ದರ್ಶನ್, ಜೈಲು ಅಧಿಕಾರಿಗಳ ಸಹಕಾರದೊಂದಿಗೆ ಕಾರಾಗೃಹದಲ್ಲೇ ರಾಜವೈಭೋಗದ ಜೀವನ ನಡೆಸುತ್ತಿರುವುದು ಬೆಳಕಿಗೆ ಬಂದಿದೆ. ತಮಗೆ ಬೇಕಾದ ಹೋಟೇಲಿನಿಂದ ಬಿರಿಯಾನಿ ಊಟ, ಸಿಗರೇಟು ತರಿಸಿಕೊಂಡು ತಮಗೆ ಬೇಕಾದವರ ಜೊತೆ ಕೂತು ಬಿಂದಾಸ್ ಆಗಿ ಪಾರ್ಟಿ ಮಾಡುತ್ತಿರುವ ವಿಷಯ ಜಗಜ್ಜಾಹೀರಾಗಿದೆ. ದರ್ಶನ್, ಜೈಲು ಸೇರಿದ ಬಳಿಕ ಕನ್ನಡ ಚಿತ್ರರಂಗದ ಹಲವರು ಅವರನ್ನು ನಿಯಮಿತವಾಗಿ ಭೇಟಿ ಮಾಡುತ್ತಲೇ ಇದ್ದಾರೆ. “ಜೈಲಿನಲ್ಲಿ ದರ್ಶನ್ ಅವರನ್ನು ನೋಡಲಿಕ್ಕಾಗುವುದಿಲ್ಲ. ಅವರಿಗೆ ತಮ್ಮ ಕೃತ್ಯದ ಬಗ್ಗೆ ಪಶ್ಚಾತ್ತಾಪವಿದೆ.” ಎಂದು ಅವರನ್ನು ಭೇಟಿಯಾಗಿ ಬಂದ ಹಲವರು ಸಿನೆಮಾ ಡೈಲಾಗ್ ಹೊಡೆದಿದ್ದರು. ಆದರೆ ಅದೆಲ್ಲವೂ ಸುಳ್ಳು, ಕೊಲೆ ಕೃತ್ಯದ ಬಗ್ಗೆ ಅವರಿಗೆ ಯಾವುದೇ ಪಶ್ಚಾತ್ತಾಪವೂ ಇಲ್ಲ ಎನ್ನುವುದಕ್ಕೆ ಈ ಫೋಟೋ ಸಾಕ್ಷಿಯಾಗಿದೆ. ದುಡ್ಡಿದ್ದವರಿಗೆ ಜೈಲಿನಲ್ಲೂ ರಾಜಾತಿಥ್ಯ ಸಿಗುತ್ತದೆ ಎಂಬ ಮಾತುಗಳು ಹಿಂದೆಯೂ ಕೇಳಿಬಂದಿದ್ದವು. ಜೈಲಿಗೆ ಹಣ, ಮದ್ಯ, ಮಾದಕ ಪದಾರ್ಥ, ಶಸ್ತ್ರಾಸ್ತ್ರ ಪೂರೈಕೆಯಾಗುವುದು ಮಾತ್ರವಲ್ಲ ಸಮಾಜ ವಿದ್ರೋಹಿಗಳಿಗೆ ಇದು ಸುರಕ್ಷಿತ ಸ್ಥಳ ಎಂಬ ದೂರುಗಳಿಗೆ ಈಗ ಮತ್ತೊಮ್ಮೆ ಪುಷ್ಟಿ ದೊರೆತಿದೆ.
ತಮಿಳುನಾಡಿನ ಸಿಎಂ ಆಗಿದ್ದ ಜಯಲಲಿತಾ ಅವರ ಆಪ್ತೆ ವಿ ಕೆ ಶಶಿಕಲಾ ನಟರಾಜನ್ ಇದೇ ಪರಪ್ಪನ ಅಗ್ರಹಾರ ಜೈಲಿನಲ್ಕಿ ಆರಾಮವಾಗಿ ನಾಲ್ಕು ವರ್ಷ ಸಜೆ ಪೂರೈಸಲು ಅಧಿಕಾರಿಗಳು ಅವಕಾಶ ಮಾಡಿಕೊಟ್ಟಿದ್ದರು. ಈಗ ದರ್ಶನ್ ಸೇವೆಗೆ ಟೊಂಕ ಕಟ್ಟಿರುವುದು ನಮ್ಮ ಕಾನೂನು ಮತ್ತು ವ್ಯವಸ್ಥೆಯ ಅಣಕ. ಜಾಮೀನು ದೊರೆತರೂ, ಠೇವಣಿ ಹಣ ಕಟ್ಟಲಾರದೆ ಅದೆಷ್ಟೋ ವಿಚಾರಣಾಧೀನ ಕೈದಿಗಳು ಜೈಲುಗಳಲ್ಲೇ ಕೊಳೆಯುತ್ತಿದ್ದಾರೆ. ಇನ್ನೊಂದೆಡೆ ರೌಡಿ ಶೀಟರ್ ಗಳೂ ಜೈಲನ್ನೇ ಅಡ್ಡೆ ಮಾಡಿಕೊಂಡು ಪೋಲೀಸ್ ಅಧಿಕಾರಿಗಳ ಕೈಯಲ್ಲಿ ಸೇವೆ ಮಾಡಿಸಿಕೊಳ್ಳುತ್ತಿದ್ದಾರೆ. ಜೈಲುಗಳು ಸಜಾ ಕೇಂದ್ರಗಳಾಗಿರಬೇಕೇ ಹೊರತು ಬಿರಿಯಾನಿ ಕೇಂದ್ರಗಳಾಗಬಾರದು. ರೌಡಿಗಳು, ಕೊಲೆ ಆರೋಪಿಗಳ ಬೆಂಗಾವಲಿಗೆ ನಿಂತು ನೆಲದ ಕಾನೂನಿನ ಅವಹೇಳನ ಮಾಡಿದ್ದ ಅಧಿಕಾರಿಗಳನ್ನು ಸೇವೆಯಿಂದಲೇ ವಜಾಗೊಳಿಸಿ ತಕ್ಕ ಪಾಠ ಕಲಿಸಬೇಕು.
ಕೃಪೆ: ವಿಶ್ವವಾಣಿ, ಸಂಪಾದಕೀಯ, ದಿ: ೨೭-೦೮-೨೦೨೪
ಚಿತ್ರ ಕೃಪೆ: ಅಂತರ್ಜಾಲ ತಾಣ