ಜೈಲು, ಸ್ವಾತಂತ್ರ್ಯ ಮತ್ತು ನನ್ನ ಗುಡಿಸಲು...

ಜೈಲು, ಸ್ವಾತಂತ್ರ್ಯ ಮತ್ತು ನನ್ನ ಗುಡಿಸಲು...

ಬೆಳಗ್ಗೆ 5 ಗಂಟೆಗೆ ಎದ್ದು ಸುಮಾರು 6 ಕಿಲೋ ಮೀಟರ್ ನಷ್ಟು ದೂರ ನಡೆದು ಅಲ್ಲಿ ಒಂದು ತೋಟದ ಮನೆಯಲ್ಲಿ ಬೇಕಾಬಿಟ್ಟಿ ಬೆಳದಿದ್ದ ಕಳೆ ಗಿಡಗಳನ್ನು ಕತ್ತರಿಸಿ ರಾಶಿ ಮಾಡಿ ಒಂದು ಕಡೆ ಗುಡ್ಡೆ ಹಾಕಿ ಮನೆಯ ಯಜಮಾನಿ ಕೊಟ್ಟ ಮಜ್ಜಿಗೆ ಕುಡಿದು ಮತ್ತೆ ಇನ್ನೊಂದಿಷ್ಟು ಬೇರೆ ಬೇರೆ ಕೆಲಸ ಮಾಡಿ ಈಗ ತಾನೇ ಮಧ್ಯಾಹ್ನದ ಈ ಹೊತ್ತಿಗೆ ಮನೆ ತಲುಪಿದ್ದೇನೆ.

ನನ್ನ ಹೆಂಡತಿ ಮಣ್ಣಿನ ಮಡಿಕೆಯಲ್ಲಿ ಕೆಂಪು ಅಕ್ಕಿಯ ಗಂಜಿ ಮಾಡಿ ಮನೆಯಲ್ಲಿಯೇ ಮಾಡಿದ ಮಾವಿನ ಮಿಡಿಯ ಉಪ್ಪಿನಕಾಯಿ ಹಾಕಿ ತಟ್ಟೆಯಲ್ಲಿ ಇಟ್ಟಿದ್ದಾಳೆ. ಅದನ್ನು ಈಗ ತಾನೆ ಉಣ್ಣುತ್ತಿದ್ದೇನೆ. ಮನೆಯಲ್ಲಿದ್ದ ಹಳೆಯ ಟಿವಿಯಲ್ಲಿ ಏನೇನೋ ಸುದ್ದಿಗಳು ಬರುತ್ತಿತ್ತು.

ಕನ್ನಡ ಚಿತ್ರರಂಗದ ಬಾಕ್ಸ್ ಆಫೀಸ್ ಸುಲ್ತಾನ್ ಎನ್ನುವ ಬಿರುದಾಂಕಿತ ದರ್ಶನ್ ಎಂಬ ನಟ, ಆತನ ಗೆಳತಿ ಪವಿತ್ರ ಗೌಡ ಎಂಬ ನಟಿ, ಹಾಸನದ ಮಾಜಿ ಪ್ರಧಾನಿಗಳ ಮೊಮ್ಮಗ ಮತ್ತು ಮಾಜಿ ಲೋಕಸಭಾ ಸದಸ್ಯ ಪ್ರಜ್ವಲ್ ರೇವಣ್ಣ ಎಂಬ ಯುವ ರಾಜಕಾರಣಿ ಮತ್ತು ಆತನ ಅಣ್ಣ ಹಾಲಿ ವಿಧಾನ ಪರಿಷತ್ ಸದಸ್ಯ ಸೂರಜ್ ರೇವಣ್ಣ ಅವರು ಜೈಲಿನಲ್ಲಿ ಬಂಧಿಗಳಾಗಿದ್ದಾರೆ ಎಂದೇನೋ ಸುದ್ದಿ ಬರುತ್ತಿತ್ತು. ಹಾಗೆಯೇ ಮಾಜಿ ಸಚಿವ ನಾಗೇಂದ್ರ ಮತ್ತು ಹಾಲಿ ಶಾಸಕ ಬಸವನಗೌಡ ದದ್ದಲ್ ಅವರ ಮೇಲೆ ಇಡಿ ದಾಳಿ ನಡೆಸಿ ಅವರನ್ನು ಬಂಧಿಸುವ ಸಾಧ್ಯತೆ ಇದೆ ಎಂದೇನೂ ಹೇಳುತ್ತಿದ್ದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೂಡ ಹಗರಣದಲ್ಲಿ ಭಾಗಿಯಾಗಿದ್ದಾರೆ ಎಂಬ  ಸುದ್ದಿಯೂ ಪ್ರಸಾರವಾಗುತ್ತಿತ್ತು. ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಮೇಲೆ ಪೋಕ್ಸೋ ಪ್ರಕರಣದ ಆರೋಪಪಟ್ಟಿ ನ್ಯಾಯಾಲಯಕ್ಕೆ ಸಲ್ಲಿಕೆ ಆಯಿತು ಎಂದೂ ಹೇಳುತ್ತಿದ್ದರು.

ಕೆಂಪು ಅಕ್ಕಿಯ ಗಂಜಿ ಮತ್ತು ಉಪ್ಪಿನಕಾಯಿಯೊಂದಿಗೆ ಸವಿಯುತ್ತಿರುವಾಗ ಇದೆಲ್ಲವೂ ನನ್ನ ಮನಸ್ಸಿನಲ್ಲಿ ಒಂದು ರೀತಿಯ ಭಾವನೆಗಳ ತಾಕಲಾಟ ಪ್ರಾರಂಭವಾಯಿತು. ನನ್ನ ಬಳಿ ಇರುವುದು ಕಾಲು ಚಾಚುವಷ್ಟು ಮಾತ್ರ ಜಾಗದ ಒಂದು ಗುಡಿಸಲು, ಪತ್ನಿ ಮತ್ತು ಅಂಗನವಾಡಿ ಶಾಲೆಗೆ ಹೋಗಿರುವ ಎಂಟು ವರ್ಷದ ಮಗು ಇದೆ‌. ನಮ್ಮ ಬಳಿ ಎಲ್ಲಾ ಮೂಲೆಗಳನ್ನು ಹುಡುಕಾಡಿದರು ಸುಮಾರು ನಾಲ್ಕೈದು ಸಾವಿರ ಹಣ ಸಿಗುವುದು ಸಹ ಕಷ್ಟ. ಹೊಸ ಬಟ್ಟೆಗಳು ಅಪರೂಪ. ಸಿನಿಮಾ, ಹೊರ ಪ್ರಯಾಣ, ಶುಭಕಾರ್ಯಗಳು ಇಲ್ಲವೇ ಇಲ್ಲ ಎನ್ನುವಷ್ಟು ಅಪರೂಪ. ಹೇಗೋ ಜೀವನ ಸಾಗುತ್ತಿದೆ.

ಆದರೆ ಈಗ ಜೈಲಿನಲ್ಲಿರುವ ಮತ್ತು ಆರೋಪ ಹೊತ್ತಿರುವ ಅನೇಕರು ನೂರಾರು ಕೋಟಿಗಳ ಒಡೆಯರು, ಅತ್ಯಂತ ಜನಪ್ರಿಯ ವ್ಯಕ್ತಿಗಳು, ಅಧಿಕಾರದ ಮುಖ್ಯ ಸ್ಥಾನದಲ್ಲಿರುವವರು. ಇಂತಹವರು ಜೈಲಿನಲ್ಲಿ ಬಂಧಿಗಳು. ನಾವು ಗುಡಿಸಲಿನ ಸ್ವತಂತ್ರ ಹಕ್ಕಿಗಳು. ಇದೇನಿದು ವಿಚಿತ್ರ. ಅವರೆಲ್ಲರೂ ಅತಿ ಹೆಚ್ಚು ಓದಿದವರು, ಸಂವಿಧಾನ, ಕಾನೂನುಗಳ ಬಗ್ಗೆ ತಿಳಿವಳಿಕೆ ಇರುವವರು. ಇತರರಿಗೆ ಮಾರ್ಗದರ್ಶನ ಮಾಡುವ ಸ್ಥಿತಿಯಲ್ಲಿರುವವರು. ನಮಗೆ ಸಹಿ ಹಾಕುವುದಷ್ಟೇ ಗೊತ್ತು. ನಮ್ಮನ್ನು ಗಮನಿಸುವವರು ಸಹ ಯಾರೂ ಇಲ್ಲ. ನಮಗೆ ಕಾನೂನಿನ ತಿಳುವಳಿಕೆಯೂ ಇಲ್ಲ. ಆದರೆ ಇನ್ನೊಬ್ಬರಿಗೆ ಮೋಸ ಮಾಡಬಾರದು, ವಂಚನೆ ಮಾಡಬಾರದು, ಅಧಿಕಾರವನ್ನು, ಹಣವನ್ನು ದುರುಪಯೋಗ ಪಡಿಸಿಕೊಳ್ಳಬಾರದು, ಮಹಿಳೆಯರನ್ನು ನಿಂದಿಸಬಾರದು ಎನ್ನುವ ಸಣ್ಣ ಅರಿವು ಹೊರತುಪಡಿಸಿ ಯಾವ ಅಕ್ಷರ ಜ್ಞಾನವೂ ಇಲ್ಲ.

ಆದರೆ ಈ ಎಲ್ಲವನ್ನೂ ಬಲ್ಲ ಇವರೇಕೆ ಜೈಲಿಗೆ ಹೋಗುವ ಆರೋಪಕ್ಕೆ ಗುರಿಯಾಗುವಂತ ತಪ್ಪುಗಳನ್ನು ಮಾಡುತ್ತಾರೆ ಎಂದು ಆಶ್ಚರ್ಯವಾಗುತ್ತದೆ. ಒಂದಷ್ಟು ಸಾಮಾನ್ಯ ಜ್ಞಾನ ಸರಿ ತಪ್ಪುಗಳನ್ನ ನಮಗೆ ಅರ್ಥ ಮಾಡಿಸುತ್ತದೆ. ಅಷ್ಟೊಂದು ಸರಳವಾಗಿರುವ ವಿಷಯವನ್ನು ಇಷ್ಟೊಂದು ಪ್ರಖ್ಯಾತರು, ದೊಡ್ಡ ಮನುಷ್ಯರು, ಶ್ರೀಮಂತರು ಏಕೆ ಅರ್ಥ ಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂಬ ವಿಚಿತ್ರ ಆಶ್ಚರ್ಯ ನನ್ನನ್ನು ಕಾಡುತ್ತದೆ.

ಅಕ್ಷರ ಜ್ಞಾನವನ್ನು, ಹಣ ಅಧಿಕಾರವನ್ನು, ಜನಪ್ರಿಯತೆಯನ್ನು, ಸುಖಭೋಗಗಳನ್ನು ಪಡೆದ ವ್ಯಕ್ತಿ ಹೆಚ್ಚು ಹೆಚ್ಚು ನಾಗರಿಕನಾಗುತ್ತಾನೆ ಎಂಬುದು ಸಹಜವಾದ ಬೆಳವಣಿಗೆ ಆಗಬೇಕಿತ್ತು. ಆದರೆ  ಇವರುಗಳು ಕೇವಲ ಅನಾಗರಿಕರು ಮಾತ್ರವಲ್ಲ ಕ್ರಿಮಿನಲ್ ಗಳಾಗಿ ಪರಿವರ್ತನೆ ಹೊಂದುತ್ತಿರುವುದು ಆಧುನಿಕ ಕಾಲದ ದುರಂತ. ಕೋಟಿಗಟ್ಟಲೆ ಬೆಲೆಬಾಳುವ ಕಾರಿನ ಒಡೆಯರು ಅಪಘಾತ ಮಾಡಿ ದುರಹಂಕಾರದಿಂದ ವರ್ತಿಸಿ ಅನೇಕರ ಸಾವಿಗೆ ಕಾರಣರಾಗುತ್ತಿದ್ದಾರೆ. ಕಷ್ಟಪಟ್ಟು ದುಡಿಯದೇ, ಓದದೆ ಮೋಸ ಮಾಡಿ, ಪರೀಕ್ಷೆಗಳನ್ನು ಪಾಸು ಮಾಡಿ, ಉದ್ಯೋಗ ಹಿಡಿಯುತ್ತಿದ್ದಾರೆ. ಕೊನೆಗೊಂದು ದಿನ ಕೆಲವರು ಪೊಲೀಸರ ಕೈಗೆ ಸಿಕ್ಕಿ ಜೈಲು ಪಾಲಾಗುತ್ತಿದ್ದಾ.ರೆ ಇದನ್ನೇ ವಿಚಿತ್ರವಿಶ್ವ ಎಂದು ಕರೆಯೋಣವೇ?

ಉದಾಹರಣೆಗೆ, ದರ್ಶನ್ ಇರಲಿ, ಪ್ರಜ್ವಲ್ ಇರಲಿ ತಮ್ಮ ಬಳಿ ಇರುವ ಎಲ್ಲ ಸಂಪನ್ಮೂಲಗಳನ್ನು ಉಪಯೋಗಿಸಿಕೊಂಡು ಸುಖವಾಗಿ, ನೆಮ್ಮದಿಯಿಂದ ಜೀವನ ಸಾಗಿಸಬಹುದಿತ್ತು. ಆದರೆ ಅಜ್ಞಾನದಿಂದ, ಅಹಂಕಾರದಿಂದ, ಮೋಹಕ್ಕೆ ಬಲಿಯಾಗಿ, ತಮ್ಮನ್ನು ತಾವು ನಿಯಂತ್ರಿಸಿ ಕೊಳ್ಳದೆ ಜೈಲಿನ ಖೈದಿಗಳಾಗುತ್ತಿರುವುದು ನಮಗೆಲ್ಲ ಒಂದು ಪಾಠವಾಗಲಿ. ಸ್ವಾತಂತ್ರ್ಯ ಎಂಬುದು ಹಣ ಅಧಿಕಾರಗಳಲ್ಲಿ ಇಲ್ಲ. ಅದು ನಮ್ಮ ಮನಸ್ಸಿನಲ್ಲಿ, ನಮ್ಮ ತಿಳುವಳಿಕೆಯಲ್ಲಿ, ನಮ್ಮ ನಡವಳಿಕೆಯಲ್ಲಿ ಇದೆ. ಅದನ್ನು ನಾವೆಲ್ಲರೂ ಅರಿತು, ಅಳವಡಿಸಿಕೊಂಡು ಅನುಭವಿಸೋಣ. ಈ ಮೂರ್ಖರಂತ ತಪ್ಪುಗಳನ್ನು ಮಾಡದಿರೋಣ.

-ವಿವೇಕಾನಂದ. ಎಚ್. ಕೆ., ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ