ಜೈಲೆಂಬ ನರಕದಲ್ಲಿ ಒಂದು ಸುತ್ತು…!

ಜೈಲು… ಯಾವುದೇ ರೀತಿಯ ಅಪರಾಧ ಮಾಡುವ ಮೊದಲು ದಯವಿಟ್ಟು ತುಂಬಾ ತುಂಬಾ ಯೋಚಿಸಿ. ಹುಟ್ಟಾ ಕ್ರಿಮಿನಲ್ ಗಳು ಮತ್ತು ಜನಪ್ರಿಯ ವಿಐಪಿಗಳು ಹಾಗು ಜೈಲು ಮಾವನ ಮನೆ ಎಂದು ಭಾವಿಸಿ ಆಗಾಗ ಹೋಗಿ ಬರುವವರನ್ನು ಹೊರತುಪಡಿಸಿ ಇತರ ಎಲ್ಲರಿಗೂ ಅದು ನರಕವೇ.......
ಆಕ್ರೋಶದ ಭರದಲ್ಲಿ ಕೆಲವರು ಹೇಳುತ್ತಾರೆ. " ಓ ಜೈಲಿನಲ್ಲಿ ದಿನಕ್ಕೆ ಒಂದು ಉಪಹಾರ ಎರಡು ಊಟ ಸಿಗುತ್ತದೆ. ನಾನು ಕೊಲೆ ಮಾಡಲು ಹೆದರುವುದಿಲ್ಲ" ಎಂದು ಏನೇನೋ ಮಾತನಾಡುತ್ತಾರೆ. ಆದರೆ ವಾಸ್ತವವೇ ಬೇರೆ. ಕಾನೂನಿಗೆ ವಿರುದ್ಧವಾಗಿ ಜೈಲು ಸೇರುವಂತ ಯಾವುದೇ ಅಪರಾಧ, ಅದು ಹಣ ಜಮೀನು ಸೆಕ್ಸ್ ಮುಂತಾದ ವಿಷಯಗಳ ಉದ್ದೇಶಪೂರ್ವಕ ಅಥವಾ ಟ್ರಾಫಿಕ್, ಪಕ್ಕದ ಮನೆಯರ ಬಳಿ ಅಥವಾ ಇನ್ಯಾವುದೋ ಆಕಸ್ಮಿಕವಾಗಿ ಸಣ್ಣ ವಿಷಯಗಳಲ್ಲಿ ತಾಳ್ಮೆ ಕಳೆದುಕೊಂಡು ಮಾಡಬಹುದಾದ ಉದ್ದೇಶಪೂರ್ವಕವಲ್ಲದ ಅಪರಾಧಗಳೇ ಆಗಿರಲಿ ನೀವು ಜೈಲಿಗೆ ಹೋಗುವ ಸಂದರ್ಭ ಸೃಷ್ಟಿಯಾದರೆ ಅದೊಂದು ಜೀವನದ ಮರೆಯಲಾರದ ದುರಂತವಾಗುತ್ತದೆ. ಹೌದು, ಈ ದೇಶದ ಶೇಕಡಾ 90% ಕ್ಕೂ ಹೆಚ್ಚು ಅಪರಾಧಗಳಿಗೆ ಶಿಕ್ಷೆಯಾಗುವುದಿಲ್ಲ ನಿಜ. ಆದರೆ ನೀವು ಕೆಲವು ದಿನಗಳಾದರೂ ಜೈಲಿನಲ್ಲಿ ಇರಬೇಕಾದ ದಿನಗಳ ಬಗ್ಗೆ ಒಮ್ಮೆ ಯೋಚಿಸಿ.
ಉದಾಹರಣೆಗೆ ನೀವು ಯಾರನ್ನೋ ಹೊಡೆದಿರಿ ಎಂದಾದರೆ ಅವರು ಪೋಲಿಸರಿಗೆ ದೂರು ಕೊಡುತ್ತಾರೆ. ಅಲ್ಲಿಂದ ನೀವು ಅನುಭವಿಸಬಹುದಾದ ಮಾನಸಿಕ ಮತ್ತು ದೈಹಿಕ ಸಂಕಷ್ಟಗಳ ಸರಮಾಲೆ ಪ್ರಾರಂಭವಾಗುತ್ತದೆ. ಈಗಿನ ಆಧುನಿಕ ಕಾಲದಲ್ಲಿ ನೀವು ಎಷ್ಟೇ ಹಣವಂತರು ಪ್ರಭಾವಶಾಲಿಗಳು ಆಗಿದ್ದರೂ ಸಾಮಾನ್ಯವಾಗಿ ಪೋಲೀಸರು FIR ದಾಖಲು ಮಾಡಿಯೇ ಮಾಡುತ್ತಾರೆ. ಕಾನೂನು ಏನೇ ಇದ್ದರು ಕೆಲವು ಘಟನೆಗಳಲ್ಲಿ ನಿಮಗೆ ಹೊಡೆಯುವುದು ನಿಶ್ಚಿತ. ಅಲ್ಲಿಂದ ಹೆಚ್ಚು ಕಡಿಮೆ ನಿಮ್ಮ ಕೈ ಅಥವಾ ಕತ್ತಿನ ಪಟ್ಟಿ ಹಿಡಿದುಕೊಂಡೇ ಕೋರ್ಟ್ ಹಾಲಿನವರೆಗೆ ಕರೆತಂದು ನಂತರ ನ್ಯಾಯಾಲಯದ ಮುಂದೆ ಹಾಜರುಪಡಿಸುತ್ತಾರೆ. ಎಷ್ಟೇ ಪ್ರಖ್ಯಾತ ವಕೀಲರುಗಳನ್ನು ನಿಯೋಜಿಸಿದರೂ ಅಪರಾಧ ಪ್ರಮಾಣ ಆಧರಿಸಿ ನೀವು ಜೈಲಿಗೆ ಹೋಗಬೇಕಾಗಿ ಬರಬಹುದು. ( ಕೆಲವು ಸಣ್ಣ ಪುಟ್ಟ ವಿಷಯಗಳಲ್ಲಿ ತಕ್ಷಣ ಜಾಮೀನು ದೊರೆಯುತ್ತದೆ.) ಅಕಸ್ಮಾತ್ ನಿಮಗೆ ತಾತ್ಕಾಲಿಕ ನ್ಯಾಯಾಂಗ ಬಂಧನವಾದರೆ ಪೋಲೀಸರು ನಿಮ್ಮನ್ನು ಜೈಲಿಗೆ ಕಳುಹಿಸುತ್ತಾರೆ.
ಕಿರಿದಾದ ಬಾಗಿಲಿನ ಮುಖಾಂತರ ತಲೆ ಬಗ್ಗಿಸಿ ಜೈಲೊಳಗೆ ಪ್ರವೇಶಿಸಬೇಕು. ನೀವು ವಿಚಾರಣಾದೀನ ಖೈದಿಯಾಗಿ ದಾಖಲಾಗುತ್ತೀರಿ. ನಿಮಗೆ ಒಂದು ನಂಬರ್ ಕೊಡುತ್ತಾರೆ. ( ಶಿಕ್ಷೆಯಾದ ಖೈದಿಗಳಿಗೆ ಜೈಲಿನ ಬಟ್ಟೆ ಕೊಡುತ್ತಾರೆ. ) ನೀವು ಮಹಿಳೆಯರ ಕಿರುಕುಳದ ವಿಷಯದಲ್ಲಿ ಅಥವಾ ಬೇರೆ ತುಂಬಾ ಕೆಟ್ಟ ಅಪರಾಧ ಮಾಡಿದ್ದರೆ ಜೈಲಿನ ಪೋಲೀಸರೇ ಕೆಲವೊಮ್ಮೆ ಅಲ್ಲಿಯೇ ಅನಧಿಕೃತವಾಗಿ ಹೊಡೆದು ನಿಮಗೆ ಹೆದರಿಸಿ ನಂತರ ಕಠಿಣ ಅಪರಾಧ ಮಾಡಿರುವ ಜೈಲಿನ ಖೈದಿಗಳ ಸೆಲ್ ಗೆ ಕಳುಹಿಸುತ್ತಾರೆ.
ಅಲ್ಲಿ ಪಿಕ್ ಪಾಕೆಟ್ ಮಾಡಿರುವ ಖೈದಿಗಳಿಂದ ಹಿಡಿದು ಕೊಲೆ ಅತ್ಯಾಚಾರ ದರೋಡೆ ಮಾಡಿರುವ ಎಲ್ಲರೂ ಇರುತ್ತಾರೆ. ಅತ್ಯಂತ ಕೆಟ್ಟ ಕೊಳಕ ಸ್ಥಿತಿಯಲ್ಲಿ ಮಾತನಾಡುತ್ತಾ ನಿಮ್ಮ ಪರಿಸ್ಥಿತಿ ಗಮನಿಸಿ ಅಲ್ಲಿಯೂ ನಿಮಗೆ ಹೊಡೆದು ಹೆದರಿಸಿ ನಿಮ್ಮಲ್ಲಿ ಭಯ ಹುಟ್ಟಿಸುತ್ತಾರೆ. ಮಾರನೆಯ ಬೆಳಗಿನ ಚೆಕಿಂಗ್ ಸಮಯದಲ್ಲಿ ಈ ಬಗ್ಗೆ ನೀವು ದೂರು ಕೊಡಬಹುದಾದರೂ ಅದನ್ನು ಗಂಭೀರವಾಗಿ ತೆಗೆದುಕೊಳ್ಳುವುದಿಲ್ಲ. ಅದು ಗೊತ್ತಾದರೆ ಖೈದಿಗಳು ಮತ್ತೆ ಹೊಡೆಯುತ್ತಾರೆ. ಆ ಅಪರಾಧ ಜಗತ್ತಿನ ನ್ಯಾಯವೇ ಹಾಗಿರುತ್ತದೆ. ಕಳ್ಳನಿಗೆ ಕಳ್ಳನದೇ ನ್ಯಾಯ.
ಇನ್ನೂ ಕೆಲವೊಮ್ಮೆ ನಿಮ್ಮ ಅದೃಷ್ಟ ಸರಿ ಇಲ್ಲದಿದ್ದರೆ ನೀವು ಪುರುಷ ಅಥವಾ ಮಹಿಳೆಯರೇ ಆಗಿರಿ ಅಲ್ಲಿ ಲೈಂಗಿಕ ಕಿರುಕುಳ ನಿರಂತರವಾಗಿರುತ್ತದೆ. ಸಲಿಂಗಕಾಮಿಗಳ ಉಪಟಳ ಪಶುಸದೃಶ ರೀತಿಯಲ್ಲಿ ಇರುತ್ತದೆ. ಹೇಳಲೂ ಆಗದ ಅನುಭವಿಸಲೂ ಆಗದ ಕಷ್ಟ ನಿಮ್ಮದಾಗಬಹುದು. ಅತ್ಯಂತ ಕೆಳಮಟ್ಟದ ಗಾಂಜಾ ಅಫೀಮು ಸೇದುವ, ಜೀವನದಲ್ಲಿ ಯಾವುದೇ ಭರವಸೆ ಇಲ್ಲದ ಯಾವ ಸಂಬಂಧಗಳನ್ನೂ ಉಳಿಸಿಕೊಳ್ಳದ ಒಂದು ವರ್ಗ ಸದಾ ಜೈಲಿನಲ್ಲಿ ಇರುತ್ತದೆ. ಅವರು ಏನು ಮಾಡಲೂ ಹೇಸುವುದಿಲ್ಲ. ನಿಜ ಹೇಳಬೇಕೆಂದರೆ ಜೈಲಿನ ಪೋಲೀಸರು ಸಹ ಇವರಿಗೆ ಹೆದರುತ್ತಾರೆ. ಒಮ್ಮೊಮ್ಮೆ ಕಾರಣವೇ ಇಲ್ಲದೆ ರಾತ್ರಿಯ ವೇಳೆ ನಿಮ್ಮ ಮೇಲೆ ಹಲ್ಲೆ ಮಾಡುವುದು ಉಂಟು. ಮಾದಕ ವ್ಯಸನಿಗಳ ದಂಡೇ ಅಲ್ಲಿದೆ.
ನೀವು ಸಾಂಪ್ರದಾಯಿಕ ಕೌಟುಂಬಿಕ ಹಿನ್ನೆಲೆಯವರಾದರೆ ಅಲ್ಲಿನ ತಟ್ಟೆ ಲೋಟ ಹಿಡಿದು ಸರತಿಯ ಸಾಲಿನಲ್ಲಿ ಊಟಕ್ಕೆ ನಿಂತಾಗಲೇ ನಿಮಗೆ ಬದುಕಿನ ಎಲ್ಲವೂ ನೆನಪಾಗಿ ನಿಮ್ಮ ದುಃಖದ ಕಟ್ಟೆ ಹೊಡೆದು ಕಣ್ಣೀರಿನ ಕೋಡಿ ಹರಿಯುತ್ತದೆ. ನಿಮ್ಮ ಅಪರಾಧಕ್ಕೆ ಪಶ್ಚಾತ್ತಾಪವಾಗುವ ಸಾಧ್ಯತೆಯೇ ಹೆಚ್ಚು. ಆ ಊಟ ಸಹ ಯಾವುದೇ ರುಚಿ ಇಲ್ಲದೆ ಕೆಲವೊಮ್ಮೆ ಅತ್ಯಂತ ಕೆಟ್ಟ ರೀತಿಯಲ್ಲಿ ಇರುತ್ತದೆ. ಹುಳ, ಬೀಡಿಯ ತುಂಡುಗಳು, ಕಲ್ಲು ಮಣ್ಣು ಎಲ್ಲವೂ ಸಿಗಬಹುದು. ಅದನ್ನು ವಿಧಿಯಿಲ್ಲದೆ ತಿನ್ನಬೇಕು ಅಥವಾ ಉಪವಾಸದಿಂದ ನರಳಬೇಕು.
ಇನ್ನು ಅಲ್ಲಿನ ಬಾಗಿಲುಗಳಿಲ್ಲದ ಶೌಚಾಲಯಗಳು ನಿಮಗೆ ನರಕದ ದರುಶನ ಮಾಡಿಸುತ್ತದೆ. ಅಲ್ಲಿನ ಮಾದಕ ವ್ಯಸನಿಗಳ ಕೊಳಕುತನ, ವಾಸನೆ, ಕೆಲವೊಮ್ಮೆ ನೀವೇ ಶೌಚಾಲಯ ಶುಚಿಗೊಳಿಸಬೇಕಾದ ಅನಿವಾರ್ಯತೆ, ನೀರಿನ ಅಭಾವ, ಅಬ್ಬಾ ಬೇಡಪ್ಪಾ ಬೇಡ. ಇನ್ನು ಮುಂದೆ ಯಾವುದೇ ಅಪರಾಧ ಮಾಡುವುದು ಬೇಡ ಎನಿಸುತ್ತದೆ.
ಇಷ್ಟೇ ಅಲ್ಲದೆ, ಒಂದು ವೇಳೆ ನಿಮಗೆ ಜಾಮೀನು ಸಿಗುವುದು ತಡವಾದರೆ ನಿಮ್ಮ ತಂದೆ ತಾಯಿ ಗಂಡ ಹೆಂಡತಿ ಮಕ್ಕಳು ಅಥವಾ ಇತರ ಪ್ರೀತಿ ಪಾತ್ರರು ನೆನಪಾಗಿ ನಿಮ್ಮ ಮಾನಸಿಕ ತಳಮಳ ನಿಯಂತ್ರಣ ತಪ್ಪುತ್ತದೆ. ಒಂಟಿತನ ನಿಮ್ಮನ್ನು ಬಹುವಾಗಿ ಕಾಡುತ್ತದೆ. ಅದು ಸಹಿಸಲು ಅಸಾಧ್ಯವಾಗಿರುತ್ತದೆ. ಇದಲ್ಲದೆ ಇಲ್ಲಿ ವಿವರಿಸಲಾಗದ ಇನ್ನೂ ಕೆಲವು ದುರಂತಗಳಿಗೆ ನೀವು ಗುರಿಯಾಗಬಹುದು. ಜೈಲಿನ ನಿಗೂಡತೆ ಕಾನೂನಿನ ವ್ಯಾಪ್ತಿ ಮೀರಿದ್ದು. ಅಧಿಕಾರಿಗಳು ಇದನ್ನು ಒಪ್ಪುವುದಿಲ್ಲ. ಈಗ ಜೈಲು ಸಾಕಷ್ಟು ಸುಧಾರಣೆ ಆಗಿದೆ. ಈಗ ಮೊದಲಿನಂತಿಲ್ಲ. ಖೈದಿಗಳಿಗೂ ಮಾನವ ಹಕ್ಕುಗಳು ಇವೆ ಎಂದು ಸಮರ್ಥನೆ ಮಾಡಿಕೊಳ್ಳುತ್ತಾರೆ. ಆದರೆ ಅದು ಸಾಮಾನ್ಯ ಭಾಷೆಯಲ್ಲಿ ನಿಮ್ಮ ಗ್ರಹಚಾರ ಎಂದು ಕರೆಯಲ್ಪಡುವ ಅದೃಷ್ಟ ಅಥವಾ ದುರಾದೃಷ್ಟವನ್ನು ಅವಲಂಬಿಸಿರುತ್ತದೆ. ಇದೆಲ್ಲವೂ ಕೇವಲ ನಿಮ್ಮ ನಿಯಂತ್ರಣವಿಲ್ಲದ ತಾಳ್ಮೆಗೆಟ್ಟ ಒಂದು ಕ್ಷಣದ ಅಪರಾಧದಿಂದ ಆಗುವುದು ಎಂದು ನೆನಪಿಡಿ.
ಇಲ್ಲಿಯೇ ಬಗೆಹರಿಸಿಕೊಳ್ಳಬಹುದಾದ ಅನೇಕ ವಿಷಯಗಳನ್ನು ನಾವುಗಳು ನಮ್ಮ ಅಹಂಕಾರ, ಅಜ್ಞಾನ, ಕೆಟ್ಟ ಕೋಪ ಮುಂತಾದ ಕಾರಣಗಳಿಂದ ಬದುಕನ್ನು ದುರಂತದ ಕಡೆಗೆ ತೆಗೆದುಕೊಂಡು ಹೋಗುತ್ತೇವೆ. ಅನಿವಾರ್ಯ ಸಂಕಷ್ಟಗಳು ಬೇರೆ. ಅದನ್ನು ಎದುರಿಸಲೇ ಬೇಕು. ಆದರೆ ನಾವೇ ಆಹ್ವಾನಿಸಿಕೊಳ್ಳುವ ಕಷ್ಟಗಳು ಬಾರದಿರಲಿ. ಬದುಕಿನಲ್ಲಿ ಇರುವ ಕೆಲವೇ ಸಮಯದಲ್ಲಿ ಸಹಜವಾಗಿಯೇ ಬರುವ ಅನೇಕ ಅಡೆತಡೆಗಳ ಮಧ್ಯೆ ಇದನ್ನು ಮೇಲೆ ಎಳೆದು ಕೊಳ್ಳುವುದು ಬೇಡ. ತಾಳ್ಮೆಯಿಂದ ಒಂದಷ್ಟು ಎಚ್ಚರಿಕೆಯಿಂದ ಜೀವನ ಸಾಗಿಸೋಣ...
-ವಿವೇಕಾನಂದ. ಹೆಚ್.ಕೆ., ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ