ಜೈವಿಕ ಇಂಧನಗಳ ಬಳಕೆಯಿಂದ ಅಪಾಯ?(ಇ-ಲೋಕ-22) (11/5/2007)
ಇಥೆನಾಲ್ ಬಳಸಿ ವಾಹನ ಓಡಿಸಲು ಸಾಧ್ಯ. ಅದನ್ನು ಪೆಟ್ರೋಲ್ ಜತೆ ಮಿಶ್ರ ಮಾಡಿಯೂ ಬಳಸಬಹುದು. ಏರುತ್ತಿರುವ ಕಚ್ಚಾ ತೈಲದ ಬಳಕೆ ಮತ್ತು ಅದರಿಂದ ಭೂಮಿಯ ವಾತಾವರಣಕ್ಕೆ ಅಗುತ್ತಿರುವ ಹಾನಿ, ಶಾಖದ ಏರಿಕೆ ಇವುಗಳ ಬಗ್ಗೆ ಚಿಂತಿಸಿದ ಸಂಶೋಧಕರು, ಇಥೆನಾಲ್‍ನಂತಹ ಜೈವಿಕ ಇಂಧನ ಬಳಕೆ ಒಳಿತು ಎಂಬ ಅಭಿಪ್ರಾಯಕ್ಕೆ ಬಂದಿದ್ದರು. ಅದರೆ ಈಗ ವಿಶ್ವ ಸಂಸ್ಥೆಯು ಜೈವಿಕ ಇಂಧನದ ಬಳಕೆಯೂ ಅಪಾಯಕಾರಿ ಆಗಬಲ್ಲುದು, ಇದರಿಂದ ಭೂಮಿಯ ಪರಿಸರದ ಮೇಲೆ ಆಗುತ್ತಿರುವ ಕೆಡುಕನ್ನು ನಿವಾರಿಸಲು ಅಸಾಧ್ಯವಾಗಬಹುದು ಎನ್ನುವ ಕಳವಳ ವ್ಯಕ್ತ ಪಡಿಸಿದೆ. ಜೈವಿಕ ಇಂಧನವನ್ನು ಸಾಮಾನ್ಯವಾಗಿ ಮೆಕ್ಕೆಜೋಳ, ಬೀಟ್‍ರೂಟ್, ಪಾಮೆಣ್ಣೆಯಿಂದ ತಯಾರಿಸುವುದು ವಾಡಿಕೆ.ಈ ವರ್ಷ ತೈಲ ಬೆಲೆಯಲ್ಲಿ ಅಗಿರುವ ಹೆಚ್ಚಳದಿಂದ ಇಥೆನಾಲ್ ಉತ್ಪಾದನೆ ಹೆಚ್ಚಿದೆ. ಇದಕ್ಕಾಗಿ ಮೆಕ್ಕೆಜೋಳ, ಬೀಟ್‍ರೂಟ್ ಅದರ ಉತ್ಪಾದನೆಗೆ ಬಳಕೆಯಾಗಿ, ವಿಶ್ವ ಮಾರುಕಟ್ಟೆಯಲ್ಲಿ ಸಕ್ಕರೆ ಮತ್ತು ಮೆಕ್ಕೆಜೋಳದ ಬೆಲೆಯಲ್ಲಿ ಹೆಚ್ಚಳವಾಗಿದೆ. ಅಲ್ಲದೆ ಹೊಲಗಳನ್ನು ಜೈವಿಕ ಇಂಧನ ನೀಡುವ ಬೆಳೆಗಳನ್ನು ಬೆಳೆಯಲು ಬಳಸಿದರೆ, ಆಹಾರ ಉತ್ಪಾದನೆಗೆ ಪೆಟ್ಟು ಬೀಳಬಹುದು. ಏಕಬೆಳೆಯನ್ನು ಬೆಳೆಯುವುದರಿಂದ ಭೂಮಿ ಬರಡಾಗುವಿಕೆ, ನೀರಿನ ಬಳಕೆಯಲ್ಲಿ ಹೆಚ್ಚಳ, ಮಣ್ಣಿನ ಸವಕಳಿಯೂ ಹೆಚ್ಚುವ ಅಪಾಯವಿದೆ.ಅರಣ್ಯ ಭೂಮಿ ಒತ್ತುವರಿಯಿಂದ ಅರಣ್ಯ ನಾಶ,ಆಹಾರದ ಬೆಳೆಗಳ ಬೆಲೆಯಲ್ಲಿ ಹೆಚ್ಚಳ, ಸಣ್ಣ ಹಿಡುವಳಿಗಳು ಈ ಬೆಳೆಗಳಿಗೆ ಲಾಭದಾಯಕವಲ್ಲದ ಕಾರಣ ಸಣ್ಣ ಹಿಡುವಳಿದಾರರು ನಿರ್ಗತಿಕರಾಗುವ ಅಪಾಯವೂ ಇದೆ. ಭೂಮಿಯ ಪರಿಸರಕ್ಕೆ ಹಾನಿ ಹೆಚ್ಚಲಿದೆಯೇ ವಿನ: ಕಡಿಮೆಯಾಗದು ಎಂದು ಪರಿಸರವಾದಿಗಳು ಎಚ್ಚರಿಸಿದ್ದಾರೆ.
ಗೂಗಲ್ ಹಿಮ್ಮೆಟ್ಟಿಸಲು ಮೈಕ್ರೊಸಾಫ್ಟ್-ಯಾಹೂ ವಿಲಯನ ಯತ್ನ
ಗೂಗಲ್ ಅಗಾಧವಾಗಿ ಬೆಳೆಯುತ್ತಿದೆ. ಯುಟ್ಯೂಬ್ ಮತ್ತು ಡಬಲ್‍ಕ್ಲಿಕ್ ಕಂಪೆನಿಗಳ ಖರೀದಿಯ ಜತೆಗೆ ಗೂಗಲ್ ಮತ್ತಷ್ಟು ಬಲಾಢ್ಯವಾಗಿದೆ. ಮೈಕ್ರೋಸಾಫ್ಟ್ ಕಂಪೆನಿಯು ಗೂಗಲ್‍ನ್ನು ಹಿಮ್ಮೆಟ್ಟಿಸಲು ಇನ್ನೊಂದು ದೊಡ್ಡ ಕಂಪೆನಿಯನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳುವ ಯೋಚನೆಯಲ್ಲಿದೆಯಂತೆ. ಮೈಕ್ರೋಸಾಫ್ಟ್‍ನ ಬಿಲ್ ಗೇಟ್ಸ್ ಮತ್ತು ಯಾಹೂವಿನ ಟೆರ್ರಿ ಸೆಮೆಲ್ ಈ ಬಗ್ಗೆ ಮಾತುಕತೆ ನಡೆಸಿದ್ದಾರೆನ್ನುವ ಗುಲ್ಲು ಈಗ ಕೇಳಿ ಬರುತ್ತಿದೆ. ಯಾಹೂವಿಗೆ ಐವತ್ತು ಬಿಲಿಯನ್ ಡಾಲರ್ ನೀಡಲು ಮೈಕ್ರೋಸಾಫ್ಟ್ ಸಿದ್ಧವಿದೆಯಂತೆ. ಈ ಎರಡೂ ದಿಗ್ಗಜಗಳು ಜತೆಯಾದರೂ ಅವುಗಳ ಮಾರುಕಟ್ಟೆ ಪಾಲು ಗೂಗಲ್‍ನಷ್ಟಾಗದು. ಆದರೂ ಎರಡರ ನಡುವಣ ಅಂತರ ಬಹಳಷ್ಟು ಕಡಿಮೆಯಾಗುವುದು ವಾಸ್ತವ.
ಜೀವವೈವಿಧ್ಯದ ವಿವರ ನೀಡುವ ವಿಶ್ವಕೋಶ
ಭೂಮಿಯ ಮೇಲೆ ಕಂಡು ಬರುತ್ತಿರುವ ಎಲ್ಲಾ ಹದಿನೆಂಟು ಲಕ್ಷ ಜಾತಿಯ ಜೀವಪ್ರಕಾರಗಳ ವಿವರಗಳು,ಚಿತ್ರಗಳನ್ನು,ವಿಡಿಯೋ,ಸಂಶೋಧನಾ ಪ್ರಬಂಧಗಳು,ನಕಾಶೆಗಳು ಇತ್ಯಾದಿಯನ್ನು ನೀಡುವ ವಿಶ್ವಕೋಶದ ಕೆಲಸ ಆರಂಭವಾಗಲಿದೆ. ಈ ವಿಶ್ವಕೋಶ ಎನ್‍ಸೈಕ್ಲೋಪೀಡಿಯಾ ಆಫ್ ಲೈಫ್ ಎಂಬ ಅಂತರ್ಜಾಲ ತಾಣದಲ್ಲಿ www.eol.org ಎನ್ನುವ ವಿಳಾಸದಲ್ಲಿ ಲಭ್ಯವಿದೆ. ಇಲ್ಲಿ ಸಿಕ್ಕುವ ವಿವರಗಳು ವಿದ್ಯಾರ್ಥಿಗಳಿಗೆ ಮತ್ತು ಸಂಶೋಧಕರಿಗೆ ಸೂಕ್ತವಾಗುವ ರೀತಿ ಎರಡು ತೆರದಲ್ಲಿ ಕಾಣಿಸಿಕೊಳ್ಳುವಂತೆ ಮಾಡುವ ಆಲೋಚನೆ ಸಂಯೋಜಕರಿಗಿದೆ.ಯೋಜನೆ ಪೂರ್ಣಗೊಳ್ಳಲು ಹತ್ತು ವರ್ಷ ಬೇಕಾದೀತು.
ಸೈಬರ್ ಕೆಫೆಯಲ್ಲೇ ಶಯನ!
ಸೈಬರ್ ಕೆಫೆಯಲ್ಲಿ ಅಂತರ್ಜಾಲ ಜಾಲಾಡಲು ಹೋಗುವ ಮಂದಿಯೇ ಅಧಿಕ. ಅದರೀಗ ಸೈಬರ್ ಕೆಫೆಯಲ್ಲಿ ರಾತ್ರಿ ಕಳೆಯಲು ಹೋಗುವ ಚಾಳಿ ಜಪಾನೀ ಯುವ ಪೀಳಿಗೆಯಲ್ಲಿ ಹೆಚ್ಚುತ್ತಿದೆ. ಅರೆಉದ್ಯೋಗಿ ಯುವಕರು ದುಬಾರಿ ನಗರವಾದ ಟೊಕಿಯೋದಲ್ಲಿ ಗಂಟೆಗೆ ಎಂಟು ಡಾಲರು ಗಳಿಸುತ್ತಾರೆ. ಮನೆ(ಕೋಣೆ) ಬಾಡಿಗೆ ಹಿಡಿಯಲು ತಿಂಗಳಿಗೆ ಸಾವಿರದಿನ್ನೂರು ಕಕ್ಕಬೇಕು. ಅದರ ಬದಲು ಒಂದು ರಾತ್ರಿ ನಿಲ್ಲಲು ಹದಿನೈದು-ಇಪ್ಪತ್ತು ಡಾಲರು ನೀಡಿ,ಸೈಬರ್ ಕೆಫೆಯಲ್ಲಿ ತಂಗಿದರೆ, ಅಂತರ್ಜಾಲ ಜಾಲಾಡಬಹುದು, ಲಘು ಪಾನೀಯ ಕುಡಿಯಬಹುದು,ಸ್ನಾನಗೃಹ,ಕಕ್ಕಸು ಲಭ್ಯ. ಒರಗು ಕುರ್ಚಿಯಲ್ಲಿ ನಿದ್ರಾದೇವಿಗೆ ಶರಣಾಗುವ ಮೊದಲು ಉಡುಗೆ ತೆಗೆದು ತೂಗು ಹಾಕಲು ಹ್ಯಾಂಗರ್ ಸೌಲಭ್ಯವೂ ಲಭ್ಯ. ಪ್ರತಿ ಸರ್ಫಿಗನಿಗೂ ಕ್ಯಾಬಿನ್ ಲಭ್ಯವಾಗುವುದರಿಂದ ಖಾಸಗಿತನಕ್ಕೂ ಅಡ್ಡಿಯಿಲ್ಲ. ನಿದ್ದೆ ಬರದಿದ್ದರೆ ಕಂಪ್ಯೂಟರ್ ಬಳಸಲೂ ಬಹುದು. ಮುಂಜಾನೆ ಜಾಗ ಖಾಲಿ ಮಾಡಿದರೆ ಸರಿ.ಬಾಡಿಗೆಯ ಹಣದ ಕಾಲು ಭಾಗ ನೀಡಿ,ಉಳಕೊಳ್ಳುವ ಸಮಸ್ಯೆ ಬಗೆಹರಿಸಿಕೊಂಡ ಹಾಗೆ ಆಗುತ್ತದೆ. ರಾತ್ರಿ ಊರು ಸೇರಲು ಟ್ರೈನ್ ತಪ್ಪಿಸಿಕೊಂಡ ಯುವತಿಯರೂ ಸೈಬರ್ ಕೆಫೆಯಲ್ಲಿ ರಾತ್ರಿ ಕಳೆಯಲು ಬರುವುದೂ ಇದೆಯಂತೆ.
ಹಸಿರಾಗುತ್ತಿದೆ ಸ್ಯಾನ್‍ಫ್ರಾನ್ಸಿಸ್ಕೋ ನಗರ!
ಸ್ಯಾನ್‍ಫ್ರಾನ್ಸಿಸ್ಕೋ ನಗರವು ಸಿಲಿಕಾನ್ ವ್ಯಾಲಿಯ ಸಮೀಪದ ನಗರ. ಅಮೆರಿಕಾದಲ್ಲಿ ಪ್ಲಾಸ್ಟಿಕ್ ಚೀಲ ನಿಷೇಧಿಸಿದ ಮೊದಲ ನಗರ ಎಂಬ ಹೆಗ್ಗಳಿಕೆ ಇದರದ್ದೇ. ಈಗಂತೂ ನಗರವನ್ನು ಪರಿಸರಪ್ರಿಯವಾಗಿಸಲು ಎಲ್ಲೆಡೆ ಒತ್ತು ನೀಡಲಾಗುತ್ತಿದೆ. ಗಗನಚುಂಬಿ ಕಟ್ಟಡವೊಂದರ ಎರಡೂವರೆ ಎಕರೆ ಚಾವಣಿಯಲ್ಲಿ ಉದ್ಯಾನ ಬೆಳೆಸಲಾಗುತ್ತಿದೆ.ಇದರಲ್ಲಿ ಹದಿನೇಳು ಲಕ್ಷ ಸಸಿಗಳು ಇಲ್ಲಿ ಬೆಳೆಯಲಿವೆ.ಹೆಚ್ಚಿನೆಲ್ಲಾ ಕಟ್ತಡಗಳಲ್ಲಿ ಸೌರ ಫಲಕಗಳನ್ನು ಸ್ಥಾಪಿಸಿ, ವಿದ್ಯುಚ್ಛಕ್ತಿ ಉತ್ಪಾದನೆಗೆ ಒತ್ತು ನೀಡಲಾಗುತ್ತಿದೆ.ನೀರಿನ ಮರುಬಳಕೆಗೆ ಪ್ರಯತ್ನ ಸಾಗಿದೆ. ಗಾಳಿಯಿಂದ ವಿದ್ಯುದುತ್ಪಾದನೆಗೆ ವಿಂಡ್‍ಮಿಲ್ ಸ್ಥಾಪನೆ ಅಲ್ಲಲ್ಲಿ ನಡೆದಿದೆ.ಚರ್ಚಿನಂತಹ ಸ್ಥಳಗಳಲ್ಲಿ ದಕ್ಷ ವಿದ್ಯುದ್ದೀಪಕಗಳ ಬಳಕೆ ನಡೆದಿದೆ. ಸೌರಶಕ್ತಿ ಮೇಲೆ ಇಲ್ಲಿನ ವಿದ್ಯುತ್ ಬೇಡಿಕೆ ಪೂರೈಸಿ,ಜನರಿಗೆ ಆದರ್ಶವಾಗುವ ಕನಸನ್ನು ಚರ್ಚಿನ ಆಡಳಿತ ಮಂಡಳಿಗಳು ಕಾಣುತ್ತಿವೆ. ಕೈಗಾರಿಕೆಗಳು ಹೊರಸೂಸುವ ತ್ಯಾಜ್ಯ ಅನಿಲಗಳ ಕಾರಣ ಸ್ಮೋಗ್ ಮತ್ತು ಮಂಜಿನ ವಾತಾವರಣದ ಸಮಸ್ಯೆ ಎದುರಿಸುತ್ತಿರುವ ಸ್ಯಾನ್‍ಫ್ರಾನ್ಸಿಸ್ಕೋ ನಗರ, ಬರೇ ಕನಸು ಕಾಣದೆ ಸಾಧ್ಯವದಷ್ಟನ್ನು ಕೃತಿಗಿಳಿಸಿ, ಇತರ ನಗರಗಳಿಗೆ ಪಾಠವಾಗಲು ಹೊರಟಿದೆ. *ಅಶೋಕ್‍ಕುಮಾರ್ ಎ