ಜೈವಿಕ ಮಹಾಯುದ್ಧ ಮುಂದೇನು...?

ಜೈವಿಕ ಮಹಾಯುದ್ಧ ಮುಂದೇನು...?

ಪುಸ್ತಕದ ಲೇಖಕ/ಕವಿಯ ಹೆಸರು
ಕೆ.ನಟರಾಜ್
ಪ್ರಕಾಶಕರು
ಸುಧನ್ವ ಪಬ್ಲಿಕೇಷನ್ಸ್, ಜೆ ಪಿ ನಗರ ೧ನೇ ಹಂತ, ಬೆಂಗಳೂರು. ದೂ: ೯೯೮೬೧೦೯೧೫೪ಸುಧ
ಪುಸ್ತಕದ ಬೆಲೆ
ರೂ.೧೪೦.೦೦, ಮುದ್ರಣ: ೨೦೨೨

ಜೈವಿಕ ಮಹಾಯುದ್ಧ ಮುಂದೇನು...? ಇದು ಕೆ. ನಟರಾಜ್ ಅವರ ಹದಿಮೂರನೆಯ ಪುಸ್ತಕ. ಈ ಪುಸ್ತಕ ಇಂದಿನ ರಾಷ್ಟ್ರ-ರಾಷ್ಟ್ರಗಳ ವಿನಾಶದ ತೊಳಲಾಟವನ್ನು ಪ್ರತಿಬಿಂಬಿಸುತ್ತದೆ. ಮನುಷ್ಯ ನಾಗರೀಕತೆಯ ಹೊಸ್ತಿಲಲ್ಲಿ ಹೆಜ್ಜೆ ಇಟ್ಟಾಗಿನಿಂದ ಆತನ ವಿಲಕ್ಷಣ ಮನಸ್ಸು ವಿನಾಶದ ಕಡೆಗೇ ತುಡಿಯುತ್ತಿರುವುದು ಇತಿಹಾಸ ಕಂಡುಕೊಂಡ ಸತ್ಯ. ಮಾನವನ ಅಭ್ಯುದಯಕ್ಕೆ ವಿಜ್ಞಾನ ಆವಿಷ್ಕಾರಗೊಳ್ಳುತ್ತಿರುವಂತೆಯೇ ಅದರ ಇನ್ನೊಂದು ವಿನಾಶದ, ವಿಧ್ವಂಸದ ಮಜಲು ತೆರೆದುಕೊಳ್ಳುತ್ತಿರುವುದನ್ನು ಇತಿಹಾಸದ ಪುಟ ಪುಟಗಳಲ್ಲಿ ಕಾಣಬಹುದು. ಇದಕ್ಕೆ ಪ್ರಪಂಚದ ಎರಡು ಮಹಾಯುದ್ಧಗಳೇ ಸಾಕ್ಷಿ ; ಅಷ್ಟೇ ಏಕೆ ಇತ್ತೀಚೆಗೆ ಆರಂಭವಾಗಿರುವ ರಷ್ಯಾ-ಉಕ್ರೇನ್ ಯುದ್ಧವೇ ನಮ್ಮ ಕಣ್ಣ ಮುಂದಿನ ಜ್ವಲಂತ ಸಾಕ್ಷಿ. ಮೂರನೇ ಮಹಾಯುದ್ಧವೇನಾದರೂ ಸಂಭವಿಸಿದರೆ, ಜೈವಿಕ ಹಾಗೂ ರಾಸಾಯನಿಕ ಯುದ್ಧಾಸ್ತ್ರಗಳು ಬಳಕೆಯಾಗಿ ಇಡೀ ಮನುಕುಲ ನರಳಿ ನಾಶವಾಗುವುದರಲ್ಲಿ ಯಾವ ಸಂದೇಹವೂ ಇಲ್ಲ.

ಹಾಗಾದರೆ ಮಾನವನ ಈ ದುಷ್ಟ ಬುದ್ಧಿಗೆ ಕಡಿವಾಣ ಹಾಕಲು ಸಾಧ್ಯವಿಲ್ಲವೇ? ಖಂಡಿತಾ ಇಲ್ಲ. ಈ ಜಗತ್ತಿರುವವರೆಗೂ ಇದು ಒಂದಲ್ಲಾ ಒಂದು ಕಡೆ ನಡೆಯುತ್ತಲೇ ಇರುತ್ತದೆ ; ಮಹತ್ವಾಕಾಂಕ್ಷೀ ಆಡಳಿತ ಹಾಗೂ ಕೊಳಕು ಹಣದ ದಾಹ ಈ ಪ್ರಪಂಚದಲ್ಲಿ ಇರುವವರೆಗೂ ! ಆದರೂ ಮಾನವನ ಪ್ರಜ್ಞೆ ಎಂಬುದೊಂದು ಇದೆಯಲ್ಲಾ ಅದಕ್ಕಾಗಿಯಾದರೂ ಸತ್ಯವನ್ನು ಜನರಿಗೆ ತಿಳಿಸಲೇಬೇಕಾದದ್ದು ಕರ್ತವ್ಯ. ಇದನ್ನು ಅರಿತವರಾದರೂ ಸುರಕ್ಷತೆಯ ಜಾಡಿಗೆ ಜಾರಲಿ ಎಂಬ ಪುಟ್ಟ ಆಶಯ. ಕೆಲವು ಕರ್ತವ್ಯಗಳು ವಿಫಲ ಎಂದು ಗೊತ್ತಿದ್ದರೂ ನಮ್ಮ ಹಿರಿಯರು ನಮಗೆ ಬುದ್ಧಿ ಹೇಳುತ್ತಲೇ ಇರುವುದಿಲ್ಲವೇ, ಹಾಗೇ ಇದೂ ಒಂದು ಪ್ರಯತ್ನ. - ಇದು ಪುಸ್ತಕದ ಬೆನ್ನುಡಿಯಲ್ಲಿ ಕಂಡು ಬಂದ ಬರಹ.

ಕೃತಿಯ ಲೇಖಕರಾದ ಕೆ ನಟರಾಜ ಇವರು ತಮ್ಮ ಮುನ್ನುಡಿಯಲ್ಲಿ “ಇತಿಹಾಸ ಅನೇಕ ಯುದ್ಧಗಳನ್ನು ಕಂಡಿವೆ ; ದಾಖಲಾಗುತ್ತಿರುವ ಎರಡು ಮಹಾ ಯುದ್ಧಗಳನ್ನೂ ನೋಡಿದೆ. ಪ್ರಸ್ತುತ ನಡೆಯುತ್ತಿರುವ ರಷ್ಯಾ-ಉಕ್ರೇನ್ ಯುದ್ಧವನ್ನೂ ಕಣ್ಣಾರೆ ಕಾಣುತ್ತಿದೆ. ಅದರ ಪರಿಣಾಮಗಳೂ ಈಗ ಸಾಕಷ್ಟು ರಾಷ್ಟ್ರಗಳ ಮೇಲೆ ಬೀಳುತ್ತಿರುವುದನ್ನೂ ಈಗ ಗಮನಿಸುತ್ತಿದ್ದೇವೆ. ಯುದ್ಧ ಏಕೆ ಎಂಬ ಜಿಜ್ಞಾಸೆಯೂ ಈಗ ಬೇಡ ; ಅವು ನಡೆಯುತ್ತಲೇ ಇರುತ್ತವೆ. ಯುದ್ಧವೆಂದರೆ ನಾಗರಿಕತೆಯ ನಾಶ ; ಮಾನವನ ವಿನಾಶ ; ಅದರಲ್ಲೂ ನಾಗರೀಕತೆಗೆ ಇದೊಂದು ಪರಮ ಶಾಪ. ಅದಕ್ಕೆ ರಷ್ಯಾ-ಉಕ್ರೇನ್ ಯುದ್ಧವೇ ಸಾಕ್ಷಿ.

‘ಯುದ್ಧದಲ್ಲಿ ಹಾಗೂ ಪ್ರೀತಿಯಲ್ಲಿ ಎಲ್ಲವೂ ಸಹ್ಯ' ಎಂಬ ಉಕ್ತಿ ಇತಿಹಾಸದ ಯುದ್ಧಗಳನ್ನು ನೋಡಿಯೇ ಹೇಳಿರಬೇಕು ಎನ್ನಿಸುತ್ತದೆ. ಯುದ್ಧದಲ್ಲಿ ತಾನು ಗೆಲ್ಲಬೇಕು ಅಷ್ಟೇ ; ಪ್ರತಿಷ್ಟೆ, ಗೌರವಗಳು ಉಳಿಯಬೇಕು ; ಪರರಾಜ್ಯ ತನ್ನ ತೆಕ್ಕೆಗೆ ಸೇರಬೇಕು ; ಸಾಮ್ರಾಜ್ಯ ವಿಸ್ತಾರಗೊಳ್ಳಬೇಕು... ಹೀಗೆ ಯುದ್ಧದ ವಾಂಛೆ ವಿಸ್ತಾರಗೊಳ್ಳುತ್ತಾ ಹೋಗುತ್ತದೆ. ಬಹುಮುಖೀ ಈ ಯುದ್ಧ. 

ಜೈವಿಕಾಣುಗಳು ಮಾನವನ ಒಳಿತಿಗೆ ಹಾಗೂ ಕೆಡುಕಿಗೂ ಇರುವುದನ್ನು ಕಂಡ ಮಾನವ ಎರಡಕ್ಕೂ ಅವುಗಳನ್ನು ಬಳಸಿಕೊಳ್ಳುತ್ತಿದ್ದಾನೆ. ಕುತ್ಸಿಕ ಮನಗಳ ಕೈಗೆ ಸಿಕ್ಕ ವಿಜ್ಞಾನ ಸರ್ವನಾಶಕ್ಕೇ ಬಳಕೆಯಾಗುತ್ತಿರುವುದು ಇತಿಹಾಸ ಕಂಡ ಸತ್ಯ. ಇಂತಹ ಭೀಕರ ಜೈವಿಕ ಯುದ್ಧಗಳ ಬಗ್ಗೆ ಮತ್ತು ಬಳಕೆಯಾಗಬಹುದಾದ ಜೈವಿಕಾಸ್ತ್ರಗಳ ಬಗ್ಗೆ ಮತ್ತು ಉಂಟಾಗಬಹುದಾದ ಪರಿಣಾಮಗಳ ಬಗ್ಗೆ ಈ ಪುಸ್ತಕದಲ್ಲಿ ಚರ್ಚಿಸಲಾಗಿದೆ. ಇಲ್ಲಿ ಮಾಹಿತಿಯನ್ನು ಮಾತ್ರ ನೀಡಲಾಗಿದೆ ; ವಿವೇಚನೆ ನಿಮಗೆ ಬಿಟ್ಟದ್ದು. ಮೂರನೆಯ ಮಹಾಯುದ್ಧವೇನಾದರೂ ಸಂಭವಿಸಿದರೆ ಈ ಜೈವಿಕಾಸ್ತ್ರಗಳು ಪ್ರಮುಖ ಪಾತ್ರವಹಿಸುದರಲ್ಲಿ ಯಾವುದೇ ಸಂದೇಹ ಇಲ್ಲ. ಮುಂದಿನದು ಪ್ರಪಂಚದ ಸರ್ವನಾಶವಷ್ಟೇ !” ಎಂದು ಬರೆದಿದ್ದಾರೆ.

ಲೇಖಕರಾದ ನಟರಾಜ್ ಅವರು ಜೈವಿಕ ಅಸ್ತ್ರಗಳ ಬಗ್ಗೆ ಬಹಳ ಸವಿವರವಾಗಿ ಸಚಿತ್ರ ಮಾಹಿತಿ ನೀಡುತ್ತಾ ಹೋಗಿದ್ದಾರೆ. ಪರಿವಿಡಿಯಲ್ಲಿ ೧೯ ಅಧ್ಯಾಯಗಳಿವೆ. ಅದರಲ್ಲಿ ಜಗತ್ತಿನ ಮಹಾ ಅಪಾಯಕಾರಿ ಜೈವಿಕ ಅಸ್ತ್ರಗಳು, ಜೈವಿಕ ಸಮರಕ್ಕೆ ಬಳಸುವ ಜೈವಿಕಾಸ್ತ್ರಗಳು, ಇತಿಹಾಸ ಕಾಲದ ಜೈವಿಕ ಯುದ್ಧ, ಎರಡನೇ ಮಹಾ ಯುದ್ಧದ ನಂತರ, ಜೈವಿಕಾಸ್ತ್ರಗಳ ಬಳಕೆ ಏಕೆ?, ಮಾರಣಾಂತಿಕ ಸಿಡುಬು ರೋಗ, ಅತ್ಯಂತ ಸಾಂಕ್ರಾಮಿಕ ಕ್ಯೂ ಜ್ವರ, ಕೋವಿಡ್ ೧೯ ; ಇದೂ ಚೀನಾದ ಜೈವಿಕಾಸ್ತ್ರವೇ? ಎಂಬೆಲ್ಲಾ ಅಧ್ಯಾಯಗಳು ಇವೆ.

ಉದಯ ಸಿಂಗನಮಲ್ಲಿ ಇವರು ಪುಸ್ತಕಕ್ಕೆ ಆಕರ್ಷಕ ಮುಖಪುಟ ಮಾಡಿಕೊಟ್ಟಿದ್ದಾರೆ. ೧೨೫ ಪುಟಗಳ ಈ ಪುಸ್ತಕವನ್ನು ಓದಿ ಮುಗಿಸಿದಾಗ ನಮ್ಮ ಮನಸ್ಸಿನಲ್ಲೊಂದು ವಿಷಾದದ ಛಾಯೆ ಮೂಡುವುದರಲ್ಲಿ ಸಂಶಯವಿಲ್ಲ. ಏಕೆಂದರೆ ಮುಂದೊಂದು ದಿನ ಯುದ್ಧವೇನಾದರೂ ಆಗಿ ಅದರಲ್ಲಿ ಜೈವಿಕ ಅಸ್ತ್ರಗಳು ಬಳಕೆಯಾದಲ್ಲಿ ಭೂಮಿ ಮತ್ತೆ ತನ್ನ ಮೊದಲಿನ ರೂಪಕ್ಕೆ ಬರಲು ಸಾಧ್ಯವೇ ಇಲ್ಲದಷ್ಟು ಹಾಳಾಗಿ ಹೋಗಬಹುದು. ಇಂತಹ ಯುದ್ಧಗಳು ನಡೆಯದೇ ಇರಲಿ ಎಂದು ಹಾರೈಸುವ.