ಜೈವಿಕ ವೈವಿಧ್ಯ ರಕ್ಷಕರಿಗೆ ಲಾಭದ ಪಾಲು ನೀಡಿಕೆ ಕಡ್ಡಾಯ

ಜೈವಿಕ ವೈವಿಧ್ಯ ರಕ್ಷಕರಿಗೆ ಲಾಭದ ಪಾಲು ನೀಡಿಕೆ ಕಡ್ಡಾಯ

ಬೇಸಗೆ ಮತ್ತು ಚಳಿಗಾಲಗಳಲ್ಲಿ ಮಹಾರಾಷ್ಟ್ರದ ಮೇಲ್‍ಘಾಟ್ ಹತ್ತಿರ ವಾಸ ಮಾಡುವ ಕೊರ್ಕು ಬುಡಕಟ್ಟಿನ ಜನರು ಬಲೆಯಿಂದ ಆವರಿಸಿದ ಹತ್ತಿ ಬಟ್ಟೆಯ ಉಡುಪು ಧರಿಸಿ ಕಾಡಿಗೆ ಹೊರಡುತ್ತಾರೆ.
ಅವರ ಉದ್ದೇಶ ಮರಗಳಿಂದ ಜೇನು ಸಂಗ್ರಹಿಸುವುದು. ಅದು ಸವಾಲಿನ ಕೆಲಸ. ಯಾಕೆಂದರೆ, ಜೇನ್ನೊಣಗಳನ್ನು ಕೊಲ್ಲದೆ, ಜೇನುಹುಟ್ಟುಗಳನ್ನು ನಾಶ ಮಾಡದೆ ಜೇನು ಸಂಗ್ರಹಿಸಬೇಕು. ಅದಕ್ಕಾಗಿ ಅವರು, ಜೇನ್ನೊಣಗಳ ಗೂಡಿನ ಹೃದಯದಂತಿರುವ ಜೇನು ತುಂಬಿದ ಹುಟ್ಟುಗಳಿಗೆ ಮಾತ್ರ ಕೈಹಾಕುತ್ತಾರೆ. “ಜೇನು ಗೂಡುಗಳ ಆ ಭಾಗದಲ್ಲಿ ಮಾತ್ರ ಜೇನು ಸಂಗ್ರಹಿಸಿಟ್ಟಿರುತ್ತವೆ. ಅಲ್ಲಿಂದ ಜೇನು ತೆಗೆಯಲಿಕ್ಕಾಗಿ ಇಡೀ ಜೇನುಗೂಡನ್ನೇ ನಾಶ ಮಾಡುವುದು ಅಗತ್ಯವಿಲ್ಲ” ಎನ್ನುತ್ತಾರೆ ಗಜಾನನ ಕಾಳೆ. ಅವರು ಕೊರ್ಕು ಬುಡಕಟ್ಟಿನ ಜನರೊಂದಿಗೆ ಕೆಲಸ ಮಾಡುತ್ತಾರೆ. ಈ ವಿಧಾನ ಅನುಸರಿಸಿದರೆ ಒಂದೇ ಜೇನುಗೂಡನ್ನು ಮೂರು ಬಾರಿ ಜೇನು ಸಂಗ್ರಹಕ್ಕಾಗಿ ಜೇನ್ನೊಣಗಳು ಬಳಸಲು ಸಹಾಯವಾಗುತ್ತದೆ.
ಈ ರೀತಿಯಲ್ಲಿ, ಕೆಲವು ಸಲ ಕಾಡಿನ ಉತ್ಪನ್ನಗಳನ್ನು ಸುಸ್ಥಿರ ವಿಧಾನದಲ್ಲಿ ಕೊಯ್ಲು ಮಾಡಲು ಸಾಧ್ಯ. ಆದರೆ ಕೆಲವು ಸಲ ಹಾಗೆ ಮಾಡಲಾಗುವುದಿಲ್ಲ. ಉದಾಹರಣೆಗೆ, ಔಷಧಿಗಾಗಿ ಯಾವುದೇ ಸಸ್ಯದ ಕಾಂಡದ ತೊಗಟೆ ಅಥವಾ ಬೇರು ಕಿತ್ತಾಗ ಆ ಸಸ್ಯ ನಾಶವಾಗುತ್ತದೆ.
ಹಲವಾರು ಔಷಧೀಯ ಹಾಗೂ ಸುಗಂಧ ಸಸ್ಯಭಾಗಗಳನ್ನು ಮತ್ತು ಅಪರೂಪದ ಕಾಡಿನ ಉತ್ಪನ್ನಗಳನ್ನು ಔಷಧಿ ಕಂಪೆನಿಗಳು ಬಳಸುತ್ತಿವೆ. ಆದರೆ ಆ ಕಂಪೆನಿಗಳು ಸುಸ್ಥಿರ ವಿಧಾನದಲ್ಲಿ ಕೊಯ್ಲು ಮಾಡುತ್ತಿಲ್ಲ ಮತ್ತು ಸ್ಥಳೀಯ ಸಮುದಾಯಗಳ ಜನರಿಗೆ ತಮ್ಮ ಲಾಭದಲ್ಲಿ ಪಾಲು ನೀಡುತ್ತಿಲ್ಲ. ಸ್ಥಳೀಯ ಸಮುದಾಯಗಳ ಜನರೇ ಇಂಥ ಜೈವಿಕ ಸಂಪನ್ಮೂಲಗಳಗಳ ನಿಜವಾದ ರಕ್ಷಕರು ಎಂಬುದು ಗಮನಾರ್ಹ.
ಈ ನಿಟ್ಟಿನಲ್ಲಿ ಉತ್ತರಖಂಡದ ಹೈಕೋರ್ಟ್ ಚಾರಿತ್ರಿಕ ತೀರ್ಪು ನೀಡಿ, ಜೈವಿಕ ಸಂಪನ್ಮೂಲಗಳ ಮೇಲೆ ಸ್ಥಳೀಯ ಜನಸಮುದಾಯಗಳ ಹಕ್ಕು ಸ್ಥಾಪನೆ ಮಾಡಿದೆ. ಈ ಸಂಪನ್ಮೂಲಗಳ ಮಾರಾಟದಿಂದ ಸಿಗುವ ಆದಾಯವನ್ನು ಸ್ಥಳೀಯ ಜನಸಮುದಾಯಗಳ ಜೊತೆ ಹಂಚಿಕೊಳ್ಳಬೇಕೆಂಬ ಆದೇಶದ ವಿರುದ್ಧ ಯೋಗ ಗುರು ಬಾಬಾ ರಾಮದೇವರ ದಿವ್ಯ ಫಾರ್ಮಸಿ ದಾಖಲಿಸಿದ್ದ ದಾವೆಯನ್ನು ಹೈಕೋರ್ಟ್ ರದ್ದು ಮಾಡಿದೆ.
ಉತ್ತರಖಂಡದ ಜೀವವೈವಿಧ್ಯ ಮಂಡಲಿಗೆ ದಿವ್ಯ ಫಾರ್ಮಸಿ ಲಾಭದ ಪಾಲನ್ನು ಪಾವತಿಸಲೇ ಬೇಕೆಂದು ಹೈಕೋರ್ಟ್ ಆದೇಶಿಸಿದೆ. ಯಾಕೆಂದರೆ, ಜೈವಿಕ ಸಂಪನ್ಮೂಲಗಳನ್ನು ದಿವ್ಯ ಫಾರ್ಮಸಿ ವಾಣಿಜ್ಯ ಉದ್ದೇಶಕ್ಕಾಗಿ ಬಳಸುತ್ತಿದೆ. ಹಲವು ಜೈವಿಕ ಸಂಪನ್ಮೂಲಗಳು ವಿರಳ ಮತ್ತು ಅರಣ್ಯದಲ್ಲಿ ಮಾತ್ರ ಸಹಜವಾಗಿ ಬೆಳೆಯುತ್ತವೆ (ಅವನ್ನು ಖಾಸಗಿ ಜಮೀನಿನಲ್ಲಿ ಬೆಳೆಸಲಾಗದು) ಎಂಬ ಕಾರಣದಿಂದಾಗಿ ಈ ತೀರ್ಪು ಮಹತ್ವದ್ದು.
ಉದಾಹರಣೆಗೆ, ಮಹುವಾ ಮರ (ಸಸ್ಯಶಾಸ್ತ್ರೀಯ ಹೆಸರು: ಮಧುಕಾ ಲೊಂಗಿಫೋಲಿಯಾ). ಈ ಮರ ವಿಸ್ತಾರ ಪ್ರದೇಶದಲ್ಲಿ ಬೆಳೆಯುತ್ತಿದೆ -  ಉತ್ತರ ಪ್ರದೇಶ, ಬಿಹಾರ, ಮಧ್ಯಪ್ರದೇಶ, ಮಹಾರಾಷ್ಟ್ರ, ಗುಜರಾತ್, ತೆಲಂಗಾಣ, ಒರಿಸ್ಸಾ, ಪಶ್ಚಿಮ ಬಂಗಾಳ, ಚತ್ತಿಸ್‍ಘರ್, ಜಾರ್ಖಂಡ್ ರಾಜ್ಯಗಳಲ್ಲಿ. ಚಟ್ನಿ, ಪೇಸ್ಟು ಮತ್ತು ಮದ್ಯ ತಯಾರಿಗೆ ಬಳಸಲಾಗುವ ಇದರ ಹೂಗಳನ್ನು ಚೆನ್ನಾಗಿ ಬಲಿತ ಮರಗಳಿಂದಲೇ ಕೊಯ್ಯಬೇಕಾಗುತ್ತದೆ; ಅಂತಹ ಬಹುಪಾಲು ಮರಗಳು ಉಳಿದಿರುವುದು ಕಾಡಿನಲ್ಲಿ ಮಾತ್ರ. ಇದೀಗ ಜನಪ್ರಿಯ ಮಹುವಾ ಮದ್ಯವನ್ನು ಪ್ಯಾಕ್ ಮಾಡಿ, ದೊಡ್ಡ ಮಟ್ಟದಲ್ಲಿ ಮಾರಾಟ ಮಾಡುವ ಯೋಜನೆಗಳು ಸಿದ್ಧವಾಗಿವೆ. ಆದರೆ ಹೂಗಳನ್ನು ಸಂಗ್ರಹಿಸುವ ಸಮುದಾಯಗಳ ಜನರಿಗೆ ಲಾಭದ ಪಾಲು ನೀಡುವ ಯಾವುದೇ ಪ್ರಸ್ತಾಪವಿಲ್ಲ!
ಮಹುವಾ ಹೂ ಕೊಯ್ಲಿನ ಹಂಗಾಮಿನಲ್ಲಿ ಇವನ್ನು ಅತ್ಯಲ್ಪ ಬೆಲೆಗೆ ಸಂತೆಗಳಲ್ಲಿ ಮಾರಲಾಗುತ್ತದೆ. “ಹಲವಾರು ಸ್ಥಳೀಯ ಕುಟುಂಬಗಳು ಸರಾಸರಿ ಎರಡು ಅಥವಾ ಮೂರು ಕ್ವಿಂಟಾಲ್ ಮಹುವಾ ಹೂಗಳನ್ನು ಕಿಲೋಕ್ಕೆ ಏಳು ರೂಪಾಯಿ ದರದಲ್ಲಿ ಮಾರುತ್ತವೆ. ಮಹುವಾ ಹೂಗಳನ್ನು ಸಂಗ್ರಹಿಸುವ ಸ್ಥಳಗಳಲ್ಲಿ ಸರಕಾರ ಅವನ್ನು ಒಣಗಿಸುವ ವ್ಯವಸ್ಥೆ ಒದಗಿಸಬೇಕು. ಜೊತೆಗೆ, ಮಹುವಾ ಹೂಗಳ ಉತ್ಪನ್ನಗಳಿಂದ ಸಿಗುವ ಲಾಭದಲ್ಲಿ ಅವನ್ನು ಸಂಗ್ರಹಿಸುವ ಕುಟುಂಬಗಳಿಗೆ ಪಾಲು ನೀಡಬೇಕು” ಎನ್ನುತ್ತಾರೆ ಪರಿಸರ ಸಂರಕ್ಷಕ ಅನುಪಮ್ ಸಿಸೋಡಿಯಾ.
ಇನ್ನೊಂದು ಉದಾಹರಣೆ, ಹಿಮಾಲಯದಲ್ಲಿ ಮಾತ್ರ ಇರುವ ಒಂದು ಕಂಬಳಿ ಹುಳದ ಮೇಲೆ ಬೆಳೆಯುವ ಯರ್ಸ ಗೂಂಬ ಎಂಬ ಬೂಷ್ಟು. ಇದರ ಕಾಮೋತ್ತೇಜಕ ಗುಣಗಳಿಂದಾಗಿ ಚೀನಾದಲ್ಲಿ ಔಷಧಿಯಾಗಿ ಇದರ ಬಳಕೆ ವ್ಯಾಪಕ. ಉತ್ತರಖಂಡದ ಹೈಕೋರ್ಟಿನ ತೀರ್ಪಿನಲ್ಲಿ ಯರ್ಸ ಗೂಂಬವನ್ನು ವಿಶೇಷವಾಗಿ ಪ್ರಸ್ತಾಪಿಸಲಾಗಿದೆ. ಆ ಕಂಬಳಿಹುಳಗಳು ನಿರ್ದಿಷ್ಟ ಗಿಡದಲ್ಲಿ ಯಾವಾಗ ಬೆಳೆಯುತ್ತವೆ, ಯರ್ಸ ಗೂಂಬದ ವಾಸನೆ ಮತ್ತು ಬಣ್ಣ – ಇವೆಲ್ಲ ಮಾಹಿತಿ ಪಾರಂಪರಿಕ ಜ್ನಾನ. ಈ ಜ್ನಾನವನ್ನು ಭಾರತದ ಜೈವಿಕ ವೈವಿಧ್ಯ ಕಾಯಿದೆ, ೨೦೦೨ರ ಅನುಸಾರ ಒಂದು “ಸೊತ್ತಿನ ಹಕ್ಕು” ಎಂದು ಘೋಷಿಸಿ, “ಅದು ಪ್ರಾಮಾಣಿಕ ಮತ್ತು ನ್ಯಾಯಬದ್ಧವಾದ ಲಾಭದ ಪಾಲು ನೀಡಿಕೆಗೆ ಅರ್ಹ”ವೆಂದು ತೀರ್ಪು ಸ್ಪಷ್ಟ ಪಡಿಸಿದೆ. ಈ ಮೂಲಕ ಜೈವಿಕ ವೈವಿಧ್ಯ ಕಾಯಿದೆಯ ಆಶಯವನ್ನು ಉತ್ತರಖಂಡ ಹೈಕೋರ್ಟಿನ ತೀರ್ಪು ಎತ್ತಿ ಹಿಡಿದಿದೆ.
“ಅಂತಿಮವಾಗಿ, ಲಾಭದ ಪಾಲು ನೀಡಿಕೆ ವ್ಯವಸ್ಥೆ ಒಂದು ಸುಸ್ಥಿರ ವ್ಯವಸ್ಥೆ. ಯಾಕೆಂದರೆ ಆ ಹಣ ಜೈವಿಕ ವೈವಿಧ್ಯ ಸಮಿತಿಗೆ ಪಾವತಿಯಾಗುತ್ತದೆ. ಅದನ್ನು ಜೈವಿಕ ಸಂಪನ್ಮೂಲದ ಸುಸ್ಥಿರತೆ ಕಾಪಾಡುವ ವ್ಯವಸ್ಥೆಗಳಿಗೆ ಸಮಿತಿ ವೆಚ್ಚ ಮಾಡಬೇಕು. ಅಂದರೆ, ಜಲ ಮೂಲಗಳ ಸಂರಕ್ಷಣೆ, ಆ ಸಂಪನ್ಮೂಲಗಳನ್ನು ಒಣಗಿಸಲು ಮತ್ತು ಶೇಖರಿಸಲು ಅಗತ್ಯವಾದ ವ್ಯವಸ್ಥೆಗಳು, ಜೈವಿಕ ಸಂನ್ಮೂಲಗಳ ಸಂಗ್ರಾಹಕರ ಮತ್ತು ಬೆಳೆಗಾರರ ಸಾಮರ್ಥ್ಯ ವೃದ್ಧಿ ವ್ಯವಸ್ಥೆಗಳು” ಎಂದು ಮಾಹಿತಿ ನೀಡುತ್ತಾರೆ ಸರ್ಗಮ್ ಸಿಂಗ್ ರಸೈಲಿ, ಸದಸ್ಯ ಕಾರ್ಯದರ್ಶಿ, ಉತ್ತರಖಂಡ ಜೈವಿಕ ವೈವಿಧ್ಯ ಮಂಡಲಿ.
ಗಮನಿಸಿ: ಜೈವಿಕ ವೈವಿಧ್ಯ ಕಾಯಿದೆ ಗೋಧಿ, ಭತ್ತ, ಹತ್ತಿ ಇತ್ಯಾದಿ “ದಿನನಿತ್ಯ ಮಾರಾಟವಾಗುವ ಸರಕು”ಗಳಿಗೆ ಅನ್ವಯ ಆಗೋದಿಲ್ಲ. ಆದರೆ, ವಾಣಿಜ್ಯ ಬಳಕೆಯ ಇತರ ಜೈವಿಕ ಸಂಪನ್ಮೂಲಗಳಿಗೆ ಅನ್ವಯವಾಗುತ್ತದೆ.
ಉತ್ತರಖಂಡ ಹೈಕೋರ್ಟಿನ ತೀರ್ಪಿನಿಂದ ಕೊರ್ಕು ಬುಡಕಟ್ಟಿನವರಿಗೂ ಪರೋಕ್ಷವಾಗಿ ಅನುಕೂಲವಾಗಲಿದೆ. ಯಾಕೆಂದರೆ, ಕಂಪೆನಿಗಳಿಗೆ ಜೇನು ಮಾರುವ ಮಧ್ಯವರ್ತಿಗಳು ಜೇನಿನ ಖರೀದಿ ಬೆಲೆ ಇಳಿಸಿದ್ದಾರೆ. ಅವರಿಂದ ಜೇನು ಖರೀದಿಸುವ ಹಲವು ಕಂಪೆನಿಗಳು ಜೈವಿಕ ವೈವಿಧ್ಯ ಮಂಡಲಿಗೆ ಯಾವುದೇ ಶುಲ್ಕ ಪಾವತಿಸುತ್ತಿಲ್ಲ ಎಂದು ವಿವರಿಸುತ್ತಾರೆ ಗಜಾನನ ಕಾಳೆ. ಇಂತಹ ಔಷಧಿ ಕಂಪೆನಿಗಳು ನಿರ್ದಿಷ್ಟ ಶುಲ್ಕ ಪಾವತಿಸಿ, ಅದು ಸ್ಥಳೀಯ ಜನಸಮುದಾಯಗಳ ಅಥವಾ ಬುಡಕಟ್ಟುಗಳ ಅಭಿವೃದ್ಧಿಗೆ ಬಳಕೆಯಾಗಬೇಕಾದ್ದು ನ್ಯಾಯ, ಅಲ್ಲವೇ?
ಫೋಟೋ: ಮಹುವಾ ಹೂಗಳು