ಜೊತೆಗಿರುವೆ ಸದಾ...?

ಪ್ರತೀ ಕ್ಷಣ ಕಷ್ಟ, ನೋವು, ಕಣ್ಣೀರು ಏಕೆ? ಇಂತಹ ಸಮಯದಲ್ಲಿ ಹತ್ತಿರವಿರುವವರು ದೂರವಾಗುವವರು ಏಕೆ? ಬದುಕಿನ ತಿರುವುಗಳು ಹೀಗೇಕೆ? ಕಷ್ಟದಲಿ, ಸುಖದಲಿ ಜೊತೆಗಿರುವೆ, ಇಂತಹ ಮಾತುಗಳು ಇತ್ತೀಚೆಗೆ ಬರೆಯಲು ಮಾತ್ರ ಚೆನ್ನಾಗಿರುತ್ತವೆಯೇ ಹೊರತು ಕಷ್ಟಗಳು ಬಂದಾಗ ನಮ್ಮಿಂದ ದೂರವಾಗುವವರೇ ಹೆಚ್ಚು. ಅದರಲ್ಲೂ ಬಡತನ ಇರುವವರಿಗೆ ಕಷ್ಟದ ಸಮಯದಲ್ಲಿ ಯಾರೂ ಸಹಾಯಮಾಡಲು ಮುಂದೆ ಬರುವುದಿಲ್ಲ.
ಒಂದು ಮಾತಿದೆ, ಈಗಿನ ದಿನಮಾನಗಳಲ್ಲಿ ಬಹುಮುಖ್ಯವಾಗಿ ಹಣಕಾಸಿನ ಸಹಾಯವೇ ಬೇಕಾಗಿರುತ್ತದೆ. ಉಳ್ಳವರಿಗೆ ಸಹಾಯಮಾಡುವ ಮನಸ್ಸಿಲ್ಲ, ಸಹಾಯ ಮಾಡುವ ಮನಸ್ಸುಳ್ಳವನಿಗೆ ಏನೂ ಇರುವುದಿಲ್ಲ. ಸಂಗತಿಗಳು ಹಲವು, ತಂದೆ-ತಾಯಿಯ ವಿಷಯವನ್ನು ಹೊರತುಪಡಿಸಿ, ಉಳಿದ ವಿಷಯಗಳಲ್ಲಿನ ಜೊತೆಗಿರುವೆ ಅದು ಯಾವುದೇ ಪರಿಸ್ಥಿತಿಯಿದ್ದರೂ ಸರಿಯೇ ಎನ್ನುವವರೇ ದೂರವಾಗುವರು. ಅದರಲ್ಲಿ ಸಂಬಂಧಿಕರು, ನೆಂಟರಿಷ್ಟರು,ಪ್ರೀತಿಸಿದ ಹುಡುಗಿ, ಬಂಧು-ಬಳಗ,ನೆರೆ-ಹೊರೆ,ಯಾರೂ ಕೂಡ ಹತ್ತಿರಕ್ಕೆ ಸುಳಿಯಲಾರರು. ಇಂತಹ ಪರಿಸ್ಥಿತಿಗಳನ್ನು ಎದುರಿಸುವವರು ಶೇಕಡಾವಾರು ನೋಡಿದರೆ ಹುಡುಗರೇ ಅತೀ ಹೆಚ್ಚು.
ಸುಖ ಬಂದಾಗ ದೂರವಿದ್ದವರೇ ಬೇಡವೆಂದರೂ ಬಂದು ಮಾತನಾಡಿಸುವುದುಂಟು. ಇದು ನಿತ್ಯ ಬದುಕಿನಲ್ಲಿ ನಡೆಯುತ್ತಿರುವ ವಿಶೇಷ ಸಂಗತಿ. ಯಾವತ್ತಿಗೂ ಯಾರೋ ಸಹಾಯ ಮಾಡ್ತಾರೆ,ಕಷ್ಟವಿದ್ದಾಗ ಏನೋ ಒಂದು ಸಹಾಯ ಮಾಡೇ ಮಾಡ್ತಾರೆ ಎಂದು ಯಾರನ್ನೂ ನಂಬಿ ಕೂರುವುದು ನಮ್ಮ ತಲೆಯ ಮೇಲೆ ನಾವೇ ಚಪ್ಪಡಿ ಕಲ್ಲಿಂದ ಜಪ್ಪಿಕೊಂಡಂತಿರುತ್ತದೆ. ಪ್ರತೀಯೊಂದಕ್ಕೂ ನಿನ್ನನ್ನೇ ನಂಬಿರು. ಒಳ್ಳೆಯದನ್ನೇ ಮಾಡು. ಅದು ನಿನ್ನನ್ನು ಕಷ್ಟದ ಸಮಯದಲ್ಲಿ ಕಾಪಾಡುತ್ತದೆ ಎನ್ನುವರು. ಬೇರೆಯವರಿಂದ ಅದೇನನ್ನೋ ನಿರೀಕ್ಷಿಸುವುದು ನಮ್ಮದೇ ತಪ್ಪಾಗಿರುತ್ತದೆ.
ಆದರೂ ಈಗಲೂ ಸಹ ಹಲವು ವ್ಯಕ್ತಿತ್ವಗಳು ಕಷ್ಟಕ್ಕೆ ಕರಗುವುದುಂಟು, ಸುಳ್ಳು ಯಾಕೆ ಹೇಳುವುದು ಅವೆಷ್ಟೋ ಜನ ಯಾವುದೋ ರೀತಿಯ ಕಷ್ಟ ಬಂದಾಗ ಯಾವುದೋ ರೀತಿಯಲ್ಲಿ ಸಹಾಯ ಮಾಡೇ ಮಾಡ್ತಾರೆ. ನಾವು ಒಳ್ಳೆಯವರಾಗಿದ್ದಾಗ. ಸಂಕಟ ಬಂದಾಗ ವೆಂಕಟರಮಣನನ್ನು ನೆನೆದಾಗ ಅವನು ಕಾಪಾಡುತ್ತಾನೆ ಎನ್ನುವ ನಂಬಿಕೆ. ಖಂಡಿತವಾಗಿಯೂ ಹೌದಿರಬಹುದು ನಮಗೆ ನಾವೇ ಹೊರತು ಬೇರೆಯವರ್ಯಾರು ಆಗಲಾರರು.
ಬದುಕು ಎಂಬುದರಲ್ಲಿ ಕಷ್ಟ -ಸು:ಖಗಳು ಸಮಾನವಾಗಿರುವವು. ಕಷ್ಟಗಳನ್ನ ಒಬ್ಬಂಟಿಯಾಗಿದ್ದರೂ ಎದುರಿಸಿ ಮುಂದೆ ಸಾಗಲೇಬೇಕು, ಕಷ್ಟಗಳಿಗೆ ಭಯವಾಗಬೇಕು ಮತ್ತೊಮ್ಮೆ ಬರಲು, ಸುಖವನ್ನುವುದು ಬದುಕಿನಲ್ಲಿ ಅತೀ ಸುಂದರ. ಆರೋಗ್ಯವೊಂದು ಸರಿಯಾಗಿದ್ದರೆ ಈ ಬದುಕೇ ಬಂಗಾರ.
-ಶಾಂತಾರಾಮ ಶಿರಸಿ, ಉತ್ತರ ಕನ್ನಡ.
ಚಿತ್ರ ಕೃಪೆ: ಇಂಟರ್ನೆಟ್ ತಾಣ