ಜೊತೆಯಲ್ಲಿ ನಗೋಣ

ಜೊತೆಯಲ್ಲಿ ನಗೋಣ

ಪುಸ್ತಕದ ಲೇಖಕ/ಕವಿಯ ಹೆಸರು
ಕನ್ನಡಾನುವಾದ: ಕೆ. ನರಸಿಂಹಮೂರ್ತಿ
ಪ್ರಕಾಶಕರು
ನ್ಯಾಷನಲ್ ಬುಕ್ ಟ್ರಸ್ಟ್, ನವದೆಹಲಿ
ಪುಸ್ತಕದ ಬೆಲೆ
ರೂ. 35/-

“ಏಷ್ಯಾ ಮತ್ತು ಪೆಸಿಫಿಕ್ ಪ್ರದೇಶದ ಕತೆಗಳು, ಒಗಟುಗಳು ಮತ್ತು ಗಾದೆಗಳು” ಎಂಬುದು ಈ ಪುಸ್ತಕದ ಉಪಶೀರ್ಷಿಕೆ. ಏಷ್ಯಾ ಮತ್ತು ಪೆಸಿಫಿಕ್ ಪ್ರದೇಶದ ಸಹಪ್ರಕಾಶನ ಕಾರ್ಯಕ್ರಮ (ಎ.ಸಿ.ಪಿ.)ದಲ್ಲಿ ಯುನೆಸ್ಕೋ ಆಶ್ರಯದಲ್ಲಿ ಹೊರತರಲಾದ ಈ ಪುಸ್ತಕವನ್ನು ಎನ್.ಬಿ. ಟ್ರಸ್ಟ್ ಮೂಲಕ ಏಷ್ಯನ್ ಕಲ್ಚರಲ್ ಸೆಂಟರ್ ಫಾರ್ ಯುನೆಸ್ಕೋ ಪ್ರಕಟಿಸಿದೆ.

ಇದರಲ್ಲಿ 54 ಹಾಸ್ಯಭರಿತ ಕತೆಗಳು, 54 ಒಗಟುಗಳು, 23 ಗಾದೆಗಳು ಮತ್ತು ರೇಖಾಚಿತ್ರಗಳಿವೆ. ಉಲ್ಲೇಖಿತ ಪ್ರದೇಶದ 18 ದೇಶಗಳು ಈ ಕೊಡುಗೆ ನೀಡಿವೆ. ಜಗತ್ತಿನ ನಾನಾ ಭಾಷೆಗಳಿಗೆ ಈ ಪುಸ್ತಕ ಅನುವಾಗಿದೆ ಎಂಬುದು ಗಮನಾರ್ಹ.

ಇದರ ಕತೆಗಳ ಓದು ಉಲ್ಲಾಸದಾಯಕ. ಮೊದಲನೆಯದು “ಅದೃಷ್ಟಶಾಲಿ ಬೇಟೆಗಾರ” ಎಂಬ ಜಪಾನಿ ಕತೆ. ತನ್ನ ಮಗನ ಏಳನೇ ಹುಟ್ಟುಹಬ್ಬದ ಔತಣಕ್ಕಾಗಿ ಪ್ರಾಣಿಗಳ ಬೇಟೆಯಾಡಲು ಒಬ್ಬ ಬೇಟೆಗಾರ ಹೊರಟು ಕೋವಿ ಎತ್ತಿಕೊಳ್ಳುವಾಗ ಅದು ಕೈತಪ್ಪಿ ಒರಳು ಕಲ್ಲಿನ ಮೇಲೆ ಬಿದ್ದು ಅದರ ನಳಿಗೆ ಬಗ್ಗಿ ಹೋಗುತ್ತದೆ. “ಇದು ಅಪಶಕುನ, ನೀನು ಬೇಟೆಗೆ ಹೋಗಬೇಡ” ಎಂದು ಮಗ ಹೇಳಿದರೂ ಕೇಳದೆ ಬೇಟೆಗಾರ ಬೇಟೆಗೆ ಹೋಗುತ್ತಾನೆ. ಕೊನೆಗೆ ಅವನ ಬೇಟೆಗೆ ಏನೆಲ್ಲ ಸಿಕ್ಕಿತು ಅಂತೀರಾ! ಮೊಲ, ಫೆಸೆಂಟ್ ಹಕ್ಕಿ, ದೊಡ್ಡ ಕಾರ್ಪ್ ಮೀನು, ಹದಿಮೂರು ಬಾತುಕೋಳಿಗಳು, ಹದಿಮೂರು ಹಕ್ಕಿ ಮೊಟ್ಟೆಗಳು, ಹತ್ತಾರು ಅಣಬೆಗಳು, 33 ಕ್ರೂಷಿಯನ್ ಮೀನುಗಳು, ನೂರು ಷ್ರಿಂಪ್ ಮೀನುಗಳು ಮತ್ತು  ಇಪ್ಪತ್ತೈದು ಯಾಮ್ ಗೆಡ್ಡೆಗಳು!

ಕೊರಿಯಾ ಗಣರಾಜ್ಯದ ಕತೆ: “ಅವರು ತಮ್ಮ ಮನೆಗಳನ್ನೇ ಎತ್ತಿಕೊಂಡು ಹೋದರು, ಆದರೆ…" ಒಬ್ಬ ಮಂತ್ರಿಯ ಮನೆಯ ಎಡಕ್ಕೆ ಬಡಗಿಯ ಮನೆ ಮತ್ತು ಬಲಕ್ಕೆ ಕಮ್ಮಾರನ ಮನೆ. ಅವರು ಮಾಡುವ ಸದ್ದಿನಿಂದಾಗಿ ಮಂತ್ರಿಗೆ ತಲೆ ಚಿಟ್ಟು ಹಿಡಿಯಿತು. ಅವರಿಬ್ಬರನ್ನೂ ಕರೆಸಿ ತಮ್ಮ ಮನೆಗಳನ್ನು ಸ್ಥಳಾಂತರಿಸಬೇಕೆಂದು ಮಂತ್ರಿ ಒತ್ತಾಯಿಸಿದ. ಕೆಲವು ದಿನಗಳ ನಂತರ ಅವರಿಬ್ಬರೂ ಬಂದು ತಾವು ತಮ್ಮ ಮನೆ ಸ್ಥಳಾಂತರಿಸಿದ್ದೇವೆಂದು ತಿಳಿಸಿದರು. ಆದರೆ, ಅವರ ಮನೆಗಳಿಂದ ಬರುವ ಸದ್ದುಗಳು ಮುಂದುವರಿದವು. ಇದೇನೆಂದು ತಿಳಿಯಲು ಮಂತ್ರಿ ಸೇವಕರನ್ನು ಕಳಿಸಿದ. ಬಡಗಿ ಮತ್ತು ಕಮ್ಮಾರ ತಮ್ಮ ಮನೆಗಳನ್ನು ಪರಸ್ಪರ ಬದಲಾಯಿಸಿಕೊಂಡಿದ್ದಾರೆ, ಅಷ್ಟೇ ಎಂದು ಸೇವಕರು ತಿಳಿಸಿದಾಗ ಮಂತ್ರಿ ಸುಸ್ತು.

"ಮುದಿ ಮಂಕ ತನ್ನ ಮನೆ ರಿಪೇರಿ ಮಾಡಿದುದು” ಮಲೇಷ್ಯಾದ ಕತೆ. ಹಳ್ಳಿ ಮನೆಯಲ್ಲಿದ್ದರು ಗಂಡ ಮತ್ತು ಹೆಂಡತಿ. ಹೆಂಡತಿಯ ಒತ್ತಾಯಕ್ಕೆ ಗಂಡ ಕೆಲಸಕ್ಕೆ ಹೋಗುತ್ತಾನೆ. ಒಂದು ವಾರ ತನ್ನ ಮನೆಯಿಂದ ಪ್ರತಿ ದಿನವೂ ಹೋಗಿ, ದೂರದ ಮನೆಯೊಂದನ್ನು ರಿಪೇರಿ ಮಾಡಿ ಮರಳುತ್ತಾನೆ. ಆದರೆ ಆತ ನಿಜವಾಗಿ ತನ್ನ ಮನೆಯನ್ನೇ ರಿಪೇರಿ ಮಾಡಿದ್ದ! ಈ ಸಂಗತಿ ಅವನಿಗೆ ಗೊತ್ತಾದದ್ದು ಒಂದು ವಾರದ ನಂತರವೇ!

“ಸೋಮಾರಿ ಯವಾನ್” ಎಂಬ ಫಿಲಿಪ್ಪೈನ್ಸ್ ಕತೆ ಬಾಲಕ ಯವಾನನ ಪೆದ್ದುತನ ಬಿಚ್ಚಿಡುತ್ತದೆ. ಅವನ ಅಮ್ಮ ಅವನಿಗೆ ದುಡ್ಡು ಕೊಟ್ಟು ಅಡುಗೆಗಾಗಿ ಏಡಿಗಳು ಮತ್ತು ಉಪ್ಪು ಖರೀದಿಸಿ ತರಲು ಮಾರುಕಟ್ಟೆಗೆ ಕಳಿಸುತ್ತಾಳೆ. ಹಿಂತಿರುಗುವಾಗ ಆತನ ಗೆಳೆಯರು ಯವಾನನನ್ನು ಆಟಕ್ಕೆ ಕರೆಯುತ್ತಾರೆ. ಯಾರೂ ಉಪ್ಪನ್ನು ಕದಿಯಬಾರದೆಂದು ಯವಾನ್ ಉಪ್ಪನ್ನು ಹತ್ತಿರದ ನದಿಯ ನೀರಿನಲ್ಲಿ ಬಚ್ಚಿಡುತ್ತಾನೆ. ಏಡಿಗಳನ್ನು ಚೀಲದಿಂದ ಹೊರಕ್ಕೆ ಬಿಟ್ಟು, “ನನ್ನ ಮನೆಗೆ ಹೋಗಿ” ಎಂದು ಮನೆಯ ದಾರಿ ತಿಳಿಸುತ್ತಾನೆ. ನಂತರ ಸಂಜೆಯ ವರೆಗೂ ಆಟವಾಡಿ ಮನೆಗೆ ಮರಳುತ್ತಾನೆ. ಅಮ್ಮ ಕೇಳಿದಾಗ, “ಸುರಕ್ಷಿತ ಜಾಗದಲ್ಲಿ ಉಪ್ಪು ಬಚ್ಚಿಟ್ಟಿದ್ದೆ. ಆದರೆ ಸಂಜೆ ಅದು ಅಲ್ಲಿ ಇರಲೇ ಇಲ್ಲ” ಅಂತಾನೆ. ಏಡಿಗಳೇನಾದವು ಎಂದು ಅಮ್ಮ ಪ್ರಶ್ನಿಸಿದಾಗ “ಅವು ಮನೆಗೆ ಬರಲಿಲ್ಲವೇ?” ಎಂದು ಕೇಳುತ್ತಾನೆ! ಅವನ ಅಮ್ಮ ಸಿಟ್ಟಿನಿಂದ ಕಂಪಿಸುತ್ತಾ ಮನೆಗೆ ನುಗ್ಗಿ ಬಾಗಿಲು ಹಾಕಿಕೊಳ್ಳುತ್ತಾಳೆ. ತಾನು ಏನು ತಪ್ಪು ಮಾಡಿದೆ ಎಂದು ಅಚ್ಚರಿ ಪಡುತ್ತಾ ಯವಾನ್ ಒಬ್ಬನೇ ಮನೆಯ ಹೊರಗೆ ನಿಲ್ಲುತ್ತಾನೆ.

ಇದರಲ್ಲಿರುವ ಕೆಲವು ಕತೆಗಳು ಹಲವು ದೇಶಗಳ ಜನಪದದಲ್ಲಿ ಒಂದೇ ರೀತಿಯ ಕತೆಗಳು ನೂರಾರು ವರುಷಗಳಿಂದ ಉಳಿದು ಬಂದಿರುವುದನ್ನು ಎತ್ತಿ ತೋರಿಸುತ್ತವೆ. ಉದಾಹರಣೆಗೆ: ಇರಾನಿನ ಒಂದು ಕತೆ: “ಒಂಭತ್ತೋ ಹತ್ತೋ”. ಇದು ಹತ್ತು ಒಂಟೆಗಳ ಲೆಕ್ಕ ಮಾಡುವಾಗ ತಾನು ಕುಳಿತಿದ್ದ ಒಂದು ಒಂಟೆಯನ್ನು ಲೆಕ್ಕಕ್ಕೆ ತೆಗೆದುಕೊಳ್ಳದೆ ಗೊಂದಲಕ್ಕೆ ಒಳಗಾಗುವವನ ಕತೆ. “ಕೇವೂನ್ ಅಪ್ಪುವಿನ ಸ್ಕಾರ್ಫ್” ಎಂಬ ಶ್ರೀಲಂಕಾದ ಕತೆ ತನ್ನ ಸ್ಕಾರ್ಫ್ ಅನ್ನು ಊರೆಲ್ಲ ಹುಡುಕುವ ಕೆವೂನ್ ಅಪ್ಪುವಿನ ಕತೆ. ಆದರೆ ಅವನು ಅದನ್ನು ತನ್ನ ತಲೆಗೇ ಸುತ್ತಿಕೊಂಡು ಹುಡುಕುತ್ತಿದ್ದ. ಭಾರತದಲ್ಲಿಯೂ ಇಂತಹ ಕತೆಗಳಿವೆ, ಅಲ್ಲವೇ?

ಎರಡು ಭಾರತದ ಕತೆಗಳು: ತೊಟ್ಟಿಕ್ಕುವುದರಿಂದ ಎಲ್ಲ ಶುರುವಾಯಿತು ಮತ್ತು ದೇವತೆಯೊಡನೆ ಪರಿಹಾಸ. ಇದು ಮಕ್ಕಳ ಕತೆಗಳ ಸಂಕಲನವಾದರೂ, ಈ ಕತೆಗಳ ಓದು ಹಿರಿಯರಿಗೂ ಮುದ ನೀಡುತ್ತದೆ.