ಜೋಗದ ವಿಶ್ವರೂಪ ದರ್ಶನ

ಜೋಗದ ವಿಶ್ವರೂಪ ದರ್ಶನ

ಬರಹ

ಅಲ್ಲಿ ರಾಜಾ, ರಾಣಿ, ರೊಕೆಟ್, ರೊಲರ್ ಇಲ್ಲ. ಜಗದ್ವಿಖ್ಯಾತ ಜೋಗಕ್ಕೆ ಹೊಸ ರೂಪ ನೀಡಲು ಅವೆಲ್ಲ ಸಮ್ಮಿಳಿತಗೊಂಡಿವೆ. ಧುಮ್ಮಿಕ್ಕುವ ನೀರು, ಅದು ಬೆಣ್ಣೆಯೊ, ಹಿಟ್ಟೊ ಎಂಬ ಭ್ರಮೆ, ಅದೂ ಸ್ಲೊ ಮೊಶನ್ ನಲ್ಲಿ. ಸದ್ಯಕ್ಕೆ ಜೋಗ ಶಬ್ದಗಳಾಚೆಯ ಜಗತ್ತು, ಛಾಯಾಚಿತ್ರಗಳೂ ಸೆರೆಹಿಡಿಯಲಾರದ ದೈವಿಕ ಔನ್ನತ್ಯಕ್ಕೇರಿಬಿಟ್ಟಿದೆ ಅದರ ವೈಭವ.
ಅಗಸ್ಟ್ ೬, ೨೦೦೭ ರಾತ್ರಿ ೮.೩೦ಕ್ಕೆ ಲಿಂಗನಮಕ್ಕಿ ಜಲಾಶಯದಿಂದ ನೀರು ಬಿಡಲಾಯಿತು. ಅನಿರೀಕ್ಷಿತ ಪ್ರವಾಹದ ಪ್ರಭಾವ ಅದು. ಸತತ ಮೂರನೇ ವರ್ಷ ನೀರು ಬಿಟ್ಟಿದ್ದು, ಅದು ದಾಖಲೆ. ಮರು ಮುಂಜಾನೆಯಿಂದಲೇ ಬಿಡುವ ನೀರಿನ ಪ್ರಮಾಣ ೯೦,೦೦೦ ಕ್ಯುಸೆಕ್ಸ್, ಇತಿಹಾಸದಲ್ಲೆ ಪ್ರಥಮ ಬಾರಿಗೆ. ಜೋಗ ಎಂದಿನ ಜೋಗವಾಗುಳಿಯಲಿಲ್ಲ. ಶರಾವತಿ ಕಣಿವೆಯ ತುಂಬ ಜಲಪಾತ ಜನ್ಮ ಕೊಟ್ಟ ಮಂಜಿನದೇ ರಾಜ್ಯ. ಕಣ್ಣು ನೆಟ್ಟಲ್ಲೆಲ್ಲ ಹತ್ತಾರು ಮಳೆಗಾಲದ ಜಲಪಾತಗಳು.
ಜೋಗದ ವಿಶ್ವರೂಪ ದರ್ಶನಕ್ಕಾಗಿ, ಅಗಸ್ಟ್ ೮ ಬುಧವಾರ ಬೆಳಿಗ್ಗೆ ೮.೩೦ಕ್ಕೆ ಅಲ್ಲಿದ್ದೆವು. ಕಣಿವೆಯ ಕೆಳಗಿಳಿಯುವುದಂತೂ ಅಸಾಧ್ಯದ ಮಾತು. ರಜಾ ದಿನವಲ್ಲದಿದ್ದರೂ ಸಾವಿರರು ಜನರ ಸಂತೆ ಜೋಗದ ಹೊಸ-ಅಪರೂಪದ ಅವತಾರ ನೋಡಲು. ನಂತರ ಲಿಂಗನಮಕ್ಕಿ ಕಟ್ಟಿನ ಮೆಲೆ ಒಡಾಡಿದ್ದಾಯಿತು, ಸುನಾಮಿಯಂತಹ ಅದರ ಅಲೆಗಳ ಭೋರ್ಗರೆತವನ್ನೂ ಸವಿದದ್ದಾಯಿತು (ಕೆಪಿಸಿಎಲ್ ವಿಶೇಷ ಅನುಮತಿಯೊಂದಿಗೆ). ಚೈನಾಗೇಟ್, ಶರವತಿ ಸೇತುವೆ (ಮುಂಗಾರು ಮಳೆ ಖ್ಯಾತಿ) ಎಲ್ಲ ಮುಗಿಸಿ ಬ್ರಿಟಿಷ್ ಬಂಗಲೆಯಿಂದ ನೋಡಿದರೆ ಜೋಗದ ಇನ್ನೊಂದು ರುದ್ರ ರುಮಣೀಯ ನೋಟ. ಹತ್ತಿರ ಹತ್ತಿರ ಬಾ ಎಂದು ಕರೆಯುವ ತಳಕಾಣದ ಮ್ರತ್ಯುಪಾಶವೂ ಹೌದು. ‘ಮುಂಗಾರು ಮಳೆ’ಯಲ್ಲಿ ಗಣೇಶ್ ಕುಣಿದ ಬಂಡೆಗಳೆಲ್ಲ ಮಲಗಿಬಿಟ್ಟಿವೆ ಅಬ್ಬರಿಸುವ ಶರಾವತಿಯ ತಳದಲ್ಲಿ. ಅಷ್ಟೊಂದು ಪ್ರಸಿದ್ಧವಲ್ಲದ, ಆದರೆ ವಿಶಿಷ್ಟವಾದ ಜೋಗ ಕಾಣಸಿಗುವುದು ಬಂಗಲೆಯಂಗಳದಿಂದ.
ಮಳೆಗಾಲದಲ್ಲಿ ಮೂರುಬಾರಿ ಜೋಗಕ್ಕೆ ಹೋಗುವ ನನಗೆ, ಈಗ ಜೋಗ ಹೇಗಿದೆ ಎಂದರೆ ಉತ್ತರಿಸುವುದು ತ್ರಾಸಿನ ಕೆಲಸ. ಇಲ್ಲಿರುವ ಚಿತ್ರಗಳಾದರೂ ಏನಾದರೂ ಹೆಳಬಲ್ಲವೊ ಕಾಣೆ.
ಅಂದಹಾಗೆ, ಜೊಗಕ್ಕೆ ಹೋಗುವುದಿದ್ದರೆ, ಬೇಗ. ಶನಿವಾರದ (ಅಗಸ್ಟ್ ೧೧) ಹೊತ್ತಿಗೆ ಲಿಂಗನಮಕ್ಕಿ ಕಟ್ಟೆಯ ಬಾಗಿಲುಗಳು ಮುಚ್ಚಿಕೊಳ್ಳುತ್ತವೆ. ಮತ್ತೆ ಈ ಪರಿ ನೀರು ಬಿಡುವುದು, ಅದೆಷ್ಟು ವರ್ಷಗಳ ನಂತರವೊ....