ಜೋಗಿ ಕತೆಗಳು

ಜೋಗಿ ಕತೆಗಳು

ಪುಸ್ತಕದ ಲೇಖಕ/ಕವಿಯ ಹೆಸರು
ಜೋಗಿ
ಪ್ರಕಾಶಕರು
ಅಂಕಿತ ಪುಸ್ತಕ, ಗಾಂಧಿಬಜಾರ್ ಮುಖ್ಯ ರಸ್ತೆ, ಬೆಂಗಳೂರು-೫೬೦೦೦೪
ಪುಸ್ತಕದ ಬೆಲೆ
ರೂ.೭೦.೦೦, ಮುದ್ರಣ: ೨೦೦೭

ಕಥೆಗಾರ, ಸಾಹಿತಿ, ಕಾದಂಬರಿಗಾರ ಜೋಗಿ (ಗಿರೀಶ್ ಹತ್ವಾರ್) ಇವರು ಬರೆದ ಸಣ್ಣ ಕಥೆಗಳ ಸಂಗ್ರಹವಿದು. ಮುಖಪುಟದಲ್ಲೇ ‘ನಾನಿದನ್ನು ಬರೆಯಬಾರದಿತ್ತು ಅಂದುಕೊಳ್ಳುತ್ತಿರುವ ಹೊತ್ತಿಗೇ, ನೀವಿದನ್ನು ಓದುತ್ತಾ ಇದ್ದೀರಿ!' ಎಂದು ಪ್ರಕಟಿಸಿ ನಮ್ಮ ಓದುವ ಕುತೂಹಲವನ್ನು ಇನ್ನಷ್ಟು ಹೆಚ್ಚಿಸಿದ್ದಾರೆ ಜೋಗಿ. ಈ ಕಥೆಗಳು ‘ಖಾಸಾ ಪತ್ರದ ಹಾಗೆ ನಿಮ್ಮನ್ನು ತಲುಪಲಿ' ಎಂದು ಮುನ್ನುಡಿ ಬರೆದಿದ್ದಾರೆ ಜೋಗಿಯವರು. 'ಇಲ್ಲಿರುವ ಇಪ್ಪತ್ತೂ ಮತ್ತೊಂದು ಕತೆಗಳ ಬಗ್ಗೆ ಹೇಳುವಂಥದ್ದೇನಿಲ್ಲ. ಕತೆ ಬರೆಯುವುದು ಮಹಾನ್ ಪ್ರತಿಭೆಯೋ ಮಹಾನ್ ಸಾಧನೆಯೋ ಅಲ್ಲ. ಪುಟ್ಟ ಹುಡುಗಿ ಮುಂಜಾನೆಗೇ ಎದ್ದು ಮನೆ ಮುಂದೆ ರಂಗೋಲಿ ಬಿಡಿಸುವಾಗಿನ ತನ್ಮಯತೆ, ಉದ್ದಲಂಗದ ಅರಶಿನಗೆನ್ನೆಯ ಬಾಲಕಿ ಕುಣಿಗಲ್ ರಸ್ತೆಯ ಬದಿಯಲ್ಲಿ ದಟ್ಟ ಮಂಜಿನ ನಡುವೆ ಮಲ್ಲಿಗೆ ಹೂವು ಹಿಡಕೊಂಡು ನಿಂತುಕೊಂಡಾಗಿನ ಭರವಸೆ, ಸೈಕಲ್ ರಿಪೇರಿ ಪುಟ್ಟ ಬಾಲಕನ ಮೂಗಿನ ತುದಿಯ ಅಸಾಧ್ಯ ಶ್ರದ್ಧೆ - ಇವೆಲ್ಲ ಬರಹಕ್ಕಿಂತ ದೊಡ್ದದು. ಅವೆಲ್ಲ ನಾಳೆಯ ಬದುಕನ್ನು ಕಟ್ಟಬಲ್ಲವು.’ ಎಂದು ಜೋಗಿಯವರು ತಮ್ಮ ಅನಿಸಿಕೆಯನ್ನು ವ್ಯಕ್ತ ಪಡಿಸಿದ್ದಾರೆ.

ಕಥೆಗಾರ ವಿವೇಕ್ ಶಾನಭಾಗ ಅವರು ತಮ್ಮ ಬೆನ್ನುಡಿಯಲ್ಲಿ ಬರೆದಿದ್ದಾರೆ “ಕಥಾ ರಚನೆಯ ಮತ್ತು ಭಾಷಾ ಪ್ರಯೋಗದ ಅನೇಕ ಹೊಸ ಸಾಧ್ಯತೆಗಳು ಇಲ್ಲಿವೆ. ಅನೇಕ ಹೊಸ ಸಾಧ್ಯತೆಗಳು ಇಲ್ಲಿವೆ. ಹಲವು ವಾಸ್ತವಗಳು, ಹಲವು ಭ್ರಾಮಕಗಳು ಕೂಡಿ ಉಂಟಾದ ಈ ಜಗತ್ತು, ಒಂದು ಸಾಧ್ಯತೆಯಾಗಿ ನಮ್ಮೊಳಗೇ ಎಲ್ಲೋ ಅವಿತು ಕೂತಿದೆಯೇನೋ ಎಂಬ ತಲ್ಲಣವನ್ನೂ ಹುಟ್ಟಿಸುತ್ತದೆ. ಕಿರುಕತೆಗಳಿಗೆ ಚುರುಕುತನ ಮಾತ್ರ ಇದ್ದರೆ ಸಾಲದು; ಜೊತೆಗೆ ಪರಿಣಿತ ಕಲೆಗಾರಿಕೆಯೂ ಬೇಕು. ಆ ಸಾಮರ್ಥ್ಯ ಇಲ್ಲಿಯ ಎಲ್ಲ ಕತೆಗಳಲ್ಲೂ ಕಾಣುತ್ತದೆ.”

ಸೂರಿ ಇವರು ತಮ್ಮ ‘ನನಗರಿವಾದಷ್ಟು ಮಾತ್ರ' ಬರಹದಲ್ಲಿ ಜೋಗಿಯವರ ಕಥೆಗಳ ಬಗ್ಗೆ ಚುಟುಕಾದ ಮಾಹಿತಿ ಹಂಚಿಕೊಂಡಿದ್ದಾರೆ. ಈ ಕಥಾ ಸಂಗ್ರಹದ ಬಹಳ ಸೊಗಸಾದ ಕಥೆ ಎಂದರೆ ‘ಕನ್ನಡಿಯೊಳಗೆ ಗಳಗನಾಥರಿರಲಿಲ್ಲ'. ಈ ಬಗ್ಗೆ ಸೂರಿಯವರ ಮಾತಿನಲ್ಲೇ ಕೇಳುವುದಾದರೆ “ಈ ಸಂಕಲನದ ಒಂದು ಕಥೆ ನನಗೆ ತುಂಬಾ ಇಷ್ಟವಾದದ್ದು, ಕನ್ನಡಿಯೊಳಗೆ ಗಳಗನಾಥರಿರಲಿಲ್ಲ. ‘ಗಳಗನಾಥರು ಬೆಚ್ಚಿ ಬಿದ್ದರು' ಕಥೆಯ ಮೊದಲ ಸಾಲೇ ಕಥೆಗೆ ಒಂದು ತಯಾರಿಯನ್ನು ನೀಡುತ್ತದೆ. ತುಂಬಾ ಕೇಳಿದ ಹೆಸರು. ಕಥೆಯ ಮೊದಲ ಪ್ಯಾರಾದಲ್ಲಿ ಗಳಗನಾಥರು ಇನ್ನೂ ಬದುಕಿದ್ದಾರೆ. ಅವರ ಮಗಳಿಗೆ ಅವರ ಇರವಿನ ಅರಿವಿದೆ. ಭಯಾನಕ ಅಂದರೆ ತನ್ನನ್ನು ನೋಡಿಕೊಳ್ಳುವ ಕನ್ನಡಿಯಲ್ಲಿ ತನ್ನದೇ ಬೆಂಬಲವಿಲ್ಲ. (ತನಗೆ ತಾನು ಕಾಣುತ್ತಿಲ್ಲ, ಪರರಿಗೆ ಕಾಣುತ್ತಿದ್ದೇನೆ ಎಂದೇ...) ನಿಟ್ಟುಸಿರನ್ನೂ ಚೆಲ್ಲದೇ, ಎಲ್ಲೂ ಸಂಯಮದ ಒಂದು ಹಂತವನ್ನು ಮೀರದೇ ಕಥೆ ಮುಂದುವರೆಯುತ್ತದೆ. ಕಥೆಯ ಮೂರುಮುಕ್ಕಾಲು ಪಾಲು ಗಳಗನಾಥರು ಬದುಕೇಯಿದ್ದಾರೆ, ಯಾಕೆಂದರೆ ಶಾಸ್ತ್ರಿಗಳು ಅವರನ್ನೇ ಕುರಿತು ನೇರ ಮಾತನಾಡುತ್ತಿದ್ದಾರೆ. ತಮ್ಮ ಮನೆಯ ಬಾಗಿಲು ತಟ್ಟುವವರೆಗೂ ಬದುಕಿದ್ದ ಗಳಗನಾಥರು ಮನೆ ಹೊಕ್ಕ ಕ್ಷಣ ಬದುಕಿದ್ದರೇ?” ಎಂದು ಸೊಗಸಾದ ಪರಿಚಯ ಮಾಡಿದ್ದಾರೆ ಜೋಗಿಯವರ ಕಥೆಯನ್ನು.

ಈ ಸಂಕಲನದಲ್ಲಿರುವ ೨೧ ಕಥೆಗಳೂ ಚುಟುಕಾಗಿವೆ, ಚೆನ್ನಾಗಿವೆ ಮತ್ತು ಅರ್ಥಪೂರ್ಣವಾಗಿವೆ. ಎಲ್ಲಾ ಕಥೆಗಳಿಗೆ ಹಾಗೂ ಮುಖಪುಟಕ್ಕೆ ಕಲಾವಿದ ಪ.ಸ.ಕುಮಾರ್ ಸೊಗಸಾದ ರೇಖಾ ಚಿತ್ರಗಳನ್ನು ರಚಿಸಿದ್ದಾರೆ. ಸುಮಾರು ೧೧೫ ಪುಟಗಳ ಈ ಪುಟ್ಟ ಕಥಾ ಸಂಗ್ರಹವನ್ನು ಜೋಗಿ ‘ದೇವರಿಗೆ' ಅರ್ಪಿಸಿದ್ದಾರೆ.