ಜೋಡಿ ಕಳೆದರೆ...
ಕವನ
ಹೊಸತಿದು ಚಪ್ಪಲಿ ತಂದಿಹ ದಿನವೇ
ಕಡಿದೇ ಬಿಟ್ಟಿತು ನಾಯಿಮರಿ
ಮೌಲ್ಯವ ನೀಡಿದ ಕೈಬಿಸಿ ಆರದೆ
ಚಪ್ಪಲಿ ಹರಿದುದು ಹೊಟ್ಟೆಯುರಿ
ಹೊಡೆಯುವೆನೆಂದರೆ ಮನವೇ ಬಾರದು
ಮರಿಯದು ಇನ್ನೂ ಬಲುಎಳಸು
ಶಿಕ್ಷೆಯ ನೀಡದೆ ಬಿಟ್ಟರೆ ನನ್ನಲಿ
ನನಗೇ ಬರುವುದು ಅತಿ ಮುನಿಸು
ಚಪ್ಪಲಿ ಜೋಡಿಯ ಒಂದನು ಕಳೆದರೆ
ಏತಕೆ ಬೇಕದು ಮತ್ತೊಂದು?
ನಾಯಿಯ ಮುಸುಡಿಗೆ ಬಂಧಿಸಿ ಬಿಟ್ಟೆನು
ಕೋಪವು ತಣಿಯಲು ನಾನಿಂದು
ಅರಿತಿದೆ ತಪ್ಪನು ದೈನ್ಯದ ನೋಟವು
ಸಾರುತಲಿರುವುದು ಸತ್ಯವನು
ಮನಸಿದು ಕರಗಿತು ಕಟ್ಟನು ಬಿಚ್ಚಿದೆ
ಮುಕ್ತಿಯಗೊಳಿಸಿದೆ ನಾನದನು||
-ಪೆರ್ಮುಖ ಸುಬ್ರಹ್ಮಣ್ಯ ಭಟ್
ಚಿತ್ರ್
