ಜೋಯ್ಡಾ: ಕಾಡೊಳಗಿನ ಒಡಲು

ಜೋಯ್ಡಾ: ಕಾಡೊಳಗಿನ ಒಡಲು

ಪುಸ್ತಕದ ಲೇಖಕ/ಕವಿಯ ಹೆಸರು
ಡಾ.ವಿಠ್ಠಲ ಭಂಡಾರಿ ಹಾಗೂ ಯಮುನಾ ಗಾಂವ್ಕರ್
ಪ್ರಕಾಶಕರು
ಬಂಡಾಯ ಪ್ರಕಾಶನ, ಅರೇಅಂಗಡಿ, ಹೊನ್ನಾವರ - 581 334, ಉತ್ತರ ಕನ್ನಡ ಜಿಲ್ಲೆ
ಪುಸ್ತಕದ ಬೆಲೆ
ರೂ. 140.00, ಮುದ್ರಣ : 2017

*ಡಾ. ವಿಠ್ಠಲ ಭಂಡಾರಿ ಹಾಗೂ ಯಮುನಾ ಗಾಂವ್ಕರ್ ಅವರ   "ಜೋಯ್ಡಾ: ಕಾಡೊಳಗಿನ ಒಡಲು"*

"ಜೋಯ್ಡಾ: ಕಾಡೊಳಗಿನ ಒಡಲು" (ಮಾನವ ವಸತಿಯ ನಕಾಶೆಯಲ್ಲಿ ಜೋಯ್ಡಾ ಉಳಿಸೋಣ) ಕೃತಿಯನ್ನು ಡಾ. ವಿಠ್ಠಲ ಭಂಡಾರಿ ಹಾಗೂ ಯಮುನಾ ಗಾಂವ್ಕರ್ ದಂಪತಿಗಳು ಜಂಟಿಯಾಗಿ ರಚಿಸಿದ್ದಾರೆ. 184 + 4 ಪುಟಗಳ, 140 ರೂಪಾಯಿ ಬೆಲೆಯ ಕೃತಿಯನ್ನು 2017ರಲ್ಲಿ ಆರ್. ವಿ. ಭಂಡಾರಿ ನೆನಪಿನ 32ನೇ ಪುಸ್ತಕ ಮಾಲೆಯಾಗಿ ಬಂಡಾಯ ಪ್ರಕಾಶನ (ಅರೇಅಂಗಡಿ, ಹೊನ್ನಾವರ - 581 334, ಉತ್ತರ ಕನ್ನಡ ಜಿಲ್ಲೆ) ಪ್ರಕಟಿಸಿದೆ.

ಬಂಡಾಯ ಪ್ರಕಾಶನದ ಸಂಚಾಲಕರಾದ ಐ. ಕೆ. ಅನಿಲ ಅವರ "ಪ್ರಕಾಶಕರ ಮಾತು" , ಕರ್ನಾಟಕ ಹೈಕೋರ್ಟಿನ ಗೌರವಾನ್ವಿತ ನಿವೃತ್ತ ನ್ಯಾಯಮೂರ್ತಿಗಳಾದ ಹೆಚ್. ಎನ್. ನಾಗಮೋಹನದಾಸ್ ಅವರ "ಮುನ್ನುಡಿ" ಮತ್ತು ಯಮುನಾ ಗಾಂವ್ಕರ್ ಅವರ "ಕಾಡ ಒಡಲು ಸೇರುವ ಮೊದಲು" ಕೃತಿಯ ಪ್ರವೇಶಕ್ಕೆ ಪೂರ್ವ ಪೀಠಿಕೆಯಾಗಿ ಇದೆ.

"ಕರ್ನಾಟಕ ರಾಜ್ಯದಲ್ಲಿ ಅತಿ ದೊಡ್ಡ ಜಿಲ್ಲೆಯೆಂದರೆ ಉತ್ತರ ಕನ್ನಡ ಜಿಲ್ಲೆ. ಈ ಜಿಲ್ಲೆಯ ಸುಮಾರು ಶೇ. 75 ರಷ್ಟು ಪ್ರದೇಶದಲ್ಲಿ ಅರಣ್ಯವಿದೆ. ಈ ಅರಣ್ಯದಲ್ಲಿ ಸಿದ್ಧಿ, ಕುಣಬಿ, ಗೊಂಡ, ಗೌಳಿ, ಹಾಲಕ್ಕಿ ವಕ್ಕಲಿಗರು, ಇತ್ಯಾದಿಯಾಗಿ ಹಲವು ಪಂಗಡಗಳ ಗಿರಿಜನರು ಮತ್ತು ಅರಣ್ಯವಾಸಿಗಳು ಜೀವಿಸುತ್ತಿದ್ದಾರೆ. ದೇಶದ ಬೇರೆ ಪ್ರದೇಶದಲ್ಲಿರುವ ಗಿರಿಜನರು ಮತ್ತು ಅರಣ್ಯವಾಸಿಗಳು ಅನುಭವಿಸುತ್ತಿರುವ ಸಮಸ್ಯೆಗಳು ಮತ್ತು ಸವಾಲುಗಳನ್ನು ಉತ್ತರ ಕನ್ನಡ ಜಿಲ್ಲೆಯ ಗಿರಿಜನರು ಮತ್ತು ಅರಣ್ಯವಾಸಿಗಳು ಅನುಭವಿಸುತ್ತಿದ್ದಾರೆ. ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳು ಇವರ ಸಮಸ್ಯೆಗಳನ್ನು ಪರಿಹರಿಸಲೆಂದು ಕೆಲವು ಕಾನೂನುಗಳನ್ನು ಮತ್ತು ಕಾರ್ಯಕ್ರಮಗಳನ್ನು ತಂದಿದ್ದಾರೆ. ಆದರೆ ಅನುಭವದಿಂದ ನಾವು ಕಂಡುಕೊಂಡ ಸತ್ಯವೆಂದರೆ ಶಾಸಕಾಂಗ ತಂದ ಕಾನೂನುಗಳನ್ನು ಮತ್ತು ಕಾರ್ಯಾಂಗ ರೂಪಿಸುವ ಕಾರ್ಯಕ್ರಮಗಳನ್ನು ಅನುಷ್ಟಾನಗೊಳಿಸುವುದಿಲ್ಲ. ಕೆಲವುಗಳನ್ನು ಅರ್ಧ ಮನಸ್ಸಿನಿಂದ ಅನುಷ್ಟಾನಗೊಳಿಸಲಾಗುತ್ತದೆ ಮತ್ತು ಅನೇಕ ಸಲ ತಂದ ಕಾನೂನುಗಳನ್ನು ಉಲ್ಲಂಘಿಸಲಾಗುತ್ತಿದೆ. ಈ ಕಾರಣಕ್ಕಾಗಿಯೇ ಹೆಚ್ಚಿನ ಜನರು ರಚಿಸಲಾದ ಕಾನೂನಿನ ಫಲವನ್ನು ಪಡೆಯಲು ಸಾಧ್ಯವಾಗುತ್ತಿಲ್ಲ". ಹೀಗಂದವರು ನ್ಯಾಯಮೂರ್ತಿಗಳಾದ ನಾಗಮೋಹನದಾಸ್ ಅವರು.

ಗೌರವಾನ್ವಿತ ನ್ಯಾಯಮೂರ್ತಿಗಳಾದ ಹೆಚ್. ಎನ್. ನಾಗಮೋಹನದಾಸ್ ರವರು ಯಾವ ಶೋಷಿತ ಜನ ಸಮುದಾಯಗಳ ಬಗ್ಗೆ ಇಲ್ಲಿ ಉಲ್ಲೇಖಿಸಿದ್ದಾರೆಯೋ ಅದೇ ಜನಸಮುದಾಯದ ಮೇಲೆಯೇ " ಜೋಯ್ಡಾ: ಕಾಡೊಳಗಿನ ಒಡಲು" ಕೃತಿ ಹೊರಹೊಮ್ಮಿದೆ.

ಈ ಕೃತಿ, ಹೀಗೆ ಹೊರಹೊಮ್ಮಲು ಮುಖ್ಯ ಕಾರಣವೇನು ಎಂಬುದರ ಬಗ್ಗೆ ಕೃತಿಯ ಲೇಖಕರಲ್ಲಿ ಒಬ್ಬರಾದ ಯಮುನಾ ಗಾಂವ್ಕರ್ ಅವರು,  "ಕಾಡ ಒಡಲು ಸೇರುವ ಮೊದಲು" ವಿನಲ್ಲಿ  ಈ ಕೆಳಗಿನಂತೆ ಬರೆದಿದ್ದಾರೆ.

"ರಾಜ್ಯದ ಮುಂದುವರಿದ ಜಿಲ್ಲೆಗಳ ಯಾದಿಯಲ್ಲಿ ಉತ್ತರ ಕನ್ನಡ ಇದ್ದರೆ, ಇದೇ ಉತ್ತರ ಕನ್ನಡದಲ್ಲಿರುವ ಜೋಯ್ಡಾ ತಾಲೂಕು ರಾಜ್ಯದ ತೀರಾ ಹಿಂದುಳಿದ ತಾಲೂಕಿನಲ್ಲಿ ಮೊದಲನೆಯದು. ರಾಜ್ಯದ ಬೊಕ್ಕಸಕ್ಕೆ ಅತಿ ಹೆಚ್ಚು ಆರ್ಥಿಕತೆಯನ್ನು ನೀಡುವ ತಾಲೂಕು ಇದಾದರೂ ಈವರೆಗೆ ಆಳಿದ ಎಲ್ಲಾ ಸರ್ಕಾರಗಳ ನಿರ್ಲಕ್ಷ್ಯಕ್ಕೆ ಒಳಗಾಗಿ ನರಳುತ್ತಿರುವುದು ಇವತ್ತಿನ ಕತೆ ಕೂಡ". 

ಆಳುವ ಜನರು ಅಥವಾ ವರ್ಗ ಇಲ್ಲವೇ ಆಡಳಿತ ವ್ಯವಸ್ಥೆ (ಪ್ರಭುತ್ವ) ತನಗೆ  ಬೇಕಾದಾಗ ಮಾತ್ರ ಶೋಷಿತ ವರ್ಗದವರನ್ನು ಬೇಕಾದಷ್ಟೇ ಪ್ರಮಾಣದಲ್ಲಿ  ಬಳಸಿಕೊಳ್ಳುತ್ತದೆ. ತನ್ನ ಕೆಲಸವಾದ ಮರುಕ್ಷಣ ಮರೆತುಬಿಡುತ್ತದೆ. ಯಮುನಾ ಗಾಂವ್ಕರ್ ಅವರ ಈ ಕೆಳಗಿನ ಮಾತುಗಳು ಇದನ್ನು ಸ್ಪಷ್ಟಪಡಿಸುತ್ತದೆ.

"ಇತ್ತಿಚೆಗೆ ಸರ್ಕಾರ ಬಿಡುಗಡೆ ಮಾಡಿದ 'ಮಾನವ ಅಭಿವೃದ್ಧಿ ವರದಿ' ಉತ್ತರ ಕನ್ನಡ ಕುರಿತು ಹೊರತಂದಿರುವ ಅಧಿಕೃತ ದಾಖಲೆಯಲ್ಲಿ ಆದಿವಾಸಿಗಳು, ಬುಡಕಟ್ಟುಗಳು ಇತ್ಯಾದಿ ಸಂಬಂಧಿಸಿದಂತೆ ನಮ್ಮ ಜಿಲ್ಲೆಯ ಹಾಲಕ್ಕಿ ಮತ್ತು ಕುಣಬಿ, ಗೌಳಿ ಸಮುದಾಯದವರ ಫೋಟೋ ಬಳಸಿಕೊಳ್ಳಲಾಗಿದೆಯೇ ಹೊರತು ಅವರನ್ನು ಸಂವಿಧಾನಬದ್ಧ ಅಧಿಕೃತ ಬುಡಕಟ್ಟೆಂದು ಘೋಷಿಸುವ ಜವಾಬ್ದಾರಿಗೆ ಸರ್ಕಾರ ಮುಂದಾಗಿಲ್ಲ ಎಂಬುದು ವಿಪರ್ಯಾಸವೇ ಸರಿ. ಬುಡಕಟ್ಟು ಸಾಂಸ್ಕೃತಿಕ ಪ್ರದರ್ಶನ ಕಲೆ ಇತ್ಯಾದಿ ವಿಚಾರ ಬಂದಾಗಲೂ ಈ ಸಮುದಾಯವನ್ನೇ ಒಯ್ಯುತ್ತಾರೆ. ಆದರೆ ಸಂವಿಧಾನಬದ್ಧ ಬುಡಕಟ್ಟೆಂದು ಆದೇಶ ಮಾತ್ರ ಹೊರಡಿಸಲಾರರು". ಇದೂ ಪ್ರಜಾಪ್ರಭುತ್ವ !

ಕೃತಿಯಲ್ಲಿ ಒಟ್ಟು 15 ಲೇಖನಗಳಿವೆ. ಇವುಗಳೆಲ್ಲವೂ ಲೇಖಕರು ಬೇರೆ ಬೇರೆ ಸಂದರ್ಭಗಳಲ್ಲಿ ಬರೆದವುಗಳು. ಕವಯತ್ರಿಯೂ ಆಗಿರುವ ಲೇಖಕಿ ಯಮುನಾ ಗಾಂವ್ಕರ್ ಅವರ ಎರಡು ಕವನಗಳಿವೆ. 15 ಲೇಖನಗಳ ಪೈಕಿ ಆರು ಲೇಖನಗಳನ್ನು ಅನುಬಂಧವಾಗಿ ನೀಡಲಾಗಿದೆ. ಜೋಯ್ಡಾದಲ್ಲಿ ನಡೆದ ಉತ್ತರ ಕನ್ನಡ ಜಿಲ್ಲಾ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದ ಆರ್. ವಿ. ಭಂಡಾರಿಯವರು ಮಾಡಿದ ಅಧ್ಯಕ್ಷ ಭಾಷಣ, ಹೈಕೋರ್ಟ್ ನ್ಯಾಯಮೂರ್ತಿಗಳಾದ ನಾಗಮೋಹನದಾಸ್ ಅವರು ಉ. ಕ. ಜಿಲ್ಲೆಯ ಆಡಳಿತಾತ್ಮಕ ನ್ಯಾಯಮೂರ್ತಿಗಳಾಗಿದ್ದಾಗ ಜೋಯ್ಡಾದಲ್ಲಿ ನಡೆದ ಕಾನೂನು ಅರಿವು ಶಿಬಿರಕ್ಕೆ ಆಗಮಿಸಿ ಮಾಡಿದ ಭಾಷಣ, ವಿಶ್ವ ಕನ್ನಡ ಸಮ್ಮೇಳನದಲ್ಲಿ ಪ್ರೇಮಾನಂದ ವೆಳಿಪ ಅವರು ಮಾಡಿದ ಭಾಷಣ ಮತ್ತು ಡಾ.  ಶಾಂತಲಾ ಹೆಗಡೆಯವರ ಪಿಹೆಚ್. ಡಿ ಪ್ರಬಂಧಕ್ಕಾಗಿ ಗೌಳಿ ಸಮುದಾಯದ ಕುರಿತು ಸಿದ್ಧಪಡಿಸಿದ ಲೇಖನದ ಒಂದು ಭಾಗ, ಕರ್ನಾಟಕ ಪ್ರಾಂತ ರೈತ ಸಂಘ (ಕೆ ಪಿ ಆರ್ ಎಸ್) ಸರಕಾರಕ್ಕೆ ಸಲ್ಲಿಸಿದ ಮನವಿ ಮತ್ತು ಮಾನವ ಹಕ್ಕು ಆಯೋಗಕ್ಕೆ ಸಲ್ಲಿಸಿದ ಮನವಿ ಇಷ್ಟನ್ನು ಇಲ್ಲಿ ಅನುಬಂಧವಾಗಿ ನೀಡಲಾಗಿದೆ. ಉಳಿದ ಒಂಭತ್ತು ಲೇಖನಗಳು ಡಾ. ವಿಠ್ಠಲ ಭಂಡಾರಿ ಹಾಗೂ ಯಮುನಾ ಗಾಂವ್ಕರ್ ಅವರದ್ದು. ಎಂ. ರಾಮು ಅವರು ವಿನ್ಯಾಸಗೊಳಿಸಿದ ಆಕರ್ಷಕ ಹಚ್ಚ ಹಸಿರು - ಹಳ್ಳಿಮನೆಯ ಮುಖಪುಟ ಆಕರ್ಷಕವಾಗಿದೆ ಮತ್ತು ಕೃತಿಗೆ ಪೂರಕವಾಗಿದೆ.

"ಕಾಡೊಳಗಿನ ಹಾಡು, ಹಾಡೊಳಗಿನ ಒಡಲು: ಜೋಯ್ಡಾದ ಕುಂಬ್ರಿ ಮರಾಠಿಗಳ ಸಾಂಸ್ಕೃತಿಕ ಕಥನ" , ಕೃತಿಯಲ್ಲಿರುವ ಲೇಖನಗಳ ಪೈಕಿ ಹೆಚ್ಚು ಸುಧೀರ್ಘವಾದುದು. ವಿಠಲ ಭಂಡಾರಿ ಅವರು ಇದನ್ನು ಬರೆದಿದ್ದಾರೆ. ಬಹಳಷ್ಟು ವಿಸ್ತೃತವಾದ ಕ್ಷೇತ್ರಕಾರ್ಯ ನಡೆಸಿ, ಕುಂಬ್ರಿ ಮರಾಠಿ ಜನರ ಜೊತೆಯೇ ಇದ್ದುಕೊಂಡು ಬರೆದ ಅಧ್ಯಯನಾತ್ಮಕ ಮತ್ತು ಸಂಶೋಧನಾತ್ಮಕ ಲೇಖನವೂ ಹೌದು. ಹಾಗೆ ಹೇಳುವುದಾದರೆ, ಈ ಮಾತು ಕೃತಿಯಲ್ಲಿರುವ ಇತರ ಲೇಖನಗಳಿಗೂ ಅನ್ವಯವಾಗುತ್ತದೆ.

ಕುಂಬ್ರಿ ಮರಾಠಿಗಳ ಬದುಕಿನ ಬವಣೆಗಳು, ಸಾಂಸ್ಕೃತಿಕ ಶ್ರೀಮಂತಿಕೆ, ಕಾಡಿನ ಜೊತೆಗಿನ ಇವರ ಅವಿನಾಭಾವ ಸಂಬಂಧ, ಕಾಡನ್ನು ಅದು ಇದ್ದಂತೆಯೇ ರಕ್ಷಿಸಿ ಉಳಿಸಿಕೊಂಡು ಬರುತ್ತಲೇ ನಡೆಸಿದ ಸಹಜ ಮತ್ತು ಸಾವಯವ ಕೃಷಿ ಕಾಯಕ, ಅವರ ಶ್ರಮ ಸಂಸ್ಕೃತಿ ಇತ್ಯಾದಿಗಳೆಲ್ಲವನ್ನೂ ಇಲ್ಲಿ ಮನ ಮುಟ್ಟುವಂತೆ ಲೇಖಕರು ಅನಾವರಣಗೊಳಿಸಿದ್ದಾರೆ.

ಒಂದು ಜನ ಸಮುದಾಯ ಅದೆಷ್ಟೋ ಶತ ಶತಮಾನಗಳಿಂದ ಆಡುತ್ತಾ ಬಂದ ಅವರ ಮಾತೃಭಾಷೆ ಅವರ ನಿಜ ಸಂಸ್ಕೃತಿಯನ್ನು, ಸಾಮಾಜಿಕ ಜೀವನದ ಮೂಲವನ್ನು ಬೆಳಕಿಗೊಡ್ಡುತ್ತದೆ.    ಆದರೆ, ಸಾಂಖ್ಯಿಕವಾಗಿಯೂ, ಸಾಂಸ್ಕೃತಿಕವಾಗಿಯೂ, ಸಾಮಾಜಿಕವಾಗಿಯೂ ಒಂದು ಜನಸಮುದಾಯ ಕ್ಷೀಣಿಸುತ್ತಾ ಹೋಗುತ್ತಿದೆಯೆಂದಾದರೆ, ಆಗ ಕೆಲವೊಮ್ಮೆ ಭಾಷೆಯೂ ತನ್ನ ಮೂಲ ಸತ್ತ್ವವನ್ನು ಕಳೆದುಕೊಳ್ಳುವಂತಾಗುತ್ತದೆ. ಈ ನಿಟ್ಟಿನಲ್ಲಿ ಯಾವುದೇ ಒಂದು ಭಾಷೆಯ ಮೂಲ ಸತ್ತ್ವವನ್ನು ಉಳಿಸುವುದು ಮತ್ತು ಭಾಷೆಯ ಅಧ್ಯಯನ,  ಅತ್ಯಂತ ಅಗತ್ಯದ ಕೆಲಸ.

ಈ ನಿಟ್ಟಿನಲ್ಲಿ, ಕುಂಬ್ರಿ ಮರಾಠಿ ಜನರ ಭಾಷೆಯ ಬಗ್ಗೆ ವಿಠ್ಠಲ ಭಂಡಾರಿಯವರು ಬರೆದುದನ್ನು  ಲೇಖನದಲ್ಲಿ ಗಮನಿಸಬೇಕು.

"ಇವರು ಮಾತನಾಡುವ ಭಾಷೆ ಕೂಡ ವಿಶಿಷ್ಟವಾದದ್ದೆ. ಮೂಲದ ಮರಾಠಿ, ನಂತರದ ಕೊಂಕಣಿ, ಗೋವಾದ ಆಡಳಿತಗಾರ ಭಾಷೆ ಪೋರ್ಚುಗೀಸ್, ಕಿನೆಯಲ್ಲಿ ನೆಲೆನಿಂತ ಕನ್ನಡ- ಈ ನಾಲ್ಕು ಭಾಷೆಗಳ ಒಂದು ಕಲಸುಮೋಲೋಗರ. ಕೆಲವರು ಇದನ್ನು ಅರೆ ಮರಾಠಿ ಎಂದೂ ಕರೆಯುತ್ತಾರೆ. ಹಲವು ಶಬ್ದಗಳು ಪೋರ್ಚುಗೀಸ್ ಭಾಷೆಯ ಉಚ್ಛರಣೆಯ ಪ್ರಭಾವಕ್ಕೆ ಒಳಗಾಗಿದ್ದರೂ ಮರಾಠಿ ಮತ್ತು ಕೊಂಕಣಿ ಒಂದರೊಳಗೊಂದು ಹೆಣೆದುಕೊಂಡಿದೆ. ಜಿಲ್ಲೆಯ ಉಳಿದ ತಾಲೂಕುಗಳಲ್ಲಿ ನೆಲೆನಿಂತ ಕಣಬಿಗಳಲ್ಲಿ ಕನ್ನಡದ ಹಲವು ಪದಗಳು ಕೊಂಕಣಿ ಮತ್ತು ಮರಾಠಿಯ ಲಯದಲ್ಲಿ ಉಚ್ಛರಣೆಗೊಳ್ಳುತ್ತವೆ. ಈ ಭಾಷೆಯ ಭಾಷಾ ಶಾಸ್ತ್ರೀಯ ಅಧ್ಯಯನ ವಲಸಿಗರ ಭಾಷಾ ಸಂಕೀರ್ಣತೆಯನ್ನು , ಭಾಷೆಯ ಕೊಡು ಕೊಳ್ಳುವಿಕೆಯ ಸ್ವರೂಪವನ್ನು ತಿಳಿಸಿಕೊಡಬಲ್ಲದು. ಅವರ ದಿನನಿತ್ಯದ ಮಾತನ್ನು ಅರ್ಥಮಾಡಿಕೊಳ್ಳಬಹುದಾದರೂ ಅವರ ಹಾಡಿನಲ್ಲಿ, ಕತೆಯಲ್ಲಿ ಬರುವ ಹಲವು ಪದಗಳು ಇಂದು ಬಳಕೆಯಲ್ಲಿ ಇದ್ದವುಗಳಲ್ಲ. ಹಾಡುವ ಕಲಾವಿದರಿಗೂ ಸ್ವತಃ ಈ ಶಬ್ದದ ಪರಿಚಯವಿಲ್ಲ. ತಲೆಮಾರಿನಿಂದ ತಲೆಮಾರಿಗೆ ವರ್ಗಾಯಿಸಲ್ಪಟ್ಟ ಈ ಹಾಡುಗಳ ಭಾಷಿಕ ಅಧ್ಯಯನ ಅವರ ಮೂಲದ ಕುರಿತು ಕರಾರುವಾಕ್ಕಾದ ಸತ್ಯವನ್ನು ಪ್ರಸ್ತುತಪಡಿಸಬಲ್ಲುದು".

ಕುಂಬ್ರಿ ಮರಾಠಿಗರ ಆಹಾರ ಕ್ರಮದಲ್ಲಿಯೂ ಒಂದು ವಿಶೇಷತೆ ಇದೆ. ಅದೇನೆಂದರೆ, ಇವರು ಕಾಡುಕೋಳಿಯೇ ಮುಂತಾದ ಕೆಲ ಪ್ರಾಣಿಗಳನ್ನು ತಿನ್ನುತ್ತಾರೆಯಾದರೂ, ಸಾಕು ಪ್ರಾಣಿಗಳಾದ ಆಡು, ಮೇಕೆ, ಊರಕೋಳಿ ಇತ್ಯಾದಿಗಳನ್ನು ತಿನ್ನುವುದಿಲ್ಲವಂತೆ. ಯಾಕೆ ಹೀಗೆ ಎಂದು ಯಾರಾದರೂವಕೇಳಿದಾಗ, ಅವರು ಕೊಡುವ ಉತ್ತರ: " ನಾವು ಸಾಕಿದ್ದಲ್ವ ?, ಸಾಕಿದ್ದು ನಮ್ಮ ಮಕ್ಕಳ ಹಾಗೆ. ನಾವು ತಿನ್ನೋದಿಲ್ಲ". ಎಂದು. ಕೆಲವು ಕಾಡು ಪ್ರಾಣಿಗಳನ್ನು ಬೇಟೆ ಆಡುತ್ತಿದ್ದರಾದರೂ, ಆಹಾರಕ್ಕಾಗಿಯಷ್ಟೇ ಇವರು ಬೇಟೆಯಾಡುತ್ತಿದ್ದರೇ ಹೊರತು, ಬೇಟೆಯಾಡಿದ ಪ್ರಾಣಿಗಳ ಮಾಂಸವನ್ನು ಎಂದಿಗೂ ಹಣಕ್ಕಾಗಿ ಮಾರಾಟ ಮಾಡಿದವರಲ್ಲ, ಮಾಡುವವರೂ ಅಲ್ಲ. ಇವರ ಕೃಷಿ ಪದ್ಧತಿ ಸಹ ಆಹಾರದ ಮೂಲದ್ದೇ ವಿನಹಾ, ಆರ್ಥಿಕ ಮೂಲದ್ದಲ್ಲ. ಇಂತಹ ಹತ್ತು ಹಲವು ವಿಶಿಷ್ಟತೆಗಳು ಈ ನಿಜ ಬುಡಕಟ್ಟು ಜನಸಮುದಾಯದ ಸರಳವೂ, ಪ್ರಕೃತಿ ಸಹಜವೂ ಆದ ಜೀವನ ಕ್ರಮವಾಗಿ ಇವರ ಬದುಕಿನಲ್ಲಿ ಹಾಸುಹೊಕ್ಕಿದೆ.

ಆದರೂ ಸರಕಾರ ಮಾತ್ರ ಇವರ  ಗೌರವದ ಮತ್ತು ಘನತೆಯ ಬದುಕಿನ ಹಕ್ಕನ್ನು ಸೂಕ್ತ ರೀತಿಯಲ್ಲಿ ಮಾನ್ಯ ಮಾಡಿಲ್ಲ ಎಂಬ ಅಂಶ ಈ ಕೃತಿಯನ್ನು ಓದುವಾಗ ಸ್ಪಷ್ಟವಾಗಿ ಗಮನಕ್ಕೆ ಬರುತ್ತದೆ. ಅನ್ಯಾಯಯುತವಾದ ತೆರಿಗೆ ನೀತಿಯನ್ನು ಇವರ ವಿರುದ್ಧ ಜ್ಯಾರಿಗೊಳಿಸಿರುವ ಸರಕಾರ, ಇಷ್ಟೂ ಸಾಲದೆಂಬಂತೆ ಕಾಡಿನೊಂದಿಗೆ ಸಹಜೀವನ ನಡೆಸುತ್ತಿರುವ ಇವರನ್ನು ಕಾಡಿನಿಂದ ಒಕ್ಕಲೆಬ್ಬಿಸಲು, ಇವರು ಹುಟ್ಟಿ ಬೆಳೆದ ಭೂಮಿಯನ್ನು ಕಾನೂನು ಬದ್ಧವಾಗಿ ಸಕ್ರಮಗೊಳಿಸದೆ, ಅತೀ ಅಗತ್ಯವಾಗಿ ಬೇಕಾದ ಮೂಲಭೂತ ಸೌಲಭ್ಯಗಳನ್ನೂ ಒದಗಿಸದೆ ಅಮಾನವೀಯತೆಯನ್ನು ಮೆರೆದಿದೆ ಎಂದರೆ ಪ್ರಭುತ್ವದ ಬಗ್ಗೆ ಅಸಹ್ಯ ಮೂಡದೇ ಇರಲಾದರೂ ಹೇಗೆ ಸಾಧ್ಯ...

ನಿಜವಾಗಿಯೂ ಒಂದು ಬುಡಕಟ್ಟು ಸಮುದಾಯವಾಗಿರುವ ಕುಂಬ್ರಿ ಮರಾಠಿಗರನ್ನು ಇನ್ನೂ ಸಹ ಸರಕಾರ ಸಂವಿಧಾನಾತ್ಮಕವಾಗಿ ಬುಡಕಟ್ಟು ಸಮುದಾಯ ಎಂದು ಒಪ್ಪಿ ಮಾನ್ಯ ಮಾಡಿಲ್ಲ ಎಂಬ ಕೊರಗು ಮತ್ತು ಅಸಮಾಧಾನದ ಹಿನ್ನೆಲೆಯಲ್ಲಿ ಹುಟ್ಟಿಕೊಂಡ ಈ ಕೃತಿ, ಕೃತಿಕಾರರ ಅಪಾರವಾದ ಜನಪರ ಕಾಳಜಿಗೆ, ಮಾನವೀಯ ತುಡಿತಗಳಿಗೆ ಸಾಕ್ಷಿಯಾಗಿದೆ. ಲೇಖಕರು ಮತ್ತು ಪ್ರಕಾಶಕರು ನಿಜಕ್ಕೂ ಅಭಿನಂದನೆಗೆ  ಪಾತ್ರರು.

~ *ಶ್ರೀರಾಮ ದಿವಾಣ*