ಜೋಯ್ ಕಪ್ಪೆಯ ಜಿಗಿತ
"ಓ, ನೋಡಿ, ನನ್ನ ಜಿಗಿತ ನೋಡಿ” ಎನ್ನುತ್ತಾ ಜೋಯ್ ಕಪ್ಪೆ ಕೊಳದಲ್ಲಿ ಒಂದು ಲಿಲ್ಲಿ ಎಲೆಯಿಂದ ಇನ್ನೊಂದಕ್ಕೆ ಜಿಗಿಯುತ್ತಿತ್ತು. "ನನ್ನಷ್ಟು ಎತ್ತರಕ್ಕೆ ಜಿಗಿಯಬಲ್ಲ ಕಪ್ಪೆ ಭೂಮಿಯಲ್ಲೇ ಇಲ್ಲ” ಎಂದು ಅದು ಜಂಭದಿಂದ ಕೂಗಿತು.
“ಛೇ, ಛೇ, ಆ ಯುವ ಕಪ್ಪೆ ಬರೀ ತಲೆಹರಟೆ. ತಾನು ಎಲ್ಲಿಗೆ ಜಿಗಿಯುತ್ತಿದ್ದೇನೆ ಎಂದು ಅದು ನೋಡೋದೇ ಇಲ್ಲ. ತಾನು ಯಾರಿಗೆ ನೀರು ಎರಚುತ್ತಿದ್ದೇನೆ ಎಂದು ಅದಕ್ಕೆ ಕ್ಯಾರೇ ಇಲ್ಲ” ಎಂದಿತು ತಾಯಿ ಬಾತುಕೋಳಿ.
"ಹೌದು, ಹೌದು. ಆ ಕಪ್ಪೆ ಬಹಳ ರಗಳೆ ಮಾಡುತ್ತದೆ. ಬಹಳ ಸದ್ದು ಕೂಡ ಮಾಡುತ್ತದೆ. ನಮ್ಮ ಮಾತೇ ನಮಗೆ ಕೇಳದಂತೆ ಆಗುತ್ತದೆ" ಎಂದಿತು ಹಂಸ.
ಆದರೆ ಜೋಯ್ ಕಪ್ಪೆ ಇದಕ್ಕೆಲ್ಲ ಕಿವಿಗೊಡುತ್ತಲೇ ಇರಲಿಲ್ಲ. ಒಂದು ಲಿಲ್ಲಿ ಎಲೆಯಿಂದ ಇನ್ನೊಂದಕ್ಕೆ ಅದು ಇನ್ನಷ್ಟು ಮತ್ತಷ್ಟು ಎತ್ತರಕ್ಕೆ ಜಿಗಿಯುತ್ತಿತ್ತು. ಅದು ಪುಟಾಣಿ ಬಾತುಕೋಳಿ ಮರಿಗಳನ್ನು ಪಂಥಕ್ಕೆ ಕರೆಯಿತು, “ಬನ್ನಿ, ಬನ್ನಿ. ನಾವು ನೀರಿಗೆ ಹಾರುವ ಸ್ಪರ್ಧೆ ಮಾಡೋಣ.”
ಪುಟಾಣಿ ಬಾತುಕೋಳಿ ಮರಿಗಳು ಜೋಯ್ ಕಪ್ಪೆ ಇದ್ದಲ್ಲಿಗೆ ನುಗ್ಗಿದವು ಮತ್ತು ನೀರಿನಲ್ಲಿ ಮುಳುಗಿ ಎದ್ದವು. ತಾಯಿ ಬಾತುಕೋಳಿ ಬೇಸರದಿಂದ ಹೇಳಿತು, “ಜೋಯ್ ಕಪ್ಪೆ ನಮ್ಮ ಮರಿಗಳಿಗೆ ಕೆಟ್ಟ ಬುದ್ಧಿ ಕಲಿಸುತ್ತಿದೆ. ಅದನ್ನು ತಡೆಯಲು ಏನಾದರೂ ಮಾಡಲೇ ಬೇಕಾಗಿದೆ.”
“ಅದು ಬೇಗನೇ ಒಳ್ಳೆಯ ಬುದ್ಧಿ ಕಲಿಯುತ್ತದೆ" ಎಂದಿತು ಹಂಸ. ಆದರೆ ಜೋಯ್ ಕಪ್ಪೆ ಬುದ್ಧಿ ಕಲಿಯಲೇ ಇಲ್ಲ. ಮುಂಜಾವದಲ್ಲಿ ಕರ್ಕಶ ಧ್ವನಿಯಲ್ಲಿ ಜೋರಾಗಿ ಹಾಡುತ್ತಾ ಜೋಯ್ ಕಪ್ಪೆ ಕೊಳದಲ್ಲಿದ್ದ ಎಲ್ಲ ಜೀವಿಗಳನ್ನೂ ಎಬ್ಬಿಸುತ್ತಿತ್ತು. ಬೆಳಗಾದರೆ ಸಾಕು, ಒಂದು ಕಡೆಯಿಂದ ಇನ್ನೊಂದು ಕಡೆಗೆ ಜಿಗಿತ; ಬಾತುಕೋಳಿ ಮತ್ತು ಹಂಸಗಳ ಗೂಡುಗಳ ಬಳಿ ಗಲಾಟೆ; ಮೊಲಗಳ ಮತ್ತು ಇಲಿಗಳ ಬಿಲಗಳ ಹತ್ತಿರ ನೆಗೆದಾಟ -ಇದುವೇ ಅದರ ರಂಪಾಟ. ತಾನು ಎಲ್ಲರನ್ನೂ ಖುಷಿ ಪಡಿಸುತ್ತಿದ್ದೇನೆ ಎಂಬುದು ಅದರ ಯೋಚನೆ. ಆದರೆ ನಿಜವಾಗಿ ಅದು ಎಲ್ಲರಿಗೂ ತೊಂದರೆ ಮಾಡುತ್ತಿತ್ತು.
ಅದೊಂದು ದಿನ ಜೋಯ್ ಕಪ್ಪೆ ಉದ್ವೇಗದಿಂದ ಕಿರುಚಿತು: “ಕೇಳಿರಿ, ಕೇಳಿರಿ. ಈ ಕೆರೆಯ ಆ ಬದಿಯಲ್ಲಿ ಜಿಗಿತ ಸ್ಪರ್ಧೆ ನಡೆಯಲಿದೆ. ದೂರದೂರದಿಂದ ಕಪ್ಪೆಗಳು ಸ್ಪರ್ಧೆಗೆ ಬರಲಿವೆ. ಸ್ಪರ್ಧೆಯಲ್ಲಿ ನಾನು ಗೆದ್ದೇ ಗೆಲ್ಲುತ್ತೇನೆ. ಯಾಕೆಂದರೆ ನನ್ನಷ್ಟು ಎತ್ತರಕ್ಕೆ ಜಿಗಿಯಬಲ್ಲ ಕಪ್ಪೆ ಭೂಮಿಯಲ್ಲೇ ಇಲ್ಲ.” ಹೀಗೆ ಕೂಗುತ್ತಾ ಅದು ಗಾಳಿಯಲ್ಲಿ ಇನ್ನಷ್ಟು ಎತ್ತರಕ್ಕೆ ಜಿಗಿಯಿತು.
ಸ್ಪರ್ಧೆಯ ದಿನ ಬಂದೇ ಬಂತು. ಕೊಳದ ಎಲ್ಲ ಜೀವಿಗಳೂ ಆ ಬದಿಯಲ್ಲಿ ಒಟ್ಟು ಸೇರಿದವು. ಅಬ್ಬ, ಅಲ್ಲಿ ಕಪ್ಪೆಗಳ ಮೇಳ! ಒಂದೇ ಸ್ಥಳದಲ್ಲಿ ಅಷ್ಟೊಂದು ಕಪ್ಪೆಗಳನ್ನು ಜೋಯ್ ಕಪ್ಪೆ ಯಾವತ್ತೂ ನೋಡಿರಲಿಲ್ಲ.
ಜೋಯ್ ಕಪ್ಪೆಗೆ ಅಚ್ಚರಿಯೋ ಅಚ್ಚರಿ. ಯಾಕೆಂದರೆ ಎಲ್ಲ ಕಪ್ಪೆಗಳು ಎತ್ತರಕ್ಕೆ, ಇನ್ನಷ್ಟು ಎತ್ತರಕ್ಕೆ ಜಿಗಿಯುತ್ತಿದ್ದವು. ಅಲ್ಲಿ ನೆರೆದಿದ್ದ ಗುಂಪು ಕೂಗುತ್ತಿದ್ದಂತೆ ಅವೆಲ್ಲವೂ ಲಯಬದ್ಧವಾಗಿ, ಎತ್ತರಕ್ಕೆ, ದೂರಕ್ಕೆ ಜಿಗಿಯುತ್ತಾ ಇದ್ದವು.
ಸ್ಪರ್ಧೆಯಲ್ಲಿ ಗೆಲ್ಲಬೇಕಾದರೆ ಜೋಯ್ ಕಪ್ಪೆ ಈ ವರೆಗೆ ಜಿಗಿದದ್ದಕ್ಕಿಂತ ಎತ್ತರಕ್ಕೆ ಮತ್ತು ದೂರಕ್ಕೆ ಜಿಗಿಯ ಬೇಕಾಗಿತ್ತು. ಅದರ ಸರದಿ ಬಂದಾಗ ಬಾತುಕೋಳಿ ಮರಿಗಳು ಒಟ್ಟಾಗಿ “ಜೋಯ್ ಜೋಯ್, ಭಾರಿ ಎತ್ತರಕ್ಕೆ ಜಿಗಿ” ಎಂದು ಕೂಗಿದವು.
ಜೋಯ್ ಜಿಗಿತದ ಪ್ಯಾಡಿನಲ್ಲಿ ಕುಳಿತು, ತನ್ನೆಲ್ಲ ಶಕ್ತಿಯನ್ನು ಒಗ್ಗೂಡಿಸಿ ಎತ್ತರಕ್ಕೆ ಜಿಗಿದು, ಗಾಳಿಯಲ್ಲಿ ದೂರಕ್ಕೆ, ಇನ್ನಷ್ಟು ದೂರಕ್ಕೆ ಹಾರಿತು. ಅಯ್ಯೋ! ಅದು ಎಲ್ಲಿ ಇಳಿಯಿತು ಅಂತೀರಾ? ಅಲ್ಲಿ ಕಾದಿದ್ದ ಪೈಕ್ ಮೀನಿನ ದೊಡ್ಡ ಬಾಯಿಯೊಳಗೆ! ಯಾವಾಗಿನಂತೆ ತಾನು ಎಲ್ಲಿಗೆ ಜಿಗಿಯುತ್ತಿದ್ದೇನೆ, ಎಲ್ಲಿ ಇಳಿಯುತ್ತಿದ್ದೇನೆ ಎಂದು ಜೋಯ್ ಕಪ್ಪೆ ನೋಡಿರಲೇ ಇಲ್ಲ.
ತುಂಟ ಪೈಕ್ ಮೀನು ಒಂದೇಟಿಗೆ ಜೋಯ್ ಕಪ್ಪೆಯನ್ನು ನುಂಗಿ, ನೀರಿನ ಆಳಕ್ಕೆ ಡೈವ್ ಮಾಡಿ, ಕೊಳದ ಆಳದಲ್ಲಿ ಅಡಗಿ ಕುಳಿತಿತು. ಎಲ್ಲರೂ ಕಣ್ಣುಬಾಯಿ ಬಿಟ್ಟು ನೋಡಿದರು. ಅವರು ಯಾರೂ ಏನೂ ಮಾಡುವಂತಿರಲಿಲ್ಲ. ಜೋಯ್ ಕಪ್ಪೆ ಕಾಣೆಯಾಗಿತ್ತು.
ಆದರೆ, ಒಂದು ಸಂಗತಿಯಂತೂ ನಿಜ: ಜೋಯ್ ಕಪ್ಪೆ ಇತರ ಎಲ್ಲ ಕಪ್ಪೆಗಳಿಗಿಂತ ಎತ್ತರಕ್ಕೆ ಮತ್ತು ದೂರಕ್ಕೆ ಜಿಗಿದಿತ್ತು. ಸ್ಪರ್ಧೆಯನ್ನು ಆಯೋಜಿಸಿದ್ದ ರಾಜಕಪ್ಪೆ “ಇವತ್ತಿನ ಸ್ಪರ್ಧೆಯಲ್ಲಿ ಜೋಯ್ ಕಪ್ಪೆಗೆ ಮೊದಲ ಸ್ಥಾನ " ಎಂದು ಘೋಷಿಸಿತು. ಆದರೆ ಇದನ್ನು ಕೇಳಿ ಸಂಭ್ರಮಿಸಲು ಜೋಯ್ ಕಪ್ಪೆ ಅಲ್ಲಿ ಇರಲೇ ಇಲ್ಲ! ಎಲ್ಲರೂ ಮೌನವಾಗಿ ಅಲ್ಲಿಂದ ಹೊರಟರು.
ಆ ಕೊಳದಲ್ಲಿ ಮತ್ತು ಕೊಳದ ಸುತ್ತಲು ವಾಸಿಸುತ್ತಿದ್ದ ಹಲವಾರು ಜೀವಿಗಳು ಅಂದಿನ ಘಟನೆಯಿಂದ ಪೆಚ್ಚಾಗಿದ್ದರು. ಈಗ ಜೋಯ್ ಕಪ್ಪೆಯ ಗದ್ದಲ ಇರಲಿಲ್ಲ. ಆದರೆ ಅವರೆಲ್ಲರ ಗೆಳೆಯ ಸ್ಪರ್ಧೆಯಲ್ಲಿ ಗೆದ್ದರೂ ಕಾಣೆಯಾಗಿದ್ದ.
“ಜೋಯ್ ಕಪ್ಪೆ ಉತ್ಸಾಹತುಂಬಿದ ಪುಟ್ಟ ಕಪ್ಪೆ. ಮತ್ತೆಮತ್ತೆ ಅದರ ನೆನಪಾಗುತ್ತದೆ” ಎಂದಿತು ಹಂಸ. "ನನ್ನ ಮರಿಗಳೊಂದಿಗೆ ಖುಷಿಯಿಂದ ಜೋಯ್ ಕಪ್ಪೆ ಆಟವಾಡುತ್ತಿತ್ತು. ಈಗ ಅದರಂತೆ ಯಾರೂ ಇಲ್ಲ” ಎಂದು ಹೇಳಿತು ತಾಯಿ ಬಾತುಕೋಳಿ.
ಅತ್ತ ಕೊಳದ ನೀರಿನ ಆಳದಲ್ಲಿ ಪೈಕ್ ಮೀನಿಗೆ ತಾನು ತಪ್ಪು ಮಾಡಿದೆ ಎಂದು ಅನಿಸುತ್ತಿತ್ತು. ಜೋಯ್ ಕಪ್ಪೆಯನ್ನು ನುಂಗಿ ತಾನು ಚಾಲಾಕಿತನ ತೋರಿದೆ ಎಂದು ಅದು ಯೋಚಿಸಿತ್ತು. ಆದರೆ, ಜೋಯ್ ಕಪ್ಪೆಯನ್ನು ನುಂಗಿದ ನಂತರ ಅದಕ್ಕೆ ಹೊಟ್ಟೆಯಲ್ಲಿ ಭಾರಿ ಸಂಕಟವಾಗುತ್ತಿತ್ತು. ಯಾಕೆಂದರೆ ಜೋಯ್ ಕಪ್ಪೆ ಪೈಕ್ ಮೀನಿನ ಹೊಟ್ಟೆಯೊಳಗೆ ಮತ್ತೆಮತ್ತೆ ಜಿಗಿಯುತ್ತಿತ್ತು! ಆ ಸಂಕಟ ತಡೆಯಲಾಗದೆ, ಪೈಕ್ ಮೀನು ಕೊಳದ ನೀರಿನ ಮೇಲಕ್ಕೆ ಬಂದು ಗಾಳಿ ನುಂಗಲಿಕ್ಕಾಗಿ ತನ್ನ ಬಾಯಿ ಅಗಲಿಸಿತು. ಅಗೋ ತಗೋ! ಅದರ ಬಾಯಿಯಿಂದ ಪುಳಕ್ಕನೆ ಹೊರಕ್ಕೆ ಜಿಗಿಯಿತು ಜೋಯ್ ಕಪ್ಪೆ!
ಕೊಳದ ಎಲ್ಲ ಗೆಳೆಯರಿಗೂ ಜೋಯ್ ಕಪ್ಪೆ ಪುನಃ ಬಂದದ್ದನ್ನು ಕಂಡು ಖುಷಿಯೋ ಖುಷಿ. ಅವರೆಲ್ಲರೂ ಜೋಯ್ ಕಪ್ಪೆಯನ್ನು "ಜಿಗಿತ ಸ್ಪರ್ಧೆಯಲ್ಲಿ ಮೊದಲ ಸ್ಥಾನ” ಪಡೆದದ್ದಕ್ಕಾಗಿ ಅಭಿನಂದಿಸಿದರು. ಜೋಯ್ ಕಪ್ಪೆಗೆ ಪದಕ ನೀಡಿದರು.
“ಓ, ನನಗೆ ಇದನ್ನೆಲ್ಲ ನಂಬಲಾಗುತ್ತಿಲ್ಲ” ಎಂದಿತು ಜೋಯ್ ಕಪ್ಪೆ. “ಅಂತೂ ಇವತ್ತು ನಾನೊಂದು ಪಾಠ ಕಲಿತಿದ್ದೇನೆ; ಇನ್ನು ಮುಂದೆ ಜಿಗಿಯುವ ಮುಂಚೆ ಕಣ್ಣು ಬಿಟ್ಟು ನೋಡುತ್ತೇನೆ - ಎಲ್ಲಿಗೆ ಬೀಳುತ್ತೇನೆಂದು” ಎನ್ನುತ್ತಾ ಬಾತುಕೋಳಿ ಮರಿಗಳ ಜೊತೆ ಆಟವಾಡಲು ಜಿಗಿಯಿತು ಜೋಯ್ ಕಪ್ಪೆ.
ಚಿತ್ರ ಕೃಪೆ: "ದ ನರ್ಸರಿ ಕಲೆಕ್ಷನ್" ಪುಸ್ತಕ