ಜ್ಞಾನಕ್ಕೆ ಜಲಬಂಧೀ ಗೋಡೆಗಳಿರಬಾರದು !
ಕಳೆದ ವಾರದ ಲೇಖನವನ್ನು ಓದಿದ ಮೇಲೆ ನೀವು ಜೀವಶಾಸ್ತ್ರದ ವಿಷಯ ಆರಂಭಿಸಿದವರು ಈಗ ಭೌತಶಾಸ್ತ್ರದ ಬಗ್ಗೆ ಮಾತನಾಡಲು ಆರಂಭಿಸಿದ್ದೀರಿ ಎಂದು ಆಕ್ಷೇಪಿಸಿದ್ದಾರೆ. ಆದರೆ ನಾನು ವಿಷಯಾಂತರ ಮಾಡಿಲ್ಲ ಎಂದೆ. ಹಿಂದೆ ಜ್ಞಾನದ ಎಲ್ಲಾ ಶಾಖೆಗಳನ್ನು ಒಟ್ಟಾಗಿ ತತ್ವಶಾಸ್ತ್ರ ಎಂದೇ ಕರೆಯುತ್ತಿದ್ದರು. ಆಮೇಲೆ ಜ್ಞಾನ ವಿಸ್ತಾರವಾದ ಹಾಗೆ ವಿಜ್ಞಾನ ಬೇರೆಯಾಯಿತು ಹೀಗೆ. ನಾವು ಸಸ್ಯಗಳಲ್ಲಿನ ದ್ಯುತಿ ಸಂಶ್ಲೇಷಣೆಯನ್ನು ಅರ್ಥ ಮಾಡಿಕೊಳ್ಳಲು ಅಲ್ಲಿ ನಡೆಯುವ ರಾಸಾಯನಿಕ ಕ್ರಿಯೆಗಳ ಬಗ್ಗೆ ತಿಳಿಯಬೇಕು. ಅದು ಬೆಳಕಿನ ಕ್ರಿಯೆ (light reaction) ಕೆಲ್ವಿನ್ ನ ವರ್ತುಲ (Calvin's cycle) ಗಳು ರಸಾಯನ ಶಾಸ್ತ್ರವಲ್ಲವೇ. ಗರಿಷ್ಠ ಪ್ರಮಾಣದ ದ್ಯುತಿಸಂಶ್ಲೇಷಣೆ ಸಾಧ್ಯವಾಗಿಸಲು ನಮಗೆ ಬೆಳಕಿನ ತರಂಗಾಂತರದ ಬಗ್ಗೆ ತಿಳಿದಿರಬೇಕು ತಾನೆ. ಇದರಿಂದ ಲಭ್ಯವಾಗುವ ಜೀವ ರಾಶಿಯನ್ನು (biomass) ಲೆಕ್ಕ ಹಾಕಲು ಗಣಿತ ಬೇಡವೇ? ಆದ್ದರಿಂದ ವಿಜ್ಞಾನದ ವಿವಿಧ ಶಾಖೆಗಳ ನಡುವೆ ಜಲಬಂಧೀ ಗೋಡೆಗಳನ್ನೆಬ್ಬಿಸಲಾಗದು (water tight compartments).
ಒಬ್ಬ ಜೀವಶಾಸ್ತ್ರಜ್ಞ ತನ್ನ ಗಣಿತದ ಜ್ಞಾನದ ಕಾರಣದಿಂದ ವಿಶ್ವ ವಿಖ್ಯಾತನಾದದ್ದು ನಿಮಗೆ ಗೊತ್ತಿದೆಯಲ್ಲವೇ? ಜಾನ್ ಗ್ರೆಗರ ಮೆಂಡಲ್ ಎಂಬ ಪಾದ್ರಿಯೊಬ್ಬನಿದ್ದ. ಆತ ಗಣಿತ ಮತ್ತು ಜೀವಶಾಸ್ತ್ರ ಕಲಿಯಲು ವಿಯೆನ್ನಾ ವಿಶ್ವವಿದ್ಯಾಲಯಕ್ಕೆ ಹೋದ. ಅಲ್ಲಿ ಅವನಿಗೆ ಗಣಿತವೂ ಬರುವುದಿಲ್ಲ ಜೀವಶಾಸ್ತ್ರವೂ ತಲೆಗೆ ಹತ್ತುವುದಿಲ್ಲ ಎಂದು ಹೊರ ಹಾಕಿದರು. ಕಲಿತ ಅಲ್ಪ ಸ್ವಲ್ಪ ಜ್ಞಾನದೊಂದಿಗೆ ನಿರಾಶನಾಗಿ ಚರ್ಚ್ ಗೆ ಮರಳಿ ಬಂದ. ಬಂದವನು ಚರ್ಚ್ ನ ಹಿತ್ತಲಲ್ಲಿ ಬಟಾಣಿ ಬೆಳೆಯಲು ಆರಂಭಿಸಿದ. ಬಟಾಣಿ ಗಿಡಗಳಲ್ಲಿ ಗರಿಷ್ಠ ವೈವಿದ್ಯತೆ ಇದೆ. ಎತ್ತರ (ಎತ್ತರ ಮತ್ತು ಗಿಡ್ಡ), ಬೀಜಗಳ ಬಣ್ಣ (ಹಳದಿ ಮತ್ತು ಹಸುರು), ಬೀಜದ ಸ್ವರೂಪ (ಉರುಟು ಮತ್ತು ಸುಕ್ಕಾದ), ಹೂವಿನ ಬಣ್ಣ (ಪರ್ಪಲ್ ಮತ್ತು ಬಿಳಿ), ಕಾಯಿಯ ಬಣ್ಣ (ಹಸಿರು ಮತ್ತು ಹಳದಿ), ಕಾಯಿಯ ಆಕಾರ (ಉಬ್ಬಿದ ಮತ್ತು ಚಪ್ಪಟೆ) ಹಾಗೂ ಹೂವಿನ ಸ್ಥಾನ (ತುದಿ ಮತ್ತು ಪಾರ್ಶ್ವ). ಇದನ್ನು ತನ್ನ ಸಹಾಯಕರಿಗೆ ತೋಟದಲ್ಲಿ ಬೆಳೆಯಲು ತಿಳಿಸಿದ. ಇಲ್ಲಿ ಒಂದು ಗುಣ ಉದಾ: ಎತ್ತರ ಹಾಗೂ ಗಿಡ್ಡ ಅಥವಾ ಎರಡು ಗುಣ ಉದಾ: ಪರ್ಪಲ್ ಹೂ ನೀಡುವ ಉದ್ದ ಗಿಡ ಮತ್ತು ಬಿಳಿ ಹೂ ಬಿಡುವ ಗಿಡ್ಡ ಗಿಡ ಹೀಗೆ. ಇವುಗಳ ಶುದ್ಧ ತಳಿಗಳನ್ನು ತೆಗೆದುಕೊಂಡು ಅವುಗಳನ್ನು ಪರಕೀಯ ಪರಾಗಸ್ಪರ್ಶಕ್ಕೊಳಪಡಿಸಿದ. ಮೊದಲನೆಯ ಪೀಳಿಗೆಯ (F1 generation) ಎಲ್ಲಾ ಗಿಡಗಳು ಒಂದೇ ರೀತಿಯ ಗುಣಗಳನ್ನು ಹೊಂದಿದ್ದವು. ಆ ಗಿಡಗಳನ್ನು ಸ್ವಕೀಯ ಪರಾಗಸ್ಪರ್ಶ ಕ್ಕೊಳಪಡಿಸಿ ಎರಡನೆಯ ಪೀಳಿಗೆಯನ್ನು (F2 generation) ಪಡೆದ. ಇಲ್ಲಿ ಬೇರೆ ಬೇರೆ ಗುಣದ ಗಿಡಳಿದ್ದವು. ಈ ಪ್ರಯೋಗಗಳನ್ನು ಸಾಕಷ್ಟು ಜನ ನಡೆಸಿದ್ದರು ಮತ್ತು ಅವರಿಗೂ ಇದೇ ಫಲಿತಾಂಶ ಬಂದಿತ್ತು.
ಆದರೆ ಇಲ್ಲಿ ಮೆಂಡಲ್ ಒಂದು ಟ್ವಿಸ್ಟ್ ನೀಡಿದ. ಈ ಗಿಡಗಳನ್ನು ಲೆಕ್ಕ ಹಾಕಿದ. ಇಲ್ಲಿ ಅವನಿಗೆ ತಾನು ಅಲ್ಪ ಸ್ವಲ್ಪ ಕಲಿತ ಗಣಿತ (maths) ಮತ್ತು ಸಂಖ್ಯಾಶಾಸ್ತ್ರ (statistics) ಸಹಾಯಕ್ಕೆ ಬಂತು. ಇಲ್ಲಿ ವಿವಿಧ ವೈವಿಧ್ಯತೆಯ ಲೆಕ್ಕ ಹಾಕಿದ. ಒಂದೇ ಗುಣವನ್ನು ತೆಗೆದುಕೊಂಡಾಗ ವೈವಿಧ್ಯತೆ 3:1 ರ ಅನುಪಾತದಲ್ಲಿರುವುದು ಮತ್ತು ಎರಡು ಗುಣಗಳನ್ನು ತೆಗೆದುಕೊಂಡಾಗ ವೈವಿಧ್ಯತೆ 9:3:3:1 ಅನುಪಾತದಲ್ಲಿರುವುದನ್ನು ಗಮನಿಸಿದ. ಇದರ ಆಧಾರದ ಮೇಲೆ ಆತ ಗುಣಗಳು ಅನುವಂಶಿಕವಾಗಿ ವರ್ಗಾವಣೆಯಾಗುವ ರೀತಿಯನ್ನು ಎರಡು ನಿಯಮಗಳಲ್ಲಿ ನಿರೂಪಿಸಿದ. ಇದನ್ನು ಮೆಂಡಲ್ ನ ಅನುವಂಶಿಕ ನಿಯಮಗಳು (Mendel's laws of inheritance) ಎನ್ನುತ್ತಾರೆ. ಇದರಿಂದಾಗಿ ಇವತ್ತು ಮೆಂಡಲ್ ಅನುವಂಶೀಯತೆಯ ಪಿತಾಮಹ (Father of Genetics) ಕರೆಯುವಷ್ಟರ ಹಂತಕ್ಕೆ ಬೆಳೆದು ಬಿಟ್ಟಿದ್ದಾನೆ. ಎಲ್ಲರ ಹಾಗೆ ಮಡಿವಂತಿಕೆ ಮೆರೆದಿದ್ದರೆ ಹತ್ತರೊಂದಿಗೆ ಹನ್ನೊಂದಾಗಿ ಬಿಡುತ್ತಿದ್ದ.
-ದಿವಾಕರ ಶೆಟ್ಟಿ ಎಚ್, ಮಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ