ಜ್ಞಾನದ ಬಲದಿಂದ ಅಜ್ಞಾನದ ಕೇಡ ನೋಡಾ...
ಸತ್ಯದ ಹುಡುಕಾಟದಲ್ಲಿಯೂ ಮನಸ್ಸು ಮಲಿನವಾಗುತ್ತಾ ಸಾಗುತ್ತದೆ. ನಾವೇ ಬುದ್ದಿವಂತರೆಂಬ ಭ್ರಮೆ ಹುಟ್ಟಿಕೊಳ್ಳಲಾರಂಭಿಸುತ್ತದೆ. ಹೀಗೆ ಮಾತನಾಡಿದರೆ ನಮಗೆ ಮೆಚ್ವುಗೆ ಸಿಗುತ್ತದೆ ಎಂದು ಅರ್ಥವಾಗತೊಡಗುತ್ತದೆ. ಹಾಗೆ ಮಾತನಾಡಿದರೆ ನಮಗೆ ವಿರೋಧ ವ್ಯಕ್ತವಾಗುತ್ತದೆ ಎಂದೂ ಅರಿವಾಗತೊಡಗುತ್ತದೆ.
ಬೇರೆಯವರನ್ನು ಹೇಗೆ ಮೆಚ್ಚಿಸಬೇಕು,
ಬೇರೆಯವರನ್ನು ಹೇಗೆ ಉದ್ರೇಕಿಸಬೇಕು,
ಬೇರೆಯವರನ್ನು ಹೇಗೆ ಘಾಸಿಗೊಳಿಸಬೇಕು,
ಬೇರೆಯವರನ್ನು ಹೇಗೆ ಅವಮಾನಿಸಬೇಕು,
ಬೇರೆಯವರನ್ನು ಹೇಗೆ ನಿರ್ಲಕ್ಷಿಸಬೇಕು,
ಬೇರೆಯವರನ್ನು ಹೇಗೆ ಕೆಟ್ಟವರನ್ನಾಗಿ ಮಾಡಬೇಕು,
ಬೇರೆಯವರನ್ನು ಹೇಗೆ ಟಾರ್ಗೆಟ್ ಮಾಡಬೇಕು,
ಎಂದೂ ಸ್ಪಷ್ಟವಾಗುತ್ತಾ ಹೋಗುತ್ತದೆ...
ಹಾಗೆಯೇ,
ನಾವು ಹೇಗೆ ಬುದ್ದಿವಂತರೆನಿಸಿಕೊಳ್ಳಬೇಕು,
ನಾವು ಹೇಗೆ ಒಳ್ಳೆಯವರೆನಿಸಿಕೊಳ್ಳಬೇಕು,
ನಾವು ಹೇಗೆ ಜನಪ್ರಿಯರಾಗಬೇಕು,
ನಾವು ಹೇಗೆ ಹಣವಂತರಾಗಬೇಕು,
ನಾವು ಹೇಗೆ ಅಧಿಕಾರಕ್ಕೇರಬೇಕು,
ನಾವು ಹೇಗೆ ಪ್ರಚಾರ ಪಡೆಯಬೇಕು,
ನಾವು ಹೇಗೆ ದೊಡ್ಡವರೆನಿಸಬೇಕು,
ನಾವು ಹೇಗೆ ಪ್ರಶಸ್ತಿ ಪಡೆಯಬೇಕು,
ನಾವು ಹೇಗೆ ಸನ್ಮಾನಿಸಿಕೊಳ್ಳಬೇಕು ,
ಎಂಬುದೂ ಗೊತ್ತಾಗತೊಡಗುತ್ತದೆ...
ಈ ಮಧ್ಯೆ ಸತ್ಯದ ಹುಡುಕಾಟ ದಾರಿ ತಪ್ಪುತ್ತದೆ. ಆದರೆ ಇವೆಲ್ಲವನ್ನೂ ಮೀರಿ, ಸ್ವಾರ್ಥವನ್ನು ಗೆದ್ದು, ವಿಶಾಲ ಮನೋಭಾವದಿಂದ ಮನಸ್ಸನ್ನು ನಿಯಂತ್ರಣಕ್ಕೆ ಪಡೆದುಕೊಂಡು ಆತ್ಮಸಾಕ್ಷಿಗೆ ಅನುಗುಣವಾಗಿ ನಡೆದಾಗ ಮಾತ್ರ ನಾವು ಸತ್ಯದ ಹತ್ತಿರಕ್ಕೆ ಹೋಗಬಹುದು. ಇದಕ್ಕಾಗಿ ಮತ್ತೊಮ್ಮೆ ಮಗುವಿನ ಮುಗ್ಧತೆ, ಕುತೂಹಲ ಬೆಳೆಸಿಕೊಳ್ಳಬೇಕು. ಆತ್ಮ ವಂಚನೆ ಮಾಡಿಕೊಂಡು ಅಲ್ಲಿಯೇ ಕಳೆದುಹೋಗಬಾರದು. ನಾವೆಲ್ಲಾ ಸತ್ಯದ ಹುಡುಕಾಟದ ಒಂದೇ ದೋಣಿಯ ಪಯಣಿಗರಾಗೋಣ. ಆ ನಿರೀಕ್ಷೆಯಲ್ಲಿ...
- 372 ನೆಯ ದಿನ ನಮ್ಮ ಜ್ಞಾನ ಭಿಕ್ಷಾ ಪಾದಯಾತ್ರೆ ಬೆಂಗಳೂರಿನ ವಿದ್ಯಾ ನಗರ ಕ್ರಾಸ್ ನಿಂದ ಸುಮಾರು 15 ಕಿಲೋಮೀಟರ್ ದೂರದ ದೇವನಹಳ್ಳಿ ತಾಲ್ಲೂಕು ತಲುಪಿತು. ಇಂದು 8/11/2021 ಸೋಮವಾರ 373 ನೆಯ ದಿನ ಸಹ ನಮ್ಮ ಕಾಲ್ನಡಿಗೆ ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಇರುವ ದೇವನಹಳ್ಳಿಯಲ್ಲಿಯೇ ವಾಸ್ತವ್ಯ ಹೂಡಿ ಕೆಲವು ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದೆ. ನಾಳೆ 9/11/2021 ಮಂಗಳವಾರ 374 ನೆಯ ದಿನ ದೊಡ್ಡಬಳ್ಳಾಪುರ ತಾಲ್ಲೂಕು ತಲುಪಲಿದೆ.
-ವಿವೇಕಾನಂದ. ಹೆಚ್.ಕೆ., ಬೆಂಗಳೂರು
ಚಿತ್ರದಲ್ಲಿ : ಮಾರ್ಗಮಧ್ಯದಲ್ಲಿ ಇಂದು (8-11-2021) ದೆಹಲಿಯ ರಾಷ್ಟ್ರಪತಿ ಭವನದಲ್ಲಿ ಪದ್ಮಶ್ರೀ ಪ್ರಶಸ್ತಿ ಪಡೆಯುತ್ತಿರುವ ಉತ್ತರ ಕನ್ನಡದ ವೃಕ್ಷ ಮಾತೆ ಎಂದು ಹೆಸರಾದ ತುಳಸಿ ಗೌಡ ಅವರನ್ನು ಭೇಟಿಯಾದೆನು. ಸುಮಾರು 30000 ಕ್ಕೂ ಹೆಚ್ಚು ಗಿಡಗಳನ್ನು ನೆಟ್ಟ ಸಾಧನೆ ಇವರದು.