ಜ್ಞಾನಪೀಠಿ ನರೇಂದ್ರ

ಜ್ಞಾನಪೀಠಿ ನರೇಂದ್ರ

ಬರಹ

ಬೆಳಿಗ್ಗೆ ಎದ್ದು ಕೂತವನಿಗೆ ಏನೋ ಒಂದ್ ಥರಾ.. ಅಗ್ತಾ ಇತ್ತು.....
ಮನೆಯವಳಿಗೆ "ಲೈ ಪುಟ್ಟಾ" ಯಾಕೋ ಒಂಥರಾ ಅಗ್ತಾ ಇದೆ ಕಣೆ"
"ಈ ವಯಸ್ಸಲ್ಲಿ ಹಾಗೆ ಆಗೋದು ಸುಮ್ಮನೆ ಎದ್ದು ಬರ್ರೀ"
"ಲೈ ನೋವಲ್ಲ ಕಣೆ" ಎನ್ನುವಾಗಲೆ "ಮತ್ತೇನ್ರ್ರೀ ನಿಮ್ಮದು, ೬೦ ಆಗುತ್ತಾ ಬಂತು" ಎಂದವಳೆ ನನ್ನೆದುರಿಗೆ ನನ್ನ ಪ್ರೀತಿಯ ಹಾಲು ಸಕ್ಕರೆಗಳಿಲ್ಲದ ಕಾಫಿ ತಂದಿಟ್ಟಳು.
ಸಕ್ಕರೆ ಖಾಯಿಲೆ ಬಂದ ಮೇಲೆ ಸಕ್ಕರೆ ಬಿಟ್ಟಿದ್ದೆ ಹಾಲು ತುಂಬಾ ದುಬಾರಿಯೆಂದು ಮನೆಯವಳೇ ಹಾಲು ಹಾಕುವುದನ್ನು ನಿಲ್ಲಿಸಿ ಬಿಟ್ಟಿದ್ದಾಳೆ !!!!! ಆದರೂ ಅವಳ ಪ್ರಕಾರ "ನಮ್ಮೆನೆಯವರಿಗೆ ನನ್ನ ಕೈ ಕಾಫಿ ಅಂದ್ರೆ ತುಂಬಾ ಇಷ್ಟ."
ಈ ವಯಸ್ಸಲ್ಲೂ ಇವಳಿಗೆ "ಚಿನ್ನ, ರನ್ನ ಅಂದುಕೊಂಡು, ಪುಟ್ಟಾ ಅಂತ ಮಾತು ಮಾತಿಗೂ ಕರೆದುಕೊಂಡು ಜೀವನ ನೆಡೆಸ್ತಾ ಇದೇನೆ... ಇಲ್ಲವಾದಲ್ಲಿ ನಾನು ಬರೆಯುವ ಸಾಹಿತ್ಯಕ್ಕೆ ಇವಳು ಇಷ್ಟು ಹೊತ್ತಿಗೆ ನನ್ನನು ಮನೆಯಿಂದ ಹೊರಗಾಕಿರಬೇಕಿತ್ತು.
ಕಾಫಿ ಕುಡಿಯುತ್ತಾ, ಇವತ್ತಿನ ಪೇಪರ್ ಬರಲಿಲ್ಲವಲ್ಲ ಅಂತ ಕುಳಿತು, ಕಾಯಲಾರದೆ ಟಿ.ವಿ. ಶುರು ಹಚ್ಚಿದೆ, "Flash News" "ಇದೀಗ ಬಂದ ಸುದ್ದಿ..." "ನಾಡಿನ ಪ್ರಖ್ಯಾತ ಹಾಸ್ಯ ಬರಹಗಾರರಾದ ಡಾ|| ನರೇಂದ್ರರವರಿಗೆ ಈ ಬಾರಿಯ ಜ್ಞಾನಪೀಠ" ನನಗೆ ನಂಬಿಕೆ ಬರಲಿಲ್ಲ ಮತ್ತೊಮ್ಮೆ ಚಾನಲ್ ಬದಲಾಯಿಸಿ ನೋಡಿದೆ ಆದರೂ ಅದೇ ಸುದ್ದಿ!!! "ಭೇಷ್ ಭೇಷ್" ಅಂತ ಸ್ವಗತಕ್ಕೆ ಅಂದುಕೊಂಡೆ.
ಕಣ್ಣರಳಿಸಿ ನೋಡುತ್ತಿದ್ದ ನನ್ನ ಮನೆಯವಳು "ರೀ" ಎಂದಳು
ನಾನು "ಯೆಸ್!, ಹೌದು ಚಿನ್ನ! ಹೌದು! ನಾನು? ನಾನು!! ನಾನು? ಈಗ "ಜ್ಞಾನಪೀಠಿ" ನನಗೆ?? ನನಗೆ!! "ಜ್ಞಾನಪೀಠ"
"ಅದಲ್ಲ ರ್ರೀ, ನಾನು ಕೇಳಬೇಕು ಅಂಥ ಇರೋದು....ನೀವು ಈವರೆಗೂ ಬರೆದಿರೋದೆಲ್ಲ ನನ್ನ ಮೇಲೇನೆ...ನಿಮ್ಮ ಹಾಸ್ಯ ಕಥೆ, ಹಾಸ್ಯ ಕವನ, ಹಾಸ್ಯ ಲಲಿತ ಪ್ರಬಂಧ, "ಸಂಸಾರದಲ್ಲಿ ಹಾಸ್ಯ" ಎನ್ನುವ ನಿಮ್ಮ ಮಹಾಪ್ರಬಂಧ, "ರ್ರೀ ಎಷ್ಟು ಹೊತ್ತಿಗೆ ಮನೆಗೆ ಬರ್ತೀರಾ?" ನಾಟಕ ಸರಣಿ, ಹೀಗೆ ಎಲ್ಲಾನೂ ನನ್ನ ಬಗ್ಗೇನೆ ಇವೆ ಆದರೂ ನಿಮಗ್ಯಾಕೆ "ಜ್ಞಾನಪೀಠ" ಕೊಡಬೇಕು? ಇದಕ್ಕೆಲ್ಲಾ ಮೂಲ ಕಾರಣ ನಾನಲ್ವ? ನನ್ನಿಂದ ತಾನೆ ಇದೆಲ್ಲಾ ಹುಟ್ಟಿಕೊಂಡಿದ್ದು? ನನಗೆ ಕೊಡಬೇಕು ತಾನೆ? ನಾನಿಲ್ಲದೆ ನೀವು ಬರೆಯೋಕೆ ಹೇಗೆ ಸಾಧ್ಯ ಅಗ್ತ ಇತ್ತು?"

ನನ್ನ ತಲೆಗೆ ಸುತ್ತು ಬಂದು, ಕಣ್ಣುಗಳು ಕಪ್ಪಾದವು ಇಂಥ ಒಂದು ವಾದಸರಣಿಗೆ ಎನೆಂದು ಉತ್ತರ ಹೇಳುವುದು...."ಇಲ್ಲ.... ಹೌದು.... ಇಲ್ಲ...." ಎನ್ನುತ್ತಾ ಕಾಫಿ ಕೊಡೆ ಎಂದು ಹೇಳಿ ಇವಳಿಗೆ ಏನೆಂದು ಹೇಳುವುದು ಎಂದು ಯೋಚಿಸುತ್ತ ಕುಳಿತೆ......
ಕಾಫಿ ಬಂದಾದ ಮೇಲೆ ನಿಧಾನವಾಗಿ,ಮೆಲುವಾಗಿ,ನವಿರಾಗಿ ಕೆ.ಎಮ್.ಫ(KMF) ನ ಬೆಣ್ಣೆಯನೆಲ್ಲಾ ಬಾಯಲ್ಲಿ ಹಾಕಿಕೊಂಡವನಂತೆ ಮಾತನಾಡಹತ್ತಿದೆ.....["ಅಲ್ವೇ ಮತ್ತೆ? ಸಕಾ೯ರ ಕೊಟ್ಟರೂ ನನ್ನ ಹೆಂಡತಿಯಿಂದ ಅದು ಮಂಜೂರಾಗುವವರೆಗೆ ಅದು ನನ್ನದಲ್ಲ...ಸಭೆ ಕರೆದು ಸಮಾರಂಭ ಮಾಡಿ..."ನಮ್ಮ ಮನೆಯವರಿಗೆ ಮರುಳಾಗಿ ಹತ್ತಾರು ವಷ೯ಗಳಾಗಿವೆ ಎನೋ ಅಂದಿನಿಂದಲೂ ಅವರ ಹೆಸರಿನಲ್ಲಿ ನಾನು ಸಾಹಿತ್ಯ ಸೇವೆ ಮಾಡಿಕೊಂಡು ಬಂದಿದ್ದೇನೆ!!!!!, ಹೆಸರಿನಲ್ಲೇನಿದೆ ಕನ್ನಡ ತಾಯಿಯ ಸೇವೆ ಮುಖ್ಯ" ಎಂದರೆ ನನ್ನ ಜ್ಞಾನಪೀಠವೂ ಹೋಯ್ತು ಮಾನವೂ ಹೊಯ್ತು...."]...ನೋಡು ಚಿನ್ನ, ನಾನೇನೋ ನಿನ್ನ ನೋಡಿ ಕವಿತೆ ಬರೆದೆ ಕಥೆ ಬರೆದೆ ಸರಿ, ಬೇರೆಯವರು ,ಗಿಡ,ಮರ,ಗುಡ್ಡ ನೋಡಿ ಬರೀತಾರಲ್ಲ? ಆಗ ಜ್ಞಾನಪೀಠ ಯಾರಿಗೆ ಕೊಡೋದು?, ಅದು ಅಲ್ಲದೆ ಕುವೆಂಪುಗೆ ಕೊಡುವಾಗ ಪಶ್ಚಿಮ ಘಟ್ಟಗಳಿಗೆ ಕೊಡಬೇಕೋ, ಕುಕ್ರಳ್ಳಿ ಕೆರೆಗೆ ಕೊಡಬೇಕೋ ಅಂಥ ದ್ವಂದ್ವ ಆಗೊಲ್ವೆ? ಅಂದೆ.
ಅನುಮಾನನೇ ಬೇಡ....
ನಿಮಗೆ ಗೊತ್ತಿರುವಂತೆ ಕೇವಲ ೩ ಸೆಕೆಂಡ್‍ಗಳಲ್ಲಿ ನನ್ನ ಮನೆಯವಳು ಪ್ರತಿ ವಾದ ಹೂಡಿದಳು...ನೋಡಿ ನೀವು ಆಗಾಗ "f tv" ಚಾನೆಲ್ ನೋಡ್ತೀರಿ ಅಲ್ವಾ? ಅದರಲ್ಲಿ ಬಹುಮಾನ ಕೊಡೋದು ಯಾರಿಗೆ "ರೂಪದಶಿ೯"ಗೆ ತಾನೆ? ನಾನು ಇಷ್ಟೆಲ್ಲಾ ಕಷ್ಟ ಪಟ್ಟು ನಿಮ್ಮ ಜೊತೆ ಜೀವನ ಮಾಡಿರೋದಕ್ಕೆ ತಾನೆ ನಿಮಗೆ ಬರೆಯಲಿಕ್ಕೆ ಆಗಿದ್ದು? ಜ್ಞಾನಪೀಠ ಬಂದಿರೋದು? ನನಗೆ ಕಥೆ ಹೊಡಿಬೇಡಿ....ಈಗಲೇ ಫೋನ್ ಮಾಡಿ ತಿಳಿಸಿಬಿಡಿ ಅದನ್ನು ನನ್ನ ಹೆಸರಿಗೆ ಕೊಡೋಕೆ.....ಅಂದವಳೆ ಸರ-ಸರನೆ ಎದ್ದು ನೆಡೆದಳು.

ಎನಪ್ಪ ಮಾಡೋದು? ಕೈಗೆ ಬಂದ ತುತ್ತು ಬಾಯಿಗೆ ಬರ್ತಾ ಇಲ್ವಲ್ಲ! ಎಂದು ಯೋಚಿಸುತ್ತಿದ್ದವನಿಗೆ ಫೋನ್ ರಿಂಗಣಿಸಿದ್ದು ಕೇಳಿಸಿತು, ನನ್ನದೇ ಇಲ್ಲಿ ಸಮಸ್ಯೆಯಾಗಿದೆ ಯಾರದ್ರೂ ಶುಭಾಶಯ ತಿಳಿಸಿದರೆ ಏನು ಹೇಳೋದು ಎಂದುಕೊಂಡು ಫೋನ್ ಎತ್ತಿದೆ....
"ರ್ರೀ ಎಷ್ಟು ಹೊತ್ತು ರ್ರೀ ಫೋನ್ ಎತ್ತೋಕೆ? ಆಫೀಸ್‍ಗೆ ಎಷ್ಟು ಹೊತ್ತಿಗೆ ಹೋಗ್ತೀರಾ? ಲೋಕಕ್ಕೆಲ್ಲ ಚಳಿ ಹೋದರೂ ನನ್ನ ಮನೆಯವರಿಗೆ ಛಳಿ ಹೋಗಲಿಲ್ಲ, ಏಳ್ರೀ ಬೇಗ ಸ್ವಲ್ಪ ಇಡ್ಲಿಗೆ ನೆನೆ ಹಾಕಿ, ಹಾಲು ಹೆಪ್ಪು ಹಾಕಿ,ಕಸ ಹೊರಗೆ ಇಡಿ,ವಾಷಿಂಗ್ ಮೆಷೀನ್ ಬಟ್ಟೆಗಳನ್ನು ಒಣೆ ಹಾಕಿ........."

ನರೇಂದ್ರ