ಜ್ಞಾನಪೀಠ ಪ್ರಶಸ್ತಿ ಕೊಡೋರು ಯಾರು?

ಜ್ಞಾನಪೀಠ ಪ್ರಶಸ್ತಿ ಕೊಡೋರು ಯಾರು?

'ಏನೇ ಅನ್ನಿ, ಡಾ.ಎಸ್.ಎಲ್.ಭೈರಪ್ಪನವರಿಗೆ ಜ್ಞಾನಪೀಠ ಪ್ರಶಸ್ತಿ ಎಂದೋ ಬರಬೇಕಿತ್ತು. ಅವರಂಥ ಕಾದಂಬರಿಕಾರ ಮತ್ತೊಬ್ಬರಿಲ್ಲ. ಈಗಂತೂ ಕೇಂದ್ರದಲ್ಲಿ ಬಿಜೆಪಿ ಸರಕಾರವಿದೆ. ಈ ಸಲವಾದರೂ ಆ ಪ್ರಶಸ್ತಿಯನ್ನು ಡಾ.ಭೈರಪ್ಪನವರಿಗೆ ಕೊಡಬಾರದಾ ?' ಎಂದು ಕೆಲವರು ಹೇಳುವುದನ್ನು ನೀವು ಕೇಳಿರಬಹುದು. 

ಭಾರತೀಯ ಭಾಷೆಗಳಲ್ಲಿ ಅತ್ಯುತ್ತಮ ಸಾಹಿತ್ಯ ರಚನೆಯಲ್ಲಿ ತೊಡಗಿ, ಗಣನೀಯ ಸಾಹಿತ್ಯ ಸಾಧನೆ ಮಾಡಿದವರಿಗೆ ಜ್ಞಾನಪೀಠ ಪ್ರಶಸ್ತಿಯನ್ನು ಕೇಂದ್ರ ಸರಕಾರ ನೀಡುತ್ತದೆ ಎಂದು ಅನೇಕರು ಭಾವಿಸಿದ್ದರಿಂದ ಅವರಲ್ಲಿ ಈ ಪ್ರಶ್ನೆಗಳು ಇಣುಕಿರಬಹುದು. 

ಕೆಲವರಂತೂ, ಮೋದಿಯವರು ಪ್ರಧಾನಿಯಾದರೂ ಜ್ಞಾನಪೀಠ ಪ್ರಶಸ್ತಿ ಡಾ.ಭೈರಪ್ಪನವರಿಗೆ ಬಂದಿಲ್ಲ ಅಂದ್ರೆ ಏನರ್ಥ ಎಂದು ಖಾರವಾಗಿ ಪ್ರಶ್ನಿಸಿದ್ದುಂಟು. 

ಇವರೆಲ್ಲರೂ ಜ್ಞಾನಪೀಠ ಪ್ರಶಸ್ತಿಯನ್ನು ಕೊಡಮಾಡುವುದು ಕೇಂದ್ರ ಸರಕಾರ ಎಂದು ಭಾವಿಸಿದಂತಿದೆ. ಕೇಂದ್ರ ಸರಕಾರಕ್ಕೂ, ಜ್ಞಾನಪೀಠ ಪ್ರಶಸ್ತಿಗೂ ಏನೂ ಸಂಬಂಧ ಇಲ್ಲ. 

ಅಷ್ಟಕ್ಕೂ ಈ ಪ್ರತಿಷ್ಠಿತ ಪ್ರಶಸ್ತಿಯನ್ನು ಸ್ಥಾಪಿಸಿದ್ದು 'ಟೈಮ್ಸ್ ಆಫ್ ಇಂಡಿಯಾ' ಪತ್ರಿಕಾ ಸಂಸ್ಥೆ. ಅದಕ್ಕಾಗಿ ಅದು 'ಭಾರತೀಯ ಜ್ಞಾನಪೀಠ' ಎಂಬ ಟ್ರಸ್ಟನ್ನು ಸ್ಥಾಪಿಸಿದೆ. ಈ ಟ್ರಸ್ಟ್ ಪ್ರತಿ ವರ್ಷ ಇದನ್ನು ಪ್ರದಾನ ಮಾಡುತ್ತದೆ. ಈಗಲೂ ಈ ಟ್ರಸ್ಟ್  ತಜ್ಞರ ಸಲಹಾ ಸಮಿತಿಯ ಶಿಫಾರಸಿನನ್ವಯ ಈ ಪ್ರಶಸ್ತಿಯನ್ನು ಕೊಡುತ್ತಿದೆ. 

1961ರಲ್ಲಿ ಸಾಹು ಶಾಂತಿ ಪ್ರಸಾದ ಜೈನ ಅವರು ತಮ್ಮ ಐವತ್ತನೇ ಜನ್ಮದಿನದ ಸವಿನೆನಪಿಗಾಗಿ, ಸಾಹಿತ್ಯ ರಚನೆಗಾಗಿ ಅತ್ಯುನ್ನತ ಪ್ರಶಸ್ತಿ ನೀಡಬೇಕೆಂದು ನಿರ್ಧರಿಸಿದರು. ಅದರ ಫಲವೇ  ಜ್ಞಾನಪೀಠ ಪ್ರಶಸ್ತಿ. ಇದು ಭಾರತದ ನೊಬೆಲ್ ಪ್ರಶಸ್ತಿ ಎಂದು ಕರೆಯಿಸಿಕೊಳ್ಳಬೇಕು ಎಂಬುದು ಜೈನ್ ಅವರ ಆಶಯವಾಗಿತ್ತು. ಅದಕ್ಕೆ ತಕ್ಕ ಹಾಗೆ ಆ ದಿನಗಳಲ್ಲಿ ಅವರು ಒಂದು ಲಕ್ಷ ರೂಪಾಯಿ ಪ್ರಶಸ್ತಿ ಮೊತ್ತ ಮತ್ತು ಸರಸ್ವತಿಯ ಕಂಚಿನ ಪ್ರತಿಮೆಯನ್ನು ನೀಡಲು ನಿರ್ಧರಿಸಿದರು. ಈಗ ಪ್ರಶಸ್ತಿಯ ಮೊತ್ತ ಹನ್ನೊಂದು ಲಕ್ಷಕ್ಕೆ ಏರಿಕೆಯಾಗಿದೆ. 

ಈ ಪ್ರಶಸ್ತಿಯ ಮೊದಲ ಆಯ್ಕೆ ಸಮಿತಿಯ ನೇತೃತ್ವವನ್ನು ಸಂಪೂರ್ಣಾನಂದ ವಹಿಸಿದ್ದರು. ಸಮಿತಿಯಲ್ಲಿ ಕಾಳೆಲ್ಕರ್, ಕರಣ್ ಸಿಂಗ್, ಆರ್.ಆರ್.ದಿವಾಕರ, ಬಿ.ಗೋಪಾಲ ರೆಡ್ಡಿ, ಹರೇಕೃಷ್ಣ ಮಹತಾಬ್, ರಾಮ್ ಜೈನ, ಲಕ್ಷ್ಮೀ ಚಂದ್ರ ಜೈನ್ ಸದಸ್ಯರಾಗಿದ್ದರು. 

ಈ ಸಮಿತಿಯು ಮೊಟ್ಟ ಮೊದಲ ಪ್ರಶಸ್ತಿಯನ್ನು ಕನ್ನಡದ ಡಿ.ವಿ.ಗುಂಡಪ್ಪ ಸೇರಿದಂತೆ ನಾಲ್ವರ ಹೆಸರುಗಳನ್ನು ಅಖೈರುಗೊಳಿಸಿತ್ತು. ಆದರೆ ಅಂತಿಮವಾಗಿ, ಮಲಯಾಳಂ ಸಾಹಿತಿ ಜಿ.ಶಂಕರ ಕುರುಪ್ ಅವರಿಗೆ ನೀಡಿತು. ಇಲ್ಲಿಯ ತನಕ ಅರವತ್ತು ಸಾಹಿತಿಗಳಿಗೆ ಈ ಪ್ರಶಸ್ತಿಯನ್ನು ನೀಡಲಾಗಿದೆ. ಆ ಪೈಕಿ ಕನ್ನಡದ ಎಂಟು ಸಾಹಿತಿಗಳು ಸೇರಿದ್ದಾರೆ. 

ಈ ಟ್ರಸ್ಟ್ ಮೂರ್ತಿದೇವಿ ಪ್ರಶಸ್ತಿ ಎಂಬ ಇನ್ನೊಂದು ಪ್ರಶಸ್ತಿಯನ್ನು ಸಹ ಸ್ಥಾಪಿಸಿದೆ. ಈ ಪ್ರಶಸ್ತಿ ಕನ್ನಡದ ಇಬ್ಬರು ಸಾಹಿತಿಗಳಾದ ಸಿ.ಕೆ.ಎನ್.ರಾಜ ಮತ್ತು ವೀರಪ್ಪ ಮೊಯಿಲಿ ಅವರಿಗೆ ಸಂದಿದೆ. 

ಜ್ಞಾನಪೀಠ ಪ್ರಶಸ್ತಿಗೆ ಸಮನಾಗಿ, 'ಟೈಮ್ಸ್ ಆಫ್ ಇಂಡಿಯ'ಕ್ಕೆ ಪ್ರತಿಸ್ಪರ್ಧಿ ಪತ್ರಿಕೆಯಾದ ದಿಲ್ಲಿಯ 'ಹಿಂದುಸ್ಥಾನ್ ಟೈಮ್ಸ್' ಪತ್ರಿಕಾ ಸಮೂಹದ, ಕೆ.ಕೆ.ಬಿರ್ಲಾ ಪ್ರತಿಷ್ಠಾನ, 1991 ರಿಂದ 'ಸರಸ್ವತಿ ಸಮ್ಮಾನ್' ಎಂಬ ಪ್ರತಿಷ್ಠಿತ ಪ್ರಶಸ್ತಿಯನ್ನು ನೀಡುತ್ತಿದೆ. ಈ ಪ್ರಶಸ್ತಿಯ ಮೊತ್ತ ಜ್ಞಾನಪೀಠ ಪ್ರಶಸ್ತಿಗಿಂತ ಹೆಚ್ಚು, ಅಂದರೆ ಹದಿನೈದು ಲಕ್ಷ ರುಪಾಯಿ. ಮೊದಲ 'ಸರಸ್ವತಿ ಸಮ್ಮಾನ್' ಪ್ರಶಸ್ತಿಗೆ ಭಾಜನರಾದವರು ಹರಿವಂಶ ರಾಯ್ ಬಚ್ಚನ್. ಸರಸ್ವತಿ ಸಮ್ಮಾನ್ ಗೌರವಕ್ಕೆ ಈಗಾಗಲೇ ಇಪ್ಪತ್ತೊಂಬತ್ತು ಮಂದಿ ಪಾತ್ರರಾಗಿದ್ದು, ಇದನ್ನು ಪಡೆದ ಮೊದಲ ಕನ್ನಡಿಗರೆಂದರೆ, ಡಾ.ಎಸ್.ಎಲ್.ಭೈರಪ್ಪ. ವೀರಪ್ಪ ಮೊಯಿಲಿ ಅವರಿಗೂ ಈ ಪ್ರಶಸ್ತಿ ಸಂದಿದೆ.

- ವಿಶ್ವೇಶ್ವರ ಭಟ್ I ಸಂಪಾದಕರ ಸದ್ಯಶೋಧನೆ । ವಿಶ್ವವಾಣಿ ದಿನ ಪತ್ರಿಕೆಯಿಂದ ಸಂಗ್ರಹಿತ