ಜ್ಞಾನೋದಯವಾಗಬೇಕಾದ ದಿನ - ಶಿವರಾತ್ರಿ

ಜ್ಞಾನೋದಯವಾಗಬೇಕಾದ ದಿನ - ಶಿವರಾತ್ರಿ

ಜ್ಞಾನಯಜ್ಞವದು ಸಕಲಯಜ್ಞಕೆ ಮಿಗಿಲು

ಜಪತಪಕೆ ಮೇಣ್ ಹೋಮಹವನಕೆ ಮಿಗಿಲು|

ಸಕಲಫಲಕದು ಸಮವು ಆತ್ಮದರಿವಿನ ಫಲ

ಅರಿವಿನ ಪೂಜೆಯಿಂ ಪರಮಪದ ಮೂಢ||

     ಶಿವರಾತ್ರಿ- ಪರಮಾತ್ಮನನ್ನು ಅರಿಯುವ, ನಮ್ಮನ್ನು ನಾವು ಅರಿತುಕೊಳ್ಳುವ ಕ್ರಿಯೆಗೆ ಚಾಲನೆ ಕೊಡುವ ದಿನವೆಂದರೆ ಸೂಕ್ತವಾದೀತು. ಶಿವರಾತ್ರಿ ವಿಶೇಷವಾದ ಜಾಗರಣೆ ಎಂದರೆ ಜಾಗೃತರಾಗುವುದು, ಎಚ್ಚರಗೊಳ್ಳುವುದು, ಅರಿಯುವುದು ಎಂದೇ ತಿಳಿಯೋಣ, ಕೇವಲ ನಿದ್ರೆ ಮಾಡದಿರುವುದಲ್ಲ. ಶಿವ, ಶಂಭು, ಶಂಕರ, ಹರ, ಮಹಾದೇವ, ಇತ್ಯಾದಿಗಳು ಒಬ್ಬನೇ ದೇವನ ಗುಣವಿಶೇಷಗಳೇ ಹೊರತು ಮತ್ತೇನಲ್ಲ. "ಏಕಂ ಸತ್ ವಿಪ್ರಾಃ ಬಹುಧಾ ವದಂತಿ"- ಸತ್ಯ ಒಂದೇ, ಪ್ರಜ್ಞಾವಂತರು ಅದನ್ನು ಬಹು ರೀತಿಯಲ್ಲಿ ಹೇಳುತ್ತಾರೆ. 'ದೇವನೊಬ್ಬ, ನಾಮ ಹಲವು' ಎಂಬುದು ಸನಾತನ ಧರ್ಮದ ನಿಲುವಾಗಿದೆ. ಹಾಗೆಯೇ 'ಗುರಿಯೊಂದೇ, ದಾರಿಗಳು ಹಲವು' ಎಂಬುದನ್ನೂ ನಾವು ಅರಿತು ಅರಗಿಸಿಕೊಳ್ಳಬೇಕಿದೆ. ದೇವರು ಒಬ್ಬನೇ ಎಂಬುದನ್ನು ಬಹುತೇಕರು ಒಪ್ಪುತ್ತಾರೆ. ಆದರೆ ಆ ದೇವರು ನಾವು ನಂಬುವ ದೇವರು ಮಾತ್ರ - ಏಸು, ಅಲ್ಲಾಹು, ವಿಷ್ಣು, ಶಿವ, ಇತ್ಯಾದಿ- ಎನ್ನುತ್ತೇವೆ. ಗೊಂದಲ ಶುರುವಾಗುವುದು ಇಲ್ಲಿಯೇ. ಪ್ರತಿ ಧರ್ಮದ ಸಂದೇಶ 'ಮುಕ್ತಿ'ಗೆ ದಾರಿ ತೋರಿಸುವುದೇ ಆಗಿದೆ. ಜಿಜ್ಞಾಸುವಿಗೆ ಅರ್ಥವಾಗುತ್ತದೆ. ಈ ದೇವಸ್ಥಾನ, ಮಂದಿರ, ಮಸೀದಿ, ಮುಂತಾದವು, ಭಜನೆ, ಉಪಾಸನೆ, ಧ್ಯಾನ, ಪೂಜೆ, ಇತ್ಯಾದಿಗಳು ಮುಕ್ತಿಗೆ ದಾರಿ ತೋರಿಸುವ ಕೈಮರಗಳು (ದಿಕ್ಸೂಚಿಗಳು), ಸಾಧನಗಳು, ಮುಕ್ತಿ ಪಥಕ್ಕೆ ಒಯ್ಯುವ ಮೆಟ್ಟಲುಗಳು ಮಾತ್ರ ಆಗಿವೆ. ದುರದೃಷ್ಟವೆಂದರೆ ನಾವು ದಿಕ್ಸೂಚಿ ಫಲಕ, ಮೆಟ್ಟಲುಗಳೇ ಅಂತಿಮವೆಂದುಕೊಂಡು ಅಲ್ಲೇ ಜೋತು ಬಿದ್ದು ಉಳಿದುಬಿಡುತ್ತೇವೆ. ಮುಂದುವರೆದಾಗ ಮಾತ್ರ ಗುರಿ ತಲುಪಿಯೇವು. ನಾವು ಮಾಡುವ ವಿವಿಧ ಆಚರಣೆಗಳ ಉದ್ದೇಶವೂ ಇದೇ ಆಗಿದೆ. ಆದರೆ ಕೇವಲ ಆಚರಣೆಗಳಲ್ಲೇ ಮುಳುಗಿಬಿಟ್ಟರೆ ಆಚರಣೆಯ ನೈಜ ಉದ್ದೇಶ ಅರ್ಥ ಕಳೆದುಕೊಳ್ಳುತ್ತದೆ.

ಸಕಲರುದ್ಧಾರವೇ ಧರ್ಮಶಾಸ್ತ್ರದ ಸಾರ

ಪರಮಪದಕಿಹುದು ನೂರಾರು ದಾರಿ|

ದಾರಿ ಹಲವಿರಲು ಗುರಿಯದು ಒಂದೆ

ಮನ ತೋರ್ವ ದಾರಿಯಲಿ ಸಾಗು ಮೂಢ||

     ಪ್ರತಿ ಧರ್ಮವೂ ತನ್ನದೇ ಆದ ರೀತಿಯಲ್ಲಿ ಜಗತ್ತು, ಜೀವ, ದೇವರನ್ನು ವಿವರಿಸುತ್ತದೆ. ಯಾವ ಧರ್ಮ ಏನೇ ಹೇಳಲಿ, ಅವುಗಳನ್ನು ನಾವು ಹೇಗೆಯೇ ಅರ್ಥ ಮಾಡಿಕೊಳ್ಳಲಿ ಅದರಿಂದ ಜಗತ್ತು, ಜೀವ, ದೇವರು ಬದಲಾಗುವುದಿಲ್ಲ. ಆದರೆ, ಈ ಸಮಾಜದಲ್ಲಿ ಬಾಳುತ್ತಿರುವ ನಾವು, ಪಂಚಭೂತಗಳಿಂದ-ಜಲ, ವಾಯು, ಆಕಾಶ, ಅಗ್ನಿ, ನೆಲ- ಒಡಗೂಡಿ ನಮ್ಮೊಳಗೆ ಚೈತನ್ಯರೂಪಿ ಆತ್ಮವನ್ನು ಹೊಂದಿರುವ ನಾವು, ಪಂಚಭೂತಗಳಿಂದಲೇ ನಮ್ಮ ಅಭಿವೃದ್ಧಿ ಹೊಂದಿರುವುದನ್ನು, ಹೊಂದುತ್ತಿರುವುದನ್ನು ಅರಿತು ಆ ಕುರಿತು ಕೃತಜ್ಞತಾಭಾವ ಹೊಂದಿರುವುದು, ಇವೆಲ್ಲದಕ್ಕೂ ಕಾರಣಕರ್ತವಾದ ಆ ಮಹಾನ್ ಶಕ್ತಿಗೆ ನಮಿಸುವುದು ನಾವು ಮಾಡಬೇಕಾದ ಕರ್ತವ್ಯವಾಗಿದೆ. ಈ ಪಂಚಭೂತಗಳಾದ ನೆಲ, ಜಲ, ವಾಯು, ಅಗ್ನಿ, ಆಕಾಶಗಳನ್ನು ಹಾಳು ಮಾಡದೆ, ಕಲುಷಿತಗೊಳಿಸದೆ ನಮ್ಮ ಮುಂದಿನವರಿಗೂ ಉಳಿಸಿ, ಸಂರಕ್ಷಿಸುವುದು ಆ ಪರಮಾತ್ಮನ ನಿಜವಾದ ಪೂಜೆಯಾಗುತ್ತದೆ. ಎಲ್ಲರಲ್ಲೂ, ಎಲ್ಲದರಲ್ಲೂ ದೇವನನ್ನು ಕಾಣೋಣ, ಪೂಜಿಸೋಣ. ಇಂತಹ ಪೂಜೆಯಿಂದ ಆನಂದ, ತೃಪ್ತಿ ಸಿಗದೇ ಇರುವುದಿಲ್ಲ. ಆ ಮಂಗಳಮಯ ಶಿವನನ್ನು ನಮ್ಮಲ್ಲಿ ಆತ್ಮದ ಅರಿವನ್ನುಂಟು ಮಾಡು ಎಂದು ಈ ಶುಭ ಸಂದರ್ಭದಲ್ಲಿ ಪ್ರಾರ್ಥಿಸೋಣ.

ಓಂ ನಮಃ ಶಂಭವಾಯ ಚ ಮಯೋಭವಾಯ ಚ

ನಮಃ ಶಂಕರಾಯ ಚ ಮಯಸ್ಕರಾಯ ಚ

ನಮಃ ಶಿವಾಯ ಚ ಶಿವತರಾಯ ಚ || (ಯಜು. ೧೬.೪೧)

     ಈ ಮಂತ್ರದ ಅರ್ಥ ಹೀಗಿದೆ: ಶಾಂತಿ ಸ್ವರೂಪನಿಗೆ ನಮಸ್ಕಾರ, ಮತ್ತು ಹಾಗೆಯೇ ಆನಂದ ಸ್ವರೂಪನಿಗೆ ನಮಸ್ಕಾರ. ಶಾಂತಿಕಾರಕನಿಗೆ ನಮಸ್ಕಾರ. ಹಾಗೆಯೇ ಆನಂದಕಾರಕನಿಗೆ ನಮಸ್ಕಾರ. ಮಂಗಳ ಸ್ವರೂಪನಿಗೆ ನಮಸ್ಕಾರ. ಅಂತೆಯೇ ಮಂಗಳತರ ಸ್ವರೂಪನಿಗೆ ನಮಸ್ಕಾರ.

-ಕ.ವೆಂ.ನಾಗರಾಜ್.

Comments

Submitted by kavinagaraj Sat, 03/01/2014 - 19:56

In reply to by nageshamysore

ಶಿವರಾತ್ರಿ ದಿನವೇ ಕೈಮರ ಇತ್ತು. ನೀವು ನಿಧಾನವಾಗಿ ನೋಡಿದ್ದೀರಿ. ಪರವಾಗಿಲ್ಲ. ದಾರಿ ತಿಳಿಯಿತಲ್ಲಾ!!