ಜ್ಞಾನ ಆ "ಯೋಗ" ರಾಜ್ಯಕ್ಕೂ ಬಂತಾ ...!

ಜ್ಞಾನ ಆ "ಯೋಗ" ರಾಜ್ಯಕ್ಕೂ ಬಂತಾ ...!

ಬರಹ

ಶಿಕ್ಷಣ ಕ್ಷೇತ್ರದ ಸಮಸ್ಯೆಗಳು ಇಂದು ನಿನ್ನೆಯದಲ್ಲ. ರಾಜ್ಯದಲ್ಲಂತೂ ಶೈಕ್ಷಣಿಕ ವಲಯದ ಸಮಸ್ಯೆಗಳನ್ನು ಹೇಳೋದೆ ಕಷ್ಟ. ಶಾಲಾ ಸಮಯ ಬದಲಾವಣೆಯಿಂದ ಹಿಡಿದು ಸಿಇಟಿ ಪರೀಕ್ಷೆ ಏನು ಸ್ನಾತಕೋತ್ತರ ಪದವಿ ತನಕವೂ ಒಂದಿಲ್ಲೊಂದು ಸಮಸ್ಯೆಗಳು...!

ಇದು ಕರ್ನಾಟಕದ ಸಮಸ್ಯೆ ಮಾತ್ರವಲ್ಲ. ಇಡೀ ದೇಶದ ಶೈಕ್ಷಣಿಕ ಕ್ಷೇತ್ರದಲ್ಲಿ ಒಂದಿಲ್ಲೊಂದು ಸಮಸ್ಯೆಗಳು ಇದ್ದೇ ಇವೆ. ಇಂತಹ ಸಂದರ್ಭದಲ್ಲೇ ಅಂದರೆ ಎರಡು ವರ್ಷಗಳ ಹಿಂದೆ ಕೇಂದ್ರ ಸರಕಾರ ಶಿಕ್ಷಣ ಕ್ಷೇತ್ರದಲ್ಲೊಂದು ಕ್ರಾಂತಿ ಮಾಡಬೇಕು ಎಂಬ ಉದ್ದೇಶದಿಂದ ಟೆಲಿಕಾಂ ಕ್ಷೇತ್ರದ ಮಾಂತ್ರಿಕ ಸ್ಯಾಂ ಪಿಟ್ರೋಡಾ ಅಧ್ಯಕ್ಷತೆಯಲ್ಲೊಂದು ರಾಷ್ಟ್ರೀಯ ಜ್ಞಾನ ಆಯೋಗ ರಚಿಸಿತ್ತು. ಅದು ಎರಡು ವರದಿಯನ್ನು ಸಿದ್ದಪಡಿಸಿ ಕೇಂದ್ರ ಸರಕಾರಕ್ಕೆ ಮಂಡಿಸಿತ್ತು ಕೂಡಾ. ಆದರೆ ಇದು ಬಹುತೇಕ ಸುದ್ದಿಯಾಗಲಿಲ್ಲ. ರಾಷ್ಟ್ರೀಯ ಜ್ಞಾನ ಆಯೋಗದ ಮೊದಲ ವರದಿ ಕುರಿತು ನಮ್ಮ ರಾಜ್ಯದಲ್ಲಿ ಒಂದೆರಡು ಸಂಘಟನೆಗಳು ಚರ್ಚೆ ಏರ್ಪಡಿಸಿದ್ದು ಬಿಟ್ಟರೆ ಬೇರೇನೂ ಸಾಧನೆಯಾಗಲಿಲ್ಲ. ಅದರಲ್ಲೇನಿದೆ ಎಂಬ ಕುರಿತು ಸಾರ್ವಜನಿಕರಿಗೆ ಯಾವುದೇ ಮಾಹಿತಿ ಹೋಗಲಿಲ್ಲ. ಇಷ್ಟೆಲ್ಲಾ ಪೀಠಿಕೆ ಯಾಕೆ ಎಂಬ ಪ್ರಶ್ನೆಯೇ ? ಸಂಶಯವೇ ಬೇಡ... ಕರ್ನಾಟಕದ ಬಿಜೆಪಿ ಸರಕಾರ ಆಡಳಿತದಲ್ಲಿ ಏನೋ ಹೊಸತನ ಕೊಡಬೇಕು ಎಂದು ಹೊರಟಿದೆ. ಈ ಸಲದ ಬಜೆಟ್‌ನಲ್ಲಿ ಘೋಷಿಸಿದಂತೆ ಮುಖ್ಯಮಂತ್ರಿ ಯಡಿಯೂರಪ್ಪ ಅವರು ನಿನ್ನೆಯಷ್ಟೇ ರಾಜ್ಯ ಜ್ಞಾನ ಆಯೋಗವನ್ನೂ ರಚಿಸಿದ್ದಾರೆ. ಡಾ. ಕಸ್ತೂರಿರಂಗನ್‌ ಅವರ ಅಧ್ಯಕ್ಷತೆಯ ಆಯೋಗದಲ್ಲಿ ಉನ್ನತ ಶಿಕ್ಷಣ ಸಚಿವರಾದ ಅರವಿಂದ ಲಿಂಬಾವಳಿ ಸೇರಿದಂತೆ ವಿವಿಧ ಕ್ಷೇತ್ರ ಗಣ್ಯರು ಸದಸ್ಯರಾಗಿದ್ದಾರೆ.

ಸರಕಾರ ಆಯೋಗ ರಚಿಸಿದ್ದೇಕೆ ?

ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ರಾಜ್ಯದ ಯುವ ಜನರು ಅತ್ಯುತ್ತಮ ಜ್ಞಾನ ಮತ್ತು ಕೌಶಲ್ಯದಿಂದ ಸಜ್ಜುಗೊಳ್ಳಬೇಕಿದೆ. ಇದು ಸದ್ಯದ ಅಗತ್ಯ ಕೂಡಾ ಹೌದು. ಜ್ಞಾನಾಧರಿತ ಆರ್ಥಿಕತೆ ಮೂಲಕ ಪ್ರಸ್ತುತ ಶೇ. ೨೬ರಷ್ಟಿರುವ ಬಡತನದ ಪ್ರಮಾಣವನ್ನು ಶೇ. ೮ರಿಂದ ೧೦ಕ್ಕೆ ಇಳಿಸಲು ಸಾಧ್ಯ. ಆ ಮೂಲಕ ಜ್ಞಾನ ಸಮಾಜ ನಿರ್ಮಾಣ ಸಾಧ್ಯ ಎಂಬ ನಂಬಿಕೆ ಕೂಡಾ ಆಯೋಗ ರಚನೆಗೆ ಕಾರಣ. ರಾಜ್ಯದ ೧.೫ ಕೋಟಿ ಯುವಜನರ ಆಶೋತ್ತರ ಈಡೇರಿಸುವುದು ಕೂಡಾ ಸರಕಾರದ ಗುರಿ. ಸಿದ್ಧಮಾದರಿಯ ಶಿಕ್ಷಣ ಕ್ರಮದಿಂದ ಜ್ಞಾನದ ಸಿದ್ಧ ಮಾದರಿಯ ಕಡೆಗೆ ಶೈಕ್ಷಣಿಕ ವ್ಯವಸ್ಥೆಯನ್ನು ಕೊಂಡೊಯ್ಯಬೇಕು ಎಂಬ ಆಶಯ ಕೂಡಾ ಅದರದು. ಪ್ರತಿ ೩ ತಿಂಗಳಿಗೊಮ್ಮೆ ಆಯೋಗ ಸಭೆ ಸೇರಲಿದೆ. ಸಭೆಯಲ್ಲಿ ಸರಕಾರಕ್ಕೆ ನೀಡಬೇಕಾದ ಶಿಪಾರಸುಗಳ ಕುರಿತು ಅಂತಿಮ ವರದಿ ರೂಪಿಸಲಾಗುತ್ತದೆ. ಆಯೋಗ ಗಮನಿಸುವ ಕ್ಷೇತ್ರಗಳು... ಸಾಕ್ಷರತೆ, ಶಾಲಾ ಶಿಕ್ಷಣ, ವೃತ್ತಿ ಶಿಕ್ಷಣ, ಉನ್ನತ ಶಿಕ್ಷಣ, ವಿಜ್ಞಾನ ಮತ್ತು ತಂತ್ರಜ್ಞಾನ, ಎಂಜಿನಿಯರಿಂಗ್ ಮತ್ತು ವೈದ್ಯಕೀಯ ಶಿಕ್ಷಣ, ಮ್ಯಾನೇಜ್‌ಮೆಂಟ್‌, ಕಾನೂನು, ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ, ಕೈಗಾರಿಕೆ ಮತ್ತು ಉದ್ಯಮಶೀಲತೆ ಇತ್ಯಾದಿ.. ಆಯೋಗ ಸರಕಾರಕ್ಕೆ ವರದಿ ಕೊಟ್ಟು ಸುಮ್ಮನಾಗಲ್ಲ. ಶೈಕ್ಷಣಿಕ ನೀತಿ ರೂಪಿಸುವಲ್ಲಿ ಯಾವ ಅಂಶಗಳನ್ನು ಗಮನಿಸಬೇಕು ಎಂಬುದನ್ನು ಕಾಲಕಾಲಕ್ಕೆ ಸರಕಾರದ ಗಮನಕ್ಕೆ ತರುವ ಪ್ರಯತ್ನ ಮಾಡುತ್ತದೆ ಎಂದು ಸ್ವತಃ ಡಾ.ಕಸ್ತೂರಿ ರಂಗನ್‌ ಅವರೇ ಹೇಳಿದ್ದಾರೆ.

ಆ"ಯೋಗ" ರಾಜ್ಯಕ್ಕೂ...

 ಮೊನ್ನೆ ಮೊನ್ನೆ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಗಾಗಿ ರಾಜ್ಯಕ್ಕೆ ಆಗಮಿಸಿದ್ದ ಗುಜರಾತ್‌ ಮುಖ್ಯಮಂತ್ರಿ ನರೇಂದ್ರ ಮೋದಿ ಬೆಂಗಳೂರಿನ ಎಫ್‌ಕೆಸಿಸಿಐ ಸದಸ್ಯರ ನಡುವೆ ಒಂದಿಷ್ಟು ಕನಸು ಬಿತ್ತಿ ಹೋಗಿದ್ದರು. ಅದರಲ್ಲಿ ಗುಜರಾತ್‌ನ್ನು ಸ್ವತಂತ್ರವಾಗಿ ಬೆಳೆಸುವುದಾಗಿ ಘೋಷಿಸಿದ್ದರು ಕೂಡಾ. ಜಗತ್ತಿಗೆ ಮೊದಲ ಫೋರೆನ್ಸಿಕ್‌ ವಿಶ್ವ ವಿದ್ಯಾಲಯ ಗುಜರಾತ್‌ನಲ್ಲಿ ಸ್ಥಾಪನೆಯಾಗಲಿದೆ. ಹಾಗೆಯೇ ಇಂದಿನ ಅಪರಾಧ ಜಗತ್ತನ್ನು ಸಮರ್ಥವಾಗಿ ಎದುರಿಸಲು ಪೊಲೀಸ್‌ ಶಕ್ತಿ ಬಲಪಡಿಸುವ ನಿಟ್ಟಿನಲ್ಲಿ ರಕ್ಷಣಾ ಶಕ್ತಿ ವಿಶ್ವವಿದ್ಯಾನಿಲಯ ಸ್ಥಾಪನೆಯೂ ಗುಜರಾತ್ ಸರಕಾರದ ಗುರಿ ಎಂದಿದ್ದರು. ಯಾವ ರೀತಿ ವೈದ್ಯರಾಗಬೇಕಾದರೆ ಎಂಬಿಬಿಎಸ್ ಓದಬೇಕೋ ಹಾಗೆಯೇ ವೃತ್ತಿಪರತೆ ಇರುವ ಪೊಲೀಸ್‌ ಆಗಬೇಕಾದರೆ ಈ ರಕ್ಷಣಾ ಶಕ್ತಿ ವಿಶ್ವವಿದ್ಯಾಲಯದಲ್ಲಿ ಕಲಿಕೆ ಆಗಬೇಕು ಎಂದು ಹೇಳಿದ್ದರು. ಗುಜರಾತ್ ಸರಕಾರದ ಈ ಎಲ್ಲ ಅಭಿವೃದ್ಧಿ ಪರ ಬೆಳವಣಿಗೆ ಬಗ್ಗೆ ನಮ್ಮ ರಾಜ್ಯದ ಜನರೂ ಗಮನಹರಿಸಿ ನೋಡಬೇಕಾಗಿದೆ. ಎಲ್ಲೇ ಆಗಿದ್ದರೂ ಒಳ್ಳೆಯ ಅಂಶ ಗುರುತಿಸಿ ಅಳವಡಿಸುವುದು ಸರಿಯಲ್ಲವೇ ? ರಾಜ್ಯ ಬಿಜೆಪಿ ಸರಕಾರ ಒಂದೊಮ್ಮೆ ಗುಜರಾತ್‌ ಮಾದರಿ ಎಂದಿದ್ದು ಇದನ್ನೇ ಆಗಿದ್ದರೆ ಅದಕ್ಕಿಂತ ಹರ್ಷದಾಯಕ ಸಂಗತಿ ಬೇರೆ ಬೇಕಿಲ್ಲ ಅಲ್ಲವೇ ?

- ಉಮೇಶ್‌ ಕುಮಾರ್‍