ಜ್ಞಾನ ಫಕೀರ ಪ್ರೊ.ಎಂ. ಕರೀಮುದ್ದೀನ್
ಕಥೆಗಾರ, ಉಪನ್ಯಾಸಕ ಡಾ. ಆನಂದ ಗೋಪಾಲ್ ಅವರು ಬರೆದ ‘ಜ್ಞಾನ ಫಕೀರ ಪ್ರೊ. ಎಂ ಕರೀಮುದ್ದೀನ್' ಎಂಬ ಕೃತಿ ಇತ್ತೀಚೆಗೆ ಬಿಡುಗಡೆಯಾಗಿದೆ. ಟಿಪ್ಪು ಸುಲ್ತಾನ್ ವಂಶಸ್ತನಾಗಿದ್ದುಕೊಂಡು, ಸುಮಾರು ೬ ಭಾಷೆಯಲ್ಲಿ ಪಾಂಡಿತ್ಯವನ್ನು ಹೊಂದಿದ್ದು, ಖ್ಯಾತ ನಾಮ ಸಾಹಿತಿಗಳ ಸಾಂಗತ್ಯದಲ್ಲಿದ್ದೂ ಸರಳ, ಸಜ್ಜನಿಕೆಯಿಂದ ಜಾತ್ಯಾತೀತವಾಗಿ ಬದುಕಿದ ಕರೀಮುದ್ದೀನ್ ಅವರ ಪರಿಚಯ ಈ ಕೃತಿಯಲ್ಲಿ ಮಾಡಲಾಗಿದೆ. ಇವರ ಬಗ್ಗೆ ಲೇಖಕರಾದ ಡಾ. ಆನಂದ್ ಅವರು ತಮ್ಮ ಮುನ್ನುಡಿಯಲ್ಲಿ ಬರೆದದ್ದು ಹೀಗೆ…
“ ಪ್ರೊ. ಎಂ. ಕರೀಮುದ್ದೀನ್ ಸಾಹೇಬರ ಹೆಸರು ಹಳೇ ಮೈಸೂರು ಭಾಗದಲ್ಲಿ ಪ್ರಸಿದ್ಧವಾದುದು. ಅವರ ಪ್ರಸಿದ್ಧಿಗೆ ಎರಡು ಕಾರಣ: ಒಂದು, ಶ್ರೀರಂಗಪಟ್ಟಣ ಇತಿಹಾಸದ ಬಗೆಗೆ ಅವರಿಗಿರುವ ವಿಫುಲ ಜ್ಞಾನ. ಎರಡನೇಯದು ಹಣ, ಕೀರ್ತಿ, ಪದವಿಗಳನ್ನು ನಿರಾಕರಿಸಿ ಸರಳವಾಗಿ ಬದುಕಿದ ಸಂತತನ. ಶ್ರೀರಂಗಪಟ್ಟಣ ಸೀಮೆಯಲ್ಲಿ ಅವರ ಹೆಸರು ತಿಳಿಯದ ಜನವಿಲ್ಲ. ಅವರ ಬಗೆಗೆ ದಂತಕತೆಗಳೇ ಹುಟ್ಟಿಕೊಂಡಿವೆ. ಅವರಷ್ಟು ಧರ್ಮಗಳನ್ನು ಅಧ್ಯಯನ ಮಾಡಿದವರಿಲ್ಲ ಎನ್ನುತ್ತಾರೆ. ಎಲ್ಲ ಧರ್ಮಗಳ ಸಾರವನ್ನು ಕ್ರೋಢೀಕರಿಸಿ ಆಕರ್ಷಕ ಕತೆಗಳ ದ್ವಾರಾ ಹೇಳುವ ಅವರ ಶೈಲಿ, ಅವರಿಗಷ್ಟೇ ದಕ್ಕಿದ ವರ ಎನ್ನುವವರಿದ್ದಾರೆ. ಮಾನವಧರ್ಮ' - ಅವರು ನಂಬಿಕ ಏಕೈಕ ಧರ್ಮ. ಜಾತಿ-ಧರ್ಮ-ಭಾಷೆ-ಪ್ರಾಂತ-ಲಿಂಗಭೇದಗಳಿಗೆ ಅವರು ಜಾಗ ಮಾಡಿಕೊಟ್ಟವರಲ್ಲ. ಶ್ರೀರಂಗಪಟ್ಟಣದ ಒಳಭಾಗದಲ್ಲಿರುವ ಗಂಜಾಂ ಊರಿನಲ್ಲಿ ೯೧ ವರ್ಷಗಳ ನಿಡುಗಾಲ ಜೀವಿಸಿ ಕಳೆದ ಸೆಪ್ಟೆಂಬರ್ ತಿಂಗಳ ಎರಡನೇ ತಾರೀಖು ತೀರಿಕೊಂಡರು.
ಪ್ರೊ. ಕರೀಮುದ್ದೀನ್ ನಮ್ಮ ಕಾಲದಲ್ಲಿದ್ದರು ಎಂಬುದೇ ಒಂದು ಸೋಜಿಗ. ಏನೆಲ್ಲಾ ಆಕರ್ಷಣೆಗಳಿರುವ ಈ ಹೊತ್ತು, ಐದು ಪ್ಯಾಂಟು, ಆರು ಶರ್ಟು, ಸಾಧಾರಣ ಚಪ್ಪಲಿ, ಫ್ಯಾನಿಲ್ಲದ ಕೋಣೆ, ಹಾಸಿಗೆ, ಅದರ ಮೇಲೊಂದು ಹಳೆಸೀರೆಯ ಮೆತ್ತೆ ಹಾಗೂ ಅಸಂಖ್ಯಾತ ಪುಸ್ತಕಗಳೊಂದಿಗೇ ಅವರು ಜೀವಿಸಿ ಹೋದರು ! ಇವರ ಬೆನ್ನಿಗೆ ಟಿಪ್ಪು ಸುಲ್ತಾನ್ ವಂಶಸ್ಥರು ಎಂಬ ಪ್ರಭಾವವಿತ್ತು. ಅರ್ಧ ಡಜನ್ ಭಾಷೆಗಳ (ಕನ್ನಡ, ಇಂಗ್ಲಿಷ್, ಸಂಸ್ಕೃತ, ಹಿಂದಿ, ಉರ್ದು, ಪರ್ಷಿಯಾ) ಆಳವಾದ ಪರಿಚಯವಿತ್ತು. ಕುಟುಂಬದ ಹೊರಗೆ ಮುಸಲ್ಮಾನ ಎಂಬ ಅವಮಾನ ನುಂಗಬೇಕಾಯಿತು.”
ಕರೀಮುದ್ದೀನ್ ಅವರು ಬಾಳಿ ಬದುಕಿದ ಗಂಜಾಂನ ಶುಕ್ರವಾರ ಪೇಟೆ ಬೀದಿಯಲ್ಲಿರುವ ವೆಲ್ಲೂರು ಮಾದರಿಯ ಹೆಂಚಿನ ಮನೆಗೆ ಬರೋಬ್ಬರಿ ನೂರಾ ಐವತ್ತು ವರ್ಷಗಳ ಇತಿಹಾಸವಿದೆ. ಈ ಮಣ್ಣಿನ ಮನೆಗೂ ಟಿಪ್ಪು ಸುಲ್ತಾನನಿಗೂ ಬೇರ್ಪಡಿಸಲಾಗದ ರಕ್ತದ ನಂಟು ಇದೆ. ಟಿಪ್ಪುವಿನ ಇಬ್ಬರು ಬಾಮೈದರು ಕರೀಮುದ್ದೀನ್ ಅವರ ಪೂರ್ವಿಕರು. ಇವರ ಅಜ್ಜಂದಿರು ಕ್ಯಾಲಿಗ್ರಾಫಿ ಬರವಣಿಗೆಯಲ್ಲಿ ಸಿದ್ಧಹಸ್ತರು. ಉರ್ದು ಹಾಗೂ ಪರ್ಷಿಯಾ ಭಾಷೆಯಲ್ಲಿ ಕುರಾನನ್ನು ಅವರು ಬಹಳ ಸೊಗಸಾಗಿ ಬರೆಯುತ್ತಿದ್ದರು. ಕರೀಮುದ್ದಿನ್ ಅವರ ತಂದೆ ಹಕೀಂ ಅಬ್ದುಲ್ ಅಲಿ ಇವರು ಯುನಾನಿ ವೈದ್ಯರಾಗಿದ್ದರು. ಇವರ ಪತ್ನಿ ರಹೀಮಾ ಉನ್ನೀಸಾ ಬಹಳ ಧೈರ್ಯವಂತ ಹೆಣ್ಣು ಮಗಳು. ಕರೀಮುದ್ದೀನ್ ಹುಟ್ಟಿ ಆರು ತಿಂಗಳ ಮಗುವಾಗಿರುವಾಗ ಇವರ ತಂದೆ ನಿಧನರಾಗುತ್ತಾರೆ. ಇವರ ತಾಯಿ ನಾಲ್ಕು ಮಂದಿ ಮಕ್ಕಳನ್ನು ಸಾಕಲು ಪಟ್ಟ ಪಾಡು ಅಷ್ಟಿಷ್ಟಲ್ಲ. ಇದೇ ಕಾರಣದಿಂದ ಎಂದೂ ಭಾವುಕರಾಗದ ಕರೀಮುದ್ದೀನ್ ಅವರು ತಮ್ಮ ತಾಯಿಯನ್ನು ನೆನಪಿಸಿಕೊಳ್ಳುವಾಗ ಭಾವುಕರಾಗುತ್ತಿದ್ದರಂತೆ.
ಬಾಲ್ಯದಲ್ಲಿ ಕರೀಮುದ್ದೀನ್ ಅವರನ್ನು ಉರ್ದು ಶಾಲೆಗೆ ಸೇರಿಸಲಾಗಿತ್ತು. ಅಲ್ಲಿ ನಡೆದ ವಿಶೇಷ ಘಟನೆಯೊಂದು ಕರೀಮುದ್ದೀನ್ ಅವರನ್ನು ಅಲ್ಲಿಂದ ಹೊರಬೀಳುವಂತೆ ಮಾಡಿತು. ಶಾಲೆ ಕಳೆದುಕೊಂಡ ಬಾಲಕನ ನೋವು ಅರಿತುಕೊಂಡ ಕನ್ನಡ ಶಾಲೆಯ ಮಾಸ್ತರರಾದ ಜವರಯ್ಯನವರು ಆತನನ್ನು ಕನ್ನಡ ಮಾಧ್ಯಮ ಶಾಲೆಗೆ ಸೇರಿಸಿದರು. ಹೀಗಾಗಿ ಬಹಳ ಸ್ಪಷ್ಟವಾಗಿ ಕನ್ನಡ ಮಾತನಾಡಲು ಬರೆಯಲು ಕಲಿತರು. ಮೈಸೂರಿನ ಮಹಾರಾಜಾ ಕಾಲೇಜಿನಲ್ಲಿ ಅಧ್ಯಯನ ಮಾಡುವಾಗ ಕುವೆಂಪು, ಬಿ ಎಂ ಶ್ರೀ, ತೀ ನಂ ಶ್ರೀ, ತ ಸು ಶಾಮರಾಯ, ಸುಜನಾ ಮುಂತಾದವರು ಇವರ ಗುರುಗಳಾಗಿದ್ದರು. ಪ್ರೊ ಹಂಪಮಾ, ಕಮಲಾ ಹಂಪನಾ, ಅ ರಾ ಮಿತ್ರ, ಎನ್ ಎಸ್ ಲಕ್ಷ್ಮೀನಾರಾಯಣ ಭಟ್ಟ ಮೊದಲಾದವರು ಇವರ ಸಹಪಾಠಿಗಳಾಗಿದ್ದರು. ಪ್ರಾಂಶುಪಾಲರಾಗಿದ್ದ ಕುವೆಂಪು ಅವರ ನಿರ್ದೇಶನದಂತೆ ಇವರು ಕನ್ನಡ ಆನರ್ಸ್ ಕಲಿತರು. ಎಂ ಎ ಸ್ನಾತಕೋತ್ತರ ಪದವಿ ಮುಗಿದ ಬಳಿಕ ಮಹಾರಾಜಾ ಕಾಲೇಜಿನಲ್ಲಿ ಹಂಗಾಮಿ ನೌಕರಿ ಮಾಡಿ, ನಂತರ ಮಡಿಕೇರಿ ಕೊನೆಗೆ ಮಂಡ್ಯದ ಕಾಲೇಜುಗಳಲ್ಲಿ ಉಪನ್ಯಾಸಕರಾಗಿ ಅಲ್ಲೇ ನಿವೃತ್ತರಾದರು. ನಿವೃತ್ತಿಯ ಬಳಿಕ ಊರಿಗೆ ತೆರಳಿ ಹಣ್ಣಿನ ಕೃಷಿ ಮಾಡಿ, ಬೆಳೆದ ಹಣ್ಣುಗಳನ್ನು ಹಂಚುತ್ತಾ ತಮ್ಮ ಜೀವನ ಸಾಗಿಸಿದರು.
ಕರೀಮುದ್ದೀನ್ ಅವರು ನೈಜ ರೀತಿಯಲ್ಲಿ ಜಾತ್ಯಾತೀತರಾಗಿದ್ದರು. ಅವರೆಂದೂ ಕಡ್ಡಾಯವಾದ ನಮಾಜು ಮಾಡಲು ಹೋಗಲಿಲ್ಲ. ಜೀವನ ಪರ್ಯಂತ ಅವಿವಾಹಿತರಾಗಿಯೇ ಉಳಿದರು. ಕರಿಮುದ್ದೀನ್ ಅವರ ಅಕ್ಕನ ಮಗಳಾದ ಫರ್ಹಿನ್ ತಾಜ್ ಗೆ ಮಾತ್ರ ಅಜ್ಜನ ಬಳಿ ಸಲುಗೆಯಿತ್ತು. ಉಳಿದ ಎಲ್ಲಾ ಸಂಬಂಧಿಕರಿಗೆ ಅವರೆಂದರೆ ಭಯ ಮಿಶ್ರಿತ ಗೌರವ. ತಮ್ಮ ಮೊಮ್ಮಗಳಿಗೆ ಯಾವತ್ತೂ ಬುರ್ಖಾ ಧರಿಸುವಂತೆ ಬಲವಂತ ಮಾಡಲಿಲ್ಲ. ದೇವಾಲಯಗಳಿಗೆ ಏಕೆ ಹೋಗುವೆ ಎಂದು ಗದರಲಿಲ್ಲ. ಫರ್ಹಿನ್ ತಾಜ್ ಅವಳಿಗೆ ಅವರೊಂದು ಗೈಡ್, ಫ್ರೆಂಡ್ ಹಾಗೂ ಫಿಲಾಸಫರ್ ಆಗಿದ್ದರೆಂದರೆ ತಪ್ಪಾಗದು.
ಕರೀಮುದ್ದೀನ್ ಅವರ ಸಂಪೂರ್ಣ ಜೀವನದ ಕಥೆಯನ್ನು ಹತ್ತಿರದಿಂದ ಕಂಡ ಅವರ ಸಹಪಾಠಿ, ಸಾಹಿತಿ ಅ ರಾ ಮಿತ್ರರ ಬಳಿ ಈ ಕೃತಿಯ ಲೇಖಕರು “ಕರೀಮುದ್ದೀನ್ ಸಾಹೇಬರಿಗೆ ಅರ್ಧ ಡಜನ್ ಭಾಷೆಗಳಲ್ಲಿ ಪ್ರಾವೀಣ್ಯವಿತ್ತು. ಓದಿನ ಬಲವಿತ್ತು. ಬರಹ ಸಿದ್ಧಿಸಿತ್ತು. ಅದಾಗ್ಯೂ ಅವರೇಕೆ ಹೆಚ್ಚು ನಿಮ್ಮಗಳಂತೆ ಹೆಸರು ಮಾಡಲಾಗಲಿಲ್ಲ?” ಎಂದು ಕೇಳಿದಾಗ ಮಿತ್ರರು ಏನನ್ನೋ ನೆನಪಿಸಿಕೊಂಡಂತೆ ಅರ್ಧ ನಿಮಿಷ ಸುಮ್ಮನಾಗುತ್ತಾರೆ. ಅನಂತರ ಹೇಳಿದರು “ ನಾವೆಲ್ಲಾ ಓದಿನ ನಂತರ ನಮ್ಮ ಗುರುಗಳ ಶಿಫಾರಸ್ಸು ಪಡೆದು ಲೆಕ್ಚರರ್ ಕೆಲಸ ಪಡೆದುಕೊಂಡೆವು. ಈ ಕರೀಮುದ್ದೀನ್ ಅಪ್ಪಿತಪ್ಪಿಯೂ ಇಂತಹ ಶಿಫಾರಸ್ಸನ್ನು ಕೇಳಿಕೊಂಡು ಗುರುಗಳ ಮನೆ ಹೊಸ್ತಿಲು ತುಳಿಯಲಿಲ್ಲ. ಅತಿ ಎನ್ನುವಷ್ಟು ಸ್ವಾಭಿಮಾನ ಆತನಲ್ಲಿತ್ತು. ಜೊತೆಗೆ ತಾನೇ ಪ್ರಯತ್ನ ಮಾಡುವ ವಿಷಯದಲ್ಲೂ ಆಸಕ್ತಿ ಕಳೆದುಕೊಂಡ. ಶಿವ ಜೋಳಿಗೆ ಕೊಟ್ಟ ನಿಜ. ಆದರೆ ಅದನ್ನು ಹಿಡಿದು ಊರೂರು ಸುತ್ತಬೇಕು. ಕರೀಮುದ್ದೀನ್ ಜೋಳಿಗೆ ಹಿಡಿದು ಸುತ್ತುವ ಆಳಾಗಲಿಲ್ಲ. ಇದು ಗುಣವೋ, ದೋಷವೋ ಹೇಳುವುದು ಕಷ್ಟ !”
ಇದು ಪ್ರೊ. ಕರೀಮುದ್ದಿನ್ ಸಾಹೇಬರು ಬದುಕಿದ ರೀತಿ. ೫೦ ಪುಟಗಳ ಈ ಪುಟ್ಟ ಕೃತಿಯನ್ನು ಲೇಖಕರು ‘ಧರ್ಮ-ಧರ್ಮಗಳ ನಡುವೆ ಸೇತುವೆ ಕಟ್ಟಿ ಇಲ್ಲಿಯವರು - ಅಲ್ಲಿಯವರು ಕಲೆತು ಜೀವಿಸುವ ಕನಸು ಕಂಡ ಎಲ್ಲ ಮನೀಷಿಗಳಿಗೆ" ಅರ್ಪಣೆ ಮಾಡಿದ್ದಾರೆ. ಡಾ. ಆನಂದ್ ಗೋಪಾಲ್ ಅವರು ಮರೆತು ಹೋದ ಅಪರೂಪದ ವ್ಯಕ್ತಿಯನ್ನು ಕನ್ನಡ ಸಾಹಿತ್ಯ ಲೋಕಕ್ಕೆ ಪರಿಚಯಿಸುವ ಸ್ತುತ್ಯಾರ್ಹ ಕಾರ್ಯ ಮಾಡಿದ್ದಾರೆ.