ಜ್ಞಾನ, ಭಾವ, ಕರ್ಮ (ಭಾಗ 1)
ಇಂದು ನಾವು ಜ್ಞಾನ ಶ್ರೇಷ್ಠವೋ? ಕರ್ಮ ಶ್ರೇಷ್ಠವೋ ? ಅಥವಾ ಭಾವ ಶ್ರೇಷ್ಠವೋ ? ಅನ್ನುವುದರ ಬಗ್ಗೆ ತಿಳಿದುಕೊಳ್ಳೋಣ...
ಜ್ಞಾನ ಇದ್ದವರು ಉಳಿದವರನ್ನು ಉಪೇಕ್ಷೆ ಮಾಡುತ್ತಾರೆ. ಉದಾಹರಣೆಗೆ, ಒಂದು ಕುಟುಂಬ ಇತ್ತು. ಅವರಿಗೆ ಮೂರು ಜನ ಮಕ್ಕಳು. ಮೊದಲನೆಯವನು ತುಂಬಾ ಬುದ್ಧಿವಂತ. ಓದಿ ಕೆಲಸದ ಮೇಲೆ ಅಮೆರಿಕಕ್ಕೆ ಹೋದನು. ಮನೆಗೆ ಬರಲಿಲ್ಲ. ಮನೆಯವರ ಜೊತೆ ಮಾತೇ ಇಲ್ಲ. ಈತ ಹಣದ ಹಿಂದೆ ಬಿದ್ದು, ತಂದೆ ತಾಯಿ ಬಿಟ್ಟಿದ್ದನು. ಕೊನೆಯವನು ಅಷ್ಟು ಬುದ್ಧಿವಂತನಲ್ಲ, ಕಟ್ಟು ಮಸ್ತಾದ ದೇಹ. ಚೆನ್ನಾಗಿ ದುಡಿದು, ಹಣ ಗಳಿಸಿ, ಆಸ್ತಿ ಅಂಗಡಿ ಮಾಡಿಕೊಂಡಿದ್ದನು. ಮಧ್ಯದವನು ಪ್ರೇಮದ ವ್ಯಕ್ತಿ. ಅಷ್ಟು ಜಾಣನೂ ಅಲ್ಲ, ಕಟ್ಟು ಮಸ್ತಾದ ದೇಹನೂ ಇಲ್ಲ. ಅಷ್ಟು ಹಣವನ್ನು ಗಳಿಸುತ್ತಿರಲಿಲ್ಲ. ಆದರೆ ತಂದೆ ತಾಯಿ ಸೇವೆ ಮಾಡುತ್ತಿದ್ದನು. ತಂದೆ ಹಿರಿಯ ಮಗನ ಬಣ. ಬುದ್ಧಿವಂತ ಅಂತ ಹಿರಿಯ ಮಗನ ಮೇಲೆ ಪ್ರೀತಿ ಹೆಚ್ಚು. ಹಣ ಗಳಿಸಿದ್ದಾನೆ ಅಂತ ತಾಯಿ ಕಿರಿಯ ಮಗನ ಮೇಲೆ ಪ್ರೀತಿ. ಮೂರನೆಯವನು ಪ್ರೀತಿಯಿಂದ ಸೇವೆ ಮಾಡುತ್ತಾ ಇದ್ದಾನೆ. ಆತನ ಬಗ್ಗೆ ಯಾರಿಗೂ ಕಾಳಜಿ ಇಲ್ಲ. ಬದುಕು ಹೀಗೆ ನಡೆದಿದೆ.
ಕೆಲವರು ಜ್ಞಾನ ಶ್ರೇಷ್ಠ ಎಂದು ಅದನ್ನೇ ಅನುಸರಿಸುತ್ತಾರೆ. ಕೆಲವರು ಕರ್ಮ ಶ್ರೇಷ್ಠ ಎಂದು ಅದನ್ನೇ ಅನುಸರಿಸುತ್ತಾರೆ. ನಮ್ಮ ಬದುಕು ಜ್ಞಾನ ಮತ್ತು ಕರ್ಮ ಇವೆರಡರಿಂದಲೂ ಕೂಡಿದೆ. ಇವು ಬದುಕಿನ ಎರಡು ಪ್ರಧಾನ ಮುಖಗಳು. ಜ್ಞಾನ ಅಂದರೆ ತಿಳಿದುಕೊಳ್ಳುವುದು. ಕರ್ಮ ಅಂದರೆ ಕಾರ್ಯ, ಕೆಲಸ. ನಾವು ಹೂವು ನೋಡುತ್ತೇವೆ. ಅದರ ಜ್ಞಾನ ಮಾಡಿಕೊಳ್ಳುತ್ತೇವೆ. ಜ್ಞಾನ ಬಹಳ ಮಹತ್ವದ್ದು ಬದುಕಿನಲ್ಲಿ. ಆದರೆ ಆ ಹೂ ಬಳ್ಳಿಗೆ ನೀರು ಹಾಕಬೇಕು, ರಕ್ಷಿಸಬೇಕು. ಇದು ಕೆಲಸ. ಹೀಗೆ ಎರಡರಿಂದ ಬದುಕು ಸಾಗುತ್ತದೆ. ಜ್ಞಾನ ಮತ್ತು ಕರ್ಮದ ಮಧ್ಯದಲ್ಲಿ ಭಾವ ಬಹಳ ಮಹತ್ವದ್ದು. ಗಿಡ ಬೆಳೆಸುವುದು, ರಕ್ಷಿಸುವುದು ಕೆಲಸ. ಆ ಹೂವು ಆಸ್ವಾದನೆ ಮಾಡಿ ತಿಳಿದುಕೊಳ್ಳುವುದು ಜ್ಞಾನ. ಹೂವನ್ನು ಪ್ರೀತಿಸುತ್ತೇವೆ. ಸಂತೋಷ ಪಡುತ್ತೇವೆ. ಇದು ಭಾವ. ಜ್ಞಾನ ಮತ್ತು ಕರ್ಮದ ಮಧ್ಯದಲ್ಲಿ ಭಾವ. ಇದು ಬಹಳ ಮಹತ್ವ. ಜೀವನ ಸಾಗಬೇಕಾದರೆ ಈ ಮೂರು ಬೇಕಾಗುತ್ತದೆ. ಜ್ಞಾನ ಇಲ್ಲ ಬದುಕು ನಡೆಯೋದಿಲ್ಲ. ಕೆಲಸ ಇಲ್ಲ ಬದುಕು ನಡೆಯುವುದಿಲ್ಲ. ನಡುವೆ ಭಾವ ಇಲ್ಲದಿದ್ದರೆ ಏನಿದ್ದರೆ ಏನು ?. ಈ ಮೂರು ಬಹಳ ಅವಶ್ಯ. ನಾವು ಬಡವರೋ, ಶ್ರೀಮಂತರೋ, ಈ ದೇಶದವರೋ, ಬೇರೆ ದೇಶದವರೋ ಈ ಮೂರು ಬಹಳ ಮುಖ್ಯ.
ಒಂದು ನೋಡೋದು. ಒಂದು ಮಾಡೋದು. ಒಂದು ಅನುಭವಿಸುವುದು. ಒಂದು ಗಿಡ ಇದ್ದರೆ ಕೆಳಗೆ ಬೇರು, ಮೇಲೆ ಕೊಂಬೆ ರಂಬೆ ಎಲೆ ಆಮೇಲೆ ಹೂವು ಹಣ್ಣು ಎಲ್ಲ ಇರಬೇಕು. ಇದರಲ್ಲಿ ಎಲ್ಲಾ ಮುಖ್ಯ. ಯಾವುದು ಮೇಲಲ್ಲ ಯಾವುದು ಕೀಳಲ್ಲ. ಬೇರು ಕೆಳಗಿದ್ದಾವೇ ಎಂದು ಉಪೇಕ್ಷೆ ಮಾಡಿದರೆ ಗಿಡ ಮರೆಯಾಗುತ್ತದೆ. ಗೌರವ ಇಲ್ಲ ಅಂತ ಕೆಲಸ ನಿಲ್ಲಿಸಿದರೆ, ಗಿಡ ಹೇಗೆ ಬೆಳೆಯುತ್ತದೆ?. ಹೂವು ಹಣ್ಣು ಹೇಗೆ ಬರುತ್ತದೆ ?. ಕೆಳಗಿನದು ಮಹತ್ವದಲ್ಲ. ಮೇಲಿನದು ಮಹತ್ವದಲ್ಲ ಹಾಗೂ ಮಧ್ಯದ್ದೂ ಮಹತ್ವದಲ್ಲ. ಈ ಮೂರು ಕೂಡಿ ಇರುವುದು ಮಹತ್ವ. ಈ ಮೂರನ್ನು ಬೇರ್ಪಡಿಸಲು ಸಾಧ್ಯವಿಲ್ಲ. ಒಂದಿಲ್ಲೊಂದು ಅವಲಂಬಿಸಿದೆ. ನಿಸರ್ಗ, ಭಾವ ನೀಡಿದೆ. ಈ ಭಾವ ಇಲ್ಲದೆ ಇದ್ದರೆ ಏನು ಮಾಡಿದರು? ಸಂತೋಷ ಆಗುತ್ತಿರಲಿಲ್ಲ. ಆನಂದ ಇರುವುದು ಭಾವದಿಂದ. ಬೇಕಾದಷ್ಟು ಬುದ್ಧಿ ಇದೆ. ಬೇಕಾದಷ್ಟು ಹಣ ಇದೆ. ಭಾವ ಇಲ್ಲದೆ ಇದ್ದರೆ ಏನು ಉಪಯೋಗ ? ಬಹಳ ಜಾಣ, ಹಣ ಗಳಿಸಿದ್ದಾನೆ. ಭಾವ ಇಲ್ಲದಿದ್ದರೆ ಬುದ್ಧಿ ಕಂಪ್ಯೂಟರ್ ಆದಂತೆ ಆಗುತ್ತದೆ. ಕೆಲಸ ಯಂತ್ರ ಆಗುತ್ತದೆ. ಮನುಷ್ಯ ಮನುಷ್ಯ ಆಗಿದ್ದು ಭಾವದಿಂದ. ಬರಿ ಕೆಲಸ ಮಾಡಿ ಬದುಕಲು ಆಗುವುದಿಲ್ಲ. ಬರೀ ಜ್ಞಾನದಿಂದ ಬದುಕಲು ಆಗುವುದಿಲ್ಲ. ಬದುಕಿಗೆ ಒಳ್ಳೆಯ ಭಾವ ಬೇಕಾಗುತ್ತದೆ. ಮಧುರ ಭಾವ ಇದ್ದರೆ ಮಾತ್ರ ಜಗತ್ತು ಸಂತೋಷ ಕೊಡುವುದು. ಜೀವನ ಅದ್ಭುತ ಅನಿಸುತ್ತದೆ. ಇನ್ನು ಬಾಳ ಬೇಕು ಅನ್ನಿಸುತ್ತದೆ. ಭಾವ ಬತ್ತಿದ್ದರೆ ಜೀವನಕ್ಕೆ ಅರ್ಥವಿಲ್ಲ. ಮುಖದಲ್ಲಿ ಸಂತೋಷ ಕಾಣುವುದು, ಬುದ್ಧಿಯಿಂದ ಅಲ್ಲ ಭಾವದಿಂದ.
ವಿನೋಬಾ ಭಾವೆಯವರು ಶ್ರೇಷ್ಠ ಸಂತರು, ಭೂದಾನ ಚಳುವಳಿ ಮಾಡಿ ದೇಶವನ್ನೆಲ್ಲ ಕಾಲಿನಿಂದ ನಡೆದು ಬಡವರಿಗೆ ಒಂದಷ್ಟು ಜಮೀನು ಕೊಡಿಸಿದರು. ಅವರ ಹತ್ತಿರ ಎರಡು ತುಣುಕು ಬಟ್ಟೆ ಇದ್ದಿದ್ದು. ಅಷ್ಟು ಅದ್ಭುತವಾಗಿ ಬದುಕಿದ್ದರು. ಕೊನೆಯಲ್ಲಿ ಅವರದು ಅಂತ ಏನು ಇರಲಿಲ್ಲ. ಅವರಿಗೆ ಒಬ್ಬರು ಪ್ರಶ್ನೆ ಮಾಡಿದರು. ನಿಮ್ಮಷ್ಟು ಈ ದೇಶ ಯಾರು ನೋಡಿಲ್ಲ. ಎಲ್ಲರನ್ನೂ ಭೇಟಿ ಮಾಡಿ ಸುಖ-ದುಃಖ ಕಂಡವರು. ಭಾರತ ದೇಶದಲ್ಲಿ ಏನನ್ನು ನೋಡಿ ದುಃಖ ಆಯಿತು ಎಂದರು. ಆಗ ವಿನೋಭ ಬಾವೆ ಹೇಳಿದರು. "ನಾನು ಎಲ್ಲಾ ಕಡೆ ನೋಡಿದ ಮೇಲೆ ನನಗೆ ಗೊತ್ತಾಯ್ತು. ಭಾರತೀಯರು ಬುದ್ಧಿವಂತರಾಗಿದ್ದಾರೆ ಆದರೆ ಅವರ ಭಾವ ಶೂನ್ಯವಾಗ್ತಾ ಇದೆ. ತಲೆ ಬೆಳೆಯುತ್ತಿದೆ. ಎದೆ ಬತ್ತುತಿದೆ. ಇದು ಒಳ್ಳೆಯ ಲಕ್ಷಣ ಅಲ್ಲ ಎಂದರು.
ನಮ್ಮ ಯುವಕರು ಬುದ್ಧಿವಂತರು ಇದ್ದಾರೆ. ಅವರ ಎದೆಯಲ್ಲಿ ಪ್ರೇಮ ಕಡಿಮೆ ಆಗುತ್ತಾ ಇದೆ. ಒಂದು ಕುಟುಂಬ ಆಗಬೇಕಿದ್ದರೆ ಕೇವಲ ಇಟ್ಟಿಗೆ ಇದ್ದರೆ ಆಯ್ತೆ?. ಆರ್ ಸಿ ಸಿ ಕಟ್ಟಡ ಕಟ್ಟಿದರೆ ಆಯ್ತಾ?. ಎಲ್ಲಾ ಸಾಮಾನು ಇಟ್ಟರೆ ಆಯಿತೆ? ಅಲ್ಲಿ ಪ್ರೇಮ ಇರಬೇಕು. ಪ್ರೇಮ ಇದ್ದರೆ ಕುಟುಂಬ. ಕುಟುಂಬ ಮತ್ತು ಸಮಾಜ ಎರಡು ಒಡೆಯುತ್ತಿರುವುದು ಪ್ರೇಮದ ಕೊರತೆಯಿಂದ. ನಮ್ಮ ಶಾಲೆಗಳು ತಲೆ ತುಂಬಿಸುತ್ತಾ ಇದ್ದಾವೆ. ನಮ್ಮ ಉದ್ಯಮಿಗಳು ಕೈ ತುಂಬಿಸುತ್ತಿದ್ದಾರೆ. ಎದೆ ತುಂಬುವ, ಭಾವ ತುಂಬುವ ಕೆಲಸ ಯಾರು ಮಾಡುತ್ತಿಲ್ಲ. ಭಾವ ಬರಿದಾಗುತ್ತಿದೆ. ಹಾಗಾದರೆ ಜೀವನ ಸಮೃದ್ಧ, ಸುಂದರ ಹೇಗಾಗುತ್ತದೆ ?
ಕೆಲಸ ಒಳ್ಳೆಯದೇ, ಬುದ್ಧಿ ಒಳ್ಳೆಯದು. ಆದರೆ ಭಾವ (ಪ್ರೇಮ) ಇವುಗಳ ಜೊತೆ ಇಲ್ಲದೆ ಇದ್ದರೆ ಎರಡು ಕೂಡಾ ಕೆಡಿಸುತ್ತದೆ. ಕೆಲಸದಲ್ಲಿ ಆಸೆ ಕೂಡಿದರೆ, ಬುದ್ಧಿಯಲ್ಲಿ ಮತ್ಸರ, ಅಸೂಯೆ ಕೂಡಿದರೆ, ಅವರು ಕತ್ತಲಲ್ಲಿ ಬದುಕಿದಂತೆ. ಇವು ಮನುಷ್ಯನ ಸಂತೋಷ ಕೆಡಿಸುತ್ತವೆ. ಪ್ರೀತಿ ತುಂಬಿದ ಮನಸ್ಸು ಮಧುರ ಮನಸ್ಸು. ಆಸೆ ತುಂಬಿದ ಮನಸ್ಸು ಹೊಲಸು ಮನಸ್ಸು. ಬಹಳ ಬುದ್ಧಿವಂತರ ಮನಸ್ಸು ಹೊಲಸಿದ್ದರೆ ಜಗತ್ತು ಹಾಳು ಮಾಡುತ್ತಾರೆ. ತಮ್ಮನ್ನು ಹಾಳು ಮಾಡಿಕೊಳ್ಳುತ್ತಾರೆ. ಬಹಳ ಕೆಲಸ ಮಾಡುವವರು ಮನಸ್ಸು ಹೊಲಸಿದ್ದರೆ, ತಮ್ಮನ್ನು, ತಮ್ಮ ಸುತ್ತಮುತ್ತಲಿನ ಕೆಲವು ಜನರನ್ನು ಹಾಳು ಮಾಡುತ್ತಾರೆ. ಯುದ್ಧದ ಹಿಂದೆ ಬಹಳ ಬುದ್ಧಿವಂತರು ಇರುತ್ತಾರೆ. ಅವರು ಜಗತ್ತನ್ನು ನಾಶ ಮಾಡುತ್ತಾರೆ. ದಡ್ಡರು ಬಡಿದಾಡಿಕೊಳ್ಳುತ್ತಾರೆ ಅಷ್ಟೇ. ಅದಕ್ಕಿಂತ ಹೆಚ್ಚಿಗೆ ಮಾಡೋದಿಕ್ಕೆ ಆಗೋದಿಲ್ಲ.
(ಇನ್ನೂ ಇದೆ)
-ಎಂ.ಪಿ. ಜ್ಞಾನೇಶ್, ಮಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ