ಜ್ಞಾನ, ಭಾವ, ಕರ್ಮ (ಭಾಗ 2)

ಅಮೆರಿಕದಲ್ಲಿ ರೂಸ್ ವೆಲ್ಟ್ ಎನ್ನುವ ಮಹಾನುಭಾವ ಇದ್ದನು. ಅವರು ಒಮ್ಮೆ ಒಂದು ವಿಶ್ವವಿದ್ಯಾನಿಲಯದ ಘಟಿಕೋತ್ಸವದಲ್ಲಿ ಒಂದು ಸುಂದರ ಭಾಷಣ ಮಾಡುವಾಗ ಹೇಳಿದ್ದು "ವಿದ್ಯೆ ಕಲಿಯದವ, ಕದಿಯಲು ಬಯಸಿದ ಅಂದರೆ ರೈಲು ಕಂಬಿಯ ಒಂದೆರಡು ಬೋಲ್ಟ್ ಕದಿಯುತ್ತಾನೆ. ಚೆನ್ನಾಗಿ ವಿದ್ಯೆ ಕಲಿತವ ಕದಿಯಲು ಬಯಸಿದರೆ ರೈಲಿನ ಕಂಬಿ ಜೊತೆಗೆ ರೈಲನ್ನೇ ಕದಿಯುತ್ತಾನೆ". ಹೀಗಾಗಬೇಡಿ ಎಂದು ಹೇಳಿದನು. ಹೊಲಸು ಮನಸ್ಸು, ಜ್ಞಾನ ಪಡೆದವರನ್ನು, ಕೆಲಸ ಮಾಡುವವರನ್ನು ಕೆಡಿಸುತ್ತದೆ. ಬಸವಣ್ಣ ಹೇಳಿದ್ದು 'ನೂರನ್ನೋದಿ, ನೂರ ಕೇಳಿ, ಫಲವೇನು?. ಭಾಷೆ ಅರಿಯದು, ರೋಷ ಬಿಡದು, ಮಾತಿನಂತೆ ಮನವಿಲ್ಲದ ಜಾತಿ ಡೊಂಬರ ಕಂಡು ನಗುತಿರ್ಪ ನಮ್ಮ ಕೂಡಲಸಂಗಮದೇವ. ಆಶಾ ಹೋಗದೆ, ರೋಷ ಬಿಡದೆ, ಎಷ್ಟು ಓದಿದರು ಪ್ರಯೋಜನವಿಲ್ಲ. ಎಲ್ಲಾ ಮಾಡುವುದು ಆನಂದಕ್ಕಾಗಿ. ಆನಂದ ಆಗಬೇಕಾದರೆ ಪ್ರೀತಿ ಬಹಳ ಮುಖ್ಯ. ತಲೆ ಚೆನ್ನಾಗಿದೆ, ಕೈ ಹೊಲಸು, ಮನಸು ಹೊಲಸಿದ್ದರೆ ಏನು ಮಾಡುವುದು?. ಜಗತ್ತು ಹಾಳಾಗುತ್ತ ಇರುವುದು ದಡ್ಡರಿಂದಲ್ಲ, ಹೊಲಸು ಮನಸ್ಸಿನ ಬುದ್ಧಿವಂತರಿಂದ ಎಂದು ವಿನೋಬಾ ಭಾವೆ, ರೂಸ್ ವೆಲ್ಟ್ ರವರ ಅಭಿಪ್ರಾಯ. ಜ್ಞಾನ ಕೆಟ್ಟದ್ದಲ್ಲ, ಕೆಲಸ ಕೆಟ್ಟದ್ದಲ್ಲ, ಪ್ರೇಮ ಬೆರೆತ್ತಿದ್ದರೆ. ಪ್ರೇಮ ಭಾವ ಇಲ್ಲದಿದ್ದರೆ ಕೆಟ್ಟ ಫಲ ಆಗುತ್ತದೆ.
ಒಂದು ತೋಟ. ಅದರಲ್ಲಿ ಒಬ್ಬ ಫಲ ಭರಿತ ಮರಗಳನ್ನು, ಗಿಡಗಳನ್ನು ಬೆಳೆಸಿದ್ದನು. ಆ ತೋಟದಲ್ಲಿ ತಾಯಿ ಮಗ ಇದ್ದರು. ಸ್ವಾಭಿಮಾನಿಗಳು. ದಿನದ ತುಂಬಾ ದುಡಿಯುತ್ತಿದ್ದರು. ಬಂದವರಿಗೆ ಹಣ್ಣುಗಳನ್ನು ಕೊಟ್ಟು, ತಾವು ಸಂತೋಷ ಪಡುತ್ತಿದ್ದರು. ಅಲ್ಲೇ ಹಣ್ಣು ಇಟ್ಟು ಮಾರುತ್ತಿದ್ದರು. ಅಲ್ಲಿಗೆ ಒಬ್ಬ ಬುದ್ಧಿವಂತ ಹಣ್ಣನ್ನು ಕೊಂಡುಕೊಳ್ಳಲು ಬಂದನು. ಬೆಲೆ ಕೇಳಿದ. ಆ ಹುಡುಗ ಒಂದು ಹಣ್ಣಿಗೆ ರೂ.10 ಎಂದನು. ಆಗ ಬುದ್ಧಿವಂತ ಹೇಳಿದ. ಇಲ್ಲೇ ಗಿಡ ಇದೆ. ಇಲ್ಲೇ ಮಾರುತ್ತಾ ಇದ್ದೀಯೆ. ಮಾರುಕಟ್ಟೆಗೆ ಹೋಗಿಲ್ಲ. ಹತ್ತು ರೂಪಾಯಿ ಏಕೆ? ಅಂದನು. ಆಗ ಹುಡುಗ ಹೇಳಿದ "ಒಂಬತ್ತು ರೂಪಾಯಿ ಕೊಡಿ" ಎಂದನು. ಆಗ ಬುದ್ಧಿವಂತ ಹೇಳಿದ, ಗಿಡದಾಗೆ ಎಷ್ಟು ಹಣ್ಣು ಇದಾವೆ. ವರ್ಷ ತುಂಬಾ ಏನು ಮಾಡಿದ್ದೀಯಪ್ಪ?. ಮಳೆ ತಾನೇ ಬಿದ್ದಿದೆ. ನೀನೇನು ನೀರು ಹಾಕಿಲ್ಲ. ಅದನ್ನು ರಕ್ಷಣೆ ಮಾಡೋ ಅಗತ್ಯ ಇಲ್ಲ. ಹೀಗಿರುವಾಗ ರೂಪಾಯಿ 9 ಏಕೆ? ಅಂದನು. ಆ ಹುಡುಗನಿಗೆ ದಿಕ್ಕೇ ತಪ್ಪಿತು. ಆದರೆ ಆತನು ಜಾಣನೇ. ನಾನು ಮರ ಹತ್ತಿ ಕಿತ್ತಿರುವುದಕ್ಕೆ ರೂಪಾಯಿ 9 ಅಂದನು. ಆಗ ಬುದ್ಧಿವಂತ ಹೇಳಿದ, ಹಾಗಾದರೆ ನಾನೇ ಹತ್ತು ಕಿತ್ತರೆ ಪುಕ್ಕಟೆ ತಾನೇ ಅಂದನು. ಆಗ ಹುಡುಗನಿಗೆ ಮಜಾ ಅನಿಸಿತು. ಇಂಥವರು ಆತನಿಗೆ ಭೇಟಿಯಾಗಿರಲಿಲ್ಲ. ಆಯ್ತು ಕಿತ್ತಿಕೋ ಎಂದನು. ಆಗ ಜಾಣ ಹತ್ತಬೇಕಲ್ಲ. ಈತ ವಿಶ್ವವಿದ್ಯಾನಿಲಯ ಹತ್ತಿದವನು. ಲಿಫ್ಟ್ ಹತ್ತಿದವನು. ಮರ ಹತ್ತಿ ಅಭ್ಯಾಸ ಇಲ್ಲ. ಮರ ಹತ್ತೋದಕ್ಕೆ ಶುರು ಮಾಡಿದ. ಏರುವುದು, ಜಾರುವುದು. ಏರುವುದು, ಜಾರುವುದು. ಹೀಗೆ ಸಾಗುತ್ತಿತ್ತು. ಹುಡುಗ ನೋಡಿ ಖುಷಿಪಡುತ್ತಿದ್ದ. ಇನ್ನೇನು ಹಣ್ಣು ಕಿತ್ತಿಕೊಳ್ಳಬೇಕು, ಕಾಲು ಜಾರಿ ಕೆಳಗೆ ಬಿದ್ದನು. ಆಗ ಹುಡುಗ ಹೇಳಿದ. ನೀವು ಬಹಳ ಜಾಣರು ಹಾಗೂ ಖರ್ಚು ಮಾಡದಷ್ಟು ಬುದ್ಧಿವಂತರು. ಈಗ ಸಿಕ್ಕಿದೆಯಲ್ಲ ಅದನ್ನೇ ತೆಗೆದುಕೊಂಡು ಖಾಲಿ ಮಾಡಿ ಅಂದನು. ಒಂಬತ್ತು ರೂಪಾಯಿ ಉಳಿಸಲು ಹೋಗಿ, ಏಟು ಮಾಡಿಕೊಂಡು ಆಸ್ಪತ್ರೆ ಸೇರಿದನು. ಸಾವಿರ ರೂ ಖರ್ಚು ಮಾಡಿದ್ದಾನೆ. ಹೀಗೆ ಹೊಲಸು ಮನಸ್ಸಿನಿಂದ ಕೂಡಿದ ಬುದ್ಧಿಯಿಂದ, ಏನು ಪ್ರಯೋಜನ ?
ಬುದ್ಧಿವಂತರು ಕೆಲಸ ಮಾಡುತ್ತಾರೆ. ಅವರಲ್ಲಿ ಪ್ರೇಮ ಭಾವ ಇರುವುದರಿಂದ ಒಳ್ಳೆಯ ಆನಂದ ಫಲ ಪಡೆಯುತ್ತಾರೆ. ಋಷಿಗಳು ಹೇಳುವುದು, ಕೆಲಸದಿಂದ ಮನಸ್ಸು ಸ್ವಚ್ಛ ಮಾಡಿಕೊಳ್ಳುತ್ತಾರೆ. ಬುದ್ಧಿಯಿಂದ ಅಮೃತತ್ವ ಪಡೆಯುತ್ತಾರೆ. ಆಸೆ ಇಲ್ಲದ ಕೆಲಸ ಮಾಡಿದರೆ, ನಿರ್ಬೀತಿ ನಿಶ್ಚಿಂತತೆ ಹೊಂದುತ್ತಾರೆ. ಅಸೂಯೆ ಇಲ್ಲದ ಬುದ್ಧಿ ಬಳಸಿದರೆ ಮನಸ್ಸು ಆತ್ಮ ಜ್ಞಾನಿ ಯಾಗುತ್ತಾನೆ, ಅಮೃತತ್ವ ಅನುಭವಿಸುತ್ತಾನೆ ಎಂದರು. ಅಂದರೆ ಆನಂದ ಹೊಂದುತ್ತಾರೆ. ಅಂದರೆ ಕೆಲಸ, ವಿದ್ಯೆ ಮಹತ್ವದಲ್ಲ. ಅದಕ್ಕಿಂತ ಅದರ ಹಿಂದಿರುವ ಉದ್ದೇಶ ಮಹತ್ವದ್ದು. ಭಾವ ಮಹತ್ವದ್ದು. ಅಲ್ಲವೇ?
(ಮುಗಿಯಿತು)
-ಎಂ.ಪಿ. ಜ್ಞಾನೇಶ್, ಮಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ