ಜ್ಞಾನ ಭಿಕ್ಷಾ ಪಾದಯಾತ್ರೆಯ ನೆನಪಿನಲ್ಲಿ...
ಎರಡು ವರ್ಷಗಳ ಹಿಂದಿನ ಪಾದಯಾತ್ರೆಯ ನೆನಪಿನ ಲೇಖನ ಮತ್ತೊಮ್ಮೆ...( ಇದರ ನಂತರ ಕೋಲಾರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ ಮತ್ತು ರಾಮನಗರ ಜಿಲ್ಲೆ ಸೇರಿ ಒಟ್ಟು 385 ದಿನ 11500 ಕಿಲೋಮೀಟರ್ ಸಂಚರಿಸಲಾಯಿತು.)
10,000 ಕಿಲೋಮೀಟರ್… ರಾಷ್ಟ್ರದ ಮೊದಲ ಹೊಗೆ ಮುಕ್ತ ಗ್ರಾಮ ಎಂದು ಹೆಸರಾದ ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲ್ಲೂಕಿನ ವೈಚ್ಕೂರಳ್ಳಿಯಲ್ಲಿ ಕುಳಿತು ನೆನಪಿನ ಅಂಗಳಕ್ಕೆ ಜಿಗಿದಾಗ… ನಾನು ಡ್ಯಾನ್ಸ್ ಮಾಡುವವನಲ್ಲ, ಹಾಡು ಹೇಳುವವನಲ್ಲ, ಕಾಮಿಡಿ ಕಿಲಾಡಿಯಲ್ಲ, ಮಿಮಿಕ್ರಿ ಟಾಕೀಸಿನವನಲ್ಲ, ಯಾವುದೇ ಧರ್ಮದ ಧಾರ್ಮಿಕ ನಾಯಕನಲ್ಲ, ಪ್ರಶಸ್ತಿ ವಿಜೇತನಲ್ಲ, ಯಾವ ಅಧಿಕಾರವೂ ಇಲ್ಲ, ಯಾವ ಸಂಘಟನೆ ಅಥವಾ ಸಂಸ್ಥೆಗೂ ಸೇರಿಲ್ಲ.
ಆದರೂ ಕರ್ನಾಟಕದ ಜನತೆ ಈ 336 ದಿನಗಳು 10 ಸಾವಿರ ಕಿಲೋಮೀಟರುಗಳ ಯಾತ್ರೆಯಲ್ಲಿ ತಮ್ಮ ಪ್ರೀತಿಯನ್ನು ಮೊಗೆ ಮೊಗೆದು ನೀಡಿದ್ದಾರೆ. ನನ್ನನ್ನು ಅಭಿಮಾನದಿಂದ ಸಾಕಿದ್ದಾರೆ. ಊಟ ವಸತಿ ಸೌಕರ್ಯಗಳಿಗೆ ಯಾವುದೇ ಕೊರತೆಯಾಗದಂತೆ ನೋಡಿಕೊಂಡಿದ್ದಾರೆ. ಕೇವಲ ಅಕ್ಷರಗಳಲ್ಲಿ ಮೂಡಿದ ಅಭಿಪ್ರಾಯಗಳನ್ನು ಓದಿ ವ್ಯವಸ್ಥೆಯ ಸುಧಾರಣೆಗೆ ಹಾತೊರೆಯುತ್ತಿರುವ ಮನಸ್ಸುಗಳೇ ಇದಕ್ಕೆಲ್ಲ ಬಹುಮುಖ್ಯ ಕಾರಣ.
ಚಳಿ ಬಿಸಿಲು ಮಳೆ ಗಾಳಿ ಎತ್ತರದಿಂದ ಇಳಿಜಾರು ಪ್ರದೇಶಗಳಲ್ಲಿ ಸಂಚರಿಸುತ್ತಾ, ಕೊರೊನಾ ಅಲೆಯ ನಡುವೆ ಸಾಗುತ್ತಾ ನಗದು ರಹಿತವಾಗಿ ಕಾಲ್ನಡಿಗೆ ಮುಂದುವರಿಯಲು ಜನರು ತೋರಿದ ಕಾಳಜಿಯೇ ಕಾರಣ. ಪ್ರತಿ ಹೆಜ್ಜೆಯಲ್ಲೂ ಸಿಗುವ ಜನರೊಂದಿಗೆ ಸಂವಾದ ಮಾಡುತ್ತಾ, ಎಲ್ಲಾ ಸ್ತರಗಳ ಸಾರ್ವಜನಿಕರೊಂದಿಗೆ ಬೆರೆಯುತ್ತಾ ಮಾನವೀಯ ಮೌಲ್ಯಗಳ ಬಗ್ಗೆ ಒಂದು ಚರ್ಚೆ ಹುಟ್ಟುಹಾಕುತ್ತಾ ನಿರಂತರ ಪಯಣ ಸಾಗಲು ಕಾರಣವೇ ಬದಲಾವಣೆಯ ತುಡಿತದ ಮನಸ್ಸುಗಳು. ಎಲ್ಲರಿಗೂ ತುಂಬು ಹೃದಯದಿಂದ ಕೃತಜ್ಞತೆಗಳನ್ನು ಅರ್ಪಿಸುತ್ತಾ...
ಇನ್ನೂ ಸಾಗುತ್ತಲೇ ಇದೆ. ಮಾನವೀಯ ಮೌಲ್ಯಗಳ ಪುನರುತ್ಥಾನದ " ಜ್ಞಾನ ಭಿಕ್ಷಾ ಪಾದಯಾತ್ರೆ " ನಿಜ ಮನುಷ್ಯರ ಹುಡುಕುತ್ತಾ… ಸಮ ಸಮಾಜದ ಕನಸಿನಲ್ಲಿ........ ಜೀವಪರ ನಿಲುವಿನೊಂದಿಗೆ...... ಪರಿಸರದ ಉಳಿವಿಗಾಗಿ....... ಎಲ್ಲಾ ಭಾವನೆಗಳನ್ನು ಅನುಭವಿಸುತ್ತಾ....ತಿನ್ನುವ ಅನ್ನ ಬೆಳೆಯುವ ರೈತರ ಋಣ ತೀರಿಸಲು.. ಎಲ್ಲರಲ್ಲೂ ಪ್ರೀತಿ ಎಂಬ ಭಾವವನ್ನು ಸ್ಥಾಯಿಯಾಗಿಸುವ ಆಸೆಯೊಂದಿಗೆ… ಕಾಲ್ನಡಿಗೆಯೇ ಒಂದು ಸಾಧನೆಯಲ್ಲ, ಸಾಮಾಜಿಕ ಪರಿವರ್ತನೆಗೆ ಪಾದಯಾತ್ರೆ ಒಂದು ಮಾರ್ಗ ಅಷ್ಟೇ. ಸಾಗುತ್ತಿದೆ ಪಯಣ ಕೊನೆಯ ಉಸಿರಿನವರೆಗೆ...
-ವಿವೇಕಾನಂದ. ಹೆಚ್.ಕೆ., ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ